ಬಂದಿದೆ ಹರುಷದ ದೀಪಾವಳಿ
ಹಬ್ಬಗಳು ಬೇಕು.ಮನೆಯನ್ನು ಮಾತ್ರವಲ್ಲ ಮನಸ್ಸನ್ನು ಕೂಡ ಹಬ್ಬವಾಗಿಸಲು ಹಬ್ಬಗಳು ಒಂದಿಷ್ಟು ಅಲ್ಲ,ಬಹಳಷ್ಟು ಬೇಕು.ನಮ್ಮೆಲ್ಲರ ಪುಣ್ಯ ನೋಡಿ ನಮಗೆ ಆಚರಿಸಲು ಅದೆಷ್ಟೋ ವಿಧ ವಿಧದ ಹಬ್ಬಗಳು.ಅದರಲ್ಲೂ ಒಂದೊಂದು ಹಬ್ಬವೂ ಒಂದೊಂದು ರೀತಿ,ಸಡಗರಕ್ಕೆ ಉಂಟು ನಮ್ಮಲ್ಲಿ ನೂರಾರು ದಾರಿ.
ಖುಷಿ ಖಷಿಯಾಗಿ ಇರುವವರಿಗೆ ದಿನವೂ ಹಬ್ಬವೇ ಅನ್ನುವುದು ಕೂಡ ಸರಿಯೇ ಆದರೂ ಎಲ್ಲರೊಡನೆ ನಮ್ಮವರೊಡನೆ ಆ ಖುಷಿಯನ್ನು ಹಂಚಿಕೊಳ್ಳಲು ಆಚರಣೆಯ ಹಬ್ಬಗಳು ಕೂಡ ನಮಗೆ ಒಂದರ ನಂತರ ಒಂದು ಬೇಕು.ಯಾವುದನ್ನೇ ಆಗಲಿ ಒಟ್ಟಿಗೆ ಎಲ್ಲರೂ ಸೇರಿಕೊಂಡು ಆಚರಿಸಿಕೊಂಡಾಗಲೇ ಅದರ ಸಂಭ್ರಮ ದುಪ್ಪಟ್ಟು ಆಗುವುದು.ಈ ಬಾರಿಯ ಆ ಸಂಭ್ರಮದ ಹಬ್ಬವೇ ಅದು ದೀಪಾವಳಿ.
ದೀಪಾವಳಿ ಇನ್ನಿತರ ಹಬ್ಬಗಳಂತೆ ಅಲ್ಲ.ಇದು ತುಂಬಾನೇ ವೈವಿಧ್ಯಮಯವಾದ ಹಬ್ಬ.ಮೂರ್ನಾಲ್ಕು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಎಲ್ಲವೂ ಇದೆ.
ಇಲ್ಲಿ ಸಾವಿರ ನೆರಿಗೆಯ ಕತ್ತಲಿಗೆ ಹಣತೆಗಳು ಬಹಳ ಮುತುವರ್ಜಿಯಿಂದ ಉಡಿಸುವವು ಶುಭ್ರ ಬೆಳಕಿನದ್ದೇ ಸೀರೆ,ಬಚ್ಚಲು ಮನೆಯ ಎಣ್ಣೆ ಸ್ನಾನದ ಹಬೆಗೆ ಮೈ ಅದೆಷ್ಟೋ ಸಡಿಲ,ಮನಸ್ಸು ಕೂಡ ಎಂದಿಗಿಂತ ಬಹಳಷ್ಟು ಪ್ರಪ್ರುಲ್ಲ,ಹಂಡೆಯ ಕೊರಳಿಗೆ ಹಸಿರಿನೆಲೆಯ ಮಾವಿನ ಮಾಲೆ,ಗೋವಿನ ಕೊರಳಿಗೆ ಕಿತ್ತಳೆ ರಂಗಿನ ಗೊಂಡೆ ಹೂವಿನದ್ದೇ ಮಾಲೆ,ಹಾಕುವ ರಂಗವಲ್ಲಿಯಲ್ಲೂ ಬಣ್ಣ,ಮಾಡುವ ಸಿಹಿ ತಿಂಡಿಯಲ್ಲೂ ಹುಡುಕಿದರೆ ಅದೆಷ್ಟೋ ಬಣ್ಣ,ಗೋವಿಗೂ ಪೂಜೆ,ಲಕ್ಷ್ಮಿಗೂ ಪೂಜೆ,ದೀಪಾವಳಿಯಲ್ಲೂ ಉಂಟು ಆಯುಧಗಳಿಗೂ ಪೂಜೆ,ಸಾಲು ಸಾಲು ಅಂಗಡಿ ಪೂಜೆಯ ನೆಪದಲ್ಲಿ ಮನೆಯಲ್ಲೊಂದು ರಾಶಿ ರಾಶಿ ಲಡ್ಡುಗಳ ಸಿಹಿ ಸಿಹಿ ಜಮಾವಣೆ,ಗೋವುಗಳಿಗೆ ಎಲೆ ಕಡುಬಿನ ಗೋ-ಗ್ರಾಸ,ಈ ಹಬ್ಬಕ್ಕೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಉದ್ದಿನ ದೋಸೆ ತಿಂದೇ ಹೆಚ್ಚಾಗಿ ಅಭ್ಯಾಸ,ಪಾತಾಳದಿಂದ ಮಹಾರಾಜನೇ ಖುದ್ದು ಸಡಗರದಿ ಬರುತ್ತಾನೆ,ಬಲೀಂದ್ರನಿಗೂ ಒಂದು ದಿನ ನಮ್ಮಲ್ಲಿ ಉಂಟು.ಹೊಸ ಬಟ್ಟೆ ಬರೆಯಲ್ಲಿ ಎಲ್ಲರೂ ಖುಷಿ,ಅರಳುವ ಸುರ್ಸುರು ಬತ್ತಿಯೇ ಮಕ್ಕಳ ನಕ್ಷತ್ರದಂತಹ ಖುಷಿ.ಪಟಾಕಿ ಬಾಂಬು ಹುಡುಗರ ಆಸಕ್ತಿ,ಗೂಡು ದೀಪ ತಯಾರಿಕೆ ಯುವಕರ ನೆಚ್ಚಿನ ಹವ್ಯಾಸ,ಹಬ್ಬದೂಟದಲ್ಲಿ ಹೆಣ್ಣು ಮಕ್ಕಳು ಹಾಗೂ ತಾಯಂದಿರು ತೋರಿಸುವರು ಎಂದಿಗಿಂತಲೂ ಹೆಚ್ಚು ತಮ್ಮ ವಿಶೇಷ ರುಚಿ ಹಾಗೂ ಅಭಿರುಚಿ...
ಹೀಗೆ ಈ ಒಂದು ಹಬ್ಬದಲ್ಲಿ ಏನಿದೆ,ಏನಿಲ್ಲ ಹೇಳಿ.ಇಲ್ಲಿ ಎಲ್ಲವೂ ಇದೆ.ಭಗವಂತನೂ ಇದ್ದಾನೆ,ಆಧ್ಯಾತ್ಮವೂ ಇದೆ,ಉಲ್ಲಾಸ ಉತ್ಸಾಹ ಎಲ್ಲವೂ ಇದೆ.ದೀಪಾವಳಿ ಬರುವುದೆಂದರೆ ಅದೊಂದು ಸಡಗರದ ಹಬ್ಬಗಳ ಜಾತ್ರೆ.ಮುಗಿದ ನಂತರವೂ ತುಂಬಾ ಬೇಕೆನಿಸುವ ಹಬ್ಬ ಎಂದರೆ ಅದು ದೀಪಾವಳಿಯೇ.ಮಕ್ಕಳಿಂದ ಹಿಡಿದು ಹಿರಿಯರಿಂದ ಹಿಡಿದು ಪ್ರಕೃತಿ ಹಾಗೂ ಗೋವುಗಳಿಗೂ ಬಹಳ ಪ್ರಿಯವಾಗುವ ಹಬ್ಬವೆಂದರೆ ಅದು ಎಂದೆಂದಿಗೂ ನಮ್ಮ ದೀಪಾವಳಿ ಹಬ್ಬವೇ ಆಗಿದೆ.
ಹಬ್ಬಗಳನ್ನು ಎಲ್ಲರೂ ಏಕೆ ಆಚರಿಸಬೇಕೆಂದರೆ ಹಬ್ಬಗಳು ನಮ್ಮ ಜಡವಾದ ಬಾಳಿಗೆ ಒಂದಿಷ್ಟು ಹರುಷವನ್ನು ತುಂಬಿ ಅದನ್ನು ಹಾಗೇ ಸಡಿಲಗೊಳಿಸುವ ವಿಶೇಷ ಸಂಗತಿಗಳು ಅವು.ಈ ಬೆಳಕಿನ ಹಬ್ಬ ದೀಪಾವಳಿ,ನಿಮ್ಮ ಬಾಳಿಗೂ ಬಹಳಷ್ಟು ಸಂಭ್ರಮ ಸಡಗರವನ್ನೇ ತರಲಿ..
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ab pacchu
Comments
Post a Comment