Jai Bhim
#Jai_Bhim | Prime
ಅವರು ಗದ್ದೆಯ ಅಂಚಲ್ಲಿ ಸುಳಿದಾಡುವ ಇಲಿಗಳನ್ನು ತಮ್ಮ ಕೈಚಳಕದಿಂದ ಹಿಡಿಯುತ್ತಾರೆ;ಕೆಲವೊಮ್ಮೆ ಹಾವುಗಳನ್ನು ಕೂಡ!
ಅಂತಹ ಅವರಲ್ಲಿ ಒಬ್ಬ ಅದೊಂದು ದಿನ ಊರಿನ ಸಿರಿವಂತನ ಮನೆಗೆ ಹಾವು ಬಂದಿದೆ ಎಂದು ಹಾವು ಹಿಡಿಯಲು ಹೋಗುತ್ತಾನೆ.
ಅವನು ಹಾವು ಹಿಡಿಯುತ್ತಾನೆ ಕೂಡ.ಅದನ್ನು ಅವನು ಕಾಡಿಗೆ ಬಿಡುತ್ತಾನೆ;ಮೂಲತಃ ಅವನು ಕೂಡ ಬಹಳಷ್ಟು ಕಾಡಿನವನೇ.ಬುಡಕಟ್ಟು ಜನಾಂಗಕ್ಕೆ ಸೇರಿದವನು ಅವನು.ಅವನಂತೆಯೇ ಹಲವರು ಇಲ್ಲಿ.ಎಲ್ಲರೂ ಮುಗ್ಧರು, ಅಮಾಯಕರು.ಧಣಿಗಳೇ ಅವರ ಪಾಲಿನ ದೇವರು!
ಆದರೆ ಅದೇ ದಿನ ಆ ಸಿರಿವಂತನ ಮನೆಯಲ್ಲಿ ಕಳ್ಳತನವಾಗಿಬಿಡುತ್ತದೆ. ಆಭರಣಗಳ ಲೂಟಿ ಆಗಿರುತ್ತದೆ!
ಕಳ್ಳ ಯಾರೆಂದು ಪತ್ತೆ ಹಚ್ಚಲು ಸಾಧ್ಯವಾಗದ ಪೋಲಿಸರು ಆ ಹಾವು ಹಿಡಿದವನನ್ನು ಹಾಗೂ ಅವನೊಂದಿಗೆ ಮತ್ತೆ ಇಬ್ಬರನ್ನು ಸುಮ್ಮನೆ ಸಂಶಯದ ಆಧಾರದ ಮೇಲೆ ಒದ್ದು ಜೈಲಿಗೆ ಹಾಕುತ್ತಾರೆ!
ಮಾಡದ ತಪ್ಪನ್ನು ಒಪ್ಪಿಕೊಳ್ಳಲು ಇನ್ನಿಲ್ಲದಂತೆ ಪೀಡಿಸಲಾಗುತ್ತದೆ.
ಆದರೆ ಅವರು ಒಪ್ಪುವುದಿಲ್ಲ.
ಒಂದು ದಿನ ಆ ಮೂವರೂ ಜೈಲಿನಿಂದಲೇ ಕಣ್ಮರೆಯಾಗಿ ಬಿಡುತ್ತಾರೆ!!
ಆದರೆ ಹೇಗೆ?
ನಿಜಕ್ಕೂ ಅವರು ಹೋಗಿದ್ದಾದರೂ ಎಲ್ಲಿಗೆ??
ಇಲ್ಲಿಂದ ಇದರ ಕಥೆ ಆರಂಭವಾಗುತ್ತದೆ ಹಾಗೂ ಕೋರ್ಟ್ ಹಾಲ್ ನಲ್ಲಿ ಒಂದೊಂದೇ ಕಥೆ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ!
ಏನದು ಕಥೆ?
T. J. Gnanavel ನಿರ್ದೇಶನದ ಈ ಮೂವಿಯಲ್ಲಿ Suriya, K. Manikandan, Rajisha Vijayan ಮುಂತಾದವರ ಅಭಿನಯವಿದೆ.
ಇದು 1993 ರ ಸತ್ಯ ಘಟನೆ ಆಧಾರಿತ ಮೂವಿ. Irular ಎಂಬ ಬಹಳ ಅಮಾಯಕ ಪಂಗಡದ ಒಂದರ ಮೇಲೆ ಅಲ್ಲಿನ ಅಧಿಕಾರಿ ವರ್ಗ,ಸರ್ಕಾರ ಹಾಗೂ ಸುತ್ತಲಿನ ಸಮಾಜ ಮಾಡುವ ನಿರಂತರ ದಬ್ಬಾಳಿಕೆ,ಮೇಲು ಕೀಳು,ಜಾತಿ ತಾರತಮ್ಯ,ಅಸ್ಪೃಶ್ಯತೆ ಎಲ್ಲವೂ ಇಲ್ಲಿದೆ ಹಾಗೂ ಆ ಎಲ್ಲವನ್ನೂ ಇಲ್ಲಿ ಇಂಚು ಇಂಚು ತೋರಿಸಲಾಗಿದೆ.ಕೆಲವೊಂದು ದೃಶ್ಯಗಳು ಹೇಗಿದೆ ಎಂದರೆ ನಿಜಕ್ಕೂ ಜನರು ಇಷ್ಟೊಂದು ಅಮಾನವೀಯವಾಗಿ ಹೇಗೆ ವರ್ತಿಸಲು ಸಾಧ್ಯ ಎಂಬ ರೇಜಿಗೆಯನ್ನು ನೋಡುವವನಲ್ಲಿ ಹುಟ್ಟಿಸಿ ಬಿಡುತ್ತದೆ.ಇಲ್ಲಿರುವ ಜಾತಿ ತಾರತಮ್ಯವಂತು ನಿಜಕ್ಕೂ ಯಾರೇ ಆಗಲಿ ಸಹಿಸಿಕೊಳ್ಳಲು ಅಸಾಧ್ಯ.ನಿರ್ದೇಶಕ ತನ್ನ ಕಥೆಯಲ್ಲಿ ಏನು ಹೇಳಬೇಕು ಎಂದು ಹೊರಟ್ಟಿದ್ದಾನೋ ಅದನ್ನಂತು ಅಚ್ಚುಕಟ್ಟಾಗಿ ಬಹುಶಃ ಒಂದು ರೇಂಜಿಗೆ ಲೆಕ್ಕಕ್ಕಿಂತ ಜಾಸ್ತಿಯೇ ಹೇಳಿ ಮುಗಿಸಿದ್ದಾನೆ ಎಂದೇ ಅನಿಸುತ್ತದೆ.
ಇಂತಹ ಜಾತಿ ತಾರತಮ್ಯ ಆಧಾರಿತ ಹಲವು ಮೂವಿಗಳು ತಮಿಳಿನಲ್ಲಿಯೇ ಅದಾಗಲೇ ಬಂದು ಸೂಪರ್ ಹಿಟ್ ಕೂಡ ಆಗಿ ಹೋಗಿವೆ.ಅಸುರನ್,ಕರ್ನನ್, ಪೆರಿಯೆರುಮ್ ಪೆರುಮಾಳ್ ಗಳು ಒಂದಲ್ಲ ಒಂದು ರೀತಿಯಲ್ಲಿ ಇಂತಹದ್ದೇ ಮೂವಿಗಳು.ಅವುಗಳೆಲ್ಲವೂ ಅದರ ನಿರೂಪಣೆ ಶೈಲಿಯಿಂದಲೇ ಇಷ್ಟವಾಗಿತ್ತು.ಇದೂ ಕೂಡ ಇಷ್ಟವಾಯಿತು,ಬಹುಶಃ ನಿಮಗೂ ಇಷ್ಟವಾಗಬಹುದು.ಆದರೆ ನೀವು ಪೂರ್ವಾಗ್ರಹ ಪೀಡಿತರಾಗಿಯೇ ನೋಡುವಿರಿ ಎಂದಾದರೆ ಖಂಡಿತವಾಗಿಯೂ ಇದು ನಿಮಗೆ ಇಷ್ಟ ಆಗಲಿಕ್ಕಿಲ್ಲ ಹಾಗೂ ಇದು ನಿಮಗೆ ದಕ್ಕುವ ಮೂವಿಯೇ ಅಲ್ಲ!
ಈ ಕಥೆಯ ಮೂಲ ಸಾರ ಇರುವುದು ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಯಾವ ರೀತಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಹಾಗೂ ಎಂತಹ ದೊಡ್ಡ ಅಡೆ ತಡೆ ಎದುರಾದರೂ ಕಾನೂನನ್ನು ಬಳಸಿಕೊಂಡು ನೊಂದವರಿಗೆ ಸಮರ್ಥವಾಗಿ ನ್ಯಾಯ ದೊರಕಿಸಬಹುದು ಎಂಬುದೇ ಆಗಿದೆ.ಹಾಗಾಗಿ ಆ ದೃಷ್ಟಿಯಿಂದ ಇದು ನಿಜಕ್ಕೂ ಬಹಳಷ್ಟು 'ಜೈ ಭೀಮ್'. ನೋಡಿ ನಿಮಗೆ ಇಷ್ಟ ಆದರೂ ಆಗಬಹುದು.ಹೊಸ ಹೊಳಹುಗಳು ನಿಮಗೆ ಹೊಳೆದರೂ ಹೊಳೆಯಬಹುದು.
#Jai_Bhim | Prime
Tamil Movie
Legal Drama
Release - 2 November 2021
#Movies
Ab
Comments
Post a Comment