ಒಂದು ಗೆಣಸಿನ ಸಣ್ಣ ಕಥೆ
ಸಂಜೆ ಮನೆಗೆ ಮರಳುವಾಗ ಅಂಗಡಿಯಿಂದ ಒಂದು ಕೆಜಿ ಸಿಹಿಗೆಣಸು ಖರೀದಿಸಿದೆ.ನಡೆಯುತ್ತಾ ಮನೆಗೆ ಮರಳುವ ದಾರಿಯಲ್ಲಿ ಒಬ್ಬರು ಪರಿಚಿತರು ಸಿಕ್ಕರು.ಅಧಿಕ ಪ್ರಸಂಗ ಮಾತಾಡಲು ಹೇಳಿ ಮಾಡಿಸಿದ ಜನ ಅವರು.
ಹಾಗಾಗಿ ಇಬ್ಬರೂ ಒಟ್ಟೊಟ್ಟಿಗೆ ನಡೆಯುತ್ತಾ ಜಗತ್ತಿನ ಸಮಸ್ಯೆಗಳ ಬಗ್ಗೆ ಡೀಪಾಗಿ ಚಿಂತನ ಮಂಥನ ಮಾಡುತ್ತಾ,ಬಿಟ್ ಕಾಯಿನ್ ಕೆಜಿಗೆ ಎಷ್ಟು ಬರುತ್ತದೆ ಎಂದು ಲೆಕ್ಕ ಹಾಕುತ್ತಾ,ನಮ್ಮ ಸಮಾಜದಲ್ಲಿ ಆ ಜನ ಒಂದು ಸರಿ ಇಲ್ಲ ಅವರೊಂದು ಮೊದಲು ಅವರ ಪೆದಂಬು(ದುಷ್ಟ ಬುದ್ಧಿ) ಬಿಡಬೇಕು ಎಂದು ಟೀಕಾ ಪ್ರಹಾರ ಮಾಡುತ್ತಾ,ಇವರು ಹೀಗೆ ಮಾಡಬೇಕಿತ್ತು,ಅವರು ಹಾಗೆ ಮಾಡಬೇಕಿತ್ತು ಎಂದು ಪ್ರತಿಯೊಂದಕ್ಕೂ ನಮ್ಮ ಜ್ಞಾನಕ್ಕೂ ಕಲ್ಪನೆಗೂ ಮೀರಿದ ಪರಿಹಾರ ಸೂಚಿಸುತ್ತಾ,ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಸೋಲಿನ ಬಗ್ಗೆಯೂ ಆಳವಾದ ವಿಶ್ಲೇಷಣೆ ಮಾಡುತ್ತಾ,ಕೊನೆಯಲ್ಲಿ ಇಬ್ಬರೂ ಒಕ್ಕೊರಲಿನಿಂದ 'ನಾವು ದುಡಿದರೆ ನಾವು ತಿನ್ನಬಹುದು,ನಮ್ಮ ಮನೆಗೆ ಏನು ಈ ರೋಹಿತ್,ವಿರಾಟ್,ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅಕ್ಕಿ ತಂದು ಹಾಕುತ್ತಾರಾ..' ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತಾ ಕೊನೆಗೂ ನಾನು ನನ್ನ ಮನೆಗೆ ಆ ಜನ ಅವರ ಮನೆಗೆ ತಲುಪಿ ಬಿಟ್ಟೆವು.
ಇನ್ನೇನು ಮನೆಯ ಅಂಗಳಕ್ಕೆ ಬಲಗಾಲು ಎತ್ತಿ ಇಡಬೇಕು ಅನ್ನುವಾಗಲೇ ನಾನು ನನ್ನ ಚೀಲದಲ್ಲಿ ಇದ್ದ ಒಂದು ಸಿಹಿ ಗೆಣಸು ಕಣ್ಮರೆಯಾಗಿದ್ದನ್ನು ಗಮನಿಸಿದ್ದು.ಒಂದು ಕೆಜಿಗೆ ಅಂಗಡಿಯವರು 3 ಗೆಣಸು ಕೊಟ್ಟಿದ್ದರು.ನಾನೇ ಗೆಣಸಿನ ರಾಶಿಯಿಂದ ಹುಡುಕಿ ಹುಡುಕಿ ನನಗೆ ಬೇಕಾದ ಆ 3 ಗೆಣಸನ್ನು ತೂಕದ ತಕ್ಕಡಿಗೆ ಹಾಕಿದ್ದೆ.ಆ ಒಂದು ಕೆಜಿಯಲ್ಲಿ ಒಂದು ದೊಡ್ಡ ಗೆಣಸು ಅರ್ಧ ಕೆಜಿಯಷ್ಟು ತೂಕ ಇದ್ದರೆ,ಬಾಕಿ ಎರಡು ಸೇರಿ ಅರ್ಧ ಕೆಜಿ ಇತ್ತು.ಈಗ ಆ ದೊಡ್ಡ ಗೆಣಸೇ ಮಾತಾಡುತ್ತಾ ಬರುವಾಗ ದಾರಿಯಲ್ಲಿ ಎಲ್ಲೋ ಬಿದ್ದು ಹೋಗಿತ್ತು.
ಏನು ಮಾಡುವುದೆಂದು ಗೊತ್ತಾಗಲಿಲ್ಲ.ಮನೆಯಲ್ಲಿ ಹೇಳಿದರೆ ಉಗಿದು ಉಪ್ಪಿನಕಾಯಿ ಹಾಕುವ ಜೊತೆಗೆ ಮಂತ್ರ ಸಹಿತ ಮಂಗಳಾರತಿ ಕೂಡ ಮಾಡುತ್ತಾರೆ." ಸ್ವಲ್ಪವೂ ಜಾಗ್ರತೆ ಇಲ್ಲಾ ಮಾರಾಯ ನಿನಗೆ ಮೊನ್ನೆ ಬೀಟ್ರೂಟ್ ಬೀಳಿಸಿದೆ,ಅದಕ್ಕಿಂತ ಹಿಂದೆ ಸುವರ್ಣ ಗೆಡ್ಡೆ ಬೀಳಿಸಿದೆ,ತೊಗರಿ ಬೇಳೆ,ಸಕ್ಕರೆಗಳ ತೊಟ್ಟೆ ಒಟ್ಟೆಯಾಗಿ ದಾರಿ ಉದ್ದಕ್ಕೂ ಚೆಲ್ಲುತ್ತಾ ಬರುವಾಗ ಕೂಡ ಒಂದು ಚೂರು ಅಕಲ್ ಇರುವುದಿಲ್ಲ ನಿನಗೆ,ಯಾವಾಗ ನೋಡಿದರೂ ಕೈಯಲ್ಲಿರುವ ತೊಟ್ಟೆಯನ್ನು ಈಗಲೂ ಮಕ್ಕಳಂತೆ ಗಾಳಿಯಲ್ಲಿ ಬೀಸಿಕೊಂಡು ಎಲ್ಲೋ ನೋಡಿಕೊಂಡು ನಡು ನಡುವೆ ಸಿಕ್ಕವರೊಂದಿಗೆ ಗಂಟೆಗಟ್ಟಲೆ ಅಧಿಕ ಪ್ರಸಂಗ ಮಾತಾಡಿಕೊಂಡು ಊರಿಡೀ ಏನಾದರೊಂದು ಕಾಣಿಕೆ ಹಾಕುತ್ತಲೇ ಮನೆಗೆ ಬರುತ್ತೀಯಾ.."ಎಂದು ನಾನು ಬೀಳಿಸಿಕೊಂಡ ಪದಾರ್ಥಗಳ ಪಟ್ಟಿಯನ್ನೇ ಕೊಡುತ್ತಾ ಹೋಗುತ್ತಾರೆ.
ಅದು ನಿಜ ಕೂಡ ಹೌದು.ಚಿಕ್ಕಂದಿನಿಂದ ಹಿಡಿದು ಇಲ್ಲಿಯವರೆಗೂ ನಾನು ಹಲವಾರು ಬಾರಿ ನಡೆದು ಬರುವ ದಾರಿಯಲ್ಲಿ ಬಹಳಷ್ಟನ್ನು ಬೀಳಿಸಿಕೊಂಡೇ ಮನೆಗೆ ತಲುಪಿದ್ದೇನೆ.ಇದು 'ಅಶಿಸ್ತಿನ ವರ್ತನೆ' ,'ಬೇಜವಾಬ್ದಾರಿಯ ಬದುಕು' ಈ ಎರಡೂ ಕೆಟಗರಿಯಲ್ಲಿ ಒಟ್ಟೊಟ್ಟಿಗೆ ಅಕಾಡೆಮಿ ಆವಾರ್ಡ್ ಗೆಲ್ಲಬಹುದಾದ ಒಂದು ಅಧ್ಭುತ ವ್ಯಕ್ತಿತ್ವ ಹಾಗೂ ಫರ್ಪಾರ್ಮೆನ್ಸ್.
ನನ್ನ ಒಳಗಿನ ಮನಸ್ಸು ಕೂಡ ತೀವ್ರವಾಗಿ ಚಾಟಿಯೇಟು ಬೀಸಿ ನನ್ನನ್ನು ಬಡಿದೆಬ್ಬಿಸಿತು.ಈ ದುನಿಯಾದಲ್ಲಿ ಒಂದೊಂದು ರೂಪಾಯಿಗೂ ಬೆಲೆ ಇದೆ.ಯಾವುದೂ ಇಲ್ಲಿ ಧರ್ಮಕ್ಕೆ ಬರುವುದಿಲ್ಲ.ಇಲ್ಲಿ ಒಂದು ಗೆಣಸಿಗೂ ಬೆಲೆ ಇದೆ,ಅರ್ಧ ತುಂಡು ಗೆಣಸಿಗೂ ಬಹಳಷ್ಟು ಬೆಲೆ ಇದೆ.ಒಂದು ಗೆಣಸಿನಲ್ಲಿಯೇ ಎಷ್ಟೋ ಪೋಡಿ(ಬಜ್ಜಿ)ಮಾಡಿ ತಿನ್ನಬಹುದು.ಒಂದು ಪ್ಲೇಟ್ ಪೋಡಿಗೆ ಹೋಟೆಲ್ ನಲ್ಲಿ ಈಗ 15 ರೂಪಾಯಿವರೆಗೆ ಬೆಲೆ ಇದೆ.ಈಗ ಕಳೆದುಕೊಂಡಿರುವುದು ದೊಡ್ಡ ಗೆಣಸು ಬೇರೆ.ಪ್ಲೇಟ್ ಗೆ ಮಿನಿಮಮ್ 5 ಪೋಡಿ ಅಂದರೂ ನಾನು ಕಳೆದುಕೊಂಡ ಗೆಣಸನ್ನು ಚಾಕಚಕ್ಯತೆಯಿಂದ ಬಹಳ ತೆಳುವಾಗಿ ಸ್ಲೈಸ್ ಮಾಡಿ ಕತ್ತರಿಸಿ ಬಿಟ್ಟರೆ ಕನಿಷ್ಟ 30 ಪೋಡಿಗಳನ್ನಾದರೂ ಮಾಡಿ ಎಣ್ಣೆಯಲ್ಲಿ ಬಿಡಬಹುದು.ಅಂದರೆ ಬರೋಬ್ಬರಿ 6 ಪ್ಲೇಟ್ ಪೋಡಿ.ಒಟ್ಟಿನಲ್ಲಿ ನಾನೀಗ ಸಮಾಜದಲ್ಲಿ 90 ರೂಪಾಯಿಯಷ್ಟು ಬೆಲೆಬಾಳುವ ಗೆಣಸನ್ನೇ ಎಲ್ಲೋ ಒಂದು ಕಡೆ ಅತೀ ಬೇಜವಾಬ್ದಾರಿಯಿಂದ ಬೀಳಿಸಿ ಹಾಕಿ ಬಿಟ್ಟಿದ್ದೆ.
ಮನಸ್ಸು "ನಿಂಗಿದು ಬೇಕಿತ್ತಾ ಮಗನೇ,ವಾಪಸ್ಸು ಹೊಂಟೋಗು ಶಿವನೇ.. ಬ್ಯಾಗು ಹಿಡಿ, ಸೀದಾ ನಡಿ,ದಾರಿ ನೋಡಿ,ಗೆಣಸು ಹಿಡಿ" ಎಂದು ಹೇಳಿತು.ಮನಸ್ಸಿನ ಮಾತಿಗೆ ಜೈ ಹೇಳಿ ನಾನು ಕೂಡ ಮನೆಗೆ ಹೋಗದೆ ಕೈಯಲ್ಲಿದ್ದ ಚೀಲ ಹಿಡಿದುಕೊಂಡೇ "ಪಡಕೊಂಡ ಗೆಣಸನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ,ಮಾಡೋದೆಲ್ಲ ಮಾಡಿ ಅಳಬೇಡ ಪರದೇಸಿ,ಸರಿಯಾಗಿ ಹುಡುಕು ನೈಟಾಗೋ ಟೈಮಾಗಿದೆ.." ಎಂದು ಯೋಗ್ರಾಜ್ ಭಟ್ಟರ ಸಾಲುಗಳನ್ನು ನನಗೆ ಬೇಕಾದಂತೆ ಗುನುಗಿಕೊಂಡು ಮತ್ತೆ ಬಂದ ದಾರಿಯಲ್ಲಿ ಕಳಕೊಂಡ ಗೆಣಸಿಗಾಗಿ ಹುಡುಕುತ್ತಾ ಅಲೆಯುತ್ತಾ ಹಿಂದಕ್ಕೆ ನಡೆಯತೊಡಗಿದೆ.
ಅದು ಬೇರೆ ಗುಡ್ಡದ ಮಣ್ಣಿನ ದಾರಿ.ಪೊದೆ ಬಲ್ಲೆಗಳಿಂದ ಕೂಡಿದ ನಮ್ಮ ವಿಲೇಜು ರಸ್ತೆ.ಎಷ್ಟು ದೂರಕ್ಕೆ ಹುಡುಕಿಕೊಂಡು ಹೋದರೂ ನನಗೆ ನನ್ನ ಆ ಗೆಣಸು ಸಿಗಲಿಲ್ಲ.ಕೊನೆಗೆ ನನ್ನ ಸಿಕ್ಸ್ತ್ ಸೆನ್ಸ್ ನನಗೆ ಹೇಳಿತು "ನೀನು ಎಷ್ಟೇ ಹುಡುಕಾಡಿದರೂ ನಿನಗೆ ಮತ್ತೆ ಆ ಒಂದು ಗೆಣಸು ಇಂದೇ ಸಿಗುವ ಸಂಭವ ಬಹಳಷ್ಟು ಕಡಿಮೆ ಇದೆ.ಈಗ ಹೇಗೋ ಮಳೆ ಇದೆ.ಒಂದಿಷ್ಟು ಕಾಲ ಹೋದಾಗ ಖಂಡಿತವಾಗಿಯೂ ಆ ಗೆಣಸು ಇಲ್ಲಿ ಎಲ್ಲೇ ಅಡಗಿಕೊಂಡಿದ್ದರೂ,ಯಾವ ಮಣ್ಣಿನಡಿಗೆ ಬಿದಿದ್ದರೂ,ನೀರಿನ ಪಸೆಗೆ ಆ ಗೆಡ್ಡೆ ಚಿಗುರಲೇ ಬೇಕು,ಚಿಗುರಿ ಹಸಿರ ಬಳ್ಳಿಯಾಗಿ ಹಬ್ಬಿ ನಿನ್ನ ಕಣ್ಣಿಗೂ ಒಂದಲ್ಲ ಒಂದು ದಿನ ಅದು ಬೀಳಲೇಬೇಕು,ಇದು ವಿಧಿ ನಿಶ್ಚಿತ.ನಿನ್ನ ಸಿಹಿಗೆಣಸು ಎಲ್ಲಿಯೂ ಹೋಗುವುದಿಲ್ಲ.. "ಎಂಬ ಸ್ಪಷ್ಟ ಸಂದೇಶವನ್ನು ಸಿಕ್ಸ್ತ್ ಸೆನ್ಸ್ ನನಗೆ ರವಾನಿಸಿತು.
ಸ್ವಲ್ಪ ಹಿತವೆನಿಸಿತು.ಆ ನಂತರ ನಾನು ಜಾಸ್ತಿ ಯೋಚನೆ ಮಾಡದೇ,ಮುಂದಕ್ಕೆ ಆ ಸಿಹಿಗೆಣಸನ್ನು ಹುಡುಕುವ ಸಾಹಸವನ್ನೇ ಮಾಡದೆ ನೆಮ್ಮದಿಯಿಂದ ಮತ್ತೆ ಉಲ್ಲಾಸ ಉತ್ಸಾಹದಿಂದ ಹಾಡು ಗುನುಗುತ್ತಾ ಮನೆಗೆ ಮರಳಿದೆ." ಕಳಕೊಂಡ ಗೆಣಸನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ,ಮಾಡೋದೆಲ್ಲ ಮಾಡಿ ಅಳಬೇಡ ಪರದೇಸಿ,ಗಿಡ ಆದ್ಮೇಲೆ ಹುಡುಕು ಈಗ ನೈಟಾಗಿದೆ..."
#ವಿಷಯ_ಎಂತ_ಗೊತ್ತುಂಟಾ
ab pacchu
Comments
Post a Comment