ಪರಾಶರ
#ಪರಾಶರ | ಧೀರಜ್ ಪೊಯ್ಯೆಕಂಡ
ಯಾವುದಾದರೊಂದು ಕಾಲಕ್ಕೆ,ಹೋಗಲಾರದ ಲೋಕಕ್ಕೆ ಕಥೆಯೊಂದು ನಮ್ಮನ್ನು ತುಸು ಹೊತ್ತು ಕರೆದೊಯ್ದು ಬಿಟ್ಟರೆ, ಅದಕ್ಕಿಂತ ದೊಡ್ಡ ಓದಿನ ಸುಖ ಮತ್ತೊಂದಿಲ್ಲ.ಓದುವಷ್ಟು ಹೊತ್ತು ಆ ಪಾತ್ರಗಳ ಜೊತೆ ಜೊತೆಯಲ್ಲಿಯೇ ನಾವು ಕೂಡ ನಮಗರಿವಿಲ್ಲದೆ ಬಹಳಷ್ಟು ಒಡಾಡಿ ಬಿಟ್ಟರೆ,ಕೊನೆಯಲ್ಲಿ ಕಥೆ ಮುಗಿಸಿ ಒಂಚೂರು ಶಬ್ಧವಾಗದಂತೆ ಇಲ್ಲಿಂದ ಎದ್ದು ಹೋಗುವ ಪಾತ್ರಗಳು,ಇನ್ನಷ್ಟು ಹೊತ್ತು ಇಲ್ಲಿಯೇ ನಮ್ಮ ಬಳಿಯೇ ಕುಳಿತುಕೊಳ್ಳರಬಾರದಿತ್ತೇ ಎಂಬ ಭಾವವನ್ನೇ ಕೊನೆಗೆ ಅಧಿಕ ಮಾಡಿಬಿಡುತ್ತದೆ.ಲೇಖಕ ಧೀರಜ್ ಅವರು ಇಲ್ಲಿ ಮಾಡಿದ್ದು ಅದನ್ನೇ.
ನಿಧಾನಕ್ಕೆ ತುಂಬಿಕೊಳ್ಳವುದು,ಇಷ್ಟಿಷ್ಟೇ ಖಾಲಿಯಾಗಿಸುವುದು,ಬೇಕಾದಷ್ಟೇ ಕಾದಾಡುವುದು ಮತ್ತು ಅಪರಿಮಿತವಾಗಿ ಕಾಡುವುದು.. ಇಷ್ಟನ್ನು ಅವರು ರುಚಿಕಟ್ಟಾಗಿ ಮಾಡಿ ಓದುಗನಿಗೆ ಪುಷ್ಕಳವಾಗಿಯೇ ಬಡಿಸಿದ್ದಾರೆ.
ಓದುವಾಗ ಪರಾಶರದ ತುಂಬೆಲ್ಲಾ ಪ್ರತೀಕಾರದ ಹಾಗೂ ರಕ್ತದ ಕಮಟು ವಾಸನೆಯೇ ಮೂಗಿಗೆ ಅಧಿಕವಾಗಿ ಅಡರಬಹುದು, ಆದರೆ ಒಂದಷ್ಟು ಕೇದಿಗೆಯ ಪರಿಮಳದ ಪೊದೆ ಅಲ್ಲಲ್ಲಿ ಅಲುಗಾಡಿದಾಗಲೆಲ್ಲ ಬಾಕಿ ಎಲ್ಲವೂ ಪಕ್ಕಕ್ಕೆ ಸರಿದು ಮುಗ್ಧ ಪ್ರೇಮವೊಂದೇ ಹೃದಯಕ್ಕೆ ಬಹಳಷ್ಟು ಹತ್ತಿರವಾಗಬಲ್ಲದು.
" ನೆಂದ ಭೂಮಿಗೆ ಧಗೆ
ಬೆಂದ ಭೂಮಿಗೆ ಮಳೆ
ಕಾಲ ಕಾಲಕ್ಕೆ ನೀಡಿದ್ದು ಯಾರು?.. "
ಎಲ್ಲವನ್ನೂ ಹೇಳಲೇ ಬೇಕಿಲ್ಲ.ಹೇಳದೆಯೂ ಬಹಳಷ್ಟು ಅರ್ಥಮಾಡಿಕೊಳ್ಳಬಹುದು ಎಂದು ಹೇಳುವ ಲೇಖಕರು ಹೇಳದೆಯೇ ಕೆಲವೊಂದಷ್ಟನ್ನು ಸೊಗಸಾಗಿ ಓದುಗನ ಎದುರು ತೆರೆದಿಡುತ್ತಲೇ ಹೋಗುತ್ತಾರೆ ಇಲ್ಲಿ.
" ಟೆಲ್ ಮಿ ಸಮ್ ಥಿಂಗ್ ಇಂಟ್ರೆಸ್ಟಿಂಗ್... " ಎಂದು ಹೇಳುವ ಪರಾಶರನೇ ಎಲ್ಲಕ್ಕಿಂತ ಹೆಚ್ಚು ಇಂಟ್ರೆಸ್ಟಿಂಗ್ ಇಲ್ಲಿ.ಅವನಿಗೆ ಪ್ರೀತಿಸಿ ಗೊತ್ತಿತ್ತೇ ಹೊರತು.... ಅದನ್ನು ತೋರಿಸಿಕೊಳ್ಳಲು ಗೊತ್ತಿರಲಿಲ್ಲ!
"ಅನುಭವದಿಂದ ಹುಟ್ಟಿದ್ದಕ್ಕೆ ಆಯುಷ್ಯ ಜಾಸ್ತಿ" ಎಂದು ಹೇಳುವ ಲೇಖಕ ಧೀರಜ್ ತಮ್ಮ ಅನುಭವಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಈ ಸೊಗಸಾದ ಎರಡನೆಯ ಕಾದಂಬರಿಯನ್ನು,ಮೊದಲ ಕಾದಂಬರಿ "ಮಿತಿ"ಗಿಂತಲೂ ಬಹಳ ವಿಭಿನ್ನವಾಗಿ ಮತ್ತು ಓದುಗ ಕೂಡ ಸಾಕಷ್ಟು ಬೆರಗಾಗುವಂತೆ ಬರೆದಿದ್ದಾರೆ.ನಮ್ಮ ಜಿಲ್ಲೆಯವರೇ ಎಂಬ ವಿಶೇಷ ಪ್ರೀತಿ,ಖುಷಿ ಎಂದಿನಂತೆ ನಮ್ಮದು.ಕಥೆಯಲ್ಲೂ ಕೂಡ ದಕ್ಷಿಣಕನ್ನಡ ಇನ್ನಷ್ಟು ಇಷ್ಟವಾಗುವಂತೆ ಆವರಿಸಿಕೊಳ್ಳುತ್ತಲೇ ಹೋಗುತ್ತದೆ.
ನನಗೆ ಇಷ್ಟವಾಯಿತು,ನೀವೂ ಓದಿ.ನಿಮಗೂ ಇಷ್ಟವಾಗಬಹುದು.
#ಪರಾಶರ | ಸಸ್ಪೆನ್ಸ್ ಕಾದಂಬರಿ
ಲೇಖಕರು - ಧೀರಜ್ ಪೊಯ್ಯೆಕಂಡ
ಪ್ರಕಾಶಕರು - ದೇವಕಿ ಪ್ರಕಾಶನ
ಮೊದಲ ಮುದ್ರಣ - 2021
#ಪುಸ್ತಕಗಳು
ab
Comments
Post a Comment