ಬ್ಯಾಟು ಬಾಂಬುಗಳೊಂದಿಗೆ ಕ್ರಿಕೆಟ್ ಆಡಲಾಗುವುದಿಲ್ಲ..!




ನಿನ್ನೆ ಪಾಕಿಸ್ತಾನ ಕ್ರಿಕೆಟ್ ಗೆ ಸಂಬಂಧಿಸಿದಂತೆ ವಿಚಿತ್ರ ವಿದ್ಯಮಾನವೊಂದು ಸಂಭವಿಸಿದೆ. 


ನಿಜ ಹೇಳಬೇಕೆಂದರೆ ವಿಶ್ವ ಕ್ರಿಕೆಟ್‌ ನಲ್ಲಿ ಬೇರೆ ಎಲ್ಲಾದರೂ ಅಂತಹದ್ದೊಂದು ಘಟನೆ ಸಂಭವಿಸಿದ್ದರೆ ಆಗ ಮಾತ್ರ ಅದನ್ನು ಅಚ್ಚರಿಯ ಘಟನೆ,ಶಾಕಿಂಗ್ ಸಂಗತಿ ಅಂತೆಲ್ಲಾ ಹೇಳಿ ವ್ಯಾಖ್ಯಾನಿಬಹುದಿತ್ತು.ಆದರೆ ಇದು ಪಾಕಿಸ್ತಾನದಲ್ಲಿ ನಡೆದಿರುವುದರಿಂದ...ಇದು ಅಲ್ಲಿಯದ್ದೊಂದು ಸರ್ವೇ ಸಾಮಾನ್ಯವಾದ ವಿಷಯ,ಭಾರತೀಯರಿಗಂತು ಬಹು ನಿರೀಕ್ಷಿತ ಹಾಗೂ ಎಂದಿನಂತೆ ಒಂದು ಮಾಮೂಲಿ ಸಂಗತಿ ಅಷ್ಟೇ ಎಂದು ಹೇಳಬಹುದು!


ಆಗಿದ್ದು ಇಷ್ಟು... .


ನಿನ್ನೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ  ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಮೊದಲ ಏಕದಿನ ಪಂದ್ಯ ಆಡಬೇಕಿತು. ಪಾಕಿಸ್ತಾನದಲ್ಲಿ ಅಂತು ಸಂಭ್ರಮದ ಜಾತ್ರೆ..ನೋಡಿ ನಮ್ಮಲ್ಲಿ ಎಲ್ಲರೂ ಬಂದು ಕ್ರಿಕೆಟ್ ಆಡುತ್ತಿದ್ದಾರೆ,ಜಿಂಬಾಬ್ವೆ,ಶ್ರೀಲಂಕಾ ಮಾತ್ರವಲ್ಲ ನ್ಯೂಜಿಲೆಂಡ್ ನಂತಹ ಶ್ರೇಷ್ಠ ತಂಡಗಳು ಕೂಡ ಬಂದು ನಮ್ಮ ನೆಲದಲ್ಲಿಯೇ ಆಡಲು ಮನಸ್ಸು ಮಾಡಿದೆ,ನಾವು ಜಗತ್ತಿನ ಸೇಫೆಸ್ಟ್ ಕಂಟ್ರಿ.. ಎಂದೆಲ್ಲಾ ಹೇಳಿದ್ದೇ ಹೇಳಿದ್ದು ಅವರುಗಳು.



ಅಷ್ಟು ಮಾತ್ರವಲ್ಲ ನ್ಯೂಜಿಲೆಂಡ್ ನ ಕ್ರಿಕೆಟಿಗ ಮಾರ್ಟಿನ್ ಗಪ್ಟಿಲ್ ಕೂಡ "ನಾವು ಇಲ್ಲಿ ಅತ್ಯಂತ ಸುರಕ್ಷಿತರಾಗಿದ್ದೇವೆ.. ನಮಗೆ ಯಾವುದೇ ಭಯವಿಲ್ಲ" ಎಂಬ ಮಾತು ಸಹ ಹೇಳಿದ್ದ. ಆದರೆ ಆತ ಅಷ್ಟೇ ಹೇಳಿದ್ದರೆ ಅದು ತೀರಾ ಸಹಜವಾಗಿರುತ್ತಿತ್ತು. ಆದರೆ ಗಪ್ಟಿಲ್ "ನಮ್ಮ ಹಿಂದೆ ಡಜನ್ ಗಟ್ಟಲೆ ಪೋಲಿಸರು ಕಾರಿನಲ್ಲಿ, ಬೈಕಿನಲ್ಲಿ ಸುತ್ತುವರಿದು ನಿರಂತರವಾಗಿ ರಕ್ಷಣೆ ನೀಡುತ್ತಲೇ ಇದ್ದಾರೆ.." ಎಂಬುದನ್ನು ಸೇರಿಸಿ ಹೇಳುವಾಗಲೇ ಇಲ್ಲಿ ಏನೋ ಗೋಳಿಬಜೆ ಆಗ್ತದೆ ಎಂದು ಯಾರಿಗೆ ಆಗಲಿ ಅನ್ನಿಸದೇ ಇರಲಿಲ್ಲ.ಅಲ್ಲೊಂದು ಉಸಿರುಗಟ್ಟಿಸುವ ವಾತಾವರಣವೇ ಇದೆ ಎಂದು ಗಪ್ಟಿಲಣ್ಣ ಹೇಳಿದ್ದರೆ ಬಹುಶಃ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು.


ಕೊನೆಗೆ ಆಗಿದ್ದೂ ಅದೇ.


ನ್ಯೂಜಿಲೆಂಡ್ ತಂಡ ರಾವಲ್ಪಿಂಡಿಯಲ್ಲಿ ನಿನ್ನೆ ಪಾಕಿಸ್ತಾನದೊಂದಿಗೆ ಆಡಲು ಮೈದಾನಕ್ಕೆ ಇಳಿಯದೇ,ಭದ್ರತೆಯ ನೆಪ ಒಡ್ಡಿ ಅದು ಪಾಕಿಸ್ತಾನದಲ್ಲಿ ಆಡಬೇಕಿದ್ದ 3 ಏಕದಿನ ಹಾಗೂ 5 ಟಿ-ಟ್ವೆಂಟಿ ಪಂದ್ಯಗಳನ್ನು ಯಾವುದೇ ಕಾರಣಕ್ಕೂ ನಾವು ಇನ್ನು ಮುಂದೆ ಆಡಲಾರೆವು ಎಂದು ಹೇಳಿಕೊಂಡು ಆಟದಿಂದ ಹಿಂದೆ ಸರಿದು ಬಿಟ್ಟಿತು!!


ಹೌದು ಆಗಿದ್ದು ಇಷ್ಟು.


ಪಾಕಿಸ್ತಾನ ಎಂಬ"ಅಶಾಂತಿ ಪ್ರಿಯರ" ದೇಶವೊಂದು  ನ್ಯೂಜಿಲೆಂಡ್ ಎಂಬ ತಣ್ಣನೆಯ ಹುಡುಗರ ಈ ಅನಿರೀಕ್ಷಿತ ವರ್ತನೆಯ ನಂತರ ವಿಶ್ವ ಕ್ರಿಕೆಟ್ ನ ಮುಂದೆ ಎಷ್ಟೊಂದು ಆಕ್ರಂದನ ಮಾಡಿತು ಎಂದರೆ.. ನ್ಯೂಜಿಲೆಂಡ್ ನಮ್ಮ ದೇಶದ ಮಾರ್ಯಾದೆಯನ್ನೇ ತೆಗೆಯಿತು, ಪಾಕಿಸ್ತಾನ ಕ್ರಿಕೆಟ್ ಅನ್ನು ಅದು  ಕೊಂದೇ ಬಿಟ್ಟಿತು,ಇನ್ನು ಪಾಕಿಸ್ತಾನ ಕ್ರಿಕೆಟ್ ಅಷ್ಟೇ,ಇನ್ನು ಯಾರೂ ಇಲ್ಲಿಗೆ ಬರಲ್ಲ,ನಾವು ಸತ್ತೆ ಬಿಟ್ಟೆವು, ಮಾಟ್ಯಾಶ್ ಆಗಿ ಬಿಟ್ಟೆವು.. ಎಂದು ಬಳೆ ಹೊಡೆದುಕೊಂಡಂತೆ ಕಣ್ಣೀರು ಹಾಕಿ ಬಿಟ್ಟಿತು ಪಾಕಿಸ್ತಾನ.ಶಾಹಿದ್ ಆಫ್ರಿದಿ,ಶೋಯಿಬ್ ಅಖ್ತರ್, ದ್ಯಾನಿಶ್ ಕನೇರಿಯಾ, ಬಾಬರ್ ಅಜಂ ಎಲ್ಲರೂ ಆಕ್ರೋಶದಿಂದ ಅತ್ತಿದ್ದೇ ಅತ್ತಿದ್ದು.



ಇತ್ತೀಚಿಗೆ ಅಷ್ಟೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನ 36ನೇ ಚೇರ್ಮೆನ್ ಆಗಿ ಅಧಿಕಾರ ವಹಿಸಿಕೊಂಡ ರಮೀಝ್ ರಾಜನಿಗೆ ಗಂಟಳೊಳಗೆ ಬಿಸಿ ಬಿಸಿ ವಡೆಗಳನ್ನು ಒಮ್ಮೆಗೆ ತುರುಕಿಕೊಂಡ ಅನುಭವ. ನ್ಯೂಜಿಲೆಂಡ್ ಅನ್ನು ಬಿಡುವುದಿಲ್ಲ, ಇಂತಹ ಒಂದು ಘನಘೋರ ಕಾರ್ಯ ಮಾಡಿದ್ದಕ್ಕಾಗಿ ಅವರನ್ನು ನಾವು ICC ಕಟಕಟೆಯಲ್ಲಿ ನಿಲ್ಲಿಸುತ್ತೇವೆ.. ಆಗ ನ್ಯೂಜಿಲೆಂಡ್ ಏನು ಹೇಳುತ್ತದೆ ಎಂದು ಕೇಳಬೇಕು.. ಎಂದೆಲ್ಲಾ ಹತಶನಾಗಿ ಹೇಳಿ ಬಿಟ್ಟ ಈ ರಮೀಝ್ ರಾಜ. 


ಮೈಕಲ್ ವಾನ್, ಡ್ಯಾರೆನ್ ಸಮಿ,ಜಾಂಟಿ ರೋಡ್ಸ್ ಸೇರಿದಂತೆ ವಿಶ್ವ ಕ್ರಿಕೆಟ್ ನ ಅನೇಕ ಆಟಗಾರರು ನ್ಯೂಜಿಲೆಂಡ್ ನ ಈ ವರ್ತನೆಗೆ ಚೀಮಾರಿ ಹಾಕುವ ಜೊತೆ ಜೊತೆಗೆ ಅಯ್ಯೋ ಪಾಪ ಇನ್ನು ಪಾಕಿಸ್ತಾನದಲ್ಲಿ ಕ್ರಿಕೆಟ್ ಅಷ್ಟೇ ಎಂದೆಲ್ಲ ಹೇಳಿ ಪಾಕಿಸ್ತಾನದಲ್ಲಿ ಸದ್ಯಕ್ಕೆ ಹೊತ್ತಿ ಉರಿಯುತ್ತಿರುವ ಹತಾಶೆಯ ಬೆಂಕಿಗೆ ಮತ್ತಷ್ಟು ತುಪ್ಪವನ್ನೇ  ಸುರಿದು ಬಿಟ್ಟರು. ಪಾಪ...ಹೇಗಾಗಬೇಡ ಜೀವ.

ಪಾಪಿ ಪಾಕಿಸ್ತಾನ ಇದನ್ನೆಲ್ಲಾ ತಡೆದುಕೊಳ್ಳುವುದಾದರೂ ಹೇಗೆ..! 


ಜಗತ್ತು ಇಂದು ನ್ಯೂಜಿಲೆಂಡ್ ಗೆ ಸಿಕ್ಕಾಪಟ್ಟೆ ಬೈಯಬಹುದು.ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಅವರಿಗೆ ಅಕಲ್ ಇರಲಿಲ್ಲವಾ.. ತಲೆ ಸರಿ ಇರಲಿಲ್ಲವಾ.. ಹೀಗೆಲ್ಲಾ ಮಾಡುವುದಾದರೆ ಆಡಲಿಕ್ಕೆ ಬಂದಿದ್ದಾರೂ ಏಕೆ? ಎಂದೆಲ್ಲಾ ಎಲ್ಲರೂ ಬಹಳ ಸುಲಭವಾಗಿ ಅವರನ್ನು ಈಗ ಪ್ರಶ್ನಿಸಬಹುದು. 


ಆದರೆ ಎಲ್ಲರಿಗೂ ಒಂದು ನೆನಪಿರಬೇಕು ಸುರಕ್ಷತೆ ಹಾಗೂ ಭದ್ರತೆಯ ವಿಷಯ ಬಂದಾಗ ಅದರಲ್ಲೂ ಜೀವ ಭಯ ಇರುವಾಗ ಆಡಬೇಕೇ, ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳಲು ಜಗತ್ತಿನ ಯಾವುದೇ ದೊಡ್ಡ ಇಲ್ಲ ಪುಟ್ಟ ರಾಷ್ಟ್ರಕ್ಕೂ ಸಹ ಆಟ ಆರಂಭ ಆಗುವ ಯಾವುದೇ ಕ್ಷಣಕ್ಕೂ ಮೊದಲು ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳಲು ಅಧಿಕಾರವಿದೆ ಮತ್ತು ಎಂದೆಂದಿಗೂ ಅವುಗಳು ಸ್ವತಂತ್ರವಾಗಿದೆ. 


ಭಾವುಕತೆಗೂ ಮಿಗಿಲಾಗಿ ಇದು ಅತೀ ಸರಳ ಅಷ್ಟೇ ಸಿಂಪಲ್ ವಿಷಯ. ರೀ ಜೀವ ಇದ್ದರೆ ತಾನೇ ಆಟ ಆಡಲು ಸಾಧ್ಯ ..?


ಈ ಪ್ರಶ್ನೆಗೆ ಬಹುಶಃ ಎಲ್ಲರ ಉತ್ತರ ನಿನ್ನೆ ನ್ಯೂಜಿಲೆಂಡ್ ತಂಡ ನೀಡಿದ್ದೇ ಆಗಿರುತ್ತದೆ.


ಇಲ್ಲ ಎಂತಹ ಬಾಂಬು ದಾಳಿ ದಾಳಿ,ಗ್ರೇನೆಡ್ ದಾಳಿ,ಕ್ಷಿಪಣಿ ದಾಳಿ ಸುತ್ತ ಮುತ್ತ ಆಗುತ್ತಿದ್ದರೂ ನಾವು ನಿರ್ಭೀತಿಯಿಂದ ಗ್ರೌಂಡಿನಲ್ಲಿ ಕ್ರಿಕೆಟ್ ಆಡಲು ರೆಡಿ ಎಂಬ ಮನಸ್ಥಿತಿ ಪಾಕಿಸ್ತಾನ ಕ್ರಿಕೆಟ್ ಗೆ  ಇರಬಹುದು,ಏಕೆಂದರೆ ದಿನ ನಿತ್ಯ ಅದರ ನಡುವೆ ಕ್ರಿಕೆಟ್ ಆಡಿದವರಿಗೆ ಅದೊಂದು ಸಾಮಾನ್ಯ ವಿಷಯವೇ ಬಿಡಿ.. ಆದರೆ ನಿಮ್ಮಂತಹ ಮರ್ಲರೊಟ್ಟಿಗೆ ಆಡುವ ಅಂತಹ  ಭಂಡ ಧೈರ್ಯ ಉಳಿದ ದೇಶಗಳಿಗೆ  ಇರಬೇಕಲ್ಲವೇ?! ಅದರಲ್ಲೂ ನ್ಯೂಜಿಲೆಂಡ್ ಗೆ ಅದು ಸಾಧ್ಯವೇ ಇಲ್ಲ ಬಿಡಿ. 


ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಎದೆ  ಹೊಡೆದುಕೊಂಡು ಅಳುವ ದೃಶ್ಯಗಳನ್ನು ನೋಡಿದರೆ ಅಲ್ಲೇನೋ ಭೀಕರ ಭೂಕಂಪ ಆಗಿದೆ, ಸುನಾಮಿ ಬಂದು ರಾವಲ್ಪಿಂಡಿಯನ್ನು ಕೊಚ್ಚಿಕೊಂಡು ಹೋಗಿದೆ ಅನ್ನೋ ಫೀಲ್ ಬರುತ್ತದೆ.ಜಗತ್ತು ಅವರಿಗೆ ನಿನ್ನೆಯಿಂದಲೇ ಸಿಕ್ಕಾಪಟ್ಟೆ ಅನುಕಂಪ ತೋರಿಸುತ್ತಿದೆ ಮತ್ತು ನ್ಯೂಜಿಲ್ಯಾಂಡ್ ಅನ್ನು ಎಲ್ಲರೂ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 


ನಮ್ಮಲ್ಲೂ ಕೆಲವು ಅಂಡೆ ಪಿರ್ಕಿಗಳು ಇದ್ದಾರೆ ಪಾಕಿಸ್ತಾನ ಕ್ರಿಕೆಟ್ ಗೆ ಸಂಬಂಧಿಸಿದಂತೆ ವಿಶೇಷ ಮೊಹಬತ್ ಹೊಂದಿರುವವರು. ಟೀಮ್ ಇಂಡಿಯಾ ಕೂಡ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಪುನರಾರಂಭಿಸಬೇಕು,ಎರಡು ದೇಶಗಳ ರಾಜತಾಂತ್ರಿಕ ವಿಷಯವೇ ಏನೇ ಇರಲಿ, ಅದೇ ಬೇರೆ ಆಟವೇ ಬೇರೆ, ದ್ವೇಷವೇ ಬೇರೆ ಕ್ರೀಡಾ ಧರ್ಮವೇ ಬೇರೆ.. ಆಟವನ್ನು ಆಟದ ರೀತಿ ನೋಡಿ... ಎಂದೆಲ್ಲಾ ರೈಲು ಬಿಡುವ, ಬುದ್ದಿ ಹೇಳುವ ವಿಶಾಲ ಹೃದಯದ ಬುದ್ಧಿ ಜೀವಿಗಳು ನಮ್ಮ ದೇಶದಲ್ಲಿಯೂ ಬಹಳಷ್ಟು ಇದ್ದಾರೆ. 


ನಿಜ, ಕ್ರೀಡೆಯನ್ನು ಕ್ರೀಡೆಯಾಗಿಯೇ ನೋಡಬೇಕು.ಕ್ರಿಡಾಭಿಮಾನಿಯಾಗಿ ನಾನು ಸಹ ಅದನ್ನು ಒಪ್ಪುತ್ತೇನೆ.ಎದುರಾಳಿಯನ್ನು ಗೌರವಿಸುವುದು,ಗೆದ್ದಾಗ ಅಭಿನಂದಿಸುವುದು ಇದ್ದೆಲ್ಲವೂ ಸರಿಯೇ.ಆದರೆ ಅದನ್ನು ನಾವು ಜಗತ್ತಿನ ಬೇರೆ ಎಲ್ಲಾ ದೇಶಗಳ ಜೊತೆ ಮಾಡೋಣ ಆದರೆ ಪಾಕಿಸ್ತಾನದ ಎಂಬ ಪೀಡೆಯೊಂದಿಗೆ ಮಾತ್ರ ಎಂದಿಗೂ ಬೇಡ ಎನ್ನುವುದೇ ನನ್ನ  ಎಂದಿನ ಅಭಿಪ್ರಾಯ.


ಕೆಲವು ಶಾಂತಿ ಪ್ರಿಯರಿಗೆ ಇದು ಪೂರ್ವಾಗ್ರಹ ಪೀಡಿತ ಮನಸ್ಥಿತಿ, ವಿಘ್ನ ಸಂತೋಷಿ ಅಂತೆಲ್ಲಾ ಅನಿಸಬಹುದು.ಇರಲಿ ಆದರೂ ಯಾಕೆ ಅವರೊಂದಿಗೆ ಕ್ರಿಕೆಟ್ ಬೇಡ,ಯಾವುದೇ ಕ್ರೀಡಾ ಇಲ್ಲವೇ ಪ್ರೇಮದ ಸಂಬಂಧ ಬೇಡ ಎನ್ನುವುದಕ್ಕೆ ಕಾರಣ ಕೂಡ ಕೊಡುತ್ತೇನೆ. 


ನೋಡಿ ಪಾಕಿಸ್ತಾನದೊಂದಿಗೆ ನಮ್ಮ ದೇಶ ಈ ಕ್ರಿಕೆಟ್ ಸಂಬಂಧವನ್ನು ಕಡಿದುಕೊಂಡಿದ್ದೇ ಅದೊಂದು ಉಗ್ರಗಾಮಿ ದೇಶ, ಭಯೋತ್ಪಾದಕರನ್ನು ಇನ್ನಿಲ್ಲದಂತೆ ಪೋಷಿಸಿ ಬೆಳೆಸುವ  ದೇಶ ಎಂದು. ನೀವು ಭಯೋತ್ಪಾದನೆ ಬಿಡಿ,ನಾವು ಕ್ರಿಕೆಟ್ ಆಡುತ್ತೇವೆ.. ಎರಡೂ ಒಟ್ಟೊಟ್ಟಿಗೆ ಸಾಧ್ಯವಿಲ್ಲ ಎಂದು ಹೇಳಿದ ಕೇಂದ್ರ ಸರ್ಕಾರದ ನಿಲುವು ಬಹಳಷ್ಟು ಸರಿಯಾಗಿಯೇ ಇದೆ.


ಆ ದೇಶದ ಮರ್ಲಿಗೆ, ಅಲ್ಲಿಯ ಭಯೋತ್ಪಾದಕರ ಇನ್ನಿಲ್ಲದ ಹುಚ್ಚಾಟಕ್ಕೆ ನಮ್ಮ ದೇಶದ ಸೈನಿಕರು ಬಲಿಯಾಗುತ್ತಿದ್ದರೆ... ನಾವು ಅವರೊಂದಿಗೆ ಇನ್ನೊಂದು ಕಡೆಯಲ್ಲಿ ಹೋಗಿ ಕ್ರಿಕೆಟ್ ಆಡಬೇಕೆ??


ಅಂತಹ ಆಟ ಇದ್ದರೆಷ್ಟು ಬಿಟ್ಟರೆಷ್ಟು... ದೇಶಕ್ಕೂ,ಸೈನಿಕರಿಗೂ ಮಿಗಿಲಾದದ್ದು ಕ್ರಿಕೆಟ್ ಅಲ್ಲ! 


ಅಂದ ಹಾಗೆ ಪಾಕಿಸ್ತಾನ ಜನರಿಗೆ ಮತ್ತು ಇಲ್ಲಿರುವ ಕೆಲವು ಪಾಕ್ ಪ್ರೇಮಿ ಕ್ರಿಡಾಭಿಮಾನಿಗಳಿಗೆ ಇದು ಯಾವತ್ತೂ ಅರ್ಥ ಆಗಿದ್ದೇ ಇಲ್ಲ.ಆದರೆ ಪ್ರತೀ ಸಲ ಆ ನೆಲದ ಉಗ್ರರ ರಕ್ತದಾಹಕ್ಕೆ ಬಲಿಯಾಗುತ್ತಿದ್ದದ್ದು ನಮ್ಮ ದೇಶದ ಮುಗ್ಧ ಜನರು ಹಾಗೂ ನಮ್ಮ ದೇಶದ ವೀರ ಸೈನಿಕರೇ ಆಗಿರುತ್ತಿದ್ದರು. ಆಗ ಅವರಿಗೆ ಇದು ಯಾವುದೂ ಶೇಮ್ ಆಗುತ್ತಿರಲಿಲ್ಲ. ಅದನ್ನವರು ಎಂಜಾಯ್ ಮಾಡುತ್ತಿದ್ದರು.ಅದೇ ರೀತಿ ಪಾಕಿಸ್ತಾನ ಕೂಡ ಎಂದಿಗೂ ಒಪ್ಪಿಕೊಂಡೇ ಇಲ್ಲ ನಾವೇ ಈ ಉಗ್ರರ ಹಿಂದಿರುವುದು ಎಂದು.ಯಾವ ದೇಶ ತನ್ನನ್ನು ತಾನು ಉಗ್ರದೇಶ ಎಂದು ಹೇಗೆ ಒಪ್ಪಿಕೊಳ್ಳುತ್ತದೆ ಹೇಳಿ! 


ಆದರೆ ನಿನ್ನೆ ನ್ಯೂಜಿಲೆಂಡ್ ಏನು ಮಾಡಿದೆ ನೋಡಿ.. ಅದು ಬಹಳ ಸರಿಯಾಗಿಯೇ ಮಾಡಿದೆ. ಹೌದು  ಭಾರತೀಯರು ಶಹಭಾಷ್ ಹೇಳಬೇಕಾದದ್ದು ಈಗ ನ್ಯೂಜಿಲೆಂಡ್ ಗೆಯೇ ಹೊರತು,ಅವರನ್ನು ಟೀಕಿಸುವುದರಲ್ಲಿ ಯಾವುದೇ ಅರ್ಥವಿಲ್ಲ. 


ಏಕೆಂದರೆ ಪಾಕಿಸ್ತಾನದ ಜನರಿಗೆ, ಅಲ್ಲಿಯ ಸರ್ಕಾರಕ್ಕೆ ಈ ಉಗ್ರರರೊಂದಿಗೆ ದೋಸ್ತಿ ಮಾಡಿದರೆ.. ಜಗತ್ತು ಯಾವ ರೀತಿ ಅವರನ್ನು ಟ್ರೀಟ್ ಮಾಡುತ್ತದೆ ಎಂದು ಮೊದಲು ಅರಿವಾಗಬೇಕಿದೆ! 


ಬಹುಶಃ ಈಗ ಸರಿಯಾಗಿಯೇ ತಟ್ಟಿದೆ ಬಿಡಿ! 


ಪಾಕಿಸ್ತಾನದ ಜನರಿಗೆ.. ಅಲ್ಲಿಯ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಅಲ್ಲಿಯ ಕ್ರಿಕೆಟ್ ಆಟಗಾರರಿಗೆ ಪಾಕಿಸ್ತಾನದಲ್ಲಿ ನಿಜವಾಗಿಯೂ ಕ್ರಿಕೆಟ್ ಆರಂಭವಾಗಬೇಕು ಎಂಬ ಕನಸು ಆಸೆ ಎಲ್ಲವೂ  ಇದ್ದರೆ ಮೊದಲು ಮಾಡಬೇಕಾದ ಕೆಲಸ ವೆರಿ ಸಿಂಪಲ್.... ನಿಮ್ಮದೇ ಸರಕಾರಕ್ಕೆ ಭಯೋತ್ಪಾದಕರ ಸಂಗ ಬಿಡಲು ಹೇಳಿ! ಆ ನಂತರ ಕ್ರಿಕೆಟ್ ಆಡಲು ನಿಮ್ಮಲ್ಲಿಗೆ ಎಲ್ಲರೂ ಬರುತ್ತಾರೆ. ಹೇಗೆ ಬಂದೂಕು ಗಳ ಪಹರೆ ಇಲ್ಲದೆಯೂ ವಿಶ್ವದೆಲ್ಲೆಡೆ ಈಗ ನಿರ್ಭಿತವಾಗಿ ಕ್ರಿಕೆಟ್ ನಡೆಯುತ್ತದೆಯೋ ಅದೇ ರೀತಿ ಕ್ರಿಕೆಟ್ ನಿಮ್ಮ ದೇಶದಲ್ಲೂ ಸಾಧ್ಯ. 


ಆದರೆ ಅಷ್ಟೊಂದು ಧೈರ್ಯ.. ಅಂದರೆ ಪಾಕಿಸ್ತಾನ ಸರ್ಕಾರಕ್ಕೆ ನೇರವಾಗಿ ಭಯೋತ್ಪಾದನೆ ಬಿಡಿ,ನಮಗೆ ಕ್ರಿಕೆಟ್ ಬೇಕು.. ಇಲ್ಲದಿದ್ದರೆ ಇಲ್ಲಿ ಕ್ರಿಕೆಟ್ ಆಡಲು ಯಾರೂ ಬರುವುದಿಲ್ಲ ಎಂದು ಹೇಳುವ ಆ ಧೈರ್ಯ ನಿಮಗೆ ಇದೆಯೇ...? 


ಖಂಡಿತವಾಗಿಯೂ ಇಲ್ಲ ಬಿಡಿ! 


ಹಾಗಾದರೆ ಜಗತ್ತಿಗೆ ಬೈಯುವುದನ್ನು ಮೊದಲು ನಿಲ್ಲಿಸಿ. ಬಾಂಬು ಮತ್ತು ಬಾಲು ಎರಡನ್ನೂ ಒಟ್ಟಿಗೆ ಎಲ್ಲೂ ಹಾಕಲಾಗುವುದಿಲ್ಲ. ನಿಮ್ಮ ನೆಲದಲ್ಲಿ ಬರೀ ಬಾಂಬೇ ಹಾಕುತ್ತಿರಿ.. ಏನು ಬಿತ್ತುತ್ತಿರೋ ಅದನ್ನೇ ಬೆಳೆಯುತ್ತಿರಿ ಎಂಬ ಮಾತಿದೆ. ಅದು ಅಕ್ಷರಶಃ ಸತ್ಯ ಮತ್ತು ಅದನ್ನು ಈ ಸಮಯದಲ್ಲಿ ನಿಮಗೆಯೇ ಹೇಳಿದ್ದು! 


#Cricket

ab pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..