ಕಿಲಾಡಿ ಹಾವು..
ನಮ್ಮೂರಲ್ಲಿ ಒಂದು ಹಾವು ಇದೆ.ಅದು ಬೇರೆಲ್ಲಿಯೂ ಇಲ್ಲ.ನಮ್ಮ ಮನೆಯ ಹಿಂದಿನ ಕಲ್ಪನೆಯಲ್ಲಿಯೇ ಇದೆ.ಕಲ್ಪನೆ ಅಂದರೆ ಕೆಂಪು ಕಲ್ಲಿನ ಕೋರೆ.ಯಾವುದೇ ಸಣ್ಣಪುಟ್ಟ ಕೇರೆ ಹಾವು,ಪಜ್ಜಿಮರಿ(ಹಸಿರು ಹಾವು)ಹಾವು ಅದಲ್ಲ.ಅದೊಂದು ದುಷ್ಟಪುಷ್ಟವಾಗಿ ಬೆಳೆದಿರುವ ದಡೂತಿ ಹೆಬ್ಬಾವು.
ಊರಿನ ಜನರು ಅದನ್ನು ನಮ್ಮ ಮನೆಯ ಹಾವು.. ಪಚ್ಚುನ ಮನೆಯ ಹಾವು.. ಎಂದೇ ಹೇಳುತ್ತಾರೆ.ದೇವರಾಣೆಗೂ ಅದು ನಮ್ಮ ಮನೆಯ ಹಾವು ಅಲ್ಲ.ನಾವು ಹಾವು ಎಲ್ಲಾ ಸಾಕುವುದಿಲ್ಲ.ಅದು ಎಲ್ಲಿಂದಲೋ ಬಂದು ಅಲ್ಲಿ ಹೊಕ್ಕಿ ಬಿಟ್ಟಿದೆ...ಇದು ನನ್ನದೇ ಸಾಮ್ರಾಜ್ಯ ..ಇಲ್ಲಿ ನಾನು ಮಾಡಿದ್ದೇ ಶಾಸನ,ನನ್ನದೇ ಕಾನೂನು.. ಎಂದೆಲ್ಲಾ ಆ ಕಲ್ಲಿನ ಕಲ್ಪನೆಯೊಳಗಿನ ಲೋಕವನ್ನು ಆ ಹೆಬ್ಬಾವು ಈಗ ಆಳುತ್ತಿದೆ.
ಮೊದಲು ನಮ್ಮ ಮನೆಯ ಬೆಕ್ಕುಗಳು ಮಾಯ ಆಗುತ್ತಿದ್ದದ್ದು ತುಂಬಾ ಕಡಿಮೆ.ಒಂದು ದಿನ ಗಂಡು ಬೆಕ್ಕು ಮಾಯವಾಯಿತು. ನಮ್ಮೂರಲ್ಲಿ ಒಂದು ಮಾತಿದೆ.ಗಂಡು ಬೆಕ್ಕುಗಳು ಮನೆಯಲ್ಲಿ ಹೆಚ್ಚಾಗಿ ಇರುವುದಿಲ್ಲ,ಅದು ದೊಡ್ದದಾದ ನಂತರ ಕಾಡು ಸೇರುತ್ತವೆ,ಮುಂದೆ ಕಾಡು ಬೆಕ್ಕು ಆಗುತ್ತದೆ,ಲೋಕಲ್ ಹುಲಿ ಆಗುತ್ತದೆ ಎಂಬೆಲ್ಲಾ ಬಹಳ ರೋಚಕವಾದ ಕಥೆಗಳಿವೆ.
ನಾನು ಮೊದಲಿಗೆ ನಮ್ಮ ಮನೆಯ ಗಂಡು ಬೆಕ್ಕು ಮಾಯವಾದಾಗ ಇದು ಸ ಅದೇ ಮ್ಯಾಟರ್ ಇರಬೇಕು ಎಂದುಕೊಂಡು ಸುಮ್ಮನಾದೆ.ಆದರೆ ದಿನಕಳೆದಂತೆ ಮನೆಗೆ ತಂದ ಹೆಣ್ಣು ಬೆಕ್ಕುಗಳು ಕೂಡ ಒಂದರ ನಂತರ ಒಂದು ಮಾಯವಾಗತೊಡಗಿತು.ಅದಕ್ಕೂ ಹಿಂದೆ ಆ ರೀತಿ ಎಲ್ಲಾ ಆಗಿದ್ದೇ ಇಲ್ಲ.ಹೆಣ್ಣು ಬೆಕ್ಕುಗಳು ಮನೆಯ ನಂದಾದೀಪ ಬೆಳಗುವ ಬೆಸ್ಟ್ ಬೆಕ್ಕುಗಳು ಅಂತ ನಾನು ನಂಬಿದ್ದೆ.ಆ ನಂಬಿಕೆಗೆ ಈಗ ಬಲವಾದ ಕೊಡಲಿಯೇಟು ಬಿದ್ದಿತ್ತು.
ಮನೆಯ ಸುತ್ತಮುತ್ತ ಸರ್ಚಿಂಗ್,ಕೂಂಬಿಗ್ ಅಪರೇಷನ್ ಎಲ್ಲಾ ನಾನು ಶುರು ಮಾಡಿದೆ.ಮನೆಯ ಸುತ್ತ ಮುತ್ತ ಗುಡ್ಡವೇ ಇರುವುದು.ಹಲವಾರು ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಪತ್ತೇದಾರಿ ಸಿನಿಮಾ ನೋಡಿದ ಅನುಭವದಿಂದ ನಾನು ಕೂಡ ಬೇರೆ ಬೇರೆ ಕೋನದಿಂದ ಲಾಜಿಕ್ ಎಲ್ಲಾ ಹಾಕಿ ಹುಡುಕಲು ಶುರು ಮಾಡಿದೆ.ಅಲ್ಲಿ ಹೋಗಿರಬಹುದಾ, ಇಲ್ಲಿ ಹೋಗಿರಬಹುದಾ ಅಂತ ಎಲ್ಲಾ ಕಡೆಗೆ ಹೋಗಿ ಹೋಗಿ ಕೊನೆಗೆ ಆ ಕಲ್ಲಿನ ಕಲ್ಪನೆಯ ಬಳಿಗೆ ಹೋದಾಗ ಹೆಬ್ಬಾವು ನಮ್ಮ ಮನೆಯ ಬೆಕ್ಕನ್ನು ಬಾಯಿಗೆ ಎಲೆ ಅಡಿಕೆ ಹಾಕಿಕೊಳ್ಳುವಂತೆ ಆರಾಮವಾಗಿ ನಗು ನಗುತ್ತಾ ನುಂಗುತ್ತಿತ್ತು.
ಆ ಭೀಕರ ದೃಶ್ಯವನ್ನು ನೋಡಿದವನೇ ಎದೆ ಹೊಡೆದುಕೊಂಡು ಎದ್ದು ಬಿದ್ದು ಮನೆಗೆ ಓಡಿದೆ.ನನಗೆ ಹಾವುಗಳು ಅಂದರೆ ಅಷ್ಟಾಗಿ ಆಗುವುದಿಲ್ಲ. ಅದರಲ್ಲೂ ಹೆಬ್ಬಾವು ಇದ್ದರೆ ಅನಕೊಂಡದಷ್ಟು ಬೇಜಾರು.ಮನೆಗೆ ಬಂದು ಅಪ್ಪನಿಗೆ ವರಿದಿ ಒಪ್ಪಿಸಿದೆ.. ಅಪ್ಪಾ.. ವಿಷಯ ಎಂತ ಗೊತ್ತುಂಟಾ.. ಅದು ನಮ್ಮ ಮನೆಯ ಬೆಕ್ಕುಗಳೆಲ್ಲಾ ನಾಡು ಬಿಟ್ಟು ಕಾಡು ಸೇರುವುದೆಲ್ಲವೂ ಸತ್ಯಕ್ಕೆ ಬಹಳ ದೂರವಾದ ಮಾತು,ಇದು ಎಲ್ಲಾ ಕಲ್ಪನೆಯಲ್ಲಿರುವ ಆ ಹೆಬ್ಬಾವಿನ ಕೈ ಚಳಕ. ಅದು ನಮ್ಮ ಮನೆಯ ಬೆಕ್ಕುಗಳನ್ನು ನಿರಂತರವಾಗಿ ನುಂಗಿ ನೀರು ಕುಡಿಯುತ್ತಲೇ ಇದೆ.. ಎಂದು ಹೇಳಿದೆ.
ಅದಕ್ಕೆ ನನ್ನ ಅಪ್ಪ ಕ್ರೋಧದಿಂದ.. ಅದನ್ನು ನೋಡಿಯೂ ನೀನು ಏನು ಹಲ್ಲು ಕಿಸಿಯುತ್ತಿದ್ದೆ ಅಲ್ಲಿ..ಬೆಕ್ಕನ್ನು ಹಾವಿನ ಬಾಯಿಯಿಂದ ಬಿಡಿಸಲು ನಿನಗೆ ಏನು ಸಂಕಟ..😡? ಎಂದು ನನ್ನ ಮೇಲೆಯೇ ಎಗರಾಡಿದರು. ನನಗೆ ಏನು ಹೇಳಬೇಕು ಎಂದು ತೋಚಲಿಲ್ಲ.
ಕೊನೆಗೆ ಈ ರೀತಿ ಸಮಜಾಯಿಷಿ ಹೇಳಿದೆ...ಅಪ್ಪ ನೋಡಿ.. ಇದು ಪರಿಸರ ವ್ಯವಸ್ಥೆಯಲ್ಲಿ ಆಹಾರ ಸರಪಳಿ ಅಂತ ಒಂದು ಇದೆ.. ಇಲಿಯನ್ನು ಬೆಕ್ಕು ತಿನ್ನುತ್ತದೆ.. ಬೆಕ್ಕನ್ನು ಹೆಬ್ಬಾವು ತಿನ್ನುತ್ತದೆ.. ಹೆಬ್ಬಾವನ್ನು ರಣಹದ್ದು ತಿನ್ನುತ್ತದೆ.. ರಣಹದ್ದನ್ನು.... ಆಮೇಲೆ ನೆಕ್ಸ್ಟ್ ಏನು ತಿನ್ನುತ್ತದೆ ಎಂದು ಗೊತ್ತಾಗದೇ ತಿನ್ನುವ ಆ ಸರಪಳಿಯನ್ನು ಅಲ್ಲಿಗೆ ನಿಲ್ಲಿಸಿ... ಹಾಗಾಗಿ ಒಂದನ್ನೊಂದು ತಿನ್ನುವುದು ಜಗತ್ತಿನ ನಿಯಮ.. ನಾವು ಅದರ ಬಾಯಿಗೆ ಕೈ ಹಾಕಿ ಅದರ ಆಹಾರವನ್ನು ಕಿತ್ತುಕೊಳ್ಳುವುದು ಪ್ರಕೃತಿಗೆ ವಿರೋಧ ಅಪ್ಪ..ಅದೆಲ್ಲಾ ತಪ್ಪಾಗ್ತದೆ.. ಎಂದೆಲ್ಲಾ ಹೇಳಿದೆನಾದರೂ ಅಪ್ಪನಿಗೆ ಒಂಚೂರು ಸಮಾಧಾನವೇ ಆಗಲಿಲ್ಲ.ಏಕೆಂದರೆ ಅವರಿಗೆ ಮನುಷ್ಯರಿಗಿಂತಲೂ ಮನೆಯ ದನ, ಬೆಕ್ಕು,ನಾಯಿ ಅಂದರೆನೇ ಹೆಚ್ಚು ಪ್ರೀತಿ.. ಹಾಗಾಗಿ ನನಗೆ ಇಡೀ ದಿನಾ ಬೈಯುತ್ತಲೇ ಇದ್ದರು.ಆದರೆ ನಿಜ ಹೇಳಬೇಕೆಂದರೆ ಅಪ್ಪನಿಗೂ ಹಾವು ಕಂಡರೆ ಅಂತಹ ಧೈರ್ಯ ಏನೂ ಇಲ್ಲ.ಅವರು ಕೂಡ ಅದರಿಂದ ಕಂಡಾಬಟ್ಟೆ ದೂರ ಓಡುವವರೇ.
ನನ್ನ ಸತ್ಯ ಶೋಧನೆಯ ನಂತರವೂ ನಮ್ಮ ಮನೆಯ ಬೆಕ್ಕುಗಳು ನಿರಂತರವಾಗಿ ಮಾಯವಾಗುತ್ತಲೇ ಇದ್ದವು. ಕಲ್ಪನೆಯ ಕಡೆಗೆ ಹೋಗುವ ಬೆಕ್ಕುಗಳನ್ನು ಹೆಬ್ಬಾವು ಸ್ವಾಹ ಮಾಡಿ ಕೇಕೆ ಹಾಕುತ್ತಿತ್ತು ಮತ್ತು ಪರೋಕ್ಷವಾಗಿ ನಮಗೆ ಚ್ಯಾಲೆಂಜ್ ಮಾಡುತ್ತಿತ್ತು.ನನಗೆ ಹಾವು ಹಿಡಿಯುವ ಚಾಕಚಕ್ಯತೆ ಇಲ್ಲ. ಹಾಗಾಗಿ ಗ್ರೌಂಡಿಗೆ ಆಟವಾಡಲು ಹೋಗುವ ಸಣ್ಣ ಪುಟ್ಟ ಮಕ್ಕಳಿಗೆ ರಿಕ್ವೆಷ್ಟ್ ಮಾಡಿದೆ. ನೋಡಿ ಒಂದು ಕೆಲಸ ಇದೆ ಅದು ಮಾಡಿದರೆ ನಿಮಗೆ ನನ್ನ ಲೆಕ್ಕದಲ್ಲಿ ಒಂದು ದೊಡ್ಡ ಪಾರ್ಟಿ ಕೊಡುತ್ತೇನೆ ಎಂದು ಹೇಳಿದೆ.ಅದಕ್ಕೆ ಅವರು ಖುಷಿಯಿಂದ.. ಆಯಿತು ಏನು ಹೇಳಿ.. ಎಂದು ಕೇಳಿದರು. ನಾನು.. ಒಂದು ಹೆಬ್ಬಾವು ಹಿಡಿಯಬೇಕು ಎಂದು ಹೇಳಿದೆ. ಸಾಯಿರಿ ಮರ್ರೆ ನೀವು...ನಮ್ಮನ್ನು ಹಾವಿನ ಬಾಯಿಗೆ ತಳ್ಳುವ ನಿಮಗೆ ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲವಾ..😡😡.. ಎಂದು ನನಗೆ ಆಕ್ರೋಶದಿಂದ ಹಿಡಿಶಾಪ ಹಾಕಿ ಹೊರಟು ಹೋದರು.
ಈಗೀಗ ನಮ್ಮ ಮನೆಯದ್ದು ಮಾತ್ರವಲ್ಲ ಹಲವು ಮನೆಗಳ ಬೆಕ್ಕು ಮಾಯವಾಗುತ್ತಿದ್ದು ಮತ್ತು ಅದಕ್ಕೆ ನೇರಾ ಕಾರಣ ಪಚ್ಚುವಿನ ಮನೆಯ ಹೆಬ್ಬಾವು ಎಂದು ಜನರು ಆಡಿಕೊಳ್ಳುತ್ತಿರುವುದು ಬಲ್ಲ ಮೂಲಗಳಿಂದ ನನಗೆ ತಿಳಿದು ಬಂದಿದೆ. ಹಾಗಾಗಿ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿರುವ ಅವರ ಆಕ್ರೋಶ ಯಾವಾಗ ಬೇಕಾದರೂ ಹೊರಗೆ ಬೀಳಬಹುದು ಮತ್ತು ನಮ್ಮ ಮನೆಯ ಮುಂದೆ ಹರತಾಳ,ಪ್ರತಿಭಟನೆ ನಡೆದರೆ ಇಲ್ಲವೇ ಕನಿಷ್ಟ ಪಕ್ಷ ಎಲ್ಲರೂ ಸೇರಿ ಚೀಮಾರಿ ಹಾಕುವ ಕೆಲಸಕ್ಕೆ ಕೈ ಹಾಕಿದರೆ ಕೂಡ ಅದು ಅಂತಹ ಅಚ್ಚರಿಯ ವಿಷಯವೇನಲ್ಲ.
ಪಕ್ಕದ ಮನೆಯವರ ಒಂದೊಂದೇ ನಾಯಿ ಬೆಕ್ಕುಗಳು ಮಾಯವಾದಾಗ ನಮ್ಮ ಮನೆ ರಣರಂಗವಾಗಿ ಬಿಡುತ್ತದೆ.ನಾನು ಅಪ್ಪನಿಗೆ ಹೇಳ್ತೇನೆ.. ಅಪ್ಪ ನೀವು ದೊಡ್ಡ ಬೇಟೆಗಾರ.. ಕಾಡಿನಲ್ಲಿ ಶಿಕಾರಿಗೆ ಎಲ್ಲಾ ಹೋಗ್ತಾ ಇದ್ದೆ ಎಂದು ಹೇಳ್ತಿರಿ ಅಲ್ವಾ.. ಯಕಶ್ಚಿತ್ ಒಂದು ಹೆಬ್ಬಾವಿನಿಂದ ನಮ್ಮ ಮನೆಯ ಗೌರವ ರಕ್ಷಣೆ ಮಾಡ್ಲಿಕ್ಕೆ ನಿಮ್ಮ ಕೈಯಿಂದ ಆಗ್ತಾ ಇಲ್ಲ ಅಂದ್ರೆ ನೀವೆಂತ ರಣ ಬೇಟೆಗಾರ.. ಎಂದು ಹೇಳಿದರೆ ಅಪ್ಪ ನನಗೆ ಹೇಳುತ್ತಾರೆ.. ನಿನಗೆ ನಾನು ಎಜುಕೇಷನ್ ಎಲ್ಲಾ ಕೊಡಿಸಿದ್ದೇನೆ ಅಲ್ವಾ... ಒಂದು ಹಾವು ಹಿಡಿಲಿಕ್ಕೆ ಆಗದಿದ್ದರೆ ಮತ್ತೆ ನೀನು ಎಂತಕ್ಕೆ ಶಾಲೆಗೆ ಹೋಗಿದ್ದು.. 😡😡!!
ಅಲ್ಲ ಮಾರ್ರೆ... ಶಾಲೆಯಲ್ಲಿ ಎಲ್ಲಾ ಹಾವು ಹಿಡಿಯುವುದನ್ನು ಕಲಿಸಿದ್ದರೆ,ಇಷ್ಟೊತ್ತಿಗೆ ನಾನು ಜಿಲ್ಲೆಯ ಖ್ಯಾತ ಉರಗ ತಜ್ಞನೇ ಆಗಿರುತ್ತಿದ್ದೆ...!
ಈ ಹೆಬ್ಬಾವಿಗೆ ಏನಾದರೊಂದು ಮದ್ದು ಅರೆಯಲೇಬೇಕು ನಾನು.. ಇಲ್ಲದಿದ್ದರೆ ನನ್ನ ಮಾರ್ಯಾದೆ ದಶ ದಿಕ್ಕುಗಳಲ್ಲೂ ಹೋಲ್ ಸೇಲ್ ಆಗಿ ಹರಾಜು ಆಗುವುದು ಗ್ಯಾರಂಟಿ..!
#ವಿಷಯ_ಎಂತ_ಗೊತ್ತುಂಟಾ..
ab pacchu
Comments
Post a Comment