ಬೆಟ್ಟದ ಸುಖ
ಮನಸ್ಸು ಬಂದಾಗಲೆಲ್ಲ ಸುಮ್ಮನೆ ಬೆಟ್ಟ ಹತ್ತುವುದು, ಗೊತ್ತಿದ್ದರೂ ಪ್ರತೀ ಬಾರಿಯೂ ತುದಿಯಲ್ಲಿ ಕುಳಿತುಕೊಂಡು ಎಲ್ಲಿ ನಮ್ಮೂರು,ಹಸಿರು ಗದ್ದೆ,ಆಟದ ಮೈದಾನ ಎಂದು ಇಂಚಿಚೂ ಕ್ಷಣಕಾಲ ಕಣ್ಣಗಲಿಸಿ ಹುಡುಕುವುದು,ದೃಷ್ಟಿಗೆ ಬಿದ್ದಾಗ ಬಹಳಷ್ಟು ಸಿಕ್ಕಂತೆ ಸುಮ್ಮನೆ ನಗುವುದು,ಮತ್ತೆ ಬೆಟ್ಟದಲ್ಲಿ ಬೇಕೆಂದೇ ದಾರಿ ತಪ್ಪುವುದು,ಹಳೆ ಗಿಡ,ಹೊಸ ಹೂವು,ಪುರಾತನ ಬಂಡೆಯ ಕಥೆ ಇಷ್ಟಿಷ್ಟೇ ಅರ್ಥವಾಗದಿದ್ದರೂ ಕೇಳುವುದು,ಮುಂದಿನ ಬಾರಿಗೆ ಬಹಳಷ್ಟನ್ನು ಉಳಿಸಿಕೊಳ್ಳುವುದು,ಕೊರಕಲಿನಲ್ಲಿ ತನ್ನಷ್ಟಕ್ಕೆ ಹರಿಯುವ ಹೆಸರಿಲ್ಲದ ತೊರೆಯ ಜುಳುಜುಳು ಸಂಗೀತ ಕಛೇರಿಗೆ ಕಿವಿಯಾಗುವುದು,ಮೊದಲೇ ಕೇಳುತ್ತಿದ್ದ ಅಸಂಖ್ಯಾ ಚಿಟ್ಟೆ ಬಳಗದ ಶೋತೃ ವೃಂದದಲ್ಲಿ ಒಬ್ಬನಾಗುವುದು,ಮಿಠಾಯಿಯಂತಹ ಸಿಹಿ ನೀರು ಮನಸ್ಸು ತಣಿವಂತೆ ಮೊಗೆ ಮೊಗೆದು ಕುಡಿಯುವುದು,ಕಾಡೊಳಗಿನ ಪೇರಳೆ ಸೀತಾಫಲಕ್ಕಾಗಿ ಇನ್ನಿಲ್ಲದಂತೆ ತಡಕಾಡುವುದು,ಬೆಟ್ಟದ ಹಸಿರು ಹೊಟ್ಟೆ ತುಂಬಿದಾಗ ಬೇರೆ ಬಣ್ಣಗಳಿಗಾಗಿ ಗಗನದಂಚಿಗೆ ನೋಡುವುದು,ಆಕಾಶದ ನೀಲಿಯಲ್ಲಿ ಮುದ್ದುಕೃಷ್ಣನ ಬೆಣ್ಣೆ ಮುದ್ದೆಯ ಆಕಾರ ಯಾವುದೆಂದು ಗೊಂದಲಕ್ಕೆ ಬೀಳುವುದು,ಬೆಟ್ಟದಲ್ಲಿ ಶ್ವೇತ ಮಯೂರ ಅಪರೂಪಕ್ಕೆ ಕಣ್ಣಿಗೆ ಬಿದ್ದು ಮರೆಯದಾಗ ಮೈ ಮನವೆಲ್ಲಾ ನವಿಲಿನಂತೆಯೇ ಸಾವಿರ ಕಣ್ಣಾಗುವುದು,ಸಂಜೆಗೆ ನೀಲಿ ಬಾನು ಮೆಲ್ಲಗೆ ಹವಳಗೆಂಪಿಗೆ ತಿರುಗುವುದು,ಮತ್ತೊಮ್ಮೆ ಮೇಲಿಂದ ಮನೆಯ ಕಡೆಗೆ ನೋಡುವುದು,ಸಂಜೆಯ ಸ್ನಾನಕ್ಕೆ ಎಲ್ಲರ ಬಚ್ಚಲು ಮನೆಯ ಹಂಚಿನ ಹೊಗೆ ಊರಿಡೀ ಊದು ಬತ್ತಿ ಹಚ್ಚಿದಂತೆ ತೋರುವುದು,ಅದರಲ್ಲಿ ನಮ್ಮಮ್ಮ ಉರಿಸಿದ ಬತ್ತಿಗಾಗಿ ಮತ್ತೊಮ್ಮೆ ತೀಕ್ಷ್ಣವಾಗಿ ನೋಡುವುದು,ಗೊತ್ತಾಗದೇ ಸೋಲುವುದು,ಕತ್ತಲನ್ನು ಸೇದಲು ಮನೆ ಮನೆಯ ಬೆಳಕು ನೂರಾರು ಪುಟ್ಟ ಹಣತೆಯಾಗುವ ಪರಿಯನ್ನು ಬೆರಗಿನಿಂದ ನೋಡುವುದು,ಬೆಟ್ಟ ಮಾಡಿದ ಆ ಭಗವಂತನಿಗೆ ಮನಸ್ಸಿನಿಂದ ಧನ್ಯವಾದ ಹೇಳುವುದು, ಮನಸ್ಸಿಲ್ಲದಿದ್ದರೂ ಮನಸ್ಸಿಲ್ಲದ ಮನಸ್ಸಿನಿಂದ ಬೆಟ್ಟ ಇಳಿಯುವುದು,ನಾಳೆ ಸಂಜೆಯೂ ಬರಬೇಕು ಎಂದು ಮನಸ್ಸಿಗೆ ತಾಕೀತು ಮಾಡುವುದು,ಮರುದಿನ ದಿನವಿಡೀ ಸಂಜೆ ಬರುವುದನ್ನೇ ಇನ್ನಿಲ್ಲದಂತೆ ಕಾಯುವುದು... ಇಂತಹ ಕಾಯುವಿಕೆಯಲ್ಲಿಯೇ ಸುಲಭಕ್ಕೆ ವಿವರಿಸಲಾಗದ ಬಹಳಷ್ಟು ಸುಖವಿದೆ.
#ಏನೋ_ಒಂದು
ab pacchu
Comments
Post a Comment