ಒಂದು ಹೊಳೆಯ ಸಿಲ್ಕು ಸೀರೆ..!
ನೀರಿಗೆ ಬಣ್ಣ ಹಚ್ಚಲು ಸಾಧ್ಯವಿಲ್ಲ,ಆದರೆ ಬಣ್ಣವನ್ನು ಹಾಸಬಹುದು.ನಾನು ನೋಡಿದ್ದೇನೆ,ನಮ್ಮೂರ ಹೊಳೆ ರಂಗಾಗಿದ್ದನ್ನು,ನಿಧಾನಕ್ಕೆ ಬಣ್ಣ ಬದಲಾಯಿಸಿದ್ದನ್ನು ನಾನು ಬಹಳ ಹತ್ತಿರದಿಂದಲೇ ಗಮನಿಸಿದ್ದೇನೆ.ಅದೂ ಕೂಡ ಒಂದೆರೆಡು ಬಾರಿ ಅಲ್ಲ,ನಾನು ಹೋದ ಪ್ರತೀ ಬಾರಿಯೂ ಹರಿಯುವ ಹೊಳೆಯ ಆ ನೀರಿಗೆ ಹಲವಾರು ಬಣ್ಣ.
ಹೊಳೆ ಬದಿ ಹೋಗಲು ಒಬ್ಬೊಬ್ಬರಿಗೆ ಒಂದೊಂದು ಕಾರಣ.ನನ್ನ ತಮ್ಮ ಸತೀಶನೂ ಅಲ್ಲಿಗೆ ಹೋಗುತ್ತಾನೆ.ಅವನಲ್ಲಿ ಗಾಳ ಹಾಕುತ್ತಾನೆ;ಹೊಳೆಯ ರುಚಿಯಾದ ಮೀನುಗಳಿಗೆ.ಗಾಳ ಮೀನಿಗೆ ಮಾತ್ರ ಹಾಕುತ್ತಾರೆ,ಹಾಗಂತ ನಾನು ತಿಳಿದುಕೊಂಡಿದ್ದೆ!
ಅವನು ಮಾತ್ರವಲ್ಲ ಊರಿನ ಹಲವು ಹುಡುಗರು ಬಿಡುವಿನ ವೇಳೆಯಲ್ಲಿ ಆ ಹೊಳೆಯ ದಂಡೆಯಲ್ಲಿ ಗಾಳ ಹಿಡಿದು ನಿಂತಿರುತ್ತಾರೆ.ಕೆಲವರಿಗೆ ಸಮಯ ಕಳೆಯಲು ಗಾಳ ಹಾಕುವುದು ಒಂದು ಹವ್ಯಾಸ,ಇನ್ನು ಕೆಲವರಿಗೆ ಹೊಳೆಯೊಳಗಿನ ರುಚಿಕರ ಮೀನು ತಿಂದೇ ಅಭ್ಯಾಸ.
ನನಗೆ ಈ ಗಾಳ,ಹೊಳೆಯ ಮೀನು ಎಲ್ಲದಕ್ಕಿಂತಲೂ ಹೆಚ್ಚು ಇಷ್ಟವಾಗುವುದು ಸ್ವತಃ ಹೊಳೆಯೇ.
ತೀರಾ ಒಬ್ಬಂಟಿ ಅಂತ ಅನಿಸಿದಾಗ ಹೊಳೆ ಬದಿಗೆ ಬಂದು ಸುಮ್ಮನೆ ಕುಳಿತುಕೊಳ್ಳುತ್ತೇನೆ.ಮನಸ್ಸು ಹೇಳಿದರೆ ಮೈಯ ಬಟ್ಟೆ ಬಿಚ್ಚಿ ನೀರಿಗೆ ಜಿಗಿಯುತ್ತೇನೆ,ಮೀನು ಕೂಡ ಬೆರಗಾಗುವಂತೆ ಸಲೀಸಾಗಿ ಈಜುತ್ತೇನೆ.ಹೊಳೆ ಇನ್ನು ಈಜು ಸಾಕು ಎಂದು ಮನಸ್ಸಿಗೆ ಹೇಳಿ ಬಿಟ್ಟರೆ ಮತ್ತೆ ದಡ ಸೇರುತ್ತೇನೆ.ಒದ್ದೆಯಾದ ನಂತರ ಬಿಸಿಲಿಗೆ ಮೈ ಒಡ್ಡುವುದರಲ್ಲಿ ಕೆಲವರಿಗಷ್ಟೇ ಸುಖ ಸಿಗುವುದು.ಮನಸ್ಸೊಳಗೆಯೇ ಸುಡುವ ನೆನಪುಗಳಿದ್ದರೆ ಬಿಸಿಲು ತುಂಬಾ ಜನರಿಗೆ ಎಂದಿಗೂ ಬೇಡ!
ಆವತ್ತು ಕೂಡ ನಾನು ಹೊಳೆಯ ಬದಿಯಲ್ಲಿಯೇ ಇದ್ದೆ.ಕೈಯಲ್ಲಿ ಇತ್ತು ಬೇಕರಿಯಿಂದ ಕಟ್ಟಿಸಿಕೊಂಡು ಬಂದಿದ್ದ ಜಿಲೇಬಿಯ ಕಟ್ಟು.
ಜಿಲೇಬಿಯೇ ನನಗೆ ಇಷ್ಟ ಎಂದಲ್ಲ.ನಮ್ಮೂರ ಬೇಕರಿಯಲ್ಲಿ ತಾಜಾವಾಗಿ ಬಿಸಿಯಾಗಿ ಸಿಗುವುದು ಅದೊಂದೇ.ಹಾಗಾಗಿ ಹೊಳೆ ಬದಿ ತಲುಪುವಾಗ ನನ್ನ ಕೈಯಲ್ಲಿ ಜಿಲೇಬಿ ಕಟ್ಟೊಂದು ಹೆಚ್ಚಾಗಿ ಇರುತ್ತದೆ.ತುಂಬಾ ಬೀಡಿ ಸೇದುತ್ತಿದ್ದೆ ನಾನು.ಆದರೆ ಉರಿಯುವ ಬೀಡಿಗೂ ಒಳಗೊಳಗೆ ಸುಡುವ ನನ್ನನ್ನು ಎಂದಿಗೂ ಸಂಪೂರ್ಣವಾಗಿ ಸುಟ್ಟು ಹಾಕಲು ಸಾಧ್ಯವಾಗಲಿಲ್ಲ.ಒಂದು ದಿನ ಬೀಡಿ ಸೇದುವುದನ್ನು ಬಿಡಬೇಕು ಎಂದು ಅನಿಸಿತು.ಅದನ್ನು ಬಿಟ್ಟೆ.ಕೂಡಲೇ ಕೈ ಖಾಲಿ ಅನಿಸಿತು.ಆ ನಂತರ ಜಿಲೇಬಿ ಕಟ್ಟು ಕೈ ಹಿಡಿಯಿತು.ಅದಕ್ಕಾಗಿ ಇದು.ಇದಕ್ಕಾಗಿಯೇ ಇದು ಅಲ್ಲ.
ಸದಾ ಕಾಲ ಏನೇನೋ ಯೋಚನೆಗಳಿಗೆ ಜಾರುವ ನನಗೆ ಕೈಯಲ್ಲಿನ ಸಿಹಿ ಜಿಲೇಬಿಯನ್ನು ಕೂಡ ಬೇಗನೆ ತಿಂದು ಮುಗಿಸುವ ಕಲೆ ಒಲಿದಿಲ್ಲ.ಬೇಕರಿಯ ಜಿಲೇಬಿ ಸಣ್ಣದಿದ್ದರೆ ಆಗ ಅದು ನನಗೆ ಮೂರು ಸುತ್ತಿನ ಕೋಟೆ.ಅದರ ಪರಿಧಿ ಸ್ವಲ್ಪ ಡೊಡ್ಡದಾಗಿದ್ದರೆ ಆಗ ಅದು ಐದು,ಆರು ಇಲ್ಲವೇ ಕೆಲವೊಮ್ಮೆ ಏಳು ಸುತ್ತಿನದ್ದೇ ಕೋಟೆ.ಕೋಟೆಯ ಒಂದೊಂದೇ ಸುತ್ತನ್ನು ಹೊರಗಿನಿಂದ ನಿಧಾನಕ್ಕೆ ಮುರಿದುಕೊಂಡು ತಿನ್ನುತ್ತಾ ಹೋಗುವುದು ನನ್ನ ಅಭ್ಯಾಸ.ತಿನ್ನುತ್ತಾ ತಿನ್ನುತ್ತಾ ಎಲ್ಲೋ ಕಳೆದು ಹೋಗುವ ನನಗೆ ಜಿಲೇಬಿಯ ನಡುವಿನ ಸುತ್ತಿನ ಆ ಕೊನೆಯ ತುಂಡಿಗೆ ಬಂದಾಗ ಯಾಕೋ ಚಕ್ರವ್ಯೂಹದೊಳಗೆ ನುಗ್ಗಿದ ಭಾವ.ಸಿಲುಕಿಕೊಂಡಿದ್ದೆನೋ ಅಥವಾ ವ್ಯೂಹವನ್ನು ಭೇದಿಸಿ ತಿಂದು ಮುಗಿಸಿದ್ದೆನೋ ಎನ್ನುವುದು ನನಗೆ ಎಂದಿಗೂ ಉತ್ತರ ಸಿಗದ ಪ್ರಶ್ನೆ!
ಎಲ್ಲಾ ಜಿಲೇಬಿ ಮುಗಿದ ನಂತರ ಹೊಳೆಯ ನೀರಿನಲ್ಲಿ ಕೈಗಂಟಿದ ಜಿಲೇಬಿಯ ಸಿಹಿ ಅಂಟು ಸಂಪೂರ್ಣವಾಗಿ ಹೋಗುವವರೆಗೂ ಆ ದಿನವೂ ತೊಳೆದೆ.ಕೈ ಬೆರಳುಗಳಿಂದ ಜಾರಿದ ಒಂದಿಷ್ಟು ತುಣುಕು ಜಿಲೇಬಿಗೆ ಪುಟ್ಟ ಮೀನುಗಳು ನೀರಲ್ಲಿ ಸುಳಿದಾಡಿದವು,ಅವುಗಳ ಬಾಯಿ ಸಿಹಿ ಮಾಡಿದ ನಾನು ನಿಜಕ್ಕೂ ಪುಣ್ಯವಂತನಾ?
ಆವತ್ತು ಹೊಳೆಯ ಮತ್ತೊಂದು ಬದಿಯಲ್ಲಿ ಸಂಜೀವಣ್ಣನ ಮಗಳು ಗೌರಿ ಬಟ್ಟೆ ತೊಳೆಯುತ್ತಿದ್ದಳು.ಸೋಪು ಹಾಕಿ ತೊಳೆದ ಒಂದೊಂದೇ ಬಟ್ಟೆಯನ್ನು ನೀರಿನಲ್ಲಿ ಹರಿಯಬಿಟ್ಟು ಆ ನಂತರ ಆ ಬಟ್ಟೆಗಳನ್ನು ಚೆನ್ನಾಗಿ ಹಿಂಡಿ ಮತ್ತೆ ತನ್ನ ಬಳಿಯಿದ್ದ ದೊಡ್ಡದಾದ ಬಾಲ್ದಿಯಲ್ಲಿ ಹಾಕಿಡುತ್ತಿದ್ದಳು.
ಮೈಯಲ್ಲಿದ್ದ ನನ್ನ ಅಂಗಿಯನ್ನು ಬಿಚ್ಚಿ ದಡದ ಬೆಚ್ಚಗಿನ ಮರಳಿನ ಮೇಲಿಟ್ಟು ನಾನು ನೀರಿಗೆ ಹಾರಿದೆ.
ಈಜು ಕೆಲವರಿಗೆ ವ್ಯಾಯಾಮ,ಕೆಲವರಿಗೆ ಹವ್ಯಾಸ,ಇನ್ನು ಕೆಲವರಿಗೆ ಕ್ರೀಡೆ.
ಆದರೆ ಅದು ನನಗೆ ಧ್ಯಾನ.
ನೀರಿನೊಳಗೆ,ನೀರಿನಡಿಯಲ್ಲಿ ಎಷ್ಟು ಗಂಟೆಗಳ ಕಾಲ ಬೇಕಾದರೂ ನಾನು ಮೀನಿನಂತೆ ಈಜಾಡುತ್ತಾ ಇರಬಲ್ಲೆ.ನೀರಿನ ಪರಿಚಯ ಇರುವ,ಈಜಿನ ಅಭ್ಯಾಸ ಇರುವ ನನ್ನ ದೇಹ ಎಂದಿಗೂ ನೀರಿನಲ್ಲಿ ಮುಳುಗದು,ಆದರೆ ಮನಸ್ಸು?
ಅದು ಮುಳುಗುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ.ಆದರೆ ನಾನು ನೀರಿಗೆ ಬಿದ್ದ ಪ್ರತೀ ಬಾರಿಯೂ ಅದು ಅವಶ್ಯವಾಗಿ ಎಲ್ಲೋ ಕಳೆದು ಹೋಗುತ್ತದೆ.ಆವಾಗಲೆಲ್ಲ ನಾನು ತುಂಬಾ ಅಸಹಾಯಕ!
ನಿಜ ಹೇಳಬೇಕೆಂದರೆ ನನಗೆ ನಾನು ಕಳೆದು ಹೋಗಲೇಬೇಕು ಎಂದು ಅನಿಸಿದಾಗಲೆಲ್ಲ ಸ್ವತಃ ನಾನೇ ಬಂದು ಈ ಹೊಳೆಯೊಳಗೆ ಧುಮುಕುತ್ತೇನೆ.ಈಜು ನನ್ನ ಪಾಲಿನ ಗಂಟೆ ಗಟ್ಟಲೆಯ ಧ್ಯಾನ.ಧ್ಯಾನದಲ್ಲಿ ಮನಸ್ಸು ಕೇಂದ್ರಿಕೃತವಾಗುತ್ತದೆ ಹಾಗೂ ಹೂವಿನಂತೆ ಹಗುರವಾಗುತ್ತದೆ.ಆದರೆ ನನ್ನ ಧಾನ್ಯದಲ್ಲಿ ಮಾತ್ರ ನಾನು ನಿರಂತರವಾಗಿ ಕಳೆದು ಹೋಗುವ ಮೂಲಕವೇ ನಾನು ಹಗುರವಾಗುತ್ತೇನೆ.ಒಬ್ಬೊಬ್ಬರ ಧ್ಯಾನ,ಅದರೊಳಗಿನ ಆ ಆಧ್ಯಾತ್ಮ ಒಂದೊಂದು ರೀತಿ.
ಎಂದಿನಂತೆ ನೀರಿನ ಮೇಲ್ಮೈಯಿಂದ ನೇರವಾಗಿ ಕೆಳಗೆ ಈಜಿ ಹೊಳೆಯ ನೆಲದ ನಸೆನಸೆ ಮರಳನ್ನೊಮ್ಮೆ ಕೈಯಿಂದ ಮುಟ್ಟಿ ಆ ನಂತರ ಕಾಲಿನ ಹೆಬ್ಬೆಟ್ಟಿಂದ ನೆಲವನ್ನು ಬಲವಾಗಿ ಒತ್ತಿ ಪುನಃ ನಿಧಾನಕ್ಕೆ ನೀರಿಗೆ ಮೇಲ್ಮುಖವಾಗಿ ಈಜತೊಡಗಿದೆ.
ನೀರಿನಡಿಯಲ್ಲಿ ಈಜುತ್ತಲೇ ಮೇಲಕ್ಕೆ ನೋಡಿದೆ.ಆಗ ಬದಲಾಗಿತ್ತು ಹೊಳೆಯ ನೀರಿನ ಬಣ್ಣ!
ದಡದಲ್ಲಿ ಗೌರಿ ಒಗೆಯುತ್ತಿದ್ದ ಸೀರೆಯೊಂದು ಹೊಳೆಯ ನೀರಿನಲ್ಲಿ ಉದ್ದಕ್ಕೆ ಹರಡಿಕೊಂಡು ನೀರಿನಡಿಯಲ್ಲಿ ಈಜುತ್ತಿದ್ದ ನನಗೆ ನನ್ನ ಮೇಲಿನ ಅಷ್ಟೂ ನೀರು ಹಾಗೂ ಆ ಪಾರದರ್ಶಕ ಸಿಲ್ಕು ಸೀರೆಯ ಮೇಲಿನ ಅಸ್ಪಷ್ಟ ಆಕಾಶ ಕೂಡ ಬಣ್ಣ ಬಣ್ಣವಾಗಿ ಗೋಚರಿಸಿ ಬಿಟ್ಟಿತು.
ಹೌದು ನಮ್ಮೂರಿನ ಹೆಣ್ಣು ಮಕ್ಕಳು,ತಾಯಂದಿರು ಈ ರೀತಿಯಾಗಿ ಹೊಳೆಯ ನೀರಿಗೆ ಬಣ್ಣ ಹಾಸಬಲ್ಲರು.ಕೆಲವೊಮ್ಮೆ ಹಳದಿ,ಕೆಲವೊಮ್ಮೆ ಕೆಂಪು,ನೇರಳೆ, ಹಸಿರು ಎಂಬ ಒಂದೇ ಬಣ್ಣವನ್ನು ಬಳಿದು ಬಿಟ್ಟರೆ,ಇನ್ನು ಕೆಲವೊಮ್ಮೆ ಅವರು ಒಗೆಯುವ ಸೀರೆ ಬಣ್ಣ ಬಣ್ಣದ್ದು ಆಗಿದ್ದಾಗ ಕಣ್ಣಿಗೆ ಕಾಣುವ ನೀರಿಗೆ ಒಮ್ಮೊಮ್ಮೆ ಕಾಮನ ಬಿಲ್ಲಿನ ಬಣ್ಣ,ಇನ್ನೊಮ್ಮೆ ನವಿಲುಗರಿಗಳ ಬಣ್ಣ,ಪುಟ್ಟ ಪೋರಿ ಹಾಳೆಯಲ್ಲಿ ಗೀಚಿ ಬಿಟ್ಟ ಅವಳಿಷ್ಟದ್ದ ಹಲವಾರು ಮಿಶ್ರ ಬಣ್ಣಗಳಂತೆಯೇ ನಮ್ಮ ಹೊಳೆಯ ನೀರಿಗೂ ಯಾವುದ್ಯಾವುದೋ ಆಕರ್ಷಕ ಐದಾರು ಬಣ್ಣ.
ಸಮುದ್ರರಾಜ ಗಂಡೇ ಇರಬಹುದು.ಆದರೆ ಅವನನ್ನು ಸೇರಲು ಹರಿಯುವ ಈ ಹೊಳೆ,ನದಿಗಳು ಖಂಡಿತವಾಗಿಯೂ ತುಂಬಾನೇ ಹೆಣ್ಣು ಹಾಗೂ ಅಷ್ಟೇ ಮಾತೆ.ಆದರೆ ಹೊಳೆ-ನದಿ ಎಂಬ ಅವಳಿಗೆ ಯಾರೂ ಕೂಡ ಇಷ್ಟ ಪಟ್ಟು ಬಣ್ಣದ ಸೀರೆ ಉಡಿಸುವುದೇ ಇಲ್ಲ.ನಿಜ ಹೇಳಬೇಕೆಂದರೆ ಅದು ಅವಳಿಗೆ ಬೇಕಾಗಿಯೂ ಇಲ್ಲ.ತಮ್ಮ ಸೀರೆ ಬಣ್ಣ ಕೆಡಬಾರದು ಎಂದು ಹೆಣ್ಣು ಮಕ್ಕಳು ಹೊಳೆಯ ಕಡೆಗೆ ಬಂದು ಸೀರೆ ಒಗೆವಾಗ ಒಂದಷ್ಟು ಹೊತ್ತು ಅವುಗಳನ್ನು ಮೆತ್ತಗೆ ಹೊದ್ದುಕೊಂಡು ಆ ನಂತರ ಅವುಗಳನ್ನು ಪಕ್ಕಕ್ಕೆ ಸರಿಸಿ ಮುಂದೆ ಇನ್ನು ಯಾವುದೋ ಹೆಣ್ಣು ಮಗು ಮೈಮೇಲೆ ಹಾಸುವ ಅವಳ ಬಣ್ಣ ಬಣ್ಣಗಳ ಸೀರೆ ಹೊದ್ದುಕೊಳ್ಳುವ ಈ ಹೊಳೆಗೆ ಕಡಲಿನ ಧ್ಯಾನ ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಆಸಕ್ತಿಯೇ ಇಲ್ಲ.ಕಡಲು ಸೇರುವುದೊಂದೇ ಅದರ ಧ್ಯಾನ,ಧಾವಂತ ಮಾತ್ರವಲ್ಲ,ಅದೊಂದೇ ಅದರ ಬಾಳಿನ ಏಕೈಕ ಆಧ್ಯಾತ್ಮ.ಒಬ್ಬೊಬ್ಬರ ಆಧ್ಯಾತ್ಮ ಒಂದೊಂದು ರೀತಿ!
ಹೊಳೆಯ ಬದುಕಿಗೂ ಕೂಡ ಒಂದು ವ್ಯಾಖ್ಯಾನ ಇದೆ.ಅದೇ ಕಡಲು ಸೇರುವುದು.ಕಾಲ ಬದಲಾದರೂ,ಪರಿಸ್ಥಿತಿಗಳು ಬದಲಾದರೂ ಅದರ ವ್ಯಾಖ್ಯಾನ ಮಾತ್ರ ಎಂದಿಗೂ ಬದಲಾಗುವುದಿಲ್ಲ.
ನೀರಿನಡಿಯಲ್ಲಿಯೇ ಈಜುತ್ತಾ ಇದ್ದುಕೊಂಡು ನೀರಿನ ಮೇಲೆ ಹರಿಡಿಕೊಂಡಿದ್ದ ಗೌರಿಯ ಬಣ್ಣದ ಸೀರೆಯನ್ನೇ ಹಾಗೇ ಒಮ್ಮೆ ದಿಟ್ಟಿಸಿ ನೋಡತೊಡಗಿದೆ.ಕೆಂಪನೆಯ ಆ ಪಾರದರ್ಶಕ ಸಿಲ್ಕು ಸೀರೆಯಿಂದ ಆಕಾಶದ ಸೂರ್ಯ ಬಹಳಷ್ಟು ಅಸ್ಪಷ್ಟ;ಆದರೂ ನೀರಿನಡಿಯಿಂದಲೂ ಕಾಣುವ ಕಣ್ಣಿಗೆ ಅಲ್ಲೂ ಅವನೇ ಕೇಂದ್ರ ಬಿಂದುವಿನಂತಹ ಸೂಜಿಗಲ್ಲು,ಕಣ್ಣಿಗೆ ಹಾನಿ ಮಾಡದ ಮಂದ ಉರಿಯ ದೇವರ ಪಟದ ಜೀರೋ ಕ್ಯಾಂಡಲ್ ನಂತಹದ್ದೇ ಸಣ್ಣ ಬಲ್ಬು.ನನ್ನ ಕಣ್ಣಿನ ವ್ಯಾಪ್ತಿಗೆ ನೀರಿನ ಮೇಲೆ ಮಾತ್ರವಲ್ಲ,ಬಟ್ಟೆ ಒಗೆಯುತ್ತಿದ್ದ ಗೌರಿ ಆಕಾಶಕ್ಕೂ ಕೂಡ ಬಣ್ಣದ ಸೀರೆಯನ್ನು ಹೊದಿಸಿದಂತೆ ಕಂಡಿತು ಒಮ್ಮೆ.ಹೌದು ಹೊಳೆಯ ನೀರಿನಡಿ ನಿಂತರೆ ನಮ್ಮೂರಿನ ಹೆಣ್ಣು ಮಕ್ಕಳು ಬಟ್ಟೆ ತೊಳೆವಾಗ ಬರೀ ಹೊಳೆಯ ನೀರು ಮಾತ್ರವಲ್ಲ ಆಕಾಶಕ್ಕೂ ಕೂಡ ಬಣ್ಣದ ಸೀರೆಯಿಂದ ಬಣ್ಣ ಬಳಿದಂತೆಯೇ ಕಾಣುತ್ತದೆ.ಆದರೆ ನೀರಲ್ಲಿ ತೇಲುವ ಸೀರೆ ಮಾತ್ರ ಸಿಲ್ಕು ಆಗಿರಬೇಕು ಅಷ್ಟೇ.
ಆಕಾಶ ಹೆಚ್ಚಾಗಿ ನೀಲಿ ಬಣ್ಣದಲ್ಲಿ ಇರುತ್ತದೆ,ಸಂಜೆ ಆದಾಗ ಹವಳಗೆಂಪು,ಕೆಲವೊಮ್ಮೆ ಕೊಡಗಿನದ್ದೇ ಕಿತ್ತಳೆ,ಮುಂಜಾನೆಗೆ ಹಳದಿಯ ಬಂಗಾರ,ಕಾರ್ಮೋಡ ತುಂಬಿಕೊಂಡು ಬಿಟ್ಟರೆ ಆನೆಯಷ್ಟೇ ಕಪ್ಪು,ಬೆಳ್ಮೋಡವಿದ್ದರೆ ಕೆಲವರಿಗೆ ಕೆನೆ ಮೊಸರು,ಇನ್ನು ಕೆಲವರಿಗೆ ಬೆಣ್ಣೆ ಬಿಳಿ ಎಂಬಂತಹ ರೇಶಿಮೆಯ ಬಣ್ಣ ಆಕಾಶಕ್ಕೆ ಹೆಚ್ಚಾಗಿ ಇರುತ್ತದೆ.ಅದು ಪ್ರಕೃತಿ ಬಳಿದದ್ದು.ಆದರೆ ಹಸಿರು,ನೇರಳೆ?
ಹೆಣ್ಣುಮಕ್ಕಳಷ್ಟೇ ಹೊಳೆ ಬದಿಯಲ್ಲಿ ನಿಂತುಕೊಂಡು ಕೆಳಗೆ ಹರಿಯುವ ಆ ನೀರಿಗೂ,ಮೇಲೆ ಹರಿಡಿಕೊಂಡಿರುವ ಆ ಆಕಾಶಕ್ಕೂ ಈ ರೀತಿಯಾಗಿ ಎಲ್ಲಾ ಶ್ರದ್ಧೆಯಿಂದ ಹಸಿರು,ನೇರಳೆ ಹಾಗೂ ಅವರ ಸೀರೆಯ ಎಲ್ಲಾ ಬಣ್ಣ ಬಳಿದು ಬಿಡಬಲ್ಲರು.ಆದರೆ ಪಾಪ ಅದು ಅವರಿಗೂ ಗೊತ್ತಿಲ್ಲ;ನಾವು ಬಣ್ಣ ಬಳಿದಿದ್ದೇವೆ ಎಂದು.ಅವರ ಪ್ರಕಾರ ಅವರು ಬಟ್ಟೆ ಒಗೆದಿದ್ದಾರೆ ಅಷ್ಟೇ.ಏಕೆಂದರೆ ಇದನ್ನೆಲ್ಲಾ ಒಟ್ಟಿಗೆ ನೋಡಬೇಕೆಂದಿದ್ದರೆ,ಕಣ್ಣಲ್ಲಿಯೇ ಕಾಣಬೇಕೆಂದಿದ್ದರೆ ನನ್ನಂತೆಯೇ ನೀರಿನಡಿಯ ಈಜೆಂಬ ಧ್ಯಾನ ಗೊತ್ತಿರಬೇಕು ಹಾಗೂ ನೀರಿನಡಿ ಈಜುವಾಗ ತಲೆಯ ಮೇಲಿನ ಹೊಳೆಯ ನೀರಲ್ಲಿ ಒಂದು ಬಣ್ಣದ ಪಾರದರ್ಶಕ ಸೀರೆ ಅದರಷ್ಟಕ್ಕೆ ಹಾಗೇ ತೇಲುತ್ತಿರಬೇಕು.ಆಗ ಮಾತ್ರ ಹೊಳೆ,ಆಕಾಶ,ಹಾಗೂ ಕಾಣುವ ಕಣ್ಣು ಕೂಡ ಬಣ್ಣವಾಗುವುದು.
ನೀರಿನಡಿಯಲ್ಲಿಯೇ ಈಜುತ್ತಿದ್ದ ನನಗೆ ನೀರಿನ ಮೇಲಿನ ಗೌರಿಯ ಸೀರೆ ಕಂಡಾಗ ಗೌರಿ ನೆನಪಾಗಲಿಲ್ಲ.. ಬದಲಿಗೆ ಕೌಸಲ್ಯ ನೆನಪಾದಳು!
ಹೌದು.. ಕೌಸಲ್ಯ ನೆನಪಾಗಿದ್ದಳು.
ಕೌಸಲ್ಯ ನನ್ನ ಮುದ್ದಿನ ತಂಗಿ.ನಾನು ಹಾಗೂ ಸತೀಶನ ನಂತರ ಅವಳು ಕೊನೆಯಲ್ಲಿ ಹುಟ್ಟಿದವಳು.ಅವಳೆಂದರೆ ಎಲ್ಲರಿಗೂ ಅಚ್ಚು ಮೆಚ್ಚು.ಅಪ್ಪ ಅಮ್ಮನಿಗೂ ನಮಗೆಲ್ಲರಿಗಿಂತಲೂ ಅವಳೇ ಹೆಚ್ಚು ಇಷ್ಟ.ಅವಳೇ ಅವರ ಜೀವ ಕೂಡ ಆಗಿದ್ದಳು.
ಆದರೆ ವಯಸ್ಸಿಗೆ ಬಂದ ಕೌಸಲ್ಯಳಿಗೆ ಬೇರೆ ಯಾರೋ ಒಬ್ಬ ಅದಾಗಲೇ ಇಷ್ಟ ಆಗಿ ಬಿಟ್ಟಿದ್ದ!
ಆದರೆ ಅದನ್ನು ಅವಳು ಒಮ್ಮೆಯೂ ನಮಗೆ ಗೊತ್ತು ಮಾಡಿರಲಿಲ್ಲ!
ಒಂದು ದಿನ ಅವಳು ಪ್ರೀತಿಸಿದವನೊಡನೆ ಮನೆ ಬಿಟ್ಟು ಓಡಿ ಹೋದಳು!.ಊರಿನಲ್ಲಿ ಬಹಳ ಗೌರವಸ್ಥರು ನಾವು.ಪ್ರಾಣಕ್ಕಿಂತಲೂ ಮಾರ್ಯಾದೆಗೆ ಹೆಚ್ಚು ಬೆಲೆ ಎಂದು ತಿಳಿದುಕೊಂಡವರು.ಆ ದಿನ ಅವಳೊಡನೆಯೇ ನಮ್ಮ ಮನೆಯ ಮಾನ ಮಾರ್ಯಾದೆ ಕೂಡ ಇನ್ನಿಲ್ಲದಂತೆ ಹರಾಜಾಗಿ ಹೋಯಿತು!!
"ಆನಂದನ ತಂಗಿ ಓಡಿ ಹೋದಳು...ಆನಂದನ ತಂಗಿ ಓಡಿ ಹೋದಳು.. " ಎಂದು ಸುತ್ತಲಿನ ಸಮಾಜ ನಮ್ಮನ್ನು ಗೇಲಿ ಮಾಡಿ ನಗತೊಡಗಿತು.
ಹೌದು ನಾನು ಅವಳ ಅಣ್ಣನೇ.ಮನೆಯಲ್ಲಿ ನಾನೇ ದೊಡ್ಡ ಮಗ.
ಆದರೆ ನಾನು ಆದರೂ ಏನು ಮಾಡಬಹುದಿತ್ತು?!!
ಮನೆಯಲ್ಲಿ ಅಪ್ಪ ಅಮ್ಮ ಕೌಸಲ್ಯ ಇಲ್ಲದೇ ಅನ್ನ ನೀರು ಬಿಟ್ಟರು.ದಿನ ನಿತ್ಯವೂ ಅವರ ಕಣ್ಣೀರು ಜಡಿಮಳೆಯಂತೆ ಧಾರಕಾರ.ಎಲ್ಲರೊಡನೆ ಮಾತಾಡುವುದನ್ನು ಕೂಡ ಅವರು ನಿಲ್ಲಿಸಿ ಬಿಟ್ಟರು.ಅದನ್ನು ನೋಡಿ ನನಗೆ ಸಹಿಸಿಲು ಆಗಲಿಲ್ಲ.
ನಾನು ಕೌಸಲ್ಯಳಿಗಾಗಿ ಹುಡುಕಾಡಿದೆ.
ಹೌದು ಇನ್ನಿಲ್ಲದಂತೆ ಎಲ್ಲಾ ಕಡೆಯೂ ಮತ್ತೆ ಮತ್ತೆ ಅವಳಿಗಾಗಿ ಹುಡುಕಾಡಿದೆ.
ಕೌಸಲ್ಯ ಸಿಕ್ಕಳು..!
ಕೊನೆಗೂ ಅವಳು ಮತ್ತು ಅವನು ಇರುವ ವಿಳಾಸವೂ ಸಿಕ್ಕಿತು..!
ಹೋದೆ...
ಓಡುತ್ತಲೇ ಹೋದೆ..
ನೇರಾ ಅವಳಲ್ಲಿಗೆ ಹೋಗಿ "ಮನೆಗೆ ಬಾ ಕೌಸಲ್ಯ.. ಮನೆಯಲ್ಲಿ ಅಪ್ಪ ಅಮ್ಮ ನೀನು ಇಲ್ಲದೇ ಕಂಗಾಲಾಗಿದ್ದಾರೆ,ಅನ್ನ ನೀರು ಕೂಡ ಸೇವಿಸದೇ ಇನ್ನಿಲ್ಲದಂತೆ ಬಡವಾಗಿದ್ದಾರೆ,ನೀನಿಲ್ಲದಿದ್ದರೆ ನಮ್ಮ ಮನೆಗೆ ಜೀವವೇ ಇಲ್ಲ ಕೌಸಲ್ಯ .. ಬಾ ಕೌಸಲ್ಯ.." ಅಂದು ಬಿಟ್ಟೆ.
ಅವಳು ಬರುವುದಿಲ್ಲ ಅಂದಳು.
ನಾನು ಮತ್ತಷ್ಟು ಒತ್ತಾಯ ಮಾಡಿದೆ..
ಅವಳ ಕೈ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡೆ..
ನಮಗಾಗಿ ಬೇಡ..ನಿನ್ನ ಮೇಲೆ ಜೀವವನ್ನೇ ಇಟ್ಟಿರುವ ಆ ನಿನ್ನ ಅಪ್ಪ ಅಮ್ಮನಿಗಾಗಿ ಆದರೂ ಬಾ ಕೌಸಲ್ಯ .. ಎಂದೆ.
ಅಪ್ಪ ಅಮ್ಮನ ಸ್ಥಿತಿಯನ್ನು ನೆನೆದು ಅವಳೆದರು ಬಿಕ್ಕಿ ಬಿಕ್ಕಿ ಅತ್ತೆ..
ನಾನು ಕಣ್ಣೀರ ಹೊಳೆ ಆಗಿದ್ದೆ..!!
ಆದರೆ ಅವಳ ಹೃದಯ ಸ್ವಲ್ಪವೂ ಕರಗಲೇ ಇಲ್ಲ!!
ಅವಳ ಪ್ರಿಯಕರ ಕೂಡ ಒತ್ತಾಯ ಮಾಡುತ್ತಿದ್ದ ನನ್ನನ್ನು ತಡೆಯಲು ಬಂದ..!
ನನಗೆ ಎಲ್ಲಿಂದ ಸಿಟ್ಟು ಬಂತು ಎಂದು ನನಗೇ ಗೊತ್ತಿಲ್ಲ.ನನ್ನ ತಂಗಿಯನ್ನು ನನ್ನಿಂದ ಕಿತ್ತುಕೊಂಡ ಅವನಿಗೆ ಅಲ್ಲೇ ಸರಿಯಾಗಿಯೇ ನಾಲ್ಕು ಬಾರಿಸಿದೆ.ಕೌಸಲ್ಯಳನ್ನು ಅಲ್ಲಿಂದ ಮನೆಗೆ ದರದರನೇ ಎಳೆದುಕೊಂಡು ಬಂದೆ ನಾನು.
ಕೌಸಲ್ಯ ಮನೆಗೆ ಏನೋ ಬಂದಿದ್ದಳು.ಆದರೆ ಅವಳ ಮನಸ್ಸಿನೊಳಗೆ ನಮ್ಮನ್ನು ಮಾತ್ರ ಎಂದಿಗೂ ಅವಳು ಬಿಟ್ಟುಕೊಳ್ಳಲಿಲ್ಲ.ಬದಲಿಗೆ ನಮ್ಮೊಂದಿಗೆ ಅವಳು ಮಾತು ಬಿಟ್ಟಳು,ಊಟ ಬಿಟ್ಟಳು,ಕೊನೆಗೊಂದು ದಿನ... ಪ್ರಾಣವನ್ನು ಕೂಡ ಬಿಟ್ಟೇ ಬಿಟ್ಟಳು!
ಇದೇ ಹೊಳೆಗೆ ಹಾರಿ ಜೀವ ಕಳೆದುಕೊಂಡಿದ್ದಳು ನನ್ನ ಮುದ್ದಿನ ತಂಗಿ ಕೌಸಲ್ಯ.!!
ಆವತ್ತು ಕೂಡ ಅವಳ ಆ ಕೆಂಪು ಸಿಲ್ಕು ಸೀರೆ ಈ ಹೊಳೆಯಲ್ಲಿ ಇದೇ ರೀತಿ ಹರಿಡಿಕೊಂಡು ನೀರಿಗೊಂದು ಬಣ್ಣ ಹಾಸಿತ್ತು,ಆದರೆ ಆ ಬಣ್ಣದ ಹೊಳೆಯಲ್ಲಿ ಅವಳದ್ದೊಂದು ಜೀವದ ಬಣ್ಣ ಇನ್ನಿಲ್ಲದಂತೆ ಮಾಸಿ ಹೋಗಿ ಈ ಲೋಕದ ಲೆಕ್ಕಾಚಾರ ಅಲ್ಲಿಗೆ ಮುಗಿದು ಹೋಗಿತ್ತು!
ಹೊಳೆಯ ತಪ್ಪಲ್ಲ.. !
ಹಾಗಿದ್ದರೆ ತಪ್ಪು ಯಾರದ್ದು?
ಕೌಸಲ್ಯಳದ್ದಾ..?
ಅವಳ ಪ್ರಿಯಕರನದ್ದಾ...?
ಅಥವಾ..... ನನ್ನದಾ!?
ಊರು ಏನು ಹೇಳುತ್ತದೆಯೋ ಅದು ನನಗೆ ಬೇಕಾಗಿರಲಿಲ್ಲ. ಆದರೆ ಮನೆಯಲ್ಲಿ ಅಪ್ಪ ಅಮ್ಮ ಮಾತ್ರ ಹೇಳಿದ್ದು ಒಂದೇ ಮಾತು....
"ನೀನು ತಪ್ಪು ಮಾಡಿ ಬಿಟ್ಟೆ ಆನಂದ..!
ಅವಳನ್ನು ಯಾವ ಸುಖಕ್ಕಾಗಿ ಮತ್ತೆ ನೀನು ಇಲ್ಲಿಗೆ ಕರೆದುಕೊಂಡು ಬಂದೆ.ಅವಳನ್ನು ಅವಳಷ್ಟಕ್ಕೆ ಹಾಗೇ ಬಿಟ್ಟಿದ್ದರೆ ಎಲ್ಲೋ ಸುಖವಾಗಿ ಅವಳಿಷ್ಟದಂತೆಯೇ ಬದುಕಿಕೊಳ್ಳುತ್ತಿದ್ದಳು..ಅವಳನ್ನು ಮತ್ತೆ ಇಲ್ಲಿಗೆ ಕರೆ ತರಲು ನಿನಗೆ ಒತ್ತಾಯ ಮಾಡಿದ್ದಾದರೂ ಯಾರು..? ಆದರೆ ಈಗ ನೀನು ಅವಳ ಉಸಿರನ್ನೇ ಕಿತ್ತುಕೊಂಡು ಬಿಟ್ಟೆಯಲ್ಲೋ ಆನಂದ ....! ಹೆತ್ತವರ ಸಂಕಟ ನಿನಗೆಲ್ಲಿ ಅರ್ಥವಾಗುತ್ತದೆ..ಅದೆಂತಹ ಪಾಪಿ ಮಗ ನೀನು...!! "ಅಂದು ಬಿಟ್ಟರು ನನ್ನ ಅಪ್ಪ ಅಮ್ಮ.
ಆ ದಿನದಿಂದ ಅವರಿಬ್ಬರು ನನ್ನನ್ನು ಹಾರೈಸಿದ್ದಕ್ಕಿಂತ ಹಿಡಿಶಾಪ ಹಾಕಿದ್ದೇ ಜಾಸ್ತಿ!
ಹೆತ್ತವರ ನೋವು ಬಹುಶಃ ನನಗೆ ಅವರಷ್ಟು ಅರ್ಥವಾಗಲಿಕ್ಕಿಲ್ಲ.
ಆದರೆ ನಾನು ಕೊಲೆಗಾರನಾ?!!
ಅದು ಹೇಗೆ..?
ಆದರೆ ಯಾವ ಘಳಿಗೆಯಲ್ಲಿ ನನ್ನ ತಂದೆ ನನ್ನನ್ನು ಪಾಪಿ ಅಂದರೋ.. ಆ ದಿನದಿಂದ ಆ ಕ್ಷಣದಿಂದಲೇ ಸ್ವತಃ ನನಗೆ ನಾನೇ ಕೊಲೆಗಾರ ಎಂದು ಘೋಷಿಸಿಕೊಂಡು ಬಿಟ್ಟೆ!!
ಏತಕ್ಕಾಗಿ ನನಗೆ ಆನಂದ ಎಂದು ಹೆಸರಿಟ್ಟರೋ ನನಗದು ಗೊತ್ತಿಲ್ಲ,ಆದರೆ ನಾನು ಅವರ ಪಾಲಿಗೆ ಕೌಸಲ್ಯ ಸತ್ತ ದಿನದಿಂದ ಎಂದಿನ ಆನಂದನಾಗಿ ಉಳಿಯಲಿಲ್ಲ.ನನ್ನೊಳಗೆ ಕೂಡ ಯಾವುದೇ ಸಂಭ್ರಮದ ಆನಂದವೂ ಎಂದಿಗೂ ಹುಟ್ಟಲೇ ಇಲ್ಲ.
ತಂದೆ ತಾಯಿಯ ಕ್ಷಣ ಕ್ಷಣದ ಶಾಪದಿಂದ ಯಾವ ಮಕ್ಕಳು ತಾನೇ ಖುಷಿಯಾಗಿ.. ಸುಖವಾಗಿ ಜೀವನದಲ್ಲಿ ಇರಬಲ್ಲರು?!
ಜೀವ ಇರುವಾಗ ಈ ಸಮಾಜ ಪ್ರೀತಿ ಎಲ್ಲದಕ್ಕಿಂತಲೂ ದೊಡ್ಡದು ಎಂದು ಹೇಳುತ್ತದೆ.. ಆದರೆ ಜೀವವೇ ಹೋದಾಗ ಪ್ರೀತಿಗಿಂತಲೂ ಜೀವ, ಜೀವನ ದೊಡ್ಡದು ಎಂದು ಇದೇ ಸಮಾಜ ಮತ್ತೆ ಪಾಠ ಹೇಳಲು ನಮ್ಮ ಮುಂದೆ ಬರುತ್ತದೆ!
ಹಾಗಾದರೆ ಯಾವುದು ಸರಿ? ಯಾವುದು ತಪ್ಪು..?!
ಬದುಕಿನ ವ್ಯಾಖ್ಯಾನಗಳು ಪರಿಸ್ಥಿತಿ ಹಾಗೂ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆಯೇ? ಅಥವಾ ಮನುಷ್ಯ ಹೇಳುವ ವ್ಯಾಖ್ಯಾನಗಳು ಅವನ ನೋವಿಗೆ ಇಲ್ಲ ಖುಷಿಗೆ ಅನುಸಾರವಾಗಿ ನಿರಂತರವಾಗಿ ಬದಲಾಗುತ್ತಾ ಹೋಗುತ್ತದೆಯೇ?
ಬದುಕಿನ ವ್ಯಾಖ್ಯಾನಗಳು ಏಕೆ ತಟಸ್ಥವಾಗಿಲ್ಲ?
ಮನುಷ್ಯನ ಅನುಕೂಲಕ್ಕೆ ತಕ್ಕಂತೆಯೇ ಮನುಷ್ಯನ ಬದುಕಿನ ವ್ಯಾಖ್ಯಾನಗಳು..!!
ನೀರಿನ ಮೇಲೆ ಗೌರಿಯ ಹರಡಿದ ಸಿಲ್ಕು ಸೀರೆ ಕಂಡಾಗ ಏನೇನೋ ನೆನಪುಗಳು,ಮತ್ತದೇ ಯೋಚನೆಗಳು ಎಂದಿನಂತೆ ಅಂದು ಕೂಡ ಸುಳಿದಾಡಿ ಬಿಟ್ಟವು.
ಮತ್ತೆ ನೀರಿನಡಿಯಲ್ಲಿಯೇ ದೂರಕ್ಕೆ ಮೆಲ್ಲಗೆ ಈಜಿಕೊಂಡು ಹೋಗಿ ದಡ ಸೇರಿದೆ.
ಮೈ ಒದ್ದೆ ಆಗಿದ್ದರೂ ಮೊದಲೇ ತೆಗೆದಿಟ್ಟಿದ್ದ ಅಂಗಿ ಮತ್ತೆ ಹಾಕಿಕೊಂಡೆ.ಹಾಗೇ ಗೊತ್ತಾಗದೇ ಅಪ್ಪಿ ತಪ್ಪಿ ಆಕಸ್ಮಿಕವಾಗಿ ಗೌರಿಯತ್ತ ನೋಡಿ ಬಿಟ್ಟೆ!
ಗೌರಿಯೂ ನೋಡಿದಳು..!
ನೋಡಿ ನಕ್ಕಳು!
ನನ್ನನ್ನೇ ನೋಡಿ ನಕ್ಕಳು.!!
ಗೌರಿ ನನಗೆ ಬಹಳ ಪರಿಚಯದ ಹುಡುಗಿಯೇ.ಅವಳಿಗೂ ಹೆಚ್ಚೆಂದರೆ ನಮ್ಮ ಕೌಸಲ್ಯಳ ಪ್ರಾಯ.ಗೌರಿ ನನ್ನ ಪಾಲಿಗೂ ಎಂದಿಗೂ ತಂಗಿ ಸಮಾನಳೇ.
ಅವಳು ಏಕೆ ನಕ್ಕಳು ಎಂದು ಗೊತ್ತಾಗಲಿಲ್ಲ.
ನನಗಾಗಿ ನಕ್ಕಳೋ ಅಥವಾ ಅಲ್ಲವೋ ಎಂದು ಖಚಿತ ಪಡಿಸಿಕೊಳ್ಳಲು ಒಮ್ಮೆ ಹಿಂದೆ ತಿರುಗಿ ನೋಡಿದೆ.
ಆಗ ಅಲ್ಲಿ ಗಾಳ ಹಿಡಿದುಕೊಂಡು ನಿಂತಿದ್ದ ಮಾಬಲಣ್ಣನ ಮಗ ಶಂಕರ.
ಅವನು ಕೂಡ ನನಗೂ ಬಹಳ ಪರಿಚಯದವನೇ.ಹೆಚ್ಚು ಕಡಿಮೆ ನನ್ನ ತಮ್ಮ ಸತೀಶನ ವಯಸ್ಸಿನವನು ಅವನು.
ನನ್ನನ್ನು ನೋಡಿ ನಕ್ಕು,ಹೊಳೆ ಬದಿಯಲ್ಲಿ ಗಾಳ ಹಾಕಲು ನಿಂತುಕೊಂಡು ಬಿಟ್ಟ ಶಂಕರ.
ನಾನು ಸ್ವಲ್ಪ ಹೊತ್ತು ಅಲ್ಲಿಯೇ ಇದ್ದೆ.
ಗೌರಿ ಮತ್ತೆ ನಕ್ಕಳು.
ಆದರೆ ಅವಳು ನಕ್ಕಿದ್ದು ನನಗಾಗಿ ಅಲ್ಲ ಎಂದು ನನಗೆ ಗೊತ್ತಾಗಿ ಅದಾಗಲೇ ಬಹಳಷ್ಟು ಹೊತ್ತಾಗಿತ್ತು.
ಹೊಳೆ ಬದಿಯಲ್ಲಿ ಗಾಳ ಹಾಕುತ್ತಿದ್ದ ಶಂಕರ,ಗೌರಿಯ ನಗುವಿಗೆ ಪ್ರತ್ಯುತ್ತರವಾಗಿ ನಗುವಿನ ಸಂತೆಯನ್ನೇ ತನ್ನ ಮುಖದ ತುಂಬೆಲ್ಲಾ ಸೇರಿಸಿದ್ದ.
ಆ ದಡದಿಂದ ಈ ದಡಕ್ಕೆ,ಈ ದಡದಿಂದ ಆ ದಡಕ್ಕೆ ನಗುವಿನ ವಿನಿಮಯ ಹೊಳೆಯ ನಡುವಲ್ಲಿ ಭರದಿಂದ ಸಾಗಿತ್ತು. ಗೌರಿ ಒಗೆಯಲು ತಂದಿದ್ದ ಸೀರೆಗಳು ಆ ಹೊಳೆಯ ನೀರಿಗೆ ಆ ದಿನ ಬಹಳಷ್ಟು ಹೊತ್ತು ಬಣ್ಣ ಹಾಸಿದ್ದವು.
ಗಾಳ ಮೀನಿಗೆ ಮಾತ್ರ ಹಾಕುತ್ತಾರೆ... ಬಟ್ಟೆ ತೊಳೆಯಲೆಂದೇ ಹೆಣ್ಣು ಮಕ್ಕಳು ಕೊಳೆ ಬಟ್ಟೆಯೊಂದಿಗೆ ಹೊಳೆ ಬದಿಗೆ ಬರುತ್ತಾರೆ.. ಎಂದು ತಿಳಿದುಕೊಂಡಿದ್ದವನು ನಾನು!!
ನಂತರ ನಿಧಾನಕ್ಕೆ ತಲೆ ಕರೆದುಕೊಂಡು ಹೊಳೆ ಬದಿಯಿಂದ ಮನೆಯ ಕಡೆಗೆ ನಡೆದೆ.
ಆ ದಿನವೇ ನಾನು ಅವರಿಬ್ಬರನ್ನು ಮೊದಲ ಬಾರಿಗೆ ಅಲ್ಲಿ ನೋಡಿದ್ದು.ಆ ನಂತರ ಪ್ರತೀ ಬಾರಿಯೂ ಅವರಿಬ್ಬರನ್ನು ಹೊಳೆ ಬದಿಯಲ್ಲಿ ನೋಡುವುದು ನನಗೆ ಅಭ್ಯಾಸವಾಗಿ ಬಿಟ್ಟಿತು.
ಶಂಕರ ಸುಮ್ಮನೆ ಹೊಳೆಯ ಒಂದು ಬದಿಯಲ್ಲಿ ಗಾಳ ಹಾಕುತ್ತಿದ್ದರೆ,ಅದೇ ಸಮಯಕ್ಕೆ ಗೌರಿ ಮತ್ತೊಂದು ಬದಿಯಲ್ಲಿ ಬಂದು ಬಟ್ಟೆ ತೊಳೆಯುತ್ತಿದ್ದಳು.
ಆ ಸಮಯ ಎಂದಿಗೂ ಹಿಂದೆ ಮುಂದೆ ಇಲ್ಲವೇ ಅದಲು ಬದಲು ಆಗುತ್ತಲೇ ಇರಲಿಲ್ಲ.
ಬಹುಶಃ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿದೆ ಎಂದು ಕಾಣುತ್ತದೆ.
ಏಕೆಂದರೆ ಗಾಳ ಹಾಕಲು,ಬಟ್ಟೆ ತೊಳೆಯಲು ಬರುವುದಕ್ಕಿಂತಲೂ ಹೆಚ್ಚಾಗಿ ಅವರಿಬ್ಬರು ಕೇವಲ ಅವರಿಬ್ಬರಿಗಾಗಿಯೇ ಬರುತ್ತಿದ್ದಾರೆ ಎಂದು ನನಗೆ ಬಲವಾಗಿ ಅನ್ನಿಸಿ ಬಿಟ್ಟಿತ್ತು.
ಆದರೆ ನನಗೆ ಅವರಿಬ್ಬರ ಕುಟುಂಬಗಳ ಬಗ್ಗೆ ಬಹಳ ಚೆನ್ನಾಗಿಯೇ ಗೊತ್ತಿತ್ತು.ಶಂಕರನ ತಂದೆ ಮಾಬಲಣ್ಣನಿಗಾಗಲಿ, ಗೌರಿಯ ತಂದೆ ಸಂಜೀವಣ್ಣನಿಗೆ ಆಗಲಿ ಎಂದಿಗೂ ಊರಿನಲ್ಲಿ ಆಗುತ್ತಲೇ ಇರಲಿಲ್ಲ.ಅವರಿಬ್ಬರೂ ಹುಟ್ಟು ದ್ವೇಷಿಗಳು.ಎಷ್ಟೋ ಸಲ ಅವರಿಬ್ಬರು ರಕ್ತ ಬರುವಂತೆ ಪರಸ್ಪರ ಊರಿನೊಳಗೆ ಹೊಡೆದಾಡಿಕೊಂಡಿದ್ದಾರೆ.ಇವರಿಬ್ಬರದ್ದು ಪ್ರೇಮವೇ ಆಗಿದ್ದರೆ ಖಂಡಿತವಾಗಿಯೂ ಇದು ತುಂಬಾ ದಿನ ಬದುಕಲ್ಲ ಎಂದು ನನಗೆ ಅನಿಸಿತು.
ನನಗೆ ಅವರಿಬ್ಬರಿಗೆ ಪ್ರೀತಿ ಪ್ರೇಮ ಒಳ್ಳೆಯದಲ್ಲ,ಜೀವನ ಎನ್ನುವುದು ಅದಕ್ಕಿಂತಲೂ ಇನ್ನು ತುಂಬಾ ದೊಡ್ಡದಿದೆ ಎಂದು ಬುದ್ಧಿ ಮಾತು ಒಮ್ಮೆ ಹೇಳಿ ಬಿಡಬೇಕು ಎಂದು ಅನಿಸಿತು.
ಆದರೆ ನಾನು ಅವರಿಬ್ಬರಿಗೆ ಬುದ್ಧಿ ಹೇಳುವುದಕ್ಕಿಂತಲೂ ಮೊದಲೇ ಅವರಿಬ್ಬರ ತಂದೆಯಂದಿರಿಗೆ ಅವರ ಪ್ರೀತಿಯ ವಿಷಯ ಅದಾಗಲೇ ತಲುಪಿ ಆಗಿತ್ತು..!
ಅಷ್ಟೇ...
ಆ ದಿನವೇ ಸಂಜೀವಣ್ಣ ಹಾಗೂ ಮಾಬಲಣ್ಣ ಇಬ್ಬರೂ ಪರಸ್ಪರ ಶರ್ಟಿನ ಕಾಲರ್ ಹಿಡಿದುಕೊಂಡು ಊರು ತುಂಬಾ ಹೊಡೆದಾಡಿಕೊಂಡು ಬಡಿದಾಡಿಕೊಂಡು ಬಿಟ್ಟರು!
ಸಂಜೀವಣ್ಣ ತನ್ನ ಮಗಳು ಗೌರಿಗೆ ನಾಯಿಗೆ ಹೊಡೆದಂತೆ ಹೊಡೆದು ಎಲ್ಲಿಯೂ ಹೋಗದಂತೆ ಮನೆಯಲ್ಲಿಯೇ ಕೂಡಿ ಹಾಕಿದರು.
ಆ ದಿನದಿಂದ ಅವಳು ಬಟ್ಟೆ ತೊಳೆಯಲು ಹೊಳೆಯ ಕಡೆ ಬರಲಿಲ್ಲ.ಬೇರೆಯವರ ಬಟ್ಟೆಗಳಿಂದಾಗಿ ಹೊಳೆಯ ಬಣ್ಣ ಅಷ್ಟಿಷ್ಟು ತುಂಬುತ್ತಿದ್ದರೂ ಗೌರಿಯ ಬಣ್ಣಗಳು ಮಾತ್ರ ಹೊಳೆಯನ್ನು ಆ ನಂತರ ಅಲಂಕರಿಸಲಿಲ್ಲ.
ಶಂಕರ ಕೂಡ ಹೊಳೆಗೆ ಗಾಳ ಹಾಕಲು ಬರಲಿಲ್ಲ.ಬಹುಶಃ ಅವನಿಗೆ ಈಗೀಗ ಹೊಳೆಯ ಮೀನು ಇಷ್ಟ ಇಲ್ಲ ಎಂದು ಕಾಣುತ್ತದೆ!
ನಾನು ನನ್ನಷ್ಟಕ್ಕೆ ಹೊಳೆಗೆ ಭೇಟಿ ಕೊಟ್ಟು ಕೈಯಲ್ಲಿದ್ದ ಜಿಲೇಬಿ ಮುಗಿದ ಮೇಲೆ ಒಂದಿಷ್ಟು ಈಜಾಡಿ ಮನೆ ಸೇರುತ್ತಿದ್ದೆ. ಅವರಿಬ್ಬರ ಅನುಪಸ್ಥಿತಿ ನನಗೆ ಹಾಗೂ ಹೊಳೆಗೂ ಒಂದಿಷ್ಟು ಕಾಡಿದ್ದು ಸುಳ್ಳಲ್ಲ.
ನನ್ನ ನೀರಸ ಬದುಕು ಕೂಡ ಅದರಷ್ಟಕ್ಕೆ ಸಾಗಿತ್ತು.ಬದುಕು ಸಾಗಿಸುವುದಕ್ಕಾಗಿ ನನಗೆ ಗೊತ್ತಿದ್ದ ಏಕೈಕ ಕೆಲಸ ಎಂದರೆ ಅದು ಡ್ರೈವಿಂಗ್.ನಾನು ರಿಕ್ಷಾ ಬಿಡುತ್ತಿದ್ದೆ.ನನ್ನ ಆ ರಿಕ್ಷಾದಲ್ಲಿಯೇ ಅಂದು ಕೌಸಲ್ಯಳನ್ನು ಮನೆಗೆ ಎಳೆದುಕೊಂಡು ಬಂದಿದ್ದು ನಾನು.
ಊರಿನಲ್ಲಿ ಇದ್ದ ಏಕೈಕ ರಿಕ್ಷಾ ಎಂದರೆ ಅದು ನನ್ನದೇ.ಹಾಗಾಗಿ ಹೆಚ್ಚಿನ ಎಲ್ಲರೂ ಏನಾದರೂ ತುರ್ತು ಕೆಲಸ ಇದ್ದರೆ ಹಿಂದಿನ ದಿನವೇ ನನ್ನ ಬಳಿ ಓಡಿ ಬರುತ್ತಿದ್ದರು,ಮರು ದಿನಕ್ಕೆ ರಿಕ್ಷಾ ಬೇಕು ಎಂದು ನನ್ನ ಬಳಿ ಗೊತ್ತು ಮಾಡಿಕೊಂಡು ಹೋಗುತ್ತಿದ್ದರು.
ಒಂದು ದಿನ ನನ್ನನ್ನು ಹುಡುಕಿಕೊಂಡು ಮಾಬಲಣ್ಣನ ಮಗ ಇದೇ ಶಂಕರ ಕೂಡ ಬಂದಿದ್ದ.
ಎಂದಿನಂತೆ ಏನೋ ಬಾಡಿಗೆ ಇರಬೇಕು ಎಂದು ನಾನು ಅಂದುಕೊಂಡೆ.
ಆದರೆ ವಿಷಯ ಅದಾಗಿರಲಿಲ್ಲ.
ಅವನು ಹೇಳಿದ್ದ ವಿಷಯ ಬೇರೆಯೇ ಆಗಿತ್ತು..!
" ಆನಂದಣ್ಣ.. ನನಗೆ ಗೌರಿಯನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ, ಅವಳಿಗೂ ನನ್ನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ..ಒಂದೋ ನಾವಿಬ್ಬರೂ ಮದುವೆ ಆಗಬೇಕು, ಇಲ್ಲದಿದ್ದರೆ ಇಬ್ಬರೂ ಒಟ್ಟಿಗೆ ಸತ್ತು ಸ್ವರ್ಗ ಸೇರಬೇಕು ... ಇದು ಎರಡೇ ಈಗ ನಮ್ಮ ಮುಂದಿರುವ ಆಯ್ಕೆ..!! " ಎಂದು ಹೇಳಿ ಮುಗಿಸಿದ್ದ ಶಂಕರ
ಬದುಕಿನಲ್ಲಿ ಪ್ರೀತಿ ದೊಡ್ಡದಾ...? ಅಥವಾ ಬದುಕೇ ದೊಡ್ಡದಾ..? ನನಗೆ ನಾನೇ ಕೇಳಿಕೊಂಡೆ.
ತಂದೆ ತಾಯಿಯ ಕಣ್ಣಲ್ಲಿ ಅದು ಯಾವತ್ತೋ ಕೊಲೆಗಾರ ಆಗಿದ್ದವನು ನಾನು.ಹಾಗಾಗಿ ನನಗೆ ಯಾಕೋ ಈ ಬದುಕೇ ದೊಡ್ಡದು ಅನಿಸಿತು.ಬದುಕಿಗಾಗಿ ಪ್ರೀತಿ ಉಳಿಯುವುದು ಅನಿವಾರ್ಯ ಎಂದು ನನಗೆ ಬಲವಾಗಿ ಅನಿಸಿತು.
ಆದರೆ ಇವರಿಬ್ಬರ ವಿಷಯದಲ್ಲಿ ನಾನೀಗ ಏನು ಮಾಡಲಿ?!
ಅದನ್ನೇ ಕೇಳಿದೆ..
ಆದರೆ ನಿಮ್ಮ ಪ್ರೀತಿಗೆ ನಾನು ಹೇಗೆ ಸಹಾಯ ಮಾಡಲಿ?..ಶಂಕರನಿಗೆ ಕೇಳಿದೆ.
ಇಲ್ಲೇ ಇದ್ದರೆ.. ಇಲ್ಲೇ ಇದ್ದು ನಾವಿಬ್ಬರು ಮದುವೆ ಆದರೆ.. ನಮ್ಮಿಬ್ಬರನ್ನೂ ನಮ್ಮ ತಂದೆಯಂದಿರೇ ಕೊಚ್ಚಿ ಕೊಲೆ ಮಾಡಿ ಬಿಡುತ್ತಾರೆ ಆನಂದಣ್ಣ.. ಹಾಗಾಗಿ ಬೇರೆ ಎಲ್ಲಿ ಆದರೂ ಹೋಗಿ ಮದುವೆ ಆಗಿ ಅಲ್ಲೇ ಸುಖವಾಗಿ ಬದುಕುತ್ತೇವೆ...ಎಂದು ಹೇಳಿದ ಶಂಕರ.
ಅಂದರೆ ಓಡಿ ಹೋಗಿ ಮದುವೆ ಆಗುತ್ತೀರಾ..? ಆಶ್ಚಯದಿಂದಲೇ ಅವನನ್ನು ಕೇಳಿದೆ.
ಹೌದು ಆನಂದಣ್ಣ.. ಬೇರೆ ದಾರಿಯೇ ಇಲ್ಲ.. ಅದಕ್ಕೆ ನೀವೇ ಸಹಾಯ ಮಾಡಬೇಕು.. ಶಂಕರ ಹೇಳಿದ.
ಹೇಗೆ..? ಕೇಳಿದೆ.
ನಾಳೆ ಬೆಳಿಗ್ಗೆಯೇ ನಾನು ಮತ್ತು ಗೌರಿ ಈ ಊರು ಬಿಟ್ಟು ಓಡಿ ಹೋಗಬೇಕು.ಈಗ ಊರಿನಲ್ಲಿ ಜಾತ್ರೆ ನಡೆಯುತ್ತಿದೆ.ಹಾಗಾಗಿ ಗೌರಿ ಕೂಡ ದೇವಸ್ಥಾನಕ್ಕೆ ನಾಳೆ ಅವಶ್ಯವಾಗಿ ಬಂದೇ ಬರುತ್ತಾಳೆ.ದಯವಿಟ್ಟು ಹೇಗಾದರೂ ಮಾಡಿ ಅವಳ ಅಪ್ಪನ ಕಣ್ಣು ತಪ್ಪಿಸಿ ಅವಳನ್ನು ನಿಮ್ಮ ರಿಕ್ಷಾದಲ್ಲಿ ಕರೆದುಕೊಂಡು ನನ್ನ ಬಳಿಗೆ ಬನ್ನಿ.ಆಮೇಲೆ ಊರಿಂದ ಆಚೆ ಇರುವ ಬಸ್ ನಿಲ್ದಾಣವರಗೆ ನಮ್ಮಿಬ್ಬರನ್ನೂ ಬಿಟ್ಟು ಬಿಡಿ ಆನಂದಣ್ಣ.ದಯವಿಟ್ಟು ಆಗುವುದಿಲ್ಲ ಎಂದು ಮಾತ್ರ ಹೇಳಬೇಡಿ.ನಿಮ್ಮ ಸಹಾಯವನ್ನು ನಾವು ಎಂದಿಗೂ ಈ ಜನ್ಮದಲ್ಲಿಯೇ ಮರೆಯುವುದಿಲ್ಲ.ಗೌರಿ ಕೂಡ ನಿಮ್ಮ ತಂಗಿಯಂತೆಯೇ.ಒಂದು ವೇಳೆ ಈ ಮದುವೆ ಆಗದಿದ್ದರೆ ಅವಳು ಕೂಡ ಕೌಸಲ್ಯ ಅಕ್ಕನಂತೆಯೇ ಊರ ಆ ಹೊಳೆಗೆ ಹಾರಿ ಜೀವ ಬಿಡುತ್ತಾಳೆ ಆನಂದಣ್ಣ..! ಕೈ ಮುಗಿದು ಅತ್ತು ಕರೆದು ಹೇಳಿ ಬಿಟ್ಟ ಶಂಕರ.
ನಾನು ಏನು ಮಾಡಬಹುದಿತ್ತು?
ತಂಗಿ ಕೌಸಲ್ಯ ಮತ್ತೊಮ್ಮೆ ಇನ್ನಿಲ್ಲದಂತೆ ನೆನಪಾಗಿ ಬಿಟ್ಟಳು!
ಅಪ್ಪ ಹೇಳಿದ್ದರು " ಕೌಸಲ್ಯಳ ಉಸಿರನ್ನೇ ಕಿತ್ತು ಕೊಂಡೆಯಲ್ಲೋ ಆನಂದ.. ಅದೆಂತಹ ಪಾಪಿ ಮಗ ನೀನು..!" ನನ್ನ ಕಿವಿಯಲ್ಲಿ ಹಾಗೇ ಆ ಕಠೋರ ಮಾತು ಗುಂಯ್ಯ್ ಗುಡಲು ಆರಂಭವಾಯಿತು.
ಕೊನೆಯ ಪಕ್ಷ ಈ ಎರಡು ಜೀವಗಳನ್ನಾದರೂ ಉಳಿಸಿ ಒಂದಿಷ್ಟು ಪಾಪದ ಭಾರ ನಾನು ಇಳಿಸಿಕೊಳ್ಳಲೇಬೇಕು ಎಂದು ನನ್ನ ಮನಸ್ಸು ಹೇಳಿತು.
ಆ ಸಮಯಕ್ಕೆ ನನ್ನ ಮುಂದಿದ್ದ ಈ ಬದುಕಿನ ವ್ಯಾಖ್ಯಾನ ಏನಿತ್ತು..?
ಪ್ರೀತಿಯೇ ಎಲ್ಲಕ್ಕಿಂತ ದೊಡ್ಡದು,ಪ್ರೀತಿ ಉಳಿದರೆ ಜೀವಗಳು ಕೂಡ ಉಳಿಯುತ್ತದೆ,ಜೀವನವೂ ನಡೆಯುತ್ತದೆ.ಇದು ನನಗೆ ನನ್ನ ಬದುಕೇ ಕಲಿಸಿದ್ದು.ಅನುಭವದ ಪಾಠ.ಆದರೆ ಅದನ್ನು ಹೇಳಿಕೊಟ್ಟದ್ದು ನನಗೆ ಕ್ಷಣ ಕ್ಷಣಕ್ಕೂ ಬದಲಾಗುವ ಈ ಸಮಾಜವೇ!
ಮತ್ತೆ ಅಮ್ಮ ಹೇಳಿದ ಮಾತು ನೆನಪಾಯಿತು " ಅವಳನ್ನು ಅವಳಷ್ಟಕ್ಕೆ ಹಾಗೇ ಬಿಟ್ಟಿದ್ದರೆ ಅವಳಿಷ್ಟದಂತೆ ಎಲ್ಲಾದರೂ ಸುಖವಾಗಿ ಬದುಕುತ್ತಿದ್ದಳು ಅಲ್ಲವೇ ಆನಂದ. !"
ಆ ನಂತರ ಹಿಂದೆ ಮುಂದೆ ಯೋಚಿಸಲಿಲ್ಲ ನಾನು.
ನಿಮಗೆ ಸಹಾಯ ನಾನು ಮಾಡುತ್ತೇನೆ ಎಂದು ಶಂಕರನಿಗೆ ಭರವಸೆ ಕೊಟ್ಟೆ.
ಮರು ದಿನ ಗೌರಿ ತನ್ನ ತಂದೆ ಮಾಬಲಣ್ಣನೊಂದಿಗೆ ದೇವಸ್ಥಾನಕ್ಕೆ ಬಂದಾಗ, ಉಪಾಯವಾಗಿ ಅವಳನ್ನು ನನ್ನ ಆಟೋ ಹತ್ತಿಸಿ ಶಂಕರನ ಬಳಿಗೆ ಅವಳನ್ನು ಕರೆದು ತಂದೆ.ಆ ನಂತರ ಶಂಕರ ಹಾಗೂ ಗೌರಿ ಇಬ್ಬರನ್ನೂ ಊರಿನ ಬಸ್ ನಿಲ್ದಾಣವರಗೆ ನನ್ನ ರಿಕ್ಷಾದಲ್ಲಿಯೇ ಬಿಟ್ಟು ಬಿಟ್ಟೆ!
ಕೊನೆಗೂ ಜೀವನದಲ್ಲಿ ಒಂದೊಳ್ಳೆಯ ಕೆಲಸ ಮಾಡಿದ ಖುಷಿ ನನ್ನಲ್ಲಿ ಇತ್ತು.ಜೀವನದಲ್ಲಿ ಒಂದು ಬಾರಿ ಪ್ರೇಮಿಗಳನ್ನು ಬೇರ್ಪಡಿಸಿ ನಾನು ಬಹಳ ಪಾಪದ ಕೆಲಸ ಮಾಡಿದ್ದೆ.ಅದಕ್ಕೀಗ ಒಂದಿಷ್ಟು ಪ್ರಾಯಶ್ಚಿತ್ತ ಮಾಡಿಕೊಂಡಂತೆ ಆಯಿತು.
ಗೌರಿ ಹಾಗೂ ಶಂಕರ ಇಬ್ಬರೂ ಕಣ್ಣುಗಳಲ್ಲಿ ನೀರು ತುಂಬಿಕೊಂಡು ನನ್ನ ಕಾಲನ್ನೇ ಹಿಡಿದು ಬಿಟ್ಟರು.
ಅಣ್ಣಾ... ನಿಮ್ಮ ಸಹಾಯವನ್ನು ನಾನು ಎಂದಿಗೂ ಮರೆಯಲಾರೆ,ನನ್ನ ಪಾಲಿಗೆ ನೀವು ದೇವರು ಇದ್ದಂತೆ ... ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿ ಬಿಟ್ಟಳು ಗೌರಿ.
ಆಹಾ... ಮನೆಯಲ್ಲಿ ಅಪ್ಪ ಅಮ್ಮನ ಹಿಡಿ ಶಾಪ ಪ್ರತೀ ದಿನವೂ ಕೇಳುತ್ತಿದ್ದ ನನ್ನನ್ನು ತಂಗಿಯಂತಹ ಗೌರಿ ಒಮ್ಮೆಲೇ ದೇವರು ಮಾಡಿ ಬಿಟ್ಟಿದ್ದಳು.ನನಗರಿವಿಲ್ಲದೇ ಕೆನ್ನೆಗೆ ಜಾರಿದ ನನ್ನ ಕಣ್ಣೀರನ್ನು ಕೈಯಿಂದ ಹಾಗೇ ಒರೆಸಿಕೊಂಡೆ.ಈ ತರಹದ ಆನಂದದ ಕಣ್ಣೀರು ನನಗೆ ಹೊಸದು!
ಗೌರಿಯನ್ನು ನೋಡುವಾಗ ಯಾಕೋ ನನ್ನ ತಂಗಿ ಕೌಸಲ್ಯ ಬಹಳಷ್ಟು ನೆನಪಾಗಿ ಬಿಟ್ಟಳು.ಅವಳ ಕೈಗೆ ..ತಗೋ ಗೌರಿ ಇರಲಿ.. ಎಂದು ಒಂದಷ್ಟು ಬೆಚ್ಚನೆಯ ನೋಟುಗಳನ್ನು ತುರುಕಿದೆ.ಆ ನಂತರ ಇಬ್ಬರು ಬಸ್ಸು ಹಿಡಿದು ಬಹು ದೂರ ನಮ್ಮೂರು ಬಿಟ್ಟು ಹೋಗಿದ್ದರು.ಆ ದಿನ ಮನಸ್ಸು ಮೊದಲ ಬಾರಿಗೆ ಎಷ್ಟೋ ವರ್ಷಗಳ ನಂತರ ಒಂಚೂರು ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು.ಹಾಗಾದರೆ ನಾನು ಮಾಡಿದ್ದು ಪುಣ್ಯದ ಕೆಲಸವಾ?
ರಿಕ್ಷಾ ಏರಿ ಮತ್ತೆ ಮನೆಗೆ ಮರಳಿದೆ.
ಆದರೆ ನಾನು ಮನೆಗೆ ಮರಳುವ ಮೊದಲು ಊರಲ್ಲಿ ನಡೆದ ಘಟನೆಗಳ ಬಗ್ಗೆ ನನಗೆ ಒಂಚೂರು ಕಲ್ಪನೆಯೇ ಇರಲಿಲ್ಲ!
ಜಾತ್ರೆಯ ನಮ್ಮ ಊರು ಅಕ್ಷರಶಃ ರಣರಂಗವಾಗಿತ್ತು!!
ಯಾರೋ ನೋಡಿದವರು ಒಬ್ಬರು ನನ್ನದೇ ರಿಕ್ಷಾದಲ್ಲಿ ಗೌರಿ ಮತ್ತು ಶಂಕರ ಊರು ಬಿಟ್ಟು ಓಡಿ ಹೋದ ವಿಷಯವನ್ನು ಸಂಜೀವಣ್ಣ ಹಾಗೂ ಮಾಬಲಣ್ಣನಿಗೆ ಮುಟ್ಟಿಸಿದ್ದರು..!
ಅಷ್ಟೇ...
ಬೆಂಕಿ ಧಗಧಗ ಎಂದು ದಹಿಸಲು ಕಿಡಿಯೊಂದು ಬೇಕಿತ್ತು ಅಷ್ಟೇ..!
ಸಂಜೀವಣ್ಣ ಹಾಗೂ ಮಾಬಲಣ್ಣ ಇಬ್ಬರೂ ಆ ದಿನ ಕತ್ತಿ ಹಿಡಿದು ಹೇಗೆ ಪರಸ್ಪರ ಬಡಿದಾಡಿಕೊಂಡಿದ್ದರು ಎಂದರೆ ಅವರ ಹೊಡೆದಾಟ ನಿಲ್ಲುವಾಗ ಅವರಿಬ್ಬರ ಉಸಿರಾಟವೂ ಕೂಡ ನಿಂತೇ ಹೋಗಿತ್ತು!!!
ನಾನು ಊರಿಗೆ ಮರಳುವಾಗ ಇಬ್ಬರೂ ಹೆಣವಾಗಿ ಮಲಗಿದ್ದರು!
ಊರು ಅಕ್ಷರಶಃ ಸ್ಮಶಾನ ಮೌನವಾಗಿತು!
ಆ ಮೌನದ ನಡುವೆಯೇ ಸಂಜೀವಣ್ಣ ಹೆಂಡತಿ ಅಂಬಕ್ಕ, ಹಾಗೂ ಮಾಬಲಣ್ಣನ ಹೆಂಡತಿ ಸೀತಾಕ್ಕ ಮತ್ತು ಅವರ ಕೊನೆಯ ಮಗಳು ಸೌಮ್ಯಳ ಆಕ್ರಂದನ ಮುಗಿಲು ಮುಟ್ಟಿತು! ಅವರು ಗೋಳೋ ಎಂದು ಎದೆ ಹೊಡೆದುಕೊಂಡೇ ಇನ್ನಿಲ್ಲದಂತೆ ಅಳುತ್ತಿದ್ದರು.
ಅದೊಂದು ಹೃದಯ ವಿದ್ರಾವಕ ದೃಶ್ಯ!
ಕಿವಿ ಸರಿ ಇರುವವನು ಹೆಚ್ಚು ಹೊತ್ತು ಅಲ್ಲಿ ಎಂದಿಗೂ ನಿಲ್ಲಲಾರ!
ನೋಡುವ ಮನಸ್ಸು ಎಂದಿಗೂ ತಡೆದುಕೊಳ್ಳಲಾರದು..!
ಹಾಗಾದರೆ ಆ ಮಾಬಲಣ್ಣ ಹಾಗೂ ಸಂಜೀವಣ್ಣ ಇಬ್ಬರನ್ನೂ ನಿಜಕ್ಕೂ ಕೊಂದ ಪಾಪಿ ಯಾರು?
ಓಡಿ ಹೋದ ಶಂಕರ..?
ಆ ಗೌರಿ..?
ಅಥವಾ... ಅವರಿಗೆ ಸಹಾಯ ಮಾಡಿದ ನಾನೇ?!
ಊರು ಏನು ಹೇಳುತ್ತದೆಯೋ ಅದು ನನಗೆ ಎಂದಿಗೂ ಬೇಕಾಗಿರಲಿಲ್ಲ. ನೇರಾ ಮನೆಗೆ ನಡೆದೆ.
ಆ ದಿನವೂ ನನ್ನ ಅಪ್ಪ ಅಮ್ಮ ನನ್ನಲ್ಲಿ ಹೇಳಿದ್ದು ಒಂದೇ ಮಾತು..
" ಎಂತಹ ಕೆಲಸ ಮಾಡಿದೆ ಆನಂದ ನೀನು...ಅವರ ಪ್ರೀತಿಗೆ ಸಹಾಯ ಮಾಡುವ ಅಗತ್ಯವಾದರೂ ನಿನಗೆ ಏನಿತ್ತು?! ಊರು ಏನೇ ಹೇಳಲಿ ಆದರೆ ನಮ್ಮ ಪಾಲಿಗಂತು ಆ ಇಬ್ಬರು ಮಕ್ಕಳ ತಂದೆಯಂದಿರನ್ನು ಕೊಂದಿದ್ದು,ಅಂಬಕ್ಕ ಹಾಗೂ ಸೀತಾಕ್ಕನ ಸೌಭಾಗ್ಯವನ್ನು ಕಸಿದುಕೊಂಡದ್ದು ಬೇರೆ ಯಾರೂ ಅಲ್ಲ... ಅದು ಸ್ವತಃ ನೀನೇ..!! ಅಂದು ನಮ್ಮ ಮಗಳನ್ನೇ ಕೊಂದೆ.. ಇಂದು ಬೇರೆಯವರ ಹೆತ್ತವರನ್ನು ಕೂಡ ಕೊಂದು ಮುಗಿಸಿದೆ.. ಅದೆಂತಹ ಪಾಪಿ ಮಗ ನೀನು ಆನಂದ...!! "
ಮನುಷ್ಯ ಪದೇ ಪದೇ ಒಳಗೊಳಗೆ ಸಾಯುತ್ತಲೇ ಇದ್ದರೆ ನೋವು ಎನ್ನುವುದು ಅವನಲ್ಲಿ ಎಂದಿಗೂ ಹುಟ್ಟುವುದೇ ಇಲ್ಲ..!!
ಎಂದೋ ಸತ್ತಿದ್ದ ನನಗೆ ಆ ದಿನವೂ ಅಂತಹ ನೋವು ಏನೂ ಆಗಲಿಲ್ಲ!
ಏಕೆಂದರೆ ನಾನು ಎರಡನೇ ಬಾರಿಗೆ ನನ್ನೊಳಗೆ ಸತ್ತಿದ್ದೆ ಹಾಗೂ ತಂದೆ ತಾಯಿಯ ದೃಷ್ಟಿಯಲ್ಲಿ ಮೂರು ಕೊಲೆಗಳನ್ನು ಅದಾಗಲೇ ಮಾಡಿ ಮುಗಿಸಿದ್ದೆ!
ನಾನು ಸತ್ತಿದ್ದರೂ ಯಾರು ನನ್ನನ್ನು ಹೆಣದಂತೆ ಸುಡಲಿಲ್ಲ... ಏಕೆಂದರೆ ನಾನು ಹೆಸರಿಗೆ ಉಸಿರಾಡುತ್ತಿದ್ದೆ,ನಡೆದಾಡುತ್ತಿದ್ದೆ, ಹಾಗೂ ಎಲ್ಲರ ಕಣ್ಣಿಗೆ ಜೀವಂತವಾಗಿಯೇ ಇದ್ದೆ!
ನನ್ನನ್ನು ಯಾರು ಜೈಲಿಗೂ ಹಾಕಲಿಲ್ಲ... ಏಕೆಂದರೆ ನಾನು ಯಾರನ್ನೂ ನನ್ನ ಕೈಯಾರೆ ಕೊಂದಿಲ್ಲ..ಅದಕ್ಕೆ ಸಾಕ್ಷಿಯೇ ಇಲ್ಲ. ಆದರೆ ನನ್ನ ಅಮ್ಮ ಅಪ್ಪನಿಗೆ ನಾನು ನಿರಪರಾಧಿ ಎಂದು ಸಾಬೀತುಪಡಿಸಲು ನನ್ನ ಬಳಿ ಯಾವುದೇ ಬಲವಾದ ಸಾಕ್ಷಿಯನ್ನು ಕೂಡ ನಾನೂ ಉಳಿಸಿಯೂ ಇಲ್ಲ!
ಹಾಗಾಗಿ ನಾನು ಅಜೀವನಪರ್ಯಂತ ಕೊಲೆಗಾರನೇ !!
ಪ್ರಿತಿ ದೊಡ್ಡದಾ..? ಬದುಕು ದೊಡ್ಡದಾ? ಎಂಬ ಪ್ರಶ್ನೆ ಆ ನಂತರ ನನ್ನಲ್ಲಿ ಹುಟ್ಟಲಿಲ್ಲ!
ಬೇಕಾದಂತೆ ಬದಲಾಗುವ ಈ ಬದುಕಿನ ವ್ಯಾಖ್ಯಾನಗಳ ಬಗ್ಗೆ ಸರಿಯಾದ ಉತ್ತರವೊಂದು ಬೇಕೆಂದು ನನಗೆ ಎಂದೂ ಅನ್ನಿಸಲಿಲ್ಲ!
ಬದುಕು ಆ ನಂತರವೂ ಸಾಗಿತ್ತು... ಹೊಳೆಯಲ್ಲಿ ಮತ್ತಷ್ಟು ನೀರು ಹರಿದವು.
ನಾನು ಆ ನಂತರವೂ ಹೊಳೆಯ ದಡಕ್ಕೆ ಹೋಗುತ್ತಿದ್ದೆ.
ಕೈಯಲ್ಲಿದ್ದ ಜಿಲೇಬಿಯ ಸುತ್ತು ಮತ್ತೆ ಮತ್ತೆ ಖಾಲಿಯಾಗುತ್ತಾ ಹೋಗಿ ಕೊನೆಯ ಸುತ್ತಿಗೆ ಬಂದು ಮುಗಿದಾಗ ನಾನು ಚಕ್ರವ್ಯೂಹದೊಳಗೆ ಸಿಕ್ಕಿ ಬಿದ್ದವನೋ ಅಥವಾ ಇನ್ನಾವುದೇ ಬದುಕಿನ ವ್ಯೂಹ ಎದುರಾಗಬಾರದೆಂದು ಎಲ್ಲವನ್ನೂ, ಎಲ್ಲರನ್ನೂ ಹಾಗೇ ತಿಂದು ಮುಗಿಸಿ ಬಿಟ್ಟವನೋ ಎಂದು ಗೊಂದಲವಾದಾಗ ಮತ್ತೆ ಅಂಗಿ ಬಿಚ್ಚಿ ಹೊಳೆಗೆ ಹಾರುತ್ತಿದ್ದೆ..
ಅವತ್ತೊಂದು ದಿನ ಎಂದಿನಂತೆ ನೀರಿನಡಿಗೆ ಹೋಗಿ ನೆಲ ಮುಟ್ಟಿ ಮತ್ತೇ ನೀರಿನ ಮೇಲೈಗೆ ಈಜುತ್ತಾ ಸಾಗಿದ್ದೆ ನಾನು.ನೀರಿನಡಿಯಿಂದ ಮೇಲೆ ಕಾಣುತ್ತಿದ್ದ ಹೊಳೆಯ ನೀರು ಹಾಗೂ ಅದರಾಚೆ ಕಾಣುತ್ತಿದ್ದ ಮೇಲಿನ ಆಕಾಶ ಒಮ್ಮಿಂದೊಮ್ಮೆಲೇ ಕಿತ್ತಳೆ ಬಣ್ಣಕ್ಕೆ ರಪ್ಪನೇ ತಿರುಗಿ ಬಿಟ್ಟಿತು!!
ಕೂಡಲೇ ಬೇಗ ಬೇಗನೇ ನೀರಿನಡಿಯಲ್ಲಿಯೇ ಈಜುತ್ತಾ ದಡ ಏರಿದವನು ಕೈಯಲ್ಲಿಯೇ ತಲೆಯ ನೀರು ಒರೆಸಿಕೊಂಡು ಮೆಲ್ಲಗೆ ಇನ್ನೊಂದು ದಡದತ್ತ ತಿರುಗಿ ನೋಡಿದೆ...
ಆಗ ಅಲ್ಲಿ ಇದ್ದಳು ಸೌಮ್ಯ.
ಅದೇ ಮಾಬಲಣ್ಣನ ಮಗಳು, ಶಂಕರನ ತಂಗಿ ಸೌಮ್ಯ.
ಕಿತ್ತಳೆ ಬಣ್ಣದ ಸೀರೆಯನ್ನು ಹೊಳೆಯ ನೀರಿನಲ್ಲಿ ಹರಿಯಬಿಟ್ಟು ಬಟ್ಟೆ ಒಗೆಯುತ್ತಿದ್ದಳು ಅವಳು.
ಹೌದು... ಕಿತ್ತಳೆ ಬಣ್ಣದ ಸಿಲ್ಕು ಸೀರೆ!
ಅವಳೂ ನನ್ನನ್ನೇ ನೋಡಿದಳು!
ನೋಡಿ ಹಾಗೇ ನಕ್ಕಳು..!!
ಹಿಂದಿನದ್ದು ಏನೋ ನೆನಪಾಗಿ ರಪ್ಪನೇ ನನ್ನ ಬೆನ್ನ ಹಿಂದೆ ತಿರುಗಿ ನೋಡಿದೆ..
ಆಗ ಅಲ್ಲಿ ನಿಂತಿದ್ದ ನನ್ನ ತಮ್ಮ ಸತೀಶ!!
ಗಾಳ ಹಿಡಿದುಕೊಂಡೇ ನಿಂತಿದ್ದ ಅವನು..!!
ಹಾಗು ಅವನೂ ಕೂಡ ಸೌಮ್ಯಳತ್ತ ನೋಡಿ ಅವನಷ್ಟಕ್ಕೆ ನಗುತ್ತಿದ್ದ!
ಆ ದಿನ ತುಂಬಾ ಹೊತ್ತು ಬಟ್ಟೆ ಒಗೆದ ಸೌಮ್ಯಳಿಂದಾಗಿ ಹೊಳೆಯ ನೀರು ಬಹಳಷ್ಟು ಹೊತ್ತು ಬಣ್ಣವಾಗಿ ಬಿಟ್ಟಿತ್ತು...!
ಅವರಿಬ್ಬರ ನಗುವಿನ ವಿನಿಮಯ ಮೌನವಾಗಿ ಹೊಳೆಯ ನಡುವಲ್ಲಿ ಭರದಿಂದಲೇ ಮತ್ತಷ್ಟು ಹೊತ್ತು ಸಾಗಿತ್ತು..
ಹೊಳೆ ಮಾತ್ರ ಅದರಷ್ಟಕ್ಕೆ ಏನೂ ಗೊತ್ತಿಲ್ಲದಂತೆ ಕಡಲನ್ನು ಸೇರುವುದಕ್ಕಾಗಿ ಮೆಲ್ಲಗೆ ಹರಿಯುತ್ತಿತ್ತು..!
.....................................................................................
#ಒಂದೊಂದು_ಕಥೆ
ab pacchu
ನಿಮ್ಮ ಪ್ರತಿ ಒಂದು ಕಥೆಗಳು ಹೇಗಿರುತ್ತವೆ ಅಂದರೆ.... ಮುಗಿಯಲೇ ಬಾರದು... ಇನ್ನಷ್ಟು ಹೆಚ್ಚು ಹೊತ್ತು ಓದುತ್ತಲೇ ಇರಬೇಕು ಅನ್ನುವ ಹಾಗೆ..
ReplyDeleteಕಥೆ ಮುಗಿದರು ಅದರ ಗುಂಗು ಮನದಲ್ಲಿ ತಿರುಗುತ್ತಲೇ ಇರುತ್ತದೆ..
ಬಾಲ್ಯದ ಗೆಳೆಯನೊಬ್ಬ ಪಕ್ಕದಲ್ಲಿ ಕೂತು ಮಾತನಾಡುತ್ತಿರುವಂತೆ..ಸರಳ ಸುಂದರ ನಿರೂಪಣೆ..😍😍👌🏻👌🏻