Court

 #Court | Netflix



ಅವನ ಹೆಸರು ನಾರಾಯಣ ಕಾಂಬ್ಳೆ.ಅವನು ಬಹಳಷ್ಟು ವೃದ್ಧ,ನಿವೃತ್ತ ಶಿಕ್ಷಕ ಹಾಗೂ ಇಳಿ ವಯಸ್ಸಿನ ಸಾಮಾಜಿಕ ಹೋರಾಟಗಾರ.

ಅವನು ಹಾಡು ಹಾಡುತ್ತಾನೆ.ಅಂತಿಂತಹ ಹಾಡು ಅವನದಲ್ಲ.ಕ್ರಾಂತಿ ಗೀತೆಗಳನ್ನು ಬೀದಿ ಬೀದಿಗಳಲ್ಲಿ ನಿರಂತರವಾಗಿ ಅವನು  ಹಾಡುತ್ತಾನೆ.ಅನ್ಯಾಯದ ವಿರುದ್ಧ,ಶೋಷಣೆಯ ವಿರುದ್ಧ ಮತ್ತು ದೀನ ದಲಿತರ,ಬಡವರ ಪರವಾಗಿ ಅವನು ಹಾಡುತ್ತಾನೆ.

ಒಂದು ದಿನ ಅವನ ಏರಿಯಾದಲ್ಲಿಯೇ ಮ್ಯಾನ್ ಹೋಲ್,ಚರಂಡಿ,ಗಟಾರ ಇತ್ಯಾದಿಗಳನ್ನು ಕ್ಲೀನ್ ಮಾಡುವ ಒಬ್ಬ   ಕಾರ್ಮಿಕ ಗಟಾರದೊಳಗೆಯೇ ಆತ್ಮಹತ್ಯೆ ಮಾಡಿಕೊಂಡು ಸತ್ತು  ಬಿಡುತ್ತಾನೆ.

ಪೋಲಿಸರು ಬಂದು ನಾರಾಯಣ ಕಾಂಬ್ಳೆಯನ್ನು ಎತ್ತಿಕೊಂಡು ಹೋಗುತ್ತಾರೆ.ಜೈಲಿಗೂ ಹಾಕುತ್ತಾರೆ.

ಅವನ ಬಂಧನಕ್ಕೆ ಪೋಲಿಸರು ನೀಡುವ ಕಾರಣ ಅವನ  ಹಾಡುಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಿಕ್ಕಾಪಟ್ಟೆ ಪ್ರೋತ್ಸಾಹ ಹಾಗೂ ಪ್ರಚೋದನೆ ಇತ್ತು ಎಂಬುದೇ ಪೋಲಿಸರ ವಾದ.

ಆದರೆ ಎಲ್ಲೋ ಒಬ್ಬ ಅವನಷ್ಟಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ನಾರಾಯಣ ಕಾಂಬ್ಳೆಯ ಹಾಡು ಹೇಗೆ ಕಾರಣವಾಗುತ್ತದೆ?ಇದಕ್ಕೆ ಎಲ್ಲಿಯ ಸಾಕ್ಷಿ? ಯಾವ ರೀತಿಯ ವಾದ-ಪ್ರತಿವಾದ?

ಕೋರ್ಟ್ ಹಾಲ್ ನಲ್ಲಿ ಇದರದ್ದೊಂದು ಕಥೆ ನಿಧಾನಕ್ಕೆ ಹಾಗೇ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಅಸಲಿಗೆ ಇದರ ಕಥೆ ಏನು ?

Chaitanya Tamhane ನಿರ್ದೇಶನದ ಈ ಮೂವಿಯಲ್ಲಿ Vira Sathidar, Vivek Gomber ಮುಂತಾದವರ ಅಭಿನಯವಿದೆ.ಇದು ಮೂಲತಃ ಮರಾಠಿ ಮೂವಿ ಆಗಿದ್ದರೂ  ಹಿಂದಿ,ಗುಜರಾತಿ ಹಾಗೂ ಇಂಗ್ಲಿಷ್ ಭಾಷೆಗಳು ಬೆರೆತುಕೊಂಡಿರುವ ಇದು Multilingual ಮೂವಿ ಆಗಿದೆ.

ಅಂದ ಹಾಗೆ ಈ ಮೂವಿಯ ಕಥೆ ನಿಜಕ್ಕೂ ಅಂತಹ ಯಾವುದೇ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಅಲ್ಲವೇ ಅಲ್ಲ.

ಇತರೆ ಕೋರ್ಟ್ ಹಾಲ್ ಮೂವಿಗಳಂತೆ ಇಲ್ಲಿ ಯಾವುದೇ ಸದ್ದು ಗದ್ದಲವಿಲ್ಲ. ನಾಟಕೀಯ ತಿರುವುಗಳು ಉಹುಂ ಅದೂ ಕೂಡ ಇಲ್ಲ.

ಆದರೂ ಈ ಮೂವಿ ನೀವು ನೋಡಬಹುದು ಮತ್ತು ನೋಡಬೇಕು ಎಂದು ನನ್ನ ಅನಿಸಿಕೆ.

ನೈಜವಾಗಿ ಒಂದು ಕೋರ್ಟ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ನೋಡಲು ಅದರಲ್ಲೂ ಭಾರತೀಯ ನ್ಯಾಯಾಲಯಗಳು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ನೋಡಲು,ಸವಿವರವಾಗಿ ತಿಳಿಯಲು ಈ ಮೂವಿಯನ್ನು ನೀವು ನೋಡಬಹುದು.

ಇಲ್ಲಿಯದ್ದೊಂದು ಮುಖ್ಯ ಕಥೆಗೆ ಮುಕ್ತಾಯವೂ ಇಲ್ಲ.ಏಕೆಂದರೆ ಅದು ಈ ಮೂವಿಯ ಉದ್ದೇಶವೂ ಕೂಡ ಅಲ್ಲ.ಆ ಮುಖ್ಯ ಕಥೆಗಿಂತಲೂ ಈ ಮೂವಿ ಮೆಲ್ಲಗೆ ಕಟ್ಟಿಕೊಡುತ್ತಾ ಹೋಗುತ್ತಾ ಇತರ ಕಥೆಗಳೇ ಸಾವಿರ ಕಥೆ ಹೇಳುತ್ತಾ ಹೋಗುತ್ತವೆ.ಆದರೆ ಅದನ್ನು ಹುಡುಕಿದರೆ ಮಾತ್ರ ಅವುಗಳು ನಮಗೆ ಸಿಗುವುದು.

ಪ್ರಾಸಿಕ್ಯೂಷನ್ ಹಾಗೂ ಡಿಫೆನ್ಸ್ ಲಾಯರ್ ಇಬ್ಬರ ಜೀವನ ಶೈಲಿಯೂ ಬಹಳಷ್ಟು ವಿಭಿನ್ನ ಹಾಗೂ ಅಷ್ಟೇ ತದ್ವಿರುದ್ಧ.ಸಿಕ್ಕಾಪಟ್ಟೆ ಶಿಸ್ತು ಬಯಸುವ ಇಲ್ಲಿಯ ಜಡ್ಜ್ ನ ಕೋರ್ಟ್ ಹಾಲ್ ನ ಬದುಕು ಹಾಗೂ ಹೊರಗಡೆಯ ಬದುಕು ಕೂಡ ಬಹಳಷ್ಟು ವಿಭಿನ್ನ.ಸಹಜವಾಗಿಯೇ ಸಮಾಜದ ಎಲ್ಲರಲ್ಲೂ ಒಳಗೊಂದು ಹೊರಗೊಂದು ಇರುವಂತೆ ಇವರು ಕೂಡ ಇಲ್ಲಿ ಇದ್ದಾರೆ ಅಷ್ಟೇ.ಇಲ್ಲಿ ಯಾರನ್ನು ಬೇಕು ಬೇಕೆಂದೇ ತಪ್ಪು ತಪ್ಪಾಗಿ ತೋರಿಸುವುದಿಲ್ಲ.ಬದಲಿಗೆ ಅವರು ಇರುವಂತೆಯೇ ತೋರಿಸುತ್ತಾರೆ!

ಹೌದು ಇಲ್ಲಿ ನಿಮಗೆ ಏನನ್ನೂ ಹೇಳುವುದಿಲ್ಲ,ನಿಮಗೆ ಅನಿಸಿದಂತೆ,ತೋಚಿದಂತೆ ಈ ಮೂವಿ ನಿಮ್ಮದಾಗುತ್ತದೆ.ಒಂದೊಂದು ಪಾತ್ರ ಒಂದೊಂದು ಕಥೆ ಮೌನವಾಗಿಯೇ ಹೇಳುತ್ತದೆ.ಅಂದ ಹಾಗೆ ಬಹಳಷ್ಟು ಪ್ರಶಂಸೆಗೆ ಪಾತ್ರವಾಗಿದ್ದ ಈ ರಿಯಲಿಸ್ಟಿಕ್ ಮೂವಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿದೆ.

ಏನೂ ಹೇಳದೆ ಬಹಳಷ್ಟನ್ನು ತನ್ನೊಳಗೆ ಉಳಿಸಿಕೊಳ್ಳುವ,ಒಬ್ಬೊಬ್ಬರಿಗೆ ಒಂದೊಂದು ವಿಭಿನ್ನ ಕಥೆ ಹೇಳುತ್ತಾ ಸಾಗುವ ಕಥೆಗಳು ನನಗಂತು ಇಷ್ಟ.ಒಂದಿಷ್ಟು ತಿಳಿಹಾಸ್ಯದ ಜೊತೆಗೆ ನಮ್ಮ ಸಮಾಜ ಹೀಗಿದೆ,ಹೀಗೆಯೇ ಇದೆ ಎನ್ನುವುದನ್ನು ಈ ಮೂವಿ ಬಹಳ ಅಚ್ಚುಕಟ್ಟಾಗಿ ತೋರಿಸಿ ಕೊಡುತ್ತದೆ.




#Court | Netflix
Marathi Movie
Legal Drama
Release - 2014

Movies
Ab

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!