ಗರುಡ ಗಮನ ವೃಷಭ ವಾಹನ




(ವಿ.ಸೂ - ಓದಬಹುದು,ಕಥೆ ಹೇಳಿ ಮೂವಿಯ ಅಂದಗೆಡಿಸುವ,ನಿಮ್ಮನ್ನು ಆ ಒಂದು ಸುಖದಿಂದ ಬಹಳಷ್ಟು ವಂಚಿಸುವ ಒಂಚೂರು ಮನಸ್ಸು ನನಗೂ ಕೂಡ ಇಲ್ಲ,ಹಾಗಾಗಿ ಇಲ್ಲಿ ಅಂತಹ ಯಾವುದೇ *Spoiler Alert ಇಲ್ಲ*,ನೆಮ್ಮದಿಯಾಗಿ ಓದಿ) 



ಅಂಡರ್ ಆರ್ಮ್ ಕ್ರಿಕೆಟ್,ದಪ್ಪದ ಬ್ಯಾಟು,ತಾಸೆಯ ಪೆಟ್ಟು,ಮಾರ್ನೆಮಿಯ ಹುಲಿ,ಅಬ್ಬರಿಸುವ ವೇಷವೇ ಹಾಕದ ಪಿಲಿ,ಪದೇ ಪದೇ ಮೇಲಕ್ಕೆತ್ತಿ ಗಟ್ಟಿಯಾಗಿ ಕಟ್ಟಿಕೊಳ್ಳುವ ಆ ಮುಂಡು,ಒಂದರ ನಂತರ ಒಂದೊಂದಾಗಿ ಬದಲಾಗುವ ಚಪ್ಪಲಿಗಳು,ರಕ್ತಸಿಕ್ತ ಆ ಒಂದು ಜೋಡಿ ಬಿಳಿ ಬಣ್ಣದ ಶೂ,ಗೂಡಂಗಡಿಯ ಚಿಂಗಂ,ಬೇಕಾದಷ್ಟು ಸಲ 'ಎಂತ ಸಾವ','ನೋಡುವುದು ಎಂತ ಹಾಕ ಹಾಕ..' ಎಂಬ ಮಂಗಳೂರಿನದ್ದೇ ಕನ್ನಡ,ಹದವಾಗಿ ಅಲ್ಲಲ್ಲಿ ಬೆರೆತುಕೊಂಡಿರುವ ನಮ್ಮದೇ ತುಳು,ಬಹಳಷ್ಟು ಸಲ ಸಹಜವಾಗಿ ಕೇಳಿ ಬರುವ ಆ 'ಪೋ ನಿನ್ನ ಅಮ್ಮೆರ್ಡ ಪನ್ ***', ಒಂದು ಕಡೆಯಲ್ಲಿ ಮಂಜುನಾಥನ ಕದ್ರಿ,ಮತ್ತೊಂದು ಕಡೆಯಲ್ಲಿ ಮಂಗಳ್ದೇವಿ...ಇವುಗಳ ನಡುವೆ ಅವನೊಬ್ಬ ತಣ್ಣನೆಯ ಹರಿ,ಇವನೊಬ್ಬ ಅತೀ ರುದ್ರನೆನಿಸುವ ಶಿವ,ಇದುವೇ ಗರುಡ ಗಮನ ವೃಷಭ ವಾಹನ! 



ಕಥೆ ಹೇಳದೆಯೇ ಅದರ ಬಗ್ಗೆ ಬಹಳಷ್ಟು ಹೇಳಬೇಕು,ಹೇಳಲೇಬೇಕು ಎಂದು ಅನ್ನಿಸುವಂತೆ ಮಾಡಿ ಬಿಟ್ಟರೆ ಅಲ್ಲಿಗೆ ಆ ಮೂವಿ ನನ್ನ ಪ್ರಕಾರವಂತು ಗೆದ್ದಂತೆಯೇ ಸರಿ.ಹೌದು ಇದು ಅಂತಹದ್ದೇ  ಮೂವಿ.


ಇದು ಸ್ವಲ್ಪ ಅಲ್ಲ,ಬಹಳಷ್ಟು ಮಂಗಳೂರು ಪ್ಲೇವರಿನದ್ದೇ  ಮೂವಿ.ಹಾಗಂತ ಇದು ಬರೀ ಮಂಗಳೂರಿಗೆ  ಸೀಮಿತವಲ್ಲ.ಕಥೆಯೊಂದೇ ನಿಜವಾದ ಹೀರೋ ಎಂದೆನಿಸುವ ಈ ನಾಯಕಿಯೇ ಇಲ್ಲದ ಮೂವಿ ಹಾಗೂ ಇದರದ್ದೊಂದು ವಿಭಿನ್ನವಾದ ಸ್ಟೋರಿ ಲೈನ್,ಜೊತೆಗೆ ಗ್ಯಾಂಗ್ಸ್ಟರ್ ಮೂವಿಗಳನ್ನು ಅತಿಯಾಗಿ ಇಷ್ಟ ಪಡುವ ಜಗತ್ತಿನ ಯಾವುದೇ ಮೂಲೆಯ ಪ್ರೇಕ್ಷಕನಿಗೂ ಈ ಮೂವಿ ಬಹಳಷ್ಟು ರಸದೌತಣವನ್ನು ಪುಷ್ಕಳವಾಗಿಯೇ ಉಣಬಡಿಸುತ್ತದೆ. 


ಇದರಲ್ಲಿ ಜಾಸ್ತಿ ಏನನ್ನೂ ಹೇಳುವುದಿಲ್ಲ,ಹಾಗಂತ ಕಥೆಯಲ್ಲಿ ಯಾವುದು ಸಹ  ಕಡಿಮೆ ಆಗಿದೆ ಎಂದು ಕೂಡ ಅನಿಸುವುದೂ  ಇಲ್ಲ.ಕೊನೆಯಲ್ಲಿ ಅನಿಸುವುದು ಇಷ್ಟೇ.' ಇದು ಹೀಗೆ ಇದ್ದರೇನೆ ಚಂದ'.ಆ ರೀತಿಯ ಭಾವ ಮೂಡಿ ಬಿಟ್ಟರೆ,ಅಲ್ಲಿಗೆ ಕಥೆ ಗೆದ್ದಂತೆಯೇ ಜೊತೆಗೆ ನಿರ್ದೇಶಕನು ಕೂಡ.ಇಲ್ಲಿ ಕಥೆ ಹಾಗೂ ನಿರ್ದೇಶಕರು ಇಬ್ಬರೂ ಒಟ್ಟೊಟ್ಟಿಗೆ ಗೆದ್ದಿದ್ದಾರೆ. 



" Demon in me " ಎಂದು ಆರಂಭದಲ್ಲಿ ನಿಧಾನಕ್ಕೆ ಬಹಳ ಮಂದಗತಿಯಲ್ಲಿ ಪ್ಲೇ ಆಗುವ,ಜೊತೆಗೆಯೇ ತುಂಬಾನೇ ಹುಬ್ಬೇರಿಸುವಂತೆ ಮಾಡುವ ಈ ಇಂಗ್ಲಿಷ್ ಹಾಡಿನೊಂದಿಗೆ  ಸಿನಿಮಾದ ಪರದೆ ಸರಿದಂತೆ ಇದರದ್ದೊಂದು ಕಥೆಯು ಕೂಡ ತೆರೆದುಕೊಳ್ಳುತ್ತಾ ಹೋಗುತ್ತದೆ ಇಲ್ಲಿ.ಕಥೆ ಮುಗಿಯುವುದು ಕೂಡ ಈ ಹಾಡಿನ ಸಾಲಿಗೆ ಬಹಳಷ್ಟು ಪುಷ್ಟಿ ನೀಡುವ ಮೂಲಕವೇ!



ರಾಜ್ ಬಿ ಶೆಟ್ಟಿ ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. ಅವರ ಪ್ರತಿಭೆಯ ಪರಿಧಿಯನ್ನು ಈ ಮೂವಿ ಮತ್ತಷ್ಟು ಹೆಚ್ಚಿಸಿದೆ.ಅವರ ನಿರ್ದೇಶನ ಹಾಗೂ ಆ ನಟನೆ ಎರಡನ್ನೂ ತೆರೆಯ ಮೇಲೆ ನೋಡಿಯೇ ನೀವು ಕೂಡ ಕಣ್ಣು ತುಂಬಿಕೊಳ್ಳಿ.ಬಣ್ಣ ಹಚ್ಚದೆಯೇ ಹುಲಿಯಂತೆ ಕುಣಿಯುವ ರಾಜ್ ಶೆಟ್ರು ಈ ಸಿನಿಮಾದ ನಿಜವಾದ ಪಿಲಿ.ಥಿಯೇಟರ್ ನಲ್ಲಿ ಬಹಳಷ್ಟು ಜೋರಾದ ಶಿಳ್ಳೆಗಳಿಗೆ ಅವರು ಅರ್ಹರು.ರಿಷಬ್ ಶೆಟ್ಟಿಯವರ ಅಭಿನಯ ಕೂಡ ಇಲ್ಲಿ ಯಾವುದೇ ರೀತಿಯಿಂದಲೂ ಕಡಿಮೆ ಇಲ್ಲ.ಅವರ ಪಾತ್ರ ಕಥೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುತ್ತದೆ. 


ವಾಸುಕಿ ವೈಭವ್ ಹಾಡಿರುವ 'ಎಂದೋ ಬರೆದ ಕವಿತೆ ಸಾಲು,ಬೊಗಸೆ ಹಿಡಿದ ಮಳೆಯ ನೀರು "ಹಾಡು  ಇಷ್ಟವಾಗುತ್ತದೆ. ನಡುವಲ್ಲಿ ಕೇಳಿ ಬರುವ ದೇವರನಾಮ " ಚಂದ್ರ ಚೂಡ ಶಿವ ಶಂಕರ ಪಾರ್ವತಿ " ಆ ಒಂದು ದೃಶ್ಯಕ್ಕೆ ಬೇರೆಯೇ ಕಳೆ ತರುತ್ತದೆ. ಹುಲಿಯೊಂದು ನೆತ್ತರು ಹೀರುವಾಗ ನಡುವಲ್ಲಿ ಮೆಲ್ಲಗೆ ಕೇಳಿ ಬರುವ ಪ್ರಸಿದ್ಧವಾದ ' ಮಾದೇವ..ಮಾದೇವ.. 'ಹಾಡು ಕೇಳಿಸಿಕೊಳ್ಳುವುದನ್ನು ನೀವು ಕೂಡ ತಪ್ಪಿಸಿಕೊಳ್ಳಬೇಡಿ!


ಕಾಲು ನಿಂತ ನೆಲದಲ್ಲಿ ಇರದಿದ್ದರೆ ತಮ್ಮ ಗುಂಡಿಯ ಮಣ್ಣು ತಾವೇ ಅಗೆಯುವುದು,ಬಾವಿಯ ಆಳದಿಂದ ಮೇಲಕ್ಕೆ ಬಂದ  ಮೇಲೆಯೂ ಮತ್ತದೇ ಬಾವಿಗೆ ತನ್ನನ್ನೇ ನೂಕಿಕೊಳ್ಳಲು ಇನ್ನಿಲ್ಲದಂತೆ ಅವಸರಿಸುವುದು,ಏನೂ ಇಲ್ಲದಾಗ ಬಹಳಷ್ಟು ಹತ್ತಿರ,ಬಹಳಷ್ಟು ಇದ್ದಾಗ ಮತ್ತೆಂದಿಗೂ ಹತ್ತಿರವಾಗದಷ್ಟು ದೂರ,ಹೀಗೆ ಏನೇನೋ ಹೇಳಿ,ಒಂದಿಷ್ಟನ್ನು ತನ್ನೊಳಗೆಯೇ ಉಳಿಸಿಕೊಳ್ಳುವ ಬಚ್ಚಿಟ್ಟುಕೊಳ್ಳುವ ಈ 'ಜಿಜಿವಿವಿ' ಯನ್ನು ನೀವೂ ನೋಡಿ,ನಿಮಗೂ ಬಹಳಷ್ಟು ಹೊಳಹುಗಳು ಹೊಳೆಯಬಹುದು..

ನನಗೆ ಇಷ್ಟವಾಯಿತು. 


#ಗರುಡ_ಗಮನ_ವೃಷಭ_ವಾಹನ 


Movies 

Ab Pacchu

Moodubidire 

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..