ಫಳಾರ ಸೇವೆ..
ಮೊನ್ನೆ ಒಂದು ಕ್ಲಬ್ ಹೌಸ್ ರೂಮಿನಲ್ಲಿ ಈ ತರಹ ಟಾಪಿಕ್ ಇಟ್ಕೊಂಡಿದ್ರು " ಅವನು ಧಮ್ ಇದ್ರೆ ಇಲ್ಲಿ ಬರ್ಬೇಕು,ನಮ್ಮ ಪ್ರೆಸ್ನೆಗೆ ಉತ್ತರಿಸ್ಬೇಕು😡😡.. "
ಆಹಾ ಬಹಳ ಆಕರ್ಷಕವಾದ ಟಾಪಿಕ್ ಅಂತ ನಾನು ಬಲಗಾಲಿಟ್ಟು ಆ ರೂಮಿನೊಳಗೆಯೇ ಹೋದೆ.
ತುಂಬಾ ಹೊತ್ತಾದರೂ ಆ "ಅವನು" ಎನ್ನುವವನು ಆ ರೂಮಿಗೆ ಬರ್ಲೇ ಇಲ್ಲ.ಆದರೆ ರೂಮ್ ಮಾತ್ರ ಅಕ್ಷರಶಃ ರಣರಂಗವಾಗಿತ್ತು..ಆ ಮಗ ಧಮ್ ಇದ್ರೆ ಈಗ ಇಲ್ಲಿ ಬಂದು ಮಾತಾಡ್ಲಿ,ಮಾತಾಡ್ಲಿಕೆ ನಮ್ಗೆ ಬರಲ್ವಾ,ಅವನಿಗೆ ಮಾತ್ರ ಗೊತ್ತಿರೊದಾ.. ಬಾರೋ... ಎಲ್ಲಿದ್ದಿಯಾ ಬಾರೋ... ಅಂತ ಆಕ್ರೋಶ ಭರಿತರಾಗಿ,ಸಂಯಮ ಸಹನೆ ಶಿಸ್ತು ಎಲ್ಲವನ್ನೂ ಕಳೆದುಕೊಂಡು ವರ್ಚುವಲ್ ಮಚ್ಚು ಲಾಂಗ್ ಕೊಡಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಅವರೆಲ್ಲರೂ ತೀಕ್ಷ್ಣವಾಗಿ ಜಳಪಿಸುತ್ತಿದ್ದರು.
ಅವರು "ಬಾರೋ.. ಎಲ್ಲಿದ್ದಿಯಾ ಬಾರೋ.." ಅಂತ ಕೂಗಿ ಕೂಗಿ ಕರೆಯುವಾಗ ನನಗೆ 'ರಣರಂಗ' ಮೂವಿಯ ಈ ಹಾಡು ನೆನಪಾಯಿತು..
" ಜಗವೇ ಒಂದು ರಣರಂಗ,
ಧೈರ್ಯ, ಇರಲಿ ನಿನ್ನ ಸಂಗ
ಬಾರೋ, ಬಾರೊ ನನ್ನ ರಾಜ
ನಿನಗೆ ನೀನೇ ಮಹಾರಾಜ...."
ಆದರೆ ಆ ಮಹಾರಾಜ ಬರುವ ಯಾವುದೇ ಸೂಚನೆಯೂ ಇರಲಿಲ್ಲ.ಏನೋ ಮಹಾನು ಘನಂದಾರಿ ಕೆಲಸವನ್ನೇ ಆತ ಬೇರೆ ರೂಮಿನಲ್ಲಿ ಮಾಡಿರಬೇಕು,ಅದಕ್ಕಾಗಿ ಈ ನಡುರಾತ್ರಿಯಲ್ಲೂ ಕ್ಲಬ್ ಹೌಸ್ ಜನತೆ ಇಷ್ಟೊಂದು Rash ಆಗಿ ಹರತಾಳ ಮಾಡುತ್ತಿರುವುದು ಎಂದು ಮೇಲ್ನೋಟಕ್ಕೆ ನನಗೂ ಸಹ ಸ್ಪಷ್ಟವಾಯಿತು.
ಆಹಾ..ಅವರ ಆ ಮಾತುಗಳೋ ಬಹಳಷ್ಟು ಸಂಸ್ಕೃತದ್ದೇ ಆಗಿತ್ತು! ಒಂದಷ್ಟು ಲೇಡಿಸ್ ಪೊಂಜೊವ್(ಮಹಿಳಾಮಣಿಗಳು) ಕೂಡ ಇದ್ದರು ಮತ್ತು ಅವರು ಸ ಬರೀ ಸಂಸ್ಕೃತದಲ್ಲಿಯೇ ಸಕ್ಕತ್ತಾಗಿಯೇ ಬೈಯುತ್ತಿದ್ದದ್ದು ನನ್ನನು ಬೆರಗುಗೊಳಿಸಿತು !!
ನಾನು ಕೂಡ ಅವನು ಬರ್ತಾನೆ... ಬಂದು ಈಗ ಫೈಟ್ ಮಾಡ್ತಾನೆ..ಇವರೆಲ್ಲರನ್ನೂ ಚಿಂದಿ ಚಿತ್ರಾನ್ನ ಮಾಡಿ ಬಿಡ್ತಾನೆ ಇಲ್ಲದಿದ್ದರೆ ಇವರೇ ಎಲ್ಲರೂ ಸೇರಿ ಅವನನ್ನು ಬೂಂದಿ ಮೊಸರಾನ್ನ ಮಾಡಿ ಬಿಸಾಕ್ತಾರೆ,ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟೆಲ್ಲಾ ಜನರ ನಿದ್ದೆಗೆಡಿಸಿದ ಆ "ಯಾರವನು ಡ್ರೀಮ್ ಬಾಯ್.. " ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೂ ಕೂಡ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಹೋಯಿತು.ಆದರೂ ಅವ ಬರಲಿಲ್ಲ. ಕೊನೆಗೆ ಆರುಮುಗಂ ರವಿಶಂಕರ್ ಸ್ಪೈಲ್ ನಲ್ಲಿ "ಬರ್ತಾರೆ ಸಾ..ರ್ " ಎಂದು ನನಗೆ ನಾನೇ ಹೇಳಿಕೊಂಡು ಕೂಡ ಬಿಟ್ಟೆ.
ಕೊನೆಗೆ ರೂಮ್ ನಲ್ಲಿ ನನ್ನಂತೆಯೇ ಈ ಮನರಂಜನೆ ಕೇಳಲು ನೆರೆದಿದ್ದ ನೂರಾರು ಜನರಲ್ಲಿ ಯಾರಾದರೂ ನನ್ನ ಗುರ್ತದವರು ಇದ್ದಾರಾ ಎಂದು ಕಣ್ಣೆತ್ತಿ ಅತ್ತಿತ್ತ ಮೇಲೆ ಕೆಳಗೆ ಕೂಡ ನೋಡಿದೆ.
ಪೆಟ್ಟ್ ಲಡಾಯಿಗಳ ರೂಮಿನಲ್ಲಿ ವಿಶೇಷ ಆಸಕ್ತಿ ಹಾಗೂ ಹೆಚ್ಚಾಗಿ ಅಂತಹ ರೂಮಿನಲ್ಲಿ ಮಾತ್ರ ಕಂಡು ಬರುವ ನನ್ನ ಒಬ್ಬ ದೋಸ್ತಿ ಅಲ್ಲೂ ಕೂಡ ಎಂದಿನಂತೆ ಇದ್ದ. ಬಹುಶಃ ನನಗಿಂತಲೂ ಮೊದಲೇ ಬಂದು ಅವನಲ್ಲಿ ಸೀಟು ಹಿಡಿದಿದ್ದ ಎಂದು ಕಾಣುತ್ತದೆ.
ಅವನಿಗೆ ಬ್ಯಾಕ್ ಚಾನಲ್ ನಲ್ಲಿ ಮೆಸೇಜ್ ಹಾಕಿ ಕೇಳಿದೆ.. ಅಣ್ಣಾ ಹೇಗೆ...ಗೌರವಾಧ್ಯಕ್ಷರು ಎಷ್ಟು ಗಂಟೆಗೆ ಬರ್ಬಹುದು..?
ಅದಕ್ಕೆ ಅವನು..ಬರ್ತಾರೆ ಬರ್ತಾರೆ ನೀನು ಈಗ್ಲೇ ಅಮಸರ(ಉತ್ಸಾಹದ ಪರಮಾವಧಿ)ಮಾಡ್ಬೇಡ,ಪೆಟ್ ಲಡಾಯಿ ಅಲ್ವಾ..ಲೇಟ್ ಆಗ್ತದೆ..ಸ್ವಲ್ಪ ಅಡ್ಜಶ್ಟ್ ಮಾಡು.. ಅವನು ಸ ಜನ ಎಲ್ಲಾ ಒಟ್ಟು ಹಾಕಿ ಅವನದ್ದೇ ಒಂದು ಪಟಲಾಂ ಅನ್ನು ಸ ಕರ್ಕೊಂಡು ಬರ್ಬೇಕಲ್ವಾ..ಇದಕ್ಕೆಲ್ಲಾ ಟೈಂ ಹಿಡಿತದೆ.. ಎಂದು ಗಂಭೀರವಾಗಿ ಹೇಳಿದ.
ಆಹಾ.. ಅವನ ಉತ್ಸಾಹ,ಅವನ ಜೋಶು..ತುಡಿತ ಮಿಡಿತ.. ಎಲ್ಲವೂ ಬರೀ ಪೆಟ್ ಲಡಾಯಿಯೇ ಆಗಿರುವುದು ನೋಡಿ ಮತ್ತು ಈ ಒಂದು ವಿಷಯದಲ್ಲಿ ಅವನು ಮಾಡಿರುವ ಆಳವಾದ ಅಧ್ಯಯನ ಹಾಗೂ ಅವನ ಆ ಒಂದು ಅಪರಿಮಿತ ಜ್ಞಾನ ಕಂಡು.. ಸಮಾಜದಲ್ಲಿ ಎಂತೆಂತಹ ಪ್ರತಿಭೆಗಳು ಇನ್ನೂ ಇದ್ದಾರೆ ಎಂದು ನನಗೆ ನಾನೇ ಮನಸ್ಸಿನಲ್ಲಿ ಒಮ್ಮೆ ಅಂದುಕೊಂಡೆ.
ಅವನಂತು ಈಗ ಅದೆಂತಹ ಮರ್ಲ(ವಿಶೇಷ ತಜ್ಞ)ಆಗಿದ್ದಾನೆ ಎಂದರೆ, ಕ್ಲಬ್ ಹೌಸ್ ಇರುವುದೇ ಕೇವಲ ಪೆಟ್ಟ್ ಲಡಾಯಿಗೆ, ದಿನಾಲೂ ಮಲಗುವ ಮುಂಚೆ ಒಂದೆರಡು ಪೆಟ್ಟ್ ಲಡಾಯಿ ಕೇಳಿ ಮಲಗಿದರೆನೇ ನೆಮ್ಮದಿಯ ನಿದ್ದೆ.. ಎಂಬಂತಹ ಮನಸ್ಥಿತಿಗೆ ಜಾರಿ ಬಿಟ್ಟಿದ್ದ ಮತ್ತು ನನಗೆ ಅವನು ವರ್ಚುವಲಿ ಹಾಗೆಯೇ ಕಂಡ.ಮಲಗುವಾಗ ಕೆಲವರಿಗೆ ಹಾಲು ಇಲ್ಲವೇ ಆಲ್ಕೋಹಾಲು ಕುಡಿಯುವ ಅಭ್ಯಾಸ ಇರ್ತದೆ ಅಲ್ವಾ ಹಾಗೆಯೇ ಇವನು ಈ ಪೆಟ್ಟ್ ಲಡಾಯಿ ಇರುವ ರೂಮಿಗೆ ಸಿಕ್ಕಾಪಟ್ಟೆ Addict ಆಗಿ ಹೋಗ್ಬಿಟ್ಟಿದ್ದ.
ಆದರೆ ಸ್ಪೀಕರ್ ಪ್ಯಾನೆಲ್ ಗೆ ಹೋಗಿ ಪೆಟ್ಟ್ ಲಡಾಯಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಎಲ್ಲಾ ಮಾಡಲಾರ.ಜಸ್ಟ್ ಬೇರೆಯವರ ಪೆಟ್ಟ್ ಲಡಾಯಿ ಗಳನ್ನು ರೂಮಿನ ಕೆಳಗೆ ಕುಳಿತುಕೊಂಡು ಕೇಳಿ ಎಂಜಾಯ್ ಮಾಡುವುದೇ ಅವನ ಇತ್ತೀಚಿನ ನೆಚ್ಚಿನ ಹವ್ಯಾಸ ಆಗಿದೆ. ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಹವ್ಯಾಸ,ಇವನದ್ದು ಈ ಹವ್ಯಾಸ.
ಮತ್ತೆ ಇನ್ನು ಎಷ್ಟು ಹೊತ್ತಾಗಬಹುದು... ಅವನಿಗೆ ಮತ್ತೆ ಮೆಸೇಜ್ ಹಾಕಿ ಕೇಳಿದೆ.
ಓಹ್.. ಅಣ್ಣಾ... ನಿನಗೆ ಸ್ವಲ್ಪ ಸ ಸೀರಿಯಸ್ ನೆಸ್ ಇಲ್ಲ ಮಾರಾಯ..ವೇಯ್ಟ್ ಮಾಡಾ ಸಾವ್.. ಆಗುದಾದ್ರೆ ಕುತ್ಕೋ.. ಇಲ್ಲದಿದ್ದರೆ ಬೇರೆ ರೂಮಿಗೆ ಎದ್ದು ಹೋಗು ... ಅಂದ.
ಆಯಿತು ಮರ್ರೆ Rash ಆಗ್ಬೇಡ...ಎಂದು ನಾನು ಹೇಳಿದೆ. ಏಕೆಂದರೆ ನನಗೆ ಕೂಡ ಆ ಹೊತ್ತಿನಲ್ಲಿ ಬೇರೆ ಯಾವುದೇ ರೂಮ್ ನಲ್ಲಿ ಧಗಧಗ ಎಂದು ಹೊತ್ತಿ ಉರಿಯುವ Active ಪೆಟ್ಟ್ ಲಡಾಯಿ ಎಲ್ಲೂ ಕಂಡು ಬರಲಿಲ್ಲ,ಹಾಗಾಗಿ ನಾ..ನು ಕೂ..ಡ ಮತ್ತೆ ಅದೇ ರೂಮಿನಲ್ಲಿ ಉಳಿದುಕೊಂಡೆ.
ಪುನಃ ಅವನಿಗೆ ಮೆಸೇಜ್ ಹಾಕಿ ಹೇಳಿದೆ.. ಅಲಾ.. ಇಷ್ಟು ಮಂದಿ ಇರುವಾಗ ಅವನು ಬರುವುದು ನನಗೆ ಯಾಕೋ ಡೌಟಾ .. ಬಂದ್ರೆ ಸ ಅವನನ್ನು ಇವರೆಲ್ಲಾ ಪಡ್ಚಾ(ಮಾಟ್ಯಾಶ್) ಮಾಡಿ ಬಿಸಾಕ್ತಾರೆ ನೋಡು.. ಅಂದೆ.
ಅದಕ್ಕೆ ಅವನು.. ಅದೇ ಅಲ್ವಾ ತಾಕತ್ ಅಂದ್ರೆ...ಎಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದು ಮುಖ್ಯ ಆಗಲ್ಲ,ಒಬ್ನೇ ಬಂದ್ರೂ ಆಡುವ ಮಾತಿನಲ್ಲಿ ಎಂತಹ ಪಾಯಿಂಟ್ ಇದೆ ಅನ್ನುವುದು ಇಂಪಾರ್ಟೆಂಟು..... ಯುಧ್ಧಕ್ಕೆ ಅಂತ ನಿಂತ್ ಮೇಲೆ ಸೈನಿಕರ ಲೆಕ್ಕ ಹಾಕ್ಬರ್ದು ಬ್ರೋ..!
ನನಗೆ ಯಾಕೋ ಇವನು "ನವಗ್ರಹ" ಮೂವಿಯನ್ನು ತುಂಬಾ ಸಲ ನೋಡಿದ್ದಾನೆ ಎಂದೇ ಅನಿಸಿತು.
ಆದರೆ ಇಲ್ಲಿ ಈ ರೂಮಿನ ಸೈನಿಕರು ಮಾತ್ರ ಎಷ್ಟೇ ಬೊಬ್ಬೆ ಹೊಡೆದರೂ, ಬರಬೇಕಾದವನು ಮಾತ್ರ ಬರಲೇ ಇಲ್ಲ.ಮತ್ತು ಅಂತಹ ಯಾವುದೇ ಲಕ್ಷಣ ಕೂಡ ಮೇಲ್ನೋಟಕ್ಕೆ ಅಲ್ಲಿ ಕಂಡು ಬರಲಿಲ್ಲ.
ಪುನಃ ಅವನಿಗೆಯೇ ಮೆಸೇಜ್ ಹಾಕಿ ಕೇಳಿದೆ.. ಮತ್ತೆ ಇಲ್ಲಿ ಸೇರಿರುವ ಜನರಿಗೆ ಕೊನೆಯಲ್ಲಿ ಫಳಾರ ಸೇವೆ ಏ.. ನಾ.. ದ.. ರೂ ಇದೆಯಾ..? ಕೇಳಿದೆ.
ಅವನು ಯಾಕೋ ನನಗೆ ರಿಪ್ಲೈ ಮಾಡಲೇ ಇಲ್ಲ!!
ಬಹುಶಃ ಗ್ಯಾರಂಟಿ ಅವನಿಗೆ ನನ್ನ ಮೇಲೆ ಸಿಟ್ಟು ಬಂದಿರ್ತದೆ. ಅವನ ಆ ಕೋಪದ ವರ್ಚುವಲ್ ಮುಖವನ್ನೊಮ್ಮೆ ನಾನು ಹಾಗೇ ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡೆ..
ರೂಮಿನ ರಣರಂಗ ಹೆಚ್ಚು ಕಡಿಮೆ ಈಗ ಕುರುಕ್ಷೇತ್ರವಾಗಿ ಬಿಟ್ಟಿತ್ತು. ಆಕ್ರಂದನ, ಆಕ್ರೋಶ ಮುಗಿಲು ಮುಟ್ಟಿತು.ಎಲ್ಲಿದ್ದರೂ ಅವನು ಇಲ್ಲಿಗೆ ಬರಬೇಕು.. ಎಂದು ಅಲ್ಲಿ ಎಲ್ಲಿಯೂ ಇರದ ವ್ಯಕ್ತಿಗೆ ಕಟ್ಟಪ್ಪಣೆ ಮಾಡಲಾಯಿತು,ಇದು ಕೊನೆಯ ಕರೆ.. ಎಂದು ಸುಗ್ರೀವಾಜ್ಞೆಯನ್ನು ಕೂಡ ಹೊರಡಿಸಲಾಯಿತು.
ನಾನು ಮತ್ತೆ ನನ್ನ ದೋಸ್ತಿಗೆ ಮೆಸೇಜ್ ಹಾಕುವ ಯಾವುದೇ ಸಾಹಸಕ್ಕೆ ಹೋಗ್ಲಿಲ್ಲ...ಮನೆಯಲ್ಲಿ ಕುಳಿತುಕೊಂಡಿದ್ದರೂ ಸಹ ಅತ್ತಿಂದಿತ್ತ ನೋಡದೇ,ಅದರಲ್ಲೂ ನನ್ನ ದೋಸ್ತಿಯತ್ತ ಸ್ವಲ್ಪವೂ ಮುಖ ತಿರುಗಿಸದೇ,ಕೇವಲ ಸ್ಪೀಕರ್ ಪ್ಯಾನಲ್ ಕಡೆಗೆ ನೋಡುತ್ತಾ, ಕೇಳುತ್ತಾ ಉಳಿದೆ.
ತೆರೆದಿದೆ ಮನೆ ಓ ಬಾ ಅತಿಥಿ...ಎಂಬಂತೆ ಘನಂದಾರಿ ಕೆಲಸ ಮಾಡಿದ್ದ ಆ ಗಣ್ಯವಕ್ತಿಯನ್ನು ರೂಮಿನವರು ಸುಸಂಸ್ಕೃತ ಭಾಷೆಯಲ್ಲಿ ಇನ್ನೂ ಕರೆಯುತ್ತಲೇ ಇದ್ದರು...
Ab Pacchu
Comments
Post a Comment