ಬಹಳಷ್ಟು ತಂಪಿನ 'ಬಿಸಿಲೆ ಘಾಟ್'




"ಬಹುಶಃ ಅದು ಉಜಿರೆ ಇರಬೇಕು.." ಎಂದರೆ ತಪ್ಪಾದೀತು.ಅದು ಉಜಿರೆಯೇ.ಅಲ್ಲೇ ಒಂದು ಹೋಟೆಲಿನಲ್ಲಿ ಮುಂಜಾನೆಯ 6 ಗಂಟೆಯ ತಿಂಡಿಗೆಂದು ನಾವೆಲ್ಲರೂ ಕುಳಿತುಕೊಂಡೆವು. 


ವಿಶೇಷವಾಗಿ ಏನನ್ನೂ ತಿನ್ನಲಿಲ್ಲ.ಏಕೆಂದರೆ ಆ ಹೋಟೆಲಿನಲ್ಲಿ  ಕೇಳಿದರೆ ಎಲ್ಲವೂ ಸಿಗುತ್ತದೆ,ಕೇಳದಿದ್ದರೆ ಏನೂ ಸಿಗುವುದಿಲ್ಲ ಅನ್ನುವುದೇ ಅತೀ ದೊಡ್ಡ ವಿಶೇಷವಾಗಿತ್ತು.ಅವರಿಗೂ ನಮಗೇನು ಬೇಕು ಎಂದು ಕೇಳುವ ಅಕ್ಕರೆಯೂ ಇರಲಿಲ್ಲ,ಆಸ್ಥೆಯೂ ಇರಲಿಲ್ಲ.ಆಸಕ್ತಿ ಕೂಡ ಇರಲಿಲ್ಲ ಎನ್ನುವುದೇ ನನಗೆ ಇನ್ನೂ ಹೆಚ್ಚಿನ ಆಸಕ್ತಿಯನ್ನು ಉಂಟು ಮಾಡಿತ್ತು.


ಯಾವುದೇ ಹೊಟೇಲಿನ ಗಲ್ಲಾ ಪೆಟ್ಟಿಗೆಯೊಂದು ನಿರಂತರವಾಗಿ ತುಂಬಿ ತುಳುಕುತ್ತಿದ್ದರೆ ಆ ಕ್ಷಣದಿಂದಲೇ ಅಲ್ಲಿ ದಿವ್ಯ ನಿರ್ಲಕ್ಷ್ಯವೊಂದು ಥಕ ಥೈ ಎಂದು ಗೆಜ್ಜೆ ಕಟ್ಟಿ ಕುಣಿಯಲು ಶುರು ಮಾಡುತ್ತದೆಂದು ಅನ್ನಿಸಿದ್ದು ಮಾತ್ರ ಸುಳ್ಳಲ್ಲ."ಅದು ಉಂಟು.. ಇದು ಉಂಟು.." ಎಂದು ಮೆನುವಿನ ಲಿಸ್ಟ್ ಕೂಡ ಅಲ್ಲಿ ಯಾರೂ ಉದ್ದಕ್ಕೆ ಸರಾಗವಾಗಿ ಓದಿ ಹೇಳಲಿಲ್ಲ."ಅದು ಇಲ್ಲ.. ಇದು ಇಲ್ಲ.. ನಿನ್ನೆ ಇತ್ತು..ಇವತ್ತು ಮಾಡಲಿಲ್ಲ.. ಅದಾ.. ಅದು ನಾವು ಗುರುವಾರ,ಶನಿವಾರ ಮಾತ್ರ ಮಾಡುವುದು.." ಎನ್ನುವ ಕಾಣೆಯಾದ ತಿಂಡಿಗಳ ಪಟ್ಟಿಯನ್ನು ಕೂಡ ಅವರಾರು ನಮಗೆ ವರದಿ ಒಪ್ಪಿಸುವಂತೆ ಒಪ್ಪಿಸಲಿಲ್ಲ.


ಆದರೂ ಅದು ಸೆಲ್ಫ್ ಸರ್ವಿಸ್ ಹೋಟೆಲ್ ಅಲ್ಲ.ಬೇಕಾದರೆ ಕೇಳಿ ತಿನ್ನಿ,ಇಲ್ಲದಿದ್ದರೆ ರಾತ್ರಿ ಹೋಟೆಲಿನ ಶಟರ್ ಬಾಗಿಲು  ಎಳೆಯುವವರೆಗೂ ಇಲ್ಲೇ ಕುಳಿತಲ್ಲೇ ಕುಳಿತುಕೊಂಡಿರಿ ಎನ್ನುವ ಭಾವ ಬರುವಂತೆ ಮಾಡುವ ಆ ಹೋಟೆಲ್ ನಲ್ಲಿ ನಿಜ ಹೇಳಬೇಕೆಂದರೆ ಎಲ್ಲವೂ ಇತ್ತು.'ನೀವಾಗಿ ಕೇಳದಿದ್ದರೆ ನಾವಾಗಿ ಏನನ್ನೂ ಕೊಡಲ್ಲ' ಎಂಬ ಧ್ಯೇಯ ವಾಕ್ಯದ ಆ ಹೋಟೆಲ್ ನಲ್ಲಿ ನಾವು ತಿಂದದ್ದು ಕೊನೆಗೆ ಒಂದೆರಡು ಪ್ಲೇಟು ಬಿಸಿಯಾದ ಬನ್ಸ್. ಚಟ್ನಿಯನ್ನು ಕೊಟ್ಟಿದ್ದರು,ಸಾಂಬಾರ್ ಅನ್ನು ಒಕ್ಕೊರಲಿನಿಂದ ಎಲ್ಲರೂ ಕೇಳಿಯೇ ಪಡೆದಿದ್ದೆವು.


ಚಟ್ನಿ ಕೊಟ್ಟರೆ ಸಾಂಬಾರ್ ಕೂಡ ಕೊಡಬೇಕು,ಸಾಂಬಾರ್ ಕೊಟ್ಟರೆ ಚಟ್ನಿ ಕೂಡ ಕೊಡಲೇ ಬೇಕು ಎನ್ನುವ  ಕಾನೂನೇನು ಇನ್ನೂ ಜಾರಿಗೆ ಬಂದಿಲ್ಲ.ಆದರೆ ನನ್ನದೊಂದು ಅದರ ಬಗ್ಗೆ ಎಂದಿಗೂ ಮುಗಿಯದ ಬೇಡಿಕೆ;ಅದಕ್ಕಾಗಿಯೇ ನಿಲ್ಲದ ಚಡಪಡಿಕೆ.ನೀರು ಚಟ್ನಿ ಕೊಟ್ಟರೆ ಕೆಲವೊಮ್ಮೆ ಗಟ್ಟಿ ಚಟ್ನಿ ಕೂಡ ಕೊಡಿ ಎಂದು ಕುಟ್ಟಿ ಕುಟ್ಟಿಯೇ ಕೇಳುತ್ತೇನೆ.ನನ್ನನ್ನೇ ಸಫ್ಲೈರ್ ಒಂದೆರಡು ಸಲ ಮೇಲೆ ಕೆಳಗೆ ನೋಡಿದರೆ ಅವನು ಮನಸ್ಸಿನೊಳಗೆಯೇ ನನಗೇನು ಬೈದಿರಬಹುದು,ಎಷ್ಟು ಬೈದಿರಬಹುದು ಎಂದು ಬಹಳ ಸ್ಪಷ್ಟವಾಗಿಯೇ ಊಹಿಸಬಲ್ಲೆ ನಾನು;ಇದೆಲ್ಲಾ ನಿರಂತರ ಅನುಭವಗಳಿಂದ ಕಲಿಯಬಹುದಾದ ದಿವ್ಯ ವಿದ್ಯೆಗಳು. 


ಹೊರಟಿದ್ದು ಬಿಸಿಲೆ ಘಾಟ್ ಗೆ.ಕೋಳಿ ಕೂಗುವ ಮೊದಲೇ ನಾವೆಲ್ಲರೂ ಮನೆ ಬಿಟ್ಟು ಆಗಿತ್ತು.ಊರಲ್ಲಿ ಕೋಳಿ ಇದೆ. ಹಾಗಾಗಿ ಕೂಗುತ್ತದೆ.ಆದರೂ ಈ ಮೊಬೈಲ್ ಅಲರಾಂ ಬಂದ ಮೇಲೆ ಈ ಕೂಳಿ ಕೂಗಿಗೆ ಬೇಡಿಕೆ ಬಹಳಷ್ಟು ಕಡಿಮೆಯೇ  ಬಿಡಿ.ಒಂದಾನೊಂದು ಕಾಲದಲ್ಲಿ ಕೋಳಿಯೇ ಕೂಗಿ ಜನರನ್ನು ಎಬ್ಬಿಸುತ್ತಿತ್ತು ಎಂದು  ಹೇಳಿದರೆ ಮುಂದಿನ ಪೀಳಿಗೆಯ ಮಕ್ಕಳು ಇವರು ಬಹಳ ಚೆನ್ನಾಗಿ ಕಾಗೆ ಹಾರಿಸುತ್ತಾರೆ ಎಂದೇ ತಿಳಿಯುತ್ತಾರೆಯೇ ಹೊರತು ಬೇರೆನೂ ಅಲ್ಲ.



ನಮ್ಮ ಜಿಲ್ಲೆಯಿಂದ ಸ್ವಲ್ಪ ಮುಂದಕ್ಕೆ,ಹಾಸನ ಜಿಲ್ಲೆಯ ಕೇಂದ್ರದಿಂದ ಬಹಳಷ್ಟು ಹಿಂದಕ್ಕೆ,ಸುಬ್ರಹ್ಮಣ್ಯದ ಅಂಚಿಗೆ, ಗಡಿ ಭಾಗದ ಸಕಲೇಶಪುರ ತಾಲೂಕಿನಲ್ಲಿ ಈ ಬಿಸಿಲೆ ಇದೆ. ಬೆಟ್ಟ ಗುಡ್ಡಗಳು ನನಗೇನೂ ಹೊಸದಲ್ಲ.ಆದರೂ ಹೊಸ ಬೆಟ್ಟ, ಹೊಸ ಕಣಿವೆ,ಹಾಯೆನಿಸುವ ಗಾಳಿ,ಕೆನೆಯಂತಹ ಮಂಜು,ಚಲಿಸುವ ಮೋಡ,ಗೂಡಂಗಡಿಯ ಬಿಸಿ ಬಿಸಿ ಚಹಾ,ಇದ್ದರೆ ಬೇಕು ಬೆಚ್ಚಗಿನ ಗೋಳಿಬಜೆ,ಸಾಗಲು ಅಂಕು ಡೊಂಕಿನ ಕಾಡು ದಾರಿ,ಪಕ್ಕದಲ್ಲೇ ಹೊಳೆ ಹರಿಯುವ ಹಾದಿ,ಮರಗಳ ನಡುವೆ ತೂರಿ ಬರುವ ಬಿಸಿಲು ಕೋಲಿನ  ಬೀಮು,ಬಹು ದೂರ ಸಾಗಲು ಒಂದಿಷ್ಟು ಬೈಕು,ಬೈಕಿಗೆರೆಡು ಮಂದಿ ಇದ್ದು ಬಿಟ್ಟರೆ ಯಾರೇ ಕರೆದರೂ ನಾನು ಪಕ್ಕನೇ ನೋ ಎಂದು ಹೇಳಲಾರೆ.


ನಾನು ಕರೆದರೂ ಬರುವುದಿಲ್ಲ ಅನ್ನುವ ಕಂಪ್ಲೈಂಟ್ ಕೂಡ ಉಂಟು.ಆದರೆ ನನಗೆ ಒಬ್ಬನೇ ಎಲ್ಲಿಗಾದರೂ ಹೋಗಿ,ಬಹಳಷ್ಟು ಹೊತ್ತು ಹಾಗೇ ಕಳೆದು ಹೋಗಿ,ಮತ್ತೆ ಗೂಡಿಗೆ ಮರಳುವ ಸುಖದ ರುಚಿ ಕೂಡ ಬಹಳಷ್ಟು ಹತ್ತಿದೆ.ಹಾಗಾಗಿ ಸ್ನೇಹಿತರ ಕೆಲವು ಬುಲಾವ್ ಗಳಿಗೆ ನನ್ನದು ಸದಾ ಯೆಸ್,ಇನ್ನು ಕೆಲವುಗಳಿಗೆ ಒಲ್ಲದ ಮನಸ್ಸಿನಿಂದಲೇ  ನೋ.ಜಾಸ್ತಿ ಒತ್ತಾಯ ಮಾಡಿದರೆ ನೋ ಕೂಡ ಯೆಸ್ ಆಗಿ ಬದಲಾಗಿದ್ದು ಉಂಟು.ನಾನು ಹಾಗೆಯೇ,ಹೀಗೆಯೇ ಅಂತ ನನಗೇನೂ ಬೌಂಡರಿಗಳಿಲ್ಲ;ಹಾಕಿಕೊಂಡಿಲ್ಲ.ಹಾಗಾದರೆ ಹಾಗೇ,ಹೀಗಾದರೆ ಹೀಗೆ,ಮನಸ್ಸಾದರೆ ಮನಸ್ಸೋಯಿಚ್ಛೆ ಜೈ ಎನ್ನುವುದಷ್ಟೇ ಸದ್ಯದ ನನ್ನ ಪಾಲಿಸಿ. 


ಏನೇ ಹೇಳಿ ಉಜಿರೆಯ ಬನ್ಸ್ ಮಾತ್ರ ಚೆನ್ನಾಗಿತ್ತು.ಕೇಳಿದರೆ ಅಲ್ಲಿ ಒಳ್ಳೆಯ ಮಾಲ್ಟ್ ಕೂಡ ಸಿಗುತ್ತದೆಯಂತೆ.ನಾವು ಕೇಳಲಿಲ್ಲ.ಅವರು ಅದು ಉಂಟು ಎಂದು ಕೂಡ ಹೇಳಲಿಲ್ಲ.ಬಿಸಿ ಚಹಾ ಕುಡಿದೇ ಬಿಸಿಲೆಯ ಕಡೆಗೆ ಹೊರಟೆವು;ಮೂರು ಬೈಕು,ಆರು ಮಂದಿ.


ಬಿಸಿಲೆಯಲ್ಲಿ ಬಿಸಿಲೂ ಇದೆ,ತಂಪೂ ಇದೆ. ಒಟ್ಟಿನಲ್ಲಿ ಬಿಸಿಲೆ ಚೆನ್ನಾಗಿದೆ.ಇಡೀ ದಿನ ಅಲ್ಲೇ ಕುಳಿತುಕೊಳ್ಳುವ ಎನ್ನುವಷ್ಟು ಅದು ಹಿತವಾಗಿದೆ.ಗೆಳತಿ ಪಕ್ಕದಲ್ಲಿ ಇದ್ದರೂ,ಇರದಿದ್ದರೂ ಬಿಸಿಲೆಯಿಂದ ಎದುರಿಗೆ ಕಾಣುವ ಬೆಟ್ಟಗಳೇ ಎಲ್ಲದಕ್ಕಿಂತಲೂ, ಎಲ್ಲರಿಗಿಂತಲೂ ಅತೀ ಸುಂದರ.ಓಡುವ ಮೋಡಕ್ಕೆ ಇಲ್ಲಿ ಯಾವುದೇ ಧಾವಂತವಿಲ್ಲ.ಉಜಿರೆಯ ಹೋಟೆಲ್ ನಂತೆಯೇ ಅದು ಬಹಳಷ್ಟು ನಿಧಾನ.ಬೆಟ್ಟಗಳನ್ನು ಅದು ಬಹುವಾಗಿ ಪ್ರೀತಿಸುತ್ತದೋ ಅಥವಾ ಬೆಟ್ಟಗಳು ಮೋಡಗಳನ್ನು ಅತಿಯಾಗಿ ಬಯಸುತ್ತದೆಯೋ ಅದು ಗೊತ್ತಿಲ್ಲ,ಆದರೆ ಅವುಗಳೆರಡು ಜೊತೆಯಾಗಿ ಇದ್ದರೆ ನೋಡುವ ಕಣ್ಣಿಗೆ ಅದೇನೋ ಒಂಥರಾ ಸಮಾಧಾನ.ಆಕಾಶದಲ್ಲಿ ಮೋಡಗಳು ಒಂದೆಡೆ ಸಂತೆ ಸೇರಿ ಬಿಟ್ಟರೆ ಬಿಸಿಲೆಯ ಕಣಿವೆಯ ಒಂದಷ್ಟು ಜಾಗದಲ್ಲಷ್ಟೇ ಮನೆ ಮಾಡುವ ಕತ್ತಲೆ,ಆ ನಂತರ ಉಳಿದ ಕಡೆ ಮತ್ತೆ ಮುಂದುವರಿಯುವ ಆ ಒಂದು ನೆರಳು ಬೆಳಕಿನ ಆಟ ಗಮನಿಸುತ್ತಾ ಕುಳಿತರಷ್ಟೇ ನಮ್ಮ ಅನುಭವಕ್ಕೆ ಬರುವುದು ಹಾಗೂ ಮನಸ್ಸಿನಲ್ಲಿಯೂ ದಾಖಲಾಗುವುದು.ಮೇಲಿನ ಗಾಳಿಯಲ್ಲಿ ಸ್ತಬ್ಧವಾಗಿ ಅದೆಷ್ಟೋ ಹೊತ್ತು ರೆಕ್ಕೆ ಚಾಚಿ ನಿಂತುಕೊಳ್ಳುವ ಗಿಡುಗ,ಒಮ್ಮಿಂದೊಮ್ಮೆಲೇ ರಪ್ಪನೇ ಕೆಳಗಿನ ಕಣಿವೆಗೆ ಧುಮುಕಿ ಹಿಡಿದದ್ದು ಏನು?.ಹಾವೋ..ಮೀನೋ..ಅದು ಗೊತ್ತಿಲ್ಲ.ಗಿಡುಗ ಅಲ್ಲವೇ ಹಾಗಾಗಿ ಬೇಟೆ ಯಶಸ್ವಿಯಾಗಿರಬಹುದು ಎಂದು ಅನಿಸಿದರೆ ತಪ್ಪೇನೂ ಇಲ್ಲ.ಇದು ಕಾಡು,ಒಂದು ಬದುಕಬೇಕಾದರೆ ಮತ್ತೊಂದು  ಸಾಯಲೇ ಬೇಕು.ಇದು ಕಾಡಿನ ನಿಯಮ.



ಆಳದಲ್ಲಿ ಒಂದು ಬಳುಕುವ ಹೊಳೆ ಇದೆ.ಅದರ ಮೈ ತುಂಬಾ ಚೆನ್ನಾಗಿ ಕಾಸಿದ ಹಾಲಿನದ್ದೇ ನೊರೆ.ಬೆಟ್ಟದ ಮೇಲಿನಿಂದಲೇ ಬಹಳ ಸ್ಪಷ್ಟವಾಗಿ ಕಾಣುತ್ತದೆ ಅದು. ಅದರ ಹೆಸರು ಗೊತ್ತಿಲ್ಲ.ಹೆಸರು ಖಂಡಿತವಾಗಿಯೂ ಇರಬಹುದು.ಹಸಿರು ಕಾಡಿನ ಆಳದಲ್ಲಿ ಬೆಳ್ಳಿ ಗೆರೆಯಂತೆ  ಹರಿಯುವ ಆ ಹೊಳೆ, ಬಿಸಿಲೆಯ ಎತ್ತರದ  ಬೆಟ್ಟಗಳಂತೆಯೇ,ಅವುಗಳ ಇಕ್ಕೆಲಗಳಿಂದ ಹಾದು ಬರುವ ತಂಪು ಗಾಳಿಯಂತೆಯೇ ಬಹಳಷ್ಟು ದಿನ ನೆನಪಿನಲ್ಲಿ ಇರುತ್ತದೆ. 



ಬಿಸಿಲೆಯಿಂದ ಸ್ವಲ್ಪ ಮುಂದಕ್ಕೆ ಹೋದರೆ "ರಿಡ್ಜ್ ಪಾಯಿಂಟ್ " ಅಂತ ಒಂದಿದೆ.ಅಲ್ಲಿ ಕೆರೆ ಪಕ್ಕದ ಬೆಟ್ಟದ ಬುಡದ ಏರಿಯ ಮೇಲೆ ಒಂದು ಕಲ್ಲು ನೆಟ್ಟಿದ್ದಾರೆ.ಅದರಲ್ಲಿ ಒಂದು ಕಡೆ "Arabian Sea" ಮತ್ತೊಂದು ಕಡೆ "Bay of Bengal" ಎಂದು ಕೂಡ  ಕೆತ್ತಿದ್ದಾರೆ.ಹೌದು ಬೆಟ್ಟದ ಮೇಲೆ ಕಡಲುಗಳ ಹೆಸರು.ಎರಡೂ ಕಡಲುಗಳನ್ನು ಒಟ್ಟೊಟ್ಟಿಗೆ ಪೋಟೋ ಸೆಷನ್ ಗಾಗಿ ನಿಲ್ಲಿಸಿದಂತೆ ಕಾಣುತ್ತದೆ.ಈ ರಿಡ್ಜ್ ಪಾಯಿಂಟ್ ನ ಏರಿಯ ಒಂದು ಬದಿ ಬಿದ್ದ ಮಳೆಯ ನೀರು ಕೆಳಗೆ ಹರಿದು ಅರಬ್ಬಿ ಸಮುದ್ರ ಸೇರಿದರೆ ಮತ್ತೊಂದು ಕಡೆಗೆ ಬಿದ್ದ ನೀರು ಕೆಳಗೆ ಹರಿದು ಬಂಗಾಳ ಕೊಲ್ಲಿ ಸೇರುತ್ತದೆಯಂತೆ.ಇಲ್ಲ,ಇದನ್ನೆಲ್ಲಾ ನಾನು ನಂಬುವುದಿಲ್ಲ,ಖಚಿತ ಪಡಿಸಿಕೊಳ್ಳಲು ನೀರಿನ ಹಿಂದೆ ಹಿಂದೆಯೇ ಹೋಗುತ್ತೇನೆ, ಅದು ಎಲ್ಲಿಗೆ ಹೋಗಿ ಸೇರುತ್ತದೆ ಎಂದು ನೋಡುತ್ತೇನೆಂದು ನಿಮಗೆ ಅನಿಸಿದರೆ ಧಾರಾಳವಾಗಿ ನೀವು ಆ ಕೆಲಸ ಕೂಡ  ಮಾಡಬಹುದು.ಜೋರು ಮಳೆ ಹೊಡೆಯುವ ಮಳೆಗಾಲದಲ್ಲಿಯೇ ಕಣಿವೆಗೆ ಇಳಿದು, ಮುಂದೆ ಯಾವುದಾದರೂ ಹೊಳೆ ಸಿಕ್ಕಿದ ನಂತರ ತೆಪ್ಪ ಮಾಡಿಕೊಂಡು ಕಡಲು ಕೂಡ ಸೇರಿ ಕೊಳ್ಳಬಹುದು;ಆಸಕ್ತಿ ಇದ್ದವರು, ಸಮಯವಿದ್ದವರು ಇಂತಹದ್ದೊಂದು ಸಾಹಸಕ್ಕೆ ಕೈ ಕೂಡ  ಹಾಕಬಹುದು!.ನಂಬುವವರಿಗೆ ಎಂದಿನಂತೆ ಎಲ್ಲದರಲ್ಲೂ ಸದಾ ನೆಮ್ಮದಿಯೇ.ಅಂದ ಹಾಗೆ ನದಿ ಮೂಲ ಹುಡುಕುವುದು ಹೇಗೆ ಕಷ್ಟವೋ,ನದಿ ಜಾಡು ಹಿಡಿದು ನಡೆಯುವುದು ಕೂಡ ಬಹಳಷ್ಟು ಕಷ್ಟವೇ!


ಅಲ್ಲಿಯೇ ಬೆಳ್ಳಕ್ಕಿಗಳು ಕೆರೆ ದಂಡೆಯ ಮೇಲೆ ಕುಳಿತುಕೊಂಡು ಜನರಲ್ ಬಾಡಿ ಮೀಟಿಂಗ್ ಮಾಡುತ್ತಿದ್ದವು.ತಾವು ಈ ವಾರ ಎಷ್ಟು ಮೀನು ಹಿಡಿದು ಭಕ್ಷಿಸಿದ್ದೇವೆ,ಕೆರೆಯಲ್ಲಿ ಇನ್ನು ಎಷ್ಟು ಮೀನು ಉಳಿದಿವೆ,ಬೇಸಿಗೆ ಬಂದಾಗ ನಮ್ಮ ಕಥೆ ಎಂತ.. ಎಂದು ತಮ್ಮ ಗ್ಯಾಂಗ್ ಲೀಡರ್ ಗೆ ಗಂಭೀರವಾಗಿ ವರದಿ ಒಪ್ಪಿಸುವಂತೆ ಅವುಗಳು ಕಂಡವು.ಎಲ್ಲಾ ಬೆಳ್ಳಕ್ಕಿಗಳು ತಮ್ಮ ಮೈ ಮೇಲೆ ಒಂಚೂರು ಬೇರೆ ಬಣ್ಣದ ಕಲೆ ಇರದಂತೆ,ಬಹಳ ಅಂದವಾಗಿ ಚಂದವಾಗಿ ಟಾಲ್ಕಂ ಪೌಡರ್ ಸುರಿದುಕೊಂಡಂತೆ ಮೀಟಿಂಗ್ ನಲ್ಲಿ ಭಾಗವಹಿಸಿ ಸಭೆಯ ಗೌರವವನ್ನು ಹೆಚ್ಚಿಸಿದ್ದವು.ಎಲ್ಲರೂ ಸೇರಿ ಒಮ್ಮತದ ಯಾವ ನಿರ್ಧಾರಕ್ಕೆ ಬಂದರು ಎನ್ನುವುದು ಆ ಕಾಡಿನಲ್ಲಿ ಎಲ್ಲಿಯೂ ಬಹಿರಂಗವಾಗಲಿಲ್ಲ,ಅದು ಆಗುವುದೂ ಇಲ್ಲ. 


ಮುಂದೆ ಹೋಗುವುದಾದರೆ ಹಲವು ಬೆಟ್ಟಗಳು,ಜಲಪಾತಗಳು ನಮ್ಮ ಮುಂದೆಯೇ ಇದ್ದವು. ಎಲ್ಲವನ್ನೂ ಇವತ್ತೇ ನೋಡಿ ನಾವುಗಳು ಖಾಲಿಯಾಗುವುದು ಬೇಡ,ಮುಂದಿನ ದಿನಗಳಿಗೆ ಒಂದಿಷ್ಟು ಬೆಟ್ಟಗಳು ಇರಲಿ ಎಂದು ಎಲ್ಲರಿಗೂ ಅನಿಸಿತು."ಹೀಗೆಯೇ ಎಲ್ಲರೂ ನಾವು ಸೇರಬೇಕು.. ಮುಂದೆಯೂ ನಿರಂತರವಾಗಿ ತಿರುಗುತ್ತಲೇ ಇರಬೇಕು.." ಎಂದು ಎಲ್ಲರೂ ಸೇರಿ ಒಟ್ಟಿಗೆ ಘೋರವಾದ ಪ್ರತಿಜ್ಞೆ ಮಾಡಿದೆವು.ನಾನು ಮನಸ್ಸಿನಲ್ಲಿಯೇ ನಕ್ಕೆ.ಕಾರಣ ಎಷ್ಟೋ ಈ ಹಿಂದಿನ ಉಗ್ರ ಪ್ರತಿಜ್ಞೆಗಳು ಮುರಿದು ಮಣ್ಣು ಪಾಲಾಗಿ ಫಲ್ಗುಣಿಯನ್ನು  ಸೇರಿದ್ದು ನೆನಪಾಗಿತ್ತು.


ಗಾಡಿ ಹಿಡಿದು ಮನೆಗೆ ಹೊರಟೆವು.ಮುಂದೊಂದು ದಿನ ಇನ್ನೊಂದು ಬೆಟ್ಟ,ಇನ್ನೊಂದು ಜಲಪಾತ,ಹೊಸ ಕಣಿವೆ,ತಂಪು ಗಾಳಿ ಇದೇ ರೀತಿ ಮತ್ತೊಮ್ಮೆ ಮಗದೊಮ್ಮೆ ಬೇಕಾದರೆ ಈ  ಪ್ರತಿಜ್ಞೆಗಳನ್ನು ನಾನೂ ಕೂಡ ಮುರಿಯಲು ಬಿಡಬಾರದು ಎಂದು ಬಹುವಾಗಿಯೇ ಅನಿಸಿದ್ದು ಮಾತ್ರ ನಿಜ.ಓದು ಹಾಗೂ ತಿರುಗಾಟ ಆವಾಗವಾಗ ಬಹಳಷ್ಟು ಆಗದಿದ್ದರೂ ಇಷ್ಟಿಷ್ಟು ಆದರೂ  ಬೇಕು.ಮನಸ್ಸು ಆವಾಗಲೇ ಒಂಚೂರಾದರೂ ಸಡಿಲವಾಗುವುದು,ಪ್ರಪುಲ್ಲವಾಗುವುದು.ಜೀವನದಲ್ಲಿ ಮೈ-ಮನಸ್ಸು ಸಡಿಲಗೊಳಿಸುವುದು ಅತೀ ಅವಶ್ಯಕ.ಬರೀ ರಿಜಿಡ್ ಆಗಿ ಬಿಟ್ಟರೆ ನಾವುಗಳು ಕೂಡ ಕೊನೆ ಕೊನೆಯಲ್ಲಿ ಯಂತ್ರವೇ ಆಗಿ ಬಿಡುತ್ತೇವೆ. 


ಸಂಜೆ ಮತ್ತೆ ಉಜಿರೆಯ ಸಮೀಪ ಬಂದಾಗ ಮಸಾಲೆ ದೋಸೆ ಮುರಿಯುವ ಮನಸ್ಸು ಕೂಡ ಆಯಿತು,ಜೊತೆಗೆ "ನೀವಾಗಿ ಕೇಳದಿದ್ದರೆ,ನಾವಾಗಿ ಏನನ್ನೂ ಕೊಡಲ್ಲ" ಎಂಬ ಆ ಹೋಟೆಲ್ ಕೂಡ ನೆನಪಾಯಿತು.ಅಲ್ಲಿಗೆ ಹೋಗಿ ಮಸಾಲೆ ದೋಸೆ ಆರ್ಡರ್ ಮಾಡಿ ಬಿಟ್ಟರೆ "ನಿಮ್ಮಲ್ಲಿ ಮಸಾಲೆ ದೋಸೆ ಜೊತೆಗೆ ಚಟ್ನಿ  ಬರುತ್ತದೆಯೇ? ಬಾಜಿ ಕೂಡ  ಬರುತ್ತದೆಯೇ? ಸಾಂಬಾರ್ ಸಹ  ಬರುತ್ತದೆಯೇ.." ಎಂದು ನಾವೇ ಪ್ರತ್ಯೇಕ ಪ್ರತ್ಯೇಕವಾಗಿ ಕೇಳಿ, ಎಲ್ಲವನ್ನೂ ಒಟ್ಟುಗೂಡಿಸಿ ತಿನ್ನಬೇಕಾದ ಪ್ರಸಂಗ ಬರಬಹುದೋ ಏನೋ ಎಂದೇ ಬಲವಾಗಿ ಅನ್ನಿಸತೊಡಗಿತ್ತು. 


#ವಿಷಯ_ಎಂತ_ಗೊತ್ತುಂಟಾ..


Ab Pacchu

Moodubidire

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..