ರತ್ನನ್ ಪ್ರಪಂಚ
#ರತ್ನನ್_ಪ್ರಪಂಚ | Prime
ಕೆಲವೊಂದನ್ನು ಹುಡುಕಬಾರದು.
ಕೆದಕುತ್ತಾ ಅಂತು ಎಂದಿಗೂ ಹೋಗಲೇ ಬಾರದು!
ಇಲ್ಲಿ ಎಲ್ಲವನ್ನೂ ಮೊದಲಿನಿಂದಲೇ ಸರಿ ಪಡಿಸಲು ಯಾರಿಗೆ ಸಾಧ್ಯವಿದೆ ಹೇಳಿ?
ಸತ್ಯಾನ್ವೇಷಣೆ ತುಂಬಾ ಒಳ್ಳೆಯದೇ,ಆದರೆ ಸಂಬಂಧಗಳಿಗೆ ಪೆಟ್ಟು ಬೀಳುವುದಾದರೆ ಆ ಮೂಲದ ಶೋಧನೆಯಲ್ಲಿ ಸುಖಕ್ಕಿಂತಲೂ ದುಃಖದ ಪಾಲೇ ಅಧಿಕ!
ಇಲ್ಲಿಯೂ ಒಬ್ಬ ಇದ್ದಾನೆ.
ಅವನಿಗೆ ಒಂದು ದಿನ ಸತ್ಯ ಗೊತ್ತಾಗಿ ಬಿಡುತ್ತದೆ.ಅದೇನೆಂದರೆ ನನ್ನ ತಾಯಿ ನನ್ನ ಹೆತ್ತ ತಾಯಿಯಲ್ಲ, ಬದಲಿಗೆ ಅವಳು ಸಾಕು ತಾಯಿ ಎಂದು!
ಕೇಳುತ್ತಾನೆ..
ಅವನು ತನ್ನ ಸಾಕು ತಾಯಿಯ ಬಳಿಯೇ ಕೇಳುತ್ತಾನೆ...ಯಾಕಮ್ಮಾ ನನಗೆ ಹೀಗೆ ಮಾಡಿದೆ? ನೀನೇ ನನ್ನ ತಾಯಿ ಎಂದು ಏಕೆ ಸುಳ್ಳು ಹೇಳಿ ನಂಬಿಸಿದೆ..?
ಅದಕ್ಕೆ ಆ ತಾಯಿ ಅವನ ಹೆತ್ತ ಅಮ್ಮನಂತೆಯೇ ಹೇಳುತ್ತಾಳೆ..ಇಲ್ಲ ಅಪ್ಪ... ನಾನು ನಿನ್ನನ್ನು ಹೆತ್ತಿಲ್ಲ ನಿಜ.. ಆದರೆ ಯಾವತ್ತೂ ನೀನು ಮಾತ್ರ ನನಗೆ ಮಗನೇ ಆಗಿದ್ದೆ.ನೀನು ಬಂದ ಮೇಲೆಯೇ ನಾನು ತಾಯಿ ಆಗಿದ್ದು.ನಾನು ಹೆತ್ತ ಮಗ ಬೇರೆ ಅಲ್ಲ,ನೀನು ಬೇರೆ ಅಲ್ಲ.. ಯಾವತ್ತೂ ನಾನು ಅಂತಹ ತಾರತಮ್ಯ ಇಬ್ಬರಿಗೂ ಕೂಡ ಮಾಡಿದವಳೇ ಅಲ್ಲ,ನೀನು ನನ್ನ ಮಗನೇ ಅಪ್ಪ... ನೀನು ನನ್ನ ದೊಡ್ಡ ಮಗ.. ಎಂದು ಹೇಳುತ್ತಾಳೆ ಆ ತಾಯಿ.
ಆದರೆ ಯಾವತ್ತಿದ್ದರೂ ಹೆತ್ತ ತಾಯಿನೇ ನಿಜವಾದ ತಾಯಿ,ಸಾಕು ತಾಯಿ ಎಂದಿಗೂ ಹೆತ್ತ ತಾಯಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ ಮಗ.. ತನ್ನ ನಿಜವಾದ ತಾಯಿಯನ್ನೇ ಹುಡುಕುಲು ಹೊರಡುತ್ತಾನೆ.
ಸಾಕು ತಾಯಿ ಸಮ್ಮತಿಸುತ್ತಾಳೆ. ಅವನಿಗೆ ಮನಸಾರೆ ಹರಸುತ್ತಾಳೆ.ಅವನಿಗೊಂದು ದೃಷ್ಟಿ ಕೂಡ ತೆಗೆಸುತ್ತಾಳೆ.. ಖರ್ಚಿಗೆ ಹಣ ಏನಾದರೂ ಬೇಕಾ ಮಗನೇ ಎಂದು ಅಕ್ಕರೆಯಿಂದ ಎಂದಿನಂತೆ ಕೇಳುತ್ತಾಳೆ.. ಬುತ್ತಿ ಕಟ್ಟಿ ಇಟ್ಟಿದ್ದೇನೆ ತೆಗೆದುಕೊಂಡು ಹೋಗಪ್ಪ ಎಂದು ಪ್ರೀತಿಯಿಂದ ನೆತ್ತಿ ಸವರುತ್ತಾಳೆ..ಒಬ್ಬನೇ ಹೊಗ್ತಿದ್ದೀಯಾ ಜಾಗ್ರತೆ.. ಎಂದು ಕಾಳಜಿ ತೋರಿಸುತ್ತಾಳೆ.
ಮಗ ಹೇಳುತ್ತಾನೆ.. ಆಯ್ತಾಮ್ಮ ನಂಗೆ ಟೈಮಾಗ್ತಿದೆ,ನಾನು ಹೋಗ್ತೇನೆ..
ತಾಯಿ ಹೇಳ್ತಾಳೆ.. ಹೋಗ್ತೇನೆ ಅಂತ ಹೇಳ್ಬೇಡಪ್ಪ.. ಹೋಗಿ ಬರ್ತೇನೆ ಅಂತ ಹೇಳು!
ಅವಳು ಮನಸ್ಸಿನಿಂದಲೂ ತುಂಬಾ ಅಮ್ಮಾನೇ.. ಹೃದಯದಿಂದ ಅಮ್ಮ ಎಂದೋ ಆಗಿದ್ದವಳು.
ಆದರೆ ಅವನನ್ನು ಹೆತ್ತಿಲ್ಲ ಅಷ್ಟೇ!
ಮಗ ಹೋಗ್ತಾನೆ...!!
ಯಾರು ಯಾರೋ ಅವನಿಗೆ ಸಿಗ್ತಾರೆ..ಬೇಕಾದವರೇ ಸಿಗ್ತಾರೆ,ಅವನು ಹುಡುಕಿದ್ದಕ್ಕಿಂತೆ ಜಾಸ್ತಿಯೇ ಅವನಿಗೆ ಸಿಕ್ಕಿ ಬಿಡುತ್ತದೆ.ಆದರೆ ನಿಜವಾಗಿಯೂ ಅವನಂತವನಿಗೆ ಬೇಕಾಗಿದ್ದು ಏನು? ಸಿಗಬೇಕಾಗಿದ್ದು ಏನು? ಅದಕ್ಕಾಗಿ ನೀವು ಈ ಮೂವಿಯನ್ನೇ ನೋಡಬೇಕು.
ರೋಹಿತ್ ಪದಕಿ ಇದನ್ನು ನಿರ್ದೇಶಿಸಿದ್ದು ಧನಂಜಯ್,ರೇಬಾ, ಉಮಾಶ್ರೀ,ಶೃತಿ, ಪ್ರಮೋದ್ ಮೊದಲಾದವರ ಸೊಗಸಾದ ಅಭಿನಯವಿದೆ.ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವವನ್ನೇ ತುಂಬಿದ್ದಾರೆ. ಮೊದಲಾರ್ಧ ಹಾಗೇ ಸಲೀಸಾಗಿ ಹೋಗುತ್ತದೆ. ಆದರೆ ಕೊನೆಯಲ್ಲಿ ಮಾತ್ರ ಮನಸ್ಸು ಸಿಕ್ಕಾಪಟ್ಟೆ ಭಾರ;ತಡೆದುಕೊಳ್ಳಲು ಕಷ್ಟವಾಗುವಷ್ಟು.'ಅಲೆಮಾರಿಯೇ' ಹಾಡೊಂದು ಹಾಗೇ ಇಷ್ಟವಾಗುತ್ತದೆ.
ಇದು ಏಕೆ ಚೆನ್ನಾಗಿದೆ ಎಂದರೆ ಇದು ಹೇಳುವ ಕಟು ಸತ್ಯಕ್ಕಾಗಿ ಇದು ಚೆನ್ನಾಗಿದೆ ಮತ್ತು ಇದು ಹೃದಯಕ್ಕೆ ಹತ್ತಿರವಾಗುತ್ತಲೇ ಹೋಗುತ್ತದೆ.ಇದು ಬರೀ ರತ್ನಾಕರನ ಪ್ರಪಂಚ ಅಲ್ಲ.ನಮ್ಮ ನಿಮ್ಮದೂ ಕೂಡ ಹೌದು.ನಾವು ಕೂಡ ಹಾಗೆಯೇ.. ಎಲ್ಲೋ ಏನನ್ನೋ ಹುಡುಕುತ್ತೇವೆ,ದಿನಾ ಜತೆಗೆ ಇದ್ದವರು ದೂರ ಹೋದಾಗ ಇಲ್ಲವೇ ನಾವು ಅವರಿಂದ ದೂರವಾದಾಗಲೇ ಕಳೆದುಕೊಂಡಿರುವುದನ್ನು ಅರಿಯುತ್ತೇವೆ.
ಸಂಬಂಧಗಳ ಬೆಸುಗೆ ದೊಡ್ಡದು.ಅದರಲ್ಲೂ ಅಮ್ಮ ಎಂಬುವವಳ ಸಂಕೋಲೆಯನ್ನು ಎಂದಿಗೂ ಪರೀಕ್ಷಿಸಲೇ ಬಾರದು.ಅದು ಎಂದಿಗೂ ಗಟ್ಟಿಯಾಗಿಯೇ ಇರುತ್ತದೆ,ಸುಮ್ಮನೆ ಕೈ ಹಿಡಿದು ನಡೆಯಬೇಕು.ಚಿಕ್ಕವರಿರುವಾಗ ಅವಳು ನಮ್ಮನ್ನು ನಡೆಸುತ್ತಾಳೆ.ದೊಡ್ಡವರಾದಾಗ ನಾವು ನಡೆಸಬೇಕು.ತಾಯಿ ಹುಟ್ಟಿಸಿದವಳು ಮಾತ್ರ ಅಲ್ಲ,ಪೊರೆದವಳು ಕೂಡ ಹುಟ್ಟಿಸಿದವಳಷ್ಟೇ ದೊಡ್ಡ ತಾಯಿಯೇ! ಏಕೆಂದರೆ ತಾಯಿ ಎನ್ನುವ ಆ ಸ್ಥಾನವೇ ತುಂಬಾ ದೊಡ್ಡದು,ಮಿತಿಗೆ ಸಿಲುಕದಷ್ಟು ಅಗಾಧವಾದದ್ದು.ಕಳೆದುಕೊಳ್ಳದೇ ಅದು ಎಂದಿಗೂ ಅರಿವೇ ಆಗುವುದಿಲ್ಲ!
ನೋಡಿ, ನಿಮಗೂ ಇಷ್ಟವಾಗಬಹುದು ರತ್ನನ ಪ್ರಪಂಚ.
#ರತ್ನನ್_ಪ್ರಪಂಚ | Prime
Kannada Movie
Family Drama
Release - 22 October 2021
#Movies
Ab Pacchu
Comments
Post a Comment