ಅವಳು ಸದಾ ನಗುತ್ತಿರಬೇಕು..!



                                    " ಪುಷ್ಯರಾಗ "

                         (ಅವಳು ಸದಾ ನಗುತ್ತಿರಬೇಕು..!) 


ಇಬ್ಬರೂ ನೆಲದ ಮೇಲೆ ಒಟ್ಟೊಟ್ಟಿಗೆ ಕುಳಿತುಕೊಂಡು ಟಿವಿ ನೋಡುತ್ತಿದ್ದೆವು.


ಟಿವಿ ಕಡೆಗೆ ಕೈ ತೋರಿಸಿ "ನನಗೂ ಅವಳ ಹಾಗೆಯೇ ಆಗಬೇಕು..." ಎಂದು ಬಿಟ್ಟಳು ವಸು.


ಅವಳು "ಪುನರ್ವಸು"... 


ಹೌದು ಅವಳು ಮಳೆಯದ್ದೇ ನಕ್ಷತ್ರ ಪುನರ್ವಸು. 


ವಸು ಸಿರಿವಂತರ ಮನೆಯ ಹುಡುಗಿ.


ಅವಳು ಮನಸ್ಸು ಕೂಡ ಅಷ್ಟೇ ಶ್ರೀಮಂತವಾಗಿತ್ತು. 


ನಾವಿಬ್ಬರೂ ಆಗ ತುಂಬಾ ಸಣ್ಣವರು. 


ಬಡತನ ನನ್ನನ್ನು ಬಹಳ ಚಿಕ್ಕಂದಿನಲ್ಲಿಯೇ ಅಪ್ಪಿ ಮುದ್ದಾಡಿ ಬಿಟ್ಟಿತ್ತು.ಅಪ್ಪ ಅಮ್ಮನನ್ನು ಸಹ ಬದುಕು ಬಲು ಬೇಗ ನನ್ನಿಂದ ಕಸಿದುಕೊಂಡು ಕೇಕೆ ಹಾಕಿ ನಕ್ಕಿತ್ತು. 


ಅಜ್ಜಿ ಒಬ್ಬಳೇ ನನ್ನ ಬದುಕಿನ ಆಧಾರಸ್ತಂಭವಾಗಿದ್ದಳು ಮತ್ತು  ಅವಳಿಗೆ ನಾನು.. 


ವಸುವಿನ ತಂದೆ ತಾಯಿ ದೇವರಂತಹ ಮನುಷ್ಯರು. 


ವಸು ಜೊತೆಗೆ ನನ್ನನ್ನೂ ಕೂಡ ಬೆಳೆಸಿದರು.. ಹೆಚ್ಚು ಕಡಿಮೆ ಮನೆ ಮಗನಂತೆಯೇ.


ನಾನು ಹೆಚ್ಚಾಗಿ ಅವರ ಮನೆಯಲ್ಲಿಯೇ ಇರುತ್ತಿದ್ದೆ. 


ನನಗೆ "ಪುಷ್ಯರಾಗ.." ಎಂದು ಬಹಳ ಸುಂದರವಾದ ಸಂಪದ್ಭರಿತವಾದ ಹೆಸರು ಇಟ್ಟದ್ದು ಕೂಡ ವಸುವಿನ ಅಮ್ಮನೇ. 


ಸುತ್ತಲಿನ ಸಮಾಜ ನನ್ನನ್ನು ಪುರು ಎಂದು ಕರೆಯುತ್ತದೆ.


ಎಲ್ಲರಿಗಿಂತ ಹೆಚ್ಚಾಗಿ ವಸು ನನ್ನನ್ನು ಹಾಗೆ ಕರೆಯುತ್ತಾಳೆ. 


ಅವರ ಮನೆಯ ನೆಲದ ಮೇಲೆ ಒಟ್ಟೊಟ್ಟಿಗೆ ಇಬ್ಬರೂ ಕುಳಿತುಕೊಂಡು ಟಿವಿ ನೋಡುತ್ತಿದ್ದಾಗ ವಸು "ನನಗೂ ಅವಳ ಹಾಗೆಯೇ ಆಗಬೇಕು ಪುರು..." ಎಂದು ಹೇಳಿದ್ದಳು. 


ನಾನು ಕೂಡ  ಹೀರೋಯಿನ್ ಆಗಬೇಕು ಎಂದವಳು ಆ ದಿನ ಟಿವಿಯಲ್ಲಿ ಬರುತ್ತಿದ್ದ ಹೀರೊಯಿನ್ ಕಡೆಗೆ ಕೈ ತೋರಿಸಿ ಹೇಳಿದ್ದು. 


ಚಿಕ್ಕ ಹುಡುಗಿ ನಕ್ಷತ್ರ ಲೋಕದ ಕನಸು ಕಂಡಿದ್ದಳು. ನಕ್ಷತ್ರವೊಂದು ತಾರೆಗಳ ಲೋಕದ ಕನಸು ಕಾಣುವುದು ತೀರಾ ಸಹಜವೇ. 


ನಾನು ಕೂಡ ಆ ದಿನ ಪುಟ್ಟ ಹುಡುಗನೇ.

ಇಬ್ಬರದ್ದೂ ಒಂದೇ ವಯಸ್ಸು. 


ನೀನು ಖಂಡಿತಾ ಹೀರೋಯಿನ್ ಆಗುತ್ತೀಯಾ ಬಿಡು ವಸು... ಎಂದು ಹೇಳಿ ಬಿಟ್ಟಿದ್ದೆ ನಾನು. 


ಮತ್ತೆ ನೀನು...? ಮುಗ್ಧವಾಗಿಯೇ ನನ್ನತ್ತ ತಿರುಗಿ ಕೇಳಿದ್ದಳು ವಸು. 


ನಾನಾ...? ನೋಡ್ತಾ ಇರು,ನೀನು ಹಿರೋಯಿನ್ ಆದಾಗ  ನಿನ್ನೆಲ್ಲಾ ಪಿಚ್ಚರಿನ ಪೋಸ್ಟರ್ ಊರಿನ ಗೋಡೆಗಳಿಗೆಲ್ಲಾ  ಹಚ್ಚುವುದು ನಾನೇ,ಅಷ್ಟು ಮಾತ್ರವಲ್ಲ ನಿನ್ನದೊಂದು ದೊಡ್ಡ ಕಟೌಟು ಕೂಡ ಮನೆಯ ಮುಂದೆ ನಾನೇ ನಿಲ್ಲಿಸುತ್ತೇನೆ ವಸು.. ಎಂದು ಒಂದೇ ಉಸಿರಿನಲ್ಲಿ ಹೇಳಿ ಬಿಟ್ಟಿದ್ದೆ. 


ಅವಳು ನನ್ನನೇ ನೋಡಿದಳು. 


ಜೋರಾಗಿ ನಕ್ಕಳು.. 


ನೀನು ಎಷ್ಟು ಒಳ್ಳೆಯವ ಪುರು.. ಅದಕ್ಕೆ ನೋಡು ನನಗೆ ನೀನು  ಯಾವಾಗಲೂ ಇಷ್ಟವಾಗುವುದು.. ಎಂದು ಹೇಳಿದ್ದಳು ವಸು. 


ಅವಳ ಖುಷಿಯೇ ಹೆಚ್ಚು ಕಡಿಮೆ ನನ್ನ ಖುಷಿ ಆಗಿತ್ತು.


ನನಗೆ ಅವಳು ನಕ್ಕರೇ ಅದೆನೋ ಒಂದು ಗೊತ್ತಿಲ್ಲದ ನೆಮ್ಮದಿ.


ನನಗೆ ಅವಳು ಸದಾ ನಗುತ್ತಿರಬೇಕಿತ್ತು. 


ಶಾಲೆಗೂ ನಾವು ಇಬ್ಬರು ಒಟ್ಟಿಗೆಯೇ ಹೋಗುತ್ತಿದ್ದೆವು.


ಕೈ ಕೈ ಹಿಡಿದೇ ಹೋಗಿದ್ದೆವು.


ಊರಿನ ಗುಡ್ಡ ಹತ್ತಿ ಸಂಜೆ ಸೂರ್ಯಾಸ್ತಮಾನದ ಕೆಂಪು ಕೂಡ ಒಟ್ಟಿಗೆ ನೋಡುತ್ತಿದ್ದೆವು. 


ಅವಳ ಅಮ್ಮನೇ ನನ್ನನ್ನು ಶಾಲೆಗೆ ಹೋಗು ಪುರು, ಏನಾದರೂ ಕಲಿತು ಜೀವನದಲ್ಲಿ ಸಾಧಿಸು.. ಎಂದು ಒತ್ತಾಯ ಮಾಡಿ ನನ್ನನ್ನು ಶಾಲೆಗೆ ಕಳುಹಿಸುತ್ತಿದ್ದರು. 


ಆದರೆ ಓದು ನನ್ನ ತಲೆಗೆ ಹತ್ತಲಿಲ್ಲ. 


ಶಾಲೆಯನ್ನು ಅರ್ಧದಲ್ಲಿಯೇ ಬಿಟ್ಟು ಬಿಟ್ಟೆ.


ಕೆಲಸಕ್ಕೆ ಸೇರಿ ಕೊಂಡೆ.


ಊರಿನ ಎಲ್ಲಾ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದೆ. 


ಬೆಳಿಗ್ಗೆ ಪೇಪರ್,ಹಾಲು ಹಾಕುವುದರಿಂದ ಹಿಡಿದು ಶೆಟ್ಟರ ಅಂಗಡಿಯಲ್ಲಿ ಸಣ್ಣ ಪುಟ್ಟ ಮೂಟೆ ಹೊರುವ ಕೆಲಸ ಕೂಡ ನಾನು ಮಾಡುತ್ತಿದ್ದೆ. 


ಆದರೆ ನಾನು ಒಬ್ಬರಿಗೆ ಭಾಷೆ ನೀಡಿದ್ದೆ..ಊರಿಡೀ ಪೋಸ್ಟರ್ ಹಚ್ಚುತ್ತೇನೆ ಎಂದು.


ಅದನ್ನು ಮಾತ್ರ ನಾನು ಮರೆತಿರಲಿಲ್ಲ. 


ಒಂದಲ್ಲ ಒಂದು ದಿನ ಅದು ನೆರವೇರುವುದು,ವಸು ಖಂಡಿತಾ ಮುಂದೊಂದು ದಿನ ದೊಡ್ಡ ಹೀರೋಯಿನ್ ಆಗಿಯೇ  ಆಗುತ್ತಾಳೆ ಎಂಬ ನಂಬಿಕೆ ನನಗಂತು ಇತ್ತು. 


ಅದಕ್ಕಾಗಿಯೇ ತಡರಾತ್ರಿ ಊರಿಡೀ ಸಿನಿಮಾ ಪೋಸ್ಟರ್ ಗಳನ್ನು ಹಂಚುವ ಕೆಲಸ ಕೂಡ ನಾನು ಮಾಡತೊಡಗಿದೆ. 


ಪ್ರತೀ ಬಾರಿಯೂ ಯಾವುದೇ ಸಿನಿಮಾ ನಾಯಕ ನಾಯಕಿಯರ ಪೋಸ್ಟರ್ ಹಚ್ಚುವಾಗಲೂ ನನಗೆ ವಸು ಮುಖವೇ ನೆನಪಾಗುತ್ತಿತ್ತು. ಒಂದಲ್ಲ ಒಂದು ನಮ್ಮ ವಸು ಹೀರೋಯಿನ್ ಆಗುತ್ತಾಳೆ  ಎಂಬುದು ನನ್ನ ನಂಬಿಕೆ ಮಾತ್ರವಲ್ಲ ಅವಳು ಹೀರೋಯಿನ್ ಆಗಬೇಕು ಎಂಬುದು ನನ್ನ ದಿನ ನಿತ್ಯದ ಪ್ರಾರ್ಥನೆ ಕೂಡ ಆಗಿತ್ತು. 


ವಸು ನಾನು ಶಾಲೆ ಬಿಟ್ಟ ನಂತರವೂ ಓದುವುದನ್ನು ಮುಂದುವರಿಸಿದ್ದಳು. 


ನಾನೇ ಅವಳ ಜೊತೆಗೆ ಶಾಲೆಯವರೆಗೆ ನಡೆದು ಹೋಗುತ್ತಿದ್ದೆ.ಆ ನಂತರ ಒಬ್ಬನೇ ಹಿಂದಿರುಗುತ್ತಿದೆ.ನನ್ನ ಆ ದಿನದ ಕೆಲಸ ಮಾಡಿಕೊಳ್ಳುತ್ತಿದ್ದೆ. 


ಮತ್ತೆ ಸಂಜೆ ಎಲ್ಲಾ ಕೆಲಸ ಬೇಗ ಬೇಗ ಮುಗಿಸಿಕೊಂಡು ಅವಳಿಗಾಗಿ ಅವಳ ಶಾಲೆಯ ಹೊರಗೆ ಕಾದು ನಿಲ್ಲುತ್ತಿದೆ.ಅವಳು ಬಂದ ನಂತರ ಇಬ್ಬರೂ ಮತ್ತೆ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದೆವು. 


ವಸು ನಾನು ಜೊತೆಗೆ ಇರುವಾಗ ತುಂಬಾ ಖುಷಿಯಲ್ಲಿ ಇರುತ್ತಿದ್ದಳು.ನಗುತ್ತಿದ್ದಳು.ಪುರು ಏಕೆ ನೀನು ಸದಾ ನನ್ನ ಜೊತೆಯಲ್ಲಿಯೇ ಇರಬಾರದು.. ಎಂದೇ ಹೇಳುತ್ತಿದ್ದಳು. 


ನಾನು ಮೊದಲೇ ಇದ್ದೆನಲ್ಲಾ ವಸು.. ಎಂದು ಹೇಳುತ್ತಿದ್ದೆ. 


ಹಾಗೆ ಅಲ್ಲ ಪುರು.. ನನಗೆ ಶಾಲೆಯಲ್ಲೂ ಕೂಡ ನೀನು ನನ್ನ ಜೊತೆಗೇ ಇರಬೇಕು ಎಂದು ಎಷ್ಟೋ ಸಲ ಅನಿಸುತ್ತದೆ.. ಎಂದು ಹೇಳುತ್ತಿದ್ದಳು ವಸು.


ನಾನು ಅದಕ್ಕೆ ಏನು ಹೇಳುತ್ತಿರಲಿಲ್ಲ... 


ನಿನಗೆ ಏನು ಅನಿಸುವುದಿಲ್ಲವೇ.. ಎಂದು ಅವಳೇ ಮತ್ತೆ  ಕೇಳಿದ್ದಳು. 


ಅನಿಸುತ್ತದೆ.. ಅಂದೆ. 


ಏನು..?  ಕುತೂಹಲದಿಂದ ಕೇಳಿದ್ದಳು. 


ನನಗೆ ನೀನು ದೊಡ್ಡ ಹೀರೋಯಿನ್ ಆಗುವುದನ್ನು ನೋಡಬೇಕು.. ಜೋರಾಗಿ ಸೈಕಲ್ ತುಳಿದುಕೊಂಡು ಹೋಗಿ  ನಿನ್ನ ಪೋಸ್ಟರ್ ನಾನೇ ಊರಿಡೀ ಸಂಭ್ರಮದಿಂದ ಹಚ್ಚಬೇಕು ಎಂದು ನನಗೆ ಪ್ರತೀ ದಿನಾ ಅನಿಸುತ್ತದೆ ವಸು..ಎಂದು ಹೇಳಿ ಮುಗಿಸಿದ್ದೆ ನಾನು. 


ನನ್ನನ್ನು ಖುಷಿಯಿಂದ ಹಾಗೇ ಅಪ್ಪಿಕೊಂಡು ಬಿಟ್ಟಿದ್ದಳು ಪುಟ್ಟ ಹುಡುಗಿ ವಸು. 


ಅಲ್ಲಿ ಯಾವುದೇ ಸಂಬಂಧಗಳಿಗೆ ಹೆಸರೇ ಇರಲಿಲ್ಲ.ಅದೂ ಎಲ್ಲಕ್ಕೂ ಮೀರಿದ್ದ ಬಂಧವಾಗಿತ್ತು. 


ನಾನು ಅವಳಲ್ಲಿ ಹೇಳಿಕೊಳ್ಳುವುದಕ್ಕಿಂತಲೂ ಜಾಸ್ತಿ ಅವಳು ಹೇಳುವುದನ್ನು ಕೇಳಲು ಇಷ್ಟ ಪಡುತ್ತಿದ್ದೆ.ಅವಳ ಮಾತಿಗೆ ಕಿವಿಯಾಗುತ್ತಿದೆ ನಾನು. ಅವಳು ನಗು ನನ್ನ ಕಿವಿಯನ್ನು ಮಾತ್ರವಲ್ಲ ಹೃದಯವನ್ನು ಕೂಡ ಹಾಗೇ ತುಂಬಿ ಬಿಡುತ್ತಿತ್ತು. 


ನನ್ನಲ್ಲಿ ಮಾತು ಸದಾ ಕಡಿಮೆ. 


ಆದರೆ ವಸು ನನಗೆ ಎಲ್ಲವನ್ನೂ ಹೇಳುತ್ತಿದ್ದಳು,ಶಾಲೆಯಲ್ಲಿ ಏನಾಯಿತು,ಟೀಚರ್ ಏನು ಹೇಳಿದರು, ಗೆಳೆಯರ ನಡುವೆ ಏನು ಸಂಭವಿಸಿತು,ಹೀಗೆ ಪ್ರತಿಯೊಂದನ್ನೂ ನನಗೆ ಬಂದು ಹೇಳುತ್ತಿದ್ದಳು ವಸು. 


ಕೊನೆಗೊಂದು ದಿನ ಅವಳು ಸಿನಿಮಾದಲ್ಲಿ ನಾಯಕಿ ಆದ ಮೇಲೂ ಕೂಡ... ಅವಳು ಎಲ್ಲವನ್ನೂ ಬಂದು ನನಗೆಯೇ ಹೇಳುತ್ತಿದ್ದಳು.


ಹೌದು.. ಅವಳ ಇಷ್ಟದಂತೆಯೇ ಅವಳು ಏನು ಆಗಬೇಕು ಅಂದು ಕೊಂಡಳೋ ಮುಂದೆ ಅದೇ ಆಗಿ ಬಿಟ್ಟಿದ್ದಳು. 


ಆ ದಿನ ನನಗೆ ಆದ ಖುಷಿ ಅಷ್ಟಿಷ್ಟಲ್ಲ. 


ಅವಳ ಮೊದಲ ಸಿನಿಮಾದ ಮೊದಲ ಪೋಸ್ಟರ್ ನಾನು ಊರಿಡೀ ಅತೀ ಶ್ರದ್ಧೆಯಿಂದಲೇ ಹಚ್ಚಿ ಬಿಟ್ಟಿದ್ದೆ.ಆ ದಿನ ನಾನು ತುಳಿದ ಸೈಕಲ್ ನ ವೇಗ ಎಲ್ಲಾ ದಿನಗಳಿಗಿಂತ ಅಧಿಕವಾಗಿತ್ತು. 


ಮೊದಲ ಬಾರಿಗೆ ಆ ಕೆಲಸದ ಮೇಲೆ ನನಗೆ ಇನ್ನಿಲ್ಲದ ಪ್ರಿತಿ ಉಂಟಾಗಿತ್ತು.ನಮ್ಮ ವಸು ಹಿರೋಯಿನ್ ಆಗಿದ್ದಳು. ಎಷ್ಟೋ ವರ್ಷಗಳ ಅವಳ ಕನಸು ನನಸಾಗಿತ್ತು. ಅವಳ ಕನಸೇ ನನ್ನದೂ ಕೂಡ ಆಗಿತ್ತು. ಹಾಗಾಗಿ ನನ್ನ ಕಾಲು ಆವತ್ತು ನೆಲದ ಮೇಲೆಯೇ  ಇರಲಿಲ್ಲ. 


ಅವರ ಮನೆಯ ಮುಂದೆ ಅವಳದ್ದೊಂದು ದೊಡ್ಡ ಕಟೌಟ್ ಕೂಡ ನಿಲ್ಲಿಸಿದ್ದೂ ನಾನೇ. ನಾನೇ ಕಟೌಟ್ ಹತ್ತಿ ಅವಳ ದೊಡ್ಡ ಪೋಸ್ಟರ್ ಅದಕ್ಕೆ ಸಿಕ್ಕಿಸಿದ್ದೆ. 


ಊರಿಗೆ ಬಂದಾಗ ಅವಳ ಅಷ್ಟೆತ್ತರದ ದೊಡ್ಡ ಕಟೌಟು ನೋಡಿ ವಸು ಹಿರಿ ಹಿರಿ ಹಿಗ್ಗಿದ್ದಳು. 


ಪುರು... ನೀನು ಹೇಳಿದಂತೆಯೇ ಮಾಡಿ ಬಿಟ್ಟೆ ನೋಡು.. ಅಂದಳು. 


ಅವತ್ತು ಅವಳ ಕಣ್ಣಲ್ಲಿ ನೀರಿತ್ತು. 


ಪ್ರಾಮಾಣಿಕ ಮೆಚ್ಚುಗೆಯೂ ಇತ್ತು. 


ಕೆಲವರು ದೊಡ್ಡ ತಾರೆಯರಾದ ನಂತರ ಬದಲಾಗುತ್ತಾರೆ ಎಂದು ಕೇಳಿದ್ದೆ. 


ಆದರೆ ನಮ್ಮ ವಸು ಹಾಗೆ ಆಗಲಿಲ್ಲ. 


ಊರಿಗೆ ಬಂದಾಗಲೆಲ್ಲ ಓಡೋಡಿ ನಮ್ಮ ಮನೆಗೆಯೇ ಬರುತ್ತಿದ್ದಳು. 


ನನ್ನನ್ನು ಎಳೆದುಕೊಂಡು ಊರಿನ ಬೆಟ್ಟದ ತುದಿ ಹತ್ತುತ್ತಿದ್ದಳು. 


ಏನೇನೋ ಹೇಳುತ್ತಿದ್ದಳು.. ಮನಸ್ಸು ಬಿಚ್ಚಿ ನಗುತ್ತಿದ್ದಳು. 


ನಕ್ಷತ್ರವೇ ನಕ್ಕಂತಾಗುತ್ತಿತ್ತು ನನಗೆ.ಎಷ್ಟಾದರೂ ಅವಳು ಮಳೆಯ ನಕ್ಷತ್ರದವಳೇ ಅಲ್ಲವೇ, ಅವಳು ಯಾವತ್ತೂ ಜೀವನದಲ್ಲಿ ಹೀಗೆಯೇ ನಗುತ್ತಿರಬೇಕು ಎಂದು ಮನಸಾರೆ ಹಾರೈಸುತ್ತಿದ್ದೆ.


ನನಗಾಗಿ ವಸು ಬಟ್ಟೆ ತಂದು ಕೊಡುತ್ತಿದ್ದಳು.


ನಾವಿಬ್ಬರೂ ಗುಡ್ಡದ ನೆತ್ತಿಯಲ್ಲಿ ಬಾಲ್ಯದ ದಿನಗಳಂತೆಯೇ  ಹಂಚಿಕೊಂಡು ತಿಂಡಿ ಕೂಡ ತಿನ್ನುತ್ತಿದ್ದೆವು. 


ಎಲ್ಲಿಯ ಸಿನಿಮಾ ತಾರೆ ಪುನರ್ವಸು... ಎಲ್ಲಿಯ ಪೋಸ್ಟರ್ ಹಚ್ಚುವ ಹುಡುಗ ಈ ಪುರು. 


ಆದರೆ ಅವಳು ಅಪ್ಪಟ ಬಂಗಾರ.


ಅವಳು ಎಂದಿಗೂ ಬದಲಾಗಿಯೇ ಇರಲಿಲ್ಲ.


ಎಲ್ಲವನ್ನೂ ನನ್ನ ಬಳಿ ಮುಕ್ತವಾಗಿಯೇ ಹೇಳುತ್ತಿದ್ದಳು. 


ಪುರು... ಈಗಲಾದರೂ ನೀನು ನನ್ನ ಜೊತೆ ಬಾ.. ನನ್ನೊಟ್ಟಿಗೆ ಇರು... ಎಂದು ಕೂಡ ಪದೇ ಪದೇ ಒತ್ತಾಯ ಮಾಡುತ್ತಿದ್ದಳು. 


ನಿನ್ನ ಜೊತೆ ಬಂದರೆ ನಮ್ಮ ಊರಲ್ಲಿ ನಿನ್ನ ಪೋಸ್ಟರ್ ಹಚ್ಚುವುದು ಯಾರು, ಪ್ರತೀ ಬಾರಿ ದೊಡ್ಡ ಕಟೌಟಿಗೆ ನಿನ್ನ  ದೊಡ್ಡ ದೊಡ್ಡ ಪೋಟೋ ಸಿಕ್ಕಿಸುವುದು ಯಾರು ಹೇಳು ವಸು.. ನನಗದೇ ಇಷ್ಟ.. ಅಷ್ಟೇ ಸಾಕು ಬಿಡು.. ಎಂದು ಹೇಳುತ್ತಿದ್ದೆ ನಾನು. 


ಅವಳ ಕಣ್ಣಲ್ಲಿ ಮತ್ತೆ ನೀರು ಜಿನುಗಿತ್ತು. 


ಹಾಗೇ ಬಂದು ನನ್ನನ್ನು ಮತ್ತೆ ಬಿಗಿಯಾಗಿ ಅಪ್ಪಿಕೊಂಡು ಬಿಟ್ಟಳು  ವಸು. 


ನೀನು ಬದಲಾಗುವುದಿಲ್ಲ ಪುರು... ಚಿಕ್ಕವನಿರುವಾಗ ಹೇಗೆ ಇದ್ದೆಯೋ ಇನ್ನೂ ಹಾಗೇ ಇದ್ದಿಯಾ..ಸಿನಿಮಾ ರಂಗದಲ್ಲಿ ಎಲ್ಲರಿಗೂ ನಾನೆಂದರೆ ಬಹಳ ಇಷ್ಟ.. ಆದರೆ ನನಗೆ ಯಾವತ್ತಿಗೂ ನೀನು ಮಾತ್ರ ಎಲ್ಲರಿಗಿಂತ ಹೆಚ್ಚು ಇಷ್ಟ ಪುರು.. ಅಂದು ಬಿಟ್ಟಿದ್ದಳು ವಸು. 


ಅವಳ ಅಷ್ಟೊಳ್ಳೆಯ ಮನಸ್ಸಿಗೆ ದೇವರು ಅವಳನ್ನು ಸದಾ ಸುಖವಾಗಿಟ್ಟಿರಲಿ ಎಂದೇ ಅನುದಿನವೂ ದೇವರಲ್ಲಿ ನಾನು  ಬೇಡಿಕೊಳ್ಳುತ್ತಿದ್ದೆ.


ಆದರೆ ಅವಳು ಯಾಕೋ ಆ ನಂತರ ಸುಖವಾಗಿರಲಿಲ್ಲ. 


ಅದನ್ನು ಅವಳು ನನಗೆ ಹೇಳಬೇಕಾಗಿಯೂ  ಇರಲಿಲ್ಲ. 


ಅವಳು ನನ್ನ ಬಳಿ ಬಂದು ತಣ್ಣನೆ ಕುಳಿತುಕೊಂಡಾಗಲೆಲ್ಲ ಅವಳು ಈಗ ಸುಖವಾಗಿಲ್ಲ ಎಂದೇ ನನಗೆ ಅನಿಸುತ್ತಿತ್ತು. 


ಆ ದಿನ ನಮ್ಮೂರ ಗುಡ್ಡದ ನೆತ್ತಿಯಲ್ಲಿ ಇಬ್ಬರೇ ಕುಳಿತುಕೊಂಡಾಗ... ಏನಾಯಿತು ವಸು...? ಎಂದು ಕೇಳಿ ಬಿಟ್ಟೆ. 


ಅತ್ತಳು... 


ಬಿಕ್ಕಿ ಬಿಕ್ಕಿ ಅತ್ತಳು ವಸು..! 


ಅವಳಿಗೆ ಸಮಾಧಾನ ಹೇಗೆ ಮಾಡಬೇಕು ಎಂದೇ ತೋಚಲಿಲ್ಲ ನನಗೆ.


ಏಕೆಂದರೆ ಅದಕ್ಕೂ ಮೊದಲು ಅವಳು ಆ ರೀತಿ ಅತ್ತಿದ್ದೇ ನಾನು ನೋಡಿರಲಿಲ್ಲ.


ಅವಳು ಅಂದರೆ ನನಗೆ ಬರೀ ನಗು ಅಷ್ಟೇ.


ನಕ್ಷತ್ರದಂತಹ ನಗು ಅವಳದ್ದು. 


ಆ ದಿನ ನನ್ನ ಭುಜಕ್ಕೊರಗಿ ತುಂಬಾ ಹೊತ್ತು ಅವಳು ಅಳುತ್ತಲೇ ಇದ್ದಳು. ಕಣ್ಣೀರು ಧಾರಕಾರ ಸುರಿಯುತ್ತಲೇ ಇತ್ತು. 


ಆದರೆ ಕಾರಣ ಹೇಳಲಿಲ್ಲ. 


ನಾನು ಸಹ ಬಾಯಿ ಬಿಟ್ಟು ಕೇಳಲೂ ಇಲ್ಲ. 


ಬಹುಶಃ ಏನೇನೋ ಹೇಳಿ ನನಗೆ ಬೇಜಾರು ಮಾಡುವುದು ಅವಳಿಗೂ ಇಷ್ಟವಿರಲಿಲ್ಲವೋ ಏನೋ.. ಇಲ್ಲದಿದ್ದರೆ ಅವಳೇ ನನ್ನ ಬಳಿ ಎಲ್ಲವನ್ನೂ ಹೇಳುತ್ತಿದ್ದಳು. 


ಅವತ್ತು ಎದ್ದು ಹೋಗುವಾಗ ವಸು ಮತ್ತೆ ಹೇಳಿದಳು...ಪುರು ನೀನು ತುಂಬಾ ಒಳ್ಳೆಯವನು...ದೇವರು ನಿನಗೆ ಯಾವತ್ತೂ ಒಳ್ಳೆಯದೇ ಮಾಡಬೇಕು. 


ನಾನು ಏನೂ ಹೇಳಲಿಲ್ಲ.


ಅವಳೆದುರು ನಿಂತೇ ಇದ್ದೆ. 


ವಸು ಮತ್ತೆ ಬಳಿ ಬಂದಳು, ಆಸೆಯಿಂದ ಕೇಳಿದಳು.. ಪುರು ನನ್ನ ಜೊತೆಗೆ ಬರ್ತೀಯಾ..? 


ಆದರೆ ವಯಸ್ಸಾದ ಅಜ್ಜಿ ಒಬ್ಬಳನ್ನೇ ಬಿಟ್ಟು ನಾನು ಹೋಗುವುದಾದರೂ ಹೇಗೆ. 


ಗುಡ್ಡದ ಮೇಲಿನಿಂದಲೇ ಕೆಳಗಿನ ಊರಿನಲ್ಲಿ ಎದ್ದು ಕಾಣುತ್ತಿದ್ದ ನಾನೇ ಎಬ್ಬಿಸಿ ನಿಲ್ಲಿಸಿದ್ದ ಅವಳದ್ದೊಂದು ಬೃಹತ್ ಆದ ಕಟೌಟು ಕಡೆಗೆ ಕೈ ತೋರಿಸಿ.. ನನಗದೇ ಕೆಲಸ ಇಷ್ಟ ವಸು..ಅಷ್ಟೇ ಸಾಕು.. ಅಂದೆ. 


ಅವಳ ಮುಖದಲ್ಲಿ ನಗು ಅವಶ್ಯವಾಗಿ ಇತ್ತು. 


ಆದರೆ ಈ ಬಾರಿ ಅವಳಿಗರಿವಿಲ್ಲದೇ ಅವಳ ಕಣ್ಣುಗಳೆರಡೂ ಬಹಳಷ್ಟು ತುಂಬಿಕೊಂಡು ಬಿಟ್ಟಿದ್ದವು.


ಮತ್ತೊಮ್ಮೆ ನನ್ನನ್ನು ಬೆಚ್ಚಗೆ ಹಾಗೇ ಅಪ್ಪಿಕೊಂಡಳು. 


ಆ ನಂತರ ಊರ ಕಡೆಗೆ ವಸು ಬರಲೇ ಇಲ್ಲ..!


ಒಂದು ದಿನ ಬಂದಳು. 


ಆದರೆ ಮನೆಗೆ ಅಲ್ಲ. 


ನಾನೇ ದಿನನಿತ್ಯ ಮನೆ ಮನೆಗೆ ಹಾಕುವ ಪೇಪರ್ ನಲ್ಲಿ ವಸು ಒಂದು ದೊಡ್ಡ ಸುದ್ದಿಯಾಗಿ ಬಂದಿದ್ದಳು.


" ಲೈಂಗಿಕ ಕಿರುಕುಳ ತಾಳಲಾಗದೇ ಖ್ಯಾತ ನಟಿ ಪುನರ್ವಸು ಆತ್ಮಹತ್ಯೆ...!!"


ನಾನು ಅದುರಿ ಹೋಗಿದ್ದೆ!


ನನ್ನ ಜೀವನದಲ್ಲಿ ಸೈಕಲ್ ಅನ್ನು  ಬಹಳ ನಿಧಾನಕ್ಕೆ ಕಷ್ಟ ಪಟ್ಟು ತುಳಿದದ್ದೇ ಬಹುಶಃ ಆ ದಿನ!! 


ಸಂಜೆಯ ವೇಳೆಗೆ ಅವಳ ಮೃತ ಶರೀರ ಅವಳ ಮನೆಗೂ ಬಂತು. 


ನಾನೂ ಹೋಗಿದ್ದೆ. 


ಅವಳ ಅಪ್ಪ ಅಮ್ಮ ನನ್ನನ್ನು ನೋಡಿ ನನ್ನ ಬಳಿ ಓಡೋಡಿ ಬಂದು... ನೋಡು ಪುರು..ನಮ್ಮ ವಸು ಹೋಗಿ ಬಿಟ್ಟಳು... ಹೋಗಿಯೇ ಬಿಟ್ಟಳು.. ನಿನ್ನ ಸ್ನೇಹಿತೆ ಹೋಗಿ ಬಿಟ್ಟಳು ಪುರು.. ಎಂದು ಗೋಳೋ ಎಂದು ಅತ್ತು ಬಿಟ್ಟರು.


ಅದನ್ನು ನನಗೆ ನೋಡಲೂ ಆಗಲಿಲ್ಲ. 


ನಾನದರೂ ಅವರಿಗೆ ಹೇಗೆ  ಸಮಾಧಾನ ಮಾಡಲಿ?! 


ನಾನು ಸುಮ್ಮನೆ ನಿಂತೇ ಇದ್ದೆ. 


ಕೊನೆಗೂ ಕಣ್ಣೆದುರೇ ಪುನರ್ವಸು ಬೆಂಕಿಯಲ್ಲಿ ಸುಟ್ಟು ಹೋಗಿ ಆಕಾಶದ ನಕ್ಷತ್ರವಾಗಿ ಬಿಟ್ಟಳು..! 


ನನ್ನ ಬಾಲ್ಯದ ಗೆಳತಿ ಅವಳು.


ಅವಳು ನನಗಾಗಿ ನಗುತ್ತಿದ್ದಳು.


ನನ್ನ ಜೊತೆ ಇದ್ದಾಗಲೆಲ್ಲ ಮನಸ್ಸು ಬಿಚ್ಚಿಯೇ ನಗುತ್ತಿದ್ದಳು.


ಸಮಾಜದಲ್ಲಿ ಅಷ್ಟು ದೊಡ್ಡ ವ್ಯಕ್ತಿಯಾಗಿ ಬೆಳೆದರೂ ಸಹ,ನನ್ನ ಬಳಿಗೆ ಪ್ರತೀ ಬಾರಿಯೂ ಓಡೋಡಿಯೇ ಬರುತ್ತಿದ್ದಳು,ನನ್ನನ್ನೇ ಹುಡುಕಿಕೊಂಡು ಬರುತ್ತಿದ್ದಳು.


ನನಗಾದರೂ ಯಾರು ಇದ್ದರು..?! 


ಅವಳೊಬ್ಬಳು ಇದ್ದಳು.


ಆದರೆ ಈಗ ಇಲ್ಲ..! 


ಹೇಳದೇ ಕೇಳದೆ ಎದ್ದು ಹೊರಟು ಹೋಗಿದ್ದಳು ಅವಳು. 


ಹೇಳಿ ಕೇಳಿ ನನ್ನಲ್ಲಿ ಮಾತು ಸದಾ ಕಡಿಮೆ.


ಹೆಚ್ಚೆಂದರೆ ವಸು ಬಳಿ ಅಷ್ಟೇ ನಾನು ಅಲ್ಪ ಸ್ವಲ್ಪ ಮಾತಾಡುತ್ತಿದ್ದೆ ಅಷ್ಟೇ. 


ಆ ದಿನದಿಂದ ನನ್ನಲ್ಲಿ ಮಾತು ಕೂಡ ಸತ್ತು ಹೋಯಿತು..! 



ಈಗಲೂ ನಾನು ಊರಿನ ಗೋಡೆಗಳಿಗೆ ಸಿನಿಮಾ ಪೋಸ್ಟರ್ ಹಚ್ಚುತ್ತೇನೆ. 


ಆದರೆ ಅಲ್ಲಿ ನಮ್ಮ ವಸುವಿನ ಪೋಸ್ಟರ್ ಇರುವುದಿಲ್ಲ.


ವಸುವಿನ ಮೊದಲ ಸಿನಿಮಾದ ಪೋಸ್ಟರ್ ನಿಂದ ಹಿಡಿದು ಅವಳ ಕೊನೆಯ ಸಿನಿಮಾದ  ಪೋಸ್ಟರ್ ವರೆಗಿನ,ಎಲ್ಲಾ ಪೋಸ್ಟರ್ ಸಂಗ್ರಹ ನನ್ನಲ್ಲಿ ಈಗಲೂ ಇದೆ.ಅವಳ ನೆನಪಿಗಾಗಿ ಎಲ್ಲವನ್ನೂ ಬೆಚ್ಚಗೆ ಮನೆಯಲ್ಲಿ ಎತ್ತಿಟ್ಟಿದ್ದೇನೆ. 


ದಿನ ನಿತ್ಯದ ನಾನು ಹಾಕುವ ಪೇಪರ್ ನಲ್ಲಿ ಅವಳ ಬಗ್ಗೆ ಹೊಸ ಹೊಸ ಸುದ್ದಿ ಬರುತ್ತಲೇ ಇದೆ. 


ಅವಳಿಗೆ ಹಲವಾರು ಪ್ರೇಮಗಳು ಇದ್ದವಂತೆ.. ಏನೇನೋ ಅಕ್ರಮ ಸಂಬಂಧಗಳಿದ್ದವಂತೆ..ಮಾನಸಿಕ ರೋಗಿಯಂತೆ.. ಹೀಗೆ ಅಂತೆ ಕಂತೆಗಳ ಸುದ್ದಿಗಳೇ ಪೇಪರ್ ನಲ್ಲಿ ಬರುತ್ತಿವೆ.


ಅದನ್ನೆಲ್ಲಾ ಓದುವಾಗ ನನ್ನ ಹೃದಯವೇ ಒಡೆದು ಹೋಗುತ್ತದೆ. 


ಏಕೆಂದರೆ ನಮ್ಮ ವಸು ಅಪ್ಪಟ ಬಂಗಾರ. 


ಅವಳು ಹೇಗೆ ಎಂದು ಬಹುಶಃ ನನಗಿಂತ ಚೆನ್ನಾಗಿ ಈ ಜಗತ್ತಿನಲ್ಲಿ ಯಾರಿಗೂ ಗೊತ್ತಿರಲು  ಸಾಧ್ಯವೇ ಇಲ್ಲ. 


ಆದರೆ ಯಾವ ಪೇಪರ್ ಕೂಡ ನನ್ನ ಬಳಿ ವಿಷಯ ಕೇಳಲು ಬರುವುದಿಲ್ಲ.!


ತಪ್ಪು ನನ್ನದೂ ಇತ್ತು... 


ಆ ದಿನ ವಸು ನನ್ನಲ್ಲಿ ಕೇಳಿದ್ದಳು... ಪುರು ನನ್ನ ಜೊತೆ ಬರುವೆಯಾ... ಎಂದು..? 


ನಾನು ಅದೆಂತಹ ಪಾಪಿ... 


ಸರಿಯಾಗಿ ಬಾಯಿ ಬಿಡಲೂ ಇಲ್ಲ.. ಅವಳ ಜೊತೆಗೆ ಹೋಗಲೂ ಇಲ್ಲ...! 


ಎಲ್ಲಕ್ಕಿಂತ ಹೆಚ್ಚಾಗಿ ಅವಳ ಸಮಸ್ಯೆ ಏನೆಂದೇ ನಾನು ಎಂದಿಗೂ  ಕೇಳಲೇ ಇಲ್ಲ!! 


ಈಗಲೂ ಅವಳದ್ದೊಂದು ಕಟೌಟು ಊರಿನಲ್ಲಿ ಇದೆ... 


ಮಳೆ ಬಿಸಿಲಿಗೆ ಅದು ಹರಿದಾಗ... ಮತ್ತೆ ಮತ್ತೆ ನಾನು ಅದನ್ನು ಹತ್ತಿ ಅವಳದ್ದೊಂದು ದೊಡ್ಡ ಪೋಸ್ಟರ್ ಅದರಲ್ಲಿ ಹಚ್ಚುತ್ತೇನೆ. 


ಅದರಲ್ಲಿ ಪುನರ್ವಸು ಯಾವತ್ತೂ ನಗುತ್ತಲೇ ಇರುತ್ತಾಳೆ!


ಅವಳು ಎಲ್ಲಿದ್ದರೂ ನಗುತ್ತಲೇ ಇರಬೇಕು!! 



.....................................................................................


#ಪುಷ್ಯರಾಗ 🧡


Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..