ಹಸಿರು ಬಾಂಬು..




ಹಿಂದಿನಿಂದಲೂ ಬಹಳ ಪಾಪದ ಕೆಟಗರಿಯಲ್ಲಿ ಬರುವ ಪಟಾಕಿಗಳಾದ ಈ ಸುರ್ಸುರು ಕಡ್ಡಿ,ಮುಂಚಿ ಪಟಾಕಿ,ದುರ್ಸು ಪಟಾಕಿ,ನೆಲ ಚಕ್ರಗಳನ್ನು ಎಂದಿನಂತೆ ಒಂದಿಷ್ಟು ಖರೀದಿಸಿದ ನಂತರ ಕೊನೆಯಲ್ಲಿ ಲಕ್ಷಣಕ್ಕೆ ಇರಲಿ ಅಂತ ಒಂದು ಬಾಂಬು ಖರೀದಿಸುವ ಮನಸ್ಸಾಯಿತು ನನಗೆ.


ಪಟಾಕಿ ಅಂಗಡಿಯವನಿಗೆ ಕೇಳಿಯೇ ಬಿಟ್ಟೆ...ಅದು..ಒಂದು ಹಸಿರು ಬಾಂಬು ಕೊಡಿ ನನಗೆ... 


ಅಂಗಡಿಯವನು ತೆಗೆದು ಒಂದು ಆಟಂ ಬಾಂಬು ನನ್ನ ಕೈಗಿಟ್ಟ.


ನಾಗಸಾಕಿ-ಹೀರೋಶಿಮಾ ಮೇಲೆ ಹಾಕಿದ ಆ ಪರಮಾಣು ಬಾಂಬು ಅಲ್ಲ ಇದು.ಇದು ಕಮ್ಮಿ ರೇಟಿನ ಆಟಂ ಬಾಂಬು.ಹದಿನೈದು ರೂಪಾಯಿ,ಮೂವತ್ತು ರೂಪಾಯಿಗೆ ಬರುವ ಅಪ್ಪಟ ದೀಪಾವಳಿಯದ್ದೇ ತೀರಾ ನಮ್ಮದೆನಿಸುವ  ಬಾಂಬು.


ನಾನು ಹೇಳಿದೆ ...ನೋಡಿ ಇದು ಆಟಂ ಬಾಂಬು.. ಇದು ನನಗೆ ಬೇಡ, ನನಗೆ ಒಂದು ಗ್ರೀನ್ ಬಾಂಬು ಕೊಡಿ.. ಅಂದೆ. 


ಅದಕ್ಕೆ ಅವನು ಹೇಳಿದ.. ನೋಡಿ ಅಣ್ಣಾ... ಇದು ಗ್ರೀನ್ ಇದೆ.. ಹಾಗಾಗಿ ಇದು ಕೂಡ ಗ್ರೀನ್ ಬಾಂಬೇ..ಇದು ಸ ಗ್ರೀನ್ ಪಟಾಕಿಯೇ.. ಎಲ್ಲರೂ ಇದೇ ತಗೊಂಡು ಹೋಗ್ತಾರೆ.ನೀವು ಸ ತಗೊಂಡು ಹೋಗಿ.. ಏನು ತೊಂದ್ರೆ ಇಲ್ಲ..


ಆಹಾ.. ಏನು ತಲೆ ಅವನದ್ದು. 


ಹಿಂದೆ ಎಲ್ಲಾ ಈ ಮಾಲೆ ಪಟಾಕಿ,ಬತ್ತಿ ಪಟಾಕಿಗಳೆಲ್ಲ ಸಣ್ಣಪುಟ್ಟ ಪಟಾಕಿಗಳಾಗಿದ್ದರೆ ಈ ಹಸಿರು ಕಲರಿನ ಆಟಂ ಬಾಂಬು ಒಂದೇ ನಮ್ಮ ಪಾಲಿನ ಅತೀ ದೊಡ್ಡ ಪಟಾಕಿ ಆಗಿತ್ತು.ಹಾಗಾಗಿ ಅದು  ಸ್ವಲ್ಪ ಡೇಂಜರ್ ಅಂತ ನಮ್ಮಲ್ಲೊಂದು ಭಾವನೆ ಮನೆ ಮಾಡಿತ್ತು.ವಠಾರದ ಧೈರ್ಯಶಾಲಿ ಬಾಲಕ  ಮಾತ್ರ ಆ ಪಟಾಕಿ ಹೊಡೆಯಬಲ್ಲ ಅಂತ ನಾವೆಲ್ಲರೂ ತಿಳಿದಿದ್ದೆವು.ಅಷ್ಟೊಂದು ಧೈರ್ಯ ಇಲ್ಲದವರು ಅದಕ್ಕೆ ದೂರದಿಂದಲೇ ಬೆಂಕಿ ಕೊಟ್ಟು ಎದ್ದು ಬಿದ್ದು ದೂರಕ್ಕೆ ಓಡಿ ಬಂದು, ಕಿವಿಗೆ ಎರಡೂ ಕೈ ಗಟ್ಟಿಯಾಗಿ ಹಿಡಿದು ಬಾಂಬು ಢಮ್ ಅಂತ ಸದ್ದು ಮಾಡುವಾಗ ಒಮ್ಮೆಗೆ ಸಿಕ್ಕಾಪಟ್ಟೆ ಅದುರಿ,ಕ್ಷಣ ಬಿಟ್ಟು ನಾವು ಕೂಡ ಬಾಂಬು ಸಿಡಿಸಿದೆವು ಎಂದು ಹೆಮ್ಮೆಯಿಂದ ಮುಖವರಳಿಸಿ ನಗುತ್ತಿದ್ದ ದಿನಗಳು ಅವು. 


ಆದರೆ ಈಗ ನೀತಿ ನಿಯಮಗಳು ಕಠಿಣವಾಗಿ ಹಸಿರು ಪಟಾಕಿಯೇ ಹೊಡೆಯಬೇಕು ಎಂಬ ಬೊಬ್ಬೆ ಕೂಗುಗಳು  ಮುಗಿಲು ಮುಟ್ಟಿದ ನಂತರ,ಈ ಪಟಾಕಿ ಪ್ರೀಯ ಬುದ್ದಿವಂತ ಜನರು ಕೂಡ  ಬೇಕೆಂದೇ ಬೇರೆ ಎಲ್ಲಾ ಸಣ್ಣಪುಟ್ಟ ಪಟಾಕಿಗಳನ್ನು ಬಿಟ್ಟು ನಮಗೆ ಒಂದು ಬಾಕ್ಸ್ ಹಸಿರು ಪಟಾಕಿಯೇ ಕೊಡಿ ಅಂತ ಈ ಹಸಿರು ಕಲರಿನ ದೊಡ್ಡ ದೊಡ್ಡ ಆಟಂ ಬಾಂಬು ಗಳನ್ನೇ ರಾಶಿ ಗಟ್ಟಲೆ ಒಯ್ಯುತ್ತಿದ್ದಾರೆ.ಅಂಗಡಿಯವರು ಕೂಡ ಅದನ್ನೇ ಕೊಡುತ್ತಾರೆ.


ಆಹಾ...ಒಂದು ರೀತಿಯಲ್ಲಿ ನೋಡಿದರೆ ಈ ಸರ್ಕಾರಗಳೇ.. ನೀವು ಇನ್ನೂ ಸಣ್ಣ ಮಕ್ಕಳಂತೆ ಒಬಿರಾಯನ ಕಾಲದವರಂತೆ ಚಿಕ್ಕ ಚಿಕ್ಕ ಪಟಾಕಿ ಹೊಡೆಯುತ್ತಿದ್ದೀರಾ.. ಕಾಲ ಬದಲಾಗಿದೆ.. ದಯವಿಟ್ಟು ಇನ್ನು ಮುಂದೆ ಆದರೂ ನೀವು ದೊಡ್ಡ ದೊಡ್ಡ ಪಟಾಕಿಗಳನ್ನೇ ಹೊಡೆಯುವಂತವರಾಗಿ.. ಎಂದು ಪರೋಕ್ಷವಾಗಿ ಪ್ರೋತ್ಸಾಹ ಕೊಡುವಂತಿದೆ ಇದು.ಹಾಗಾಗಿ ಪಟಾಕಿ ಪ್ರೀಯರ ಭಾವನೆಗಳನ್ನು ಗೌರವಿಸಿ  ಬಹಳ ಉಪಾಯದಿಂದ ಈ ರೀತಿಯಾಗಿ ಗೌಪ್ಯವಾಗಿ ಸಂತೃಪ್ತಿಗೊಳಿಸುತ್ತಿರುವ ಈ ಸರ್ಕಾರಗಳಿಗೆ ಮನಸ್ಸಿನಿಂದ ಪಟಾಕಿ ಪ್ರೀಯರು ಬಹಳಷ್ಟು ಅಭಿನಂದನೆ ಹೇಳಲೇಬೇಕು.


ಪಾಪ ಅವರು ಏನೋ ಮಾಡಲು ಹೋಗಿ.. ಏನೇನೋ ಆಗುತ್ತಿದೆ ಇಲ್ಲಿ.ಪಟಾಕಿ ಪ್ರಿಯರು ಮಾತ್ರ ಹಸಿರು ಪಟಾಕಿ ಅಂತ ದೊಡ್ಡ ದೊಡ್ಡ ಬಾಂಬುಗಳನ್ನೇ ಕೊಂಡೊಯ್ದು ನಿರಂತರವಾಗಿ ಅಲ್ಲಲ್ಲಿ ನೆಮ್ಮದಿಯಿಂದ ಹಿಂದಿಗಿಂತಲೂ ಬಹಳ ಅಧಿಕ ಬಾಂಬುಗಳನ್ನು  ಹೊಡೆಯುತ್ತಿದ್ದಾರೆ.ಪರಿಸರ ಪ್ರೇಮಿ,ಪರಿಸರ ಸ್ನೇಹಿ ಪಟಾಕಿ ಅದೆಲ್ಲಾ ಏನೂ ಇಲ್ಲ.ಹಸಿರು ಕಲರ್ ಇದ್ದು ಬಿಟ್ಟರೆ ಸದ್ಯಕ್ಕೆ ಅದೇ  ನಮ್ಮ ಜನಗಳಿಗೆ ಹಸಿರು ಪಟಾಕಿ. 


ಆದರೂ ಅಂಗಡಿಯವನಲ್ಲಿಯೇ ಕುತೂಹಲದಿಂದ ಕೇಳಿದೆ.. ಹಾಗಾದರೆ ನಿಮ್ಮಲ್ಲಿ ಈ ಹಸಿರು ಪಟಾಕಿ ಅಂತ ಈ ಆಟಂ ಬಾಂಬುಗಳೇ ಈಗೀಗ ಜಾಸ್ತಿ ಸೇಲ್ ಆಗ್ತಾ ಇರ್ಬೇಕು ಅಲ್ವಾ..


ಅವನು ಏನೂ ಹೇಳಲಿಲ್ಲ,ಆದರೆ ಸುಮ್ಮನೆ ಬೇರೆ ಎಲ್ಲೋ  ನೋಡಿಕೊಂಡು ಹಾಗೇ ನಗಾಡಿದ.ನೋಡಿ ನಮ್ಮ ಜನರೂ ಬುದ್ದಿವಂತರು,ಈ ಮಾರಾಟಗಾರರು ಕೂಡ ಬಹಳಷ್ಟು ಬುದ್ದಿವಂತರು.ಮುಂದಿನ ದಿನಗಳಲ್ಲಿ ಈ ಕೆಂಪು ಪಟಾಕಿಗಳಿಗೆ,ಅರಶಿಣದ ಪಟಾಕಿಗಳಿಗೆ ಕೂಡ ಗಾಢ ಹಸಿರು,ಗಿಳಿ ಹಸಿರು,ತಿಳಿ ಹಸಿರು,ಪಿಸ್ತಾ ಹಸಿರು,ಅಲಸಂಡೆಯ ಹಸಿರು ಎಂದು ಏನೇನೋ ಇದ್ದ ಬದ್ದ ಹಸಿರಿನ ವೆರೈಟಿ ಬಣ್ಣ ಹೊಡೆದು ಎಲ್ಲವನ್ನೂ ಹಸಿರುಮಯ ಮಾಡಿ ಗ್ರೀನ್ ಪಟಾಕಿ ಎಂದು ಮಾರಿದರೂ ಅಂತಹ ಅಚ್ಚರಿ ಏನಿಲ್ಲ. ಒಟ್ಟಿನಲ್ಲಿ ಹೆಸರಿನಲ್ಲಿ ಹಾಗೂ ಪಟಾಕಿಯ ಅಂಗಿಯಲ್ಲಿ ಹಸಿರು ಇರಬೇಕು ಅಷ್ಟೇ. 


ಅಂಗಡಿಯವನು ಕೊಟ್ಟ ಆ ಒಂದು ಹಸಿರು ಬಾಂಬು ಪಟಾಕಿಯನ್ನು ಚೀಲಕ್ಕೆ ಮೆಲ್ಲಗೆ ಪರಮಾಣು ಬಾಂಬುವಿನಂತೆ ಜಾಗ್ರತೆಯಿಂದ ಹಾಕಿಕೊಳ್ಳುವಾಗ,ಪಟಾಕಿ ಕೊಳ್ಳಲು ಬಂದಿದ್ದ ಒಬ್ಬ ಧೈರ್ಯಶಾಲಿ ಬಾಲಕ ನನ್ನ ಕೈಯಲ್ಲಿದ್ದ ಆಟಂ ಬಾಂಬನ್ನು ನೋಡಿ ಆ ಪಟಾಕಿ ಅಂಗಡಿಯವನಲ್ಲಿ.. " ಅಂಕಲ್.. " ಇದೇ ಬಾಂಬಿನಲ್ಲಿ ಹಸಿರು ಮಾಲೆ ಪಟಾಕಿ ಬರಲ್ವಾ...?" ಅಂತ ಕೇಳಿಯೇ ಬಿಟ್ಟ..!


ಆಹಾ.. ಏನಪ್ಪಾ ಅವನು..ನಾನು ಕ್ರಮ ತಪ್ಪಬಾರದು ಎಂದಿನಂತೆ ಇರಲಿ ಅಂತ ಒಂದು ಆಟಂ ಬಾಂಬನ್ನು ಚಿಕ್ಕ ಮಕ್ಕಳಂತೆ ಇಲ್ಲಿ ತೆಗೆದುಕೊಳ್ಳುತ್ತಿದ್ದರೆ,ಅವನು ಅದರಲ್ಲಿಯೇ ಮಾಲೆ ಪಟಾಕಿ ಬರಲ್ವಾ.. ಅಂತ ಕೇಳುತ್ತಿದ್ದಾನೆ ಅಂದರೆ ಅವನು ನಿಜವಾಗಿಯೂ ಸಾಮಾನ್ಯನಲ್ಲ.


ನಮ್ಮ ಕಾಲದಲ್ಲಿ ಆಟಂ ಬಾಂಬು ಹೊಡೆಯುವವನೇ ನಿಜವಾದ ಧೈರ್ಯಶಾಲಿ ಎಂದು ನಾವು ತಿಳಿದಿದ್ದೇವು,ಬಹುಶಃ ಇನ್ನು ಮುಂದಿನ ದಿನಗಳಲ್ಲಿ ಈ ಆಟಂ ಬಾಂಬಿನ ಮಾಲೆ ಪಟಾಕಿ ಹೊಡೆಯುವವನೇ ನಿಜವಾದ ಧೈರ್ಯವಂತ,ಶಕ್ತಿವಂತ, ಗುಣವಂತ,ಮಗಧೀರ ಎಂದು ತಿಳಿದುಕೊಳ್ಳುವ ಕಾಲ ಕೂಡ ಬರಬಹುದೋ ಏನೋ. ಸದ್ಯಕ್ಕೆ ಕೈಯಲ್ಲಿ ಹಿಡಿದುಕೊಂಡು ಇಲ್ಲವೇ ಕುತ್ತಿಗೆಗೆ ಹಾರದಂತೆ ಹಾಕಿ ಮಾಲೆ ಪಟಾಕಿ ಸಿಡಿಸುವ ಧೈರ್ಯಶಾಲಿಗಳು ಇರುವಂತೆ,ಮುಂದಿನ ದಿನಗಳಲ್ಲಿ ಈ ಆಟಂ ಬಾಂಬಿನ ಮಾಲೆಯನ್ನೇ  ಹಾಕಿಕೊಂಡು... ಅದನ್ನು ಸಿಡಿಸಿಕೊಂಡು ನೃತ್ಯ ಮಾಡುವವರು ಕೂಡ ನಮಗೆ ಅಲ್ಲಲ್ಲಿ ಕಾಣಲು ಸಿಗಬಹುದೋ ಏನೋ..


ಈ ರೀತಿಯಾಗಿ ಹಸಿರು ಪಟಾಕಿ ನೆಪದಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿನ ಭಯವನ್ನು ಸಿಕ್ಕಾಪಟ್ಟೆ ಹೊಗಲಾಡಿಸುತ್ತಿರುವ ಈ ಕಠಿಣ ಕಾನೂನುಗಳಿಗೆ ಮತ್ತೊಮ್ಮೆ ಬಹಳಷ್ಟು ಅಭಿನಂದನೆಗಳು. 


ಏನೇ ಹೇಳಿ ಆ ಬಾಲಕನ ಯೋಚನೆಯೇ ನನಗಂತು ಬಹಳಷ್ಟು  ಇಷ್ಟವಾಯಿತು.ಮುಂದಿನ ದಿನಗಳಲ್ಲಿ ಪಟಾಕಿ ತಯಾರಕರು ಏಕೆ ಆ ಬಾಲಕನ ಆಲೋಚನೆಗೆ ಮಾಲೆ ಹೆಣೆಯಬಾರದು.. ಹಸಿರು ಬಾಂಬಿನ ಮಾಲೆ ಪಟಾಕಿಯನ್ನೇ ತಯಾರು ಮಾಡಬಾರದು...?! 🏃🏻‍♂️🏃‍♂️


#ವಿಷಯ_ಎಂತ_ಗೊತ್ತುಂಟಾ.. 

ab pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..