ಬೆಟ್ಟದ ಮಾತು..
ದೂರದ ಬೆಟ್ಟ ನುಣ್ಣಗೆ ಅಂತಾರೆ.ಬೆಟ್ಟ ಮಾತಾಡುವುದಿಲ್ಲ ಎಂದು ಹೆಚ್ಚಿನ ಎಲ್ಲರೂ ಹೇಳುತ್ತಾರೆ.ಆದರೆ ದಿನಾ ಎದ್ದು ಅದರತ್ತ ನೋಡುತ್ತಿದ್ದರೆ ಅದು ಮಾತ್ರ ನನಗೆನೋ ಹೇಳುವುದರಲ್ಲಿಯೇ ಅತೀ ಉತ್ಸುಕವಾಗಿದೆ ಎಂದೇ ನನಗೆ ಪ್ರತೀ ಸಲ ಅನಿಸುತ್ತದೆ.ಬಹುಶಃ ಅದಕ್ಕೆ ಹೇಗೆ ಹೇಳಬೇಕು ಎಂದು ಗೊತ್ತಿಲ್ಲ ಪಾಪ,ನನಗಂತು ಅದರ ಸಂವಹನ ಶೈಲಿಯೇ ಇನ್ನೂ ಅರ್ಥವಾಗುತ್ತಿಲ್ಲ.ಆದರೆ ಸಂವೇದನೆ ನಮ್ಮಿಬ್ಬರಲ್ಲಿಯೂ ಇದೆ.ಊರಿನಲ್ಲಿ ಎಲ್ಲೇ ನಿಂತರೂ ಅದು ಎದ್ದು ಕಾಣುತ್ತದೆ.ಚಲಿಸುವ ಬಸ್ಸಿನ ಕಿಟಕಿಯಿಂದ ಮೆಲ್ಲಗೆ ಇಣುಕಿ ನೋಡಿದರೆ ಮಲೆಗಳಲ್ಲಿ ಮದುಮಗಳಂತೆ ಅದು ಸದಾ ಸೂಜಿಗಲ್ಲು.ಆದರೆ ಅದು ಬರೀ ಮಗಳೂ ಅಲ್ಲ,ಮಗನೂ ಅಲ್ಲ.ಕೆಲವೊಮ್ಮೆ ಎರಡೂ ಹೌದು ಅವರವರ ಭಾವಕ್ಕೆ.
ಆ ಕಲ್ಲಿನ ಬೆಟ್ಟದ ತುದಿಗೂ ತುಂಬಾ ಸಲ ಹೋಗಿದ್ದೇನೆ.ಅದರ ಬುಡದಲ್ಲಿಯೇ ಒಂದು ಬೋರ್ಡ್ ಕೂಡ ನೆಟ್ಟಿದ್ದಾರೆ.ಈ ಬೆಟ್ಟದ ದೊಡ್ಡ ಜೋಡಿ ಕಲ್ಲುಗಳು ಶಿವ ಪಾರ್ವತಿಯರ ಪ್ರತೀಕ ಎಂದು ಅದರಲ್ಲಿ ಸಣ್ಣಗೆ ಬರೆದಿದ್ದಾರೆ.ಹಾಗಾಗಿ ನನಗೆ ಅದರಲ್ಲಿ ದೇವರು ಮೊದಲು ಕಾಣಿಸುತ್ತಾರೆ.ಈ ಬೆಟ್ಟ ಕಣ್ಣಿಗೆ ಬಿದ್ದಾಗಲೆಲ್ಲ ನಾನು ಅವರಿಬ್ಬರನ್ನು ಮನಸ್ಸಿನಲ್ಲಿ ನೆನೆದುಕೊಂಡು ಶ್ರದ್ಧೆಯಿಂದ ಕೈ ಮುಗಿಯುತ್ತೇನೆ.ಏನಾದರೂ ಹೇಳಿ ಎಂದು ಕೂಡ ಕೇಳುತ್ತಾನೆ.ಬಹುಶಃ ಅವರಿಬ್ಬರು ಹೇಳಿರಬಹುದು,ನನಗೆ ಅರ್ಥವಾಗದಿದ್ದರೆ ಅದು ಅವರ ತಪ್ಪೇ..?
ಮನೆಯ ಮೇಲಿನ ಸಣ್ಣ ಗುಡ್ಡದ ಅನನಾಸು ತೋಟಕ್ಕೆ ನಾನು ಹೆಚ್ಚಾಗಿ ಒಬ್ಬನೇ ಹೋಗುತ್ತೇನೆ.ಅಲ್ಲಿಂದ ಈ ಬೆಟ್ಟ ನಿಜಕ್ಕೂ ನುಣ್ಣಗೆ,ತಣ್ಣಗೆ ನೋಡುವ ಕಣ್ಣಿಗೆ.ತೋಟದಲ್ಲಿ ಹಣ್ಣಾಗುವ ಪರಿಮಳದ ಅನನಾಸು,ನೆಲದಲ್ಲಿ ಹರಡಿಕೊಂಡಿರುವ ಕಷಾಯದ ನಾಮದ ಬೇರು,ಮಣ್ಣೊಳಗಿನ ಉದ್ದನೆಯ ಮರಗೆಣಸು ಇದು ಯಾವುದೂ ನನಗೆ ಆ ಬೆಟ್ಟದಷ್ಟು ರುಚಿಸದು.ಆ ಬೆಟ್ಟ ನೋಡಿದಾಗಲೆಲ್ಲ ಅನಿಸುತ್ತದೆ,ನನಗೆ ನಿಜವಾಗಿಯೂ ಅದೇನೋ ಹೇಳುತ್ತಿದೆ...ಬಹುಶಃ ನನಗದು ಎಂದಿಗೂ ಅರ್ಥವಾಗದು.ಅರ್ಥವಾಗಬಾರದು ಕೂಡ! ಅರ್ಥವಾದರೆ ನನಗೆ ಅದರ ಮೇಲಿನ ಕುತೂಹಲ ಕಡಿಮೆಯಾಗಬಹುದು ಎಂಬ ಸಣ್ಣ ಭಯವಿದೆ! ಅದು ಹೀಗೇ ಏನೇನೋ ಅದರಷ್ಟಕ್ಕೆ ಹೇಳುತ್ತಲೇ ಇರಲಿ,ನಾನು ದೂರಿದಿಂದಲೇ ನೋಡಿ ಬೆರಗು ಹೆಚ್ಚಿಸಿಕೊಳ್ಳುತ್ತೇನೆ ಸದಾ...
#ಏನೋ_ಒಂದು..
ab pacchu
Comments
Post a Comment