ನಾನು ಸಿಂಗರ್ ಆಗಿದ್ದರೆ...



ನಿರೂಪಕ -  ಸಾರ್...ಹೇಳಿ ಸಾರ್. ನೀವು ಶುರು ಮಾಡಿ.

ನಾನು -   ಅದೇ.. ಏನು ಹೇಳ್ಬೇಕು ಅಂತಲೇ ಗೊತ್ತಾಗ್ತ ಇಲ್ಲ.

ನಿ  -  ಈ ನಿಮ್ಮ ಒಂದು ಜರ್ನಿ ಶುರುವಾಗಿದ್ದು ಹೇಗೆ.ಅದರ ಬಗ್ಗೆ ಒಂಚೂರು ಹೇಳಿ ಸರ್.

ನಾ - ಜರ್ನಿ ಅಂದ್ರೆ.. ನಮ್ಮಲ್ಲಿ ಹಿಂದಿನಿಂದಲೂ ಪ್ರೈವೇಟ್ ಬಸ್ಸೇ ಜಾಸ್ತಿ.ಹಾಗಾಗಿ ಅದರಲ್ಲೇ ಹೆಚ್ಚಾಗಿ ಜರ್ನಿ.ವಿಶಾಲ್, ನಿಶ್ಮಿತಾ,ಅರಸು,ಆಶೆಲ್,ನಂ19,15A,ಮರೋಳಿ,ರಾಜ್‌ಕುಮಾರ್,ರಾಜಲಕ್ಷ್ಮಿ...

ನಿ - ಅದಲ್ಲ ಸಾರ್.. ಈ ನಿಮ್ಮ ಮ್ಯೂಸಿಕ್ ಜರ್ನಿ ಬಗ್ಗೆ ಹೇಗೆ ಹೇಳಿ.. ನಿಮಗೆ ಈ ಸಂಗೀತದಲ್ಲಿ ಆಸಕ್ತಿ ಬರಲು ಕಾರಣವಾಗಿದ್ದ ಯಾವುದಾದರೂ ಒಂದು ಪ್ರಮುಖ ಘಟನೆಯ ಬಗ್ಗೆ ಇಲ್ಲವೇ ಈ ನಿಮ್ಮ ಸಂಗೀತ ಪ್ರಯಾಣ ಹೇಗೆ ಮತ್ತು ಎಲ್ಲಿಂದ ಆರಂಭವಾಯಿತು..ಅವುಗಳ ಬಗ್ಗೆ ಎಲ್ಲಾ ಹೇಳಿ ಸರ್.

ನಾನು - ನೋಡಿ ಅದು ಒಂದು ಬಹಳ ಹಳೆಯ ಕಥೆ. ಅದಕ್ಕೆ ನಾವು ತುಂಬಾ ಅಂದ್ರೆ ತುಂಬಾ ಹಿಂದೆ ಹೋಗ್ಬೇಕಾಗ್ತದೆ ಇವರೇ..

ನಿ -   ಪರವಾಗಿಲ್ಲ ಸಾರ್.. ನಂಗೆ ಟೈಮ್ ಇದೆ.. ನೀವು ಹೇಳಿ.

ನಾ -   ಓಕೆ.. ಓಕೆ.. ಹಾಗಾದರೆ ನಂಗೆ ಸ ಪರವಾಗಿಲ್ಲ. ನೋಡಿ ಒಂದು ದಿನ ನಾನು ಈ ಮನೆಯ ಅಂಗಳದಲ್ಲಿಯೇ ಕುಳಿತುಕೊಂಡು ಹಾಗೇ ಹೊರಗಿನ ಪ್ರಕೃತಿಯನ್ನು ವೀಕ್ಷಿಸುತ್ತಾ ಇದ್ದೆ.ಆವಾಗ ಅಲ್ಲಿ ಒಂದು ಕೋಗಿಲೆ ಕುಹೂ ಕುಹೂ ಅಂತ ರಾಗವಾಗಿ ಹಾಡಿತು.

ನಿ -   ಓ.. ಹಾಗಾದರೆ ನಿಮ್ಮ ಈ ಕಂಚಿನ ಕಂಠಕ್ಕೆ ಕೋಗಿಲೆಯೇ ಪ್ರೇರಣೆ ಅಂತ ಹೇಳ್ತಾ ಇದ್ದೀರಿ ಅಲ್ವಾ ಸಾರ್.. ಅಮೇಝಿಂಗ್ ಸಾರ್.. ಅಮೇಝಿಂಗ್ ನೀವು.

ನಾ-   ಇಲ್ಲ... ಇಲ್ಲ... ಕೋಗಿಲೆ ಅಲ್ಲ... ನೀವು ಪೂರ್ತಿ ಕಥೆಯನ್ನೇ ಇನ್ನೂ ಕೇಳಿಲ್ಲಾ... ನೀವು ಅಮಸರ ಮಾಡ್ಬಾರ್ದು.

ನಿ -  ಸಾರಿ ಸರ್.. ಸಾರ್. ಆಯಿತು ನೀವು ಹೇಳಿ, ಮತ್ತೆ ಯಾರು ಪ್ರೇರಣೆ ಸಾರ್.

ನಾ - ನೋಡಿ ಏನು ಈ ಕೋಗಿಲೆ ಕುಹೂ ಕುಹೂ ಅಂತ ಶಬ್ಧ ತೆಗೆಯಿತು ಅಲ್ವಾ,ಅಟ್ ದ ಸೇಮ್ ಟೈಂ... ನಮ್ಮ ಮನೆಯ ತೆಂಗಿನ ಮರಕ್ಕೆ ಈ ಮಂಗಗಳ ಗ್ಯಾಂಗ್ ಒಂದು ಬಂದು ಬಿಟ್ಟು ಈ ದಾಳಿ..ದಾಳಿಯನ್ನೇ  ಮಾಡಿಬಿಟ್ಟವು. ತುಂಬಾ... ಅಂದ್ರೆ ತುಂಬಾ ದೊಡ್ಡ ಗ್ಯಾಂಗ್ ಅದು.

ನಿ -  🙄🙄🙄

ನಾ - ಆವಾಗ ಅಲ್ಲೇ ಇದ್ದ ಅಪ್ಪ ನಂಗೆ ಹೇಳಿದ್ರು.. ಅದನ್ನು ಒಂದು ಓಡಿಸು ಮಾರಾಯ,ಎಲ್ಲಾ ಬೊಂಡ(ಎಳನೀರು)ಕುಡಿದು ಹಾಳು ಮಾಡ್ತಾ ಇದ್ದಾವೆ.ನೋಡ್ತಾ ಇದ್ದಿಯಾ ಅಲ್ವಾ.ನಾಲ್ಕು ತೆಂಗಿನಕಾಯಿ ಆದ್ರೂ ಅದ್ರಲ್ಲಿ ಆಗ್ಲಿ..ಮೊದಲು ಒಂದು ಜೋರು ಬೊಬ್ಬೆ ಹಾಕಿ ಅವುಗಳನ್ನು ಓಡಿಸು...

ನಿ - 🤔🤔🤔

ನಾ - ಆ ದಿನ... ಆ ದಿನವೇ ಮಿರಾಕಲ್ ಸಂಭವಿಸಿದ್ದು. ಅಪ್ಪ ಎಷ್ಟು ಓಡಿಸಿದರೂ ಓಡದ ಮಂಗಗಳು,ನನ್ನ ಸ್ವರ ಕೇಳಿ ಎಲ್ಲಾ ಎದ್ದು ಬಿದ್ದು ಚೆಲ್ಲಾ ಪಿಲ್ಲಿ ಆಗಿ ಕಾಡಿಗೆ ಓಡಿ ಬಿಟ್ಟವು. ಅವತ್ತೇ ನಂಗೆ ಅಪ್ಪ ಶಭಾಷ್ ಅಂತ ಬೆನ್ನು ತಟ್ಟಿ.. ಮಗನೇ ನಿನ್ನ ವಾಯ್ಸ್ ಅಲ್ಲಿ ಏನೋ ಒಂದು ಪವರ್ ಇದೆ,ಮ್ಯಾಜಿಕ್ ಇದೆ ಅಂತ ಎಲ್ಲಾ ಹೇಳಿದ್ದು.

ನಿ - ಓ.. ಹಾಗೇಯಾ ಸರ್.. ಅಂದ್ರೆ ಮನೆಯವರ ಈ ರೀತಿಯ ಸಿಕ್ಕಾಪಟ್ಟೆ ಪ್ರೋತ್ಸಾಹದಿಂದಲೇ ನೀವು ಈ ದಿನ ಒಬ್ಬ ಸಿಂಗರ್ ಆಗಿದ್ದೀರಿ ಎಂದು ಹೆಮ್ಮೆಯಿಂದ ಹೇಳ್ತಾ ಇದ್ದೀರಿ ಅಲ್ವಾ ಸರ್.. ಕರೆಕ್ಟ್ ಅಲ್ವಾ ಸರ್.

ನಾ - ಹೌದು.. ಖಂಡಿತಾ..ಖಂಡಿತಾ.. ಸಿಕ್ಕಾಪಟ್ಟೆ ಪ್ರೋತ್ಸಾಹ. ಅದರಲ್ಲೂ ಅಪ್ಪನ ಪ್ರೋತ್ಸಾಹ ಮಾತ್ರ ಅದು ಹೇಳಿ ಪ್ರಯೋಜನವೇ ಇಲ್ಲ.ಅಂತಹದ್ದೊಂದು ಭಯಂಕರ ಪ್ರೋತ್ಸಾಹ. ಆದರೆ ಪ್ರೇರಣೆ ಮಾತ್ರ ಆ ದಿನ ಬೊಂಡ ಕುಡಿಯಲು ಬಂದ ಮಂಗವೇ.. ಅದು ಮಾತ್ರ ನಾನು ಎಲ್ಲಿ ಹೋದ್ರು ಸ ಈಗ್ಲೂ  ಹೇಳ್ತೇನೆ.. ಯಾಕಂದ್ರೆ ನನ್ನ ಸ್ವರದ ಶಕ್ತಿಯ ಬಗ್ಗೆ ನನಗೆ ಗೊತ್ತಾಗಿದ್ದೇ ಅವುಗಳಿಂದ ಅಲ್ವಾ. ನಾವು ಯಾವತ್ತೂ ಅದನ್ನೆಲ್ಲಾ ಮರೀಬಾರ್ದು ಇವರೇ..

ನಿ - ಖಂಡಿತಾ ಸಾರ್.. ಖಂಡಿತಾ .. ಓಕೆ ಈಗ ನಾವು ಮುಂದಕ್ಕೆ ಹೋಗೋಣ. ಮಂಗಗಳ ಏನು ಈ ಬೊಂಡ ಇನ್ಸಿಡೆಂಟು  ಆಯಿತು..ನೀವೇ ಹೇಳುವಂತೆ ಅದು ನಿಮಗೆ ಪ್ರೇರಣೆ ಕೂಡ ಆಯಿತು..ಓಕೆ ಫೈನ್.. ಆಮೇಲೆ ಇದನ್ನು ನೀವು ಅಂದ್ರೆ ಈ ಸಂಗೀತವನ್ನು ಹೇಗೆ ಮುಂದೆ ಬೆಳೆಸುತ್ತಾ ಬಂದ್ರಿ ಸರ್..ಅದರ ಬಗ್ಗೆಯೂ ಸ್ವಲ್ಪ ಹೇಳಿ.

ನಾ - ಸಂಗೀತವನ್ನು ಮುಂದೆ ಹೇಗೆ ಬೆಳೆಸುತ್ತಾ ಬಂದೆ ಅಂದ್ರೆ..ನನಗೆ ಅದು ಗೊತ್ತಾಯಿತು.. ನನ್ನ ಸ್ವರ ಎಲ್ಲಾ ಒಳ್ಳೆ ಉಂಟು ಅಂತ ನನಗೆ ಗೊತ್ತಾಗಿ ಬಿಟ್ಟಿತು.. ಹಾಗಾಗಿ ನಾನು ಶಾಲೆಯಲ್ಲಿ.... ಈ ಮಗ್ಗಿ ಎಲ್ಲಾ ಭಯಂಕರ ರಾಗವಾಗಿ ಹಾಡಲು ಶುರು ಮಾಡಿದೆ.

ನಿ - ಸರ್.. ಮಗ್ಗಿಯಲ್ಲಿ  ಸಂಗೀತ ಎಲ್ಲಾ ಎಲ್ಲಿ ಬರ್ತದೆ ಸಾರ್..

ನಾ - ಮಗ್ಗಿಯಲ್ಲಿ ಸಂಗೀತ ಬರ್ತದೆ.. ಅದು ಕನ್ನಡ ಮಗ್ಗಿಯಲ್ಲಿ ಬರ್ತದೆ... ನಿಮಗೆ ಗೊತ್ತಿಲ್ಲ ಅಷ್ಟೇ.. ರಾಗವಾಗಿ ಮಗ್ಗಿಯನ್ನೇ ಹಾಡಿದ್ರೂ ಸಹ ಬೇಕಾದಷ್ಟು ಸಂಗೀತ ಅಭ್ಯಾಸ ಆಗಿ ಬಿಡ್ತದೆ. ಕೇಳಿಲ್ವಾ ನೀವು..' ಒಂದೊಂದ್ಲ ಒಂದಾ... ಒಂದೆರಡ್ಲ ಎರಡಾ..'ನೋಡಿ ಎಷ್ಟು ರಾಗವಾಗಿ ಬರ್ತದೆ ಅಲ್ವಾ.ಮಗ್ಗಿಯಲ್ಲಿ ಕೂಡ ಈ ಛಂದಸ್ಸು,ಸಮೋಸ ಎಲ್ಲಾ ಸೂಕ್ಷ್ಮವಾಗಿ ಸೇರಿಕೊಂಡಿರುವುದರಿಂದಲೇ ನಮ್ಗೆ ಅದನ್ನು ಸಹ ಪದ್ಯದ ರೂಪದಲ್ಲಿಯೇ ಹಾಡ್ಲಿಕ್ಕೆ ಎಲ್ಲಾ ಆಗ್ತದೆ.

ನಿ - ಮಗ್ಗಿಯಲ್ಲಿ ಸಮೋಸವಾ.. 🙄

ನಾ - ನೋಡಿ, ನಿಮಗೆ ಈ ತಿನ್ನುವುದರ ಬಗ್ಗೆಯೇ ಜಾಸ್ತಿ ಆಸಕ್ತಿ ಮತ್ತು ಅಷ್ಟೇ ಗೊತ್ತಿರುವುದು ಎಂದು ನನಗೆ ಇಲ್ಲಿ ಸ್ಪಷ್ಟವಾಗಿ ಗೊತ್ತಾಗ್ತ ಉಂಟು...ದಯವಿಟ್ಟು.. ದಯವಿಟ್ಟು ಇವರೇ ಸಾಧ್ಯವಾದಷ್ಟು ಒಳ್ಳೊಳ್ಳೆಯ..ಜೊತೆಗೆ ಕಷ್ಟ ಕಷ್ಟದ ಪ್ರಶ್ನೆಗಳನ್ನು ಸಹ ಕೇಳಿ.

ನಿ -  ಅಲ್ಲ ಸಾರ್.. ನೀವೂ ಕೂಡ 'ಸಮೋಸ' ಅಂತಲೇ ಹೇಳಿದ್ದು ಅಲ್ವಾ.. ಹಾಗಾಗಿ ನಾನು ಕೂಡ.. ಓಕೆ,ಓಕೆ.. ಇರ್ಲಿ ಬಿಡಿ ಸರ್. ಈಗ ಒಂದು ಮಗ್ಗಿಯನ್ನೇ ಪದ್ಯವಾಗಿ ಹಾಡಿ ತೋರಿಸ್ಬಹುದಾ ಸರ್.. ಅಂದ್ರೆ ನೀವು ಹೇಗೆ ಹಾಡ್ತೀರಾ ಅಂತ ಜಸ್ಟ್ ಕುತೂಹಲ ಅಷ್ಟೇ...

ನಾ - ಈಗ್ಲೇ ಹಾಡ್ಬೇಕಾ...

ನಿ - ಹೌದು ಸಾರ್.. ಅಂದ್ರೆ ನಂಗೆ ನೋಡ್ಬೇಕು,ಅದು ನೀವು ಹೇಗೆ ಅಷ್ಟೊಂದು ಮಗ್ಗಿ ಒಳಗೆಲ್ಲಾ ಹೋಗಿ  ಹಾಡ್ತೀರಿ ಅಂತ...

ನಾ - ಆಯಿತು ಆಯಿತು... ಜಾಸ್ತಿ ಚೊರೆ ಮಾಡ್ಬೇಡಿ.. ಹಾಡುವ..ಹಾಡುವ.. ಅಂದ ಹಾಗೆ ಯಾವ ಮಗ್ಗಿ ಹಾಡ್ಲಿ.. ನೀವೇ ಒಂದು ಸೆಲೆಕ್ಟ್ ಮಾಡಿ ಬಿಡಿ ಅಲಾ..

ನಿ - 17

ನಾ - 🙄🙄🤔😡😡😡

ನಿ - ಏನಾಯಿತು ಸಾರ್.. ಟೆನ್ಶನ್ ಆದ ಹಾಗಿದೆ.

ನಾ - ಏನ್ರಿ... ಈ  ಮಗ್ಗಿಯಲ್ಲಿ ಅಷ್ಟೊಂದು ವ್ಯಯ್ಯಾರ ಬಿನ್ನಾಣ ಎಲ್ಲಾ ಏನೂ ಇಲ್ಲ..

ನಿ - ಅಲ್ಲ ಸಾರ್.. ನೀವು ಕಷ್ಟದ ಪ್ರಶ್ನೆ ಬೇಕು ಅಂದ್ರಿ ಅ... ದ... ಕ್ಕೆ.. ನಾನು

ನಾ - ಕಷ್ಟದ ಪ್ರಶ್ನೆ ಅಂದೆ.. ಕಷ್ಟದ ಮಗ್ಗಿ ಬಗ್ಗೆ ಕೇಳಿ ಅಂತ  ಹೇಳಿದೆನಾ.. 😏

ನಿ - 🙄🙄

ನಾ - ಯಾವುದಾದರೂ 'ಎರಡೊಂದ್ ಎರಡಾ.. ಮೂರೊಂದ್ಲಿ ಮೂರಾ..' ಈ ತರಹದ್ದು ಎಲ್ಲಾ ಕೇಳಿದ್ರೆ, ನಮ್ಗೂ ಒಂದು ಹಾಡ್ಲಿಕ್ಕೆ ಗ್ರಿಪ್ ಇರ್ತದೆ..ನೀವು ನನ್ನ ಹಾಡುವ ಮೂಡನ್ನೇ ಹಾಳು ಮಾಡಿ ಬಿಟ್ರಿ ನೋಡಿ.. ಏನೂ ನೀವು ಒಂದು ಇವರೇ..

ನಿ - ಸಾರಿ ಸರ್.. ಸಾರಿ. ಹಾಗಾದರೆ ಈ ಹಾಡು ಎಲ್ಲಾ ಬೇಡ ಬಿಡಿ.ನೀವು ಮುಂದೆ ಹೇಳಿ ಸರ್.

ನಾ - ಮುಂದೆ ಏನು ಹೇಳುವುದು.

ನಿ - ಅದೇ.. ಮುಂದೆ ಯಾವ ರೀತಿ ನೀವು ಈ ನಿಮ್ಮ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿದ್ದೀರಿ ಅಂತ ಹೇಳಿ ಸರ್.

ನಾ - ಮುಂದೆ ಹೇಳಬೇಕೆಂದರೆ... ಕಾಲೇಜಿಗೆ ಹೋಗುವಾಗ ನಾನು ಈ ಮೊದಲೇ ಹೇಳಿದಂತೆ ಬಸ್ಸಲ್ಲೇ  ಹೋಗ್ತಾ ಇದ್ದೆ.ಆವಾಗ ಈ ಬಸ್ ಅಲ್ಲಿ ಕಂಡಕ್ಟರ್ ಏನಾದರೂ ಬ್ಯುಸಿ ಇದ್ದರೆ ಈ " ರೈಟ್ ಪೋಯಿ.. ರೇಸ್ ಪೋಯಿ(ರೈಟ್ ರೈಟ್)..ಮುಂದೆ ಬನ್ನಿ.. ಮುಂದೆ ಬನ್ನಿ.. ಹಿಂದೆ ಹೋಗಿ.. ಹಿಂದೆ ಹೋಗಿ..ದಯವಿಟ್ಟು ಅಣ್ಣಾ.. ಓ ಅಣ್ಣಾ.. ಮೇರೆ... ಈರೇ.. ಈರೇ.. ಚೂರು ದುಂಬು ಪೋಲೆ.. ಅಕ್ಕಾ..ಬಾಸ್..ಬ್ರೋ.." ಅಂತ ಜೋರಾಗಿ ಕೂಗಿ ಕೂಗಿಯೇ.. ನನ್ನ ಸ್ವರವನ್ನು ಹಾಗೇ ಶಾರ್ಪ್ ಆಗಿ, ಪೈನ್ ಆಗಿ ಎಲ್ಲಾ ಇಟ್ಕೊಳ್ತಾ ಬಂದೆ.

ನಿ - 🙄🙄🙄.. ಆಮೇಲೆ ಏನಾಯಿತು

ನಾ - ಆಮೇಲೆ.." ಆಮೇಲೆ  ಐಶ್ವರ್ಯಾ ಬಂದ್ಲು.. ಯಿ ಯಾಯಿಯೇ... ಯಿ ಯಾಯಿಯೇ.. ಯಿಯಾಯಿ ಯಿಯಾಯಿ ಯಿಯಾಯೇ.. ಮಕ್ಕರ್ ಮಾಡೋ ಐಶ್ವರ್ಯ.. ನಕ್ರಾ ಮಾಡ್ದೇ ಹಿಡಿ ಕೈಯಾ..."

ನಿ -🙄🙄🙄🙄..ಸಾ....ಸಾ..ಸಾರ್ ನಾನು ಪ್ರಶ್ನೆ ಕೇಳಿದ್ದು...ಸಾಂಗ್  ಎಲ್ಲಾ ಬೇಡ ಸರ್..ದಮ್ಮಯ್ಯ ಬೇಡ..🙏

ನಾ - 🤔🤔🤔

ನಿ - ಅದೆಲ್ಲಾ ಬಿಡಿ ಸರ್.. ನೀವು ಸಮಾಜದಲ್ಲಿರುವ ಸಿಂಗರ್ ಗಳಿಗೆ ಪರ್ಟಿಕುಲರ್ ಆಗಿ ನಿಮ್ಮಂತಹ ಸಿಂಗರ್ ಗಳಿಗೆ ಏನು ಒಂದು ಕರೆ ಕೊಡ್ತೀರಾ...

ನಾ - ಕೊನೆಯ ಕರೆಯಾ...?

ನಿ - ಪ್ರಶ್ನೆ ಎಲ್ಲಾ ಮುಗೀತಾ ಬಂತು... ಆದರೆ ನೀವು ಮೊದಲ ಕರೆಯೇ ಕೊಡಿ...

ನಾ - ಹಹ್ಹಾ.. ಹಹ್ಹಾ.. ನನಗೆ ಈ ನಮ್ಮ ಹಳ್ಳಿ ಕ್ರಿಕೆಟ್ ಕಾಮೆಂಟ್ರಿಯಲ್ಲಿ ಹೇಳುವ " ಇತ್ತಂಡಗಳ ನಾಯಕರುಗಳಿಗೆ ಇದು ಕೊನೆಯ ಕರೆ. ಇಲ್ಲದಿದ್ದರೆ ವಾಕ್ ಓವರ್ ಘೋಷಿಸಲಾಗುವುದು.. ಆದಷ್ಟು ಬೇಗ ಎಲ್ಲಿದ್ದರೂ ನಾಣ್ಯ ಚಿಮ್ಮುಗೆಗಾಗಿ ಕಾಮೆಂಟ್ರಿ ಬಾಕ್ಸ್ ಕಡೆಗೆ ಬರಬೇಕು.." ಎನ್ನುವುದು ಒಮ್ಮೆ ನೆನಪಾಯಿತು ನೋಡಿ.. ಹಹ್ಹಾ.. ಹಹ್ಹಾ..

ನಿ - ಕ್ರಿಕೆಟ್ ಎಲ್ಲಾ ಈಗ ಬೇಡ ಸಾರ್.. ದಯವಿಟ್ಟು ನೀವು ಎಲ್ಲೇ ಹೋಗಿದ್ದರೂ ಮತ್ತೆ ಈ ಸಿಂಗಿಂಗ್ ಟಾಪಿಕ್ ಗೆ ಬನ್ನಿ ಸಾರ್.. ದಯವಿಟ್ಟು.

ನಾ - ಹಾನ್.. ಈಗ ಪ್ರತಿಭೆಗಳಿಗೆ ಕರೆ ಕೊಡ್ಬೇಕು ಅಲ...

ನಿ - ಹೌದು ಸಾರ್ ಅದೇ.. ಯುವ ಉತ್ಸಾಹಿ ಪ್ರತಿಭೆಗಳಿಗೆ ಕೊನೆಯದಾಗಿ ನಿಮ್ಮ ಆ ಒಂದು ಕಿವಿಮಾತು ಏನು ಸರ್.

ನಾ - ನೋಡಿ ಒಂದು ಮಾತು ಹೇಳ್ಬೇಕಂದ್ರೆ ಇವರೇ... ನಿಮ್ಮ ಸುತ್ತ ಮುತ್ತ ಈ ಕೆಟ್ಟ ಸಮಾಜದಲ್ಲಿ ಎಂತಹ ಒಂದು ಭಯಾನಕ ಜನ ಇರ್ತಾರೆ ಅಂದ್ರೆ.. ನೀವು ಕೆಟ್ಟದಾಗಿ ಹಾಡ್ತಾ ಇದ್ರೆ ಅಥವಾ ಕೆಟ್ಟದಾಗಿ ಏನನ್ನೇ ತುಂಬಾ ಅಮಾಯಕರಾಗಿ ಪ್ರದರ್ಶಿಸುತ್ತಾ ಇದ್ರೆ ... ಅದಕ್ಕೆ.. ಸೂಪರ್.. ಸೂಪರ್.. ಅಂತ ಹೇಳಿ ನಿಮ್ಮ ಕೈಯಿಂದ ಹಾಡಿಸಿಯೋ,ಏನೋ ಮಂಗನಾಟ ಮಾಡಿಸಿಯೋ ಅವರೆಲ್ಲಾ ನಿರಂತರವಾಗಿ ಮಜಾ ತಗೊಳ್ತಾ ಇರ್ತಾರೆ.ನಿಮಗೆ ಅದು ಗೊತ್ತೇ ಆಗಲ್ಲ.ಆದ್ದರಿಂದ ದಯವಿಟ್ಟು ಮೊದಲು ಇಂತವರಿಂದ ಸಾಧ್ಯವಾದಷ್ಟು ದೂರವಿರಿ.. ಅಂತ ನಾನು ಈ ಸಂದರ್ಭದಲ್ಲಿ ಹೇಳ್ಲಿಕ್ಕೆ ಇಚ್ಛೆ ಪಡ್ತೇನೆ. ಆದೇ ರೀತಿ ಒಂದು ವೇಳೆ ಸಂಗೀತದ ಮೇಲೆ ನಿಜವಾಗಿಯೂ ನಿಮಗೆ ಆಸಕ್ತಿಯಿದ್ದರೆ ಸರಿಯಾಗಿ ಗುರುವಿನ ಮಾರ್ಗದರ್ಶನದಲ್ಲಿಯೇ ಸಂಗೀತವನ್ನು ಕಲಿಯಿರಿ.ಏಕೆಂದರೆ ಸಂಗೀತ ಎಲ್ಲರ ಕೈ ಹಿಡಿಯುವುದಿಲ್ಲ.ಸರಸ್ವತಿಯ ಪುತ್ರ ಇಲ್ಲವೇ ಪುತ್ರಿಯರಾಗಲು ಎಲ್ಲರಿಗೂ ಭಾಗ್ಯವಿಲ್ಲ ಬಿಡಿ.ಅದು ದೈವ ಇಚ್ಛೆ.

ನಿ - ಸೂಪರ್ ಸರ್.. ಸೂಪರ್.. ಇದೊಂದು ಮಾತ್ರ ನೀವು ಬಹಳ ಸರಿಯಾಗಿ ಹೇಳಿದ್ದಿರಿ ಸರ್.

ನಾ - ಹಾಗಾದರೆ ಬೇರೆ ಎಲ್ಲಾ ನಾನು ತಪ್ಪು ತಪ್ಪು ಹೇಳಿದೆ ಅಂತ ನಿಮ್ಮ ಈ ಮಾತಿನ ಅರ್ಥವಾ..?

ನಿ - ಸಾರಿ... ಸಾರಿ.. ಅದು ಹಾಗಲ್ಲ ಸಾರ್.. ತೂಕದ ಮಾತು ಅಂತ ಹೇಳಿದೆ. ಮತ್ತೆ ಸರ್ ನಿಮ್ಮ  ಸಂಗೀತ ಪ್ರಯಾಣದಲ್ಲಿ ಮುಂದೇನಾಯಿತು ಎಂಬ ಪ್ರಶ್ನೆಗೆ ಈ "ಐಶ್ವರ್ಯಾ ಬಂದ್ಲು" ಹಾಡು ಹಾಡಿ,ನೀವು ಆ ಪ್ರಶ್ನೆಯನ್ನು ಅರ್ಧಕ್ಕೇ  ನಿಲ್ಲಿಸಿ ಬಿಟ್ಟರಿ.. ದಯವಿಟ್ಟು ಸರ್ ಆ ಪ್ರಶ್ನೆಯಿಂದಲೇ ಮುಂದುವರಿಸಿ...

ನಾ - ಮುಂದೆ ಅಂದ್ರೆ ಅದೇ ಹೀಗೆನೇ ಒಳ್ಳೆ ರೀತಿಯಲ್ಲಿ ಹೊಗ್ತಾನೇ ಇತ್ತು...

ನಿ - ಅಲ್ಲ ಸಾರ್... ಒಂದು ಪ್ರಶ್ನೆ..ನೀವು ಬೇರೆ ಏನು ದೊಡ್ಡದಾಗಿ ಈ ತುಂಬಿದ ಸಭೆಯಲ್ಲಿ ಎಲ್ಲಾ ಹಾಡ್ಲೆ ಇಲ್ವಾ..?

ನಾ - ದೊಡ್ಡದಾಗಿ ತುಂಬಿದ ಸಭೆಯಲ್ಲಿ ಹೇ.. ಳ.. ಬೇ.. ಕೆಂ.. ದ.. ರೆ .... ಇದೆ ಅಲ್ವಾ, ಎಷ್ಟು ಹ್ಯಾಪಿ ಬರ್ತಡೆ ಸಾಂಗ್ ಎಲ್ಲಾ ನಾನು ಹಾಡಿದ್ದೇನೆ...

ನಿ - ಯಾವುದು ಸಾರ್  "ಹ್ಯಾಪಿ ಬರ್ತಡೆ ಟು ಯು ಜೀ.." ಆ ಸಾಂಗಾ..

ನಾ - ಅದು ಮಾತ್ರ ಅಲ್ಲ.ಎಲ್ಲಾ.. ಆಲ್ಮೋಸ್ಟ್ ಎಲ್ಲಾ ಬರ್ತಡೆ ಸಾಂಗ್. ನೋಡಿ ಇವರೇ ..ನಾವು ಒಬ್ಬ ಕಲಾವಿದ ಆಗಿ ಎಲ್ಲವನ್ನೂ ಸ್ಟಾಕ್ ಇಟ್ಕೋಬೇಕು.ಹಾನ್.. ಈ ರೀತಿ ಎಲ್ಲಾ ನಮ್ಮ ಫ್ಯಾಮಿಲಿಯವರ ಹಾಗೂ ಪಕ್ಕದ ಮನೆಯವರ ಮಾತ್ರವಲ್ಲ ಊರಿನಲ್ಲಿ ಎಲ್ಲೇ ಹ್ಯಾಪಿ ಬರ್ತಡೆ ಇದ್ರೂ... ನನ್ನ ಕೈಯಲ್ಲಿಯೇ ಹ್ಯಾಪಿ ಬರ್ತಡೆ ಸಾಂಗ್ ಎಲ್ರೂ ಹಾಡ್ಸೋರು. ಈ ತರಹ ಹಾಡಿ ಹಾಡಿಯೇ ಒಂದು ರೇಂಜಿಗೆ ಇಂದು ನಾವು ಬೆಳೆದು ನಿಂತಿದ್ದೆವೆ ನೋಡಿ.. ಹೇಳುತ್ತಾ ಹೋದ್ರೆ ಇನ್ನೂ ಬಹಳಷ್ಟು ರೋಚಕ ಕಥೆಗಳಿವೆ..

ನಿ -  ಸಾರ್..ಸಾರ್..ದಯವಿಟ್ಟು...ಬೇಡ..ಕಥೆ ಬೇಡ.

ನಾ - 🙄🤔🤔

ನಿ - ಮುಂದೆ ಏನು ಸ ಟಾರ್ಗೆಟ್

ನಾ - ಅಂದ್ರೆ ಅರ್ಥ ಆಗ್ಲಿಲ್ಲಾ..

ನಿ - ಇಂಡಿಯನ್ ಐಡಿಯಲ್.. ಸರಿಗಮಪ.. ಆ ತರಹ ದೊಡ್ಡ ವೇದಿಕೆ ಗಳಿಗೆ ಹೋಗುವ ಪ್ಲಾನ್ ಏನಾದರೂ..

ನಾ - ಅವರೇ ಬನ್ನಿ ಅಂತ ಕರೆದ್ರು.. ಆದ್ರೆ ನಾನೇ ಬೇಡ ಅಂತ  ಮರ್ಯಾದೆ ಮಾಡ್ದೆ..

ನಿ - ಅಲ್ಲ ಸಾರ್.. ಅದು ಅವರು ಕರಿಯೋದು ಅಲ್ಲ.. ಅವರು ಸೆಲೆಕ್ಟ್ ಮಾಡಿದ್ರೆ ಮಾತ್ರ ನೀವು ಹೋಗ್ಬಹುದು..

ನಾ - ಬೇಡ ಬಿಡಿ..ಅದು ಬೇಡ.. ನೀವು ಪ್ರಶ್ನೆ ಕೇಳಿ..

ನಿ - ಮತ್ತೆ ಭವಿಷ್ಯದಲ್ಲಿ ಹೇಗೆ ಸಾರ್.. ಈ ನಿಮ್ಮ ಸಿಂಗಿಂಗ್ ಅನ್ನು ಹೇಗೆ ಮುಂದುವರಿಸ್ತೀರಿ ಅಂತಾ..

ನಾ - ಪರವಾಗಿಲ್ಲ.. ಈಗಲೂ ಬೇಕಾದಷ್ಟು ಮಂಗಗಳು ಬೊಂಡ ಕುಡಿಯಲು ಮನೆಯ ಮರಗಳಿಗೆ ಬರ್ತಾನೆ ಇರ್ತಾವೆ.. ಹಾಗಾಗಿ ದೇವರ ದಯೆಯಿಂದ ಪ್ರತಿಭೆ ತೋರಿಸಲು ವಿಫುಲ ಅವಕಾಶ ಇದೆ ನಮ್ಮಲ್ಲಿ...

ನಿ - 😡😡😡

.....................................................................................

#ವಿಷಯ_ಎಂತ_ಗೊತ್ತುಂಟಾ..
ab pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ