#4T_D5 ಬೂಮ್ ಬೂಮ್..




ನಿನ್ನೆ ಕೊನೆಯ ಸೆಷನ್ ನ ಆಂಗ್ಲರ ಆಟ ನೋಡಿದ ಯಾರಿಗೆ ಆಗಲಿ ಒಂದಿಷ್ಟು ಅಳುಕಿದ್ದದ್ದು ಮಾತ್ರ ಸತ್ಯವೇ. 


ಹತ್ತು ವಿಕೆಟ್ ಕೈಯಲ್ಲಿಟ್ಟುಕೊಂಡಿದ್ದ ಇಂಗ್ಲೆಂಡ್,ಏನಾದರೂ ಮಾಡಿ ಈ ಪಂದ್ಯವನ್ನು ಕೊನೆಯಲ್ಲಿ ಗೆದ್ದೇ ಬಿಟ್ಟರೆ,ಇಲ್ಲವೇ ಸುಲಭವಾಗಿ ಡ್ರಾ ಮಾಡಿಕೊಂಡು ಬಿಟ್ಟರೆ ಎಂಬ ಆ  ಒಂದು ಆತಂಕ ಕೂಡ ಮನಸ್ಸಿನ ಮೂಲೆಯಲ್ಲಿ ಸ್ವಲ್ಪ ಜನರಿಗಾದರೂ ಇತ್ತು ಬಿಡಿ. 


ಇಂಗ್ಲೆಂಡ್ ನ ಅತ್ಯಂತ ಹಳೆಯ ಮೈದಾನವಾದ ಓವಲ್ ಮೈದಾನದಲ್ಲಿ,ಅಂತು ಇಂತು 5 ಪಂದ್ಯಗಳ ಸರಣಿಯ ಈ 4 ನೇ ಪಂದ್ಯದ 5 ನೇ ಆಟ ಇಂದು ಬೆಳಗ್ಗೆ ಆರಂಭವಾಗಿಯೇ ಬಿಟ್ಟಿತ್ತು.


ಒಂದಷ್ಟು ಕುತೂಹಲ,ನಿರೀಕ್ಷೆ ಎಂದಿನಂತೆ ಇತ್ತು. 


ಆಂಗ್ಲರು ಡ್ರಾ ಗಾಗಿ ಆಡುತ್ತಾರೋ.. ಇಲ್ಲವೇ ಜಯಕ್ಕಾಗಿ ಪ್ರಯತ್ನಿಸುತ್ತಾರೋ ಎಂದು  ಗೊತ್ತಿರಲಿಲ್ಲ.


ಆದರೆ ಭಾರತದ ಗುರಿ ಬಹಳಷ್ಟು ಸ್ಪಷ್ಟವಾಗಿತ್ತು.

ಎದುರಲ್ಲಿ ಕಾಣುವ ಹತ್ತು ವಿಕೆಟ್ ಇತ್ತು,ಮತ್ತು ಅಷ್ಟನ್ನೂ ಮೂರು ಸೆಷನ್ ಗಳ ಈ ಒಂದು ದಿನದ ಆಟದಲ್ಲಿ ನಮ್ಮವರು ಎಗರಿಸಬೇಕಾಗಿತ್ತು. 


ಕ್ರೀಸಿಗೆ ಬಂದಿದ್ದ ನಿನ್ನೆಯ ಆಂಗ್ಲರ ಅಜೇಯ ಬ್ಯಾಟ್ಸ್‌ಮನ್ ಗಳಾದ ರಾರಿ ಬರ್ನ್ಸ್ ಹಾಗೂ ಹಸೀಬ್ ಹಮೀದ್ ಇಂದಿನ ಅವರದ್ದೊಂದು ಮೊತ್ತವನ್ನು ಮತ್ತಷ್ಟು ಚಿಗುರಿಸುತ್ತಾ ಬೆಳೆಸುತ್ತಾ ಇನ್ನಷ್ಟು ಭರವಸೆಯಿಂದ ಹಾಗೇ ಬ್ಯಾಟ್ ಬೀಸಲು ಶುರು ಮಾಡಿದರು. 


ನೋಡು ನೋಡುತ್ತಿದ್ದಂತೆ ಆಂಗ್ಲರ ಸ್ಕೋರ್ ಆಯಿತು ನೂರು. ನೂರಕ್ಕೆ ಅವರ ಯಾವುದೇ ವಿಕೆಟ್ ನಷ್ಟವಾಗಲಿಲ್ಲ.


ರಾರಿ ಬರ್ನ್ಸ್ ತನ್ನದೊಂದು ಅರ್ಧಶತಕ ಕೂಡ ಬಾರಿಸಿ ಬಿಟ್ಟಿದ್ದ. ಶುರುವಲ್ಲಿ ಅವರದ್ದೊಂದು ಬ್ಯಾಟಿಂಗ್ ಇವತ್ತು ಸಾಕಷ್ಟು ಧನಾತ್ಮಕವಾಗಿಯೇ ಇತ್ತು. 


ಅಶ್ವಿನ್ ಈ ಪಂದ್ಯಕ್ಕೆ ಬೇಕಿತ್ತು ಅಂತ ಅನಿಸಿದ್ದು ಆವಾಗಲೇ. 


ಆದರೆ ನಮ್ಮ ಬಳಿ ಠಾಕೂರ್ ಇದ್ದ. 


ಆಂಗ್ಲರ ಮೊದಲ ವಿಕೆಟ್ ಅನ್ನು ಅವನೇ  ಎಗರಿಸಿ ಬಿಟ್ಟ. 


ಶಾರ್ದೂಲ್ ಎಸೆತದಲ್ಲಿ ವಿಕೆಟ್ ಕೀಪರ್ ಪಂತ್ ಗೆ ಕ್ಯಾಚಿತ್ತು ಹೋಗುವಾಗ ರಾರಿ ಬರ್ನ್ಸ್ ಸರಿಯಾಗಿ 50 ರನ್ ಗಳಿಸಿದ್ದ. ಅದಕ್ಕಾಗಿ ಆತ 125 ಎಸೆತಗಳನ್ನು ಸಹ ಎದುರಿಸಿದ್ದ. 


ಮುಂದೆ ಕ್ರೀಸಿಗೆ ಬಂದದ್ದು ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಲನ್. 


ಇದರ ನಡುವೆ ಹಸೀಬ್ ಹಮೀದ್ ಕೂಡ ತನ್ನದೊಂದು ಅರ್ಧಶತಕ ಪೂರ್ತಿಗೊಳಿಸಿ ಬಿಟ್ಟ. 


ಆದರೆ ಜಡೇಜಾ ಬೌಲಿಂಗ್ ನಲ್ಲಿ ಮಿಡ್ ಆನ್ ನಲ್ಲಿದ್ದ ಮಹಮ್ಮದ್ ಸಿರಾಜ್ ಗೆ ಸುಲಭ ಕ್ಯಾಚ್ ಒಂದನ್ನು ನೀಡಿ ಬಿಟ್ಟಿದ್ದ ಹಸೀಬ್ ಹಮೀದ್. ಆದರೆ ಅದನ್ನು ಸರಿಯಾಗಿ ಅಂದಾಜಿಸದೇ ಸಿರಾಜ್ ಆ ಕ್ಯಾಚ್ ಅನ್ನು ಚೆಲ್ಲಿ ಬಿಟ್ಟ.ಈ ರೀತಿಯಾಗಿ ಒಂದು ಜೀವದಾನ ಅವನಿಗಿಂದು ಸಿಕ್ಕಿ ಬಿಟ್ಟಿತು. 


ಮುಂದೆ ಜಡೇಜಾ ಎಸೆತದಲ್ಲಿ ಕವರ್ ಪಾಯಿಂಟ್ ಕಡೆಗೆ ಬಾಲ್ ತಳ್ಳಿದ ಹಸೀಬ್ ಹಮೀದ್ ಒಂದು ಕ್ವಿಕ್ ಸಿಂಗಲ್ ತೆಗೆಯುವುದಕ್ಕಾಗಿ ನಾನ್ ಸ್ಟ್ರೈಕ್ ಗೆ ಅವಸರವಸರವಾಗಿ ಓಡಿ ಬಿಟ್ಟ.ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಡೇವಿಡ್ ಮಲನ್ ಸ್ಟ್ರೈಕ್ ಗೆ ತಲುಪುವ ಮೊದಲೇ ಮಿಂಚಿನ ಗತಿಯಲ್ಲಿ ಬಾಲ್ ಪಿಕ್ ಮಾಡಿ,ಅದನ್ನು ಪಂತ್ ಗ್ಲೌಸಿಗೆ ತಲುಪಿಸಿದ್ದ ಟೀಮ್ ಇಂಡಿಯಾದ ಬದಲಿ ಆಟಗಾರ ಮಾಯಂಕ್ ಅಗರ್ವಾಲ್. ಡೇವಿಡ್ ಮಲನ್ ಕ್ರೀಸಿಗೆ ತಲುಪುವ ಮೊದಲೇ ಪಂತ್ ಬೇಲ್ಸ್ ಎಗರಿಸಿ ಅವನನ್ನು ರನ್ ಔಟ್ ಮಾಡಿದ್ದ.ಮಲನ್ ಗಳಿಕೆ 33 ಎಸೆತಗಳಲ್ಲಿ ಕೇವಲ 5 ರನ್ ಗಳು. 


ಈ ರೀತಿಯಾಗಿ ಭೋಜನಕ್ಕೆ ಹೋಗುವಾಗ ಇಂಗ್ಲೆಂಡ್ 131 ಕ್ಕೆ ಎರಡು ವಿಕೆಟ್ ಕಳೆದುಕೊಂಡಿತ್ತು.ಜೋ ರೂಟ್ 8,ಹಸೀಬ್ ಹಮೀದ್ 62 ರನ್ ಗಳಿಸಿದ್ದರು. 


ಲಂಚ್ ಬ್ರೇಕ್ ನಂತರ ಮತ್ತೆ ಆಟ ಮುಂದುವರಿದಿತ್ತು.


ಮುಂದಿನದ್ದೆಲ್ಲವೂ ವಿಕೆಟ್ ಪತನಗಳ ಹೈಲೈಟ್ಸ್. 


ಎರಡನೆಯ ಸೆಷನ್ ನ ಮೊದಲ ಬ್ರೇಕ್ ದೊರಕಿಸಿದ್ದು ರವೀಂದ್ರ ಜಡೇಜಾ. 


ಜಡೇಜಾ ನ ಲೆಗ್ ಸೈಡಿನಲ್ಲಿ ಬಿದ್ದು ಆಫ್ ಸೈಡಿಗೆ ಡ್ರಿಪ್ಟ್ ಆಗುತ್ತಿದ್ದ  ಬಾಲಿಗೆ ಹಸೀಬ್ ಹಮೀದ್ ಬ್ಯಾಟನ್ನಾಗಲಿ, ಪ್ಯಾಡನ್ನಾಗಲಿ ಒಡ್ಡಲೇ ಇಲ್ಲ. ಜಡೇಜಾನ ವೇಗದ ಬಾಲ್ ಹಾಗೇ ಹೋಗಿ ಆಫ್ ಸ್ಟಂಪ್ ನ ಮೇಲಿನ ಹಸಿರು ಬೆಲ್ಸ್ ಅನ್ನು ಚೆಲ್ಲಾಪಿಲ್ಲಿ ಮಾಡುವ ಮೂಲಕ ಹಸೀಬ್ ಹಮೀದ್ ಕೊನೆಗೂ ಬೌಲ್ಡ್ ಔಟ್ ಆಗಿ ಬಿಟ್ಟ. ಹಸೀಬ್ ಗಳಿಸಿದ್ದು 63 ರನ್.ಆತ ಅದಕ್ಕಾಗಿ ಎದುರಿಸಿದ್ದು 193 ಎಸೆತಗಳು.ಈ ಮೂಲಕ ಇಂಗ್ಲೆಂಡ್ ತನ್ನ 3 ನೇ ವಿಕೆಟ್ ಕಳೆದುಕೊಂಡಿತು. 


ನಂತರ ಹೃದಯ ಗೆದ್ದದ್ದು ಓನ್ ಆಂಡ್ ಓನ್ಲಿ ನಮ್ಮ ಜಸ್ಪ್ರೀತ್ ಬೂಮ್ರ.


ಎಸ್.... ಬೂಮ್ ಬೂಮ್ ಬೂಮ್ರ. 


ಅವನದ್ದೊಂದು ಸುಂದರವಾದ ಇನ್ ಸ್ವಿಂಗರ್ ಅನ್ನು ನಿಭಾಯಿಸುವಲ್ಲಿ ವಿಫಲನಾದ ಓಲಿ ಫೋಪ್ ಕ್ಲೀನ್ ಬೌಲ್ಡ್ ಆಗಿ ಬಿಟ್ಟಿದ್ದ. ಓಲಿ ಪೋಪ್ 11  ಎಸೆತಗಳಲ್ಲಿ ಗಳಿಸಿದ್ದು ಕೇವಲ ಎರಡು ರನ್. ಈ ಮೂಲಕ ಇಂಗ್ಲೆಂಡ್ ಕಳೆದುಕೊಂಡಿದ್ದು ನಾಲ್ಕನೇ ವಿಕೆಟ್. 


ಬುಮ್ರಾ ನ ಮ್ಯಾಜಿಕ್ ಅಲ್ಲಿಗೆ ಮುಗಿಯಲಿಲ್ಲ. 


ಈ ಬಾರಿ ಅವನ ಎದುರಿದ್ದದ್ದು ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೆರ್ಸ್ಟೋ. 


ಆಹಾ.. ಅದೆಂತಹ ಸುಂದರವಾದ ಯಾರ್ಕರ್ ಬೂಮ್ರನದ್ದು.ವೇಗದ ಬೌಲರ್ ಒಬ್ಬನ ಡೆಡ್ಲಿ ವೆಪನ್ ಅಂದರೆ ಬಹುಶಃ ಅದು ಯಾರ್ಕರೇ ಆಗಿರುತ್ತದೆ.ಸತತ ಅಭ್ಯಾಸದಿಂದಷ್ಟೇ ಬೌಲರ್ ಒಬ್ಬ ಅದನ್ನು ತನ್ನದೊಂದು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳಬಲ್ಲ.ಸದ್ಯಕ್ಕೆ ಬ್ರೂಮ ಅದರಲ್ಲಿ ಬಹಳಷ್ಟು ಪರಿಣಿತ. 


ಬೂಮ್ರನ ಆ ಮಾಸ್ಟರ್ ಕ್ಲಾಸ್ ಯಾರ್ಕರ್ ಗೆ ಬೆರ್ಸ್ಟೋ ನ ಸ್ಟಂಪ್ ಗಳು ಗ್ರೌಂಡಿನಲ್ಲಿ ಇನ್ನಿಲ್ಲದಂತೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಬಿಟ್ಟವು. ನಾಲ್ಕು ಎಸೆತಗಳಲ್ಲಿ ಬೆರ್ಸ್ಟೋ ಸಂಪಾದನೆ ಜಸ್ಟ್ ಶೂನ್ಯ. 



ಈ ಮೂಲಕ ಜಸ್ಪ್ರೀತ್ ಬೂಮ್ರ 100 ಟೆಸ್ಟ್ ವಿಕೆಟ್‌ಗಳನ್ನು ತನ್ನ ಜೋಳಿಗೆಗೆ ತುಂಬಿಸಿಕೊಂಡ. ಭಾರತದ ಪರವಾಗಿ ವೇಗವಾಗಿ 100 ಟೆಸ್ಟ್ ವಿಕೆಟ್ ಗಳನ್ನು ಕಿತ್ತ ವೇಗದ ಬೌಲರ್ ಗಳಲ್ಲಿ ಈಗ ಬೂಮ್ರನಿಗೆಯೇ ಅಗ್ರಸ್ಥಾನ. 24 ಪಂದ್ಯಗಳಲ್ಲಿ ಬೂಮ್ರ ಈ ದಾಖಲೆ ಮಾಡಿದ್ದಾನೆ, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕಪಿಲ್ ದೇವ್ 25 ನೇ ಪಂದ್ಯದಲ್ಲಿ 100 ವಿಕೆಟ್ ಕಿತ್ತಿದ್ದರು. 



ಅಲ್ಲಿಗೆ ಇಂಗ್ಲೆಂಡ್ ಕಳೆದುಕೊಂಡ ವಿಕೆಟ್ ಗಳ ಸಂಖ್ಯೆ 5.


ಆದರೆ ಅದು ಅಲ್ಲಿಗೆ ಮುಗಿಯಲಿಲ್ಲ. 


ಈ ಬಾರಿ ಬೇಟೆಯಾಡಿದ್ದು ಜಡೇಜಾ,ಶಿಖಾರಿಯಾಗಿದ್ದು ಮೋಯಿನ್ ಆಲಿ. 


ಜಡೇಜಾ ಎಸೆತದಲ್ಲಿ ಶಾರ್ಟ್ ಲೆಗ್ ನಲ್ಲಿದ್ದ ಟೀಮ್ ಇಂಡಿಯಾದ ಬದಲಿ ಆಟಗಾರ ಸೂರ್ಯ ಕುಮಾರ್ ಗೆ ಸುಲಭ ಕ್ಯಾಚ್ ನೀಡುವ ಮೂಲಕ ಮೋಯಿನ್ ಅಲಿ ತನ್ನದೊಂದು ಇನ್ನಿಂಗ್ಸ್ ಅನ್ನು ಶೂನ್ಯಕ್ಕೆ ಸಮಾಪ್ತಿಗೊಳಿಸಿ ಬಿಟ್ಟ.ಎದುರಸಿದ್ದು 4 ಎಸೆತ ಅಷ್ಟೇ. 


ಅಲ್ಲಿಗೆ ಇಂಗ್ಲೆಂಡ್ ಕಳೆದುಕೊಂಡಿದ್ದು 6 ನೇ ವಿಕೆಟ್. 


ಒಂದು ಕಡೆಯಲ್ಲಿ ನಿಂತುಕೊಂಡು ಒಂದರ ನಂತರ ಒಂದು ವಿಕೆಟ್ ಉದುರುವುದನ್ನು ನೋಡುತ್ತಿದ್ದ ಜೋ ರೂಟ್ ಗೆ ಸಾಥ್ ಕೊಡಲು ಬಂದದ್ದು,ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದ ಕ್ರಿಸ್ ವೋಕ್ಸ್. 


ಆಂಗ್ಲರ ಆಟ ಮುಂದುವರಿದಿತ್ತು. 


ರೂಟ್ ಒಂದಷ್ಟು ಬೌಂಡರಿ ಗಳಿಸಿ ಬಿಟ್ಟ. 


ಹೆಚ್ಚು ಕಡಿಮೆ 13 ಓವರ್ ಗಳನ್ನು ರೂಟ್ ಮತ್ತು ವೋಕ್ಸ್ ಆಡಿ ಬಿಟ್ಟರು. 


ಆದರೆ ಈ ಬಾರಿ ಮತ್ತೊಮ್ಮೆ ಠಾಕೂರ್ ಮಹಾರಾಜ್ ಭಾರತೀಯ ಅಭಿಮಾನಿಗಳನ್ನು ಇನ್ನಿಲ್ಲದಂತೆ ಖುಷಿ ಪಡಿಸಿಬಿಟ್ಟ. ಅವನು ಪೆವಿಲಿಯನ್ ಗೆ ಕಳುಹಿಸಿದ್ದು ಅಂತಿಂತಹ ಆಟಗಾರನನ್ನು ಅಲ್ಲ.ಅವನ ಎಸೆತಕ್ಕೆ ಸ್ವತಃ ಜೋ ರೂಟ್ ತನ್ನದೊಂದು ವಿಕೆಟ್ ಉದುರಿಸಿಕೊಂಡು ಔಟಾಗಿ ಬಿಟ್ಟ. 


ಶಾರ್ದೂಲನ ಔಟ್ ಸೈಡ್ ಆಫ್ ಸ್ಟಂಪ್ ನಲ್ಲಿ ಬಿದ್ದಿದ್ದ ಶಾರ್ಟ್ ಆಫ್ ಗುಡ್ ಲೆಂತ್ ಬಾಲ್ ಅನ್ನು ಎಂದಿನಂತೆ ಬ್ಯಾಕ್ವರ್ಡ್ ಪಾಯಿಂಟ್ ನಲ್ಲಿ ಕಳುಹಿಸಲು ಮುಂದಾದ ರೂಟ್ ಇನ್ ಸೈಡ್ ಎಡ್ಜ್ ಮಾಡಿಕೊಂಡು ಆ ಬಾಲ್ ಅನ್ನು ತನ್ನ ವಿಕೆಟ್ ಮೇಲೆಯೇ ಎಳೆದುಕೊಂಡ. ಈ ರೀತಿ ಬೌಲ್ಡ್ ಔಟ್ ಆಗುವ ಮೊದಲು ರೂಟ್ 78 ಎಸೆತಗಳಲ್ಲಿ 36 ರನ್ ಗಳಿಸಿದ್ದ.ಈ ರೀತಿಯಲ್ಲಿ ಇಂಗ್ಲೆಂಡ್ ನ ಬಲಶಾಲಿ ಆಧಾರ ಸ್ತಂಭವೊಂದು ಓವಲ್ ಮೈದಾನದಲ್ಲಿ ಇಂದು ಧರಾಶಾಯಿಯಾಗಿ ಬಿಟ್ಟಿತು. 


ಇಲ್ಲಿಗೆ ಇಂಗ್ಲೆಂಡ್ 7 ಕಳೆದುಕೊಂಡು ಬಿಟ್ಟಿತ್ತು.

ಈ ಎರಡನೆಯ ಸೆಷನ್ ಒಂದರಲ್ಲಿಯೇ ಇಂಗ್ಲೆಂಡ್ ಒಟ್ಟು 6 ವಿಕೆಟ್ ಗಳನ್ನು ಕಳೆದುಕೊಂಡಿತ್ತು.


ಚಹಾ ಕುಡಿಯಲು ಹೋಗಲು ಇನ್ನೂ ಒಂದು ಓವರ್ ಬಾಕಿ ಇತ್ತು. 


ರೂಟ್ ಔಟಾದ ನಂತರ ಕ್ರಿಸ್ ವೋಕ್ಸ್ ಗೆ ಕೂಡ ಜಾಸ್ತಿ ಹೊತ್ತು ನಿಲ್ಲುವ ಮನಸ್ಸಾಗಲಿಲ್ಲ. ಪ್ಯಾಡ್ ನ ಬುಡಕ್ಕೆ ಬಿದ್ದಿದ್ದ ಉಮೇಶ್ ಯಾದವ್ ನ ಫುಲ್ ಲೆಂತ್ ಡೆಲಿವರಿಯನ್ನು ಪ್ಲಿಕ್ ಮಾಡಲು ಹೋಗಿ ಶಾರ್ಟ್ ಮಿಡ್ ವಿಕೆಟ್ ನಲ್ಲಿದ್ದ ಕೆ.ಎಲ್ ರಾಹುಲ್ ಗೆ ಸುಲಭ ಕ್ಯಾಚ್ ನೀಡುವ ಮೂಲಕ ಕ್ರಿಸ್ ವೋಕ್ಸ್ ಕೂಡ  ಔಟಾಗಿ ಬಿಟ್ಟ.ಬಾರಿಸಿದ್ದು 18 ರನ್,ಎದುರಿಸಿದ್ದು 47 ಎಸೆತ. 


ಈ ರೀತಿಯಾಗಿ ಆಂಗ್ಲರ 8 ನೇ ವಿಕೆಟ್ ಪತನವಾಯಿತು. ಎರಡೂ ತಂಡದ ಆಟಗಾರರು ಬಿಸಿ ಬಿಸಿ ಚಹಾ ಕುಡಿಯಲು ಪೆವಿಲಿಯನ್ ಸೇರಿಕೊಂಡರು. 


ಟೀ ಬ್ರೇಕ್ ನಂತರ ಮತ್ತೆ ಆಟ ಮುಂದುವರಿದಿತ್ತು.


ಕ್ರೀಸ್ ನಲ್ಲಿ ಇದ್ದದ್ದು ಓಲಿ ರಾಬಿನ್ಸನ್ ಹಾಗೂ ಕ್ರೇಗ್ ಓವರ್ಟನ್. 


ಮೂರನೆಯ ಸೆಷನ್ ನ ಮೊದಲ ವಿಕೆಟ್ ಉದುರಿಸಿದ್ದು ಉಮೇಶ್ ಯಾದವ್.


ಉಮೇಶ್ ಯಾದವ್ ನ ಎಸೆತವನ್ನು ಕ್ರೇಗ್ ಓವರ್ಟನ್ ಮೊದಲು ಮೈಮೇಲೆ ಎಳೆದುಕೊಂಡು ಆಮೇಲೆ ಅದು ಹೋಗಿ ವಿಕೆಟ್ ಗೆ ಬಡಿಯುವಂತೆ ಸ್ವತಃ ಅವನೇ ಮಾಡಿಬಿಟ್ಟ. ಈ ರೀತಿಯಾಗಿ ಬೌಲ್ಡ್ ಔಟಾಗುವ ಮೊದಲು ಓವರ್ಟನ್ 29 ಎಸೆತಗಳಲ್ಲಿ 10 ರನ್ ಗಳಿಸಿದ್ದ.


ಆಂಗ್ಲರ 9 ವಿಕೆಟ್ ಅದಾಗಲೇ ಉದುರಿಹೋಗಿತ್ತು.


ಭಾರತಕ್ಕೆ ಬೇಕಿದ್ದದ್ದು ಒಂದೇ ಒಂದು ವಿಕೆಟ್.


ಓಲಿ ರಾಬಿನ್ಸನ್ ಗೆ ಜೊತೆ ನೀಡಲು ಕೊನೆಯ ಆಟಗಾರನಾಗಿ ಬಂದದ್ದು ಜಿಮ್ಮಿ ಆಂಡರ್ಸನ್.


ಕೊನೆಗೂ ಆಂಡರ್ಸನ್ ನನ್ನು ವಿಕೆಟ್ ಕೀಪರ್ ಪಂತ್ ಗೆ  ಉಮೇಶ್ ಯಾದವ್ ಕ್ಯಾಚ್ ಕೊಡಿಸುವಲ್ಲಿ ಸಫಲನಾದ.


ಈ ರೀತಿಯಾಗಿ 50 ವರ್ಷಗಳ ನಂತರ ಓವಲ್ ಮೈದಾನದಲ್ಲಿ ಭಾರತೀಯರು ಹಾಗೇ ಗೆಲುವಿನ ಕೇಕೆಯೊಂದನ್ನು ಹಾಕಿ ಬಿಟ್ಟರು.


ಕಳೆದ ಪಂದ್ಯದ ಇನ್ನಿಂಗ್ಸ್ ಸೋಲು ಹಾಗೇ ಮಸುಕಾಗಿ ಹೋಗಿತ್ತು.


ಕಮ್ ಬ್ಯಾಕ್, ಪೈಟ್ ಬ್ಯಾಕ್ ಈ ತಂಡದ ಮೂಲ ಮಂತ್ರ. ಅದನ್ನೇ ನಮ್ಮವರು ಇವತ್ತೂ ಮಾಡಿ ತೋರಿಸಿದ್ದು. 


ಈ ರೀತಿಯಾಗಿ ಭಾರತ ಓವಲ್ ಪಂದ್ಯವನ್ನು 157 ರನ್ನುಗಳಿಂದ ಗೆದ್ದುಕೊಂಡು ಐದು ಪಂದ್ಯಗಳ ಸಿರೀಸ್ ನಲ್ಲಿ 2-1 ರಲ್ಲಿ ಮುಂದಡಿ ಇಟ್ಟಿತು ಮಾತ್ರವಲ್ಲ ಡಬ್ಲ್ಯು.ಟಿ.ಸಿ ಯ ಅಂಕಪಟ್ಟಿಗೆ 12 ಸಂಪೂರ್ಣ ಅಂಕಗಳನ್ನು ಸಹ ಸೇರಿಸಿಕೊಂಡು ಬಿಟ್ಟಿತು. 



ಆಂಗ್ಲರ ಬ್ಯಾಟಿಂಗ್ ನಲ್ಲಿ ಹಸೀಬ್ ಹಮೀದ್ ಬಾರಿಸಿದ 63 ರನ್ನುಗಳೇ ಸರ್ವಾಧಿಕವಾಗಿತ್ತು.ರಾರಿ ಬರ್ನ್ಸ್ 50 ಹಾಗೂ ಜೋ ರೂಟ್ 36 ರನ್ ಬಾರಿಸಿದ್ದರು. 


ಭಾರತಿಯ ಬೌಲರ್ ಗಳಲ್ಲಿ ಉಮೇಶ್ ಯಾದವ್ ಸರ್ವಾಧಿಕ 3 ವಿಕೆಟ್ ಕಿತ್ತರೆ, ಜಡೇಜಾ,ಬುಮ್ರಾ ಮತ್ತು ಶಾರ್ದೂಲ್ ತಲಾ ಎರಡು ವಿಕೆಟ್ ಕಬಳಿಸಿದರು.


ಹಂಡ್ರೆಡ್ ಬಾರಿಸಿ ಅಬ್ಬರಿಸಿದ್ದ ರೋಹಿತ್ ಶರ್ಮ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ.ಅಭಿನಂದನೆಗಳು ಹಿಟ್ ಮ್ಯಾನ್.


ಸದ್ಯಕ್ಕೆ ಆಂಗ್ಲರ ನೆಲದಲ್ಲಿ ಭಾರತಕ್ಕೆ ಸರಣಿ ಸೋಲುವ ಯಾವುದೇ ಭಯವಿಲ್ಲ.ಮುಂದಿನ ಪಂದ್ಯ ಇಂಗ್ಲೆಂಡ್ ಏನಾದರೂ ಗೆದ್ದರೆ ಸರಣಿ ಸಮಬಲ ಆಗಬಹುದು,ಒಂದು ವೇಳೆ ಡ್ರಾ ಆದರೂ ಕೂಡ ಈ ಸರಣಿ ನಮ್ಮ ತೆಕ್ಕೆಗೆಯೇ ಬೀಳಲಿದೆ. 


ಹಾಗೆಯೇ ಆಗಲಿ... ಭಾರತವೇ ಗೆಲ್ಲಲಿ. 


ಅಂದ ಹಾಗೆ ಟೆಸ್ಟ್ ಅಭಿಮಾನಿಗಳಿಗೆ ಇದು ಸೆಲೆಬ್ರೇಶನ್ ಸಮಯ. ನಮ್ಮವರು ಇನ್ನಷ್ಟು ಗೆಲ್ಲಲಿ ನಾವು ಎಂದಿನಂತೆ ಮತ್ತಷ್ಟು ಸಂಭ್ರಮಿಸೋಣ. 


ಪಂದ್ಯ ಗೆದ್ದುಕೊಂಡು,ಜೊತೆಗೆ ಹೃದಯವನ್ನು ಸಹ  ಗೆದ್ದುಕೊಂಡು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡದ್ದಕ್ಕಾಗಿ ಅಭಿನಂದನೆಗಳು ಟೀಮ್ ಇಂಡಿಯಾ. 


ಸದ್ಯಕ್ಕೆ ಇಷ್ಟೇ.. 


ಮುಂದಿನ ಪಂದ್ಯ ಅಂದರೆ ಈ ಸರಣಿಯ ಕೊನೆಯ ಪಂದ್ಯ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ್ಡ್ ನಲ್ಲಿ ನಡೆಯಲಿದೆ. 


ಎಂದಿನಂತೆ ಪಂದ್ಯದ ಮೊದಲ ದಿನ ಸಿಗೋಣ.

ಮತ್ತೆ ಒಂದಷ್ಟು ಕ್ರಿಕೆಟ್ ಮಾತಾಡೋಣ. 


Ind Vs England

4th Test - Kennington - London 


#Day_5 : India won by 157 runs. 

India 1st Innings - 191/10

England 1st Innings - 290/10

India 2nd Innings - 466/10

England 2nd Innings - 210/10

MOM - Rohith Sharma 


#WTC_S02E01_4TD5_2021_23 

Ab pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ