ಅವಳ ಕಣ್ಣಲ್ಲೊಂದು ಉಕ್ಕೇರಿದ ನೇತ್ರಾವತಿ..


                                      " ಪುಷ್ಯರಾಗ "

                (ಅವಳ ಕಣ್ಣಲ್ಲೊಂದು ಉಕ್ಕೇರಿದ ನೇತ್ರಾವತಿ..) 


ಅವಳು ತುಂಬಾ ಮಾತಾಡುವವಳು.


ನಾನು ಎಂದಿನಂತೆ ಕಡಿಮೆ.


ನೆನಪಿದೆ..


ಒಂದು ತಂಪನೆಯ ರಾತ್ರಿ ಫೋನಿನಲ್ಲಿ,ಫೋನು ಬಿಸಿಯಾಗಿ ರಾತ್ರಿ ಕಳೆದು ಬೆಳಗಾಗುವವರೆಗೂ ನಾವಿಬ್ಬರು ಮಾತಾಡುತ್ತಲೇ ಇದ್ದೆವು. 


ನಿಜ ಹೇಳಬೇಕೆಂದರೆ ಅವಳು ಮಾತಾಡಿದ್ದಳು. 


ರಾತ್ರಿಯ ಚಂದ್ರ ಬೆಚ್ಚಗೆ ಮಲಗಿ,ತಣ್ಣನೆ ಸೂರ್ಯ ಎದ್ದು ಎಂದಿನಂತೆ ಕುಳಿತಿದ್ದ.


ಆದರೂ ಮಾತು ಮುಗಿದಿರಲಿಲ್ಲ. 


ಅವಳು ಏನೇನೋ ಹೇಳುತ್ತಲೇ ಇದ್ದಳು.


ನಡು ನಡುವೆ ನಗುತ್ತಿದ್ದಳು.ಕೆಲವೊಮ್ಮೆ ಅವಳ ಮಾತು ಸಿಕ್ಕಾಪಟ್ಟೆ ಭಾರ.


ಬಹುಶಃ ಅವಳು ಯಾರ ಬಳಿಯೂ ಅಷ್ಟೊಂದನ್ನು ಈ ಮೊದಲು ಹೇಳಿಕೊಂಡಿರಲಿಲ್ಲವೋ ಏನೋ.


ನನಗೂ ಯಾರೂ ಅಷ್ಟೊಂದು ಈ ಮೊದಲು ಹೇಳಿರಲಿಲ್ಲ. 


ನಾನು ಸುಮ್ಮನೆ ಕೇಳುತ್ತಿದ್ದೆ.


ಕಿವಿಗೊಟ್ಟು ಕೇಳುತ್ತಿದ್ದೆ.


ಕೆಲವೊಮ್ಮೆ ಹೂಂ. ಅನ್ನುತ್ತಿದ್ದೆ ಅಷ್ಟೇ.


ಅವಳು ನಾನು ಕೇಳುತ್ತಿದ್ದೇನೆ ಎಂದು ಮತ್ತೆ ಲಹರಿಯಲ್ಲಿ ಮುಂದುವರಿಸಿದ್ದಳು.


ಅವಳು ವಸು... ಮಳೆಯದ್ದೇ ನಕ್ಷತ್ರ ಪುನರ್ವಸು. 


ಕಾಲೇಜಿನ ಪರಿಚಯದ ಮೊದಲ ವಾರವೇ ನೀನು ನನಗೆ ಇಷ್ಟ ಎಂದು ಮೆಲ್ಲನೆ  ಕಿವಿ ಬಳಿ ಉಸುರಿದ್ದಳು.ಆಮೇಲೆ ಕ್ಯಾಂಟಿನ್ ನಲ್ಲಿ ಅವಳ ಕಾಸಿನಲ್ಲಿಯೇ ನನಗೆರಡು ಬಿಸಿ ಬಿಸಿ ಸಮೋಸ ಕೂಡ ಕೊಡಿಸಿದ್ದಳು.


ರಾತ್ರಿಯ ಆ ಒಂದು ಸುದೀರ್ಘ ಮಾತುಕತೆಯ ಕೊನೆಯಲ್ಲಿ.. ಗೊತ್ತಿಲ್ಲ ಬಹುಶಃ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನನಗನ್ನಿಸುತ್ತಿದೆ,ಎಂದು ಹೃದಯ ಬೆಚ್ಚಗಾಗಿಸಿಕೊಂಡು  ತಡವರಿಸದೇ ಹೇಳಿ ಮುಗಿಸಿದ್ದಳು. 


ಮತ್ತೆ ನಿನಗೆ..? ಪುನಃ ಅವಳೇ ಕೇಳಿದ್ದಳು. 


ನಾನು ಏನು ಹೇಳಲಿಲ್ಲ.


ಮುಂದೆಯೂ ಹೇಳಲಿಲ್ಲ. 


ನಿಜ ಹೇಳಬೇಕೆಂದರೆ...


ನಾನು ಒಮ್ಮೆಯೂ ಹೇಳಲಿಲ್ಲ!


ಅವಳು ಕೊನೆಯವರೆಗೂ ಹೇಳುತ್ತಲೇ ಇದ್ದಳು,


ಕೇಳುತ್ತಲೂ ಇದ್ದಳು. 


ನನಗದು ನನ್ನೊಳಗೆ ಹುಟ್ಟಲಿಲ್ಲವೋ ಗೊತ್ತಿಲ್ಲ,ಆದರೆ ಹೇಳಲಿಲ್ಲ.


ಅವಳು ಜೊತೆಗೇ ಇದ್ದಳು...ಸದಾ.


ಇದ್ದಷ್ಟು ಹೊತ್ತು ಮಾತಾಡುತ್ತಿದ್ದಳು.


ಮಾತು ಮುಗಿದ ನಂತರ ಎದ್ದು ಹೋಗುತ್ತಿದ್ದಳು. 


ಅಂದು ಕಾಲೇಜಿನ ವಿಧಾಯ ಕ್ಷಣಗಳ ಭಾಷಣ ಕೇಳುವ ಸಂಜೆಯ ಟೈಂಮು. 


ಆಡಿಟೋರಿಯಂನಲ್ಲಿ ಎಲ್ಲರೂ ಅತಿಥಿಗಳಂತೆಯೇ ನಾವು  ಕುಳಿತಿದ್ದೆವು.


ನಾನೂ ಕುಳಿತಿದ್ದೆ.


ಜ್ಯೂನಿಯರ್ಸ್ ಬಿಸಿ ಬದಾಮು ಹಾಲು,ತಟ್ಟೆಯಲ್ಲಿ ಒಂದಿಷ್ಟು ಬಾಳೆಕಾಯಿ ಚಿಪ್ಸು,ಜೊತೆಗೊಂದು ಸಮೋಸ ಅದರ ಪಕ್ಕದಲ್ಲಿ ಪಚ್ಚೆ ಚಟ್ನಿ,ಕೆಂಪು ಸಾಸ್ ಹಾಕಿ,ಶ್ರದ್ಧೆಯಿಂದ ಎಲ್ಲಾ ಸೀನಿಯರ್ಸ್ಗೆ ಕುಳಿತಲ್ಲಿಗೆಯೇ ಬಂದು ಬಹಳ ಪ್ರೀತಿಯಿಂದ ವಿತರಿಸುತ್ತಿದ್ದರು.ಮುಖದಲ್ಲಿ ನಗುವನ್ನು ಕೂಡ ಸಿಕ್ಕಿಸಿಕೊಂಡಿದ್ದರು. 


ನನ್ನ ಕೈಗೂ ಪ್ಲೇಟ್ ಬಂದಿತ್ತು.


ಭಾಷಣದ ಮೇಲೆ ಆಸಕ್ತಿ ನನಗಿರಲಿಲ್ಲ.ಏಕೆಂದರೆ ನನ್ನನ್ನು ಅಲ್ಲಿ ಯಾರೂ ಹೊಗಳುವವರು ಇರಲಿಲ್ಲ,ತೆಗಳುವವರೂ ಇರಲಿಲ್ಲ.ನಾನು ಯಾರ ಮೆಚ್ಚಿನ ಸೀನಿಯರ್ ಕೂಡ ಅಲ್ಲ,ಯಾವುದೇ ಗುರುಗಳ ನೆಚ್ಚಿನ ಶಿಷ್ಯನೂ ಕೂಡ ಅಲ್ಲ. ದುಶ್ಮನ್ ಯಾರ ಪಾಲಿಗೂ ಆಗಿದ್ದೂ ಕೂಡ ನನಗೆ ಅಷ್ಟಾಗಿ ನೆನಪಿಲ್ಲ.ಕಾರಣ ನಾನು ತಣ್ಣನೆಯ ಹುಡುಗ.


" ರಕ್ತ ಸಂಬಂಧಗಳ ಮೀರಿದ ಬಂಧವಿದು,

  ಯಾವ ಬಿಂದುವಿನಲ್ಲು ಸಂದಿಸಿಹುವುದು,

  ಚಾಚಿ ಕೋಡುಗಳನ್ನು ಬಿಗಿದಪ್ಪು ಕೊಳ್ಳುವುದು".. ಹಾಡೊಂದು ಹದವಾಗಿ ವಿಧಾಯದ ಸಭೆಯಲ್ಲಿ ಪ್ಲೇ ಆಗಿತ್ತು.


ಎಲ್ಲರೂ ಎಮೋಷನಲ್ ಆಗಿದ್ದರು. 


ನಾನು ಮಾತ್ರ ನಿಧಾನಕ್ಕೆ ಸಮೋಸ ತಿನ್ನಲು ಪ್ಲೇಟ್ ಗೆ ಕೈ ಹಾಕತೊಡಗಿದೆ.


ಆಗಲೇ ನನ್ನ ಪಕ್ಕದಲ್ಲಿಯೇ ಬಂದು ಕುಳಿತುಕೊಂಡಿದ್ದಳು ವಸು...


ಕೊನೆಯ ಬಾರಿಯೋ ಎಂಬಂತೆ. 


ಪುರು.. ಕೊನೆಯದಾಗಿ ಏನಾದರೂ ಹೇಳಲು ಇದೆಯಾ...? 


ಕಣ್ಣಲ್ಲಿ ಕಣ್ಣಿಟ್ಟು ಕೇಳಿದ್ದಳು


ಅವಳ ಧ್ವನಿ ಆರ್ದ್ರವಾಗಿತ್ತು,


ಉಸಿರಿನ ಬಿಸಿ ಹೆಚ್ಚಾಗಿತ್ತು. 


ಬದಾಮ್ ಹಾಲು ತಣ್ಣಗಿದೆ ಅಂದೆ.. ಹಾಲು ಕುಡಿಯುತ್ತಲೇ. 


ಅವಳ ಕಣ್ಣ ತುಂಬಾ ನೇತ್ರಾವತಿ ಒಮ್ಮೆಗೆ ತುಂಬಿಕೊಂಡಳು.


ಧುಮ್ಮಿಕ್ಕಿ ಹರಿಯುವ ಸ್ಪಷ್ಟ ಸೂಚನೆ ಇತ್ತು.


ಅದಕ್ಕೂ ಮೊದಲೇ ಕಣ್ಣೊರೆಸಿಕೊಂಡಳು.


ಕುಳಿತ್ತಲ್ಲಿಂದ ಎದ್ದಳು.


ನೀನು ಪಾಪಿ.. ಅಂದಳು ನನಗಷ್ಟೇ ಕೇಳುವಂತೆ. 


ನಾನು ಏನೂ ಹೇಳಲಿಲ್ಲ.


ನಿನ್ನನ್ನು ಯಾವ ದೇವರೂ ಕ್ಷಮಿಸುವುದಿಲ್ಲ ಅಂದಳು..


ಕೇಳಬೇಕು ಅಂತ ಅನಿಸಿತು..


ಸಮೋಸ ತಿನ್ನುತ್ತಲೇ ಗಮನವನ್ನು ಚಟ್ನಿ ಕಡೆಗೆ ಕೇಂದ್ರಿಕರಿಸಿಕೊಂಡೇ ಕೇಳಿದೆ. 


ಏಕೆ..? 


ನಿನಗೆ ಬೇರೆಯವರ ಭಾವನೆಗಳು ಅರ್ಥವಾಗುವುದಿಲ್ಲ ಪುರು, ಅದಕ್ಕೆ..ನೀನು ಇನ್ನೂ ಕಲಿಯಲು ತುಂಬಾ ಇದೆ.. ಅಂದಳು!


ಕಣ್ಣುಜ್ಜಿಕೊಂಡೇ ನನ್ನಿಂದ ತುಂಬಾ ದೂರಕ್ಕೆ ಹೋಗಿ ಕುಳಿತಳು. 


ಆ ದಿನದ ಸಮೋಸ ಮುಗಿದಿತ್ತು.. ಜೊತೆಗೆ ಕಾಲೇಜು..ಅದರ ಜೊತೆಗೆ ಅವಳದ್ದೊಂದು ದಿನ ನಿತ್ಯದ ಸಂಗ.. ಅವಳ ಮುಗಿಯದ ಮಾತು.. ಮಾತಿನ ನಂತರದ ತೀರದ ಮೌನ.


ಆಮೇಲೆ ಅವಳು ನನಗೆ ಸಿಗಲಿಲ್ಲ.


ಮಾತಿಗೂ ಸಿಗಲಿಲ್ಲ. 


ಹುಡುಕಿಕೊಂಡು ನಾನೂ ಹೋಗಲಿಲ್ಲ.


ಸಮೋಸ ತಿನ್ನುವಾಗಲೂ ಅವಳ ನೆನಪು ನನಗೆ ಅಷ್ಟಾಗಿ ಬರಲಿಲ್ಲ. 


ಸಮೋಸ ಬಿಸಿ ಇದ್ದರೆ ಇಷ್ಟವಾಗುತ್ತಿತ್ತು,

ಹಾಲು ತಣ್ಣಗಿದ್ದರೆ ಕಷ್ಟವಾಗುತಿತ್ತು... ಅಷ್ಟೇ! 


ಒಂದು ದಿನ ಅವಳೇ ಕರೆ ಮಾಡಿದ್ದಳು.


ಬಹಳ ವರ್ಷಗಳ ನಂತರ! 


ಮದುವೆ ಇದೆ ತಪ್ಪದೇ ಬರಬೇಕು.. ಅಂದಳು.


ನಾನು ಯಾರದ್ದು ಎಂದು ಕೂಡ ಕೇಳಲಿಲ್ಲ. 


ಅದಕ್ಕೆ ಮತ್ತೆ ಅತ್ತಳು. 


ಆದರೂ ಅವಳ ಮದುವೆಗೆ ನಾನು ಹೋಗಿದ್ದೆ.


ಏಕೆಂದರೆ ಅವಳು ನನಗೆ ದುಶ್ಮನ್ ಅಲ್ಲ.


ಆದರೆ ಅವಳಿಗೆ ನಾನು..?


ಗೊತ್ತಿಲ್ಲ...!


ಹೆಣ್ಣು ಗಂಡಿಗೆ ವಿಶ್ ಮಾಡುವ ಸರತಿ ಸಾಲಿನಲ್ಲಿ ಜನ ಜಾಸ್ತಿ ಇದ್ದರು.


ಆದರೆ ಊಟದ ಹಾಲಿನಲ್ಲಿ ಜನ ಬಹಳಷ್ಟು ಕಡಿಮೆ ಇದ್ದರು. 


ಹಸಿವು ಕೂಡ ಹೆಚ್ಚಾಗಿತ್ತು.


ಹಾಗಾಗಿ ಊಟದ ಹಾಲಿಗೆ ಹೋಗಿ ತಣ್ಣಗೆ ಊಟ ಮುಗಿಸಿ,ಮತ್ತೆ ಸರತಿ ಸಾಲಿನಲ್ಲಿ ಬಂದು ನಿಂತುಕೊಂಡೆ.


ಊಟ ನಿಜಕ್ಕೂ ಚೆನ್ನಾಗಿತ್ತು.


ಬಿಸಿ ಕೂಡ ಇತ್ತು! 


ನನ್ನ ಸರದಿಯೂ ಬಂತು. 


ಕೈ ಕುಲುಕಿ..ಹ್ಯಾಪಿ ಮ್ಯಾರೀಡ್ ಲೈಪ್ ವಸು.. ಅಂದೆ.


ನನ್ನ ಮುಖದಲ್ಲಿಯೂ ಜೂನಿಯರ್ಸ್ ಗಳ ಆ ಒಂದು ನಗು ಸಿಕ್ಕಿಸಿಕೊಂಡಿದ್ದೆ. 


ಊಟ ಮಾಡಿಕೊಂಡು ಹೋಗು ಪುಷ್ಯರಾಗ ... ಸಂಪ್ರದಾಯವನ್ನು ಸಹ ಮುರಿಯದೇ ಹೇಳಿದ್ದಳು ವಸು. 


ನನ್ನದೊಂದು ಪೂರ್ತಿ ಹೆಸರು ಅವಳು ಯಾವತ್ತೂ ಹೇಳಿದ್ದೇ ಇಲ್ಲ.


ನನಗೂ ಅಷ್ಟೇ ಮಳೆಗಾಲ ಬಂದಾಗಲೂ ಅವಳು ಪುನರ್ವಸು ಎಂದು ನೆನಪಾಗಿದ್ದೂ ಇಲ್ಲ. 


ಊಟ ಅದಾಗಲೇ ಮಾಡಿಯಾಯಿತು,ಊಟ ಮಾತ್ರ ನಿಜಕ್ಕೂ ಚೆನ್ನಾಗಿತ್ತು.. ಅಂದೆ. 


ನನ್ನನ್ನೇ ಹಾಗೇ ತೀಕ್ಷ್ಣವಾಗಿ ನೋಡಿದಳು. 


ಅವಳ ಕಣ್ಣಲ್ಲಿ ಮತ್ತೆ ನೇತ್ರಾವತಿ,ಫಲ್ಗುಣಿಯರು ಒಟ್ಟಿಗೆ ಇದ್ದರೋ ಇಲ್ಲವೋ ನನಗದು ಗೊತ್ತಿಲ್ಲ,ಅವಳ ಗಂಡನಿಗೂ ಒಂದು ಬೆಚ್ಚಗೆ ಕೈಕುಲುಕಿ ಮಂಟಪದಿಂದ ಕೆಳಗಿಳಿದು ಹಾಗೇ ಹೊರನಡೆದು ಬಂದಿದ್ದೆ. 


ಸುಮಾರು ಸಮಯದ ನಂತರ ಪುಸ್ತಕ ಮಳಿಗೆಯೊಂದರಲ್ಲಿ ಓದಲು ಪುಸ್ತಕಗಳಿಗಾಗಿ ತಡಕಾಡುತ್ತಿದ್ದೆ.


ಜೀವನದಲ್ಲಿ ಏನಾದರೂ ಕಲಿಯಬೇಕು,ಅದಕ್ಕಾಗಿ ಓದುವುದು  ಅಗತ್ಯ ಅಂತ ಅನ್ನಿಸಿತ್ತು.ಏಕೆಂದರೆ ನಾನು ಇನ್ನೂ ಕಲಿಯಲು ಬಹಳಷ್ಟು ಇತ್ತು. 


ಅಲ್ಲಿ ಮತ್ತೆ ಅವಳು ಸಿಕ್ಕಳು. 


ಜೊತೆಗೆ ಗಂಡ,ಅವಳಂತೆಯೇ ಇದ್ದ ಪುಟಾಣಿ ಮಗು.


ನನ್ನನ್ನು ನೋಡಿ ಅವಳೇ ನನ್ನ ಬಳಿ ನಡೆದು ಬಂದಳು.


ಮಳೆನಕ್ಷತ್ರದ ಹುಡುಗಿ.


ಹೊರಗೆ ನಡೆಯುತ್ತಿದ್ದದ್ದು ಮಾತ್ರ ಬೇಸಿಗೆಕಾಲ. 


ನನ್ನ ಕೈಯಲ್ಲಿ ದೊಡ್ಡ ದೊಡ್ಡ ಪಿಲಾಸಫಿ ಪುಸ್ತಕಗಳು.. ಅವುಗಳನ್ನು ಲಿಸ್ಟ್ ಮಾಡಿಕೊಂಡೇ ಹೋಗಿದ್ದೆ. ಏಕೆಂದರೆ ಜೀವನದ ಮರ್ಮ ಏನು ಎಂದು ನಾನು ತುರ್ತಾಗಿ ಅರಿಯಬೇಕಾಗಿತ್ತು. 


ಬಳಿ ಬಂದವಳೇ ನನ್ನ ಕೈಯಲ್ಲಿರುವ ಪುಸ್ತಕ ನೋಡಿ... ಇದು ನಿನಗೆ ಬೇಡ ಪುರು..ಅಂದಳು.


ಏಕೆ.. ?ಎಂದು ಬಾಯಿ ಬಿಟ್ಟು ಕೇಳಲಿಲ್ಲ.


ಕತ್ತೆತ್ತಿ, ಕಣ್ಣರಳಿಸಿ,ಹುಬ್ಬು ಹಿಗ್ಗಿಸಿಯೇ.. ಕೇಳಿದ್ದೆ.


ಈಗೋ ಬಂದೆ.. ಎಂದು ಪುಸ್ತಕಗಳನ್ನು ಸುಂದರವಾಗಿ ಜೋಡಿಸಿದ್ದ ಆ ಹಲವಾರು ಶೆಲ್ಪುಗಳಲ್ಲಿ ಯಾವುದೋ  ಪುಸ್ತಕಗಳಿಗಾಗಿ  ತಡಕಾಡಿದಳು.


ಬಹಳ ಹೊತ್ತಿನ ನಂತರ ನನಗೆ ಬೇಕಾದ ಮಚ್ ನೀಡೆಡ್ ಪುಸ್ತಕವೊಂದು ಕೊನೆಗೂ ಅವಳಿಗೆ ಸಿಕ್ಕಿತ್ತು. 


ಮತ್ತೆ ನನ್ನ ಬಳಿ ಬಂದಳು ಪುನರ್ವಸು. 


ಇದನ್ನು ಓದು.. ಇತರರನ್ನು ಸುಖವಾಗಿಡು ಅಂದಳು!


ಮಗು,ಗಂಡನೊಡನೆ ಅಲ್ಲಿಂದ ಹೊರಟೇ ಬಿಟ್ಟಳು.


ನನ್ನನ್ನು ಹಿಂದಿರುಗಿಯೂ ನೋಡಲಿಲ್ಲ! 


ಅವಳು ಕೈಗಿತ್ತ ಪುಸ್ತಕವನ್ನೇ ಖರೀದಿಸಿ ಮನೆಗೆ ತಂದೆ.


ಹೌದು ಓದಿ ನಾನೂ ಒಂದಷ್ಟು ಕಲಿಯಬೇಕು. 


ಏಕೆಂದರೆ ಪುಸ್ತಕದ ಹೆಸರೇ.. " ಪ್ರೀತಿಸಲು ಕಲಿಯಿರಿ" ಎಂದು!



.....................................................................................


#ಪುಷ್ಯರಾಗ🧡

ab pacchu


(ಚಿತ್ರ ಕೃಪೆ - ಅಂತರ್ಜಾಲ)

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ