ರವಿ ನೀನು ಆಗಸದಿಂದ..
ಟಿವಿಯಲ್ಲಿ ಕಣ್ಣಿಗೆ ಬಿದ್ದಾಗಲೆಲ್ಲ ಹೆಚ್ಚಾಗಿ ನಿದ್ದೆಯ ಮಂಪರಿನಲ್ಲಿಯೇ ಇರುವಂತೆ ಕಂಡರೂ ಸಿಕ್ಕಾಪಟ್ಟೆ ಬಿಂದಾಸ್ ಜನ ನಮ್ಮ ಈ ರವಿ ಭಾಯ್.ನೆಟ್ಟಿಗರು ತನ್ನನ್ನು ಎಷ್ಟೇ ಟ್ರೋಲ್ ಮಾಡಿದರೂ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ತಾನು ಕಟ್ಟಿಕೊಂಡಿದ್ದ ಬಾಯ್ಸ್ ಗ್ಯಾಂಗಿಗೊಂದು ಒಟ್ರಾಸಿ ಜೋಶ್ ತುಂಬುತ್ತಿದ್ದ ಕೋಚ್ ಅಂದರೆ ಅದು ಈ ರವಿ ಬಾಯ್ ಯೇ.
2017 ರಲ್ಲಿ ಟೀಮ್ ಡೈರೆಕ್ಟರ್ ಆಗಿದ್ದ ರವಿ ಶಾಸ್ತ್ರಿ ಮುಂದೆ ಹೆಡ್ ಕೋಚ್ ಆಗಿ ಇಲ್ಲಿಯವರೆಗೂ ಟೀಮ್ ಇಂಡಿಯಾಕ್ಕೆ ಮಾರ್ಗದರ್ಶನ ಮಾಡಿದ್ದಾರೆ.ಇಂದು ನಮೀಬಿಯಾದ ಎದುರಿನ ಈ ವಿಶ್ವಕಪ್ ಪಂದ್ಯವೇ ಅವರ ಕೋಚಿಂಗ್ ನ ಕೊನೆಯ ಪಂದ್ಯ. ಏನೇ ಹೇಳಿ ನಾವು ರವಿ ಭಾಯ್ ಕೋಚಿಂಗ್ ನಲ್ಲಿ ದೊಡ್ಡ ದೊಡ್ಡ ಐಸಿಸಿ ಯ ಟೈಟಲ್ ಗಳನ್ನು ಗೆದ್ದಿಲ್ಲ ಎನ್ನುವುದು ನಿಜವೇ ಆದರೂ ನಾವು ರವಿ ಬಾಯ್ ಕೋಚಿಂಗ್ ಅಡಿಯಲ್ಲಿ ಸೋತಿದ್ದು ಕೂಡ ಕಡಿಮೆಯೇ ಅನ್ನುವುದು ಕೂಡ ಅಷ್ಟೇ ಸತ್ಯ.
ಚೊಚ್ಚಲ ಡಬ್ಲ್ಯು.ಟಿ.ಸಿ ಯ ಫೈನಲ್ ಗೆ ಲಗ್ಗೆ ಹಾಕಿದ್ದು,ಗಾಬಾದ ಗಮಂಡ್ ಮುರಿದದ್ದು,ಟೆಸ್ಟ್ ನಲ್ಲಿ ಇಂಗ್ಲೆಂಡ್ ನಲ್ಲಿಯೂ ದಾಂಧಲೆ ಮಾಡಿದ್ದು ಹಾಗೂ ಇನ್ನೂ ಹಲವು ಗೆಲುವುಗಳು ರವಿ ಭಾಯ್ ಯ ಮಾರ್ಗದರ್ಶನಡಿಯೇ ನಮಗೆ ಬಂದಿದ್ದು.
ವಿರಾಟ್ ಕೊಹ್ಲಿಗೆ ಹೇಳಿ ಮಾಡಿಸಿದ ಕೋಚ್ ಅಂದರೆ ಅದು ಈ ರವಿ ಶಾಸ್ತ್ರಿ ಎಂಬ ಮಾತು ಕೂಡ ಇದೆ.ಕಾರಣ ಇಬ್ಬರದ್ದು ಫಿಯರ್ ಲೆಸ್ ನಡವಳಿಕೆಗಳು ಹಾಗೂ ಜಟ್ಟಿ ಬಿದ್ದರೂ ಎಂದಿಗೂ ಮೀಸೆ ಮಣ್ಣಾಗದ ಮಾತುಗಳು.ಅವರಿಬ್ಬರದ್ದು ಭಲೇ ಜೋಡಿ ಎಂದೇ ಹೇಳಬಹುದೋ ಏನೋ.ಏಕೆಂದರೆ ಕೊಹ್ಲಿ ಜೊತೆಗೆ ಬಹಳ ಬೇಗನೆ ಹೊಂದಿಕೊಂಡ ಕೋಚ್ ಎಂದರೆ ಈ ರವಿ ಬಾಯ್ ಮಾತ್ರ.ಟೀಮ್ ಇಂಡಿಯಾಕ್ಕೊಂದು ಭಯ ರಹಿತ ಕ್ರಿಕೆಟ್ ಕಲಿಸಿದ್ದು ಎಷ್ಟು ಕೊಹ್ಲಿಯೋ ಅದರಲ್ಲಿ ಅಷ್ಟೇ ಪಾಲು ಈ ರವಿ ಶಾಸ್ತ್ರಿಯದ್ದು ಕೂಡ ಇತ್ತು.ನನಗೂ ಕೂಡ ರವಿ ಶಾಸ್ತ್ರಿಯ ಬಿಂದಾಸ್ ಮಾತುಗಳು ಬಹಳಷ್ಟು ಇಷ್ಟ.
ಮುಂದೆ ರವಿ ಶಾಸ್ತ್ರಿ ಕ್ರಿಕೆಟ್ ಗೆ ಸಂಬಂಧಿಸಿದಂತೆ ಮೈದಾನದಲ್ಲಿ ಏನು ಮಾಡುತ್ತಾರೆ ಎಂದು ಗೊತ್ತಿಲ್ಲ.ಆದರೆ ನಾನಂತು ರವಿ ಆದಷ್ಟು ಬೇಗ ಕಾಮೆಂಟರಿ ಬಾಕ್ಸ್ ಗೆ ಮರಳಿ ' ರವಿ ನೀನು ಆಗಸದಿಂದ .. " ಎಂಬಂತೆ ಮೈದಾನಕ್ಕಿಂತ ಹೆಚ್ಚಾಗಿ ಗಾಳಿಯಲ್ಲೇ ಅವರ ಅತೀ ವಿಶಿಷ್ಟ ಮಾತುಗಳು ಮತ್ತೆ ಮತ್ತೆ ತೇಲಿ ಬರಲಿ ಎಂದೇ ಆಶಿಸುತ್ತೇನೆ.
ಇಂಡಿಯಾದಲ್ಲಿ ಹರ್ಷ ಬೋಗ್ಲೆ ಬಿಟ್ಟರೆ ಅತೀ ಇಷ್ಟ ಆಗುತ್ತಿದ್ದ ಕಾಮೆಂಟೇಟರ್ ಎಂದರೆ ಅದು ನಮ್ಮ ರವಿ ಭಾಯ್ ಯೇ.2007 ರ ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಯುವಿಯ 6 ಸಿಕ್ಸರ್ ಗಳಿಗೆ ರವಿ ಶಾಸ್ತ್ರಿ ನೀಡಿದ್ದ ಕಾಮೆಂಟರಿ ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ ಹಾಗೂ ಅದು ಮುಂದೆಯೂ ಹಾಗೇ ಇರಲಿದೆ.ಟೀಮ್ ಇಂಡಿಯಾದ ಕೋಚ್ ಆಗುವುದಕ್ಕಿಂತಲೂ ಮೊದಲು ಯಾವಾಗ ಯಾವಾಗ ಟೀಮ್ ಇಂಡಿಯಾ ಜಯಭೇರಿ ಬಾರಿಸಿತ್ತೋ ಅಲ್ಲೆಲ್ಲಾ ರವಿ ಭಾಯ್ ಯ ಖಡಕ್ ಕಾಮೆಂಟರಿ ಇರುತ್ತಿತ್ತು.‘ Tracer Bullet’ ಎಂಬ ಸಾಲನ್ನು 1990 ರಲ್ಲಿ ಇಂಗ್ಲೆಂಡ್ ನ ಅಲೆಕ್ ಸ್ಟುವರ್ಟ್ ನ ಬಲವಾದ ಹೊಡೆತಕ್ಕೊಂದು ಟೋನಿ ಗ್ರೇಗ್ ಹೇಳಿದ್ದರೂ ಅದು ನಿಜವಾಗಿಯೂ ಫೇಮಸ್ ಆಗಿದ್ದು ಮುಂದೆ ಈ ನಮ್ಮ ರವಿ ಶಾಸ್ತ್ರಿ ಕಾಮೆಂಟರಿಗಳಲ್ಲಿಯೇ...
ಬಹಳಷ್ಟು ನೆನಪುಗಳಿಗೆ ಥ್ಯಾಂಕ್ಯು ರವಿ ಭಾಯ್ 🤘🏻😊
Cricket
ab
Comments
Post a Comment