#5T ಮುಂದಿನದು ಮ್ಯಾಂಚೆಸ್ಟರ್




ಸೋಲುತ್ತಲೇ ಇದ್ದರೆ ಅದೊಂದು ಮುಗಿಯದ ಹತಾಶೆ ಜೊತೆಗೊಂದಿಷ್ಟು ನಿರಾಸೆ. 


ಸೋಲಲು ಗೊತ್ತಿಲ್ಲದೇ ಬರೀ ಗೆಲ್ಲುತ್ತಲೇ ಇದ್ದರೂ ಸಹ ಅಲ್ಲೊಂದು ಅಂತಹ ಹೆಚ್ಚಿನ ವಿಶೇಷತೆ ಇರದೆ ಎಂದಿನಂತೆ ಸಹಜತೆಯೇ ಮುಂದುವರಿದಿರುತ್ತದೆ. 


ಆದರೆ ಪಂದ್ಯ ಒಂದರಲ್ಲಿ ಹೀನಾಯವಾಗಿ ಸೋತು,ಮುಂದಿನ ಪಂದ್ಯದಲ್ಲಿ ಸ್ವತಃ ಎದುರಾಳಿಯನ್ನೇ ಮತ್ತಷ್ಟು ಹೀನಾಯವಾಗಿ ಸೋಲಿಸುವ ತಂಡದ್ದೊಂದು ಕಥೆ ಇದೆಯಲ್ಲಾ... ಅದು ಮಾತ್ರ ಯಾವತ್ತೂ ಎಲ್ಲರ ಹೃದಯ ಗೆಲ್ಲುವಂತಹದ್ದು,ಅಷ್ಟು ಮಾತ್ರವಲ್ಲ ಬಹಳಷ್ಟು ಮೆಚ್ಚುಗೆಗೆ ಹಾಗೂ ಎಲ್ಲರ ಪ್ರಶಂಸೆಗೂ ಕೂಡ ಅರ್ಹವಾಗುವಂತಹದ್ದು. 


ಸದ್ಯಕ್ಕೆ ವಿಶ್ವದೆಲ್ಲೆಡೆ ಅಂತಹದ್ದೊಂದು ಮೆಚ್ಚುಗೆಗೆ ಅರ್ಹವಾದ ತಂಡ ಅಂತ ಇದ್ದರೆ ಅದು ಓನ್ ಆಂಡ್ ಓನ್ಲಿ.. ಟೀಮ್ ಇಂಡಿಯಾವೇ ಹೊರತು ಬೇರೆ ಯಾವುದೂ ಅಲ್ಲ. 


ಲೀಡ್ಸ್ ಪಂದ್ಯ ಸೋತ ಕೂಡಲೇ ನಮ್ಮಲ್ಲಿ ಎಂದಿನಂತೆ ಟೀಕೆಗಳು ಹೆಚ್ಚಾಗಿದ್ದವು.ಪ್ರಮುಖ ಬ್ಯಾಟ್ಸ್‌ಮನ್ ಗಳು ಸೇರಿ ನಾಯಕ ವಿರಾಟ್ ಕೊಹ್ಲಿ ಕೂಡ ಆ ಟೀಕೆಗೆ ಇನ್ನಿಲ್ಲದಂತೆ ಗುರಿಯಾಗಿ ಬಿಟ್ಟಿದ್ದ. 


ಕೆಲವರು ಅಂತು ಈ ಕೊಹ್ಲಿ ಫಾರ್ಮ್ ನಲ್ಲಿ ಬೇರೆ ಇಲ್ಲ,ನತದೃಷ್ಟ ಕಪ್ತಾನ ಕೂಡ ಹೌದು. ಮೊದಲು ಅವನನ್ನು ಕಿತ್ತು ಬಿಸಾಕ್ರಿ.. ಅಂತ ಕೂಡ ಹೇಳಿಯೇ ಬಿಟ್ಟಿದ್ದರು. 


ಅದರಲ್ಲೂ ಕ್ರಿಕೆಟ್ Abcd ಗೊತ್ತಿರುವವರೂ ಸಹ ತಮ್ಮದೊಂದು ವೈಯಕ್ತಿಕ ದ್ವೇಷಕ್ಕಾಗಿ ಇಂತಹ ಸಂದರ್ಭಕ್ಕಾಗಿಯೇ ಕಾದಿದ್ದರು.ತಂಡ ಲೀಡ್ಸ್ ನಲ್ಲಿ ಸೋತ ಕೂಡಲೇ ಬಹು ಜನರ ಆಕ್ರೋಶದ ಅಗ್ನಿಗೆ ಅವರೂ ಕೂಡ ಶ್ರದ್ಧೆಯಿಂದ ಒಂದಷ್ಟು ತುಪ್ಪ ಎಂದಿನಂತೆ ಸುರಿಯಲು ಮರೆಯಲಿಲ್ಲ. 


ಆದರೆ ಕೊಹ್ಲಿ ಎಂಬ ಆಟಗಾರ ಇದಕ್ಕೆಲ್ಲಾ ಕ್ಯಾರೇ ಅನ್ನುವವನಲ್ಲ. 


ಅದೇ ತಂಡವನ್ನು ಹಿಡಿದುಕೊಂಡು ಅದೆಂತಹ ಕಮ್ ಬ್ಯಾಕ್,ಫೈಟ್ ಬ್ಯಾಕ್,ಬೌನ್ಸ್ ಬ್ಯಾಕ್ ಗಳನ್ನೆಲ್ಲಾ ಮಾಡಿದನೆಂದರೆ.. ಅವನೀಗ ತನ್ನದೊಂದು ತಂಡದೊಂದಿಗೆ ವಿಶ್ವದ ಶ್ರೇಷ್ಠ ಟೆಸ್ಟ್ ಕಪ್ತಾನರಲ್ಲಿ 4 ನೇ ಸ್ಥಾನದಲ್ಲಿದ್ದಾನೆ.


ಬೇರೆಯವರು ಒಪ್ಪಲಿ,ಒಪ್ಪದೇ ಇರಲಿ ಭಾರತ ಟೆಸ್ಟ್ ತಂಡದ  ಅತ್ಯುತ್ತಮ ಕಪ್ತಾನ ಅವನದಾಗಲೇ ಆಗಿ ಬಿಟ್ಟಿದ್ದಾನೆ.ಅಂಕಿ ಅಂಶಗಳು ಸುಳ್ಳು ಹೇಳುವುದಿಲ್ಲ.ದ್ವೇಷಕಾರುವವರ ಬಾಯಿ ಮುಚ್ಚಿಸುವುದು ಹೆಚ್ಚಾಗಿ ಇವುಗಳೇ ಎಂದಿಗೂ.


53 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್ ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಯಶಸ್ವಿ ಕಪ್ತಾನನಾಗಿದ್ದರೆ, ಈ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಗೆದ್ದಿರುವುದು 38 ಟೆಸ್ಟ್. ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್ ನ 36 ಟೆಸ್ಟ್ ಪಂದ್ಯಗಳ ಜಯದ ದಾಖಲೆಯನ್ನು ಅದಾಗಲೇ ಕೊಹ್ಲಿ ಹಿಂದೆ ಹಾಕಿದ್ದು, 41 ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾದ ಸ್ಟೀವ್ ವಾ ಹಾಗೂ 48 ಪಂದ್ಯ ಗೆದ್ದಿರುವ ರಿಕ್ಕಿ ಪಾಂಟಿಂಗ್ ಸದ್ಯಕ್ಕೆ ಕೊಹ್ಲಿ ಮುಂದಿದ್ದಾರೆ.ವಿಶೇಷ ಎಂದರೆ ಅವರಾರು ಈಗ ಆಡುತ್ತಿಲ್ಲವಾದ ಕಾರಣ ಕೊಹ್ಲಿಯ ವಿಜಯ ಯಾತ್ರೆ ಮತ್ತಷ್ಟು ಉದ್ದಕ್ಕೆ ಮುಂದುವರಿಯಲಿದೆ. 


ಜಯವೊಂದು ಅತೀ ಕಷ್ಟವೆನಿಸುವ ಸೇನಾ ದೇಶಗಳಲ್ಲಿ ಅಂದರೆ South Africa, England, New Zealand & Australia(SENA) ದೇಶಗಳಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಕಪ್ತಾನರಲ್ಲಿ ಮೊದಲ ಸ್ಥಾನ ಈಗ 6 ಪಂದ್ಯ ಗೆದ್ದ ವಿರಾಟ್ ಕೊಹ್ಲಿಯದ್ದು. ಪಾಕಿಸ್ತಾನ ಜಾವೇದ್ ಮಿಯಾಂದದ್ 4 ಪಂದ್ಯ ಗೆದ್ದು ಅದಾಗಲೇ ಈ ರೇಸಿನಿಂದ ಹಿಂದೆ ಬಿದ್ದಿದ್ದಾರೆ. ಸದ್ಯಕಂತು ಆಟವಾಡುತ್ತಿರುವ ಯಾವುದೇ ಇತರ ಏಷ್ಯನ್ ಕಪ್ತಾನ ಈ ಪಟ್ಟಿಯಲ್ಲಿಯೇ ಇಲ್ಲ. ನೆನಪಿರಲಿ ಸೇನಾ ದೇಶದಲ್ಲಿ ವಿನ್ ಆದ ಬಗ್ಗೆ ಹೇಳಿದ್ದೇ ಹೊರತು,ವೆಸ್ಟ್ಇಂಡೀಸ್,ಜಿಂಬಾಬ್ವೆ ಹಾಗೂ ಐರ್ಲೆಂಡ್ ನಂತಹ ನೆಲಗಳಲ್ಲಿ ಜಯಗಳಿಸಿದ್ದರ ಬಗ್ಗೆ ಹೇಳಿದ್ದು ಅಲ್ಲ! 


ಒಂದು ಟೆಸ್ಟ್ ಪಂದ್ಯ ಗೆಲ್ಲುವುದು ಎಂದರೆ ಅದರಲ್ಲೂ ಇಂತಹ ಟಫ್ ಕಂಟ್ರಿಗಳಲ್ಲಿ ತಂಡವೊಂದಕ್ಕೆ ಗೆಲುವಿನ ರುಚಿ ಹತ್ತಿಸುವುದು ಅಂದರೆ ಅದು ನಿಜಕ್ಕೂ ಬಹಳಷ್ಟು ಸವಾಲಿನ ವಿಷಯವೇ ಸರಿ.


ಅದೇನೇ ಹೇಳಿ ಕೊಹ್ಲಿ ಬಹಳಷ್ಟು ದೊಡ್ಡ ಹೆಸರಿನ ಕಪ್ ಗಳನ್ನು ಗೆಲ್ಲಿಸದೇ ಇರಬಹುದು... ಆದರೆ ಆತ ನಮ್ಮನ್ನು ಅತೀ ಹೆಚ್ಚು ಸೋಲಿಸಲೂ ಇಲ್ಲ ಎಂಬುದನ್ನು ಸಹ ನಾವು ಮರೆಯಬಾರದು.ಆತ ಸರ್ವ ಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ.ಸದ್ಯಕ್ಕೆ ಆತನ ಕಪ್ತಾನಗಿರಿಗೂ ಕೂಡ ಒಂದು ಮೆಚ್ಚುಗೆ ಹೃದಯದಿಂದಲೇ ಬರಲಿ.ಏಕೆಂದರೆ ವಿಶ್ವ ಕ್ರಿಕೆಟೇ ಅವನನ್ನು ಕೊಂಡಾಡುತ್ತಿದೆ.ರಾಗ ದ್ವೇಷಕ್ಕೆ ಬಲಿ ಬಿದ್ದು ನಾವು ಏಕೆ ಅದರಲ್ಲಿ ಹಿಂದೆ ಬೀಳಬೇಕು ಅಲ್ಲವೇ.. 


ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅಂತು ಅದೆಷ್ಟು ಮುಕ್ತ ಕಂಠದಿಂದ ವಿರಾಟ್ ನನ್ನು ಹೊಗಳಿದ್ದ ಎಂದರೆ ಬಹುಶಃ ಅವನಿಗೆ ಪದಗಳ ಕೊರತೆಯೇ ಎದ್ದು ಕಾಣುತ್ತಿತ್ತು.


ಭೂಮಿಯಲ್ಲಿ ಈ ಟೆಸ್ಟ್ ಪಂದ್ಯಗಳ ಬಿಗ್ಗೆಸ್ಟ್ ಸೂಪರ್ ಸ್ಟಾರ್ ಇದ್ದರೆ ಅದು ಯಾವತ್ತಿಗೂ ವಿರಾಟ್ ಕೊಹ್ಲಿಯೇ ಎಂದು ಹೇಳಿದ್ದಾನೆ ಈ ಆಸ್ಟ್ರೇಲಿಯಾದ ದೈತ್ಯ ಸ್ಪಿನ್ನರ್. 


ಕೊಹ್ಲಿ ವರ್ತನೆ ಸರಿ ಇಲ್ಲ,ಅವನು ಶಿಸ್ತು ಬೆಳೆಸಿಕೊಳ್ಳಬೇಕು ಎಂದೆಲ್ಲ ಬುದ್ಧಿವಾದ ಹೇಳಿದ್ದ ನಿಕ್ ಕಾಂಪ್ಟನ್ ನನ್ನು ಈ ಬಾರಿ ಭಾರತೀಯ ಅಭಿಮಾನಿಗಳು ಮಾತ್ರ ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡರು. 


ಓವಲ್ ಪಂದ್ಯ ಗೆದ್ದ ನಂತರ ಮೈದಾನದಲ್ಲಿಯೇ ಆಂಗ್ಲ ಕ್ರಿಕೆಟ್ ನ ಅಭಿಮಾನಿ ಸಂಘವಾದ ಭಾಮಿ ಆರ್ಮಿ ಗೊಂದು ಸರಿಯಾಗಿಯೇ ಪುಂಗಿ ಊದಿದ ಕೊಹ್ಲಿ ಸೆಲೆಬ್ರೇಶನ್ ಗೆ,ಫಾಕ್ಸ್ ಕ್ರಿಕೆಟ್ ಕಟುವಾಗಿ ಟೀಕೆ ಮಾಡಿತ್ತು.ಕೊಹ್ಲಿಯ ಈ ರೀತಿಯ ಕ್ಲಾಸ್ ಲೆಸ್ ಸೆಲೆಬ್ರೇಶನ್ ವಿಶ್ವ ಕ್ರಿಕೆಟ್ ಅನ್ನು ಡಿವೈಡ್ ಮಾಡುತ್ತದೆ ಎಂದು ಅದು ಹೇಳಿಕೊಂಡಿತ್ತು. ಆದರೆ ಅವರನ್ನು ಟಿಟ್ವರ್ ನಲ್ಲಿಯೇ ಸರಿಯಾಗಿ ಬೆಂಡೆತ್ತಿದ್ದು ನಮ್ಮ ವಾಸೀಂ ಜಾಫರ್. ಜಾಫರ್ ಹೇಳಿದ್ದ " ಸದ್ಯಕ್ಕೆ ಡೆಡ್ ಆಗುತ್ತಿರುವ ಫಾರ್ಮೆಟ್ ಒಂದಕ್ಕೆ ಒಂದಿಷ್ಟು ಜೀವ ತುಂಬುತ್ತಿರುವ ಆಟಗಾರ  ಎಂದು ವಿಶ್ವವೇ ಕೊಹ್ಲಿಯನ್ನು ಗುಣಗಾನ ಮಾಡುತ್ತಿದೆ.. ಹಾಗಾಗಿ ನಿಮ್ಮ ಸಾಲುಗಳನ್ನು ನೀವು ತಿದ್ದಿಕೊಳ್ಳಬಹುದು..ಎಂದು ಎಂದಿನಂತೆ ಚಾಟಿಯೇಟು ಬೀಸಿದ್ದಾನೆ ಈ ಮುಂಬೈಕರ್. 


ಕೊಂಕು ನುಡಿಯುವವರಲ್ಲಿ ಎಲ್ಲರಿಗಿಂತಲೂ ಮೊದಲು ಇರುವ ಇಂಗ್ಲೆಂಡ್ ನ ಮೈಕಲ್ ವಾನ್ ಮತ್ತೊಮ್ಮೆ ತನ್ನ ರಾಗವನ್ನು ಟೀಮ್ ಇಂಡಿಯಾವನ್ನು ಹೊಗಳುವುದರ ಕಡೆಗೆ ಬದಲಾಯಿಸಿದ್ದಾನೆ.ಅವನು ಗೆದ್ದ ಎತ್ತಿನ ಬಾಲ ಹಿಡಿಯುವವನು.ವಾನ್ ಹೇಳಿದ್ದು ಇಷ್ಟು.. ಕೆಲವೊಮ್ಮೆ ನಾವು ಒತ್ತಡದಲ್ಲಿ ಆಡುವ ತಂಡವನ್ನು ಅತ್ಯುತ್ತಮ ತಂಡ ಎಂದೇ ಒಪ್ಪಿಕೊಳ್ಳಬೇಕಾಗುತ್ತದೆ ಮತ್ತು ಟೀಮ್ ಇಂಡಿಯಾದ ಈ ತಂಡ ಅಂತಹ ಸಂಧರ್ಭಗಳಲ್ಲಿ ಹೆಚ್ಚು ಕಡಿಮೆ ಇಲ್ಲಿಯವರೆಗೆ ಎಲ್ಲವನ್ನೂ ಜಯಿಸಿ ಬಿಟ್ಟಿದೆ.


ಜಯ ಹಾಗೆಯೇ,ವಿರೋಧಿಗಳನ್ನು ಸಹ ಹೊಗಳುವಂತೆ ಪ್ರೇರೆಪಿಸಿ ಬಿಡುತ್ತದೆ.ಮತ್ತು ವಿರೋಧಿಗಳ ಹೃದಯ ಗೆಲ್ಲುವುದು ಕೂಡ ಪಂದ್ಯ ಗೆಲ್ಲುವ ಜಯಕ್ಕಿಂತಲೂ ಎಷ್ಟೋ ದೊಡ್ಡದೇ ಆಗಿರುತ್ತದೆ.ಒಳ್ಳೆಯ ಕ್ರೀಡಾಪ್ರೇಮಿ ಎದುರಾಳಿ ತಂಡ ಗೆದ್ದ ಸಂದರ್ಭದಲ್ಲಿ ತನ್ನ ಹಮ್ಮು ಬಿಮ್ಮುಗಳನ್ನು ಬಿಟ್ಟು ಮುಕ್ತಕಂಠದಿಂದ ಮೆಚ್ಚುಗೆ ವ್ಯಕಪಡಿಸಲು ಎಂದಿಗೂ ಮುಂದಾಗುತ್ತಾನೆ.ವಾನ್ ಗೆ ಹೀಗೆ ಮಾಡುವುದು ಸದ್ಯಕ್ಕೆ ಅನಿವಾರ್ಯವೇ ಆದರೂ ಸಹ ಆತ ಟೀಮ್ ಇಂಡಿಯಾ ಗೆದ್ದಾಗಲೆಲ್ಲ ಬಹಳಷ್ಟು  ಶ್ಲಾಘಿಸಿದ್ದಾನೆ ಅನ್ನುವುದು ಸಹ ಅಷ್ಟೇ ಸತ್ಯ. 


ಆಸ್ಟ್ರೇಲಿಯಾದ ನೆಲದಲ್ಲಿ ಕೇವಲ 36 ರನ್ನುಗಳಿಗೆ ಆಲ್ ಔಟ್ ಆಗಿ ಮುಂದೆ 2-1 ರಿಂದ ಸರಣಿ ಗೆದ್ದುಕೊಂಡಿದ್ದು, ಇಂಗ್ಲೆಂಡ್ ನಲ್ಲಿ 78 ಕ್ಕೆ ಆಲ್ ಔಟ್ ಆಗಿ ಸದ್ಯಕ್ಕೆ 2-1 ರಿಂದ ಸರಣಿಯಲ್ಲಿ ಮುಂದೆ ಇರುವುದು ಖಂಡಿತವಾಗಿಯೂ ಇದು ಯಾವುದೇ ಸಣ್ಣಪುಟ್ಟ ವಿಷಯವಂತು ಅಲ್ಲವೇ ಅಲ್ಲ.ಹೆಚ್ಚಿನ ತಂಡಗಳಿಗೆ ಇದೆಲ್ಲವೂ ಬರೀ ಸ್ವಪ್ನವಾಗಿರುತ್ತದೆ.ಹಾಗಾಗಿಯೇ ವಿಶ್ವದಾದ್ಯಂತ ಟೀಮ್ ಇಂಡಿಯಾಕ್ಕಾಗಿ ಮೆಚ್ಚುಗೆಯ ಹೊಳೆಯೇ ಹರಿದಿರುವುದು. 


ಕೇವಿನ್ ಪೀಟರ್ಸನ್ ಕೂಡ ನಾವು ನೋಡುತ್ತಿರುವ ಈ ಇಂಡಿಯನ್ ಟೀಮ್ ವಿಶ್ವ ಟೆಸ್ಟ್ ಕ್ರಿಕೆಟ್ ನ ಸರ್ವ ಶ್ರೇಷ್ಠ ತಂಡವಾಗಿದೆ ಎಂದು ಹೇಳಿದ್ದಾನೆ.ಎಬಿಡಿ ವಿಲಿಯರ್ಸ್ ಕೂಡ ಇಂತಹದ್ದೇ ಮಾತು ಹೇಳಲು ಹಿಂದೆ ಬೀಳಲಿಲ್ಲ.


ವಿಶೇಷ ಏನೆಂದರೆ ಭಾರತೀಯ ತಂಡವೊಂದು ವಿಶ್ವದ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಆಡುತ್ತಿದ್ದರೂ ಜಗತ್ತು ಕಣ್ಣು ಬಿಟ್ಟು ಭಾರತ ತಂಡವನ್ನು ನೋಡುತ್ತಿರುತ್ತದೆ.ಕಟ್ಟರ್ ವೈರಿ  ಪಾಕಿಸ್ತಾನ ಕೂಡ ಭಾರತ ಪಂದ್ಯವನ್ನು ನೋಡುತ್ತದೆ ಮಾತ್ರವಲ್ಲ ಅವರ ತಂಡ ಸೋತಾಗ ಭಾರತವನ್ನು ನೋಡಿ ಕಲಿಯಿರಿ ಎಂದು ಅಲ್ಲಿನ ಅಭಿಮಾನಿಗಳು,ಹಿರಿಯ ಆಟಗಾರರು ಹೇಳುವುದನ್ನು ನೋಡುವುದೇ ಒಂದು ಮಜಾ ಬಿಡಿ.ಅಂದ ಹಾಗೆ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಅಂಧ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಯಾವತ್ತೂ ಸ್ವಲ್ಪ ಅನುಕಂಪ ಹಾಗೂ ಕರುಣೆ ಇರಲಿ. ಏಕೆಂದರೆ ಅವರುಗಳ ಪ್ರಕಾರ ಅವರ ಮೊಲಕ್ಕೆ ಮೂರೇ ಕಾಲು! 


ಇನ್ನು ಭಾರತೀಯ ವೇಗದ ಬೌಲರ್ ಗಳನ್ನು ಎಷ್ಟು ಹೊಗಳಿದರೂ ಸಾಲದು.ಹಿಂದೆ ನಮ್ಮಲ್ಲಿ ದಿಗ್ಗಜ ಬ್ಯಾಟ್ಸ್‌ಮನ್ ಗಳು ಬೇಕಾದಷ್ಟು ಇದ್ದರು, ಆದರೆ ತಂಡದಲ್ಲಿದ್ದ ಒಂದೆರಡು ವೇಗದ ಬೌಲರ್ ಗಳು ಅಷ್ಟೇ ಪಂದ್ಯ ಗೆದ್ದು ಕೊಡುವಷ್ಟು ಸಮರ್ಥರಿದ್ದರು.ಆದರೆ ಈಗ ಹಾಗಿಲ್ಲ. ಮಹಮ್ಮದ್ ಶಮಿ, ಇಶಾಂತ್ ಶರ್ಮ, ರವಿಚಂದ್ರನ್ ಅಶ್ವಿನ್ ನಂತಹ ಆಟಗಾರರು ಆಡದೇ ಇದ್ದರೂ ನಮ್ಮ ಬೌಲರ್ ಗಳು ಎದುರಾಳಿಯ ಸಾಕಷ್ಟು ನಿದ್ದೆಗೆಡಿಸಬಲ್ಲರು.


ನಿಜಕ್ಕೂ ಈ ಬಾರಿ ಬ್ಯಾಟಿಂಗ್ ಬೆಂಚ್ ಸ್ಟ್ರೆಂತ್ ಗಿಂತಲೂ ನಮ್ಮ ಬೌಲಿಂಗ್ ಬೆಂಚ್ ಸ್ಟ್ರೆಂತ್ ಹೆಚ್ಚು ಮೆಚ್ಚುಗೆಗೆ ಅರ್ಹ ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ಏಕೆಂದರೆ ಈ ಹಿಂದೆ ಈ ರೀತಿ ಏನಾದರೂ ಆದರೆ ಅಂದರೆ ಪ್ರಮುಖ ಬೌಲರ್ ಒಬ್ಬ ಗಾಯಾಳುವಾಗಿ ಪಂದ್ಯ ಆರಂಭಕ್ಕೂ ಮೊದಲು ತಂಡದಿಂದ ಹೊರಗೆ ಉಳಿದರೆ, ನಾವು ಹೆಚ್ಚಿನವರು ಪಂದ್ಯದ ಮೇಲಿನ ಆಸೆಯನ್ನೇ ಬಿಟ್ಟು ಬಿಡುತ್ತಿದ್ದೆವು.ಆದರೆ ಈಗ ಅದೊಂದು ಸಮಸ್ಯೆಯೇ ಅಲ್ಲ, ಗ್ರೌಂಡ್ ಮಧ್ಯೆ ವಿರಾಟ್ ನಂತಹ ನಾಯಕ ಒಬ್ಬ ಇದ್ದರೂ ಸಾಕು ನಮ್ಮ ಬೌಲರ್ ಗಳಿಗೆ ಅದೇ ಆನೆಬಲ.ಯಾವ ಬೌಲರ್ ಇದ್ದರೂ,ಇಲ್ಲದೇ ಇದ್ದರೂ ನಾವು ನಮ್ಮಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪಂದ್ಯ ಗೆಲ್ಲಬಲ್ಲೆವು ಎಂಬಷ್ಟು ಆತ್ಮವಿಶ್ವಾಸ ಗಳಿಸಿಕೊಂಡು ಬಿಟ್ಟಿದ್ದೆವೆ.


ಪಂದ್ಯ ಗೆಲ್ಲುವುದಕ್ಕೆ ಅದರಲ್ಲೂ ಟೆಸ್ಟ್ ಪಂದ್ಯ ಗೆಲ್ಲುವುದಕ್ಕೆ ತಂಡವೊಂದರ ಹತ್ತು ವಿಕೆಟ್ ಉರುಳಿಸುವ ಬೌಲರ್ ಗಳು ಪ್ರತೀ ತಂಡಕ್ಕೂ ಯಾವತ್ತಿಗೂ ಅತ್ಯಗತ್ಯ. ಹಾಗಾದರೆ ಮಾತ್ರ ಟೆಸ್ಟ್ ನಲ್ಲಿ ಗೆಲುವು ಸಾಧ್ಯ. ಅದಕ್ಕಾಗಿಯೇ ಸ್ವತಃ ಬೌಲರ್ ಆಗಿರುವ ಡೇಲ್ ಸ್ಟೈನ್ ಈ ರೀತಿ ಹೇಳಿದ್ದು.. ಬ್ಯಾಟ್ಸ್‌ಮನ್ ಒಬ್ಬ ಪ್ರೇಕ್ಷಕರ ಹೃದಯ ಗೆಲ್ಲುತ್ತಾನೆ, ಆದರೆ ಬೌಲರ್ ಪಂದ್ಯವನ್ನೇ ಗೆಲ್ಲಿಸುತ್ತಾನೆ. ನಿಜಕ್ಕೂ ಬಹಳಷ್ಟು ಸರಿಯಾದ ಮಾತು. ಅಂದ ಹಾಗೆ ಈ ಮಾತು ಡೇಲ್ ಸ್ಟೈನ್ ನಮ್ಮ ಬೂಮ್ರನನ್ನು ಪ್ರಶಂಸೆ ಮಾಡುವುದಕ್ಕಾಗಿ ಹೇಳಿದ್ದು. 



ಹೌದು ನಮ್ಮ ಜಸ್ಪ್ರೀತ್ ಬೂಮ್ರ ನನ್ನು ಈ ಸೌತ್ ಆಫ್ರಿಕಾದ ಡೇಲ್ ಸ್ಟೈನ್ ಹಾಗೂ ಶೇನ್ ವಾರ್ನ್ ಅದಾಗಲೇ ಬಹಳಷ್ಟು ಹಾಡಿ ಹೊಗಳಿದ್ದಾರೆ. ಅವನದ್ದೊಂದು ಯಾರ್ಕರ್ ಗೆ ಹೆಚ್ಚಿನ ಹಿರಿಯ ಆಟಗಾರರು ಸಹ ಕ್ಲೀನ್ ಬೌಲ್ಡ್ ಆಗಿದ್ದಾರೆ. ಆದರೆ ಆತ ಈ ಬಾರಿ ಅತೀ ಹೆಚ್ಚು ಇಷ್ಟ ಆಗಿದ್ದು ಪಟ್ಟು ಬಿಡದೇ ಬ್ಯಾಟಿಂಗ್ ನಲ್ಲಿಯೂ ಮಿಂಚಿದ್ದಕ್ಕಾಗಿ,ಅದೂ ಕೂಡ ಆಂಡರ್ಸನ್, ವುಡ್, ವೋಕ್ಸ್ ನಂತಹ ವಿಶ್ವ ಶ್ರೇಷ್ಠ ವೇಗದ ಬೌಲರ್ ಗಳನ್ನು ಎದುರಿಸಿ ಆತ ತಂಡಕ್ಕೆ ಮಚ್ ನೀಡೆಡ್ ರನ್ ಗಳಿಸಿದ್ದಕಾಗಿ. 


ಶಾರ್ದೂಲ್ ಬಗ್ಗೆ ಏನು ಹೇಳುವುದು. ಜಗತ್ತೇ ಅವನ ಬಗ್ಗೆ ಬಹಳಷ್ಟು ಸೊಗಸಾಗಿ ರಸವತ್ತಾಗಿ ಹೇಳುತ್ತದೆ. ಫೇಸ್ಬುಕ್ ನಲ್ಲಿ ಅಂತು ಒಂದು ಪೇಜ್ ಈ ರೀತಿ ಬರೆದುಕೊಂಡಿತ್ತು... 


" ಜಗತ್ತಿನ ಕ್ರಿಕೆಟ್ ಗೆ ಹೇಗೆ ಒಬ್ಬನೇ ಒಬ್ಬ ಡಾನ್ ಇರುವನೋ,

  ಒಬ್ಬನೇ ಒಬ್ಬ ಕಿಂಗ್ ಇರುವನೋ,

  ಒಬ್ಬನೇ ಒಬ್ಬ ಗಾಡ್ ಇರುವನೋ, 

  ಅದೇ ರೀತಿ ಕ್ರಿಕೆಟ್ ಗೆ ಒಬ್ಬನೇ ಒಬ್ಬ ಲಾರ್ಡ್ ಇರುವನು..ಅವನು ಠಾಕೂರ್ ಆಗಿರುವನು.. " ಎಂದು ಶಾರ್ದೂಲ್ ನನ್ನು ಹೊಗಳಿ ಅಟ್ಟಕೇರಿಸಿದ್ದಾರೆ.


ಖಂಡಿತವಾಗಿಯೂ ಡಾನ್ ಬ್ರಾಡ್ಮನ್ ನಂತೆ,ಕಿಂಗ್ ಕೊಹ್ಲಿಯಂತೆ, ಕ್ರಿಕೆಟ್ ಗಾಡ್ ಸಚಿನ್ ನಂತಹ ತುಂಬಾ ದೊಡ್ಡ ಸಾಧನೆ ಆತ ಮಾಡದೇ ಇರಬಹುದು,ಆದರೆ ಸದ್ಯಕ್ಕೆ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ತಂಡಕ್ಕೆ ಆಪತ್ಭಾಂಧವ ಆಗಿರುವ ಆತ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನೆಚ್ಚಿನ ಮೆಚ್ಚಿನ ಲಾರ್ಡ್ ಆಗಿದ್ದಾನೆ. 


ಇನ್ನು ಹಿಟ್ ಮ್ಯಾನ್. ಅವನಿಗೊಂದು ಮೆಚ್ಚುಗೆ ಸೂಚಿಸದೇ ಇದ್ದರೆ ನನ್ನ ಮನಸ್ಸಿಗೆ ಎಂದಿಗೂ ಸಮಾಧಾನವಾಗದು. ಏಕೆಂದರೆ ನಾನು ವೈಯಕ್ತಿಕವಾಗಿ ಅವನ ಸಿಕ್ಕಾಪಟ್ಟೆ ಅಭಿಮಾನಿ.ಅವನು ಕೆಟ್ಟದಾಗಿ ಆಡಿದಾಗ ನಿಜಕ್ಕೂ ಕೋಪ ಬರುತ್ತದೆ,ಆದರೆ ಈ ರೀತಿ ಹೃದಯ ಗೆಲ್ಲುವಂತೆ ಆಡಿದರೆ ಅವನನ್ನು ಕೊಂಡಾಡುವ ಎಂದೆನಿಸುತ್ತದೆ. 


ರೋಹಿತ್ ಬಗ್ಗೆ ಸದ್ಯಕ್ಕೆ ಏನು ಹೇಳಿದರೂ ಕಡಿಮೆಯೇ.ಈ ತಂಡದ ಬ್ಯಾಟಿಂಗ್ ನ ಪ್ರಮುಖ ಆಧಾರ ಸ್ತಂಭ ಸ್ವತಃ ಅವನೇ ಆಗಿ ಬಿಟ್ಟಿದ್ದಾನೆ.ವಿದೇಶಿ ನೆಲದಲ್ಲಿ ಚೊಚ್ಚಲ ಶತಕ ಅವನಿಗೊಂದಿಷ್ಟು ನೆಮ್ಮದಿ ದೊರಕಿಸಿದೆ.ಮೊದಲ ಬಾರಿಗೆ 800 ಪಾಯಿಂಟ್ ಗಳನ್ನು ದಾಟಿ 813 ಪಾಯಿಂಟ್ ಗಳೊಂದಿಗೆ ರೋಹಿತ್ ಸದ್ಯಕ್ಕೆ ಬ್ಯಾಟ್ಸ್‌ಮನ್ ರ‍್ಯಾಂಕಿಂಗ್‌ ನಲ್ಲಿ 5 ನೇ ಸ್ಥಾನದಲ್ಲಿ ಇದ್ದಾನೆ. 


ಇಂಗ್ಲೆಂಡ್ ನ ಮಾರ್ಕ್ ವುಡ್ ವಿಶೇಷವಾಗಿ ರೋಹಿತ್ ನನ್ನು ಹೊಗಳಿದ್ದು.. ಯಾವುದೇ ಕಂಡಿಷನ್ ನಲ್ಲಿ ರೋಹಿತ್ ಗೆ ಬೌಲಿಂಗ್ ಮಾಡುವುದು ಬಹಳ ಕಠಿಣ ..ಎಂದೇ ಹೇಳಿದ್ದಾನೆ. 


ಭಾರತೀಯ ಎಲ್ಲಾ ಹಿರಿಯ ಆಟಗಾರರಿಂದ ಹಿಡಿದು ವಿಶ್ವದ ಸೀನಿಯರ್ ಕ್ರಿಕೆಟಿಗರು ಕೂಡ ಎಂದಿನಂತೆ ಅವನದ್ದೊಂದು ಗುಣಗಾನಕ್ಕೆ ನಿಂತಿದ್ದಾರೆ.ರೋಹಿತ್ ಬ್ಯಾಟ್ ಹಿಡಿದಾಗ ಅವನಿಗೆ ಎಲ್ಲರಿಗಿಂತಲೂ ಹೆಚ್ಚಿನ ಟೈಮ್ ದೊರೆಯುತ್ತದೆ, ಹಾಗಾಗಿ ಅವನಿಗೆ ಬ್ಯಾಟಿಂಗ್ ಸುಲಭ,ನ್ಯಾಚುರಲಿ ಗಿಫ್ಟೆಡ್ ಪ್ಲೇಯರ್ ಆತ, ಬಲು ಸುಂದರ ಹೊಡೆತಗಳ ಆಟಗಾರ ಈ ಹಿಟ್ ಮ್ಯಾನ್.. ಎಂದೆಲ್ಲ ಪ್ರಶಂಸೆಗಳ ಸುರಿ ಮಳೆಯನ್ನೇ ಆತನ ಮೇಲೆ ಗೈದಿದ್ದಾರೆ.ನಿಜಕ್ಕೂ ಆತ ಇಷ್ಟೊಂದು ಹೊಗಳಿಕಗೆ ಅರ್ಹನೇ ಆಗಿದ್ದಾನೆ ಮಾತ್ರವಲ್ಲ ಆತ ಅವನದ್ದೊಂದು ಲಹರಿಯಲ್ಲಿ ಇದ್ದರೆ ಅದೇ ರೀತಿ ಆಡುತ್ತಾನೆ ಕೂಡ. 


ಇದಕ್ಕೂ ಮೊದಲು ಸದ್ಯಕ್ಕೆ ಇಂಗ್ಲೆಂಡ್ ನಲ್ಲಿ ವೀಕ್ಷಕ ವಿವರಣೆ ಮಾಡುತ್ತಿರುವ ದಿನೇಶ್ ಕಾರ್ತಿಕ್ ಮಾಡಿದ ರೋಹಿತ್ ಸಂದರ್ಶನ ಬಹಳಷ್ಟು ವಿಶೇಷವಾಗಿತ್ತು.ಅದರಲ್ಲಿ ರೋಹಿತ್ ತನ್ನ ಮೇಲಿನ ಹೊಗಳಿಕೆಗೆ ಬಲು ಸುಂದರವಾಗಿಯೇ ಉತ್ತರಿಸಿದ್ದ. ರೋಹಿತ್ ಹೇಳುತ್ತಾನೆ... ಖಂಡಿತವಾಗಿಯೂ ನನಗೆ ಬೇರೆ ಆಟಗಾರರಿಗಿಂತ ಅತೀ ಹೆಚ್ಚಿನ ಯಾವುದೇ ವಿಶೇಷ ಟೈಮ್ ಇರುವುದಿಲ್ಲ,ಜಗತ್ತಿನಲ್ಲಿ ಎಲ್ಲರಿಗೂ ಎಷ್ಟು ಟೈಮ್ ಇರುತ್ತದೋ ಅಷ್ಟೇ ಟೈಮ್ ನನಗೂ ಇದೆ ಎಂದು ನಗುತ್ತಾ ಉತ್ತರಿಸಿದ್ದ ರೋಹಿತ್.


ಅದೇ ರೀತಿ ಸುಂದರವಾಗಿ ಆಟವಾಡುವುದರ ಕುರಿತು ಕೂಡ ರೋಹಿತ್ ಅಷ್ಟೇ ಸುಂದರವಾಗಿಯೇ ಹೇಳಿದ್ದ..,ನೀವು ಸುಂದರವಾಗಿ ಆಡುತ್ತಿದ್ದರೋ ಅಥವಾ ವಿಲಕ್ಷಣವಾಗಿ ಆಡುತ್ತಿರೋ ಅದು ಮುಖ್ಯವಲ್ಲ,ಕೊನೆಯಲ್ಲಿ ತಂಡಕ್ಕೆ ನೀವು  ಕೊಡುಗೆ ಹಾಗೂ ಎಂಡ್ ರಿಸಲ್ಟ್ ಅಷ್ಟೇ ಅತೀ ಮುಖ್ಯ ಎಂದು ಹೇಳಿದ್ದಾನೆ ರೋಹಿತ್.ನನಗೆ ಒಮ್ಮೆ ಶಿವ ನಾರಾಯಣ ಚಂದರ್ ಪಾಲ್ ಅತಿಯಾಗಿ ನೆನಪಾಗಿ ಬಿಟ್ಟ. 



ರೋಹಿತ್ ಒಬ್ಬ ಲೇಝಿ ಆಲಿಗೇನ್ಸ್ ಇರುವ ಆಟಗಾರ ಎಂಬ ಮಾತಿಗೂ ಕೂಡ ರೋಹಿತ್ ನಗು ನಗುತ್ತಲೇ ಈ ರೀತಿ ಉತ್ತರಿಸಿದ್ದ. ನೋಡಿ ಜಗತ್ತು ನನ್ನದೊಂದು ಆಟಕ್ಕೆ ಲೇಝಿ ಆಲಿಗೇನ್ಸ್ ಎಂದು ಹೇಳುತ್ತದೆ,ಆದರೆ ನೀವೇ ಹೇಳಿ 140 km/h ಕ್ಕೂ ಅಧಿಕ ವೇಗದಲ್ಲಿ ಬರುವ ವೇಗದ ಬಾಲ್ ಗಳಿಗೆ ಲೇಝಿ ಆಗಿದ್ದರೆ ರಪ್ಪನೇ ಫುಲ್ ಮಾಡುವುದು ಅಷ್ಟೊಂದು ಸುಲಭವೇ.. ಖಂಡಿತವಾಗಿಯೂ ಸಾಕಷ್ಟು ಚುರುಕು ಇರಲೇಬೇಕು ಎಂದು ಹೇಳುತ್ತಾನೆ ರೋಹಿತ್.ಅದಕ್ಕೆ ದಿನೇಶ್ ಕಾರ್ತಿಕ್ ಮತ್ತೆ ..ಜಗತ್ತು ನಿಮ್ಮ ಬಳಿ ಸಾಕಷ್ಟು ಟೈಮ್ ಇದೆ,ಅಧಿಕ ಟೈಮ್ ಆದೆ ಎಂದು ಹೇಳುತ್ತದೆ.. ಎಂದು ಹೇಳಿ ರೋಹಿತ್ ನನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ್ದ.ರೋಹಿತ್ ಎಂದಿನಂತೆ ನಕ್ಕು ಮತ್ತೆ ಸುಮ್ಮನಾಗಿ ಬಿಟ್ಟ. 


ಈಗ ನಾವು ಇನ್ನೂ ಕೆಲವೊಂದಿಷ್ಟು ಆಸಕ್ತಿಕರ ಕ್ರಿಕೆಟ್ ವಿಷಯಗಳ ಬಗ್ಗೆಯೂ ನಾವು ಗಮನ ಹರಿಸೋಣ.


ಓವಲ್ ಟೆಸ್ಟ್ ಪಂದ್ಯದ ಆರಂಭಕ್ಕೂ ಮೊದಲು "ಸಮಬಲದ ನಂತರ.. " ಎಂಬ ಬರಹದಲ್ಲಿ ಶ್ರೀಲಂಕಾದ ಚಾಮಿಂಡ ವಾಸ್ ಅವರ ಬಗ್ಗೆ ಮಾತಾಡುವಾಗ "Warnakulasuriya Patabendige Ushantha Joseph ChamindaVaas" ಎಂದು  ಸಂಪೂರ್ಣವಾಗಿಯೇ ಅವರ ಹೆಸರನ್ನು ನಾನು ಹೇಳಿದ್ದೆ.ಸರಿಯಾಗಿ ಲೆಕ್ಕ ಮಾಡಿದರೆ ಚಾಮಿಂಡ ವಾಸ್ ಅವರ ಹೆಸರಲ್ಲಿ ಒಟ್ಟು 5 ಇನಿಷಿಯಲ್ಸ್ ಗಳಿದ್ದವು. 


ಆ ಬರಹ ಪೋಸ್ಟ್ ಮಾಡಿದ ನಂತರ ಒಂದು ಕುತೂಹಲದ ಪ್ರಶ್ನೆ ಹಾಗೇ ಹುಟ್ಟಿಕೊಂಡು ಬಿಟ್ಟಿತು.ಹಾಗಾದರೆ ವಿಶ್ವ ಕ್ರಿಕೆಟ್ ನಲ್ಲಿ ನಿಜವಾಗಿಯೂ ಅತೀ ಉದ್ದದ ಹೆಸರನ್ನು ಹೊಂದಿರುವ ಆಟಗಾರ ಯಾರು? ಎಂದು.


ಕೆದಕುತ್ತಾ ಹೋದಾಗ ಈ ಕೆಳಗಿನ 5 ಇಂಟ್ರೆಸ್ಟಿಂಗ್ ಹೆಸರುಗಳು ಕಣ್ಣಿಗೆ ಬಿದ್ದವು.ಇದರಲ್ಲಿ ಕೆಲವೊಬ್ಬರು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೆ ಇನ್ನು ಕೆಲವರು ಕೇವಲ ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದಾರೆ.ಆದರೆ ಅವರುಗಳೆಲ್ಲರೂ ಕನಿಷ್ಠ ಪಕ್ಷ ಫಸ್ಟ್ ಕ್ಲಾಸ್ ಕ್ರಿಕೆಟರ್ ಗಳು ಆಗಿದ್ದರು ಎಂಬ ಕಾರಣಕ್ಕಾಗಿ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡದೇ ಇದ್ದರು ಈ ಪಟ್ಟಿಯಲ್ಲೊಂದು ಸ್ಥಾನ ಸಂಪಾದಿಸಿಕೊಂಡಿದ್ದಾರೆ. 


ಬನ್ನಿ ನೋಡುವ ಯಾರದು ಉದ್ದುದ್ದ ಹೆಸರಿನವರು ಎಂದು. 

ಮೊದಲಿಗೆ ಈ ಪಟ್ಟಿಯಲ್ಲಿ ಕೆಳಗಿನಿಂದ ಮೇಲಕ್ಕೆ ಹೋಗುವ. 


5 ನೇ ಸ್ಥಾನದಲ್ಲಿರುವುದು ಅಂದರೆ ಅತೀ ಉದ್ದದ ಹೆಸರು ಉಳ್ಳವರಲ್ಲಿ ಐದನೇ ಸ್ಥಾನದಲ್ಲಿರುವುದು IL Bula ಅಂತ ಫಿಜಿ ದೇಶದ ಒಬ್ಬ ಆಟಗಾರ. ಇವನ ಸಂಪೂರ್ಣ ಹೆಸರು" Ilikena Lasarusa Talebulamaineiilikenamainavaleniveivakabulaimainakulalakebalau" ಎಂದು.ಇವನ ಹೆಸರಿನಲ್ಲಿ ಹೆಚ್ಚಿನ ಇನಿಷಿಯಲ್ಸ್ ಗಳಿಲಿಲ್ಲ. ಆದರೆ ಆತನ ಈ ಸರ್ ನೇಮ್ " Talebulamaineiilikenamainavaleniveivakabulaimainakulalakebalau" ಒಂದೇ ಬಹಳಷ್ಟು ಉದ್ದವಿದೆ ಎಂಬ ಕಾರಣಕ್ಕಾಗಿ ಇವನಿಗೊಂದು ಈ ಪಟ್ಟಿಯಲ್ಲಿ ಸ್ಥಾನವಿದೆ.ಇಲ್ಲದಿದ್ದರೆ ಈತ ಯಾರೆಂದೇ ವಿಶ್ವ ಕ್ರಿಕೆಟ್ ಗೆ ಗೊತ್ತಿಲ್ಲ ಬಿಡಿ.ಈತ ಕೇವಲ ಫಸ್ಟ್ ಕ್ಲಾಸ್ ಕ್ರಿಕೆಟ್ ಮಾತ್ರ ಆಟವಾಡಿದ್ದು, ಅದು ಕೂಡ ನ್ಯೂಜಿಲೆಂಡ್ ವಿರುದ್ಧ 1947 ರ ದಶಕದಲ್ಲಿ.ಹೆಸರಿನಲ್ಲಿ ಅತೀ ಉದ್ದದ "ಸರ್ ನೇಮ್" ಹೊಂದಿರುವ ಪಟ್ಟಿಯಲ್ಲಿ ಇವನಿಗೆ ಮೊದಲನೆಯ ಸ್ಥಾನ.ನನಗೆ ಅವನ ಈ ಸರ್ ನೇಮ್ ಉಚ್ಛರಿಸಲು ಕೂಡ ಬಹಳಷ್ಟು ಕಷ್ಟವಾಯಿತು.ನೀವು ಖಂಡಿತವಾಗಿಯೂ ಒಮ್ಮೆ ಪ್ರಯತ್ನ ಪಡಬಹುದು.


4 ನೇ ಸ್ಥಾನದಲ್ಲಿರುವುದು ಶ್ರೀಲಂಕಾದ UWMBCA Welegedara.ಈ ಹೆಸರು ಹೆಚ್ಚಾಗಿ ಕೇಳಿರುತ್ತೀರಿ.ಇದರಲ್ಲಿ 6 ಇನಿಷಿಯಲ್ಸ್ ಗಳಿವೆ. ಸಂಪೂರ್ಣ ಹೆಸರು " Uda Walawwe Mahim Bandaralage Chanaka Asanka Welegedara" ಎಂದು.ಶ್ರೀಲಂಕಾ ಈ ಆಟಗಾರ 2010 ನಂತರ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿದ್ದರು. 


3 ನೇ ಸ್ಥಾನದಲ್ಲಿರುವುದು JEBBPQC Dwyer. ಇದರಲ್ಲಿ 7 ಇನಿಷಿಯಲ್ಸ್ ಗಳಿವೆ. ಪೂರ್ಣ ಹೆಸರು " John Elicius Benedict Bernard Placid Quirk Carrington Dwyer " ಎಂದು.ಇಂಗ್ಲೀಷ್ ಫಸ್ಟ್ ಕ್ಲಾಸ್ ಕ್ರಿಕೆಟ್ ಆಟಗಾರ ಆಗಿದ್ದ ಇವನನ್ನು J.B Dwyer ಅಂತ ಶಾರ್ಟ್ ಆಗಿ ಕರೆಯುತ್ತಿದ್ದರು. ಈತ 1900 ದಶಕದಲ್ಲಿ ಆಟವಾಡಿದ್ದ. 


2 ನೇ ಸ್ಥಾನದಲ್ಲಿರುವುದು ಶ್ರೀಲಂಕಾದ MMBRSTC Wanigaratne. ಇತನಿಗೂ ಕೂಡ 7 ಇನಿಷಿಯಲ್ಸ್ ಇದೆ.ಇವನ ಪೂರ್ಣ ಹೆಸರು " Manampeli Mahapata Bandhi Ralalage Supun Tharanga Coory Wanigaratne" ಎಂದು.ಶಾರ್ಟ್ ಆಗಿ Supan Tharanga ಎಂದೇ ಕರೆಯುತ್ತಿದ್ದರು.ಇವನು 2006-07 ರಲ್ಲಿ ಶ್ರೀಲಂಕಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದ.ಆದರೆ ನಂತರ ಇಟಲಿಗೆ ಹೋಗಿ ಅಲ್ಲಿಯ ರಾಷ್ಟ್ರೀಯ ಕ್ರಿಕೆಟ್ ತಂಡದೊಂದಿಗೆ ಗುರುತಿಸಿಕೊಂಡಿದ್ದ.


1 ನೇ ಸ್ಥಾನದಲ್ಲಿರುವುದು, ಅಂದರೆ ಈ ಪಟ್ಟಿಯಲ್ಲಿ ಅತೀ ಹೆಚ್ಚಿನ ಇನಿಷಿಯಲ್ಸ್ ಮೂಲಕ ಅತೀ ಉದ್ದದ ಹೆಸರು ಹೊಂದಿರುವುದು ಅದು ಶ್ರೀಲಂಕಾದ " ARRAPWRRKB Amunugama". ನೋಡಿ ಇದರಲ್ಲಿ ಒಟ್ಟು 11 ಇನಿಷಿಯಲ್ಸ್ ಇದೆ.ಈತ ಕೂಡ ಪ್ರಥಮ ದರ್ಜೆಯ ಕ್ರಿಕೆಟ್ ಆಟಗಾರ.ಇವನ ಪೂರ್ಣ ಹೆಸರು " Amunugama Rajapakse Rajakaruna Abeykoon Panditha Wasalamudiyanse Ralahamilage Rajith Krishantha Bandara Amunugama" ಎಂದು.ಶಾರ್ಟ್ ಆಗಿ Rajith Amunugama ಎಂದು ಕರೆಯುತ್ತಾರೆ.ಇವನು ಕೂಡ 1900 ದಶಕದಲ್ಲಿ ಆಟವಾಡಿದ್ದ.ಪ್ರಥಮ ದರ್ಜೆ ಪಂದ್ಯವೊಂದರಲ್ಲಿ 63 ರನ್ನುಗಳಿಗೆ 8 ವಿಕೆಟ್ ಉದುರಿಸಿದ್ದಕ್ಕಾಗಿ  2004 ರ "ವಿಸ್ಡನ್ ಕ್ರಿಕೆಟರ್ "ಬರಹದಲ್ಲಿ ಇವನು ಕಾಣಿಸಿಕೊಂಡರೂ,ಇವನು ಸುದ್ದಿಯಾಗಿದ್ದು ಕಿತ್ತ ವಿಕೆಟ್ ಗಿಂತಲೂ ಅಧಿಕವಾಗಿ ಅವನ ಹೆಸರಿನಲ್ಲಿರುವ ಅಷ್ಟೊಂದು ಇನಿಷಿಯಲ್ಸ್ ಗಳಿಗಾಗಿಯೇ. 


ಶ್ರೀಲಂಕಾದ ಹೆಚ್ಚಿನ ಆಟಗಾರರಿಗೆ ಸಮಾನ್ಯವಾಗಿ 3 ಕ್ಕಿಂತ ಹೆಚ್ಚು ಇನಿಷಿಯಲ್ಸ್ ಇದ್ದೇ ಇರುತ್ತದೆ. 5 ಇನಿಷಿಯಲ್ಸ್ ಆರುವ ಆಟಗಾರರು ಬೇಕಾದಷ್ಟು ಇದ್ದಾರೆ.ಜಸ್ಟ್ ಒಮ್ಮೆ ಹೀಗೆ ತಮಾಷೆಯಾಗಿ ಯೋಚಿಸಿ ಅಂತೆ ಯಾವುದಾದರೂ ಫಾರ್ಮ್ ತುಂಬ ಬೇಕಾದರೆ ಈ ಆಟಗಾರರ ಹೆಸರಿನ ಮುಂದೆ ಎಷ್ಟು ಜಾಗ ಇಲ್ಲವೇ ಎಷ್ಟು ಬಾಕ್ಸ್ ಗಳು ಬೇಕಾಗಬಹುದು ಎಂದು!

ಅದೇನೇ ಇರಲಿ ಶ್ರೀಲಂಕಾದ ಆಟಗಾರರ ಹೆಸರು ಮಾತ್ರ ಚಂದ ಆಯಿತು.ಅದರಲ್ಲಿ ನಮ್ಮ ಇಂದ್ರ ಸೂರ್ಯರು ಸಹ  ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. 


ಅಂದ ಹಾಗೆ ಭಾರತದಲ್ಲಿ ಅತೀ ಉದ್ದದ ಹೆಸರುಳ್ಳ ಆಟಗಾರರು  ಯಾರು? ಇದರ ಬಗ್ಗೆಯೂ ಸ್ವಲ್ಪ ನೋಡೋಣ. 


ಖಂಡಿತವಾಗಿಯೂ ಹೆಚ್ಚಿನವರಿಗೆ ನಮ್ಮ VVS Laxman ಬಗ್ಗೆ ಒಂದಷ್ಟು ಗೊತ್ತು.ನಮ್ಮ ಈ ಸ್ಟೈಲಿಶ್ ಟೆಸ್ಟ್ ಆಟಗಾರ,ಎಲ್ಲರಿಗಿಂತಲೂ ಬಹಳ ಸುಂದರವಾಗಿ ಮಣಿಕಟ್ಟಿನ ಸಹಾಯದಿಂದ ಆನ್ ಡ್ರೈವ್ ಬಾರಿಸಬಲ್ಲ ಲಕ್ಷ್ಮಣ್ ನ ಸಂಪೂರ್ಣ ಹೆಸರು Vangipurappu Venkata Sai Laxman ಅಂತ. 


ಇನ್ನೂ ಕೆಲವೊಂದಷ್ಟು ಭಾರತೀಯ ಆಟಗಾರರ ಹೆಸರು ಉದ್ದವಾಗಿಯೇ ಇದೇ.ಬನ್ನಿ ಅದನ್ನು ಕೂಡ ನೋಡೋಣ.ಆ ಹೆಸರುಗಳು ಈ ರೀತಿ ಇದೆ. ಇತ್ತೀಚೆಗೆ ಅಷ್ಟೇ ನಿವೃತ್ತನಾದ ಸ್ಟುವರ್ಟ್ ಬಿನ್ನಿ(Stuart Terence Roger Binny),ಚೇತೆಂದ್ರ ಚೌಹಾಣ್(Chetandra Pratap Singh Chauhan),ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ(Syed Mujtaba Hussein Kirmani),ಸ್ಟುವರ್ಟ್ ಬಿನ್ನಿಯವರ ತಂದೆ ರೋಜರ್ ಬಿನ್ನಿ(Roger Michael Humphrey Binny),ನಮ್ಮ ಕರ್ನಾಟಕದವರೇ ಆದ ವೇಗದ ಬೌಲರ್ ವೆಂಕಟೇಶ್ ಪ್ರಸಾದ್(Bapu Krishnarao Venkatesh Prasad),ಖ್ಯಾತ ಆಫ್ ಸ್ಪಿನ್ನರ್ ಎರಪಳ್ಳಿ ಪ್ರಸನ್ನ(Erapalli Anantharao Srinivas Prasanna),ಗುಲಾಮ್ ಅಹ್ಮದ್(Ghulam Ahmed Hasan Mohammed Parkar) ಇವಿಷ್ಟು ನಮ್ಮ ಭಾರತೀಯ ಉದ್ದದ ಹೆಸರುಗಳು.


Mr. 360 ಎಂದೇ ಖ್ಯಾತನಾಮರಾಗಿರುವ ಸೌತ್ ಆಫ್ರಿಕಾದ ಎಬಿ ಡಿವಿಲಿಯರ್ಸ್ ನ ಪೂರ್ಣ ಹೆಸರು ಹೆಚ್ಚಿನ ಜನರಿಗೆ ಗೊತ್ತಿರುವಂತೆ ಅದು "Abraham Benjamin de Villiers"


ಅದೇ ರೀತಿ ನ್ಯೂಜಿಲೆಂಡ್ ನ ರೋಸ್ ಟೈಲರ್ ನ ಪೂರ್ಣ ಹೆಸರು ಕೂಡ ಕೂಡ ಬಹಳಷ್ಟು ಡಿಫರೆಂಟ್ ಆಗಿದೆ. Luteru Ross Poutoa Lote Taylor ಎನ್ನುವುದು ಈ ಕಿವಿ ಆಟಗಾರನ ನಿಜ ಹೆಸರು. 


ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ ಇನ್ನೂ ಇಬ್ಬರು ಆಟಗಾರರ ಹೆಸರು ಇಲ್ಲಿ ಹೇಳಲೇಬೇಕು.ಅದು Gihan Rupasinghe ಮತ್ತು Akila Dhananjaya. ಇವರ ಹೆಸರುಗಳ ವಿಶೇಷತೆ ಏನು ಗೊತ್ತೇ.6 ಇನಿಷಿಯಲ್ಸ್ ಇವರು ಹೆಸರಿನಲ್ಲಿ ಇದ್ದು ಒಟ್ಟು 59 ಇಂಗ್ಲಿಷ್ ಕ್ಯಾರೆಕ್ಟರ್ ಗಳು ಆ ಹೆಸರಿನಲ್ಲಿವೆ!


Rupasinghe ಯ ಸಂಪೂರ್ಣ ಹೆಸರು "Rupasinghe Jayawardene Mudiyanselage Gihan Madushanka Rupasinghe" ಮತ್ತು Akila Dhananjaya ನ ಸಂಪೂರ್ಣ ಹೆಸರು " Mahamarakkala Kurukulasooriya Patabendige Akila Dananjaya Perera". ಒಂದು ವೇಳೆ ಸ್ಕೋರ್ ಬೋರ್ಡ್ ನಲ್ಲಿ ಇವರಿಬ್ಬರ ಹೆಸರು ಪೂರ್ತಿ ಬರೆಯಬೇಕಾದರೆ ಬೇಕಾಗುವ ಜಾಗದ ಬಗ್ಗೆ ಒಮ್ಮೆ ಊಹಿಸಿಕೊಳ್ಳಿ. 


ಅಂದ ಹಾಗೆ ಇನ್ನೂ ಒಂದು ಗಮ್ಮತಿನ ವಿಷಯ ಉಂಟು.ಈ ಮೊದಲೇ ಹೇಳಿದ ಶ್ರೀಲಂಕಾದ ಪ್ರಥಮ ದರ್ಜೆ ಆಟಗಾರ "Amunugama Rajapakse Rajakaruna Abeykoon Panditha Wasalamudiyanse Ralahamilage Rajith Krishantha Bandara Amunugama " ಎಂಬ ಜಗತ್ತಿನ ಅತೀ ಉದ್ದದ ಹೆಸರುಳ್ಳ ಆಟಗಾರ ಇದ್ದಾನೆ ಅಲ್ವಾ,ಹೀಗೆ ಸುಮ್ಮನೆ  ಕುಳಿತುಕೊಂಡು ಕುತೂಹಲಕ್ಕೆ ಅವನ ಹೆಸರನ್ನೂ ಸಹ  ಕೂಡ ಬಿಡಿಸುತ್ತಾ ಹೋದರೆ ಅದರಲ್ಲಿ ಒಟ್ಟು102 ಇಂಗ್ಲಿಷ್ ಕ್ಯಾರೆಕ್ಟರ್ ಗಳಿವೆ !



ಈ ಆಟಗಾರನ ಕುರಿತಾಗಿಯೇ ಒಂದು ತಮಾಷೆಯ ಮಾತು ಕೂಡ ಉಂಟು,ಇಷ್ಟು ಉದ್ದದ ಹೆಸರು ಹೊಂದಿದ್ದಕ್ಕಾಗಿಯೇ ಈ ಆಟಗಾರನಿಗೆ ಅಂತರರಾಷ್ಟ್ರೀಯ ಪಂದ್ಯ ಆಡಲು ICC ಒಪ್ಪಿಗೆ ನೀಡಿಲ್ಲ ಎಂದು.ಅದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ.ಆದರೆ ಅವನದ್ದೊಂದು ಹೆಸರು ಮಾತ್ರ ಎಂದಿಗೂ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿಯೇ ಇರುತ್ತದೆ.ಬಹುಶಃ ಹೆಸರಿನ ಮೂಲಕವೇ ಗುರುತಿಸಿಕೊಳ್ಳುವುದು ಅಂದರೆ ಒಂದು ರೀತಿಯಲ್ಲಿ ಇದೇ ಇರಬೇಕು ಅಲ್ವಾ.. 


ಅಂದ ಹಾಗೆ ಕ್ರಿಕೆಟ್ ಬಿಟ್ಟು ಜಗತ್ತಿನಲ್ಲಿಯೇ ಅತೀ ಉದ್ದದ ಹೆಸರು ಉಳ್ಳವರು ಯಾರು ಎಂಬ ಪ್ರಶ್ನೆಗೆ  Hubert Blaine ಎಂಬ ಜರ್ಮನ್ ಪ್ರಜೆ ಉತ್ತರವಾಗುತ್ತಾನೆ.ಒಂದು ಪ್ರಬಂಧಂತೆ ಇರುವ ಇವರ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸಹ  ಸೇರಿಕೊಂಡಿದೆ.ಅಂದ ಹಾಗೆ ಈ ಜನದ್ದು ಪೂರ್ಣ ಹೆಸರಿನಲ್ಲಿ ಒಟ್ಟು 747 ಕ್ಯಾರೆಕ್ಟರ್ ಗಳು ಇವೆ ಅಂತೆ! ಹಾಗಾಗಿ ಇಲ್ಲಿ ಅದರ ಬಗ್ಗೆ ಮಾತಾಡಲು ಜಾಗದ ಕೊರತೆ ಎದ್ದು ಕಾಣುತ್ತಿದೆ.ಹಾಗಾಗಿ ಅಲ್ ರೈಟ್.. ನಾವು ಮುಂದಕ್ಕೆ ಹೋಗೋಣ..


ಮತ್ತೆ ಸದ್ಯದ ಕ್ರಿಕೆಟ್ ಗೆ ಬರುವ.ಅಂದ ಹಾಗೆ ಟೀಮ್ ಇಂಡಿಯಾ ತನ್ನ ಟಿ-ಟ್ವೆಂಟಿ ವಿಶ್ವಕಪ್ ಆಡುವ ಬಳಗವನ್ನು ಘೋಷಿಸಿಕೊಂಡಿದ್ದು, ತಂಡದಲ್ಲಿ ಮೆಂಟರ್ ಆಗಿ ಮಹೇಂದ್ರ ಸಿಂಗ್ ದೋನಿಯನ್ನು ಸೇರಿಸಿಕೊಂಡಿದ್ದು ನಿಜಕ್ಕೂ ಸಂತೋಷಕರ ವಿಚಾರ.ಧೋನಿ ಯೋಚನೆ, ಆಲೋಚನೆಗಳು ಬೇರೆಯದ್ದೇ.ಟಿ ಟ್ವೆಂಟಿಯಲ್ಲಿ ಆತ ಸಾಕಷ್ಟು ಯಶಸ್ವಿ ಕಪ್ತಾನ ಕೂಡ ಹೌದು. ಹಾಗಾಗಿ ಮಾಹಿಯ ಮಾರ್ಗದರ್ಶನ ಖಂಡಿತವಾಗಿಯೂ ಭಾರತಕ್ಕೆ ಟ್ರೋಫಿ ಗೆಲ್ಲಲು ಬಹಳಷ್ಟು ಸಹಕಾರಿಯಾಗಲಿದೆ. 


ಇನ್ನು ಇವತ್ತಿನ ಪಂದ್ಯಕ್ಕೆ ಬರೋಣ.


ಹೌದು ಇಂದು ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ನಲ್ಲಿ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ.ಅಂದ ಹಾಗೆ ಇದು ಈ ಐದು ಪಂದ್ಯಗಳ ಸರಣಿಯ ಕೊನೆಯ ಪಂದ್ಯ.


ಈ ಅಂಗಣ ಇಂಗ್ಲೆಂಡ್ ನ ಎರಡನೆಯ ಅತ್ಯಂತ ಹಳೆಯ ಮೈದಾನವಾಗಿದೆ.ಮೊದಲನೆಯದ್ದು ಓವಲ್.


ಲ್ಯಾಂಕೆಶೈರ್ ಕೌಂಟಿ ಕ್ರಿಕೆಟ್ ತಂಡಕ್ಕೆ ಈ ಮೈದಾನ ಬ್ಯಾಕ್ ಯಾರ್ಡ್ ಇದ್ದಂತೆ. ಇಂಗ್ಲೆಂಡ್ ನ ವೇಗದ ಬೌಲರ್ ಜಿಮ್ಮಿ ಆಂಡರ್ಸನ್ ಹಾಗೂ ವಿಕೆಟ್ ಕೀಪರ್ ಜಾಸ್ ಬಟ್ಲರ್ ನ ತವರು ಮನೆ ಕೂಡ ಹೌದು ಇದು. ಸದ್ಯಕ್ಕೆ ನಾಟಿಂಗ್ಹ್ಯಾಮ್ ಶೈರ್ ಪರವಾಗಿ ಆಡುವ ಆಂಗ್ಲರ ಆರಂಭಿಕ ಆಟಗಾರ ಹಸೀಬ್ ಹಮೀದ್ ಸಹ ಹಿಂದೆ ನಾಲ್ಕೈದು ವರ್ಷಗಳ ಕಾಲ ಇದೇ ಕೌಂಟಿ ಪರವಾಗಿ ಇಲ್ಲೇ ಆಡಿದ್ದ. 



ಅಂದ ಹಾಗೆ ಸೋಲು ಗೆಲುವುಗಳ ಲೆಕ್ಕಾಚಾರಕ್ಕೆ ಬರುವುದಾದರೆ ಸದ್ಯಕ್ಕೆ 2-1 ರಿಂದ ಮುಂದೆ ಇರುವ ಟೀಮ್ ಇಂಡಿಯಾಕ್ಕೆ ಸರಣಿ ಸೋಲಿನ ಭೀತಿಯಲ್ಲಿ ಇಲ್ಲ. ಭಾರತವೇ ಗೆಲ್ಲಬೇಕು ಎಂಬುವುದು ಭಾರತೀಯ ಅಭಿಮಾನಿಗಳ ಆಶಯ.

ಡಬ್ಲ್ಯು.ಟಿ.ಸಿ ಯ ಅಂಕ ಪಟ್ಟಿಯಲ್ಲಿ 54.17 PCT ಯೊಂದಿಗೆ ಟೀಮ್ ಇಂಡಿಯಾವೇ ಮೊದಲ ಸ್ಥಾನದಲ್ಲಿದೆ. 


ಸದ್ಯಕ್ಕೆ ಇಂಗ್ಲೆಂಡ್ ನ ಸ್ಥಿತಿ ಮಾತ್ರ ಬಹಳಷ್ಟು ಹದಗೆಟ್ಟಿದೆ. ಗೆದ್ದರಷ್ಟೆ ಅದಕ್ಕೆ ಒಂದಷ್ಟು ಸಮಾಧಾನ. ಸೋತರೆ 3-1 ರಿಂದ, ಡ್ರಾ ಆದರೆ 2-1 ರಿಂದ ಅದು ತವರಿನಲ್ಲಿಯೇ  ಸರಣಿಯನ್ನು ಕಳೆದುಕೊಳ್ಳಲಿದೆ. 


ಭಾರತೀಯ ತಂಡದಲ್ಲಿ ಏನು ಬದಲಾವಣೆ ಆಗುತ್ತದೆ ಎಂದು ಯಾರಿಗೆ ಆಗಲಿ ಊಹಿಸಲು ಸಾಧ್ಯವೇ ಇಲ್ಲ ಬಿಡಿ.ಏನೇ ಹೇಳಿ ಅಶ್ವಿನ್ ನಂತಹ ಒಳ್ಳೆಯ ಆಟಗಾರ ಇಷ್ಟು ಉದ್ದದ ಸರಣಿಯಲ್ಲಿ ಬೆಂಚು ಕಾಯಿಸುವುದನ್ನು ನೋಡುವಾಗ ಒಂದಷ್ಟು ಬೇಜಾರು ಖಂಡಿತಾ ಆಗುತ್ತದೆ. ಕೊನೆಯ ಪಕ್ಷ ಈ ಪಂದ್ಯದಲ್ಲಿ ಆದರೂ ಅವನನ್ನು ಆಡಿಸುವ ಮನಸ್ಸು ತಂಡ ಮಾಡಲಿ ಅಂತ ಆಸೆ ಅಷ್ಟೇ. ಆದರೆ ಆ ನಂಬಿಕೆ ಖಂಡಿತವಾಗಿಯೂ ಇಲ್ಲ. ತಂಡ ಗೆಲ್ಲುವುದಾದರೆ ಇದೆಲ್ಲ ವಿಷಯವೇ ಆಗುವುದಿಲ್ಲ ಎನ್ನುವುದು ಸಹ ಅಷ್ಟೇ ಸತ್ಯ. 


ಆಂಗ್ಲರ ತಂಡದಲ್ಲಿ ವಿಕೆಟ್ ಕೀಪರ್ ಬಟ್ಲರ್ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಅದೇ ರೀತಿ ಸಾಮರ್ಸೆಟ್ ನ ಲೆಫ್ಟ್ ಆರ್ಮ್ ಸ್ಪಿನ್ನರ್ ಜ್ಯಾಕ್ ಲೀಚ್ ಕೂಡ ಆಂಗ್ಲರ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಮಾಹಿತಿಯೂ ಇದೆ. 


ಇನ್ನು ಮಳೆ, ಮೋಡ ಕವಿದ ವಾತಾವರಣ, ಮಂದ ಬೆಳಕು, ಗುಡುಗು, ಸಿಡಿಲಿನ ಬಗ್ಗೆ ಹೇಳುವುದಾದರೆ ಮ್ಯಾಂಚೆಸ್ಟರ್ ಮೇಲೆ ಮೋಡ ಕವಿದ ವಾತಾವರಣ ಖಂಡಿತವಾಗಿಯೂ ಇರಲಿದೆ. ಪಂದ್ಯದ ಆರಂಭಿಕ ದಿನಗಳಲ್ಲಿ ಮಳೆ ಸಾಧ್ಯತೆಯೂ ಇದೆ ಎಂದು ಹವಾಮಾನ ವರದಿ ಹೇಳುತ್ತಿದೆ.ಹಾಗಾಗಿ ವೇಗದ ಬೌಲರ್ ಗಳು ಮೊದಲೆರಡು ದಿನ ಸಾಕಷ್ಟು ಮಿಂಚುವ ಸಂಭವ ಅಧಿಕವಾಗಿದೆ. 


ಸದ್ಯಕ್ಕೆ ಇಷ್ಟೇ...


ಆಂಗ್ಲರ ಈ ಕೊನೆಯ ನಿಲ್ದಾಣದಲ್ಲಿ ಭಾರತ ಇಂಗ್ಲೆಂಡ್ ಮತ್ತೊಮ್ಮೆ ಮುಖಾಮುಖಿ ಆಗಲಿದೆ. ಅದರ ಜೊತೆ ಜೊತೆಗೆ ಆಂಗ್ಲರದ್ದೊಂದು ಬಾರ್ಮಿ ಆರ್ಮಿ ಗೆ ಎದುರಾಗಿ ಭಾರತದ ಭಾರತ್ ಆರ್ಮಿಯೂ ಮ್ಯಾಂಚೆಸ್ಟರ್ ನಲ್ಲಿ ಭಾರತಕ್ಕಾಗಿ ಚಿಯರ್ ಅಫ್ ಮಾಡಲಿದೆ, ಎಂದಿನಂತೆ ಇಲ್ಲಿ ನಾವುಗಳು. 


ಇವತ್ತಿನ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ಆರಂಭವಾಗಲಿದೆ. 


ಇವತ್ತು ವಿನಾಯಕನ ಹಬ್ಬ.ಜೊತೆಗೆ ಕ್ರಿಕೆಟ್ ಅಭಿಮಾನಿಗಳಿಗೆ ಐದು ದಿನಗಳ ಟೆಸ್ಟ್ ಕ್ರಿಕೆಟ್ ನ ಹಬ್ಬ.ಎರಡೂ ಸಿಹಿ ಹೆಚ್ಚಿಸಿಕೊಳ್ಳಲಿ.ಎಲ್ಲರಿಗೂ ಒಳ್ಳೆಯದಾಗಲಿ.


ಎಲ್ಲರಿಗೂ ಚೌತಿ ಹಬ್ಬದ ಶುಭಾಶಯಗಳು.. 


ಮೊದಲ ದಿನದಾಟದ ಅಂತ್ಯಕ್ಕೆ ಮತ್ತೆ ಸಿಗೋಣ,ಎಂದಿನಂತೆ ಒಂದಷ್ಟು ಕ್ರಿಕೆಟ್ ಮಾತಾಡೋಣ. 


Ind Vs England

5th Test - Old Trafford - Manchester 


#Day_1


#WTC_S02E01_45D1_2021_23 

Ab pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..