ಅವನೊಬ್ಬ ಇದ್ದ ಸೆಹ್ವಾಗ್..
" ಅವನೊಬ್ಬ ಇದ್ದ ಸೆಹ್ವಾಗ್.."
ಭಾರತದ ಆರಂಭಿಕರ ಆಟಕ್ಕೊಂದು ಕಿಚ್ಚು ಹಚ್ಚಿದ್ದು ಅದಕ್ಕೊಂದು ಇನ್ನಿಲ್ಲದಂತೆ ಸ್ಫೋಟಕತೆಯ ಸ್ಪರ್ಶ ನೀಡಿದ್ದು ಅಂತ ಯಾರಾದರೊಬ್ಬರು ಇದ್ದರೆ ಅದು ನಿಸ್ಸಂಶಯವಾಗಿ ಒಬ್ಬನೇ ಆಗಿರುತ್ತಾನೆ.ಅದುವೇ ವಿರೇಂದ್ರ ಸೆಹ್ವಾಗ್.
ಇದು ಭಾರತೀಯ ಕ್ರಿಕೆಟ್ ಗೆ ಮಾತ್ರ ಸಂಬಂಧಿಸಿದ್ದು ಅಲ್ಲ. ಆಗೀನ ಸೆಹ್ವಾಗ್ ಸಮಕಾಲೀನ ಆಟಗಾರರು ಕೂಡ ಜಗತ್ತಿನ ಅತೀ ವಿಸ್ಫೋಟಕ ಆಟಗಾರರಲ್ಲಿ ಸೆಹ್ವಾಗ್ ಹೆಸರನ್ನು ಇಂದಿಗೂ ಹೇಳುತ್ತಾರೆ ಮತ್ತೆ ಮತ್ತೆ ಆ ಸೆಹ್ವಾಗ್ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಸೆಹ್ವಾಗ್ ಇದ್ದಿದ್ದೇ ಹಾಗೇ. ಬಾರಿಸು... ಬಾರಿಸು.. ಮತ್ತೆ ಬಾರಿಸು ಅಷ್ಟೇ.ಇದು ಸೆಹ್ವಾಗ್ ಬ್ಯಾಟಿಂಗ್ ನ ಮೂಲ ಮಂತ್ರ.
ತನ್ನ ವಿಕೆಟ್ ಮೇಲಿನ ಆಸೆಯನ್ನೇ ಹೊಂದದೆ ಮೊದಲ ಓವರಿನ ಮೊದಲ ಎಸೆತಕ್ಕೆಯೇ ಬೌಂಡರಿ ಬಾರಿಸಲು ಮುಂದಾಗುತ್ತಾನೆ ಎಂದರೆ ಅದು ಸೆಹ್ವಾಗ್ ನ ನಿರ್ಭೀತಿಯ ಕ್ರಿಕೆಟ್ ಗೆ ಸಾಕ್ಷಿ. ಸೆಹ್ವಾಗ್ ಗೆ ಬೌಲಿಂಗ್ ಮಾಡುವುದು ಎಂದರೆ ಪ್ರತೀ ಬೌಲರ್ ಗೂ ಅಕ್ಷರಶಃ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವೇ ಪ್ರತೀ ಎಸೆತಕ್ಕೂ ಆಗುವುದು.
ಸೆಹ್ವಾಗ್ ಅದೆಷ್ಟು ಸ್ಫೋಟಕವಾಗಿ ಆಡುತ್ತಿದ್ದ ಎಂದರೆ ಆಗಿನ ಏಕದಿನ ಪಂದ್ಯಗಳಲ್ಲಿ ಮೊದಲ 10 ಓವರ್ ಗಳಲ್ಲಿಯೇ ತಂಡದ ಮೊತ್ತ 100 ದಾಟುತ್ತಿತ್ತು.ಈಗ ಫೀಲ್ಡಿಂಗ್ ನಲ್ಲಿ ಅದೆಷ್ಟು ಸಡಿಲತನವಿದ್ದರೂ ಅಂತಹ ವಿದ್ಯಮಾನ ಕಾಣುವುದು ಬಲು ಅಪರೂಪವೇ ಬಿಡಿ.
ಸೆಹ್ವಾಗ್ ಬಗ್ಗೆ ತುಂಬಾ ಹೇಳಬಹುದು.ಆದರೆ ಸೆಹ್ವಾಗ್ ಗೆ ಸಂಬಂಧಿಸಿದಂತೆ ಎರಡು ಘಟನೆಗಳನ್ನು ಹಂಚಿಕೊಳ್ಳಲು ಇಷ್ಟ ಪಡುತ್ತೇನೆ.ಅದರಲ್ಲಿ ಒಂದು ಸ್ವತಃ ಸೆಹ್ವಾಗ್ ಹೇಳಿದ್ದು ಮತ್ತೊಂದು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದು.
ಸೆಹ್ವಾಗ್ ಈ ಕಥೆಯನ್ನು ಟಿವಿ ಸಂದರ್ಶನ ಒಂದರಲ್ಲಿ ಹೇಳಿದ್ದ.ಒಮ್ಮೆ ಭಾರತ ಮತ್ತು ಪಾಕಿಸ್ತಾನದ ನಡುವೆ ಭಾರತದಲ್ಲಿಯೇ ಟೆಸ್ಟ್ ಮ್ಯಾಚ್ ನಡೆಯುತ್ತಿತ್ತು.ಬಹುಶಃ ಬೆಂಗಳೂರು ಇರಬೇಕು ಅಂತ ಅನ್ನಿಸುತ್ತದೆ.ಸರಿಯಾಗಿ ನೆನಪಿಲ್ಲ.ಆ ಪಂದ್ಯದಲ್ಲಿಯೂ ಸೆಹ್ವಾಗ್ ಎಂದಿನಂತೆ ಬೌಂಡರಿ ಮೇಲೆ ಬೌಂಡರಿ ಬಾರಿಸಿಸುತ್ತಿದ್ದ.ಆಗ ಪಾಕಿಸ್ತಾನದ ಕ್ಯಾಪ್ಟನ್ ಆಗಿದ್ದವನು ಇನ್ಝಮಾಮುಲ್ ಹಕ್.
ಸೆಹ್ವಾಗ್ ನ ಆರ್ಭಟ ನೋಡಿದ ಹಕ್ ಹೆಚ್ಚಿನ ಎಲ್ಲಾ ಫೀಲ್ಡರ್ಸ್ ಗಳನ್ನು ಬೌಂಡರಿ ಲೈನಿಗೆ ಅಟ್ಟಿದ.ಸೆಹ್ವಾಗ್ ಗೆ ತುಂಬಾ ಹೊತ್ತು ಯಾವುದೇ ಬೌಂಡರಿ ಬರಲಿಲ್ಲ. ಬೌಂಡರಿ ಸಿಕ್ಸರ್ ಹೊಡೆಯದೇ ಆಡುವುದು ಅದು ಸೆಹ್ವಾಗ್ ಆಟಕ್ಕೆ ಅಪಮಾನ ಮತ್ತು ಸ್ವತಃ ಸೆಹ್ವಾಗ್ ಗೂ ಕೂಡ ಅಂತಹ ಆಟ ಮಜಾ ನೀಡುವುದಿಲ್ಲ. ಸೆಹ್ವಾಗ್ ಎಷ್ಟೇ ಹೊಡೆದರೂ ಬಾಲ್ ಸೀದಾ ಬೌಂಡರಿ ಬಳಿ ಇರುವ ಫೀಲ್ಡರ್ಸ್ ಬಳಿ ತಲುಪುತ್ತಿತ್ತೇ ಹೊರತು ಸೆಹ್ವಾಗ್ ಗೆ ನಿರಂತರವಾಗಿ ನಾಲ್ಕೈದು ಓವರಿನಲ್ಲಿ ಒಂದೇ ಒಂದು ಬೌಂಡರಿಯೂ ಬರಲಿಲ್ಲ.
ಹೀಗೆ ಆದರೆ ಆಟ ಬೋರಿಂಗ್ ಆಗುತ್ತದೆ ಎಂದು ಅಂದುಕೊಂಡ ಸೆಹ್ವಾಗ್ ಅಲ್ಲೇ ಇದ್ದ ಪಾಕಿಸ್ತಾನ ಕಪ್ತಾನ ಇನ್ಝಮಾಮುಲ್ ಹಕ್ ನನ್ನು ಮೆಲ್ಲಗೆ ಬಳಿ ಕರೆದು ಹೀಗೆ ಹೇಳುತ್ತಾನೆ " ದಯವಿಟ್ಟು ನೀನು ಬೌಂಡರಿಯಲ್ಲಿ ನಿಲ್ಲಿಸಿರುವ ಎಲ್ಲಾ ಫೀಲ್ಡರ್ಸ್ ಗಳನ್ನು ಒಮ್ಮೆ ಮುಂದಕ್ಕೆ ಕರೆದು ಬಿಡು..".ಸೆಹ್ವಾಗ್ ಮಾತು ಅರ್ಥವಾಗದ ಇನ್ಝಮಾಮುಲ್ ಹಕ್ " ಯಾಕೆ..?" ಎಂದು ಕೇಳುತ್ತಾನೆ.
ಅದಕ್ಕೆ ಸೆಹ್ವಾಗ್ ಹೇಳುತ್ತಾನೆ " ನೋಡು ನನಗೆ ಈಗ ಒಂದು ಅರ್ಜೆಂಟಾಗಿ ಸಿಕ್ಸ್ ಹೊಡೆಯಬೇಕು.. ನೀನು ಎಲ್ಲರನ್ನೂ ಮುಂದಕ್ಕೆ ಕರಿ,ಒಂದು ವೇಳೆ ಮುಂದಿನ ಬಾಲ್ ನಲ್ಲಿ ನಾನು ಹೇಳಿದಂತೆಯೇ ಸಿಕ್ಸರ್ ಏನಾದರೂ ಹೊಡೆಯದಿದ್ದರೆ,ಆಗ ಮತ್ತೆ ನೀನು ಎಂದಿನಂತೆ ಫೀಲ್ಡರ್ಸ್ ಗಳನ್ನು ಬೌಂಡರಿ ಲೈನಿಗೆ ಕಳುಹಿಸಿ ಬಿಡು..ಈಗ ಜಸ್ಟ್ ಒಂದು ಬಾಲ್ ಅಷ್ಟೇ" ಎಂದು ಹೇಳಿ ಮುಗಿಸಿದ್ದನಂತೆ ಸೆಹ್ವಾಗ್.
ಇನ್ಝಮಾಮುಲ್ ಹಕ್ ಗೆ ಏನು ಅನಿಸಿತೋ ಗೊತ್ತಿಲ್ಲ.ಆಗಲಿ ನೋಡೇ ಬಿಡುವ ಎಂದು ಲಾಂಗ್ ಆನ್, ಲಾಂಗ್ ಆಫ್,ಡೀಪ್ ಮಿಡ್ ವಿಕೆಟ್ ನಲ್ಲಿದ್ದ ಎಲ್ಲರನ್ನೂ ಮುಂದಕ್ಕೆ ಕರಿಸಿಯೇ ಬಿಟ್ಟ.ಆಗ ಬೌಲಿಂಗ್ ಮಾಡುತ್ತಿದ್ದದ್ದು ದ್ಯಾನೀಶ್ ಕನೇರಿಯಾ.ಅವನಿಗೆ ಹಕ್ ಮತ್ತು ಸೆಹ್ವಾಗ್ ನ ನಡುವಿನ ಈ ಸಂಭಾಷಣೆಗಳು ಗೊತ್ತಿಲ್ಲ.ಅವನು ಎಂದಿನಂತೆ ಬೌಲಿಂಗ್ ಮಾಡಿ ಬಿಟ್ಟ.ಅದೇ ಬಾಲಿಗೆ ಸೆಹ್ವಾಗ್ ತಾನು ಹೇಳಿದಂತೆಯೇ ಮುನ್ನುಗ್ಗಿ ಭರ್ಜರಿ ಸಿಕ್ಸರ್ ಒಂದನ್ನು ಸಿಡಿಸಿ ಬಿಟ್ಟಿದ್ದ.ತನಗೆ ಬೇಕಾದಂತೆ ನಿಲ್ಲಿಸಿದ್ದ ಫೀಲ್ಡಿಂಗ್ ಅನ್ನು ಇನ್ಝಮಾಮುಲ್ ಹಕ್ ಯಾಕೆ ಒಮ್ಮೆಗೆ ಬದಲಾಯಿಸಿದ ಎಂದು ಗೊತ್ತಾಗದೇ ದ್ಯಾನೀಶ್ ಕನೇರಿಯಾ ನೇರವಾಗಿ ಕಪ್ತಾನ ಇನ್ಝಮಾಮುಲ್ ಹಕ್ ಬಳಿ ನಡೆದು ಅವನೊಡನೆಯೇ ಹೀಗೇಕೆ ಮಾಡಿದೆ ಎಂದು ಜಗಳಕ್ಕೆ ನಿಂತನಂತೆ. ನಿನಗೆ ಅದೆಲ್ಲಾ ಗೊತ್ತಾಗಲ್ಲ ಎಂದು ಕನೇರಿಯಾಗೆ ಏನೋ ಒಂದು ಸಬೂಬು ಹೇಳಿದ ಇನ್ಝಮಾಮುಲ್ ಹಕ್ ಮತ್ತೆ ಫೀಲ್ಡರ್ಸ್ ಗಳನ್ನು ತರಾತುರಿಯಲ್ಲಿ ಬೌಂಡರಿ ಬಳಿಗೆ ಓಡಿಸಿ ಬಿಟ್ಟನಂತೆ.ಎಲ್ಲಾ ವಿಷಯ ತಿಳಿದಿದ್ದ ಸೆಹ್ವಾಗ್ ಮಾತ್ರ ಹಕ್ ನನ್ನು ನೋಡಿ ಗ್ರೌಂಡಿನಲ್ಲಿ ಬಿದ್ದು ಬಿದ್ದು ನಗುತ್ತಿದ್ದನಂತೆ.
ಸೆಹ್ವಾಗ್ ಗೆ ಸಂಬಂಧಿಸಿದಂತೆ ಇನ್ನೊಂದು ಘಟನೆಯನ್ನು ರವಿಚಂದ್ರನ್ ಅಶ್ವಿನ್ ಹೇಳಿದ್ದು. ಒಮ್ಮೆ ನೆಟ್ ಪ್ರಾಕ್ಟಿಸ್ ಮಾಡುವಾಗ ಅಶ್ವಿನ್ ಸೆಹ್ವಾಗ್ ಗೆ ನೆಟ್ ನಲ್ಲಿ ಬೌಲಿಂಗ್ ಮಾಡುತ್ತಿದ್ದನಂತೆ.ಅಶ್ವಿನ್ ಹೇಗೆ ಆಫ್ ಸ್ಪಿನ್ ಮಾಡಿದರೂ ಸೆಹ್ವಾಗ್ ಪ್ರತೀ ಬಾಲ್ ಅನ್ನು ಬಹಳ ಸುಲಭವಾಗಿ ಕಟ್ ಮಾಡುತ್ತಿದ್ದನಂತೆ. ಅಶ್ವಿನ್ ಏನೇ ಪ್ರಯತ್ನ ಮಾಡಿದರೂ ಸೆಹ್ವಾಗ್ ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ ನೆಟ್ ನಲ್ಲಿ ಅಶ್ವಿನ್ ನ ಆಫ್ ಸ್ಪಿನ್ ಗೆ ಕಟ್ ಮಾಡುತ್ತಿದ್ದನಂತೆ.
ಇದರಿಂದ ತಲೆ ಕೆಡಿಸಿಕೊಂಡ ಅಶ್ವಿನ್ ನೇರವಾಗಿ ಸೆಹ್ವಾಗ್ ಬಳಿ ಹೋಗಿಯೇ ಕೇಳಿದನಂತೆ.. "ಅಲ್ಲಾ.. ನಾನು ಹೇಗೆ ಬೌಲ್ ಮಾಡಿದರೂ ಅಷ್ಟು ಸುಲಭವಾಗಿ ನೀನು ಹೇಗೆ ಕಟ್ ಮಾಡುತ್ತೀಯಾ?.." ಅದಕ್ಕೆ ಸೆಹ್ವಾಗ್ ಉತ್ತರಿಸಿದ ರೀತಿ ಬಹಳ ಮಜವಾಗಿತ್ತು ಮತ್ತು ಅದು ಆತ ಆಡುತ್ತಿದ್ದ ರೀತಿಯನ್ನೇ ಪ್ರತಿನಿಧಿಸುತ್ತಿತ್ತು. ಸೆಹ್ವಾಗ್ ಹೇಳಿದ್ದು ಇಷ್ಟೇ " ನನಗೆ ಸ್ಪಿನ್ ಬೌಲಿಂಗ್ ಎಂದಿಗೂ ಕಷ್ಟ ಆಗುವುದಿಲ್ಲ, ಅದರಲ್ಲೂ ಆಫ್ ಸ್ಪಿನ್ನರ್ ಗಳಂತು ನನಗೆ ಬೌಲರ್ ಗಳು ಎಂದು ಯಾವತ್ತೂ ಅನ್ನಿಸುವುದೇ ಇಲ್ಲ.ಅವರು ಬೌಲಿಂಗ್ ಮಾಡುವುದೇ ನನ್ನ ಕೈಯಿಂದ ಬೌಂಡರಿ ಹೊಡೆಸಿಕೊಳ್ಳಲು" ಎಂದು ಹೇಳಿ ಮುಗಿಸಿದ್ದನಂತೆ ಸೆಹ್ವಾಗ್.
ಸೆಹ್ವಾಗ್ ಅಂದರೆ ಇದು.ಅವನ ಮಾತು ಆಟ ಎಲ್ಲವೂ ಬಿಂದಾಸ್.
ಸೆಹ್ವಾಗ್ ಗೆ ನಂತರ ಹೇಗೆ ಬಾಲ್ ಮಾಡಬೇಕು ಅನ್ನುವುದು ಅಶ್ವಿನ್ ಗೆ ಗೊತ್ತಾಯಿತು.ಅಶ್ವಿನ್ ಹೇಳುತ್ತಾನೆ.." ನೋಡಿ ನೀವು ಸೆಹ್ವಾಗ್ ಗೆ ಎಷ್ಟೇ ಒಳ್ಳೆಯ ಎಸೆತ ಹಾಕಿದರೂ ಆತ ಬೌಂಡರಿ, ಸಿಕ್ಸರ್ ಬಾರಿಸುತ್ತಾನೆ.ಆತನನ್ನು ಔಟ್ ಮಾಡಬೇಕಾದರೆ ನೀವು ಮಾಡಬೇಕಾದ ಒಂದೇ ಒಂದು ಕೆಲಸ ಎಂದರೆ ದಯವಿಟ್ಟು ನಿಮ್ಮ ಬತ್ತಳಿಕೆಯಲ್ಲಿ ಇರುವ,ಎಂದಿಗೂ ಯಾವ ಒಬ್ಬ ಬೌಲರ್ ಕೂಡ ಹಾಕಲು ಇಷ್ಟ ಪಡದ ಅತೀ ಕೆಟ್ಟ ಎಸೆತವನ್ನು ಸೆಹ್ವಾಗ್ ಗೆ ಹಾಕಿ. ಆಗ ಸೆಹ್ವಾಗ್ ವಿಚಲಿತಗೊಂಡು ಔಟ್ ಆಗುವ ಸಾಧ್ಯತೆ ಇರುತ್ತದೆಯೇ ಹೊರತು ನೀವು ಬರೀ ಉತ್ತಮ ಡೆಲಿವರಿಗಳನ್ನೇ ಆತನತ್ತ ಎಸೆದರೆ ಅವೆಲ್ಲವೂ ಅವನಿಗೆ ಸುಲಭ ತುತ್ತು ಎಂದು ಹೇಳಿದ್ದ ಆರ್.ಅಶ್ವಿನ್.
ಸೆಹ್ವಾಗ್ ಎಂದರೆ ಹಾಗೆಯೇ.ಅಲ್ಲೊಂದು ವಿಸ್ಫೋಟ ಇದ್ದೇ ಇರುತ್ತದೆ. ಎಷ್ಟೇ ದೊಡ್ಡ ಬೌಲರ್ ಆದರೂ ಸೆಹ್ವಾಗ್ ಬ್ಯಾಟಿನ ಮೂಲಕ ಗೌರವ ಕೊಡುವ ಪ್ರಶ್ನೆಯೇ ಎಂದೂ ಇರಲಿಲ್ಲ.ನೀನು ಬಾಲ್ ಹಾಕು, ನಾನು ಹುಡುಕಿ ಹುಡುಕಿ ಬೌಂಡರಿಯನ್ನೇ ಬಾರಿಸುತ್ತೇನೆ ಎನ್ನುವುದು ಸೆಹ್ವಾಗ್ ಫಿಲಾಸಪಿ.
ಸೆಹ್ವಾಗ್ ಭಾರತದ ಇನಿಂಗ್ಸ್ ಓಪನ್ ಮಾಡುವುದಕ್ಕಿಂತ ಮೊದಲಿನ ಕಥೆಯೇ ಬೇರೆ,ಸೆಹ್ವಾಗ್ ಭಾರತದ ಇನ್ನಿಂಗ್ಸ್ ಓಪನ್ ಮಾಡಲು ಶುರು ಮಾಡಿದ ನಂತರದ ಕಥೆಯೇ ಬೇರೆ.
ಸಚಿನ್ ತೆಂಡೂಲ್ಕರ್ ನಂತಹ ಕ್ರಿಕೆಟ್ ದೇವರು ಇದ್ದರೂ ಸಹ ಹಲವರಿಗೆ ಆವಾಗ ಸೆಹ್ವಾಗ್ ಆಟವೇ ಹೆಚ್ಚು ಮುದ ಕೊಡುತ್ತಿದ್ದದ್ದು.
ಸೆಹ್ವಾಗ್ - ಸಚಿನ್ ಜೋಡಿ ಕ್ರೀಸ್ ಮಧ್ಯೆ ಕಾಣಿಸಿಕೊಂಡರೆ ಆಗ ಅದು ಹೋಳಿಗೆ ಮೇಲೆ ತುಪ್ಪ ಬಿದ್ದಂತಹ ಖುಷಿ.ಅವರಿಬ್ಬರ ಜೋಡಿ ಕಣ್ಣಿಗೆ ಅದೆಷ್ಟು ಹಬ್ಬವಾಗಿತ್ತು ಅಂದರೆ ಅದನ್ನು ಟಿವಿ ಪರದೆಯ ಮೇಲೆ ನೋಡಿಯೇ ಕಣ್ಣು ತುಂಬಿಸಿಕೊಳ್ಳಬೇಕಾದ ಸಂಭ್ರಮ.ಇಬ್ಬರೂ ಒಂದೇ ರೀತಿ ಕಾಣುತ್ತಿದ್ದರು ಮಾತ್ರವಲ್ಲ ಒಂದೇ ರೀತಿ ಆಡುತ್ತಿದ್ದರು.ಕೆಲವೊಮ್ಮೆ ಅದು ಯಾರು ಇದು ಯಾರು ಎಂದು ಗೊಂದಲವಾಗುತ್ತಿದ್ದ ಕ್ಷಣಗಳು ಕೂಡ ಇದ್ದವು. ಸಚಿನ್ ತನ್ನ ಟ್ರೇಡ್ ಮಾರ್ಕ್ ಸ್ಟ್ರೈಟ್ ಡ್ರೈವ್ ಗಳನ್ನು ಹುಡುಕಿ ಹುಡುಕಿ ಹೊಡೆಯುತ್ತಿದ್ದರೆ ವೀರು ಬ್ಯಾಟಿನಿಂದ ಬರುತ್ತಿದ್ದ ಸ್ಕ್ವೇರ್ ಕಟ್ ಬೌಂಡರಿಗಳಿಗೆ ಲೆಕ್ಕವೇ ಇರುತ್ತಿರಲಿಲ್ಲ.ಅಂತಹ ಸೆಹ್ವಾಗ್ ಗೆ ಕೂಡ ಸದಾ ರೋಲ್ ಮಾಡೆಲ್ ಆಗಿದ್ದದ್ದು ಇದೇ ಸಚಿನ್ ತೆಂಡೂಲ್ಕರ್ ಅದನ್ನು ಆತ ತುಂಬಾ ಸಲ ಹೇಳಿಕೊಂಡಿದ್ದ ಕೂಡ.ಕ್ರಿಕೆಟ್ ದೇವರು ಕೂಡ ಅಷ್ಟೇ ವೀರುನ ಆಟವನ್ನು ಯಾವತ್ತೋ ಮೆಚ್ಚಿಕೊಂಡು ಬಿಟ್ಟಿದ್ದ.
ಸಚಿನ್-ಗಂಗೂಲಿ, ಸಚಿನ್-ವೀರು ಜೋಡಿಯಂತೆ ಗಂಭೀರ್ ವೀರು ಜೋಡಿ ಕೂಡ ಬಹಳನೇ ಫೇಮಸ್ಸು. ವೀರು ಬಗ್ಗೆ ಹೇಳುವಾಗ ಗಂಭೀರ್ ಕೂಡ ತುಂಬಾ ನೆನಪಾಗಿ ಬಿಡುತ್ತಾನೆ. ಅಂತಹದ್ದೊಂದು ಬಾಂಡಿಂಗ್ ಅವರಿಬ್ಬರ ನಡುವೆಯೂ ಇತ್ತು.
ಸೆಹ್ವಾಗ್ ಬ್ಯಾಟಿಂಗ್ ಮಾಡುವಾಗ ಯಾರಾದರೊಬ್ಬ ಸ್ಪಿನ್ನರ್ ಬೌಲಿಂಗ್ ಮಾಡಲು ಬಂದರೆ ನೋಡುವವ ಬಿಡಿ ಸ್ವತಃ ಬೌಲರ್ ಗೂ ಗೊತ್ತಿರುತ್ತದೆ ಈ ಮಹಾನುಭಾವ ಈಗ ಖಂಡಿತವಾಗಿಯೂ ದೊಡ್ಡ ಹೊಡೆತ ಬಾರಿಸುತ್ತಾನೆ ಎಂದು.ಅದಕ್ಕಾಗಿ ಬೌಲರ್ ಫೀಲ್ಡರ್ಸ್ ಗಳನ್ನು ಬೌಂಡರಿಗೆ ಅಟ್ಟಿದರೂ ಸೆಹ್ವಾಗ್ ಬೌಂಡರಿಯಲ್ಲಿ ನಿಂತಿರುವ ಆ ಫೀಲ್ಡರ್ಸ್ ಗಳ ತಲೆಯ ಮೇಲಿನಿಂದಲೇ ನೇರವಾಗಿ ಸಿಕ್ಸ್ ಬಾರಿಸಿ ಇನ್ನಿಲ್ಲದಂತೆ ಬೆರಗು ಮೂಡಿಸುತ್ತಿದ್ದ.
ಸೆಹ್ವಾಗ್ ನನ್ನು ಬೆಳೆಸಿದ್ದು ದಾದ.ಆತನನ್ನು ಆರಂಭಿಕನನ್ನಾಗಿ ಮಾಡಿದ್ದು ಮಾತ್ರವಲ್ಲ ಸೆಹ್ವಾಗ್ ಫಾರ್ಮ್ ಕಳೆದುಕೊಂಡಾಗಲೂ ಅವನಿಗೆ ಬೆನ್ನಿಗೆ ನಿಂತು ಅವನನ್ನು ತಂಡದಲ್ಲಿ ಸದಾ ಉಳಿಸಿಕೊಳ್ಳುವಂತೆ ಮಾಡಿದ್ದು ಇದೇ ಸೌರವ್ ಗಂಗೂಲಿಯೇ.ಅದನ್ನು ಕೂಡ ಸೆಹ್ವಾಗ್ ತುಂಬಾ ಸಲ ಹೇಳಿಕೊಂಡಿದ್ದಾನೆ.
ಸೆಹ್ವಾಗ್ ಮತ್ತು ದಾದಾ ನ ನಡುವೆ ನಡೆದ ಒಂದು ಮಜಾವಾದ ಪ್ರಸಂಗ ಬಗ್ಗೆಯೂ ಇಲ್ಲಿ ಸ್ವಲ್ಪ ಹೇಳಲೇಬೇಕು.
2001 ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯ ಅದು. ಅದರಲ್ಲಿ ಸೆಹ್ವಾಗ್ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ದಾದನ ಜೊತೆಗೆ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಬಂದಿದ್ದ.
ಆ ದಿನ ಟೀಮ್ ಇಂಡಿಯಾ ಚೇಸ್ ಮಾಡಲು ಗ್ರೌಂಡಿಗೆ ಇಳಿದಾಗ ಸ್ಟ್ರೈಕ್ ನಲ್ಲಿ ಇದ್ದದ್ದು ಇದೇ ಸೆಹ್ವಾಗ್.ಬೌಲಿಂಗ್ ಮಾಡಲು ಬಂದದ್ದು ನ್ಯೂಜಿಲೆಂಡ್ ನ ಡರೇಲ್ ಟಫಿ.
ಟಫಿಯ ಮೊದಲ ಎಸೆತವನ್ನೇ ಸೆಹ್ವಾಗ್ ಬೌಂಡರಿಗೆ ಅಟ್ಟಿದ. ನಾನ್ ಸ್ಟ್ರೈಕ್ ನಲ್ಲಿದ್ದ ಗಂಗೂಲಿ ಸೆಹ್ವಾಗ್ ಬಳಿ ಬಂದು ಹೇಳಿದ, ನೋಡು ನಾವು 265 ರನ್ ಅಷ್ಟೇ ಚೇಸ್ ಮಾಡಲು ಇರುವುದು, ಓವರಿಗೆ 5 ರನ್ ಬಂದರೂ ಸಾಕು.ಹಾಗಾಗಿ ಆರಾಮವಾಗಿ ಆಡು ಎಂದು ಹೇಳಿ ಹೋದನಂತೆ ದಾದ.ಅದಕ್ಕೆ ಆಯಿತು ಎಂದು ಹೇಳಿದ್ದ ಸೆಹ್ವಾಗ್.
ಟಫಿಯ ಮುಂದಿನ ಎಸೆತದಲ್ಲಿ ಸೆಹ್ವಾಗ್ ಮತ್ತೆ ಬೌಂಡರಿ ಹೊಡೆದ. ಪುನಃ ಗಂಗೂಲಿ ಬಂದು ಹೇಳಿದಂತೆ ನೋಡು ನಾವು ನೆಕ್ಸ್ಟ್ ಓವರಿನಲ್ಲಿ ಕೂಡ ರನ್ ಗಳಿಸಬಹುದು ಅರ್ಜೆಂಟ್ ಬೇಡ ಎಂದು ಹೇಳಿದನಂತೆ.
ಆಯಿತು ಎಂದು ಹೇಳಿದ ಸೆಹ್ವಾಗ್ ಟಫಿಯ ಮೂರನೇ ಎಸೆತದಲ್ಲಿ ಪುನಃ ಬೌಂಡರಿ ಬಾರಿಸಿದನಂತೆ.
ಗಂಗೂಲಿ ಮತ್ತೆ ಬಂದು ಹೇಳಿದನಂತೆ ನೋಡು 3 ಓವರ್ ಗಳಿಗೆ ಆಗುವಷ್ಟು ರನ್ ಬಂದಿದೆ, ಸ್ವಲ್ಪ ಮೆತ್ತಗೆ ಆಡು..
ಆಯಿತು ಎಂದು ಹೇಳಿದ ಸೆಹ್ವಾಗ್ ಟಫಿಯ ನಾಲ್ಕನೇ ಎಸೆತದಲ್ಲಿಯೂ ಮತ್ತೆ ಬಾರಿಸಿದ್ದು ಬೌಂಡರಿಯನ್ನೇ!
ಆಗ ತಾಳ್ಮೆ ಕಳೆದುಕೊಂಡ ಗಂಗೂಲಿ ಸೆಹ್ವಾಗ್ ಬಳಿ ಬಂದು ಕ್ರೋಧದಿಂದ ಹೇಳಿದನಂತೆ " ನೀನು ನಾನು ಹೇಳಿದಂತೆ ಕೇಳುತ್ತಿಯೋ ಅಥವಾ ಇಲ್ಲವೋ..". ಅದಕ್ಕೆ ಸೆಹ್ವಾಗ್ ಹೇಳಿದನಂತೆ" ಅವನು ಹೊಡೆಯುವಂತಹ ಫುಲ್ ಟಾಸ್ ಎಸೆತಗಳನ್ನೇ ಹಾಕುತ್ತಿದ್ದರೆ ನಾನು ಯಾಕೆ ಮಿಸ್ ಮಾಡಿಕೊಳ್ಳಲಿ..".
ಆ ನಂತರ ಸೆಹ್ವಾಗ್ ಗೆ ಗಂಗೂಲಿ ಏನೂ ಹೇಳಲೇ ಇಲ್ಲವಂತೆ.ಆ ಪಂದ್ಯದಲ್ಲಿ ಸೆಹ್ವಾಗ್ ಅವನಿಷ್ಟದಂತೆ ಬೌಂಡರಿ ಮೇಲೆ ಬೌಂಡರಿ ಬಾರಿಸಿ ಕೇವಲ 70 ಎಸೆತಗಳಲ್ಲಿಯೇ ತನ್ನ ಶತಕ ಪೂರ್ತಿಗೊಳಿಸಿ ಬಿಟ್ಟಿದ್ದ.
ಬಹುಶಃ ವಿರೇಂದ್ರನನ್ನು ಆ ಸಮಯದಲ್ಲಿ ಪತ್ರಿಕೆಗಳು, ಕಾರ್ಟೂನ್ ಗಳು ಏತಕ್ಕಾಗಿ ಪೋರೆಂದ್ರ ಎಂದು ಕರೆಯುತ್ತಿದ್ದವು ಎಂದು ಈಗ ನಮಗೆಲ್ಲರಿಗೂ ಸ್ಪಷ್ಟವಾಗಿ ಅರಿವಾಗಬಹುದು.
ನಮ್ಮ ಅನಿಲ್ ಕುಂಬ್ಳೆ ಹಾಗೂ ಸೆಹ್ವಾಗ್ ನಡುವೆ ಕೂಡ ಒಂದು ಮಜವಾದ ಪ್ರಸಂಗ ನಡೆದಿದೆ. 2008 ರಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದಾಗ ಅನಿಲ್ ಕುಂಬ್ಳೆ ಉತ್ತಮ ಬ್ಯಾಟಿಂಗ್ ಮಾಡಿ 86 * ರನ್ ಗಳಸಿದ್ದರಂತೆ.ಹೆಚ್ಚು ಕಡಿಮೆ ತನ್ನ ಎರಡನೇ ಟೆಸ್ಟ್ ಶತಕದ(ಕುಂಬ್ಳೆಯ ಮೊದಲನೆಯ ಶತಕ ಇಂಗ್ಲೆಂಡ್ ವಿರುದ್ಧ ಬಂದಿತ್ತು; 110 * ರನ್ನುಗಳು) ಸನಿಹದಲ್ಲಿದ್ದರು ಕುಂಬ್ಳೆ.
ಟೀ ವಿರಾಮದ ವೇಳೆ ಕುಂಬ್ಳೆ ಡ್ರೆಸಿಂಗ್ ರೂಮಿಗೆ ಹೋದಾಗ ಅಲ್ಲಿಯೇ ಇದ್ದ ಸೆಹ್ವಾಗ್ ಕುಂಬ್ಳೆಗೆ ಈ ರೀತಿ ಹೇಳಿದ್ದನಂತೆ "ಯಾಕೆ ಬೇಗ ಬೇಗ ಬೌಂಡರಿ ಬಾರಿಸಿ ನೀನು ನಿನ್ನ ಶತಕ ಪೂರ್ತಿಗೊಳಿಸಬಾರದು...". ಅಲ್ಲಿಯವರೆಗೆ ತನ್ನ ಪಾಡಿಗೆ ಆರಾಮವಾಗಿ ಆಡುತ್ತಿದ್ದ ಕುಂಬ್ಳೆ ಟೀ ವಿರಾಮದ ನಂತರದ ಎರಡನೆಯ ಓವರಿನಲ್ಲಿಯೇ ದೊಡ್ಡ ಹೊಡೆತ ಬಾರಿಸಿಲು ಹೋಗಿ ಔಟಾಗಿ ಬಿಟ್ಟಿದ್ದರಂತೆ.ಈ ವಿಷಯವನ್ನು ಸಹ ಕಾರ್ಯಕ್ರಮ ಒಂದರಲ್ಲಿ ನಗು ನಗುತ್ತಾ ಹೇಳಿ ನೆನಪಿಸಿಕೊಂಡಿದ್ದು ಸ್ವತಃ ಸೆಹ್ವಾಗ್.
ಎಲ್ಲರಿಗೂ ತನ್ನಂತೆ ಆಡಿ ಎಂದು ಹೇಳಿ ಹೆಚ್ಚಿನವರು ಔಟಾಗಿ ಹೋದ ರಸವತ್ತಾದ ಘಟನೆಗಳು ಹಲವಾರು ಇದೆ.ಸೆಹ್ವಾಗ್ ಇರುವುದೇ ಹಾಗೇ.ಮಾಡುವುದು ಇಂತಹ ಕೆಲಸಗಳನ್ನೇ. ಆದರೆ ಯಾರಿಗೂ ಸೆಹ್ವಾಗ್ ತುಂಟತನದ ಬಗ್ಗೆ ಎಳ್ಳಷ್ಟೂ ಬೇಜಾರು ಇಲ್ಲ.ಬ್ಯಾಟಿಂಗ್ ಮಾಡುವಾಗ ಸ್ವತಃ ಹಾಡು ಗುನುಗಿಕೊಳ್ಳುವುದು ಸೆಹ್ವಾಗ್ ನ ಮತ್ತೊಂದು ತರಲೆ ಅಭ್ಯಾಸ.
ಒಮ್ಮೆ ಟಿವಿ ಸಂದರ್ಶನದಲ್ಲಿ ಯಾರೋ ಒಬ್ಬರು ಸೆಹ್ವಾಗ್ ಬಳಿ ಈ ರೀತಿಯಾಗಿ ಕೇಳಿದ್ದರಂತೆ "ವೀರು ನೀವು ಆಡುವಾಗ ಎದುರಾಳಿ ತಂಡದವರಿಗೆ ಯಾವತ್ತೂ ಸಿಕ್ಕಾಪಟ್ಟೆ ಕಿರಿಕಿರಿಯೇ ಆಗಿರಬಹುದು ಅಲ್ಲವೇ..?"
ಅದಕ್ಕೆ ವೀರು ಈ ರೀತಿಯಾಗಿ ಉತ್ತರಿಸಿದ್ದ..
" ಇಲ್ಲ,ಅವರಿಗೆ ಏಕೆ ಕಿರಿಕಿರಿ ಆಗಬೇಕು,ಖಂಡಿತವಾಗಿಯೂ ಇಲ್ಲ. ಅದರ ಬದಲಿಗೆ ಕ್ರೀಸಿನಲ್ಲಿ ಇದ್ದಷ್ಟು ಹೊತ್ತು ನಾನು ಹಾಡು ಹಾಡಿ ಅವರಿಗೆ ಹೆಚ್ಚಿನ ಮನರಂಜನೆಯನ್ನೇ ನೀಡುತ್ತಿದ್ದೆ,ಹಾಗಾಗಿ ವಿಕೆಟ್ ಕೀಪರ್ ಹಾಗೂ ಪಿಚ್ ಬಳಿಯ ಫೀಲ್ಡರ್ಸ್ ಗಳು ನನಗೆ ಯಾವತ್ತೂ ಋಣಿಯಾಗಿರಬೇಕು.. " ಎಂದು ನಗು ನಗುತ್ತಾ ಹೇಳಿ ಮುಗಿಸಿದ್ದ ಈ ವಿರೇಂದ್ರ ಸೆಹ್ವಾಗ್.
ಸೆಹ್ವಾಗ್ ದಾಖಲೆಗಳ ಬಗ್ಗೆ ಬೇಕಾದಷ್ಟು ಹೇಳಬಹುದು. ಅಷ್ಟೊಂದು ದಾಖಲೆಗಳನ್ನು ಆತ ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಭಾರತೀಯರ ಪಾಲಿಗೆ ಹುಳಿ ದ್ರಾಕ್ಷಿಯಾಗಿದ್ದ ಟೆಸ್ಟ್ ನಲ್ಲಿ ತ್ರಿಶತಕವನ್ನು ಬಾರಿಸಿದ್ದು ಇದೇ ಸೆಹ್ವಾಗ್.ಅದೂ ಕೂಡ ಒಂದಲ್ಲ ಎರಡು.ಈಗಲೂ ಟೆಸ್ಟ್ ನಲ್ಲಿ ಭಾರತೀಯರ ವೈಯಕ್ತಿಕ ಸರ್ವಾಧಿಕ ಸ್ಕೋರ್ ಸೆಹ್ವಾಗ್ ಬಾರಿಸಿದ 319 ರನ್ನೇ ಆಗಿದೆ. ಮಾತ್ರವಲ್ಲ ವಿಶ್ವ ಕ್ರಿಕೆಟ್ ನಲ್ಲಿ ಕಡಿಮೆ ಎಸೆತದಲ್ಲಿ 250 ಹಾಗೂ ತ್ರಿಶತಕ ಬಾರಿಸಿದ ದಾಖಲೆ ಇನ್ನೂ ಸೆಹ್ವಾಗ್ ಹೆಸರಿನಲ್ಲಿಯೇ ಇದೆ. ಏಕದಿನದಲ್ಲಿಯೂ ಸೆಹ್ವಾಗ್ ದ್ವಿಶತಕ (219) ಬಾರಿಸಿದ್ದಾನೆ.ಹೀಗೆ ಹೇಳುತ್ತಾ ಹೋದರೆ ಸೆಹ್ವಾಗ್ ದಾಖಲೆಗಳು ಹಲವಾರು.
ಸೆಹ್ವಾಗ್ ಕ್ರಿಕೆಟ್ ಬಿಟ್ಟಾಗ ಸಚಿನ್,ದಾದ,ಯುವಿ,ದ್ರಾವಿಡ್, ಕುಂಬ್ಳೆ ಕ್ರಿಕೆಟ್ ನಿಂದ ದೂರ ಸರಿದಷ್ಟೇ ಬೇಜಾರು ಆಗಿತ್ತು.ಏಕೆಂದರೆ ಈ ವಿಶ್ವ ಕ್ರಿಕೆಟ್ ನಲ್ಲಿ ಸೆಹ್ವಾಗ್ ನಂತಹ ಮತ್ತೊಂದು ಸೆಹ್ವಾಗ್ ಬರಲು ಸಾಧ್ಯವೇ ಇಲ್ಲ. ಬಂದರೂ ನಮ್ಮ ಬಿಂದಾಸ್ ಸೆಹ್ವಾಗ್ ನಂತೆ ಅವರಾರೂ ಆಗಲು ಸಾಧ್ಯವಿಲ್ಲ ಹಾಗೂ ಟೆಸ್ಟ್ ಮ್ಯಾಚ್ ಅನ್ನು ನಿರಂತರವಾಗಿ ಟಿ-ಟ್ವೆಂಟಿ ರೀತಿಯಲ್ಲಿ ಆಡಲಂತು ಯಾರಿಂದಲೂ ಸಾಧ್ಯವೇ ಇಲ್ಲ.
ಅವನೊಬ್ಬನಿದ್ದ ಸೆಹ್ವಾಗ್...
ಮುಂದೆಯೂ ಅವನೊಬ್ಬನೇ.
ಕ್ರಿಕೆಟ್ ಬಿಟ್ಟರೂ ವೀಕ್ಷಕ ವಿವರಣೆ ಮಾಡುವ ಸೆಹ್ವಾಗ್ ಈಗಲೂ ತನ್ನ ಮಜವಾದ ಮಾತಿನ ಮೂಲಕ ಅಷ್ಟೇ ಇಷ್ಟವಾಗುತ್ತಾನೆ. ಅವನು ಬದಲಾಗುವುದಿಲ್ಲ.
ಇವತ್ತು ಸೆಹ್ವಾಗ್ ಹುಟ್ಟಿದ ದಿನ.ಕ್ರಿಕೆಟ್ ಮೂಲಕ ಎಲ್ಲರನ್ನೂ ಮನರಂಜಿಸಿದ್ದಕ್ಕಾಗಿ,ಹಲವಾರು ರಸ ಘಳಿಗೆಗಳನ್ನು ನಮಗೆ ನೀಡಿದ್ದಕ್ಕಾಗಿ ಧನ್ಯವಾದಗಳು ಸೆಹ್ವಾಗ್.ಅದೇ ರೀತಿ ಹುಟ್ಟಿದ ಹಬ್ಬದ ಶುಭಾಶಯಗಳು 💐🎊🎂
#Cricket
Ab Pacchu
Comments
Post a Comment