ಕಾಲ ಮತ್ತೊಮ್ಮೆ ನಮಗಾಗಿ ಬಂತು



ಬಂಧುಗಳೇ... 


ವಿಷಯ ಏನೆಂದರೆ ಬಂಧುಗಳೇ.. ಈ ವಾರಾಂತ್ಯದಿಂದ ಮತ್ತೆ ಐಪಿಎಲ್ ಶುರುವಾಗಲಿದೆ.ಮುಖ್ಯ ಮೂರು ತಂಡಗಳ ಅಭಿಮಾನಿಗಳಿಗೆ ಫೇಸ್ಬುಕ್ ನಲ್ಲಿ ಪೆಟ್ಟ್ ಲಡಾಯಿ ಮಾಡಲು ನಿಜಕ್ಕೂ ಇದೊಂದು ಪರ್ವಕಾಲ,ಹಾಗೆಯೇ ಸುಗ್ಗಿಯ ಸಮಯ.


" ಕಾಲ ಮತ್ತೊಮ್ಮೆ ನಮಗಾಗಿ ಬಂತು...

  ಬೇಜಾನ್ ಪೆಟ್ಟ್ ಲಡಾಯಿ ಮಾಡಲು ಇಂದು.."

ಎಂದು ಯಾವ ಕಾರಣಕ್ಕೂ ತಪ್ಪು ತಪ್ಪಾಗಿ 'ಕಿಲಾಡಿಗಳು'  ಸಿನಿಮಾದ ಹಾಡನ್ನು ಈ ರೀತಿ ಎಲ್ಲಾ ಹಾಡಿ,ಇತರರನ್ನು ರೊಚ್ಚಿಗೆಬ್ಬಿಸಬಾರದೆಂದು,ಹುಚ್ಚು ಕಟ್ಟಿ ಮರ್ಲು ಕಟ್ಟಿಸಬಾರದೆಂದು ನಮ್ಮದೊಂದು ಕೋರಿಕೆ,ಭಿನ್ನಹ ಹಾಗೂ ಎಂದಿನಂತೆ ಕಳಕಳಿಯ ಮನವಿ ಇದೆ ಐಪಿಎಲ್ ಬಂಧುಗಳೇ. ಏಕೆಂದರೆ ನಮಗೆ ಅದು ಬಿಟ್ಟು ಇಲ್ಲಿ ಬೇರೆ ದಾರಿಯೇ ಇಲ್ಲ.ಜೀವನ ಸಿಕ್ಕಾಪಟ್ಟೆ ಬಂಗ(ಬ್ಯೂಟಿಫುಲ್)ಆಗುವುದು ಈ ಟೈಮಿನಲ್ಲಿಯೇ. 


ಬಂಧುಗಳೇ... ಗೆಳೆಯರೇ...ಮಿತ್ರರೇ...ಹಾಗೂ ನನ್ನ ಕ್ರಿಕೆಟ್ ದೋಸ್ತಿಗಳೇ.. 


ನಿಮಗೆಲ್ಲಾ ಗೊತ್ತಿರುವ ಹಾಗೆ " ಮುಂಬೈ ಇಂಡಿಯನ್ಸ್ "ಅನ್ನತಕ್ಕಂತಹ ತಂಡಕ್ಕೆ ಅನಾದಿ ಕಾಲದಿಂದಲೂ,ಶತ ಶತಮಾನದಿಂದಲೂ ವರ್ಷಂಪ್ರತೀಯ ಸೇವೆ ಎಂಬಂತೆ ಚಾಚೂ ತಪ್ಪದೇ ಭಕ್ತಿಯಿಂದ ಸಪೊರ್ಟ್ ಮಾಡುವ ನಾನಾಗಲಿ ಹಾಗೂ ಅದೇ ರೀತಿ "ಚೆನ್ನೈ ಸೂಪರ್ ಕಿಂಗ್ಸ್ " ಮುಂತಾದ ತಂಡಗಳಿಗೆ ಹೃದಯದಿಂದ,ಶ್ವಾಸಕೋಶದಿಂದ,ಪಿತ್ತ ಜನಕಾಂಗದಿಂದ  ಸಪೋರ್ಟ್ ಮಾಡುವ ನಮ್ಮಂತಹ ಕ್ರಿಕೆಟ್ ಪ್ರೇಮಿಗಳು ಏನು ಈ ನಾಡಿನಲ್ಲಿ ಇದ್ದೇವೆ ಬಂಧುಗಳೇ.. ನಿಜಕ್ಕೂ ನಾವು ಅಲ್ಪಸಂಖ್ಯಾತ ಕ್ರಿಕೆಟಾಭಿಮಾನಿಗಳಾಗಿದ್ದೇವೆ ಅನ್ನತಕ್ಕಂತಹ  ಮಾತಿನಲ್ಲಿ  ತಿರುಳಿದೆ.. ಹುರುಳಿದೆ.. ಹಾಗೂ ಎಲ್ಲಾ ದ್ವಿದಳ ಧಾನ್ಯಗಳು,ಬೇಳೆ ಬೇಯಿಸಿಕೊಳ್ಳಬಹುದಾದ ಬೇಳೆ ಕಾಳುಗಳು ಕೂಡ ಬಹಳಷ್ಟು ಇದೆ ಬಂಧುಗಳೇ.ನಂಬಿ ಪ್ಲೀಸ್... ನಾವು ನಾಡ  ದ್ರೋಹಿಗಳು ಅಲ್ಲ,ಕ್ರಿಕೆಟ್ ಅಭಿಮಾನಿಗಳು ಅಷ್ಟೇ.


ಹಾಗಾಗಿ ಏನು ಈ ಒಂದು ಐಪಿಎಲ್  ಕಾಲಘಟ್ಟದಲ್ಲಿ ನಾವು ಬಹಳ ಸೂಕ್ಷ್ಮವಾಗಿ ಮತ್ತು ನಮ್ಮ ಸುತ್ತ ಮುತ್ತ ಇರುವವರೊಂದಿಗೆ ಅಷ್ಟೇ ಬಹು ಸಂವೇದನೆಯಿಂದ ವರ್ತಿಸಬೇಕಾದ ಹಾಗೆಯೇ ಮನಸ್ಸನ್ನು ನಮ್ಮ ನಮ್ಮ ಹತೋಟಿಯಲ್ಲಿ ಇಟ್ಟುಕೊಂಡು ಅತಿರೇಕದ ಕೈಗೆ ಅದನ್ನು ಯಾವತ್ತೂ ಕೊಡದೇ ಸಭ್ಯವಾದ ಭಾಷೆಯಲ್ಲಿಯೇ ಸಂವಹನ ಮಾಡಬೇಕಾದ ಅತೀ ದೊಡ್ಡ ಜವಾಬ್ದಾರಿ ಕೂಡ ಇಂದು ನಮ್ಮ ಹೆಗಲ ಮೇಲಿದೆ ಬಂಧುಗಳೇ. 


ಆದುದರಿಂದ ಈ ಮೂಲಕ ನಾವು ಕೋರಿ ಕೊಳ್ಳುವುದು ಏನೆಂದರೆ ಫೇಸ್ಬುಕ್ ನಲ್ಲಿರುವ ಯಾವುದೇ ಬಹುಸಂಖ್ಯಾತ ಅಭಿಮಾನಿ ಬಳಗ ನಮ್ಮಂತಹ ದುರ್ಬಲರ ಮೇಲೆ ವರ್ಬಲ್ ಮಾರಾಕಯುಧಗಳನ್ನು ಜಳಪಿಸಿ ಯಾವುದೇ ಜಳಕ್ ತೋರಿಸಬಾರದೆಂದು ಮತ್ತೊಮ್ಮೆ ಸವಿನಯದ ರಿಕ್ವೆಷ್ಟ್. ನಮಗೂ ಬದುಕುವ ಹಕ್ಕಿದೆ,ಬದುಕಲು ಬಿಡಿ..ಇಲ್ಲದಿದ್ದರೆ ಐಪಿಎಲ್ ಮುಗಿಯುವವರೆಗೆ ಈ ಸೋಷಿಯಲ್ ಮೀಡಿಯಾದಲ್ಲಿ ನಮ್ಮಂತಹ ಅಲ್ಪಸಂಖ್ಯಾತ ಕ್ರಿಕೆಟ್ ಅಭಿಮಾನಿಗಳ ಜೀವನ ಬಹಳ ಅಂದರೆ ಬಹಳ ಮುಶ್ಕಿಲ್ ಆಗಲಿದೆ..ಎಂಬುದು ನಮ್ಮದೊಂದು ಹೃದಯಾಂತರಾಳದ ಮಾತು ಬಂಧುಗಳೇ. 


ಕೊನೆಯದಾಗಿ ಬೆಂಕಿಗೆ ಧಾರಾಳ ತುಪ್ಪ ಸುರಿಯುವ ಆ ಒಂದು ನನ್ನ ಮಾತು ಏನೆಂದರೆ ಬಂಧುಗಳೇ... 


ಈ ಬಾರಿಯೂ ಮುಂಬೈ ಇಂಡಿಯನ್ಸೇ ವಿನ್ ಆಗಲಿ ಎಂದು  ಬಯಸುವ,ಹಾರೈಸುವ ನೀವುಗಳೇ ನನ್ನ ನಿಜವಾದ ಐಪಿಎಲ್ ಬಂಧುಗಳು... 😉


ಪಚ್ಚು ಬಲಿಪು... 🏃‍♂️🏃‍♂️🏃‍♂️

ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..