ನಾವು ಪಟಾಕಿ ಪ್ರೀಯರು ಅಷ್ಟೇ..!
" ಚಿಕ್ಕಂದಿನಲ್ಲಿ ಈ ದೀಪಾವಳಿ ಬಂತೆಂದರೆ ನಾನು ಬಹಳಷ್ಟು ಪಟಾಕಿಗಳನ್ನು,ಬಾಂಬುಗಳನ್ನು ಧೈರ್ಯದಿಂದ ಸಿಡಿಸುತ್ತಿದ್ದೆ.ಮಾಲೆ ಪಟಾಕಿಗಳನ್ನು ಕೈಯಲ್ಲಿಯೇ ಹಿಡಿದು ಗಿರ ಗಿರ ತಿರುಗಿಸುತ್ತಾ ಬಿಡುತ್ತಿದ್ದೆ.ದುರ್ಸು(ಹೂ ಕುಂಡ) ಪಟಾಕಿಯನ್ನು ತಲೆಯ ಮೇಲೆ ಇಟ್ಟು ಬೆಳಕಿನ ಮಳೆಯನ್ನೇ ನನ್ನ ಮೇಲೆ ಸುರಿಸುತ್ತಿದ್ದೆ.ಬೆರಳುಗಳ ನಡುವೆ ಸಿಕ್ಕಿಸಿ ಆಕಾಶಕ್ಕೆ ರಾಕೆಟ್ ಉಡಾವಣೆ ಮಾಡುತ್ತಿದ್ದೆ,ನೆಲ ಚಕ್ರವನ್ನು ಅಂಗೈಯಲ್ಲಿ ಬಿಡುತ್ತಾ ಸುತ್ತೆಲ್ಲಾ ಬೆಳಕಿನ ಕೋಡಿ ಹರಿಸುತ್ತಿದ್ದೆ,ಕೆಂಪಿನ ಮೆಣಸಿನ ಪಟಾಕಿಯನ್ನು ತುಟಿಗಳ ನಡುವೆ ಸಿಕ್ಕಿಸಿಕೊಂಡು ಬೀಡಿಯಂತೆ ಸೇದುತ್ತಿದ್ದೆ.ಆಗ ಎಲ್ಲರೂ ನನ್ನನ್ನು ಧೈರ್ಯಶಾಲಿ ಎಂದು ಕರೆಯುತ್ತಿದ್ದರು.ಪಕ್ಕದ ಮನೆಯ ಆಂಟಿ ನನ್ನ ಸಾಹಸಗಳನ್ನು ನೋಡಿ ಇವನು ದೊಡ್ಡವನಾದ ನಂತರ ಖಂಡಿತವಾಗಿಯೂ ಏನೋ ಒಂದು ಆಗುತ್ತಾನೆ,ಏನೋ ಒಂದು ದೊಡ್ದದನ್ನೇ ಮಾಡುತ್ತಾನೆ ಬಹುಶಃ ವಿಜ್ಞಾನಿಯೇ ಆಗುತ್ತಾನೆ ಎಂದು ನನ್ನಲ್ಲಿ ಏನೋ ವಿಶೇಷತೆ ಇರುವುದನ್ನು ಗುರುತಿಸಿ ಹಾಡಿ ಹೊಗಳುತ್ತಿದ್ದರು.ದೊಡ್ಡವನಾದ ನಂತರ ನಾನು ಅಂತಹ ಏನೂ ಆಗದಿದ್ದರೂ ಈಗ ತೆಂಗಿನ ಮರಗಳಿಗೆ ಬರುವ ಮಂಗಗಳನ್ನು ಓಡಿಸಲು ನಿರಂತರವಾಗಿ ಗರ್ನಲ್(ಸಿಡಿಮದ್ದು)ಎಸೆಯುವಾಗ ಚಿಕ್ಕಂದಿನಲ್ಲಿ ಆಂಟಿ ಹೇಳಿದುದರಲ್ಲಿ ನಿಜಕ್ಕೂ ಇದೇ ಸತ್ಯಾಂಶ ಇದ್ದದ್ದು ಎಂದು ನನಗೀಗ ಸಿಕ್ಕಾಪಟ್ಟೆ ಅರಿವಾಗುತ್ತಿದೆ.ಹೀಗೆ ಚಿಕ್ಕಂದಿನಲ್ಲಿ ನಾನು ನಿರ್ಭಿತಿಯಿಂದ ಬಾಂಬುಗಳನ್ನು ಬಿಡುವಾಗ ನನ್ನನ್ನು ಎಲ್ಲರೂ ಸಾಹಸಿ,ವೀರ ಬಾಲಕ,ಧೈರ್ಯಶಾಲಿ ಹುಡುಗ ಎಂದೇ ಕರೆಯುತಿದ್ದರು.ಆವಾಗ ನೆರೆ ಹೊರೆಯಲ್ಲಿ ನನಗಿಂತ ಚಿಕ್ಕ ಮಕ್ಕಳು ಇರುವ ಮನೆಯವರೇನಾದರೂ ಅತಿಯಾದ ಉತ್ಸಾಹದಿಂದ ದೊಡ್ಡ ಪಟಾಕಿಗಳನ್ನು ತಂದರೆ ಅದನ್ನು ಹೊಡೆಯಲು ನನ್ನನ್ನೇ ಹೆಚ್ಚಾಗಿ ಕರೆಯುತ್ತಿದ್ದರು." ಇವನಿಗೆ ಏನು ಬೇಕಾದರೂ ಆಗಿ ಸಾಯಲಿ,ನಮ್ಮ ಪುಟ್ಟ ಮಕ್ಕಳ ಕಣ್ಣು,ಕೈ ಕಾಲು ಮಾತ್ರ ಸುರಕ್ಷಿತವಾಗಿರಲಿ..." ಎಂಬ ಯಾವ ದುಷ್ಟ ಮನೋಭಾವವನ್ನೂ ನಾನು ಅವರಲ್ಲಿ ಎಂದಿಗೂ ಕಾಣಲಿಲ್ಲ.ಬದಲಿಗೆ ನನ್ನಲ್ಲಿ ಅವರು ಒಬ್ಬರು ದೊಡ್ಡ ಪಟಾಕಿ ಸಾಹಸಿಯನ್ನು ಕಂಡು ಕೊಂಡಿದ್ದು ನನಗೆ ಅತಿಯಾದ ಖುಷಿಯನ್ನು ನೀಡುತ್ತಿತ್ತು.ಹಾಗಾಗಿ ನಾನು ಅವರ ಮನವಿಗೆ ಓಗೊಟ್ಟು ಅವರ ಕರೆಯನ್ನು ಮನ್ನಿಸಿ ಅವರುಗಳ ಮನೆಗಳಿಗೆ ಹೋಗಿ ದೊಡ್ಡ ದೊಡ್ಡ ಪಟಾಕಿಗಳನ್ನು ಸಣ್ಣಪುಟ್ಟ ಮಕ್ಕಳೆದರು ಬಹಳ ಗತ್ತಿನಿಂದ ಬಿಟ್ಟು ದೊಡ್ಡ ಧೈರ್ಯಶಾಲಿಯಂತೆ ಮೆರೆಯುತ್ತಿದ್ದೆ.ಕೆಲವೊಮ್ಮೆ ಮಕ್ಕಳ ಕೈಯಲ್ಲಿದ್ದ ಸಣ್ಣ ಪುಟ್ಟ ಪಟಾಕಿಗಳನ್ನು ಕೂಡ ನಾನೇ ಕಸಿದುಕೊಂಡು ಖುಷಿ ಖಷಿಯಾಗಿ ಅಲ್ಲಿಯ ಎಲ್ಲಾ ಪಟಾಕಿಗಳನ್ನು ನಾನೊಬ್ಬನೇ ಹೊಡೆದು ಖಾಲಿ ಮಾಡಿ ಬಿಡುತ್ತಿದ್ದೆ.ನಾನು ಈಗಲೂ ಪಟಾಕಿ,ಬಾಂಬುಗಳನ್ನು ಬಿಡುತ್ತೇನೆ.'ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲ.. ' ಎಂಬಂತೆ ಈಗಲೂ ಸಾಹಸಮಯವಾಗಿ ಪಟಾಕಿಗಳನ್ನು ಬಿಡುತ್ತೇನೆ.ಆದರೆ ಈಗ ಇದೇ ಸಮಾಜ ನನ್ನನ್ನು ಧೈರ್ಯವಂತ,ಓ ಗುಣವಂತ,ಹೃದಯವಂತ,ವಿಜ್ಞಾನಿ ಎಂದು ಕರೆಯದೇ ನನ್ನನ್ನು ಪರಿಸರ ನಾಶ ಮಾಡುವ ಕೇಡಿ,ಭೂಗಳ್ಳ, ಕಾಡುಗಳ್ಳ,ಸರಗಳ್ಳ,ಅಕ್ರಮ ಮೈನಿಂಗ್ ನ ಧಣಿ ಎಂಬಂತೆ ವಿಚಿತ್ರವಾಗಿ ನೋಡುತ್ತಿದೆ.ನನ್ನಿಂದಲೇ ವಾಯು ಮಾಲಿನ್ಯ,ಶಬ್ಧ ಮಾಲಿನ್ಯ,ಜಲ ಮಾಲಿನ್ಯ,ಮಣ್ಣು ಮಾಲಿನ್ಯ,ಸಮಾಜ ಮಾಲಿನ್ಯ ಸುತ್ತ ಮುತ್ತ ಆಗುತ್ತಿರುವುದು ಎಂದೆಲ್ಲಾ ಮಾತಿನ ಚಾಟಿಯೇಟನ್ನು ತೀಕ್ಷ್ಣವಾಗಿ ನನ್ನ ಮೇಲೆ ಬೀಸುತ್ತಿದೆ.ನನ್ನ ಗೆಳೆಯನೊಬ್ಬ ನಮ್ಮ ಮನೆಯ ನಾಯಿ ನೀನು ಬಿಡುವ ಪಟಾಕಿಯಿಂದಲೇ ಹೆದರಿ ಮನೆ ಬಿಟ್ಟು ಓಡಿ ಹೋಗಿ ಅನಾಥವಾಗಿ ದಿಕ್ಕು ದೆಸೆಯಿಲ್ಲದೆ ಬೀದಿಗಳಲ್ಲಿ ಅಲೆಯುತ್ತಿದೆ ಎಂದು ನೇರಾ ಆರೋಪ ಮಾಡುತ್ತಿದ್ದಾನೆ ಮಾತ್ರವಲ್ಲ ನಿನ್ನಿಂದಲೇ ಓಜೋನ್ ಪದರ ನಿರಂತರವಾಗಿ ಒಟ್ಟೆಯಾಗುತ್ತಿದೆ ಎಂದು ಹೇಳಿ ನನ್ನನ್ನು ಒಬ್ಬ ಮನುಕುಲದ ವಿನಾಶಕ ಎಂಬ ರೀತಿಯಲ್ಲಿ ಬಿಂಬಿಸುವ ಷಡ್ಯಂತ್ರ ಮಾಡುತ್ತಿದ್ದಾನೆ.ಹಿಂದೆ ಎಲ್ಲಾ ಯಾರೂ ನನಗೆ ಈ ರೀತಿ ಹೇಳುತ್ತಿರಲಿಲ್ಲ,ಆಗ ಪಟಾಕಿ ಬಿಡುವವರಿಗೆ ಸಮಾಜದಲ್ಲಿ,ವಠಾರದಲ್ಲಿ ರೆಸ್ಪೆಕ್ಟ್ ಇತ್ತು.ಆದರೆ ಈಗ ನಾನು ಪಟಾಕಿ ಬಿಡುವವನು ಎಂದು ಹೆಮ್ಮೆಯಿಂದ ಹೇಳಿಕೊಂಡರೆ ಈ ಸಮಾಜ ನನ್ನನ್ನು ಅವಿಧ್ಯಾವಂತ,ಅನಾಗರಿಕ,ಅಶಿಸ್ತಿನ ಮನುಷ್ಯ,ಪ್ರಾಣಿ ಪೀಡಕ ಎಂಬಂತೆಯೇ ನೋಡುತ್ತದೆ.ಇದು ನಿಜಕ್ಕೂ ನನಗೆ ಬಹಳ ದುಃಖವನ್ನು ತಂದಿದೆ.ಸ್ವಾಮಿ ನಾವು ಪಟಾಕಿ ಪ್ರೀಯರು ಅಷ್ಟೇ..ಪಟಾಕಿ ಬಿಡುವುದು ಕೂಡ ಇತರರಂತೆ ನಮ್ಮದೂ ಕೂಡ ಒಂದು ಹಕ್ಕು,ಅದು ನಮ್ಮ ಮನರಂಜನೆ.ಅದೂ ಅಲ್ಲದೇ ಮಾರ್ಕೆಟ್ ನಲ್ಲಿ ಪಟಾಕಿ ಬಂದರಷ್ಟೇ ನಾವು ಪಟಾಕಿ ಕೊಂಡು ಹೊಡೆಯುತ್ತೆವೆಯೇ ಹೊರತು,ಕಳ್ಳಬಟ್ಟಿ ಸಾರಾಯಿಯಂತೆ ನಾವುಗಳೇ ಮನೆಯಲ್ಲಿ ಅಕ್ರಮವಾಗಿ ಪಟಾಕಿ ತಯಾರಿಸಿಕೊಂಡು ಎಂದಿಗೂ ನಾವು ಯಾರೂ ಪಟಾಕಿ ಹೊಡಿದಿಲ್ಲ.ಅಂತಹ ಕಲೆಗಳು ನಮಗೆ ಒಲಿದಿಲ್ಲ.ಬಹಳಚಿ ಕ್ಕಂದಿನಿಂದಲೂ ನಾವು ಪಟಾಕಿ ಬಿಡುತ್ತಾ ಬಂದಿದ್ದೇವೆ,ಅದರಲ್ಲಿಯೇ ಒಂದಿಷ್ಟು ಖುಷಿಯನ್ನು ಕಂಡಿದ್ದೇವೆ.ದಯವಿಟ್ಟು ಅದನ್ನು ನಮ್ಮಿಂದ ಯಾರೂ ಕಸಿಯಬೇಡಿ.ಈಗೀನ ಸಮಾಜದಲ್ಲಿ ಮದ್ಯಪ್ರೀಯರಿಗೆ, ಧೂಮಪಾನ ಪ್ರೀಯರಿಗೆ,ಅಷ್ಟೇ ಏಕೆ ಡ್ರಗ್ಗು ಪ್ರಿಯರಿಗೆ ಕೂಡ ಸಿಕ್ಕಾಪಟ್ಟೆ ಮಾರ್ಯಾದೆ ಉಂಟು.ಆದರೆ ವರ್ಷದಲ್ಲಿ ಒಂದು ಬಾರಿ ಮಾತ್ರ ಪಟಾಕಿ ಹೊಡೆಯುವ ನಮಗೆ ಏಕೆ ಮಾರ್ಯಾದೆ ಇಲ್ಲಾ?! ನಾವು ಕೊಲೆಗಾರರಲ್ಲ...ದರೋಡೆ ಕೋರರು ಅಲ್ಲ... ಸಮಾಜಘಾತಕರು ಅಂತು ಅಲ್ಲವೇ ಅಲ್ಲ.. ನಾವು ಜಸ್ಟ್ ಪಟಾಕಿ ಪ್ರೀಯರು ಅಷ್ಟೇ.ನಮಗೂ ಬದುಕುವ ಹಕ್ಕಿದೆ,ನಮ್ಮ ಭಾವನೆಗಳನ್ನು ಕೂಡ ಗೌರವಿಸಿ..ದಯವಿಟ್ಟು ಬುದ್ಧಿವಂತರೇ ಸಮಾಜದಲ್ಲಿ ನಮ್ಮನ್ನು ತುಂಬಾ ಕ್ಷುಲ್ಲಕವಾಗಿ,ಹೀನಾಯವಾಗಿ ಕಾಣಬೇಡಿ..🙏🏻 "
- ಪಟಾಕಿ ಪ್ರೀಯ,
(ಊರು ಬೇಡ, ಹೆಸರು ಬೇಡ)
#ವಿಷಯ_ಎಂತ_ಗೊತ್ತುಂಟಾ
ab
Comments
Post a Comment