ದೇವರು ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ..!
" ಪುಷ್ಯರಾಗ "
(ದೇವರು ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ..!)
ನಾನು ದೇವರನ್ನು ನಂಬಲ್ಲ.
ನಂಬಬೇಕೆಂದು ನನಗೆ ಎಂದೂ ಅನಿಸಿರಲಿಲ್ಲ.
ಹಾಗಾಗಿ ನಂಬಿರಲಿಲ್ಲ.
ಎಲ್ಲರಿಗೂ ಇರುವಂತೆ ನನಗೆ ಅವನ ಕಡೆಗೆ ಅಂತಹ ಯಾವುದೇ ಸೆಳೆತವಿರಲಿಲ್ಲ.
ನಿಜ ಹೇಳಬೇಕೆಂದರೆ ಆ ಭಯವಾಗಲಿ,ಭಕ್ತಿಯಾಗಲಿ ಎರಡೂ ಎಂದೂ ನನ್ನಲ್ಲಿ ಹುಟ್ಟಿದ್ದೇ ಇಲ್ಲ.
ನಾನು ನನ್ನಷ್ಟಕ್ಕೆ ಸುಖಿ ಆಗಿದ್ದೆ.
ನಿಜ ಹೇಳಬೇಕೆಂದರೆ ದೇವರನ್ನು ನಂಬದೆಯೂ ನಾನು ಪರಮ ಸುಖಿಯೇ ಆಗಿದ್ದೆ.
ಆದರೆ ಬದುಕು ಎಂದಿಗೂ ಸರಳರೇಖೆ ಅಲ್ಲ ಮಕ್ಕಳೇ.. ಎಂದು ಸ್ವತಃ ಸ್ಟ್ರೈಟ್ ಲೈನ್ ಎಳೆಯಲು ಕಲಿಸಿದ್ದ ರೇಖಾ ಟೀಚರ್ ನ ಆ ಒಂದು ಮಾತು ಕೂಡ ನನಗೆ ಸದಾ ನೆನಪಿನಲ್ಲಿತ್ತು.
ಹೌದು.. ಒಂದು ದಿನ ದೇವರ ಮೇಲಿದ್ದ ನನ್ನ ನಂಬಿಕೆ ಎಲ್ಲವೂ ಬದಲಾಗಿ ಬಿಟ್ಟವು.
ಹೆಚ್ಚು ಕಡಿಮೆ ಧೂಳೀಪಟವಾಗಿಯೇ ಹೋಗಿ ಬಿಟ್ಟವು.
ನಾನು ತೀರಾ ಅಸಹಾಯಕಳಾಗಿದ್ದೆ.
ಯಾವ ದಾರಿಯೂ ಕಾಣದೇ ಇದ್ದಾಗ ಕೊನೆಗೊಂದು ದಿನ ಕೈ ಜೋಡಿಸಿ ಎಂದಿಗೂ ನಂಬದ ಆ ದೇವರನ್ನೇ ಪ್ರಾರ್ಥಿಸಿ ಬಿಟ್ಟಿದ್ದೆ.
ದೇವರೇ.. ನನಗೇನಾದರೂ ಪರವಾಗಿಲ್ಲ,ಆದರೆ ನನ್ನ ಅಮ್ಮನನ್ನು ಮಾತ್ರ ಉಳಿಸಿಕೊಡು..!
ಎಂದು ಕಣ್ಣಲ್ಲಿ ನೀರು ತುಂಬಿಕೊಂಡೇ ಅವನಲ್ಲಿ ಕೇಳಿದ್ದೆ.
ನನ್ನ ಅಮ್ಮ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿದ್ದಳು.
ಅವಳ ಚಂದದ ರೋಗದ ಹೆಸರೇ ಕ್ಯಾನ್ಸರ್.
ಅವಳ ಒಬ್ಬಳೇ ಮುದ್ದಿನ ಮಗಳು ನಾನು.
ಕ್ಯಾನ್ಸರ್ ಆಸ್ಪತ್ರೆಯ ಕ್ಯಾಂಟೀನ್ ನಲ್ಲಿ,ಅಮ್ಮನಿಗೆ ಊಟ ತಗೊಂಡು ಹೋಗಲು ಬಂದವಳು ಆ ದಿನ ಒಬ್ಬಳೇ ಅಲ್ಲಿ ಒಂದು ಕಡೆ ಕುಳಿತುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದೆ.
ಆಗಲೇ ಅವನು ನನ್ನ ಮುಂದೆ ಬಂದು ನಿಂತದ್ದು.
ತುಂಬಾ ಹೊತ್ತು ನಿಂತೇ ಇದ್ದ.
ಹಾಗೇ ನನ್ನನೇ ನೋಡುತ್ತಿದ್ದ.
ಹೆಚ್ಚು ಕಡಿಮೆ ನನ್ನದೇ ವಯಸ್ಸು ಅವನಿಗೆ.
ತಲೆ ಎತ್ತಿ ಕಣ್ಣೇರು ಒರೆಸಿಕೊಂಡು ಕೇಳಿದ್ದೆ...
ಏನು..?
ಅಳಬೇಡಿ.. ಅಂದ ಬಹಳ ಸಮಾಧಾನದಿಂದ ಉತ್ತರಿಸಿದ.
ನೀವು ಯಾರು.. ಎಂದು ಕೇಳಿದೆ?
ಈ ಕ್ಯಾನ್ಸರ್ ಆಸ್ಪತ್ರೆಗೆ ಬಂದ ಮೇಲೆ ಎಲ್ಲರೂ ಸಮಾನದುಃಖಿಗಳೇ ಬಿಡಿ... ಅಂದ.
ಅದೂ ಹೌದು. ಕ್ಯಾನ್ಸರ್ ಆಸ್ಪತ್ರೆಗೆ ಕ್ಯಾನ್ಸರ್ ಪೇಷೆಂಟ್ ಗಳಲ್ಲದೆ ಬೇರೆ ಯಾರೂ ಬರುತ್ತಾರೆ.
ಆದರೂ ಅವನನ್ನೇ ಕೇಳಿದೆ.
ಅರ್ಥವಾಗಲಿಲ್ಲ...?!
ನನ್ನ ಅಮ್ಮನಿಗೆ ಕ್ಯಾನ್ಸರ್... ಅಂದ ಮತ್ತಷ್ಟು ತಣ್ಣಗೆ.
ಒಮ್ಮೆಲೇ ಹೃದಯಕ್ಕೆ ಭರ್ಜಿಯಿಂದ ತಿವಿದಂತೆ ಆಯಿತು.
ಈ ಪಾಪಿ ರೋಗ ಅದೆಷ್ಟು ಜನರನ್ನು ಕೊಲ್ಲುತ್ತದೆಯೋ ಮನಸ್ಸಿನಲ್ಲಿಯೇ ಅಂದುಕೊಂಡು ಶಪಿಸಿದೆ.
ಆದರೂ ಅವನು ಬಹಳಷ್ಟು ಶಾಂತನಾಗಿದ್ದ.
ಅವನಲ್ಲಿ ಯಾವುದೇ ಗೊಂದಲವಿರಲಿಲ್ಲ.
ಯಾರಿಗೆ ಕ್ಯಾನ್ಸರ್ ..? ಈ ಬಾರಿ ಅವನು ನನ್ನಲ್ಲಿ ಕೇಳಿದ.
ಅಮ್ಮಾ... ಅಂದು ಹೇಳಿ ಮತ್ತಷ್ಟು ಜೋರಾಗಿ ಬಿಕ್ಕಳಿಸಿ ಅತ್ತೆ.
ಅಳಬೇಡಿ..ದೇವರು ಇದ್ದಾರೆ,ಏನಾದರೊಂದು ಆಗುತ್ತದೆ ಬಿಡಿ.. ಅಂದ.
ಬಹುಶಃ ಅವನು ದೇವರನ್ನು ಬಹಳ ನಂಬುತ್ತಾನೆ ಎಂದು ಕಾಣುತ್ತದೆ.
ನೀವು ದೇವರನ್ನು ನಂಬುತ್ತೀರಾ...? ನೇರವಾಗಿಯೇ ಕೇಳಿದೆ.
ಹೌದು.. ಅಂದ.
ಹಾಗಾದರೆ ಏತಕ್ಕೆ ಅವನು ನಿಮ್ಮ ಅಮ್ಮನಿಗೂ ಇಂತಹ ಭಯಾನಕ ಕಾಯಿಲೆಯನ್ನೇ ಕೊಟ್ಟು ಬಿಟ್ಟ...? ಎಂದು ಮತ್ತಷ್ಟು ಕಣ್ಣಲ್ಲಿ ನೀರು ತುಂಬಿಕೊಂಡೇ ಅವನನ್ನು ಪ್ರಶ್ನಿಸಿದೆ.
ಎಲ್ಲವೂ ಅವನ ಇಚ್ಛೆ,ಉಳಿಸುವವನೂ ಅವನೇ, ಅಳಿಸುವವನೂ ಅವನೇ.. ಅಂದು ಬಿಟ್ಟ.
ಹಾಗಾದರೆ ಅವನು ನಿಮ್ಮ ಅಮ್ಮನನ್ನು ಉಳಿಸುತ್ತಾನೆಯೇ...? ಆ ನಂಬಿಕೆ ನಿಮಗೆ ಇದೆಯೇ..? ಕೇಳಿದೆ.
ಅವನ ಇಚ್ಛೆ ಇದ್ದ ಹಾಗೆಯೇ ಆಗುವುದು.. ಅಂದ.
ಹಾಗಾದರೆ ಅವನು ನನ್ನ ಅಮ್ಮನನ್ನೂ ಉಳಿಬಹುದಾ...? ಒಂದಷ್ಟು ಆಸೆಯಿಂದ ಕೇಳಿದ್ದೆ.
ಖಂಡಿತಾ.. ನಿಮ್ಮ ಅಮ್ಮ ಕೂಡ ಉಳಿಯಬಹುದು.. ಅಂದ.
ಹೇಗೆ...? ಕೇಳಿದೆ.
ನಿರ್ಮಲ ಮನಸ್ಸಿನಿಂದ ಅವನನ್ನೊಮ್ಮೆ ಹಾಗೇ ಪಾರ್ಥಿಸಿ ಬಿಡಿ..ಅವನು ಕಣ್ಣು ಬಿಟ್ಟು ವರ ಕೊಟ್ಟರೂ ಕೊಡಬಹುದು.. ಅಂದ.
ನೀರಿನಲ್ಲಿ ಮುಳುಗುವವನಿಗೆ ಆಸರೆಗೆ ಸಣ್ಣ ಹುಲ್ಲು ಕಡ್ಡಿ ಸಿಕ್ಕರೂ ಕೂಡ ಬದುಕಿನಲ್ಲಿ ಅದಕ್ಕಿಂತ ದೊಡ್ಡದು ಇನ್ನು ಯಾವುದೂ ಇರುವುದಿಲ್ಲವಂತೆ.
ಆ ದಿನ ನನ್ನ ಸ್ಥಿತಿ ಹೆಚ್ಚು ಕಡಿಮೆ ಅದೇ ರೀತಿ ಇತ್ತು.
ಕಣ್ಣೊರೆಸಿಕೊಂಡು,ಅಂದ ಹಾಗೆ ನಿಮ್ಮ ಹೆಸರು ಏನು... ಎಂದು ಅವನಲ್ಲಿಯೇ ಕೇಳಿದ್ದೆ.
ಪುರು...
ಪುಷ್ಯರಾಗ ಅಂತ ಪೂರ್ತಿ ಹೆಸರು.. ಅಂದ ಅವನು.
ಅವನ ಹೆಸರು ಅದೆಷ್ಟು ಚೆನ್ನಾಗಿತ್ತು...ಹೆಚ್ಚು ಕಡಿಮೆ ಅವನಂತೆಯೇ.
ಹೊಳೆಯುವ ಹಳದಿ ಮಣಿ ಪುಷ್ಯರಾಗದಂತೆಯೇ.
ನಾನು ವಸು,
ಪುನರ್ವಸು ....ಅನ್ನುತ್ತಾ ಅವನತ್ತ ನಾನು ಕೈ ಚಾಚಿದೆ.
ಮಳೆ ನಕ್ಷತ್ರ ನೀವು...ನಿಮ್ಮೆಲ್ಲಾ ನೋವು ಕೂಡ ಮಳೆಯಲ್ಲಿ ಕೊಚ್ಚಿ ಹೋಗುವಂತೆ ಆಗಲಿ... ಅಂದು ಹೇಳಿ ನಾನು ಚಾಚಿದ ಕೈಗೊಂದು ಬೆಚ್ಚನೆಯ ಹಸ್ತಲಾಘವ ಮಾಡಿ ಬಿಟ್ಟ.
ಆ ದಿನದಿಂದ ನಾವು ಆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪರಸ್ಪರ ಬಹಳಷ್ಟು ಹತ್ತಿರವಾದೆವು.
ಬಹುವಚನ ಏಕವಚನಕ್ಕೆ ತಿರುಗಿತ್ತು.
ನಾನು ನನ್ನ ಅಮ್ಮನಿಗೆ ಅವನನ್ನು ಪರಿಚಯಿಸಿದೆ.
ಅವನೂ ನನ್ನನ್ನು ಅವನ ಅಮ್ಮನಿಗೆ ಪರಿಚಯಿಸಿದ.
ಅವನು ನನಗೆ ಪ್ರತೀ ದಿನವೂ ಅಲ್ಲಿ ಸಿಗುತ್ತಿದ್ದ.
ವಿಷ್ಣು ಸಹಸ್ರನಾಮವನ್ನು ದಿನಾ ಹೇಳಿ, ಒಳ್ಳೆಯದಾಗುತ್ತದೆ.. ಅಂದ.
ನನಗೆ ಬರುವುದಿಲ್ಲ.. ಅಂದೆ.
ಅವನೇ ಪುಸ್ತಕವನ್ನು ತಂದುಕೊಟ್ಟ.
ಆಸ್ಪತ್ರೆಯ ಮುಂಭಾಗದಲ್ಲಿ ಇದ್ದ ದೇವರ ಗುಡಿಯಲ್ಲಿ ನನಗೆ ಅದನ್ನು ಹೇಗೆ ಹೇಳಬೇಕು ಎಂದು ಅವನೇ ಬಹಳ ನಿಧಾನಕ್ಕೆ,ಚೆನ್ನಾಗಿ ಅರ್ಥವಾಗುವಂತೆಯೇ ಕಲಿಸಿಕೊಟ್ಟ.
ಆ ದಿನದಿಂದ ನಾನು ಪುರು ಇಬ್ಬರೂ ಬೆಳಿಗ್ಗೆ ಆಸ್ಪತ್ರೆಯ ಮುಂಬಾಗದಲ್ಲಿ ಇದ್ದ ದೇವರ ಗುಡಿಯಲ್ಲಿ,ವಿಷ್ಣು ಸಹಸ್ರನಾಮವನ್ನು ಜೊತೆ ಜೊತೆಯಾಗಿ ಹೇಳಿಯೇ ದಿನವೊಂದನ್ನು ಆರಂಭಿಸಲು ಶುರು ಮಾಡಿ ಬಿಟ್ಟೆವು.
ಆದರೂ ನನಗೆ ಅದರಲ್ಲಿ ಅಂತಹ ಏನು ನಂಬಿಕೆ ಇರಲಿಲ್ಲ.
ದೇವರನ್ನು ಪ್ರಾರ್ಥಿಸಿದರೆ ರೋಗ ಗುಣಮುಖವಾಗಿ ಬಿಡುವುದೇ?
ಆದರೂ ನಾನು ಅವನೊಡನೆ ಪ್ರತಿ ನಿತ್ಯ ಪ್ರಾರ್ಥಿಸುತ್ತಿದ್ದೆ.
ಕಾರಣ ನನಗೆ ಭಗವಂತನಿಗಿಂತಲೂ ಅವನ ಮಾತಿನ ಮೇಲೆ ಏನೋ ಒಂದು ಸೆಳೆತವಿತ್ತು,ಅವನು ಏನೇ ಹೇಳುತ್ತಿದ್ದರೂ ನಂಬಿಕೆ ಹುಟ್ಟುತ್ತಿತ್ತು ಮಾತ್ರವಲ್ಲ ಅವನ ಮಾತು ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತಿತ್ತು.
ಒಂದು ದಿನ ದೇವರ ಗುಡಿಯ ಮುಂದೆ ನಾವಿಬ್ಬರು ಕೈ ಮುಗಿದು ನಿಂತಿದ್ದಾಗ ಪುರು ಹೇಳಿದ..
ನಿಮ್ಮ ಅಮ್ಮ ಬೇಗ ಗುಣಮುಖವಾಗುತ್ತಾರೆ ಬಿಡಿ.. ಅಂದ.
ಅದು ಹೇಗೆ? ಕೇಳಿದೆ.
ನನ್ನ ದಿನ ನಿತ್ಯದ ಪ್ರಾರ್ಥನೆಯಲ್ಲಿ ನಿಮ್ಮ ಅಮ್ಮನಿಗಾಗಿಯೂ ನಾನು ಭಗವಂತನಲ್ಲಿ ಬೇಡಿಕೊಂಡಿದ್ದೆ...
ನಾವು ನಮಗಾಗಿ ಪ್ರಾರ್ಥಿಸಿದಾಗ ಭಗವಂತ ಕರುಣಿಸದೇ ಇದ್ದರೂ,ಬೇರೆಯವರಿಗಾಗಿ ಪ್ರಾರ್ಥಿಸಿದಾಗ ಅವನು ಬಹಳ ಬೇಗ ಅನುಗ್ರಹಿಸುತ್ತಾನಂತೆ... ಅಂದು ಬಿಟ್ಟ ಪುರು.
ಯಾಕೋ ನನಗೆ ಆ ಕ್ಷಣ ಅವನೇ ದೇವರು ಎಂದು ಅನ್ನಿಸಿ ಬಿಟ್ಟಿತು.
ದೇವರೇ ಬಂದು ನನ್ನ ತಲೆ ನೇವರಿಸಿ ಸಮಾಧಾನ ಹೇಳಿದಂತಿತ್ತು ಅವನದ್ದೊಂದು ಮಾತು.
ಹಾಗೇ ಕೈ ಮುಗಿದು ಅವನ ಎರಡೂ ಕಾಲು ಹಿಡಿಯಬೇಕೆಂದು ಒಮ್ಮೆ ಅನ್ನಿಸಿತ್ತು ನನಗೆ.
ಆದರೆ ಅವನು ಅದಾಗಲೇ ಆ ಗುಡಿಯಿಂದ ನಗು ನಗುತ್ತಾ ಅದೆಲ್ಲಿಗೋ ಹೋಗಿ ಬಿಟ್ಟ.
ನಿಜಕ್ಕೂ ಹೋಗಿಯೇ ಬಿಟ್ಟ!
ಆಮೇಲೆ ಅವನು ನನಗೆ ಆಸ್ಪತ್ರೆಯಲ್ಲಿ ಹೆಚ್ಚಾಗಿ ಸಿಗಲಿಲ್ಲ.
ಪೋನಿಗೂ ಸಿಗಲಿಲ್ಲ.
ಆದರೆ ಅವನು ಹೇಳಿದ ರೀತಿಯಂತೆಯೇ ಆಯಿತು.
ನನ್ನ ಅಮ್ಮ ನಿಜಕ್ಕೂ ಗುಣಮುಖವಾಗುತ್ತಾ ಬಂದು ಬಿಟ್ಟಿದ್ದರು.
ಅಮ್ಮನ ಸ್ಕ್ಯಾನಿಂಗ್ ಹಾಗೂ ಇತರ ರಿಪೊರ್ಟ್ ಗಳು ಬಹಳಷ್ಟು ಆಶಾದಾಯಕವಾಗಿತ್ತು.
ಅಮ್ಮನ ರಿಪೊರ್ಟ್ ನೋಡಿದ ವೈದ್ಯರು.. ನಿಮ್ಮಮ್ಮ ಇನ್ನಷ್ಟು ಹೆಚ್ಚು ದಿನ ಬದುಕಬಹುದು.. ಎಂದು ನಗುತ್ತಲೇ ಹೇಳಿದ್ದರು.
ಆ ದಿನದ ನನ್ನ ಖುಷಿಗೆ ಪಾರವೇ ಇರಲಿಲ್ಲ.
ನಾನು ತುಂಬಾ ಖುಷಿ ಪಟ್ಟೆ.
ಹೆಚ್ಚು ಕಡಿಮೆ ನೆಲ ಬಿಟ್ಟ ಚಿಟ್ಟೆಯಾಗಿದ್ದೆ.
ಬಹುಶಃ ದೇವರು ಒಬ್ಬ ಮೇಲೆ ಇದ್ದಾನೆ ಎಂದು ಮೊದಲ ಬಾರಿಗೆ ಅನ್ನಿಸಿದ್ದು ನನಗೆ ಆವಾಗಲೇ.
ಅವನಿಗೊಂದು ಅಲ್ಲಿಂದಲೇ ಧನ್ಯವಾದ ಹೇಳಿದೆ.
ಒಮ್ಮೆಲೇ ದೇವರಂತಹ ಮನುಷ್ಯ ಪುರು ನೆನಪಾಗಿ ಬಿಟ್ಟ ನನಗೆ.
ಅವನಿಗೂ ತಿಳಿಸಲೆಂದು ಅವನ ಅಮ್ಮ ಇರುವ ವಾರ್ಡ್ ಕಡೆಗೆಯೇ ಓಡಿದೆ.
ಎದ್ದು ಬಿದ್ದು ಓಡಿದೆ.
ಆದರೆ ಅಲ್ಲಿ ಅವನಾಗಲಿ.. ಅವನ ಅಮ್ಮನಾಗಲಿ ಇರಲಿಲ್ಲ.
ಬೆಡ್ ಖಾಲಿಯಾಗಿತ್ತು!
ಆತಂಕ ಹೆಚ್ಚಾಯಿತು.
ಆಸ್ಪತ್ರೆಯಲ್ಲಿ ವಿಚಾರಿಸಿದೆ.
ನಿನ್ನೆ ರಾತ್ರಿಯೇ ಪುರುವಿನ ಅಮ್ಮ ತೀರಿಹೋಗಿ ಬಿಟ್ಟರು.....! ಎಂಬ ವಿಷಯವೊಂದು ಬರಸಿಡಿಲಿನಂತೆ ಬಂದು ನನ್ನ ಕಿವಿಗೆ ಅಪ್ಪಳಿಸಿತ್ತು.
ಭೂಮಿಗೆ ಉಲ್ಕೆ ಬಡಿದ ಸ್ಥಿತಿ ನನ್ನದು.
ಈಗ ನಾನು ನನ್ನ ಅಮ್ಮ ಗುಣಮುಖರಾದರೆಂದು ಸಂತೋಷ ಪಡಬೇಕಿತ್ತೇ..?
ಅಥವಾ ಪುರುವಿಗಾಗಿ, ಅವನ ಅಮ್ಮನಿಗಾಗಿ ಅಳಬೇಕಿತ್ತೇ?!
ನಾನು ಅತ್ತೆ..!
ಅವತ್ತು ಕ್ಯಾಂಟಿನ್ ನಲ್ಲಿ ಒಬ್ಬಳೇ ಕುಳಿತು ಮತ್ತೊಮ್ಮೆ ಬಿಕ್ಕಿ ಬಿಕ್ಕಿ ಅತ್ತೆ.
ಸಮಾಧಾನ ಮಾಡಲು ಆ ದಿನ ಪುರು ನನ್ನೆದುರು ಬರಲೇ ಇಲ್ಲ.
ಬಹುಶಃ ನಾನೂ ಕೂಡ ಅವನ ಅಮ್ಮನಿಗಾಗಿ ತೀವ್ರವಾಗಿ ಪ್ರಾರ್ಥಿಸಿದ್ದರೆ,ಅವನ ಅಮ್ಮ ಕೂಡ ನನ್ನ ಅಮ್ಮನಂತೆ ಒಂದಿಷ್ಟು ದಿನ ಬದುಕುತ್ತಿದ್ದರೋ ಏನೋ..!
ಪಾಪಿ ನಾನು!
ಅತ್ತೆ.. ಮತ್ತಷ್ಟು ಅತ್ತೆ.
ಕೊನೆಗೆ ಅವನ ನಂಬರ್ ಗೆ ಕಾಲ್ ಮಾಡಿದೆ.
ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು.
ಆಮೇಲೆ ಅದು ಯಾವತ್ತೂ ಆನ್ ಆಗಲೇ ಇಲ್ಲ.
ಅವನೂ ನನಗೇ ಸಿಗಲೇ ಇಲ್ಲ.
ಪ್ರತೀ ಬಾರಿ ಅಮ್ಮನೊಡನೆ ಆಸ್ಪತ್ರೆಗೆ ಚೆಕ್ ಅಫ್ ಗೆ ಅಂತ ಬಂದಾಗ ನನಗೆ ಪುರು ತುಂಬಾ ನೆನಪಾಗುತ್ತಿದ್ದ.. ಆಸ್ಪತ್ರೆಯ ಕಾರಿಡಾರ್ ನಲ್ಲಿ, ಕ್ಯಾಂಟಿನ್ ನಲ್ಲಿ ಅವನು ಇರುವಂತೆಯೇ ಭಾಸವಾಗುತ್ತಿತ್ತು.
ಅವನು ಮತ್ತು ನಾನು ಆಸ್ಪತ್ರೆಯ ಆ ದೇವರ ಗುಡಿಯ ಮುಂದೆ ಕುಳಿತುಕೊಂಡು ಎಷ್ಟೋ ಬಾರಿ ವಿಷ್ಣು ಸಹಸ್ರನಾಮವನ್ನು ಶ್ರದ್ಧೆಯಿಂದ ಹೇಳಿದ್ದು ಎಲ್ಲವೂ ಮತ್ತೆ ಮತ್ತೆ ನೆನಪಾಗುತ್ತಿತ್ತು.
ನಾನು ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಆಮೇಲೆ ಎದ್ದು ಬರುತ್ತೇನೆ.
ನಾನೀಗ ದೇವರನ್ನು ನಂಬುತ್ತೇನೆ.
ಆದರೆ ಅವನ ಮೇಲೆ ನನಗೆ ಒಂದಿಷ್ಟು ಕೋಪವಿದೆ.
ಮನಸ್ಸಿನಲ್ಲಿಯೇ ಅವನನ್ನು ನಾನು ದಿನಾ ಬೈಯುತ್ತೇನೆ.
ಪುರುವಿನ ಅಮ್ಮನನ್ನು ಏತಕ್ಕೆ ಪುರುವಿನಿಂದ ಕಸಿದುಕೊಂಡೆ... ಎಂದು ದೇವರಲ್ಲಿ ಬಾರಿ ಬಾರಿ ಕೇಳುತ್ತೇನೆ.
ಅವನೆಲ್ಲಿ ನನ್ನಂತವಳಿಗೆ ಉತ್ತರಿಸುತ್ತಾನೆ..
ಅವನು ಸದಾ ಮೌನಿ.
ಅವನಿಗೆ ಕಣ್ಣೀರ ಅಭಿಷೇಕವೇ ಇಷ್ಟ.
ಪ್ರತೀ ದಿನದ ವಿಷ್ಣು ಸಹಸ್ರನಾಮದ ಪಠಣದ ನಂತರ ನನ್ನ ಕೆನ್ನೆಯ ಮೇಲೆ ಒಂದಿಷ್ಟು ಕಣ್ಣೀರು ಜಾರಿ ಹೋಗುವುದು ಸಹಜವಾದ ಕ್ರಿಯೆಯಾಗಿತ್ತು.
ಆದರೂ ಆ ಭಗವಂತನಲ್ಲಿಯೇ ಶ್ರದ್ಧೆಯಿಂದ ಅಮಾಯಕಳಂತೆಯೇ ನಾನು ಕೇಳುತ್ತಿದ್ದೆ..
ಕೊನೆಯ ಪಕ್ಷ ಪುರು ಆದರೂ ಎಲ್ಲಿದ್ದರೂ ಸುಖವಾಗಿರಲಪ್ಪಾ ದೇವರೇ.. ಎಂದು ಕೈ ಮುಗಿದು ಬೇಡುತ್ತಿದ್ದೆ.
ಹೀಗೆ ವರ್ಷಗಳು ಉರುಳಿದವು.
ನನ್ನ ಅಮ್ಮ ಕೂಡ ಹೆಚ್ಚು ಕಡಿಮೆ ಗುಣಮುಖವಾಗುತ್ತಾ ಬಂದರು.
ಆ ದಿನ ಕೊನೆಯ ಬಾರಿಯ ಚೆಕ್ ಅಫ್ ಗೆ ಎಂಬಂತೆ ನಾನು ಅಮ್ಮನೊಡನೆ ಮತ್ತೆ ಅದೇ ಕ್ಯಾನ್ಸರ್ ಆಸ್ಪತ್ರೆಗೆ ಬಂದಿದ್ದೆ.
ಆಗಲೇ ನಾನು ಅವನನ್ನು ಮತ್ತೆ ನೋಡಿದ್ದು..!
ಹೌದು..ಪುರು ಅಲ್ಲಿ ಇದ್ದ.
ಸ್ಕ್ಯಾನಿಂಗ್ ರೂಮ್ ನ ಹೊರಗಡೆ ಸ್ಕ್ಯಾನಿಂಗ್ ಗಾಗಿ ವೀಲ್ ಚಯರ್ ನಲ್ಲಿ ಕಾಯುತ್ತಾ ಕುಳಿತುಕೊಂಡು,ಅಲ್ಲೇ ಎಲ್ಲೋ ಕಳೆದುಹೋದಂತೆ ಅತ್ತಿಂದಿತ್ತ ನೋಡುತ್ತಿದ್ದ.
ಅವನನ್ನೇ ಹಾಗೇ ದಿಟ್ಟಿಸಿ ನೋಡಿದೆ.
ತಲೆಯ ಕೂದಲೆಲ್ಲವೂ ಉದುರಿ ಹೋಗಿತ್ತು!!
ಸುಂದರ ಯುವಕ ಬಹಳಷ್ಟು ಕೃಷವಾಗಿದ್ದ.
ಅವನ ಬಳಿಗೆಯೇ ಮೆಲ್ಲಗೆ ನಡೆದೆ..
ಪುರು... ಅಂದೆ ಗದ್ಗತಿತವಾಗಿ.
ಎಲ್ಲೋ ನೋಡುತ್ತಿದ್ದ ಅವನು ತಿರುಗಿ ನನ್ನನೇ ಹಾಗೇ ನೋಡಿದ.
ಅವನಿಗೆ ನನ್ನ ಗುರುತು ಸಿಕ್ಕಿತು..
ಪು..ನ..ರ್..ವ..ಸು...ಅಂದ ನಗುತ್ತಾ.
ನನ್ನ ಕಣ್ಣಲ್ಲಿ ಉಕ್ಕಿ ಬಂದ ಕಣ್ಣೀರನ್ನು ತಡೆದುಕೊಳ್ಳುವ ಶಕ್ತಿಯೇ ನನ್ನಲ್ಲಿರಲಿಲ್ಲ...!
ಆದರೂ ಕಷ್ಟ ಪಟ್ಟು ಕೇಳಿದೆ..
ಏನಾಯಿತು ಪುರು... ಅಂದೆ.
ನನ್ನ ಕೊರಳ ಸೆರೆ ಉಬ್ಬಿ ಬಂದಿತ್ತು.
ಎಲ್ಲಾ ದೇವರ ಇಚ್ಛೆ.. ಅಂದ!
ಅವನು ಹಾಗೆಯೇ. ಸಮಚಿತ್ತ, ಸಮಭಾವ... ಸದಾ ನಿರ್ಲಿಪ್ತ.
ಅವನ ಅಮ್ಮನನ್ನು ಬಲಿ ತೆಗೆದುಕೊಂಡ ಪಾಪಿ ಕ್ಯಾನ್ಸರ್ ಈಗ ಅವನನ್ನು ಕೂಡ ಹಣಿಯಲು ಹೊಂಚು ಹಾಕಿ ಕುಳಿತಿತ್ತು!
ದೇವರ ಮೇಲೆ ಆ ದಿನ ನನಗೆ ಸಿಕ್ಕಾಪಟ್ಟೆ ಸಿಟ್ಟು ಬಂತು.
ಆದರೂ ಪುರುವಿನ ಮುಂದೆ ನಾನು ಅದನ್ನು ತೋರಿಸಿಕೊಳ್ಳಲಿಲ್ಲ.
ಪುರು ನೀನು ಏನೂ ಚಿಂತಿಸಬೇಡ.. ದೇವರು ಇದ್ದಾನೆ, ಏನಾದರೊಂದು ಆಗುತ್ತದೆ.. ನಿನಗಾಗಿ ನಾನು ಪ್ರಾರ್ಥಿಸುತ್ತೇನೆ.... ಬೇರೆಯವರು ಪ್ರಾರ್ಥಿಸಿದರೆ ಅವನು ಕೇಳಿದ್ದು ಕೊಡುತ್ತಾನೆ.. ಅಂದೆ ಮುಗ್ಧವಾಗಿ.
ಅವನು ನನ್ನನ್ನೇ ನೋಡಿದ... ಹಾಗೇ ನಕ್ಕು ಬಿಟ್ಟ.
ಎಲ್ಲವೂ ಅವನದ್ದೇ ಮಾತುಗಳು.
ನಾನು ಆದರೂ ಏನು ಮಾಡಲಿ....
ನನಗೆ ಆ ಜೀವ ಒಂದು ಉಳಿಯಬೇಕಿತ್ತು.. ಅಷ್ಟೇ
ಆ ದಿನದಿಂದ ಅಮ್ಮನಿಗಾಗಿ ಆಸ್ಪತ್ರೆಗೆ ಹೋಗಲಿಕ್ಕೆ ಇಲ್ಲದಿದ್ದರೂ, ನಾನು ಪುರುವಿಗಾಗಿ ದಿನಾಲೂ ಆಸ್ಪತ್ರೆಗೆ ಹೋದೆ.
ಹೆಚ್ಚು ಕಡಿಮೆ ಮನೆಯಿಂದ ಓಡುತ್ತಲೇ ಹೋಗುತ್ತಿದ್ದೆ.
ಒಂದೆರಡು ಹತ್ತಿರದ ಸಂಬಂಧಿಕರು ಬಿಟ್ಟರೆ ಬೇರೆ ಯಾರೂ ಅವನನ್ನು ನೋಡಿಕೊಳ್ಳಲು ಅಲ್ಲಿ ಇರಲಿಲ್ಲ.
ನಾನು ಮಾತ್ರ ಸದಾ ಅವನ ಪಕ್ಕವೇ ನಿಂತೆ.
ದೇವರ ಗುಡಿಯಲ್ಲಿ ನಾನು ಹೇಳಿದ ಸಹಸ್ರನಾಮದಲ್ಲಿ ಪುರುವಿಗಾಗಿಯೇ ಸಹಸ್ರ ಪ್ರಾರ್ಥನೆ ಇತ್ತು.
ನನಗೆ ಗೊತ್ತಿತ್ತು.. ನನ್ನ ದೇವರು ಕೈ ಬಿಡುವುದಿಲ್ಲ ಎಂದು.
ಏಕೆಂದರೆ ಅವನನ್ನು ನಾನು ಈ ಬಾರಿ ಬಲವಾಗಿ ನಂಬಿದ್ದೆ.
ಆದರೆ ಅವನಿಗೆ ನನ್ನ ಮೇಲೆ ಒಂಚೂರೂ ಕರುಣೆಯೇ ಇರಲಿಲ್ಲ!
ಏಕೆಂದರೆ....
ಪುರು ಕೊನೆಗೂ ಬದುಕಿ ಉಳಿಯಲೇ ಇಲ್ಲ.!!!
ಈ ಮೊದಲು ಅವನು ಯಾರೋ ನನಗೆ ಗೊತ್ತಿಲ್ಲ.
ಆ ಆಸ್ಪತ್ರೆಗೆ ಎಲ್ಲಿಂದಲೋ ಬಂದ..
ಒಂದು ದಿನ ನನಗೆ ಸಿಕ್ಕಿದ.
ನನ್ನಲ್ಲಿ ಒಂದಿಷ್ಟು ದೇವರನ್ನು ತುಂಬಿದ.
ನನಗೂ ನನ್ನ ಅಮನಿಗೂ ಅವನೇ ದೇವರಾದ.
ಆಮೇಲೆ ಹೇಳದೆ ಕೇಳದೆ ಒಂದು ದಿನ ಮಾಯವಾದ!
ಈಗೆಲ್ಲಿ ಹುಡುಕಲಿ ನಾನು ಅವನನ್ನು?
ದೇವರಾದರೂ ಗುಡಿಯಲ್ಲಿ ಇದ್ದಾನೆ... ಸಹಸ್ರನಾಮದಲ್ಲಿ ಇದ್ದಾನೆ... ಎಲ್ಲಾ ಕಡೆಯೂ ಅವನೇ ಇದ್ದಾನೆ.
ಆದರೆ ಪುರು..?
ಇನ್ನು ಮುಂದೆ ಎಲ್ಲಿಯೂ ಇಲ್ಲ!
ನಾನು ಈಗಲೂ ನಂಬುತ್ತೇನೆ ನನ್ನ ಅಮ್ಮ ಉಳಿದಿದ್ದೇ ಅವನ ಪ್ರಾರ್ಥನೆಯಿಂದ ಎಂದು.
ಆದರೆ..
ಆದರೆ... ಅದೇ ದೇವರು ನನ್ನ ಪಾರ್ಥನೆಯಿಂದ ಅವನನ್ನು ಉಳಿಸುವ ಮನಸ್ಸು ಏಕೆ ಮಾಡಲಿಲ್ಲ..??
ಏಕೆ...?
ಅದೆಂತಹ ಪಾಪಿ ಇರಬೇಕು ನಾನು!
ಅತ್ತೆ...
ಬಿಕ್ಕಿ ಬಿಕ್ಕಿ ಅತ್ತೆ..
ದೇವರೇ ಏಕೆ ನೀನು ನನಗೆ ಹೀಗೆ ಮಾಡಿದೆ ಎಂದು ಕೇಳಿದೆ.
ಅವನು ಉತ್ತರಿಸಲಿಲ್ಲ..
ಉತ್ತರಿಸುವುದೂ ಇಲ್ಲ
ಏಕೆಂದರೆ ಅವನಿಗೆ ಕೆಲವೊಮ್ಮೆ ಕೇಳುವುದೇ ಇಲ್ಲ!
ಆದರೆ ಈಗ ನಾನು ಏನು ಮಾಡಬೇಕು?
ದೇವರನ್ನು ನಂಬಬೇಕೆ?!
ನಾನು ಅವನನ್ನು ನಂಬದೆಯೂ ಬಹಳ ಸುಖವಾಗಿದ್ದೆ.
ಹೌದು... ದೇವರು ನನಗೆ ಮೋಸ ಮಾಡಿಬಿಟ್ಟ.
ಅವನನ್ನು ನಾನು ಎಂದಿಗೂ ಕ್ಷಮಿಸುವುದೇ ಇಲ್ಲ.
ಏಕೆಂದರೆ ಅವನು ದೇವರಂತಹ ಮನುಷ್ಯನನ್ನೇ ನನ್ನಿಂದ ಕಿತ್ತುಕೊಂಡು ಬಿಟ್ಟ..!!
ಬೇಕಾದುದ್ದನ್ನೇ ಹುಡುಕಿ ಹುಡುಕಿ ಕಿತ್ತುಕೊಳ್ಳುವ ಅವನು ಅದು ಹೇಗೆ ದೇವರು ಆಗುತ್ತಾನೆ?!
ಬರಲಿ ನನ್ನ ಮುಂದೆ ಅವನು...
ಅವನ ಕೊರಳಪಟ್ಟಿ ಹಿಡಿದು ಕೇಳುತ್ತೇನೆ... ಯಾವ ತಪ್ಪಿಗೆ ನನಗೆ ಈ ಶಿಕ್ಷೆ ಎಂದು!!
ಆ ದಿನ ಪುರುವಿನ ಶವದೊಂದಿಗೆ ನಾನು ಸಹ ಸ್ಮಶಾನಕ್ಕೆ ನಡೆದಿದ್ದೆ.
ಅಂದು ಕೂಡ ಜೋರಾದ ಮಳೆ..
ಮಳೆ ಕೂಡ ನನ್ನ ನಕ್ಷತ್ರದ್ದೇ!
ಸ್ಮಶಾನದಲ್ಲಿ ಒಂದು ಕಡೆ ಬೆಚ್ಚಗಿನ ಸೂರಿನಡಿ ಪುರುವಿನ ದೇಹ ಹಾಗೇ ಹೊತ್ತಿ ಉರಿಯುತ್ತಿದ್ದರೆ,ನನಗೆ ಪುರು ಮೊದಲ ದಿನ ಹೇಳಿದ ಮಾತೇ ಅತಿಯಾಗಿ ನೆನಪಾಗಿ ಬಿಟ್ಟಿತ್ತು...
"ಮಳೆ ನಕ್ಷತ್ರ ನೀವು...ನಿಮ್ಮೆಲ್ಲಾ ನೋವು ಕೂಡ ಮಳೆಯಲ್ಲಿ ಕೊಚ್ಚಿ ಹೋಗುವಂತೆ ಆಗಲಿ..."!
ಆದರೆ ನನ್ನ ಮಳೆಯಲ್ಲಿ ಸ್ವತಃ ನನ್ನ ದೇವರೇ ಕೊಚ್ಚಿಕೊಂಡು ಹೋಗಿದ್ದ!!
ಹೊರಗಡೆ ಜೋರು ಧಾರಕಾರ ಮಳೆ.
ನನ್ನೊಳಗೆ ಕೂಡ..!
ನಾನು ಮತ್ತೆ ಬಿಕ್ಕಿ ಬಿಕ್ಕಿ ಅತ್ತೆ.!
.....................................................................................
#ಪುಷ್ಯರಾಗ🧡
ab pacchu
(ಚಿತ್ರಕೃಪೆ - ಅಂತರ್ಜಾಲ)
Comments
Post a Comment