ತಿಂಡಿ ತರುವ ಅತಿಥಿಗಳು..
ಹಿಂದೆ ತುಂಬಾ ಸಣ್ಣವನಾಗಿರುವಾಗ ಸಂಬಂಧಿಕರನ್ನು ಒಳ್ಳೆಯವರು,ಕೆಟ್ಟವರು ಎಂದು ನಾನು ಈ ಕೆಳಗಿನ ಆಧಾರದಲ್ಲಿ ಗುರುತಿಸುತ್ತಿದ್ದೆ.
ಮನೆಗೆ ಬರುವಾಗ ಮಿಕ್ಷರ್, ಚಕ್ಕುಲಿ, ಸೇಮೆ, ಸೋಂಟೆ, ತುಕುಡಿ ಮುಂತಾದವುಗಳನ್ನು ಸಪರೇಟ್ ಆದ ಒಂದು ತೊಟ್ಟೆಯಲ್ಲಿ ಹಾಕಿಕೊಂಡು ತರುವ ಬಂಧುಗಳೇ ತುಂಬಾ ಒಳ್ಳೆಯವರು,ಅತೀ ಉತ್ತಮರು,ಸರ್ವೋತ್ತಮರು ಹಾಗೂ ಬರೀ ಕೈಯಲ್ಲಿ ಹೀಗೆ ಸುಮ್ಮನೆ ಕೈ ಬೀಸಿಕೊಂಡು ನಗು ನಗುತ್ತಾ ಬರುವವರು ಕೆಟ್ಟವರು,ದುಷ್ಟರು,ಕ್ರೂರಿಗಳು ಎಂದು ನನಗೆ ನಾನೇ ತಿಳಿದುಕೊಂಡಿದ್ದೆ.
ತಿಂಡಿ ತರುವ ಅಂಕುಳ್ ನಿಜ ಜೀವನದಲ್ಲಿ ಸಾಕಷ್ಟು ಕೆಟ್ಟವರೇ ಆಗಿದ್ದರೂ ಸಹ ತಿಂಡಿ ತರುವ ಏಕೈಕ ಕಾರಣಕ್ಕಾಗಿ ಅವರೇ ನಿಜವಾದ ಬಂಧು ಮಿತ್ರರು,ಬೆಸ್ಟ್ ಜನ ಇನ್ ದಿ ಫ್ಯಾಮಿಲಿ ಹಾಗೂ ತಿಂಡಿ ತರದ ಆಂಟಿ ಕಂಜೂಸ್,ಪಿಟ್ಟಾಸಿ,ಕುರೆ ಜನ ಎಂದು ನಾನು ವರ್ಗೀಕರಿಸಿ ಬಿಡುತ್ತಿದ್ದೆ.
ನಂತರ ಕಾಲೇಜು ಎಲ್ಲಾ ಮುಗಿದು ಅಂದರೆ ಈಗ ಕೆಲಸಕ್ಕೆ ಹೋಗುವ ಸಮಯದಲ್ಲಿಯೂ ಸಹ ಕೆಲವರು ಸಂಬಂಧಿಕರು ಮನೆಗೆ ಬಂದರೆ ನಮ್ಮ ಮನೆಯಲ್ಲಿ "ನನಗಿಂತ" ಚಿಕ್ಕ ಮಕ್ಕಳು ಯಾರು ಇರದ್ದಿದ್ದರೂ ಸಹ,ಈ ಹಿಂದಿನ ಅಭ್ಯಾಸ ಬಲದಿಂದಾಗಿ ಅವರು.. "ಅಂದ ಬಾಲೆ ತಿಂಡಿ ಗೆತೊನ್ಲ(ತಗೋ ಬಾಲಕ ಈ ತಿಂಡಿಯ ಪ್ಯಾಕೇಟ್).." ಅಂತ ಒಂದಷ್ಟು ತಿಂಡಿ ಪ್ಯಾಕೇಟ್ ಗಳನ್ನು ಬಂದ ಕೂಡಲೇ ನನ್ನ ಕೈಗಿಟ್ಟು ಬಿಡುತ್ತಾರೆ.
ಆಗ ನಾನು "ಹೇಯ್.. ಬೇಡ.. ಬೇಡ.. ಈಗೆಲ್ಲಾ ಎಂತ ತಿಂಡಿ ತಿನ್ಲಿಕ್ಕೆ ನಾವೇನು ಚಿಕ್ಕ ಮಕ್ಕಳಾ..ಹಹ್ಹಾ ಹಹ್ಹಾ..ಸುಮ್ನೆ ಯಾಕೆ ಇದನ್ನೆಲ್ಲಾ ತರ್ಲಿಕ್ಕೆ ಹೋದ್ರಿ..ನೀವೊಂದು ಮಾರ್ರೆ.... " ಎಂದು ಅವರೆದರು ರಾಗವಾಗಿ ಹೇಳಿ,ತಿಂಡಿ ಪೊಟ್ಟಣವನ್ನು ಮಾತ್ರ ಮರೆಯದೇ ತಗೊಂಡು ನಿರಾಸಕ್ತಿಯಿಂದ ಒಂದು ಸೈಡಿನಲ್ಲಿ ಇಡುತ್ತೇನಾದರೂ,ಅವರೆಲ್ಲರೂ ಮನೆಯಿಂದ ವಾಪಸು ಹೋದ ಮೇಲೆ ಹೆಚ್ಚಾಗಿ ಒಬ್ಬನೇ ರಾಹು ಹಿಡಿದಂತೆ ಎಲ್ಲವನ್ನೂ ತಿಂದು ಸಪಾಯಿ ಮಾಡಿ ಬಿಡುತ್ತೇನೆ.
ಅಂದ ಹಾಗೆ ಈಗೆಲ್ಲಾ ಬೇರೆ ಮನೆಗೆ ನಾವುಗಳು ಹೋಗುವಾಗ ಆ ಮನೆಯಲ್ಲಿ ಪುಟ್ಟ ಮಕ್ಕಳು ಯಾರಾದರೂ ಇದ್ದರೆ ನಾವು ಸಹ ತಿಂಡಿ ತಗೊಂಡು ಹೋಗಬೇಕಾಗುತ್ತದೆ. ಅಮ್ಮ ಅಂತು ಅದನ್ನು ಪದೇ ಪದೇ ಹೇಳಿ ಹೇಳಿಯೇ ಸಂಬಂಧಿಕರ ಮನೆಗೆ ನಮ್ಮನ್ನೆಲ್ಲಾ ಕಳುಹಿಸುವುದು.ಹೆಚ್ಚಾಗಿ ನಾನು ಕೂಡ ಏನಾದರೊಂದು ತಗೊಂಡು ಹೋಗಿಯೇ ಹೋಗುತ್ತೇನೆ.ಏಕೆಂದರೆ ನಾವು ಚಿಕ್ಕವರಿರುವಾಗ ಇದ್ದಂತೆಯೇ ಈ ಮಕ್ಕಳ ಮನಸ್ಥಿತಿ ಕೂಡ ಅಲ್ವಾ ಅಂತ ನನ್ನದೂ ಕೂಡ ಒಂದು ಭಾವನೆ ಅಷ್ಟೇ.ಮಾತ್ರವಲ್ಲ ಹೆಚ್ಚಾಗಿ ಎಲ್ಲಾ ಕಡೆ ಅದೊಂದು ಸಂಪ್ರದಾಯವೇ ಆಗಿದೆ,ಮಕ್ಕಳಿರುವ ಮನಗೆ ಖಾಲಿ ಕೈಯಲ್ಲಿ ಹೋಗದೆ,ತಿಂಡಿಯೋ,ಹಣ್ಣೋ ಏನಾದರೊಂದು ತಗೊಂಡು ಹೋಗಬೇಕು ಎಂದು.ಮಕ್ಕಳಿರದಿದ್ದರೂ ಏನಾದರೊಂದು ತಗೊಂಡು ಹೋಗುವುದು ಶಿಷ್ಟಾಚಾರದ ಭಾಗವೇ ಆಗಿದೆ.
ಆದರೆ ಕೆಲವೊಮ್ಮೆ ಈ ಕೆಲಸ ಕಾರ್ಯದ ಒತ್ತಡ,ಮರೆವಿನ ಕಾರಣದಿಂದಾಗಿ ಬೇರೆ ಮನೆಗೆ ಹೋಗುವಾಗ ಈ ತಿಂಡಿ ತಗೊಂಡು ಹೋಗುವುದೇ ನನಗೆ ಎಷ್ಟೋ ಸಲ ಮರೆತು ಹೋಗಿ ಬಿಡುತ್ತದೆ.
" ಅಯ್ಯೋ ಶೇ.. ತಿಂಡಿ ತಗೊಂಡು ಬರ್ಲಿಕ್ಕೆ ನೆನಪೇ ಆಗ್ಲಿಲ್ಲ .." ಅಂತ ನಾನೇದರೂ ಅಲ್ಲಿಗೆ ಹೋಗಿ ಅವರೆದರು ತಲೆಯ ಮೇಲೆ ಕೈ ಹೊತ್ತುಕೊಂಡು ಹೇಳಿದ್ರೆ,ಆ ಮನೆಯ ಮಕ್ಕಳು" ಪರವಾಗಿಲ್ಲ... ಪರವಾಗಿಲ್ಲ....ತಿಂಡಿ ಎಲ್ಲಾ ಯಾಕೆ ಸುಮ್ನೆ .." ಅಂತ ಮುಗ್ಧವಾಗಿ ರಾಗವಾಗಿಯೇ ಹೇಳ್ತಾರೆ.
ಆದರೆ ವಿಷಯ ಅದಲ್ಲ,ನಾನು ಸ ಸಣ್ಣವನಾಗಿರುವಾಗ ಯಾರಾದರೂ ಹೀಗೆ ತಿಂಡಿ ತರುವುದನ್ನು ಮರೆತು ಬಿಟ್ಟು ನನ್ನೆದುರು ಪೇಚಾಡಿದಾಗ ಹೀಗೆಯೇ ಅವರಿಗೆ.. ಪರವಾಗಿಲ್ಲ.. ಪರವಾಗಿಲ್ಲ.. ತಿಂಡಿ ಎಲ್ಲಾ ಯಾಕೆ.. ಎಂದು ಸಮಾಧಾನ ಹೇಳುತ್ತಿದ್ದೆ.ಆದರೆ ಮನಸ್ಸಿನಲ್ಲಿ ಮಾತ್ರ ಕಂಡಾಬಟ್ಟೆ ಬೈಯುತ್ತಿದ್ದೆ ಆಯ್ತ.ಈಗ ನನ್ನ ಕುತೂಹಲ ಏನೆಂದರೆ..ಈ ಪರವಾಗಿಲ್ಲ,ತಿಂಡಿ ಬೇಡ ಅಂತ ಹೇಳಿದ ಮಕ್ಕಳು ಸ ನನಗೆ ಮನಸ್ಸಿನಲ್ಲಿ ಎಷ್ಟೊಂದು ಬೈದಿರ್ಲಿಕ್ಕಿಲ್ಲ ಅಲ್ವಾ... ಪೆದಂಬು(ಸಭ್ಯ ಭಾಷೆಯಲ್ಲಿ) ಸಹ ಏ..ನಾ..ದ..ರೂ ನನಗೆ ಬೈದಿರಬಹುದಾ ಈ ಮಕ್ಕಳು ಎಂಬುದೇ ಕೆಲವೊಮ್ಮೆ ನನ್ನನ್ನು ಕಾಡುವ ದೊಡ್ಡ ಪ್ರಶ್ನೆಯಾಗಿರುತ್ತದೆ...?!
ab
Comments
Post a Comment