#4T_D4 ಸ್ಟ್ರೈಟ್ ಡ್ರೈವ್
2017 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಶಾರ್ದೂಲ್ ಠಾಕೂರ್,ಅಂದು ಒಂದು ಕಾರಣಕ್ಕಾಗಿ ವಿಪರೀತವಾಗಿ ಟೀಕೆಗೆ ಒಳಗಾಗಿದ್ದ.
ಅದಕ್ಕೆ ಕಾರಣ ಅವನ ಜೆರ್ಸಿಯಲ್ಲಿದ್ದ ನಂಬರ್!
ಹೌದು ಅಂದು ಮುಂಬೈಯ ಈ ಆಟಗಾರ ತೊಟ್ಟಿದ್ದ ಜೆರ್ಸಿಯ ನಂಬರ್ 10.
ಅದು ಕ್ರಿಕೆಟ್ ದೇವರ ನಂಬರ್ ಆಗಿತ್ತು..!!
ಹಾಗಾಗಿ ನೆಟ್ಟಿಗರು ಸೋಷಿಯಲ್ ಮೀಡಿಯಾ ದಲ್ಲಿ ಶಾರ್ದೂಲ್ ನನ್ನು ವಿಪರೀತ ತರಾಟೆಗೆ ತೆಗೆದುಕೊಂಡು ಬಿಟ್ಟಿದ್ದರು.
ಶಾರ್ದೂಲ್ ಆ ನಂತರ ತನ್ನ ಜೆರ್ಸಿ ನಂಬರ್ ಬದಲಾಯಿಸಿ ಬಿಟ್ಟ ಮತ್ತು ಅಲ್ಲಿಂದ ತನ್ನದೊಂದು ಜೆರ್ಸಿಗೆ 54 ನಂಬರ್ ಅನ್ನು ಬರೆಸಿಕೊಂಡು ತನ್ನ ಆಟ ತಾನು ಮುಂದುವರಿಸಿಕೊಂಡು ಹೋಗಿಬಿಟ್ಟ.
ಮುಂದೆಯೂ ಅವನು ಟ್ರಾಲ್ ಆದ.ಲಾರ್ಡ್ ಎಂದೇ ಕ್ರಿಕೆಟ್ ನಲ್ಲಿ ಕರೆಸಿಕೊಂಡ.ಆದರೆ ಯಾವುದನ್ನೂ ಮನಸ್ಸಿಗೆ ಹಾಕಿಕೊಳ್ಳದ ಶಾರ್ದೂಲ್, ಆಸ್ಟ್ರೇಲಿಯಾದ ಐತಿಹಾಸಿಕ ಸರಣಿ ವಿಜಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ತನ್ನದೂ ಕೊಡುಗೆ ಸಾಕಷ್ಟು ಕೊಟ್ಟಿದ್ದ.ಆವತ್ತಿನ ಅನನುಭವಿ ಬೌಲಿಂಗ್ ಪಡೆಯಲ್ಲಿ ಎಂದೋ ಒಂದೇ ಒಂದು ಟೆಸ್ಟ್ ಪಂದ್ಯ ಆಡಿದ್ದ ಶಾರ್ದೂಲನೇ ಅನುಭವಿ ಹಾಗೂ ಸೀನಿಯರ್ ಬೌಲರ್ ಆಗಿದ್ದ.ಆದರೂ ಅವನು ಅಂದು ಎಲ್ಲಾ ವಿಭಾಗದಲ್ಲಿಯೂ ಮಿಂಚಿ ಬಿಟ್ಟಿದ್ದ.
ಇದೇ ಶಾರ್ದೂಲ್ ಠಾಕೂರ್ ಇವತ್ತು ಮತ್ತೆ ಸಚಿನ್ ತೆಂಡುಲ್ಕರ್ ನನ್ನು ಅತಿಯಾಗಿ ನೆನಪಿಬಿಟ್ಟ.ಅದಕ್ಕೆ ಕಾರಣವಾಗಿದ್ದೇ ಅವನು ಇವತ್ತು ಬಾರಿಸಿದ ಅತೀ ಸುಂದರವಾದ ಸ್ಟ್ರೈಟ್ ಡ್ರೈವ್ ಗಳು.
ಆಹಾ... ಆ ಸ್ಟ್ರೈಟ್ ಡ್ರೈವ್ ಗಳು ಅದೆಷ್ಟು ಸುಂದರವಾಗಿತ್ತು ಎಂದರೆ,ಮತ್ತೆ ಮತ್ತೆ ನೋಡಬೆಕೆನಿಸುವಷ್ಟು ನಯನ ಮನೋಹರ.
ಕವರ್ ಡ್ರೈವ್ ಗೆ ವಿರಾಟ್ ಕೊಹ್ಲಿಯೇ ಕಿಂಗ್ ಆದರೆ, ಸಚಿನ್ ತೆಂಡೂಲ್ಕರ್ ಸ್ಟ್ರೈಟ್ ಡ್ರೈವ್ ನ ಬಾದ್ಷಾ.ಸಚಿನ್ ತೆಂಡುಲ್ಕರ್ ಸ್ಟ್ರೈಟ್ ಡ್ರೈವ್ ಅನ್ನು ನೀವು ಎಂಜಾಯ್ ಮಾಡದೇ ಉಳಿದಿದ್ದರೆ ಬಹುಶಃ ನೀವು ಕ್ರಿಕೆಟ್ ನಲ್ಲಿ ಬಹಳ ಸುಂದರವಾದುದ್ದನ್ನು ಮಿಸ್ ಮಾಡಿದ್ದೀರಿ ಎಂದೇ ಅರ್ಥ.
ಈ ಎರಡೂ ಶಾಟ್ ಗಳು ಕ್ರಿಕೆಟ್ ನ ಅತೀ ಸುಂದರ ಹೊಡೆತಗಳು.ನಿಜವಾದ ಕ್ರಿಕೆಟ್ ಅಭಿಮಾನಿಯ ಕಣ್ಣಿಗೆ ಹಬ್ಬವಾಗುವ ದೃಶ್ಯಗಳು ಈ ಹೊಡೆತಗಳೇ.ಬ್ಯಾಟ್ಸ್‌ಮನ್ ಒಬ್ಬನ ಎಲ್ಲಾ ಹೊಡೆತಗಳ ಐಸಿಂಗ್ ಓನ್ ದಿ ಕೇಕ್, ಚೆರ್ರಿ ಓನ್ ಟಾಪ್ ಎಂಬಂತಹ ಹೊಡೆತ ಅಂತ ಇದ್ದರೆ ಅದು ಎಂದಿಗೂ ಈ ಹೊಡೆತಗಳೇ ಆಗಿರುತ್ತದೆ.
ವಿರಾಟ್ ಕೊಹ್ಲಿ ಕೂಡ ಇವತ್ತು ಸ್ಟ್ರೈಟ್ ಡ್ರೈವ್ ಬಾರಿಸಿದ್ದ, ಆದರೆ ಹೃದಯ ಕೊಳ್ಳೆ ಹೊಡೆದದ್ದು ನಮ್ಮ ಠಾಕೂರ್ ಸಾಹೇಬರ ಸ್ಟ್ರೈಟ್ ಡ್ರೈವ್ ಗಳು ಮತ್ತು ಆ ಒಂದು ಅರ್ಧಶತಕ.
ಅಂದ ಹಾಗೆ ಓವಲ್ ಮೈದಾನದಲ್ಲಿ ಇಂದು ನಾಲ್ಕನೇ ದಿನದ ಆಟ ಆರಂಭಿಸಿದ್ದು ನಿನ್ನೆ ಅಜೇಯರಾಗಿ ಉಳಿದಿದ್ದ ಕೊಹ್ಲಿ ಮತ್ತು ಜಡೇಜಾ.
ಆಹಾ.. ಕೊಹ್ಲಿಯ ಆ ಸ್ಟ್ರೈಟ್ ಡ್ರೈವ್ ಮತ್ತೊಂದು ಅವನ ಟ್ರೇಡ್ ಮಾರ್ಕ್ ಕವರ್ ಡ್ರೈವ್ ಅವನೆಂತಹ ಕ್ಲಾಸ್ ಆಟಗಾರ ಎಂದು ಮತ್ತೆ ತೋರಿಸಿಕೊಟ್ಟವು. ಕೊಹ್ಲಿ ಲಹರಿಯಲ್ಲಿ ಬ್ಯಾಟ್ ಬೀಸಿದರೆ ಅದೊಂದು ಸುಂದರವಾದ ಆರ್ಟ್.ಅವನು ಬ್ಯಾಟ್ ಗಿಂತಲೂ ಹೆಚ್ಚಾಗಿ ಬ್ರಶ್ಶ್ ಹಿಡಿದ ಕಲಾವಿದ.ಅದರಲ್ಲೂ ಅವನದ್ದೊಂದು ಕವರ್ ಡ್ರೈವ್ ಅದನ್ನು ವಿವರಿಸುವುದಕ್ಕಿಂತಲೂ ನೋಡಿಯೇ ಕಣ್ಣು ತುಂಬಿಸಿಕೊಳ್ಳಬೇಕು.
ಜಡೇಜಾ ಇಂದು ಆಟದಲ್ಲಿ ಅಂತಹ ಉಮೇದು ಏನು ತೋರಿಸಲಿಲ್ಲ.ಹಾಗಾಗಿ ವೋಕ್ಸ್ ಬೌಲಿಂಗ್ ನಲ್ಲಿ ಎಲ್.ಬಿ.ಡಬ್ಲ್ಯು ಬಲೆಗೆ ಬಿದ್ದು ಬೆಳಿಗ್ಗೆ ಬೇಗನೇ ಪೆವಿಲಿಯನ್ ದಾರಿ ಹಿಡಿದ.ಗಳಿಸಿದ್ದು 17 ರನ್.
ಫಾರ್ಮ್ ನಲ್ಲಿ ಇಲ್ಲದ ರಹಾನೆಯದ್ದು ಮತ್ತೊಮ್ಮೆ ಇಲ್ಲಿ ಶೂನ್ಯ ಸಂಪಾದನೆ. ಮತ್ತೆ ಎಲ್. ಬಿ.ಡಬ್ಲ್ಯು ಮೂಲಕ ಅವನ ವಿಕೆಟ್ ಹಾರಿಸಿದ್ದು ವೋಕ್ಸ್. ರಹಾನೆ ಎಂಬ ಬಿಸಿ ತುಪ್ಪವನ್ನು ಟೀಮ್ ಮ್ಯಾನೇಜ್ಮೆಂಟ್ ಮುಂದೆ ಅದು ಹೇಗೆ ಹ್ಯಾಂಡಲ್ ಮಾಡುತ್ತದೆಯೋ ಗೊತ್ತಿಲ್ಲ.ಅವನು ಒಳ್ಳೆಯ ತುಪ್ಪವಂತು ಖಂಡಿತವಾಗಿಯೂ ಹೌದು.ಆದರೆ ಬೆಂಚಿನಲ್ಲಿ ಕುಳಿತುಕೊಂಡಿರುವ ಪ್ರತಿಭೆಗಳ ದಂಡು ನೋಡಿದಾಗ ಸದ್ಯಕ್ಕೆ ರಹಾನೆ ತಂಡಕ್ಕೆ ನುಂಗಲಾರದ ತುಪ್ಪ ಆಗಿರುವುದಂತು ಮಾತ್ರ ಸತ್ಯ.
ಕೊಹ್ಲಿ ರನ್ ಗಳಿಸುತ್ತಾ ಗಳಿಸುತ್ತಾ ಅರ್ಧಶತಕದ ಬಳಿ ಬಂದಿದ್ದ.ಬೇಗ ಅರ್ಧಶತಕ ಗಳಿಸಿ ಇವತ್ತು ಅವನು ಖಂಡಿತ ಶತಕ ಬಾರಿಸುತ್ತಾನೆ ಎಂಬ ಆಸೆಯನ್ನು ಅಭಿಮಾನಿಗಳಲ್ಲಿ ಸ್ವತಃ ಅವನೇ ಹಾಗೇ ಗರಿಗೆದರಿಸಿದ್ದ.ಆದರೆ ನವಿಲು ಇನ್ನೇನು ಗರಿ ಬಿಚ್ಚಬೇಕು ಅನ್ನುವಷ್ಟರಲ್ಲಿ ಬಲೆಗೆ ಕೆಡವಿ ನರ್ತನ ಮಾಡಲು ಅವಕಾಶ ಕೊಡದೇ ಇದ್ದದ್ದು ಮೋಯಿನ್ ಆಲಿ. ಮೋಯಿನ್ ಆಲಿಯ ಎಸೆತದಲ್ಲಿ ಸ್ಲಿಪ್ ನಲ್ಲಿದ್ದ ಕ್ರೇಗ್ ಓವರ್ಟನ್ ಗೆ ಸುಲಭ ಕ್ಯಾಚ್ ಕೊಟ್ಟು ಮತ್ತೊಮ್ಮೆ ನಿರಾಸೆ ಮೂಡಿಸಿ ಬಿಟ್ಟ ನಮ್ಮ ಕೊಹ್ಲಿ.ಸದ್ಯಕ್ಕೆ ಅವನು ಶತಕ ಗಳಿಸದ್ದಿದ್ದರೆ ಅವನಿಗಿಂತಲೂ ಅವನ ಅಪಾರ ಅಭಿಮಾನಿಗಳಿಗೆ ಆಗುವ ಆ ಕಿರಿಕಿರಿ ಅಷ್ಟಿಷ್ಟಲ್ಲ. ಕೊಹ್ಲಿ ಆದಷ್ಟು ಬೇಗ ಶತಕ ಹೊಡೆಯಲಿ ಮತ್ತು ಅವನು ಹೊಡೆದೇ ಹೊಡೆಯುತ್ತಾನೆ ಎಂಬ ಆಶಯ ಎಂದಿನಂತೆ ಎಲ್ಲರದ್ದು. ಕೊಹ್ಲಿ ಇಂದು 7 ಸೊಗಸಾದ ಬೌಂಡರಿ ಮೂಲಕ 44 ರನ್ ಬಾರಿಸಿದ್ದ.
ಈ ಸರಣಿ ಉದ್ದಕ್ಕೂ ಅಶಿಸ್ತಿನ ಹುಡುಗನಂತೆ ಕಾಣುತ್ತಿದ್ದ ಪಂತ್ ಇಂದು ಬಹಳ ಸಂಯಮದಿಂದ ಕೊನೆಗೂ ಒಂದು ಅರ್ಧಶತಕ ಬಾರಿಸಿ ಬಿಟ್ಟ.ಕೆಲವೊಮ್ಮೆ ಅವನು ತನ್ನನ್ನು ಯಾರೂ ಹೇಳುವವರು ಕೇಳುವವರು ಇಲ್ಲ ಎಂಬಂತೆ ಬ್ಯಾಟ್ ಬೀಸಿ ಬೇಗ ಔಟಾಗಿ ವಿಕೆಟ್ ಒಪ್ಪಿಸಿ ಹೊರನಡೆಯುತ್ತಾನೆ,ಆವಾಗಲೇ ಅವನ ಮೇಲೆ ಅತಿಯಾದ ಸಿಟ್ಟು ಬರುವುದು.ಆದರೆ ಇಂದು ಅವನು ಯಾರಿಗೂ ಅಂತಹ ಸಿಟ್ಟು ತರಿಸಲಿಲ್ಲ.
ಅವನು ಮತ್ತು ಶಾರ್ದೂಲ್ ನ ಜೊತೆಯಾಟ ಭಾರತದ ಮುನ್ನಡೆಯನ್ನು ಮತ್ತಷ್ಟು ಮಗದಷ್ಟು ಇನ್ನಷ್ಟು ಹಿಗ್ಗಿಸಿತ್ತು.ಪಂತ್ ಗಿಂತಲೂ ಸರಾಗವಾಗಿ ಬ್ಯಾಟ್ ಬೀಸಿದ್ದು ಇವತ್ತು ಶಾರ್ದೂಲ್.ಅವನ ಬ್ಯಾಟಿಂಗ್ ನೋಡುತ್ತಿದ್ದರೆ ಓವಲ್ ಮೈದಾನದಲ್ಲಿ ಬ್ಯಾಟಿಂಗ್ ಇಷ್ಟೊಂದು ಸುಲಭವೇ ಎಂದೇ ಅನ್ನಿಸುತ್ತಿತ್ತು.ವೇಗವಾಗಿ ರನ್ ಗಳಿಸಿದ ಶಾರ್ದೂಲ್,ಪಂತ್ ಗಿಂತಲೂ ಮೊದಲೇ ಅರ್ಧಶತಕ ಬಾರಿಸಿ ಬಿಟ್ಟಿದ್ದ.
ಠಾಕೂರ್ ನ ಬ್ಯಾಟಿಂಗ್ ನೋಡುವಾಗ ಯಾರಿಗೇ ಆಗಲಿ ಅವನು ಶತಕ ಹೊಡೆಯಲೇ ಬೇಕು ಎಂದು ಅನ್ನಿಸುತ್ತಿತ್ತು. ಆದರೆ ಶಾರ್ದೂಲ್ 60 ರನ್ ಗಳಿಸಿದ್ದಾಗ,ಫಸ್ಟ್ ಸ್ಲಿಪ್ ನಲ್ಲಿದ್ದ ಕ್ರೇಗ್ ಓವರ್ಟನ್ ಗೆ ಮತ್ತೆ ಕ್ಯಾಚ್ ಕೊಡಿಸಿದ್ದು ಈ ಬಾರಿ ಆಂಗ್ಲರ ನಾಯಕ ಜೋ ರೂಟ್. ಶಾರ್ದೂಲ್ 7 ಬೌಂಡರಿ ಹಾಗೂ ಲಾಂಗ್ ಆನ್ ನಲ್ಲಿ 1 ನೇರಾನೇರ ಸಿಕ್ಸ್ ಹೊಡೆದಿದ್ದ.
ಶಾರ್ದೂಲ್ ಔಟ್ ಆದ ನಂತರ ರಿಷಬ್ ಪಂತ್ ತನ್ನದೊಂದು ಅರ್ಧಶತಕ ಮುಗಿಸಿ,ಮೋಯಿನ್ ಆಲಿ ಎಸೆತದಲ್ಲಿ ಬೌಲರ್ ತಲೆಯ ಮೇಲಿನಿಂದ ದೊಡ್ಡ ಹೊಡೆತ ಬಾರಿಸಲು ಕ್ರೀಸಿನಿಂದ ಸ್ಟೆಪ್ ಔಟ್ ಆಗಿ,ಮೋಯಿನ್ ಆಲಿ ಗೆಯೇ ಸೀದಾ ಕಾಟ್ ಆಂಡ್ ಬೌಲ್ಡ್ ಆಗಿ ಬಿಟ್ಟ.4 ಬೌಂಡರಿ ಗಳಿಂದ ಅವನು 50 ರನ್ ಗಳಿಸಿದ್ದ ಇಂದು.
ಆ ನಂತರ ಜೊತೆಯಾದದ್ದು ನಮ್ಮ ಉಮೇಶ್ ಯಾದವ್ ಮತ್ತು ಜಸ್ಪ್ರೀತ್ ಬೂಮ್ರ.
ಉಮೇಶ್ ಯಾದವ್ ಸಲೀಸಾಗಿ ಸಿಕ್ಸರ್ ಎತ್ತುತ್ತಿದ್ದರೆ ಬೂಮ್ರ ಮತ್ತೊಂದು ಕಡೆಯಲ್ಲಿ ಕನ್ವೆನ್ಷನಲ್ ಸ್ವೀಪ್,ಸ್ಲಾಗ್ ಸ್ವೀಪ್, ಲೇಟ್ ಕಟ್ ಕೊನೆಗೊಂದು ಸ್ಟ್ರೈಟ್ ಡ್ರೈವ್ ಕೂಡ ಬಾರಿಸಿ ಗಮನ ಸೆಳೆದು ಬಿಟ್ಟ ಅವನು.
ಆಹಾ... ಈ ಬಾಲಗೊಂಚಿಗಳು ಸ್ಟ್ರೈಟ್ ಡ್ರೈವ್, ಕವರ್ ಡ್ರೈವ್ ಬಾರಿಸಿದರೆ ಅದೊಂತರಹ ಬೇರೆಯದ್ದೇ ಮಜಾ.ಬೌಲರ್ ಗಳ ಎದೆಯಲ್ಲಿ ಮಾತ್ರ ಎಂದಿಗಿಂತಲೂ ಹೆಚ್ಚಿನ ಬೆಂಕಿ.ಪಂದ್ಯ ಮುಗಿವವರೆಗೂ ಅದು ಹಾಗೇ ಧಗಧಗ.
ಈ ಪಂದ್ಯದಲ್ಲಿ ಅಂತು ರೋಹಿತ್,ರಾಹುಲ್, ಕೊಹ್ಲಿ, ಪೂಜಾರ, ಶಾರ್ದೂಲ್, ಪಂತ್,ಬುಮ್ರಾ ಎಲ್ಲರೂ ಸ್ಟ್ರೈಟ್ ಡ್ರೈವ್ ಬಾರಿಸಿದ್ದೋ ಬಾರಿಸಿದ್ದು.ಅಂತು ಇಂತು ಎಲ್ಲರೂ ಕಣ್ಣಿನ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಿ ಬಿಟ್ಟರು.
ಆ ನಂತರ ವೋಕ್ಸ್ ಎಸೆತದಲ್ಲಿ ಮಿಡ್ ಆನ್ ನಲ್ಲಿದ್ದ ಮೋಯಿನ್ ಆಲಿಗೆ ಸುಲಭ ಕ್ಯಾಚ್ ನೀಡುವ ಮೂಲಕ ಬೂಮ್ರ ಔಟಾಗಿ ಬಿಟ್ಟ. 4 ಬೌಂಡರಿಗಳ ಮೂಲಕ 24 ರನ್ ಗಳಿಸಿದ್ದ ಆತ . ನಿಜಕ್ಕೂ ಬೂಮ್ರ ಬ್ಯಾಟಿಂಗ್ ಮುಂದಿನ ದಿನಗಳಲ್ಲಿಯೂ ಟೀಮ್ ಇಂಡಿಯಾಕ್ಕೆ ಬಹಳಷ್ಟು ಆಸರೆಯಾಗಬಲ್ಲದು.
ಕೊನೆಯ ವಿಕೆಟ್ ಗೆ ಜೊತೆಯಾದದ್ದು ಉಮೇಶ್ ಯಾದವ್ ಮತ್ತು ಮಹಮ್ಮದ್ ಸಿರಾಜ್.
ಉಮೇಶ್ ಬ್ಯಾಟ್ ನಿಂದ ಮತ್ತೆ ಸಿಕ್ಸರ್, ಬೌಂಡರಿ ಸಿಡಿದವು.
ಕೊನೆಯಲ್ಲಿ ಉಮೇಶ್ ಯಾದವ್,ಕ್ರೇಗ್ ಓವರ್ಟನ್ ಎಸೆತದಲ್ಲಿ ಕವರ್ ನಲ್ಲಿದ್ದ ಮೋಯಿನ್ ಆಲಿಗೆ ಪ್ರಾಕ್ಟೀಸ್ ಕ್ಯಾಚ್ ಕೊಡುವಂತೆ ಕ್ಯಾಚ್ ನೀಡುವ ಮೂಲಕ ಭಾರತದ ಎರಡನೆಯ ಇನ್ನಿಂಗ್ಸ್ ಗೆ ಮಂಗಳ ಹಾಡಿ ಬಿಟ್ಟ.23 ಎಸೆತದಲ್ಲಿ 25 ರನ್ ಬಾರಿಸಿದ್ದ ಉಮೇಶ್ ಯಾದವ್ ಹೊಡೆದದ್ದು ಒಂದು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್.
ಈ ರೀತಿಯಾಗಿ ಭಾರತ ತನ್ನ ಎರಡನೇ ಇನಿಂಗ್ಸ್ ಅನ್ನು 466 ರನ್ ಗಳಿಗೆ ಸಮಾಪ್ತಿಗೊಳಿಸಿತು.ಈ ಮೂಲಕ ಇಂಗ್ಲೆಂಡ್ ಗೆ ಭಾರತ ನೀಡಿದ ಟಾರ್ಗೆಟ್ 368 ರನ್.
ಭಾರತದ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮ ಸರ್ವಾಧಿಕ 127 ಹೊಡೆದರೆ, ಪೂಜಾರ 61,ಶಾರ್ದೂಲ್ 60 ಹಾಗೂ ಪಂತ್ 50 ರನ್ ಹೊಡೆದರು.
ಓವಲ್ ನ ಹಾನರ್ಸ್ ಬೋರ್ಡ್ ನಲ್ಲಿ ಹಿಟ್ ಮ್ಯಾನ್ ಹೆಸರನ್ನು "Sharma R G" ಎಂದು ಕೊನೆಯ ಬಾರಿ ಇಲ್ಲಿ ಶತಕ ಬಾರಿಸಿದ್ದ ಆಸ್ಟ್ರೇಲಿಯಾದ ಮ್ಯಾಥು ವೇಡ್ ನ ಹೆಸರಿನ ಕೆಳಗಡೆ ಬರೆದು ಅವನಿಗೊಂದು ಗೌರವ ಸೂಚಿಸಲಾಯಿತು.ಅಂದ ಹಾಗೆ ರೋಹಿತ್ ಶರ್ಮ ನ ಪೂರ್ತಿ ಹೆಸರು " ರೋಹಿತ್ ಗುರುನಾಥ್ ಶರ್ಮ" ಎಂದು.
ಇಂಗ್ಲೆಂಡ್ ಪಾಳಯದಲ್ಲಿ ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದರೆ, ಮೋಯಿನ್ ಆಲಿ ಮತ್ತು ರಾಬಿನ್ಸನ್ ತಲಾ 2 ವಿಕೆಟ್ ಪಡೆದರು. ಜಿಮ್ಮಿ ಆಂಡರ್ಸನ್, ಜೋ ರೂಟ್ ಮತ್ತು ಕ್ರೆಗ್ ಓವರ್ಟನ್ ತಲಾ ಒಂದೊಂದು ವಿಕೆಟ್ ಪಡೆದರು.
ಗೆಲ್ಲಲು 368 ರನ್ನುಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ದಿನದ ಕೊನೆಯ ಸೆಷನ್ ನಲ್ಲಿ ಮತ್ತೆ ಬ್ಯಾಟಿಂಗ್ ಮಾಡಲು ಇಳಿಯಿತು. ರಾರಿ ಬರ್ನ್ಸ್ ಹಾಗೂ ಹಸೀಬ್ ಹಮೀದ್ ಒಂದಷ್ಟು ಲೆಕ್ಕಾಚಾರದೊಂದಿಗೆ ಬ್ಯಾಟ್ ಬೀಸಲು ಕ್ರಿಸಿನಲ್ಲಿದ್ದರು.
ಭಾರತದ ಗೆಲುವಿಗೆ ಬೇಕಾಗಿದ್ದದ್ದು ಆಂಗ್ಲರ ಹತ್ತು ವಿಕೆಟ್.
ಆಟ ಶುರುವಾಯಿತು.
ಹಾಗೇ ಆಟ ಮುಂದುವರಿಯಿತು.
ನಿಜಕ್ಕೂ ಆಂಗ್ಲರ ಆರಂಭ ಬಹಳಷ್ಟು ಚೆನ್ನಾಗಿತ್ತು.
50 ರನ್ ಗಳಿಗೆ ಅವರು ಒಂದೂ ವಿಕೆಟ್ ಕಳೆದುಕೊಂಡಿರಲಿಲ್ಲ.
ನಂತರ ಮತ್ತಷ್ಟು ಹುಮ್ಮಸ್ಸಿನಿಂದ ಹುರುಪಿನಿಂದ ಬ್ಯಾಟ್ ಬೀಸತೊಡಗಿದರು ಅವರು.
ಆಟ ಮುಂದುವರಿದಿತ್ತು.
ಕೊನೆಯಲ್ಲಿ ದಿನದಾಟದ ಮುಗಿದಾಗ ಆಂಗ್ಲರು ಯಾವುದೇ ವಿಕೆಟ್ ಕಳೆದುಕೊಳ್ಳದೇ 77 ರನ್ ಗಳಿಸಿದ್ದಾರೆ.ಕ್ರಿಸಿನಲ್ಲಿ ರಾರಿ ಬರ್ನ್ಸ್ 31 ಮತ್ತು ಹಸೀಬ್ ಹಮೀದ್ 43 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಸದ್ಯಕ್ಕೆ ಅವರು ರನ್ 291 ಗಳಿಂದ ಹಿಂದೆ ಉಳಿದಿದ್ದು,ಅವರ ಗೆಲುವಿಗೆ ಇನ್ನೂ ಒಂದು ದಿನಗಳ ಸಮಯವಿದ್ದು ಕೈಯಲ್ಲಿ 10 ವಿಕೆಟ್ ಇದೆ.
ಮೂರು ಫಲಿತಾಂಶಗಳ ಸಾಧ್ಯತೆ ಇದ್ದರೂ ಆಂಗ್ಲರಿಗೆ ಗೆಲುವು ಇಲ್ಲಿ ಬಹಳಷ್ಟು ಕಷ್ಟ ಸಾಧ್ಯ.
ಜಾಸ್ತಿ ಎಂದರೆ ಅವರಿಗೆ ಡ್ರಾ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಭಾರತವೇ ಗೆಲ್ಲಬಹುದು ಸದ್ಯಕ್ಕೆ ಇದು ಎರಡೇ ಸ್ಪಷ್ಟ ಫಲಿತಾಂಶ ಕಣ್ಣ ಮುಂದಿರುವುದು.
ಆದರೆ ಮಿರಾಕಲ್ ಆಗಬಾರದು ಎಂದೇನಲ್ಲ.ಕ್ರಿಕೆಟ್ ಹೇಳಿ ಕೇಳಿ ಅನಿಶ್ಚಿತತೆಯ ಆಟ.ಕೊನೆಯ ಬಾಲ್ ವರೆಗೂ ಏನೂ ಕೂಡ ಆಗಬಹುದು, ಹಾಗಾಗಿ ಭವಿಷ್ಯ ನುಡಿಯುವುದು ಕಷ್ಟವೇ.ಆದರೆ ಆಂಗ್ಲರ ಸದ್ಯದ ಬ್ಯಾಟಿಂಗ್ ಹಾಗೂ ಜೋ ರೂಟ್ ನನ್ನು ಬಿಟ್ಟು ಅವರಲ್ಲಿ ಬೇರೆ ಯಾರೂ ಅಂತಹ ರೆಸಿಸ್ಟೆನ್ಸ್ ತೋರಿಸದೇ ಇರುವುದರಿಂದ ಅವರ ಗೆಲುವು ಮೇಲ್ನೋಟಕ್ಕೆ ಕಷ್ಟವೇ.ಅದೂ ಅಲ್ಲದೇ ಕೊನೆಯ ದಿನದ ಆಟದ ಒತ್ತಡ ಮಾತ್ರವಲ್ಲ ಪಿಚ್ ನಾಳೆ ಸ್ಪಿನ್ ಗೂ ಸಹಕಾರಿ ಆಗಲಿರುವುದರಿಂದ ಅವರು ನಾಳೆ ಗೆಲ್ಲಲು ಮಾತ್ರವಲ್ಲ ಡ್ರಾ ಮಾಡಿಕೊಳ್ಳಲು ಕೂಡ ಬಹಳ ದೊಡ್ಡ ಹೋರಾಟವನ್ನೇ ಮಾಡಬೇಕಿದೆ.ಇಂದು ಮೋಯಿನ್ ಆಲಿ ಎರಡು ಹಾಗೂ ಜೋ ರೂಟ್ ಒಂದು ವಿಕೆಟ್ ಕಿತ್ತದ್ದೇ ಪಿಚ್ ಸ್ಪಿನ್ ಗೂ ಸಾಕಷ್ಟು ನೆರವು ನೀಡಲಿದೆ ಎಂಬುದಕ್ಕೆ ಸಾಕ್ಷಿ. ಹಾಗಾಗಿ ಜಡೇಜಾ ಕೂಡ ನಾಳೆ ಅವರಿಗೆ ಸಾಕಷ್ಟು ಅಪಾಯಕಾರಿ ಆಗುವ ಸಾಧ್ಯತೆ ಇದೆ.
ಕಾದು ನೋಡುವ.
ಭಾರತವೇ ಗೆಲ್ಲಲ್ಲಿ, ಈ ಮೂಲಕ ಡಬ್ಲ್ಯು.ಟಿ.ಸಿ ಪಾಯಿಂಟ್ ಟೇಬಲ್ ನಲ್ಲಿ ಮತ್ತೆ ತನ್ನ PCT ಯನ್ನು ಹೆಚ್ಚಿಸಿಕೊಳ್ಳಲಿ.
ಸದ್ಯಕ್ಕೆ ಇಷ್ಟೇ...
ನಾಳೆ ಐದನೇ ಅಂದರೆ ಕೊನೆಯ ದಿನದಾಟದ ನಂತರ ಮತ್ತೆ ಸಿಗೋಣ,ಎಂದಿನಂತೆ ಒಂದಷ್ಟು ಕ್ರಿಕೆಟ್ ಮಾತಾಡೋಣ.
Ind Vs England
4th Test - Kennington - London
#Day_4 : STUMPS
India 1st Innings - 191/10
England 1st Innings - 290/10
India 2nd Innings - 466/10
England 2nd Innings - 77/0
#WTC_S02E01_4TD4_2021_23
Ab pacchu





Comments
Post a Comment