Mindhunter
#Mindhunter | Netflix
ಇದು ಸಂದರ್ಶನದ ಕಥೆ.
ಬರೀ ಒಂದೆರೆಡು ಸಂದರ್ಶನವಲ್ಲ.ಸಾಲು ಸಾಲಾಗಿ ಒಂದರ ನಂತರ ಒಂದೊಂದು ಸಂದರ್ಶನಗಳು ಇಲ್ಲಿವೆ.
ಸಿನಿಮಾ ತಾರೆಯರು,ಕ್ರೀಡಾಪಟುಗಳು,ರಾಜಕಾರಣಿಗಳು ಅಥವಾ ಯಾವುದೇ ರೀತಿಯ ದೊಡ್ಡ ಸೆಲೆಬ್ರಿಟಿಯ ಸಂದರ್ಶನ ಇಲ್ಲಿಲ್ಲ !
ಹಾಗಾದರೆ ಯಾರದ್ದು ಸಂದರ್ಶನ?
ಜೈಲಿನಲ್ಲಿ ಬಂಧಿಯಾಗಿರುವ ಸೀರಿಯಲ್ ಕಿಲ್ಲರ್,ಸೈಕೋಪಾಥ್,ರೇಪಿಸ್ಟ್ ಹಾಗೂ ಕೊಲೆಪಾತಕರ ಸಂದರ್ಶನ ಇಲ್ಲಿದೆ!
ಏತಕ್ಕಾಗಿ ಅವರ ಸಂದರ್ಶನ ..?
ಕೊಲೆಗಾರ ಕೊಲೆಯೊಂದನ್ನು ಹೇಗೆ ಮಾಡುತ್ತಾನೆ,ಏತಕ್ಕಾಗಿ ಆತ ಮತ್ತೆ ಮತ್ತೆ ಸಾಲು ಸಾಲು ಕೊಲೆಗಳನ್ನು ಮಾಡಲು ಮುಂದಾಗುತ್ತಾನೆ ಹಾಗೂ ಅದರಿಂದ ಅವನಿಗೆ ಸಿಗುವ ಆ ಪರಮ ಸುಖ ಆದರೂ ಎಂತಹದ್ದು ಎಂಬುದನ್ನು ತಿಳಿಯಲು ಇಲ್ಲಿ ಕೊಲೆಗಾರರ ಸಂದರ್ಶನವನ್ನು ನಿರಂತರವಾಗಿ ಮಾಡಲಾಗುತ್ತದೆ.
ಕೊಲೆಯಂತಹ ಘಟನೆಯ ಸಂದರ್ಭದಲ್ಲಿ ಯಾವುದೇ ಕೊಲೆಗಾರನ ಅದರಲ್ಲೂ ಒಬ್ಬ ಸೀರಿಯಲ್ ಕೊಲೆಗಾರನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಅರಿಯಲು FBI ಯ BSU(Behavioral Science Unit) ಈ ಒಂದು ಸಂದರ್ಶನ ಹಾಗೂ ಅದರ ಮೇಲೆ ಅಧ್ಯಯನ ಮಾಡಲು ಮುಂದಾಗುತ್ತದೆ.ಇದು 1970- 80 ರಲ್ಲಿ ಅಮೇರಿಕಾದಲ್ಲಿ ನಡೆಯುವಂತಹ ಘಟನಾವಳಿಗಳ ಕಥೆ.
ಇದೊಂದು ಸೈಕೋಲಾಜಿಕಲ್ ಕ್ರೈಮ್ ಥ್ರಿಲ್ಲರ್.ಆದರೆ ಆ ಒಂದು ನಿಜವಾದ ಥ್ರಿಲ್ ನಿಮ್ಮದಾಗಬೇಕಾದರೆ ನೀವು ಇಲ್ಲಿ ವ್ಯಯ ಮಾಡಬೇಕಾಗಿರುವುದು ನಿಮ್ಮ ಸಮಯವನ್ನು ಮಾತ್ರವಲ್ಲ ನಿಮ್ಮ ಸಹನೆಯನ್ನು ಕೂಡ ಇಲ್ಲಿ ಬಹಳಷ್ಟು ಹೊತ್ತು ಜತನದಿಂದ ಕಾಪಾಡಿಕೊಳ್ಳಬೇಕಾಗುತ್ತದೆ.ಬೋರ್ ಎಂದು ನಡುವಲ್ಲಿ ಕೈ ಬಿಟ್ಟರೆ,ಇಲ್ಲವೇ ಸಾಕು ಎಂದು ಆರಂಭದಲ್ಲಿಯೇ ಎದ್ದು ಬಂದರೆ ಖಂಡಿತವಾಗಿಯೂ ಆಗ ನೀವು ಒಂದೊಳ್ಳೆಯ ಸೀರಿಸ್ ಮಿಸ್ ಮಾಡಿಕೊಂಡಂತೆಯೇ ಸರಿ.
ಎರಡು ಸೀಸನ್ ಹಾಗೂ ಹೆಚ್ಚು ಕಡಿಮೆ ಒಂದು ಗಂಟೆಯ ಸುಮಾರು 19 ಎಪಿಸೋಡ್ ಇರುವ ಈ ಸೀರಿಸ್ ನ ಅಸಲಿ ಮಜಾ ಬರುವುದೇ ಸುಮಾರು ಹತ್ತು ಗಂಟೆಗಳ ನಂತರ ಅಂದರೆ ಹೆಚ್ಚು ಕಡಿಮೆ ಎರಡನೆಯ ಸೀಸನ್ ನಲ್ಲಿ! ಅಲ್ಲಿಯವರೆಗೆ ಕಾಯುವ ತಾಳ್ಮೆ ಹಾಗೂ ಆ ಒಂದು ವ್ಯವಧಾನ ನಿಮ್ಮಲ್ಲಿ ಇದ್ದರೆ ಈ ಒಂದು ಅಧ್ಭುತವಾದ ಸೀರಿಸ್ ನಿಜಕ್ಕೂ ನಿಮ್ಮದಾಗಿ ಬಿಡುತ್ತದೆ.
ಮೊದಲಿನ ಒಂದಿಷ್ಟು ಎಪಿಸೋಡ್ ಗಳು ಬೋರಿಂಗ್ ಅಂತ ಅನಿಸಿದರೂ ನಿಜವಾಗಿಯೂ ಅವುಗಳು ಕೂಡ ಬೋರಿಂಗ್ ಅಲ್ಲ.ಕ್ರಿಮಿನಲ್ ಸೈಕಾಲಜಿಯನ್ನು ನೋಡುಗನಿಗೆ ತಿಳಿಸುತ್ತಲೇ ಸೀರಿಯಲ್ ಕಿಲ್ಲರ್ ನಿಜಕ್ಕೂ ಹೇಗಿರುತ್ತಾರೆ,ಅವರ ಆ ಒಂದು ನಿರ್ಭಾವುಕ ಮತ್ತು ನಿರ್ಭಿತಿಯ ಮನಸ್ಥಿತಿ ಎಂತಹದ್ದು,ನಿಜಕ್ಕೂ ಕೊಲೆ ಮಾಡುವುದನ್ನು ಅವರು ಎಂಜಾಯ್ ಮಾಡುತ್ತಾರಾ,ಅವರ ಅಂತಹ ವಿಕೃತವಾದ ಮನಸ್ಥಿತಿಗೆ ಮೂಲ ಕಾರಣವಾದರೂ ಏನು ಎನ್ನುವುದನ್ನು ಕ್ಲಾಸ್ ರೂಮಿನಲ್ಲಿ ಮಕ್ಕಳಿಗೆ ಪಾಠ ಮಾಡಿದಂತೆ ಸಂದರ್ಶನಗಳ ಮೂಲಕ ನೋಡುಗನಿಗೆ ಹೇಳುತ್ತಲೇ ಜೊತೆ ಜೊತೆಗೆ ಕಥೆಯ ಪ್ರಮುಖ ಪಾತ್ರಗಳನ್ನು ಕೂಡ ನಿಧಾನವಾಗಿ ಬೆಳೆಸುತ್ತಾ ಪೋಷಿಸುತ್ತಾ ಕಥೆಗೆ ಬೇಕಾಗುವ ಪೂರಕ ಸೆಟ್ ಅಪ್ ಒಂದನ್ನು ಮೆಲ್ಲಗೆ ಕಟ್ಟಿಕೊಡುತ್ತಲೇ ಹೋಗುತ್ತವೆ ಈ ಆರಂಭದ ನಿಧಾನಗತಿಯ ಎಪಿಸೋಡ್ ಗಳು.ಹಾಗಾಗಿಯೇ ಕೊನೆಯ ಎಪಿಸೋಡ್ ಗಳು ಅಷ್ಟೊಂದು ಇಂಟೆನ್ಸಿವ್ ಅನಿಸುವುದು ಇಲ್ಲಿ.
ಆದರೂ ಇತರ ಥ್ರಿಲ್ಲರ್ ಕಥೆಗಳಂತೆ ಒಂದರ ನಂತರ ಒಂದು ಯಾವುದೇ ಟ್ವಿಸ್ಟ್ ಆಂಡ್ ಟರ್ನ್ ಏನೂ ಇರದ ಇದನ್ನು ಏತಕ್ಕಾಗಿ ನೋಡಬೇಕು? ಕೇವಲ ಕೊಲೆಗಾರರ ಸಂದರ್ಶನದ ಕಥೆ ಅಷ್ಟೇ ಇದರಲ್ಲಿರುವುದಾ..?
ಇಲ್ಲ.
ಇಲ್ಲಿ ಕೊಲೆಯೂ ಇದೆ...!
ಜೊತೆಗೆ ಕಣ್ಣಿಗೆ ಬೀಳದ ಒಬ್ಬ ಸೀರಿಯಲ್ ಕಿಲ್ಲರ್ ಕೂಡ ಇದ್ದಾನೆ..!!
ಅವನು ಇಲ್ಲಿ ಮಾಡುವ ಕೊಲೆ ಆದರೂ ಯಾರದ್ದು ?
ಮಕ್ಕಳದ್ದು..!
ಒಂದಲ್ಲ ಎರಡಲ್ಲ ಬರೋಬ್ಬರಿ 29 ಮಕ್ಕಳ ಕೊಲೆಯೇ ಇಲ್ಲಿ ನಡೆದು ಬಿಡುತ್ತದೆ!!!
Joe Penhall,David Fincher ನ ಈ ಸೀರಿಸ್ ನಲ್ಲಿ Jonathan Groff, Holt McCallany, Cotter Smith, Anna Torv ಮುಂತಾದವರ ಸೊಗಸಾದ ಅಭಿನಯವಿದೆ.
ನೋಡಿ,ನಿಮಗೆ ಇಷ್ಟ ಆದರೂ ಆಗಬಹುದು.ಮಾಮೂಲಿ ಥ್ರಿಲ್ಲರ್ ಗಿಂತ ವಿಭಿನ್ನವಾದ ಸ್ಟೋರಿ ಲೈನ್ ಹಾಗೂ ಮೊದಲಾರ್ಧದಲ್ಲಿ ತುಂಬಾನೇ ಸ್ಲೋ ಪೇಸ್ ನಲ್ಲಿ ಸಾಗುವ ಕಾರಣದಿಂದಾಗಿ ಕಥೆಯೊಂದಿಗೆ ಸಿಂಕ್ರೊನೈಸ್ ಆಗಲು ಸ್ವಲ್ಪ ಹೊತ್ತು ಅವಶ್ಯವಾಗಿ ಇದು ತೆಗೆದುಕೊಳ್ಳಬಹುದು ನಿಜ ಆದರೆ ಆ ನಂತರ ಅದುವೇ ನಿಮ್ಮನ್ನು ಕೈ ಹಿಡಿದು ನಡೆಸಿಕೊಂಡು ನಿಮಗೆ ಕಥೆ ಹೇಳುತ್ತಾ,ಕುತೂಹಲವನ್ನು ಅರಳಿಸುತ್ತಾ ಹೋಗುತ್ತದೆ.ಇಲ್ಲಿ ಎಲ್ಲಾ ನಟರ ನಟನೆಯೂ ಇಷ್ಟವಾಗುತ್ತದೆ.ಸಂಭಾಷಣೆ ಹಾಗೂ ಕೆಲವೊಂದು ಕಡೆ ಬ್ಯಾಕ್ಗ್ರೌಂಡ್ ಸ್ಕೋರ್ ಕೂಡ ತುಂಬಾ ಚೆನ್ನಾಗಿದೆ.
ಹೌದು ಎಂದಿನಂತೆ ಇದು ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ ಆದರೆ ನಿಧಾನಕ್ಕೆ ಕಥೆಯ ಒಳಕ್ಕೆ ನೋಡುಗನನ್ನು ಎಳೆದುಕೊಳ್ಳುವ, ಸೆಳೆದುಕೊಳ್ಳುವ ಇದು ನಿಜಕ್ಕೂ ಸೈಕೋಲಾಜಿಕಲ್ ಥ್ರಿಲ್ಲರ್ ಒಂದನ್ನೇ ಅತಿಯಾಗಿ ಇಷ್ಟಪಡುವವರ ಪಾಲಿನ ಒನ್ ಆಫ್ ದಿ ಮಾಸ್ಟರ್ ಪೀಸ್ ಸಿರೀಸ್ ಎಂದು ಹೇಳಲು ಕೂಡ ಅಡ್ಡಿಯಿಲ್ಲ.ಅಂದ ಹಾಗೆ ಮುಂದೆ ಇದರ ಸೀಸನ್-3 ಬಂದರೂ ಬರಬಹುದು.ನನಗಂತು ಅದರದ್ದೊಂದು ನಿರೀಕ್ಷೆ ಮಾತ್ರ ಅಪಾರವಾಗಿಯೇ ಇದೆ.
#Mindhunter | Netflix
English Series
Psychological Crime Thriller
Release - 2017,2019
Series
ab pacchu
Comments
Post a Comment