Chehre

#Chehre | Prime




ಅದೊಂದು ಹಿಮದ ಬೆಟ್ಟ.ಬಿಡದೇ ಮಂಜು ಸುರಿಯುವ ಆ ಒಂಟಿ ರೋಡಿನಲ್ಲಿ ಅವನೊಬ್ಬ ಕಾರು ಡ್ರೈವ್ ಮಾಡುತ್ತಾ ಹೋಗುತ್ತಿರುತ್ತಾನೆ.

ಗಮ್ಯ ತಲುಪಬೇಕಾದ ಸಿಕ್ಕಾಪಟ್ಟೆ ಅರ್ಜೆಂಟು ಆ ಯುವಕನಿಗೆ.ಹಾಗಾಗಿ ನೇರ ದಾರಿಯ ಬದಲಾಗಿ ಶಾರ್ಟ್ ಕಟ್ ದಾರಿಯನ್ನೇ ಹಿಡಿಯುತ್ತಾನೆ ಅವನು! 

ಆದರೆ ಅವನು ಹಿಡಿದ ದಾರಿ ಅವನನ್ನು ಮುಂದಕ್ಕೆ ಕರೆದುಕೊಂಡು ಹೋಗುವುದಿಲ್ಲ.ಕಾರಣ ಕಾರು ಮುಂದೆ ಹೋಗದಷ್ಟು ದೊಡ್ಡದಾದ ರೋಡ್ ಬ್ಲಾಕ್ ಎದುರಲ್ಲಿ ಇರುತ್ತದೆ !

ಕತ್ತಲೆ ನಿಧಾನಕ್ಕೆ ಆವರಿಸಿಕೊಳ್ಳುವ ಸಮಯ ಅದು.ಅಲ್ಲಿಯೇ ಇದ್ದ ಒಂದು ದೊಡ್ಡ ಬಂಗಲೆಗೆ ಹೋಗಿ ಸೇರಿಕೊಳ್ಳುತ್ತಾನೆ ಅವನು. 

ಅಲ್ಲಿ ಮನುಷ್ಯರು ಕೂಡ ಅವಶ್ಯವಾಗಿ ಇರುತ್ತಾರೆ! 

ಮೂರು ವಯಸ್ಸಾದ ವೃದ್ಧರು ಹಾಗೂ ಒಬ್ಬಳು ತರುಣಿ. 

ನಂತರ ಇನ್ನೊಬ್ಬ ಮುದುಕ ಕೂಡ ಆ ಬಂಗಲೆಗೆ ಎಲ್ಲಿಂದಲೋ ಬಂದು ಸೇರಿಕೊಳ್ಳುತ್ತಾನೆ! ಅಂದ ಹಾಗೆ ಆ ವೃದ್ಧರೆಲ್ಲಾ ಮೊದಲೇ   ಗೆಳೆಯರು! 

ಬಂಗಲೆಗೆ ಬಂದ ಅಪರಿಚಿತ ಯುವಕನನ್ನು ಆ ನಾಲ್ವರು ವೃದ್ಧರು ಹಾಗೂ ಯುವತಿ ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. 

ಆ ಚಳಿಗೆ ಒಂದೊಳ್ಳೆಯ ವಿಸ್ಕಿ,ರುಚಿಯಾದ ಊಟ ಎಲ್ಲವೂ ಅಲ್ಲಿ ದೊರೆಯುತ್ತದೆ ಆ ಯುವಕನಿಗೆ. 

ಯುವಕ ಆ ಒಂಟಿ ಬಂಗಲೆ ಹಾಗೂ ಆ ವೃದ್ಧರನ್ನು ನೋಡಿ ಒಂದು ಪ್ರಶ್ನೆ ಅವರಲ್ಲಿಯೇ ಕೇಳುತ್ತಾನೆ... 

- ಜಗತ್ತಿನ ಎಲ್ಲಾ ಸಂಪರ್ಕ ಕಳೆದುಕೊಂಡು,ಒಂದು ಪೋನೂ  ಇಲ್ಲದೇ, ಇಂಟರ್ನೆಟ್ ಕೂಡ ಇಲ್ಲದೇ,ಇಂತಹ ವಯಸ್ಸಿನಲ್ಲಿ ಈ ಒಂಟಿ ಬಂಗಲೆಯಲ್ಲಿ ಇರಲು ನಿಮಗೆ  ಸ್ವಲ್ಪವೂ ಬೋರು ಆಗುವುದಿಲ್ಲವೇ? 

ಅದಕ್ಕೆ ವೃದ್ಧರು ಹೇಳುತ್ತಾರೆ.. ನಮಗೆಂತಹ ಬೋರು.. ಚಳಿಗೆ ದಿನಾಲೂ ಕುಡಿಯುತ್ತೇವೆ...ಅದೇ ರೀತಿ ಚೆನ್ನಾಗಿ ತಿನ್ನುತ್ತೇವೆ... ಆಮೇಲೆ ಒಂದು ರೋಚಕವಾದ ಆಟ ಆಡುತ್ತೇವೆ...! 

ಯುವಕ ಕನ್ಫ್ಯೂಸ್ ಆಗುತ್ತಾನೆ ಮತ್ತು ಅವನು ಅವರನ್ನೇ ಕೇಳುತ್ತಾನೆ... ಆಟವೇ? 

ಒಬ್ಬ ವೃದ್ಧ ಹೇಳುತ್ತಾನೆ... ಹೌದು ನಾವು ಆಟ ಆಡುತೇವೆ,ಹಾಗಾಗಿ ನಮಗೆ ಎಂದಿಗೂ ಇಲ್ಲಿ ಬೋರ್ ಆಗುವುದಿಲ್ಲ! 

ಯುವಕ ಮತ್ತೆ ಕೇಳುತ್ತಾನೆ... ಏನದು ಆಟ? 

ಮತ್ತೊಬ್ಬ ವೃದ್ಧ ಹೇಳುತ್ತಾನೆ... ನಾವೆಲ್ಲರೂ ಕ್ರಿಮಿನಲ್ ಕೋರ್ಟ್ ನಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರು.ನಾನು ಕೋರ್ಟ್ ನಲ್ಲಿ ಚೀಫ್ ಜಡ್ಜ್ ಆಗಿದ್ದೆ.. ಇವರು ಚೀಫ್  ಢಿಫೆನ್ಸ್ ಕೌನ್ಸಿಲ್.. ಮತ್ತೆ ಅವರು ಚೀಫ್ ಪ್ರಾಸಿಕ್ಯೂಟರ್ ಆಗಿದ್ದರು. ನಾವು ನಿಮ್ಮ ತರಹ ಯಾರಾದರೂ ಈ ಮನೆಗೆ ಅತಿಥಿಯಾಗಿ ಬಂದರೆ ಅವರನ್ನು ಸೇರಿಸಿಕೊಂಡು ಒಂದು ಗೇಮ್ ಆಡುತ್ತೇವೆ.ಅದೇನೆಂದರೆ ಯಾವುದಾದರೂ ಒಂದು ನಡೆದು ಹೋಗಿರುವ ಕೇಸ್ ಅನ್ನು ಎತ್ತಿಕೊಂಡು ಇಲ್ಲವೇ ಮನೆಗೆ ಬಂದ ಅತಿಥಿಯನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ,ನ್ಯಾಯಾಲಯದಲ್ಲಿ ವಾದ ಮಂಡಿಸುವಂತೆಯೇ ಇಲ್ಲಿಯೂ ಕೂಡ ತಪ್ಪಿತಸ್ಥನ ಯಾವುದಾದರೊಂದು ಅಪರಾಧವನ್ನು ಪ್ರೂವ್ ಮಾಡುವುದಕ್ಕಾಗಿ ವಾದ-ಪ್ರತಿವಾದಗಳ ಆಟ ಆಡುತ್ತೇವೆ.ಒಂದು ವೇಳೆ ಅಪರಾಧ ದೊಡ್ಡದಾಗಿದ್ದರೆ ಮತ್ತು ಅದು ಅಪರಾಧ ಎಂದು ಸಾಬೀತಾದಲ್ಲಿ ಮರಣದಂಡನೆಯಂತಹ ಶಿಕ್ಷೆಯನ್ನು ಸಹ ಕೊನೆಗೆ ನಮ್ಮ ತೀರ್ಪಿನಲ್ಲಿ ಘೋಷಿಸುತ್ತೇವೆ.. ಇದೇ ಆಟ! 

ಯುವಕ ಏನೋ ಇದೊಂದು ವೃದ್ಧರ ಮಾಮೂಲಿ ಟೈಂ ಪಾಸ್ ಆಟ,ಎಂಜಾಯ್ ಮಾಡುವ ಎಂದು ತಪ್ಪಿತಸ್ಥನ ಸ್ಥಾನದಲ್ಲಿ ನಿಂತುಕೊಂಡು ಆಟವಾಡಲು ಒಪ್ಪಿಕೊಳ್ಳುತ್ತಾನೆ ಆದರೆ ಆತ ಸ್ಪಷ್ಟವಾಗಿ ಮೊದಲೇ ಹೇಳುತ್ತಾನೆ... ನೋಡಿ,ನಾನು ಜೀವನದಲ್ಲಿ ಯಾವುದೇ ತಪ್ಪೇ ಮಾಡಿಲ್ಲ.. ಹಾಗಾಗಿ ನಿಮ್ಮ ಈ ಆಟದಲ್ಲಿ ನೀವೇ ಸೋಲುತ್ತಿರಿ..ಎಂದು ನಗು ನಗುತ್ತಾ  ಹೇಳುತ್ತಾನೆ ಅವನು. 

ಅದಕ್ಕೆ ನಿವೃತ್ತ ವೃದ್ಧ ಜಡ್ಜ್  ಹೇಳುತ್ತಾರೆ....ನೀನೇ ಯಾವುದಾದರೂ ನಿನ್ನ ತಪ್ಪಿನ ಬಗ್ಗೆ ಹೇಳಿ ಬಿಡು,ಆಗ ನಿನಗೆಯೇ ಸುಲಭವಾಗಿ ಈ ಆಟವನ್ನು ನಿನಗೆ ಬೇಕಾದಂತೆ ವಾದ ಮಾಡಿ  ಗೆಲ್ಲಬಹುದು.ಒಂದು ವೇಳೆ ನೀನು ತಪ್ಪೇ  ಮಾಡಿಲ್ಲ ಎಂದು ಹೇಳುವುದಾದರೆ ನಮಗೆ ನಿನ್ನ ಜೀವನದ ಕಥೆಯನ್ನು ಹೇಳಬೇಕಾಗುತ್ತದೆ,ಆಗ ನೀನು ನಿನ್ನ ಜೀವನದಲ್ಲಿ ಎಲ್ಲಿ ಅಪರಾಧ ಮಾಡಿದ್ದಿ ಎಂದು ನಮ್ಮ ಪ್ರಾಸಿಕ್ಯೂಟರ್ ಪ್ರೂವ್ ಮಾಡಿ ತೋರಿಸುತ್ತಾರೆ...ಆಗ ಅದನ್ನು ನಿನಗೆ ಡಿಪೆಂಡ್ ಮಾಡಿಕೊಳ್ಳುವುದು ಕೂಡ ಖಂಡಿತವಾಗಿಯೂ ಕಷ್ಟವಾಗಬಹುದು.ಹಾನ್.. ಅಂದ ಹಾಗೆ ನಮ್ಮ ಪ್ರಾಸಿಕ್ಯೂಟರ್ ಇಲ್ಲಿಯವರೆಗೆ ಯಾವುದೇ ಕೇಸ್ ಕೂಡ ಸೋತಿಲ್ಲ!

ಯುವಕನಿಗೆ ಇದೊಂದು ಚ್ಯಾಲೆಂಜ್ ತರಹ ಅನಿಸುತ್ತದೆ ಮತ್ತು ಅವನು ಅದನ್ನು ಸ್ವೀಕರಿಸುತ್ತಾನೆ.. ನಾನು ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಯೇ ಅವನು ತನ್ನದೊಂದು ಕಥೆ ಹೇಳಲು ಶುರು ಮಾಡಿ ಆ ಒಂದು ಆಟದಲ್ಲಿ ನೇರವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. 

ವಾದ, ಪ್ರತಿವಾದ ಕೋರ್ಟ್ ರೀತಿಯಲ್ಲಿಯೇ ಆ ಮನೆಯೊಳಗೆ ನಡೆಯುತ್ತದೆ.. 

ಕಟಕಟೆಯನ್ನೂ ಸಹ ತಂದು ಮನೆಯ ಮಧ್ಯದಲ್ಲಿ ನಿಲ್ಲಿಸಲಾಗುತ್ತದೆ....!

ಜೊತೆಗೆ ಕಣ್ಣಿಗೆ ಬಟ್ಟೆ ಕಟ್ಟದ ನ್ಯಾಯದೇವತೆಯ ಪ್ರತಿಮೆಯೂ ಕೂಡ ಜಡ್ಜ್ ಮುಂದಿನ ಟೇಬಲ್ಲಿನ ಬಂದು ನಿಂತು ಬಿಡುತ್ತದೆ..!

ಮಾತು ಬರದ ಮನೆಯ ಕೆಲಸದವ ಜೈಲರ್ ತರಹ,ಸೆಕ್ಯುರಿಟಿ ಗಾರ್ಡ್ ತರಹ ಅಭಿನಯಿಸಲು ಕೊರ್ಟ್ ನಲ್ಲಿ ನಿಲ್ಲುತ್ತಾನೆ!

ಮನೆಯಲ್ಲಿದ್ದ ನಾಲ್ಕನೇ ವೃದ್ಧ ಹಿಂದೆ ಕೋರ್ಟ್ ನಲ್ಲಿ ಮರಣದಂಡನೆ ಒಳಗಾಗುವವರಿಗೆ ನೇಣು ಹಾಕುವವನು ಆಗಿರುತ್ತಾನೆ.ಅವನದ್ದೊಂದು ಪೆಟ್ಟಿಗೆಯಲ್ಲಿ ಸದಾ ಇದ್ದ ನೇಣು ಹಾಕುವ ಹಗ್ಗ ಕೂಡ ಹೊರಗೆ ಬಂದು,ಮನೆಯೊಳಗಿನ ನ್ಯಾಯಾಲಯದ ಕೊನೆಯ ತೀರ್ಪಿಗಾಗಿ ಇನ್ನಿಲ್ಲದಂತೆ ಪ್ರತೀಕ್ಷೆ ಮಾಡುಲು ಶುರುಮಾಡುತ್ತದೆ!!

ಏಕೆಂದರೆ ಆ ಮನೆಯ ವೃದ್ಧರೆಲ್ಲರಿಗೂ ಸ್ಪಷ್ಟವಾಗಿಯೇ ಗೊತ್ತಿದೆ.. ಅವರೆಂದೂ ಯಾವ ಕೇಸಿನ ಆಟವನ್ನು ಆ ಮನೆಯಲ್ಲಿ ಸೋತವರೇ ಅಲ್ಲ!! 

ಅಲ್ಲಿಂದಲೇ ಕಥೆ ಶುರುವಾಗುತ್ತದೆ!!
ಅಸಲಿ ಕಥೆಯೊಂದು ಹಾಗೇ ತೆರೆದುಕೊಳ್ಳುತ್ತಾ ಹೋಗುತ್ತದೆ.. 

ಏನದು ಕಥೆ? 

ವೃದ್ಧರ ಆ ಟೈಂ ಪಾಸ್ ಆಟದಲ್ಲಿ ಯಾವುದಾದರೂ ಸತ್ಯ ನಿಜಕ್ಕೂ ಹೊರ ಬೀಳುತ್ತದೆಯಾ? 

ಅದನ್ನು ಪ್ರೂವ್ ಮಾಡಲು ಆ ಮನೆಯ ವೃದ್ಧರ ಆಟದ ಕೋರ್ಟ್ ಗೆ ಸಾಧ್ಯವಾಗುತ್ತಾ? 

ತಮಾಷೆಗೆಂದು ಆಟವಾಡಲು ಒಪ್ಪಿಕೊಂಡ ಯುವಕ,ಆ ಆಟವಾಡಲು ಒಪ್ಪಿಕೊಂಡದ್ದೇ ಒಂದು ತಪ್ಪಾ? 

ಅಥವಾ ಏನಾದರೊಂದು ದೊಡ್ಡ ತಪ್ಪೇ ಆತ ಜೀವನದಲ್ಲಿ ನಿಜವಾಗಿಯೂ ಮಾಡಿದ್ದಾನಾ? 

ಇದರದ್ದೊಂದು ಕಥೆ ಮುಂದೆ ಏನಾಗುತ್ತದೆ?! 

ಇದರ ಕಥೆ 1956 ರಲ್ಲಿ Friedrich Dürrenmatt ಎಂಬುವವನು ಬರೆದ ಜರ್ಮನ್ ಕಾದಂಬರಿ A Dangerous Game ನಿಂದ ಪ್ರೇರಿತವಾದದ್ದು.1971 ರಲ್ಲಿ ಬಂದಂತಹ ಮರಾಠಿ ಸಿನಿಮಾ "Shantata! Court Chaalu Aahe.. ", 2015 ರಲ್ಲಿ ಬಂದಂತಹ ಕನ್ನಡದ " ಮಳೆ ನಿಲ್ಲುವವರೆಗೆ.. " ಹಾಗೂ 2021 ರ ಬೆಂಗಾಲಿ ಚಿತ್ರ "Anusandhan.." ಕೂಡ ಅದೇ ಜರ್ಮನ್ ನಾವೆಲ್ A Dangerous Game ನಿಂದ ಸ್ಪೂರ್ತಿ ಪಡೆದು ಮಾಡಿದ ಚಿತ್ರಗಳಾಗಿವೆ. 

Rumi Jaffery ನಿರ್ದೇಶನದ ಈ ಮೂವಿಯಲ್ಲಿ Amitabh Bachchan, Emraan Hashmi, Annu Kapoor, Rhea Chakraborty, Dhritiman Chatterjee ಮುಂತಾದವರ ಅಭಿನಯವಿದೆ. 

ಅಮಿತಾಭ್ ಅಭಿನಯ ನಿಜಕ್ಕೂ ಇಷ್ಟವಾಗುತ್ತದೆ.ಹೇಳಿ ಕೇಳಿ ಇದರ ಕಥೆ ಹಾಗೂ ಇದರೊಳಗಿನ ಆಟ ಇರುವುದೇ ಸಂಪೂರ್ಣವಾಗಿ ಸಂಭಾಷಣೆಗಳಲ್ಲಿ.ಸಂಭಾಷಣೆಗಳೇ  ನಿಧಾನಕ್ಕೆ ಕಿಕ್ಕೇರಿಸುತ್ತಾ, ಕಥೆಯನ್ನು ಇಷ್ಟಿಷ್ಟೇ ಹೇಳುತ್ತಾ ಹೋಗುವುದು ಇಲ್ಲಿ.ಎಲ್ಲರಿಗೂ ಇದು ಇಷ್ಟವಾಗಬೇಕಿಲ್ಲ, ಕೆಲವರಿಗೆ ತುಂಬಾ ಸ್ಲೋ, ಬೋರಿಂಗ್ ಬರೀ ಮಾತು,ಸಿಕ್ಕಾಪಟ್ಟೆ ಮೌನ ಅಂತೆಲ್ಲಾ ಅನ್ನಿಸಬಹುದು.ಆದರೆ ಕೆಲವರಿಗೆ ಇಂತಹದ್ದೇ ಮೂವಿಗಳು ಹೆಚ್ಚು ಇಷ್ಟವಾಗುವುದು.ನನಗೂ ಇಷ್ಟವಾಯಿತು.

#Chehre | Prime 
Hindi Movie 
Mystery Thriller 
Year - 2021

#Movies 
Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..