ವರಂಗದ ಬಣ್ಣಗಳು




ವರಂಗ ತುಂಬಾ ಪುಟ್ಟ ಊರು.ಮೆಲ್ಲಗೆ ಉಸಿರಾಡುತ್ತದೆ.ಆದರೆ ಅದು ಕೂಡ ತನ್ನೊಳಗೆ ಹಲವಾರು ರಂಗು ತುಂಬಿಕೊಂಡಿದ್ದು,ನಿಮಗೊಂದಿಷ್ಟು ನಿಮಗೆ ಬೇಕೆನಿಸುವ ಬಣ್ಣವನ್ನೇ ಬಳಿದು ಮತ್ತೆ ಸುಖವಾಗಿ ನಿಮ್ಮೂರಿಗೆ ಕಳುಹಿಸಿ ಕೊಡುತ್ತದೆ;ಅಜ್ಜಿ ಮನೆಯ ನಮ್ಮೆಲ್ಲರ ಅಜ್ಜಿಯಂತೆ.ದೂರದ ಊರಿನವರಿಗೆ ಪಕ್ಕನೆ ಅದರ ಬಣ್ಣ ಮಾಸುವುದಿಲ್ಲ.ಇಲ್ಲೇ ಸಮೀಪದವರು ಆಗಿದ್ದರೆ ಮಾತ್ರ ಅದರದ್ದೊಂದು ಬಣ್ಣ ಬಲು ಬೇಗನೆ ಕಳೆದುಕೊಂಡು ಬಿಡಬೇಕು,ಹಾಗೂ ಮತ್ತೆ ಹೋಗಿ ವರಂಗದ ಎದುರೇ ಬಣ್ಣ ತುಂಬಿಸಿಕೊಳ್ಳಲು ಮನಸ್ಸು ಬಿಚ್ಚಿಕೊಂಡು ಕಣ್ಣಗಲಿಸಿಕೊಂಡು ನಿಲ್ಲಬೇಕು ಎಂಬುವುದೇ ನನ್ನ ಎಂದಿನ ಅಭಿಪ್ರಾಯ. 



ಹೌದು ವರಂಗಕ್ಕೆ ಅದೆಷ್ಟೋ ಬಣ್ಣ.ಸುಮ್ಮನೆ ನಿಂತುಕೊಂಡು ನೋಡಬೇಕು,ನೋಡುತ್ತಲೇ ಅಲ್ಲಲ್ಲಿ ಹುಡುಕಬೇಕು. ಸಿಕ್ಕಷ್ಟನ್ನು ಹಾಗೇ ನಮ್ಮೊಳಗೆ ತುಂಬಿಸಿಕೊಳ್ಳಬೇಕು.ಹಸಿರು ಗದ್ದೆ ನೋಡುತ್ತಿದ್ದರೆ ಖಾಲಿ ಮನಸ್ಸು ಅರ್ಧ ಭರ್ತಿ.ತೀರದಲ್ಲಿರುವ ನೇಮಿನಾಥ ಸ್ವಾಮಿಯ ಹಳೆಯ ಕಲ್ಲಿನ ಮಾನಸ್ತಂಭಕ್ಕೆ ಪ್ರಕೃತಿಯೇ ಸಮಯ ತೆಗೆದುಕೊಂಡು ಬಳಿದಿರುವುದು ಆಕರ್ಷಕ ಕಪ್ಪು ಬಣ್ಣ.ಕೆರೆ ಬಸದಿಗೆ ಹೋಗಲು ದಂಡೆಯಲ್ಲಿ ಕುಳಿತುಕೊಂಡು ದೋಣಿಗೆ ಕಾಯುವಾಗ ಮೇಲಿನ ಆಕಾಶ ಹೆಚ್ಚಾಗಿ ನೀಲಿ.ಆಕಾಶದಲ್ಲಿ ಅಲ್ಲಲ್ಲಿ ಮೊಸರು ಚೆಲ್ಲಿದಂತಹ ಮೋಡಗಳಿದ್ದರೆ ಅದರ ಬಣ್ಣ ಅಚ್ಚ ಬಿಳಿಯದ್ದೇ ಬಣ್ಣ;ಮುದ್ದು ಕೃಷ್ಣ ಅರ್ಧ ತಿಂದು ಅರ್ಧ ಚೆಲ್ಲಿ ಎಲ್ಲೋ ಆಟವಾಡಲು ಎದ್ದು ಹೋಗಿರಬೇಕು ಎಂದು ಒಮ್ಮೆ ಅನ್ನಿಸಿಬಿಡಬೇಕು.ಕೆರೆ ದಂಡೆಯ ಬಳಿಯೇ ಒಂದು ಸಂಪಿಗೆ ಮರವಿದೆ.ಬೆಳಿಗ್ಗೆ ಬೇಗನೆ ಹೋದರೆ ಒಂದಷ್ಟು ಹೂ ಸಿಗಬಹುದು.ಸಂಪಿಗೆಯ ಬಣ್ಣ ಯಾವುದು? ನನಗೆ ಕೆಲವೊಮ್ಮೆ ಅದು ಬಂಗಾರ ಅನಿಸುತ್ತದೆ. 




ಆ ತೀರದ ದೋಣಿ ಬೇಗ ಬಂದು ಕರೆದುಕೊಂಡು ಹೋಗಲಿ ಎಂಬ ಅವಸರ ಬೇಡ.ಸುಮ್ಮನೆ ನೀರಿನೊಳಗಿನ ಆಟವಾಡುವ ಮೀನುಗಳನ್ನು ನೋಡಿ.ಅದು ಯಾವ ಬಣ್ಣ? ನೀರಿನಡಿಯಲ್ಲಿ ಅವುಗಳಿಗೆ ನೀರಿನದ್ದೇ ಬಣ್ಣ. ಆದರೆ ಕೈಯಲ್ಲಿರುವ ಒಂದಿಷ್ಟು ಮಂಡಕ್ಕಿ ನೀರೊಳಗೆ ಹರಿದಾಡಿದಾಗ ಲಗಾಟೆ ಹೊಡೆವ ಮೀನುಗಳು ನೀರಿಗೆನೇ ಬಳಿದು ಬಿಡಬಲ್ಲದು ಬಹಳಷ್ಟು ಶುಭ್ರ ಬೆಳ್ಳಿಯದ್ದೇ ಬಣ್ಣ.





ದೋಣಿ ಬರುತ್ತದೆ,ಮುಂದೆ ಸಾಗುತ್ತದೆ.ನೈದಿಲೆ ಅಷ್ಟಾಗಿ ಕಣ್ಣಿಗೆ ಬೀಳದಿದ್ದರೂ ಕೆರೆ ಮೇಲೆ ಈಜಾಡುವ ಅದರ ಅಗಣಿತ ಹಸಿರು  ಎಲೆಗಳು ಅದರ ಹುಟ್ಟಿಗೊಂದು ಸಾಕ್ಷಿ.ನೈದಿಲೆ ಎಲೆಯನ್ನು ಅದರ ಪರಿಧಿಯಿಂದ ಕೇಂದ್ರಕ್ಕೆ ತ್ರಿಜ್ಯದಂತೆ ಸೀಳಿದವರು ಯಾರು?ಅದರ ಪೂರ್ಣ ವೃತ್ತವನ್ನು ಕೆಡಿಸಿದವರು ಯಾರು? ಎಂಬ ಪ್ರಶ್ನೆಗಿಂತಲೂ ಸ್ವತಃ ನೈದಿಲೆ ಹೂವು ಕೂಡ ಈ ಕೆರೆಗೆ ಅದರ ಎಲೆಯಷ್ಟು ಸಿಂಗಾರ ಕೊಡಲಾರದೆನೋ ಎಂಬ ಬೆರಗೇ ಅತೀ ಖುಷಿ ಕೊಡುವಂತಹದ್ದು. 





ದೋಣಿಗೆ ವರ್ಷ ವರ್ಷವೂ ಒಂದೇ ಬಣ್ಣವೋ ಅಥವಾ ಬೇರೆ ಬೇರೆಯೋ ಗೊತ್ತಿಲ್ಲ.ನಾನು ಹೋದ ಪ್ರತೀ ಬಾರಿಯೂ ನೀಲಿ ಆಕಾಶದ ಕೆಳಗೆ ಕೆರೆಯ ನಡುವಲ್ಲಿ ತೇಲಾಡುವ ಒಲಾಡುವ ಆ ಪುಟ್ಟ ದೋಣಿಗೆ ನೀಲಿಯೊಂದೇ ಬಣ್ಣ.ದೋಣಿ ಹೋಗುತ್ತಿದ್ದರೆ ಅಮ್ಮ ಪದ್ಮಾವತಿಯ ಬಸದಿಯ ಹಿಂದೆ ಪರದೆ ಎಳೆದಂತೆ ಇರುವುದು ಪಶ್ಚಿಮ ಘಟ್ಟದ ಎತ್ತರದ ಸಾಲು.ಅದರದ್ದೊಂದು ಯಾವಾಗಲೂ ಒಂದೇ ಬಣ್ಣ.ಅದೇ ಕಡು ಹಸಿರು. 


ದೋಣಿ ಪ್ರಯಾಣ ಮುಗಿದ ಬಳಿಕ ಬಸದಿ ಏರಿ ತಾಯಿಯ ದರ್ಶನ ಮಾಡಿ.ವರಂಗದ ಕೇಂದ್ರ ಬಿಂದು ಅವಳು.ಎಲ್ಲಾ ಬಣ್ಣಗಳು ಅವಳ ಮಡಿಲಿನಲ್ಲೇ ಇರುವುದು.ಅಲ್ಲಿ ಎಲ್ಲದಕ್ಕೂ ಸ್ವಲ್ಪ ಸ್ವಲ್ಪ ಪ್ರೀತಿಯಿಂದ ಹಂಚುವುದು ಅವಳೇ.ತುಂಬಾ ಹೊತ್ತು ಅಲ್ಲೇ ಇರಬೇಕು ಅನಿಸುತ್ತದೆ. ಆದರೆ ಎಲ್ಲವನ್ನೂ ಮೆಲುಕು ಹಾಕಲು ಮತ್ತೆ ಆ ಕೆರೆಯ ನಡುವಿಂದ,ಪುಟ್ಟ ಊರು ವರಂಗದಿಂದ ಬಹು ದೂರ ನೀವು ಬರಲೇ ಬೇಕು,ಅಲ್ಲಿಂದ ತುಂಬಿಕೊಂಡು ಬಂದಷ್ಟು ಬಣ್ಣಗಳು ಸದಾ ನಿಮ್ಮವೇ.ಮತ್ತೆ ಬೇಗನೆ ಹೋಗಲು ಅವಕಾಶ ಇರದಿದ್ದರೆ ಅವುಗಳನ್ನು ಮಸುಕಾಗಲು ಬಿಡಬೇಡಿ. ಹೋಗಲೇ ಬೇಕು ಎಂದು ಇದ್ದರೆ ಅದು ಅದರಷ್ಟಕ್ಕೆ ಕರಗಿ ಹೋಗುವುದು  ಹಾಗೂ ನೀವು ಮತ್ತೊಮ್ಮೆ ವರಂಗದ ಎದುರು ಹಾಗೂ ಕೆರೆ ಮೇಲಿನ ಆ ದೋಣಿಯಲ್ಲಿ ಹಳೆಯ ಬಣ್ಣಗಳನ್ನು ಹುಡುಕುತ್ತಾ,ಒಂದಷ್ಟು ಹೊಸದನ್ನು ಹೆಕ್ಕುತ್ತಾ ಸಾಗುತ್ತಿರುತ್ತೀರಾ.. 


ನನಗೆ ಅಲ್ಲಿ ಒಬ್ಬನೇ ಹೋಗುವುದು ಅಂದರೆ ಇಷ್ಟ.ಕಾರ್ಕಳ ಪೇಟೆಯಲ್ಲಿ ನಿಂತಾಗ ಪದ್ಮಾವತಿ ಅಮ್ಮ ನೆನಪಾಗಲು ಹಲವು ಕಾರಣಗಳು.ಒಂದು ಅವಳು ಮತ್ತೊಂದು ಅವಳ ಕೆರೆ ಬಸದಿಗೆ ಹೋಗಲು ಇರುವ ದೋಣಿ ಪ್ರಯಾಣ ಹಾಗೂ ಕಾರ್ಕಳದಿಂದ ಯಾವ ಕವಲು ಹಿಡಿದು ಸಾಗಿದರೂ ಕಣ್ಣಿಗೆ ಮುದ ನೀಡುವ ಹಚ್ಚ ಹಸಿರ ಹಾದಿ...


#ಏನೋ_ಒಂದು

ab pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..