Burning
#Burning | Prime
ಅವಳು ಏನೇನೋ ಹೇಳುತ್ತಿದ್ದಳು,ಅದೆನೇನೋ ಮಾಡುತ್ತಿದ್ದಳು,ತನ್ನ ಬಳಿ ಕಿತ್ತಳೆ ಹಣ್ಣು ಇರದಿದ್ದರೂ ಅದು ತನ್ನ ಕೈಯಲ್ಲಿಯೇ ಇದೆ ಎಂಬತೆ ಅದರ ಸಿಪ್ಪೆ ಸುಲಿಯುವುದನ್ನು ಬಹಳ ಸಹಜವಾಗಿಯೇ ನಟಿಸಿ ತೋರಿಸುತ್ತಿದ್ದಳು,ಜನರ ಹೊಟ್ಟೆಯ ಹಸಿವು,ಜೀವನದ ಹಸಿವು ಇದರೆಡರ ವ್ಯತ್ಯಾಸವನ್ನು ಅವಳಿಗೆ ತಿಳಿದಂತೆ ವಿವರಿಸುತ್ತಿದ್ದಳು,ಹೆಚ್ಚಾಗಿ ಅವಳು ಕಲ್ಪನೆಯಲ್ಲಿಯೇ ಜೀವಿಸುತ್ತಿದ್ದಳು, ಆದರೆ ಅವಳು ಇದ್ದಳು!!
ಒಂದು ದಿನ ಅವನೊಂದಿಗೆ ಸಿಗರೇಟು ಸೇದುವಾಗ ಅವಳು ಹೇಳಿದಳು "ನಾನು ದೂರದ ಆಫ್ರಿಕಾಕ್ಕೆ ಹೋಗುತ್ತೇನೆ, ಅಲ್ಲಿಯವರೆಗೆ ನೀನು ನನ್ನ ಬೆಕ್ಕನ್ನು ನೋಡಿಕೊಳ್ಳುತ್ತೀಯಾ?"
"ನಿಮ್ಮ ಮನೆಯ ಬೆಕ್ಕನ್ನು ನನ್ನ ಮನೆಗೆ ತಂದು ಸಾಕಬೇಕೇ? " ಇವನೂ ಕೇಳಿದ.
"ಬೇಡ.. ಬೇಡ.. ಅದು ನನ್ನ ಮನೆಯಲ್ಲಿಯೇ ಇರುತ್ತದೆ,ಅದಕ್ಕೆ ನೀನು ದಿನ ನಿತ್ಯ ಬಂದು ಆಹಾರ ಹಾಕುತ್ತಿದ್ದರೆ ಅಷ್ಟೇ ಸಾಕು"
ಅವಳೆಂದರೆ ಇವನಿಗೆ ತುಂಬಾ ಇಷ್ಟ.ಅವಳು ಬಾಲ್ಯದ ಗೆಳತಿಯೂ ಹೌದು.ಅವಳ ಮಾತಿಗೆ ಇವನು ಒಪ್ಪುತ್ತಾನೆ ಹಾಗೂ ಅವಳು ಆ ನಂತರ ಆಫ್ರಿಕಾಕ್ಕೆ ಹೋಗುತ್ತಾಳೆ.
ಅವಳ ಮನೆ ಇವನಿಗೆ ಗೊತ್ತು.ಅವಳ ಮನೆಗೆ ಹೋಗಿ ಇವನು ಬೆಕ್ಕು ಹುಡುಕುತ್ತಾನೆ.ಆದರೆ ಅಲ್ಲಿ ಬೆಕ್ಕು ಇರುವುದಿಲ್ಲ!
ಒಂದು ದಿನ ಅವಳು ಆಫ್ರಿಕಾದಿಂದ ಬರುತ್ತಾಳೆ;ಜೊತೆಗೊಬ್ಬ ಸಿರಿವಂತ ಸುಂದರ ಯುವಕ.
ಒಂದು ದಿನ ಈ ಮೂವರೂ ಇವನ ಮನೆಯಲ್ಲಿಯೇ ಕುಳಿತುಕೊಂಡು ಹಾಗೇ ಮಾತಾಡುತ್ತಾ ಇರುತ್ತಾರೆ.ಅದು ಸಂಜೆ ನಿಧಾನಕ್ಕೆ ಕತ್ತಲಲ್ಲಿ ಮರೆಯಾಗುವ ಸಮಯ.ಅವಳಿಗೆ ಜೋರು ನಿದ್ದೆ.ಇವರಿಬ್ಬರ ಮಾತು ಮುಂದುವರಿಯುತ್ತದೆ.
ಇವನು ಇವನ ಕಥೆ ಹೇಳುತ್ತಾನೆ " ನನ್ನ ತಂದೆಯಿಂದಾಗಿ ನನ್ನ ಅಮ್ಮ ದೂರವಾದರು.ತಂದೆಗೆ ಅತಿಯಾದ ಸಿಟ್ಟು,ಅಮ್ಮ ಹೋದ ದಿನವೇ ಅವಳ ಎಲ್ಲಾ ಕುರುಹನ್ನು ಬೆಂಕಿ ಕೊಟ್ಟು ಸುಟ್ಟು ಹಾಕಿ ಬಿಟ್ಟರು,ನನ್ನ ಕೈಯಿಂದಲೇ ಬೆಂಕಿ ಕೊಡಿಸಿದ್ದರು ನನ್ನ ತಂದೆ..!"
ಅದಕ್ಕೆ ಆ ಸಿರಿವಂತ ಯುವಕ ಹೇಳುತ್ತಾನೆ "ನನಗೂ ಬೆಂಕಿ ಹಚ್ಚುವುದೆಂದರೆ ಇಷ್ಟ,ನಾನು ಈ ಗ್ರೀನ್ ಹೌಸ್ ಗಳಿಗೆಲ್ಲಾ ಬೆಂಕಿ ಹಚ್ಚುತ್ತೇನೆ.. ಅವುಗಳನ್ನು ಸಂಪೂರ್ಣ ಬೂದಿ ಮಾಡುತ್ತೇನೆ!! "
ಇವನಿಗೆ ಅರ್ಥ ಆಗಲಿಲ್ಲ!
ಆಶ್ಚರ್ಯದಿಂದಲೇ ಕೇಳಿದ.." ಅಂದರೆ ನೀನು ಇತರರ,ಈ ರೈತರುಗಳ ಗ್ರೀನ್ ಹೌಸ್ ಗಳಿಗೆಲ್ಲಾ ಬೆಂಕಿ ಹಚ್ಚುವ ಕೆಲಸ ಮಾಡುತ್ತಿಲ್ಲವಲ್ಲ? "
ಅದಕ್ಕೆ ಅವನು" ಹೌದು.. ನಾನು ಬೇರೆಯವರ ಗ್ರೀನ್ ಹೌಸ್ ಗಳಿಗೆನೇ ಬೆಂಕಿ ಹಚ್ಚುತ್ತೇನೆ! ಎಲ್ಲದರಿಂದ ದೂರ ಇರುವ,ಹೆಚ್ಚು ಜನರ ಕಣ್ಣಿಗೆ ಬೀಳದ,ಕೇವಲ ಉರಿದು ಬೂದಿಯಾಗಲೆಂದೇ ಇರುವ,ಅದಕ್ಕಾಗಿಯೇ ನನಗೆಂದೇ ಕಾದು ಕುಳಿತಿರುವ ಗ್ರೀನ್ ಹೌಸ್ ಗಳಿಗೆ ನಾನು ಬೆಂಕಿ ಹಚ್ಚುತ್ತೇನೆ!! "
" ಆದರೆ ಏಕೆ? "
" ಗ್ರೀನ್ ಹೌಸ್ ಉರಿದು ಸಂಪೂರ್ಣವಾಗಿ ಬೂದಿ ಆಗುವುದನ್ನು ನೋಡುವಾಗ ನನಗೆ ಅದರಿಂದ ಏನೋ ಒಂದು ಸುಖ ಸಿಗುತ್ತದೆ,ನನ್ನ ಎಲುಬುಗಳು ಸಂತೋಷದಿಂದ ನಲಿದಾಡುತ್ತದೆ,ಹೃದಯದ್ದಲೊಂದು ಜ್ಯಾಝ್ ಮ್ಯೂಝಿಕ್ ಹಾಗೇ ನಿಧಾನಕ್ಕೆ ಪ್ಲೇ ಆದಂತೆ ಆಗುತ್ತದೆ.ನನ್ನನ್ನು ಪೋಲಿಸರು ಕೂಡ ಹಿಡಿಯುವುದಿಲ್ಲ.ಎರಡು ತಿಂಗಳಿಗೊಮ್ಮೆ ನಾನು ಈ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತೇನೆ.ಈ ಎರಡು ತಿಂಗಳ ಹಿಂದೆಯೂ ಒಂದು ಗ್ರೀನ್ ಹೌಸ್ ಅನ್ನು ನಾನು ಸುಟ್ಟು ಹಾಕಿದ್ದೇನೆ,ಈಗ ಮತ್ತೆ ಸಮಯ ಬಂದಿದೆ, ಇನ್ನೊಂದು ಗ್ರೀನ್ ಹೌಸ್ ಅನ್ನು ನಾನು ಸದ್ಯದಲ್ಲೇ ಸುಡಲಿದ್ದೇನೆ..! "
" ಆದರೆ ಎಲ್ಲಿ?"
" ಇಲ್ಲಿಯೇ..! "
" ಇಲ್ಲಿ ಅಂದರೆ ಎಲ್ಲಿ..? "
" ಇಲ್ಲೇ..ತುಂಬಾ ಹತ್ತಿರದಲ್ಲಿ...!ನಿನಗದು ಬಹಳ ಎಂದರೆ ಬಹಳನೇ ಹತ್ತಿರ,ಆದರೆ ನೋಡುತ್ತಿರು ಆದಷ್ಟು ಬೇಗ ಅದು ಸುಟ್ಟು ಬೂದಿಯಾಗಲಿದೆ!!"
ಆ ನಂತರ ಆ ಯುವಕ,ಆ ಹುಡುಗಿ ಇಬ್ಬರೂ ಅಲ್ಲಿಂದ ಹೊರಟು ಹೋಗುತ್ತಾರೆ.
ಇವನಿಗೆ ಕುತೂಹಲ ನನ್ನ ಮನೆಯ ಬಳಿಯ ಯಾವ ಗ್ರೀನ್ ಹೌಸ್ ಅನ್ನು ಅವನು ಸುಟ್ಟು ಹಾಕುತ್ತಾನೆ ಎಂದು. ಅದಕ್ಕಾಗಿ ಮನೆಯ ಸುತ್ತ ಮುತ್ತ ಇರುವ ಹೊಸ ಹಾಗೂ ಹಳೆಯ ಎಲ್ಲಾ ಗ್ರೀನ್ ಹೌಸ್ ಗಳನ್ನು ಅವನು ದಿನ ನಿತ್ಯವೂ ಬಹಳ ಎಚ್ಚರಿಕೆಯಿಂದ ಗಮನಿಸುತ್ತಾನೆ.ಆದರೆ ಎಷ್ಟೇ ದಿನ ಆದರೂ ಒಂದೇ ಒಂದು ಗ್ರೀನ್ ಹೌಸ್ ಸುಟ್ಟು ಹೋದ ಕುರುಹು ಅವನಿಗೆ ಸಿಗುವುದಿಲ್ಲ!
ಒಂದು ದಿನ ಆ ಯುವಕನೇ ಇವನಿಗೆ ಸಿಗುತ್ತಾನೆ.ಇವನು ಅವನಲ್ಲಿ ಹೋಗಿ ಕೇಳುತ್ತಾನೆ "ನೀನು ಹೇಳಿದಂತೆಯೇ ಯಾವುದೇ ಗ್ರೀನ್ ಹೌಸ್ ಅನ್ನು ನೀನು ಸುಟ್ಟು ಹಾಕಲಿಲ್ಲ. ಸುಳ್ಳು ಏತಕೆ ಹೇಳಿದೆ?"
" ಅದಾಗಲೇ ಸುಟ್ಟು ಹಾಕಿದ್ದೇನೆ..! ಆವತ್ತು ನಿನ್ನ ಮನೆಯಿಂದ ಬಂದ ಹತ್ತು ದಿನಗಳ ಒಳಗೆಯೇ ನಾನು ಸುಟ್ಟು ಹಾಕಿ ಬಿಟ್ಟಿದ್ದೇನೆ.. ಬಹುಶಃ ನೀನು ಸರಿಯಾಗಿ ಗಮನಿಸಲಿಲ್ಲ ಎಂದು ಕಾಣುತ್ತದೆ !! "
" ಇಲ್ಲ.. ಇಲ್ಲ.. ಸಾಧ್ಯವೇ ಇಲ್ಲ.ನಾನು ಮನೆಯ ಹತ್ತಿರವಿರುವ ಎಲ್ಲಾ ಗ್ರೀನ್ ಹೌಸ್ ಅನ್ನು ದಿನಾಲೂ ಎಚ್ಚರಿಕೆಯಿಂದ ಗಮನಿಸಿದ್ದೇನೆ.ಎಲ್ಲವೂ ಹಾಗೇ ಇದೆ,ಯಾವುದೂ ಏನೂ ಆಗಿಲ್ಲ.."
" ಹತ್ತಿರ ಇರುವ ಎಲ್ಲವನ್ನೂ ಸುಲಭವಾಗಿ ಗಮನಿಸಬಹುದು,ಆದರೆ ಕೆಲವೊಮ್ಮೆ ತುಂಬಾ ಅಂದರೆ ತುಂಬಾನೇ ಹತ್ತಿರವಿರುವುದೇ ಹೆಚ್ಚಾಗಿ ಸರಿಯಾಗಿ ನಮ್ಮ ಕಣ್ಣಿಗೆ ಬೀಳುವುದಿಲ್ಲ..!! "
ಎಂದು ಹೇಳಿದ ಆ ಯುವಕ ಅಲ್ಲಿಂದ ಎದ್ದು ಹೋಗುತ್ತಾನೆ.
ಆ ನಂತರ ಆ ಹುಡುಗಿ ಇವನ ಕಣ್ಣಿಗೆ ಬೀಳುವುದಿಲ್ಲ!!
ಆದರೆ ಏಕೆ?
Lee Chang-dong ನಿರ್ದೇಶನದ ಈ ಕೊರಿಯನ್ ಮೂವಿಯಲ್ಲಿ Yoo Ah-in,Steven Yeun, Jeon Jong-seo ಮುಂತಾದವರ ಅಭಿನಯವಿದೆ.
ಈ ಮೂವಿ ಜಪಾನ್ ಕಾದಂಬರಿಕಾರ Haruki Murakami ಯ"The Elephant Vanishes" ಎಂಬ ಕಥಾ ಸಂಕಲನದ "Barn Burning" ಎಂಬ ಸಣ್ಣ ಕಥೆಯಿಂದ ಪ್ರೇರೇಪಿತವಾದ ಮೂವಿ.ಮುರಾಕಮಿಯ Barn Burning ಕಥೆ ಹಾಗೂ ಈ Burning ಮೂವಿಯ ಕಥೆ ಒಂದೇ ಆದರೂ ಮೂವಿಗಾಗಿ ಇಲ್ಲಿ ಬಹಳಷ್ಟನ್ನು ಸೇರಿಸಕೊಳ್ಳಲಾಗಿದೆ ಹಾಗೂ ಕಥೆಯನ್ನು ಕೂಡ ಒಂದಷ್ಟು ವಿಸ್ತರಿಸಲಾಗಿದೆ.ಬಹುಶಃ 2 ಗಂಟೆ ಹಾಗೂ ಒಂದಿಷ್ಟು ನಿಮಿಷಗಳವರೆಗಿನ ಸಮಯದ ಮೂವಿಗಾಗಿ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಕಾಣುತ್ತದೆ.
ಆದರೆ ನಿಜವಾದ ಈ ಕಥೆಯ ಸುಖ ಇರುವುದು ಮೂಲ ಕಥೆಯಾದ 'Barn Burning' ನ ಓದಿನಲ್ಲಿಯೇ.ಅದು ನಿಜಕ್ಕೂ ಅದ್ಭುತವಾದ ಕಥೆ.ಆ ಪುಟ್ಟದಾದ ಕಥೆಯಲ್ಲಿ ಒಂದಿಷ್ಟನ್ನೇ ಹೇಳಿ ಬಹಳಷ್ಟು ಕಾಡುತ್ತಾನೆ ಕಥೆಗಾರ ಮುರಾಕಮಿ.ಸಾಧ್ಯ ಆದರೆ ಅದನ್ನು ಓದಿಯೇ ಇದನ್ನು ನೋಡಿ.ಆಗ ಈ ಮೂವಿ ನಿಮಗೆ ಇನ್ನಷ್ಟು ಹೆಚ್ಚು ಇಷ್ಟವಾಗುತ್ತದೆ.ಕೊರಿಯನ್ ಮೂವಿಗಳನ್ನು ಹೆಚ್ಚು ಇಷ್ಟ ಪಡುವವರಿಗೆ ಈ ಮೂವಿ ಕೂಡ ಇಷ್ಟವಾಗಬಹುದು.
#Burning | Prime
Korean Movie
Psychological Thriller
Release - May 2018
Movies
Ab
Comments
Post a Comment