ಕಥಾ ಸಂಗಮ
#ಕಥಾ_ಸಂಗಮ | Prime
ಇದೊಂದು ಆಂಥೋಲಜಿ ಫಿಲ್ಮ್.ಒಟ್ಟು ಏಳು ಕಥೆಗಳ ಕಥಾ ಸಂಕಲನ ಈ ಮೂವಿಯಲ್ಲಿದೆ.ಎಲ್ಲವೂ ಸಣ್ಣ ಸಣ್ಣ ಕಥೆಗಳು.ಮೇಲಿಂದ ಮೇಲೆಯೇ ಎಲ್ಲಾ ಕಥೆಗಳ ಬಗ್ಗೆ ಸ್ವಲ್ಪ ಸ್ವಲ್ಪ ಹೇಳುವ ಪ್ರಯತ್ನ ಮಾಡುತ್ತೇನೆ.
1. #ರೈನ್ಬೋಲ್ಯಾಂಡ್.
ಇದು ಮೊದಲನೆಯ ಕಥೆ.ಅಪ್ಪ ರಾತ್ರಿ ಮಲಗುವಾಗ ತನ್ನ ಪುಟ್ಟ ಮಗಳಿಗೊಂದು ಅವಳಷ್ಟೇ ಗಾತ್ರದ ಕಥೆ ಒಂದು ಹೇಳುತ್ತಾನೆ.ಅವನ ಕಥೆಯಲ್ಲೊಂದು ಸುಂದರ ಲೋಕ;ಕಾಮನಬಿಲ್ಲಿನಿಂದಲೇ ಆವೃತವಾದ ಬಣ್ಣದ ಲೋಕ.ಮಗಳು ಹಠ ಮಾಡುತ್ತಾಳೆ 'ನನಗೆ ಅಲ್ಲಿಗೆ ಕರೆದುಕೊಂಡು ಹೋಗು ಅಪ್ಪ ..'ಎಂದು.ಅದಕ್ಕೆ ತಂದೆ 'ಆಯಿತು ನಾಳೆ ಸಂಜೆ ಸ್ಕೂಲ್ ಬಿಟ್ಟು ಬಂದ ಮೇಲೆ ನಿನ್ನನ್ನು ಕಾಮನಬಿಲ್ಲಿನ ಆ ಬಣ್ಣಗಳ ಲೋಕಕ್ಕೆ ಕರೆದುಕೊಂಡು ಹೋಗುತ್ತೇನೆ..' ಎಂದು ಸಂತೈಸುತ್ತಾನೆ.ಮಗಳು ಮಲಗುತ್ತಾಳೆ.ಬೆಳಿಗ್ಗೆ ಮಗಳನ್ನು ಶಾಲೆಗೆ ಬಿಟ್ಟು ಮತ್ತೆ ಮನೆಗೆ ಮರಳುವ ಅಪ್ಪ,ಮನೆಯ ಹಿತ್ತಿಲಿನಲ್ಲಿ ಬಣ್ಣದ ಕಾಗದ,ಬಣ್ಣದ ಪುಗ್ಗೆ,ಬಣ್ಣದ ಹೂ ಹೀಗೆ ಎಲ್ಲವನ್ನೂ ಸಿಕ್ಕಿಸಿ,ತಾನೇ ಸ್ವತಃ ಬಣ್ಣ ಬಳಿದು ಒಂದು ದೊಡ್ಡ ಕಾಮನ ಬಿಲ್ಲಿನ ಆಕೃತಿಯನ್ನು ಕೂಡ ನಿಲ್ಲಿಸಿ,ಅದರ ಪಕ್ಕದಲ್ಲಿಯೇ 'ರೈನ್ಬೋಲ್ಯಾಂಡ್' ಎಂದು ಹೆಸರಿನ ಫಲಕ ಕೂಡ ನೆಟ್ಟು,ಮಗಳಿಗೆ ಸರ್ಪ್ರೈಸ್ ನೀಡಲು ಇನ್ನಿಲ್ಲದಂತೆ ತುದಿಗಾಲಿನಲ್ಲಿ ಕಾದು ನಿಲ್ಲುತ್ತಾನೆ ಅಪ್ಪ.ಆದರೆ ಮಗಳು ಸ್ಕೂಲಿನಿಂದ ಬರುವ ಮೊದಲೇ ಜೋರು ಮಳೆ ಬಂದು ಅಪ್ಪ ಮಾಡಿದ ಎಲ್ಲಾ ಬಣ್ಣಗಳ ಅಂದವೂ ನೀರಲ್ಲಿ ಕರಗಿ ಹೋಗುತ್ತದೆ,ಬಣ್ಣ ಕೆಡುತ್ತದೆ.ತಾನು ಮಗಳಿಗಾಗಿ ಸೃಷ್ಟಿಸಿದ ಬಣ್ಣದ ಲೋಕವೊಂದು ಜೋರು ಮಳೆಗೆ ಚೆಲ್ಲಾಪಿಲ್ಲಿ ಆದುದ್ದನ್ನು ಕಂಡ ತಂದೆ ಹತಾಶೆಯಿಂದ ಕುಸಿದು ಹೋಗುತ್ತಾನೆ.ಸಂಜೆ ಆದ ಕೂಡಲೇ ಅಪ್ಪ ಇವತ್ತು ನನ್ನನ್ನು ರೈನ್ಬೋಲ್ಯಾಂಡಿಗೆ ಕರೆದೊಯ್ಯುತ್ತಾನೆ ಎಂದು ಸ್ಕೂಲಿನಿಂದ ಮನೆಗೆ ಓಡೋಡಿ ಬರುತ್ತಾಳೆ ಮಗಳು.ಆದರೆ ಮಗಳು ಆ ದಿನ ಕಾಮನ ಬಿಲ್ಲಿನ ಆ ಬಣ್ಣದ ಲೋಕವನ್ನು ನೋಡುತ್ತಳಾ?
ಕಿಶೋರ್ ಮತ್ತು ಯಜ್ಞ ಶೆಟ್ಟಿ ಇದರಲ್ಲಿ ಅಭಿನಯಿಸಿದ್ದಾರೆ.
2.#ಸತ್ಯಕಥಾ_ಪ್ರಸಂಗ.
ಅವರೊಬ್ಬರು ನಿವೃತ್ತಿಯ ಅಂಚಿನಲ್ಲಿರುವ ಹಿರಿಯರು.ಆಫೀಸಿನಲ್ಲಿ ಕೊನೆಯ ದಿನದ ಕೆಲಸ.ಅದರ ಮರುದಿನವೇ ಅವರಿಗೆ ಒಂದೊಳ್ಳೆಯ ಬೀಳ್ಕೊಡುಗೆ ಸಮಾರಂಭದ ಆಯೋಜನೆ ಕೂಡ ಆಗಿದೆ. ಸಮಾರಂಭಕ್ಕೆ ಬರಲು ತನ್ನ ಒಬ್ಬನೇ ಮಗನನ್ನು ತುಂಬಾ ಕೇಳಿ ಕೊಳ್ಳುತ್ತಾರೆ ಅವರು.ಆದರೆ ಮಗ ಬರಲು ಒಪ್ಪುವುದಿಲ್ಲ.ಆ ಹತಾಶೆಯನ್ನು ಆಪೀಸಿನಲ್ಲಿ ತನ್ನ ಸಹ ಕೆಲಸಗಾರರ ಮೇಲೆ ಕೊನೆಯ ದಿನದ ಕೆಲಸದಂದು ಕೂಡ ಅವರು ತೋರುತ್ತಾರೆ,ಎಲ್ಲರಿಗೆ ಚೆನ್ನಾಗಿ ಬೈಯುತ್ತಾರೆ.ಆ ದಿನ ರಾತ್ರಿ ಮನಗೆ ಮರಳುವಾಗ ಒಂದು ಕಡೆ ಜಾತ್ರೆಯ ಸಂತೆ.ಅಲ್ಲೊಬ್ಬಳು ಸಿಗರೇಟು ಸೇದುವ ಹುಡುಗಿ.ಅವಳು ಸುಂದರವಾಗಿ ಟ್ಯಾಟು ಕೂಡ ಬಿಡಿಸುತ್ತಾಳೆ.ಅವಳ ಕೈಯಿಂದ ಈ ಹಿರಿಯರು ಮೈ ತುಂಬಾ ಮೈಯಲ್ಲಿ ಒಂಚೂರು ಜಾಗ ಬಿಡದೇ ಟ್ಯಾಟು ಬಿಡಿಸುತ್ತಾರೆ.ಅವಳ ಬಳಿ ಕೇಳುತ್ತಾರೆ 'ಇದು ನಿಜ ಅಲ್ವಾ?'. ಅವಳು ನಗುತ್ತಾಳೆ.ಮರುದಿನ ಬೀಳ್ಕೊಡುಗೆ ಸಮಾರಂಭ.ಈ ತಂದೆ ಉತ್ಸಾಹದಿಂದ ಆಫೀಸಿಗೆ ಹೋಗುತ್ತಾರೆ. ದಾರಿ ಮಧ್ಯದಲ್ಲಿ ಹಿಂದಿನ ದಿನ ಜಾತ್ರೆಯ ಸಂತೆ ಇದ್ದ ಸ್ಥಳಕ್ಕೆ ಬರುತ್ತಾರೆ.ಆದರೆ ಅಲ್ಲಿ ಜಾತ್ರೆ ನಡೆದಂತಹ ಯಾವುದೇ ಕುರುಹು ಇಲ್ಲ! ಹಿಂದಿನ ರಾತ್ರಿ ಇದ್ದ ದೊಡ್ಡ ಜೈಂಟ್ ವೀಲ್ ಕೂಡ ಇಲ್ಲ, ಅದೇ ರೀತಿ ಟ್ಯಾಟು ಅಂಗಡಿಯೂ ಅಲ್ಲಿ ಇರುವುದಿಲ್ಲ!ಇವರು ಗಲಿಬಿಲಿ ಆಗುತ್ತಾರೆ.ಸಮಾರಂಭದಲ್ಲಿ ಭಾಷಣ ಮಾಡುವಾಗ ಬೇಕೆಂದೇ ತಾನು ಹಾಕಿಕೊಂಡಿದ್ದ ಶರ್ಟು ಎಲ್ಲರೆದುರೇ ಬಿಚ್ಚುತ್ತಾರೆ! ಮತ್ತು ಎಲ್ಲರ ಬಳಿ ಕೇಳುತ್ತಾರೆ ಟ್ಯಾಟು ಇದೆ ಅಲ್ವಾ..? ಇದು ನಿಜ ಅಲ್ವಾ?
ಇದರಲ್ಲಿ ಪ್ರಕಾಶ್ ಬೆಳವಾಡಿ ಎಂದಿನಂತೆ ಸೊಗಸಾಗಿ ಅಭಿನಯಿಸಿದ್ದಾರೆ.
3.#ಗಿರ್ಗಿಟ್ಲೆ
ಅವನಿಗೊಬ್ಬಳು ಲವ್ವರ್.ಒಂದು ಸಂಜೆ ಕಡಲ ಬದಿಯಲ್ಲಿ ಅವಳೊಂದಿಗೆ ಜಗಳ ಮಾಡಿಕೊಳ್ಳುತ್ತಾನೆ.ಆ ನಂತರ ನಾನು ಸಾಯುತ್ತೇನೆ ಎಂದು ಅವಳಿಗೆ ಹೇಳಿ ಕಡಲಿನ ಬದಿಯ ಬಂಡೆ ಏರುತ್ತಾನೆ.ಆದರೆ ಆಕಸ್ಮಿಕವಾಗಿ ಕಾಲು ಜಾರಿ ಅವನು ಕಡಲಿಗೆ ಬೀಳುತ್ತಾನೆ.ಆದರೆ ಅವನು ಸಾಯುವುದಿಲ್ಲ! ಬೆಳಿಗ್ಗೆ ಬೀಚ್ ನಿಂದ ಎದ್ದು ಮನೆಗೆ ಹೋಗುತ್ತಾನೆ.ಅವನಿಗೆ ಆವಾಗಲೇ ಗೊತ್ತಾಗುವುದು ಆ ದಿನ ಹಿಂದಿನ ದಿನದಂತೆಯೇ ಮತ್ತೆ ಶುರುವಿನಿಂದ ಆರಂಭವಾಗಿದೆ ಎಂದು! ಅದನ್ನು ದೃಢ ಪಡಸಿಕೊಳ್ಳಲು ಮತ್ತೊಮ್ಮೆ ಲವ್ವರ್ ಜೊತೆಗೆ ಜಗಳ ಮಾಡಿಕೊಂಡು ಆ ಸಂಜೆ ಅವನೇ ಬೇಕೆಂದೇ ಬಂಡೆಯ ಮೇಲಿಂದ ಮತ್ತೊಮ್ಮೆ ಕಡಲಿಗೆ ಜಿಗಿಯುತ್ತಾನೆ.ಅವನು ಸಾಯುವುದಿಲ್ಲ.ಮರು ದಿನ ಬೆಳಿಗ್ಗೆ ಮತ್ತೊಮ್ಮೆ ಬೀಚ್ ನಲ್ಲಿ ಏಳುತ್ತಾನೆ.ಅವನಿಗೆ ಗೊತ್ತಿರುತ್ತದೆ ಈ ದಿನ ಕೂಡ ಹಿಂದಿನ ದಿನದಂತೆಯೇ ಶುರುವಾಗಲಿದೆ ಮತ್ತು ಈ ದಿನ ಕೂಡ ಏನೇನು ನಡೆಯಲಿದೆ ಎಂದು.ಅದನ್ನು ಬಳಸಿಕೊಂಡು ಅವನು ಒಂದಿಷ್ಟು ಲಾಭ ಮಾಡಿಕೊಳ್ಳುತ್ತಾನೆ! ಈ ರಹಸ್ಯವನ್ನು ಅವನು ತನ್ನ ಗೆಳೆಯನಿಗೂ ಹೇಳುತ್ತಾನೆ.ಅವನ ಗೆಳೆಯನೂ ಅದನ್ನು ಕೇಳಿ ಕಡಲಿಗೆ ಹಾರುತ್ತಾನೆ! ಕಥೆಯಲ್ಲಿ ಮುಂದೇನಾಗುತ್ತದೆ?
ಇದು 1993 ರ ಇಂಗ್ಲಿಷ್ ಮೂವಿ 'Groundhog Day ' ನಿಂದ ಪ್ರೇರಿತವಾದ ಕಥೆಯಂತೆ.ಈ ಟೈಂ ಲೂಪ್ ಕಥೆಯಲ್ಲಿ ರಾಜ್ ಬಿ ಶೆಟ್ಟಿ ಹಾಗೂ ಅಮೃತ ನಾಯ್ಕ್ ಅಭಿನಯ ತುಂಬಾನೇ ಕಚಗುಳಿ ಇಡುತ್ತದೆ.
4.#ಉತ್ತರ
ಅವನೊಬ್ಬ ಪ್ರೊಫೆಸರ್.ಜರ್ನಲಿಸಂ ವಿದ್ಯಾರ್ಥಿಗಳ ವರ್ಕ್ ಶಾಪ್ ಒಂದಕ್ಕೆ ಅವನು ಹೋಗುತ್ತಾನೆ.ಹೋಗುವಾಗ ತನ್ನ ಬ್ಯಾಗಿನಲ್ಲಿ ಪಿಸ್ತೂಲ್ ಒಂದನ್ನು ಅಡಗಿಸಿಟ್ಟುಕೊಂಡೇ ಹೋಗುತ್ತಾನೆ.ಅವನ ಉದ್ದೇಶ ವರ್ಕ್ ಶಾಪ್ ನ ಮುಖ್ಯ ಅತಿಥಿಯಾಗಿ ಬರುವ ಮಾಧ್ಯಮದ ಮುಖ್ಯಸ್ಥನೊಬ್ಬನನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬುದಾಗಿರುತ್ತದೆ.ಪ್ರೊಫೆಸರ್ ನ ಪುಣ್ಯಕ್ಕೆ ಆ ಅತಿಥಿ ಹಾಗೂ ಈ ಪ್ರೊಫೆಸರ್ ಒಂದೇ ರೂಮಿನಲ್ಲಿ ಡೋರ್ ಲಾಕ್ ಆಗಿ ಒಂದು ಅರ್ಧ ಗಂಟೆ ರೂಮ್ ನ ಒಳಗೆಯೇ ಬಂಧಿಯಾಗುತ್ತಾರೆ.ಆಗ ಪ್ರೊಫೆಸರ್ ಆ ಮಾಧ್ಯಮ ಮುಖ್ಯಸ್ಥನಿಗೆ ಒಂದು ಕಥೆ ಹೇಳುತ್ತಾನೆ ಹಾಗೂ ಕೊನೆಯಲ್ಲಿ ಒಂದು ಪ್ರಶ್ನೆ ಕೂಡ ಕೇಳುತ್ತಾನೆ.ಆ ನಂತರ ಅವನ ಮುಂದಿರುವ ಟೇಬಲ್ ಮೇಲೆ ಪಿಸ್ತೂಲ್ ಇಟ್ಟು ಹೇಳುತ್ತಾನೆ 'ನನ್ನ ಪ್ರಶ್ನೆಗೆ ನಿನ್ನ ಉತ್ತರವೇ ನಿರ್ಧರಿಸುತ್ತದೆ,ಇಲ್ಲಿ ಯಾರು ಸಾಯಬೇಕು ಎಂದು?! ' ಎಂದು ಹೇಳಿ ಮಾತು ಮುಗಿಸುತ್ತಾನೆ ಪ್ರೊಫೆಸರ್. ಹಾಗಾದರೆ ಆ ಕಥೆ ಏನು? ಕೊನೆಗೆ ಇಲ್ಲಿ ಕೊಲ್ಲಲ್ಪಡುವವರು ಯಾರು ?
ಇದರಲ್ಲಿ ಪ್ರಮೋದ್ ಶೆಟ್ಟಿ ಹಾಗೂ ಬಾಲಾಜಿ ಮನೋಹರ್ ಇಬ್ಬರದ್ದೂ ಬಹಳ ಚಂದದ ಅಭಿನಯ.
5.#ಪಡುವಾರಹಳ್ಳಿ
ಇದು ಬ್ರಿಟಿಷರು ದೇಶವಾಳುತ್ತಿದ್ದ ಕಾಲದ ಕಥೆ.ಪಡುವಾರಹಳ್ಳಿಯ ಆ ಕ್ಷೌರದಂಗಡಿಗೆ ಬ್ರಿಟಿಷ್ ಪೋಲಿಸ್ ಅಧಿಕಾರಿ ಒಬ್ಬ ಬರುತ್ತಾನೆ.ಮೂಲತಃ ಭಾರತಿಯನೇ ಅವನು.ಆದರೆ ಬ್ರಿಟಿಷರ ಎಂಜಲು ಕಾಸಿಗೆ ಅವರಡಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ.ಬರೀ ಅಷ್ಟೇ ಅಲ್ಲ ಆ ಪೋಲಿಸ್ ಅಧಿಕಾರಿ ಪಡುವಾರಹಳ್ಳಿಯ ಹಲವಾರು ಜನರನ್ನು ಅದಾಗಲೇ ಗುಂಡಿಟ್ಟು ಕೊಂದಿರುತ್ತಾನೆ.ಈಗ ಅದೇ ಅಧಿಕಾರಿ ಕ್ಷೌರದಂಗಡಿಯ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾನೆ.ಕ್ಷೌರಿಕ ತುಂಬಾನೇ ದೇಶಭಕ್ತ.ಅವನ ಕೈಯಲ್ಲಿ ಶೇವಿಂಗ್ ಮಾಡುವ ಚಾಕು ಇದೆ. ಕೆನ್ನೆ ತುಂಬಾ ಕ್ರಿಮು ಬಳಿದುಕೊಂಡ ಅಧಿಕಾರಿ ಕಣ್ಣು ಮುಚ್ಚಿಕೊಂಡೇ ಕುರ್ಚಿಯಲ್ಲಿ ಕುಳಿತಿದ್ದಾನೆ.ಕ್ಷೌರಿಕನಿಗೆ ಈಗ ತನ್ನ ಜನರನ್ನು ಕೊಂದ ಆ ಅಧಿಕಾರಿಯನ್ನು ಶೇವಿಂಗ್ ಮಾಡುವ ಹರಿತವಾದ ಚಾಕುವಿನಿಂದ ಹಾಗೇ ಕತ್ತು ಕೊಯ್ದು ಕೊಲ್ಲಲು ಒಂದು ಸುಲಭ ಅವಕಾಶವಿದೆ.ಕ್ಷೌರಿಕ ನಿಜವಾಗಿಯೂ ಏನು ಮಾಡುತ್ತಾನೆ?
ಈ ಕಥೆ Hernando Téllez ನ ಸಣ್ಣಕತೆ 'Just lather, that's all' ನಿಂದ ಪ್ರೇರಿತವಾದ ಕಥೆಯಂತೆ.ಅವಿನಾಶ್ ಹಾಗೂ ಹರಿ ಸಮಷ್ಠಿ ಇಬ್ಬರ ಅಭಿನಯವೂ ಸೊಗಸಾಗಿದೆ.
6.#ಸಾಗರ_ಸಂಗಮ
ಅವಳೊಬ್ಬಳು ಯುವತಿ.ಕಡಲತೀರದ ರೋಡಿನಲ್ಲಿ ಹೋಗುವಾಗ ಅವಳ ಕಾರಿನ ಚಕ್ರದ ಬೋಲ್ಟು ನಟ್ಟುಗಳು ಉದುರಿ ಕಾರು ಕೆಟ್ಟುಹೋಗಿ ರೋಡಿನಲ್ಲಿಯೇ ನಿಲ್ಲುತ್ತದೆ.ಆಗ ಅವನು ಬರುತ್ತಾನೆ.ಅತಿ ವಿಚಿತ್ರವಾಗಿ ಕಾಣುವ ಭಿಕ್ಷುಕ.ಜೊತೆಗೆ ಅವನದ್ದೊಂದು ವಿಲಕ್ಷಣವಾದ ನಾಯಿ.ಈ ಕಥೆಯಲ್ಲಿ ಮಾತುಕತೆಯಿಲ್ಲ,ಯಾವುದೇ ಸಂಭಾಷಣೆಗಳೇ ಇಲ್ಲ.ಆದರೂ ಒಂದು ಕಥೆಯಿದೆ. ಏನದು?
ರಿಷಬ್ ಶೆಟ್ಟಿ, ಹರಿಪ್ರಿಯ ನಟಿಸಿದ್ದಾರೆ ಹಾಗೂ ರೂಮಿ ಎನ್ನುವ ನಾಯಿ ಕೂಡ ಇದರಲ್ಲಿ ಇದೆ.ಇಲ್ಲಿ ರಿಷಬ್ ಶೆಟ್ಟಿ ಅಭಿನಯಕ್ಕಿಂತಲೂ ಆ ಒಂದು ವೇಷವೇ ಅಧ್ಭುತವಾಗಿದೆ,ಅದಕ್ಕೆ ತಕ್ಕಂತಹ ಅಭಿನಯವೂ ಇದೆ.
7.#ಲಚ್ಚವ್ವ
ಹಳ್ಳಿಯಲ್ಲಿರುವ ದನ ಕರುಗಳನ್ನು ಮಾರಿ ಆ ಮುಗ್ಧ ತಾಯಿ ಬೆಂಗಳೂರಿನಲ್ಲಿರುವ ತನ್ನ ಮಗನ ಬಾಡಿಗೆ ಮನೆಗೆ ಬರುತ್ತಾಳೆ.ಒಂದು ದಿನ ಆ ತಾಯಿ ರೂಮಿನಲ್ಲಿರುವ ತನ್ನ ಮಗನ ಗೆಳೆಯನಿಗೆ ಧಾರವಾಡ ಪೇಡಾ ಇಷ್ಟ ಎಂದು ಅವನೊಡನೆ ಮಾತಾಡುವಾಗ ತಿಳಿಯುತ್ತಾಳೆ.ಹೀಗೆ ಇರುವಾಗ ಒಂದು ದಿನ ಆ ಹುಡುಗನ ಬರ್ತಡೆ ಬರುತ್ತದೆ.ತನ್ನ ಮಗ ಬೇರೆಯಲ್ಲ ಆ ಹುಡುಗ ಬೇರೆ ಅಲ್ಲ,ಹಾಗಾಗಿ ಅವನ ಹುಟ್ಟಿದ ದಿನಕ್ಕೆ ಅವನಿಗಿಷ್ಟದ ಧಾರವಾಡ ಪೇಡಾ ಕೊಡಲೇಬೇಕು ಎಂದು ನಿರ್ಧರಿಸುವ ಆ ತಾಯಿ,ಬೆಳಿಗ್ಗೆಯೇ ರೂಮಿನಿಂದ ಹೊರಗೆ ಬಂದು ಬೆಂಗಳೂರು ತುಂಬಾ ಅಲೆಯುತ್ತಾ ಹೋಗುತ್ತಾಳೆ,ಕೊನೆಗೆ ದಾರಿ ತಪ್ಪುತ್ತಾಳೆ! ರಾತ್ರಿಯೇ ಆಗಿ ಬಿಡುತ್ತದೆ!!
ಈ ಕಥೆ ನಿಜಕ್ಕೂ ಅದ್ಭುತವಾಗಿದೆ.ಪಾರವ್ವ ಮತ್ತು ನಿಧಿ ಹೆಗ್ಡೆ ಇದರಲ್ಲಿ ಅಭಿನಯಿಸಿದ್ದಾರೆ.
ರಿಷಬ್ ಶೆಟ್ಟಿ,ಹೆಚ್ಕೆ ಪ್ರಕಾಶ್ ಮತ್ತು ಪ್ರದೀಪ್ ಎನ್. ಆರ್ ನಿರ್ಮಾಣದ ಈ ಕಥಾ ಸಂಗಮಕ್ಕೆ ಕಿರಣ್ ರಾಜ್ ಕೆ,ಚಂದ್ರಜಿತ್ ಬೆಳ್ಳಿಯಪ್ಪ,ಶಶಿಕುಮಾರ್ ಪಿ,ರಾಹುಲ್ ಪಿ.ಕೆ,ಜಮದಗ್ನಿ ಮನೋಜ್,ಕರಣ್ ಅನಂತ್,ಜಯಶಂಕರ್ ಎ. ಹೀಗೆ ಒಟ್ಟು ಏಳು ನಿರ್ದೇಶಕರು ಇದರ ಏಳು ಕಥೆಗೆ ನಿರ್ದೇಶನವನ್ನು ಮಾಡಿದ್ದಾರೆ.ಅಷ್ಟು ಮಾತ್ರವಲ್ಲದೇ ಇದಕ್ಕೆ ಪ್ರತ್ಯೇಕ ಏಳು ಸಿನಿಮಾಟೋಗ್ರಫರ್,ಏಳು ಸಂಗೀತ ನಿರ್ದೇಶಕರು ಹಾಗೂ ಏಳು ಎಡಿಟರ್ ಗಳು ಕೂಡ ಕೆಲಸ ಮಾಡಿದ್ದಾರೆ.ಈ ಕಥಾಸಂಗಮವನ್ನು ಚಿತ್ರ ತಂಡ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಬಹಳ ವಿಶೇಷವಾಗಿ ಅರ್ಪಣೆ ಮಾಡಿದ್ದಾರೆ.
ಯಾವತ್ತೂ ಒಂದಕ್ಕೊಂದು ಬಹಳಷ್ಟು ವಿಭಿನ್ನನಾದ ಕಥೆಗಳಿಂದಲೇ ತುಂಬಿರುವ ಈ ಆಂಥೋಲಜಿಯಂತಹ ಸಿನಿಮಾ ಪ್ರಕಾರ ನನಗಂತು ವೈಯಕ್ತಿಕವಾಗಿ ಇಷ್ಟ. ಎರಡೂವರೆ ಗಂಟೆಯಲ್ಲಿ ಐದಾರು ಕಥೆಗಳನ್ನು ಹೇಳಿ ಮುಗಿಸಬೇಕು,ಅದರಲ್ಲೂ ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳದೆ ಎಷ್ಟು ಹೇಳಬೇಕೋ ಅಷ್ಟನ್ನು ಮಾತ್ರ ತುಂಬಾ ವಿಭಿನ್ನವಾಗಿ ಹೇಳಬೇಕಾಗುವ ಈ ಆಂಥೋಲಜಿಯ ಎಲ್ಲಾ ಕಥೆಗಳು ಕೆಲವೊಮ್ಮೆ ಎಲ್ಲರಿಗೂ ಇಷ್ಟವಾಗುವುದಿಲ್ಲ.ಒಂದು ಕಥೆಯ ಇಡೀ ಸಿನಿಮಾ ನೋಡುವವರಿಗೆ ಅಷ್ಟೊಂದು ಇಷ್ಟವಾಗಲಿಕ್ಕಿಲ್ಲ. ಇಷ್ಟವಾದರೂ ಎಲ್ಲಾ ಕಥೆಗಳು ಇಷ್ಟವಾಗಲಿಕ್ಕಿಲ್ಲ.ನನಗೆ ನಿಜ ಹೇಳಬೇಕೆಂದರೆ ಇದರ ಎಲ್ಲಾ ಕಥೆಯೂ ಇಷ್ಟವಾಯಿತು, ಜೊತೆಗೆ ಎಲ್ಲರ ಅಭಿನಯವೂ ಸಹ ಅಷ್ಟೇ ಇಷ್ಟವಾಯಿತು.ಯಾವುದು ಕಮ್ಮಿ ಇಷ್ಟ ಯಾವುದು ಜಾಸ್ತಿ ಇಷ್ಟ ಎಂದು ಹೇಳಬೇಕೆಂದರೆ ಈ ಕಥಾ ಸಂಗಮದಲ್ಲಿ ಮೊದಲಿನಿಂದ ಕೊನೆಯವರೆಗೆ ಇರುವ ಕಥೆಗಳ ಕ್ರಮದಲ್ಲಿಯೇ ಒಂದರ ನಂತರ ಒಂದು ಬರುವ ಕಥೆಗಳು ಹೆಚ್ಚೆಚ್ಚು ಇಷ್ಟವಾಗುತ್ತಾ ಹೋಗುತ್ತದೆ.ಕೊನೆಯ ಬರುವ ಕಥೆಯಂತು ಬಹಳನೇ ಇಷ್ಟವಾಯಿತು.ಪ್ರತಿಯೊಂದು ಕಥೆಯ ಸಂಗೀತ ಹಾಗೂ ಸಿನಿಮಾಟೋಗ್ರಫಿ ಕೂಡ ಅಷ್ಟೇ ಚೆನ್ನಾಗಿದೆ.ಈ ಕಥಾ ಸಂಗಮ ಅದಾಗಲೇ ಬಂದು ಒಂದಷ್ಟು ಸಮಯವಾಗಿದೆ.ಹಲವರು ಅದಾಗಲೇ ನೋಡಿರುತ್ತೀರಾ,ನೋಡಿಲ್ಲದವರು ನೋಡಬಹುದು.ಚೆನ್ನಾಗಿದೆ.
#ಕಥಾ_ಸಂಗಮ | Prime
Kannada Movie
Anthology Film
Release - 2019
Movies
Ab
Comments
Post a Comment