Churuli
#Churuli | SonyLIV
ಸ್ವಲ್ಪವಲ್ಲ,ಇದೊಂದು ಬಹಳಷ್ಟು ವಿಚಿತ್ರವಾದ ಮೂವಿಯೇ ಹೌದು!
ನಿಮಗೆ ಬಹಳ ಪರಿಚಯದ ಒಬ್ಬ ಗೆಳೆಯ ಇದ್ದಾನೆ ಎಂದು ತಿಳಿದುಕೊಳ್ಳಿ.ಅವನ ಹೆಸರು ರಮೇಶ.ಒಂದು ದಿನ ಅವನು ನಿಮ್ಮ ಜೊತೆ ಇರುವಾಗ ಯಾರೋ ಒಬ್ಬರು ಹಿಂದಿನಿಂದ ಅವನನ್ನು 'ಸುರೇಶ..' ಎಂದು ಕೂಗಿ ಕರೆದಾಗ,ಅವನು ಸಹಜವಾಗಿಯೇ ಅವರತ್ತ ತಿರುಗಿ ಒಂಚೂರು ಗೊಂದಲವಿಲ್ಲದೇ ಅವರ ಆ ಕರೆಗೆ ಪ್ರತಿಸ್ಪಂದಿಸಿ ಮಾತಾಡಿ ಬಿಟ್ಟರೆ ಆವಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?ರಮೇಶ ಒಬ್ಬನೇ ಅಲ್ಲ ನಿಮ್ಮ ಸುತ್ತಲಿನ ಬಹಳಷ್ಟು ಜನ ಈ ರೀತಿಯಾಗಿ ಒಮ್ಮೆಲೇ ವರ್ತಿಸಲು ಶುರು ಮಾಡಿದರೆ,ಸ್ವತಃ ನಿಮ್ಮನೇ ಜನರು ನಿಮಗೇ ಗೊತ್ತಿಲ್ಲದ ಬೇರೆಯದ್ದೇ ಹೆಸರಿನಿಂದ ಕರೆಯಲು ಶುರು ಮಾಡಿದರೆ ಆವಾಗ ಆ ಒಂದು ಕಥೆ ಹೇಗಿರಬಹುದು?
ಇದು ಅಂತಹದ್ದೇ ಕಥೆ!!
ಅದರೆ ಈ ವಿಚಿತ್ರ ಕಥೆಯ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಎರಡು ಬಹಳ ಸಣ್ಣ ಕಥೆಯನ್ನು ಕೂಡ ಹೇಳಲಾಗುತ್ತದೆ.
ಆ ಎರಡು ಸಣ್ಣ ಕಥೆಗಳ ನಡುವೆಯೇ ಈ ಬಹು ಮುಖ್ಯವಾದ ವಿಚಿತ್ರ ಕಥೆ ಇರುವುದು.ಎಂದಿನಂತೆ ಆ ಮುಖ್ಯ ಕಥೆಯನ್ನು ಇಲ್ಲಿ ನಾನು ಹೇಳುವುದಿಲ್ಲ.ವಿಶೇಷ ಏನೆಂದರೆ 'Spoiler Alert' ಎಂದು ಮೊದಲೇ ಹೇಳಿ ಆ ಸಂಪೂರ್ಣ ಕಥೆಯನ್ನು ಹಲಸಿನ ಹಣ್ಣಿನ ಸಿಪ್ಪೆ ಸುಲಿದು ಬಹಳ ಚೆನ್ನಾಗಿ ಬಿಡಿಸಿ ಬಿಡಿಸಿ ನಿಮ್ಮ ಕೈಯಲ್ಲಿಟ್ಟಂತೆ ಕಥೆ ಹೇಳಿದರೂ ಕೂಡ... ಇದು ಅಷ್ಟು ಸುಲಭಕ್ಕೆ ಮಂಡೆಗೆ ಹೋಗುವ ಕಥೆಯಲ್ಲ ಅನ್ನುವುದೇ ಇಲ್ಲಿ ಬೇರೆಯದ್ದೇ ಆದ ಒಂದು ಕಥೆಯ ವ್ಯಥೆ!!
ಇರಲಿ,ಈಗ ನಾನು ಆರಂಭದ ಹಾಗೂ ಕೊನೆಯ ಆ ಎರಡು ಸಣ್ಣ ಕಥೆಯನ್ನಷ್ಟೇ ಹೇಳಿ ನಿಮ್ಮನ್ನು ಕೂಡ ಒಂದಿಷ್ಟು ಯೋಚನೆಗೆ ಹಚ್ಚುವ ಪ್ರಯತ್ನ ಮಾಡುತ್ತೇನೆ.
ವಾಯ್ಸ್ ಓವರ್ ನಲ್ಲಿ ಬರುವಂತಹ ಆ ಆರಂಭದ ಸಣ್ಣ ಕಥೆ ಹೀಗಿದೆ..
- ಒಂದು ಊರಿನಲ್ಲಿ ಒಬ್ಬ ಸಾಧು ಇರುತ್ತಾನೆ.ಕಾಡಿನಲ್ಲಿ ಜನರ ದಾರಿ ತಪ್ಪಿಸುವ ಬುದ್ಧಿವಂತ ದೆವ್ವವೊಂದನ್ನು ಹಿಡಿದು,ಅದನ್ನು ನಾನು ನನ್ನ ಬುಟ್ಟಿಗೆ ಹಾಕಿಕೊಳ್ಳುತ್ತೇನೆ ಎಂದು ಆತ ಬುಟ್ಟಿ ಸಹಿತವಾಗಿ ಒಂದು ಕಾಡಿಗೆ ಹೋಗುತ್ತಾನೆ.ಆದರೆ ಸ್ವತಃ ಅವನೂ ದಾರಿ ತಪ್ಪುತ್ತಾನೆ!
ಅವನು ಅಲೆಯುತ್ತಾ ಅಲೆಯುತ್ತಾ ಬೇರೆಯದ್ದೇ ಆದ ಇನ್ನೂ ಒಂದು ವಿಚಿತ್ರವಾದ ಕಾಡಿಗೆ ಹೋಗುತ್ತಾನೆ.ಅಲ್ಲಿರುವ ಗಿಡ, ಮರ,ಎಲೆ, ಬಳ್ಳಿ,ವಿಚಿತ್ರ ಪ್ರಾಣಿಗಳು ಈ ಮೊದಲೇ ಅವನ ಬಹಳ ಪರಿಚಯ ಇರುವಂತೆ ವರ್ತಿಸುತ್ತದೆ.ಬಳ್ಳಿಗಳು ಅವನನ್ನು ಕಂಡಾಗ ಬಳುಕುತ್ತವೆ.ಎಲೆಗಳು ತಮ್ಮ ತಮ್ಮಲ್ಲಿಯೇ ಪಿಸುಗಟ್ಟುತ್ತವೆ.ಸಾಧು ನಡೆಯುತ್ತಾ ಹೋಗುವಾಗ ಅವನಿಗೆ ದಾರಿಯಲ್ಲಿ ಒಂದು ಚೆಂಡು ಸಿಗುತ್ತದೆ. ಇದನ್ನು ನಾನು ನನ್ನ ಮಕ್ಕಳಿಗೆ ಆಟವಾಡಲು ಕೊಡುತ್ತೇನೆ ಎಂದು ಅವನು ಆ ಚೆಂಡನ್ನು ತನ್ನ ತಲೆಯ ಮೇಲಿನ ಬುಟ್ಟಿಯೊಳಗೆ ಹಾಕಿಕೊಳ್ಳುತ್ತಾನೆ.ನಿಜ ಹೇಳಬೇಕೆಂದರೆ ಅದು ಚೆಂಡು ಆಗಿರುವುದಿಲ್ಲ.ಚೆಂಡಿನಂತೆ ಸುತ್ತು ಹಾಕಿಕೊಂಡಿದ್ದ ಒಂದು ಚಿಪ್ಪು ಹಂದಿ ಅದಾಗಿರುತ್ತದೆ.
ಅಲೆಯುತ್ತಾ ಅಲೆಯುತ್ತಾ ಸಾಧುವಿಗೆ ಆ ವಿಚಿತ್ರ ಕಾಡಿನಿಂದ ಹೊರ ಹೋಗುವ ದಾರಿಯೇ ಸಿಗದೇ ಇದ್ದಾಗ ಅವನ ತಲೆಯ ಮೇಲಿನ ಬುಟ್ಟಿಯಲ್ಲಿರುವ ಚಿಪ್ಪು ಹಂದಿಯೇ ಸ್ವತಃ ಅವನೊಡನೆ ಮಾತಾಡಲು ಶುರು ಮಾಡುತ್ತದೆ ಮತ್ತು ಚಿಪ್ಪು ಹಂದಿ ಅವನಿಗೆ ಕಾಡಿನಲ್ಲಿ ದಾರಿ ತೋರಿಸಲು ಶುರು ಮಾಡುತ್ತದೆ.ಅದು ಹೇಳಿದಂತೆ ಈ ಸಾಧು ಇಡೀ ಕಾಡಿನಲ್ಲಿ ಅಲೆಯುತ್ತಲೇ ಇರುತ್ತಾನೆಯೇ ಹೊರತು ಅವನಿಗೆ ನಿಜವಾಗಿಯೂ ಆ ಕಾಡಿನಿಂದ ಹೊರಗೆ ಹೋಗಲು ಕೊನೆಗೂ ಆಗುವುದಿಲ್ಲ! ಅಷ್ಟು ಮಾತ್ರವಲ್ಲ ಅವನಿಗೆ ಕೊನೆಯವರೆಗೂ ನಾನು ಬುಟ್ಟಿಯಲ್ಲಿ ಹಿಡಿಯ ಬೇಕಾಗಿದ್ದ ದೆವ್ವ ಅದಾಗಲೇ ತನ್ನ ತಲೆಯ ಮೇಲಿರುವ ಬುಟ್ಟಿಯೊಳಗೆ ಚಿಪ್ಪು ಹಂದಿಯ ರೂಪದಲ್ಲಿಯೇ ಇದೆ ಎಂದು ಕೂಡ ತಿಳಿಯುವುದಿಲ್ಲ!!
ಈಗ ಮೂವಿಯ ಕೊನೆಯಲ್ಲಿ ಬರುವ ಇನ್ನೊಂದು ಸಣ್ಣ ಕಥೆಯನ್ನು ಕೂಡ ಹೇಳುತ್ತೇನೆ..
ಆ ಕಥೆ ಈ ರೀತಿ ಇದೆ..
- ಇಬ್ಬರು ಪೋಲಿಸರು ಗುರುತು ಬದಲಾಯಿಸಿಕೊಂಡು ಕೆಲಸಗಾರರಂತೆ ವೇಷ ಹಾಕಿಕೊಂಡು ಒಬ್ಬ ಕಳ್ಳನನ್ನು ಹಿಡಿಯಲೆಂದು ಒಂದು ದಟ್ಟ ಅರಣ್ಯದೊಳಗೆ ಇರುವ ಪುಟ್ಟ ಊರಿಗೆ ಹೋಗುತ್ತಾರೆ.ಕಥೆಯ ಕೊನೆಯಲ್ಲಿ ಅವರು ಆ ಕಳ್ಳನನ್ನು ಹಿಡಿಯುತ್ತಾರೆ.ಆ ಕಳ್ಳನನ್ನು ಜೀಪಿನ ಹಿಂದಿನ ಸೀಟಿಗೆ ಕಟ್ಟಿ ಹಾಕಿ ಆ ಕಾಡಿನಿಂದ ಹೊರಗೆ ಕರೆದುಕೊಂಡು ಬರುವಾಗ ಆ ಕಳ್ಳ ನಾನು ನಿಮಗೊಂದು ಕಥೆ ಹೇಳುತ್ತೇನೆ ಎಂದು ಜೀಪಿನಲ್ಲಿ ಎದುರು ಕುಳಿತಿದ್ದ ಇಬ್ಬರು ಪೋಲಿಸರಿಗೆ ಕಥೆ ಹೇಳಲು ಶುರು ಮಾಡುತ್ತಾನೆ.ಕಳ್ಳ ಈ ರೀತಿಯಾಗಿ ಹೇಳುತ್ತಾನೆ "ಈ ಹಿಂದೆಯೂ ಒಬ್ಬ ಪೋಲಿಸ್ ನನ್ನನ್ನು ಹಿಡಿಯಲೆಂದು ನಿಮ್ಮಂತೆ ಗುರುತು ಬದಲಾಯಿಸಿಕೊಂಡು ಈ ಕಾಡಿನ ಊರಿಗೆ ಬಂದಿದ್ದ.ಇಲ್ಲಿ ಯಾರೂ ಅವನ ಗುರುತು ಹಿಡಿಯುವುದಿಲ್ಲ ಎಂದೇ ಅವನು ತಿಳಿದುಕೊಂಡಿದ್ದ.ಆದರೆ ಊರಿನವರಿಗೆ ಎಲ್ಲವೂ ಮೊದಲೇ ಬಹಳ ಚೆನ್ನಾಗಿಯೇ ಗೊತ್ತಿತ್ತು.ಇಂತಹದ್ದನ್ನು ಈ ಮೊದಲೇ ಅವರು ಎಷ್ಟೋ ಬಾರಿ ನೋಡಿದ್ದರು!ಆದರೂ ಅವರು ಬೇಕೆಂದೇ ಏನೂ ಗೊತ್ತಿಲ್ಲದಂತೆ ನಟಿಸಲು ಶುರು ಮಾಡಿದರು.ಅವರಿಗೂ ಕುತೂಹಲ ಇವನು ಮುಂದೆ ಏನು ಮಾಡುತ್ತಾನೆ ಎಂದು.ಒಟ್ಟಿನಲ್ಲಿ ಊರವರಿಗೆ ತಮಾಷೆಯೊಂದು ಬೇಕಿತ್ತು ಅಷ್ಟೇ.ಊರಿನ ಕಳ್ಳು ಅಂಗಡಿಯಲ್ಲಿ ಕೆಲಸ ಮಾಡುತ್ತಾ,ಅಲ್ಲೇ ತಿನ್ನುತ್ತಾ,ಕಾಡು ತಿರುಗುತ್ತಾ ಪೋಲಿಸ್ ಗೆ ತಾನೊಬ್ಬ ಪೋಲಿಸ್ ಎನ್ನುವುದೇ ಕೊನೆಗೆ ಮರೆತು ಹೋಗುತ್ತದೆ..ಹಹ್ಹಾ ಹಹ್ಹಾ... ಹಹ್ಹಾ... ಹಹ್ಹಾ ". ಕಳ್ಳನ ಈ ಕಥೆ ಕೇಳುತ್ತಿದ್ದ ಜೀಪಿನಲ್ಲಿದ್ದ ಪೋಲಿಸರಿಗೆ ಕಾಡಿನಿಂದ ಹೊರಗೆ ಹೋಗುವ ದಾರಿಯೇ ಗೊತ್ತಾಗುವುದಿಲ್ಲ.ಆಗ ಜೀಪಿನಲ್ಲಿ ಹಿಂದೆ ಕುಳಿತಿದ್ದ ಕಳ್ಳ ಹೇಳುತ್ತಾನೆ ನಿಮಗೆ ಸರಿಯಾದ ದಾರಿ ನಾನು ತೋರಿಸುತ್ತೇನೆ ಎಂದು.ಅವನು ಹೇಳಿದಂತೆಯೇ ಡ್ರೈವಿಂಗ್ ಮಾಡುತ್ತಿದ್ದ ಪೋಲಿಸ್ ಜೀಪು ಓಡಿಸುತ್ತಾನೆ.ಆದರೆ ಎಷ್ಟೇ ದೂರ ಹೋದರೂ ಯಾವ ದಾರಿ ಹಿಡಿದು ಹೋದರೂ ಅವರ ಜೀಪು ಆ ವಿಚಿತ್ರ ಕಾಡಿನಿಂದ ಹೊರಗೆ ಬರುವುದೇ ಇಲ್ಲ! ಮಾತ್ರವಲ್ಲ ಕೊನೆಯ ಕ್ಷಣದಲ್ಲಿ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಜೀಪಿನಲ್ಲಿ ಹಿಂದುಗಡೆ ಕಟ್ಟಿ ಹಾಕಿದ್ದ ಆ ಕಳ್ಳ,ಡ್ರೈವ್ ಮಾಡುತ್ತಿದ್ದ ಪೋಲಿಸ್ ನ ಪಕ್ಕದಲ್ಲಿ ಇರುತ್ತಾನೆ ಹಾಗೂ ಡ್ರೈವ್ ಮಾಡುತ್ತಿದ ಪೋಲಿಸ್ ಪಕ್ಕದಲ್ಲಿದ್ದ ಮತ್ತೊಬ್ಬ ಪೋಲಿಸ್ ಕಳ್ಳ ಈ ಹಿಂದೆ ಇದ್ದಿದ್ದ ಜೀಪಿನ ಹಿಂದಿನ ಸೀಟಿನಲ್ಲಿ ಇರುತ್ತಾನೆ!!
ಈ ಎರಡು ಸಣ್ಣ ಕಥೆ ಕೇಳಿ ನಿಮಗೆ ಏನಾದರೂ ಅರ್ಥ ಆಯಿತಾ?
ಬಹುಶಃ ಇಲ್ಲ ಎಂದು ಅಂದುಕೊಳ್ಳುತ್ತೇನೆ.
ಕೇವಲ ಒಂದೆರಡು ನಿಮಿಷಗಳಲ್ಲಿ ಹೇಳಲ್ಪಡುವ ಈ ಎರಡು ಸಣ್ಣ ಕಥೆಗಳನ್ನು ಮೂವಿ ನೋಡುವಾಗ ನೀವು ಗಮನ ಇಟ್ಟು ಕೇಳದಿದ್ದರೆ,ಅರ್ಥ ಮಾಡಿಕೊಳ್ಳದಿದ್ದರೆ ಸುಲಭಕ್ಕೆ ಅರ್ಥವಾಗದ ಈ ಮೂವಿಯ ಕಥೆ,ನಿಮಗೆ ಇನ್ನಷ್ಟು ಜಟಿಲವಾಗುವುದಂತು ಖಂಡಿತ!
ಸತ್ಯ ಹೇಳಬೇಕೆಂದರೆ ಈ ಮೂವಿಯ ಮುಖ್ಯ ಕಥೆ ಯಾರಿಗೇ ಆಗಲಿ ಅಷ್ಟು ಸುಲಭವಾಗಿ ಅರ್ಥ ಆಗುವುದೇ ಇಲ್ಲ.ಅರ್ಥ ಆಗದಿದ್ದರೆ ಅದರಲ್ಲಿ ನೋಡುವವನ ತಪ್ಪು ಕೂಡ ಏನೂ ಇಲ್ಲ.ಯಾಕೆಂದರೆ ಸರಳವಾಗಿ ಅರ್ಥ ಮಾಡಿಕೊಳ್ಳುವಂತೆ ಈ ಮೂವಿಯನ್ನು ನಿರ್ದೇಶಕ ತಯಾರು ಮಾಡಿಯೂ ಇಲ್ಲ.
ಇಡೀ ಮೂವಿಯ ಕೊನೆಯ ಆ ಒಂದು ಮುಖ್ಯ ಕ್ಷಣದವರೆಗೂ ನಾವು ಇನ್ನಿಲ್ಲದಂತೆ ತಲೆ ಕರೆದುಕೊಂಡು ಮೂವಿ ನೋಡುತ್ತಿರುತ್ತೆವೆಯೇ ಹೊರತು,ಯಾವ ರೀತಿಯಿಂದ ಕಥೆಯ ಡಾಟ್ ಗಳನ್ನು ಜೋಡಿಸುತ್ತಾ ಹೋದರೂ ಅಲ್ಲಿ ಏನು ಆಗುತ್ತಿದೆ ಎಂದು ನಮಗೆ ಗೊತ್ತೇ ಆಗುವುದಿಲ್ಲ ಮತ್ತು ಯಾವುದರ ಸ್ಪಷ್ಟ ಚಿತ್ರಣವೂ ಕಣ್ಣ ಮುಂದೆ ಬರುವುದಿಲ್ಲ ! ಹೌದು ಕೊನೆಯ ಕ್ಷಣದವರೆಗೂ ಕಾಯಲೇಬೇಕು!!
ಈ ಮೂವಿ ಸ್ವಲ್ಪವೂ ಅರ್ಥ ಆಗದವರಿಗೆ ಇದೊಂದು ಲಾಟ್ಪೋಟ್ ಮೂವಿ ಅಂದರೆ ಇದೊಂದು ಡಬ್ಬಾ ಮೂವಿ. ಆದರೆ ಯಾರಿಗೆ ಇದರ ಕಾನ್ಸೆಪ್ಟ್ ಸರಿಯಾಗಿ ಅರ್ಥ ಆಗುತ್ತದೆ ನೋಡಿ ಆಗ ಖಂಡಿತವಾಗಿಯೂ ಇದೊಂದು ಮಾಸ್ಟರ್ ಪೀಸ್ ಮೂವಿ ಎಂದು ಅನ್ನಿಸದೇ ಇರದು.
ಈ ಮೂವಿ ಇದರ ಕಥೆಗಾಗಿ ಮಾತ್ರವಲ್ಲ ಇದರ ನಿರ್ದೇಶಕನ ಕಾರಣದಿಂದಲೂ ಬಹಳಷ್ಟು ಕುತೂಹಲವನ್ನು ಮೂಡಿಸುತ್ತದೆ.ಅಂದ ಹಾಗೆ ಈ ಮೂವಿಯನ್ನು ನಿರ್ದೇಶನ ಮಾಡಿದ್ದು Lijo Jose Pellissery. ಈ LJP ಯ ನಿರ್ದೇಶನದ ಹಿಂದಿನ ಮೂವಿಗಳು ಯಾವುದೆಂದು ಒಂಚೂರು ಹಿಂದೆ ತಿರುಗಿ ನೋಡಿದಾಗ Nayakan, City of God, Amen, Double Barrel, Angamaly Diaries, Ee.Ma.Yau ಮತ್ತು Jallikkattu ನಂತಹ ಒಂದಕ್ಕೊಂದು ಬಹಳಷ್ಟು ವಿಭಿನ್ನವಾದ ಮೂವಿಗಳೇ ನಮ್ಮ ಕಣ್ಣ ಮುಂದೆ ಬರುತ್ತದೆ.ಈ ಒಬ್ಬ ನಿರ್ದೇಶಕ ತುಂಬಾ ಅಂದರೆ ತುಂಬಾನೇ ಕ್ರೀಯೆಟಿವ್ ಹಾಗೂ ಇವನ ಪ್ರತೀ ಸಿನಿಮಾವೂ ಅವನ ಹಿಂದಿನ ಯಾವುದೇ ಸಿನಿಮಾದಂತೆ ಇರುವುದೇ ಇಲ್ಲ.
ತಾನು ಒಮ್ಮೆ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುತ್ತಾ ಹೋಗಲಾರೆ,ತನಗೆ ತಾನು ಸಪ್ಪೆ ಅನಿಸಲಾರೆ ಎಂದು ನಿರ್ಧರಿಸುವ ಮತ್ತು ವೈವಿಧ್ಯತೆಗಾಗಿ ಹೊಸ ಹೊಸ ಪ್ರಯತ್ನಕ್ಕೆ,ಸಾಹಸಕ್ಕೆ ಕೈ ಹಾಕುವ ಕಲಾವಿದ, ಬರಹಗಾರ, ನಿರ್ದೇಶಕ ಯಾರೇ ಆಗಲಿ ನನಗಂತು ಬಹಳನೇ ಇಷ್ಟ.ಮಾಡಿದ್ದನೇ ಮಾಡುವುದರಲ್ಲಿ ಏನು ಸುಖ ಇದೆ.ಕಲೆ ಎಂಬ ಮಾಧ್ಯಮ ಕೂಡ ವಿಭಿನ್ನ ಪ್ರಯೋಗಗಳನ್ನು ಮಾಡಲು ಹಾಗೂ ಹೊಸ ಹೊಸ ಸಾಧ್ಯತೆಗಳನ್ನು ಪರಿಚಯಿಸಲೆಂದೇ ಇರುವುದು ಅಲ್ಲವೇ.ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವವನೇ ನಿಜವಾದ ಕಲೆಗಾರ,ಬುದ್ಧಿವಂತ ಹಾಗೂ ಜಾಣ.ಸೋಲು ಗೆಲುವುಗಳು ಎಲ್ಲಾ ಎಂದಿನಂತೆ ಇದ್ದದ್ದೇ.
ವಿಶಿಷ್ಟ ಪ್ರಯೋಗಗಳಿಗೆ ಸದಾ ಮುಂದಾಗುವ ಈ LJP ನಿರ್ದೇಶನದ ಚಿತ್ರಗಳಿಗೆ ಸಪರೇಟ್ ಆದ ಒಂದು ಅಭಿಮಾನಿ ಬಳಗವೇ ಇದೆ.ಅವನ ಹಿಂದಿನ ಎಲ್ಲಾ ಸಿನಿಮಾಗಳು ಎಷ್ಟು ಡಿಫರೆಂಟೋ ಈ Churuli ಮೂವಿ ಕೂಡ ಅವೆಲ್ಲಕ್ಕಿಂತಲೂ ಮತ್ತಷ್ಟು ಡಿಫರೆಂಟು.ಆದರೆ ಈ ಬಾರಿಯ ಆತನ ಪ್ರಯೋಗ ನನ್ನನ್ನೂ ಸೇರಿದಂತೆ ಹಲವರಿಗೆ ಈ ಚಿತ್ರದ ನಿಜವಾದ ಕಥೆ ಏನೆಂದೇ ಗೊತ್ತಾಗದಂತೆ ಮಾಡಿ ಬಿಟ್ಟಿದೆ! ಇದರ ಕಥೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಂಡರೆ ನಿರ್ದೇಶಕ ಗೆದ್ದಂತೆಯೇ,ಏಕೆಂದರೆ ಅವನ ಉದ್ದೇಶ ಅದೇ ಆಗಿತ್ತು ಎನ್ನುವುದು ಮೇಲ್ನೋಟಕ್ಕೆ ಬಹಳಷ್ಟು ಸ್ಪಷ್ಟ.ಸದ್ಯಕ್ಕೆ ಅವನಂತು ಈ ವಿಷಯದಲ್ಲಿ ಗೆದ್ದಿದ್ದಾನೆ ಬಿಡಿ.
ಹೌದು ಈ ಕಾಲ್ಪನಿಕ ಮೂವಿಯ ಕಥೆ ಇತರೆ ಮೂವಿಗಳ ಸಾಮಾನ್ಯ ಕಥೆಗಳಂತೆ ಅಲ್ಲವೇ ಅಲ್ಲ.ಹೇಗೆ ಕ್ರಿಸ್ಟೋಫರ್ ನೊಲನ್ ಮೂವಿ ನೋಡಿದ ನಂತರ ಒಮ್ಮೆಗೆ ಏನು ಅರ್ಥವಾಗದಿದ್ದರೂ ಇತರರ ಮುಂದೆ ಸುಮ್ಮನೆ ಮೂವಿ ಸೂಪರ್ ಸೂಪರ್ ಎಂದು ಹೇಳುವ ಪರಿಪಾಠ ನಮ್ಮಲ್ಲಿ ಹೆಚ್ಚಾಗಿ ಇದೆಯೋ ಅದೇ ಮನಸ್ಥಿತಿಯನ್ನು ಇಲ್ಲಿಯೂ ನಾವು ಅಪ್ಲೈ ಮಾಡಬಹುದಾದರೂ ಅದರಿಂದ ನಮಗೆ ದಕ್ಕುವುದು ಮಾತ್ರ ಏನೂ ಇಲ್ಲ.ಆದರೆ ಈ ಕಥೆಯ ನಿಜವಾದ ತಿರುಳು ಏನೆಂದು ಒಳ ಹೊಕ್ಕು ಅರಿತರೆ ಮಾತ್ರ ನಿಜಕ್ಕೂ ಇದು ಬಹಳಷ್ಟು ವಾವ್ವ್ ಹಾಗೂ ಮ್ಯಾಜಿಕ್ ಅನಿಸುವ ಮೂವಿಯೇ ಹೌದು.
ಈ ಕಥೆ ಏಕೆ ಸುಲಭವಾಗಿ ಅರ್ಥ ಆಗುವುದಿಲ್ಲ ಎಂದರೆ ಇದೊಂದು " Time Loop" ನ ಕಥೆ. ನಮಗೆ ಟೈಂ ಲೂಪ್ ಕಾನ್ಸೆಪ್ಟ್ ಬಗ್ಗೆ ಗೊತ್ತಿದ್ದರಷ್ಟೇ ಈ ಕಥೆ ಒಂದು ರೇಂಜಿಗೆ ನಮಗೆ ಅರ್ಥ ಆಗಬಹುದು. ಈ ಲೂಪ್ ಅನ್ನುವುದನ್ನು ಒಂದು ಜಸ್ಟ್ ವೃತ್ತ ಎಂದು ತಿಳಿದುಕೊಳ್ಳಿ.ಈ ಟೈಂ ಲೂಪ್ ಕಥೆಗಳು ಹೇಗೆ ಕೆಲಸ ಮಾಡುತ್ತದೆ ಎಂದರೆ ಒಂದು ಕಥೆ ಇದ್ದಕ್ಕಿದ್ದಂತೆ ಹೊಚ್ಚ ಹೊಸದಾಗಿ ಆರಂಭವಾದಂತೆಯೇ ನಮ್ಮ ಕಣ್ಣಿಗೆ ಕಾಣುತ್ತದೆ. ನಿರ್ದಿಷ್ಟ ಸಮಯದವರೆಗೆ ಹಾಗೇ ಆ ಕಥೆ ಮುಂದುವರಿಯುತ್ತದೆ.ಆದರೆ ಕೊನೆಯಲ್ಲಿ ಆ ಕಥೆ ಎಲ್ಲಿಂದ ಶುರುವಾಗಿರುತ್ತದೋ ಮತ್ತೆ ಅಲ್ಲಿಗೆ ಬಂದು ನಿಂತು ಬಿಡುತ್ತದೆ.ಅಲ್ಲಿಗೆ ಒಂದು ಲೂಪ್ ಇಲ್ಲವೇ ಒಂದು ವೃತ್ತ ಸಮಾಪ್ತಿಯಾದಂತೆ.ಈಗ ಇನ್ನೊಂದು ಲೂಪ್ ನ ಕಥೆ ಪುನಃ ಅಲ್ಲಿಂದಲೇ ಮತ್ತೆ ಆರಂಭವಾಗುತ್ತದೆ! ಅದೇ ಕಥೆ.. ಅದೇ ಜಾಗ.. ಅದೇ ಜನರು.. ಅದೇ ನೆನಪು.. ಅದಕ್ಕೂ ಮೊದಲು ಅದೇ ಕಥೇ ಅಲ್ಲಿತ್ತು..ಅದರ ನಂತರವೂ ಮತ್ತೆ ಅದೇ ಸೇಮ್ ಕಥೆ ಅಲ್ಲಿ ಇರುವುದು!!
ಈ ಮೂವಿಯಲ್ಲಿಯೂ ಹಾಗೆಯೇ.ಇದರ ಮುಖ್ಯಕಥೆ ಅದಾಗಲೇ ಒಂದಕ್ಕಿಂತ ಹೆಚ್ಚು ಬಾರಿ ಅದಾಗಲೇ ಘಟಿಸಿರುತ್ತದೆ.ಇಲ್ಲಿ ನಾವು ನೋಡುವ ಕಥೆ ಮುಗಿದ ನಂತರ ಆರಂಭವಾಗುವ ಇನ್ನೊಂದು ಕಥೆ ಕೂಡ ಮತ್ತದೇ ಹಳೆಯ ಕಥೆಯೇ ಆಗಿರುತ್ತದೆ.ಬಹುಶಃ ಮುಂದಕ್ಕೆ ಅದೂ ಕೂಡ ಬಹಳಷ್ಟು ಸಲ ಪುನರಾವರ್ತಿತವಾಗಬಹುದು.ಇಂತಹ ಹಲವು ರಿಪಿಟೇಡ್ ಕಥೆಗಳಲ್ಲಿ ಒಂದನ್ನಷ್ಟೇ ಈ ಮೂವಿಯಲ್ಲಿ ನಮಗೆ ತೋರಿಸಿದ್ದಾರೆ ಹಾಗೂ ಉಳಿದ ಎಲ್ಲವನ್ನೂ ನೋಡುಗನ ಊಹೆಗೆ ಬಿಟ್ಟಿದ್ದಾರೆ.ಕಥೆ ಅರ್ಥ ಮಾಡಿಕೊಳ್ಳಬೇಕಾದರೆ ಈ ಕಥೆಯ ಹಿಂದೆ ಏನು ಆಗಿತ್ತು ಹಾಗೂ ಮುಂದೆ ಏನು ಆಗಲಿದೆ ಎಂಬುದನ್ನು ಅರಿಯಬೇಕಾದರೆ ನಾವು ಕಣ್ಣಿಗೆ ಕಾಣದ ಆ ವೃತ್ತದಂತಹ ಲೂಪ್ ಗೆ ಇಳಿದು ಕಥೆಗಳ ಕೊಂಡಿಗಳನ್ನು ಹುಡುಕುತ್ತಾ ಜೋಡಿಸುತ್ತಾ ಆಲೋಚನೆ ಮಾಡುವ ಅನಿವಾರ್ಯತೆ ಇಲ್ಲಿ ಬಹಳಷ್ಟು ಹೆಚ್ಚಿದೆ.ಇಲ್ಲದಿದ್ದರೆ ನಿಜಕ್ಕೂ ಈ ಕಥೆ ಅರ್ಥ ಆಗುವುದೇ ಇಲ್ಲ.
ಅಂದ ಹಾಗೆ ಇದರ ಪ್ರತೀ ಲೂಪ್ ನ ಕಥೆಯಲ್ಲಿ ಬರುವ ಹೆಚ್ಚಿನ ಜನರ ಪಾತ್ರಗಳು ಕೂಡ ಹಿಂದಿನ ಲೂಪ್ ನ ಅದೇ ಪಾತ್ರಗಳೇ ಆಗಿರುತ್ತದೆ,ಆದರೆ ಮುಖ್ಯ ಪಾತ್ರಗಳು ಮಾತ್ರ ಒಂದು ಲೂಪ್ ನಿಂದ ಇನ್ನೊಂದು ಲೂಪ್ ನ ಕಥೆ ಆರಂಭವಾಗುವಾಗ ಒಬ್ಬರ ಜಾಗಕ್ಕೆ ಇನ್ನೊಬ್ಬರು ನಿರಂತರವಾಗಿ ಬದಲಾಗುತ್ತಲೇ ಇರುತ್ತಾರೆ.ಉದಾಹರಣೆಗೆ ಒಂದು ಲೂಪ್‌ನ ಕಥೆಯಲ್ಲಿ ಕಳ್ಳ ಮತ್ತು ಪೋಲಿಸ್ ಇಬ್ಬರು ಇದ್ದರೆ,ಮುಂದಿನ ಲೂಪ್ ನ ಅದೇ ಸೇಮ್ ಕಥೆಯಲ್ಲಿ ಕಳ್ಳನ ಜಾಗಕ್ಕೆ ಹಿಂದಿನ ಲೂಪ್ ನಲ್ಲಿದ್ದ ಪೋಲಿಸ್ ಬಂದಿರುತ್ತಾನೆ ಮತ್ತು ಈ ಹೊಸ ಲೂಪ್ ನ ಪೋಲಿಸನ ಜಾಗಕ್ಕೆ ಮತ್ತೊಬ್ಬ ಹೊಸ ಬೇರೆಯೇ ಪೋಲಿಸ್ ಬಂದಿರುತ್ತಾನೆ.ಅದರ ಮುಂದಿನ ಲೂಪ್ ನ ಕಥೆಯಲ್ಲಿ ಈ ಹೊಸ ಪೋಲಿಸ್ ಅಲ್ಲಿ ಕಳ್ಳ ಆಗುತ್ತಾನೆ!
ಹೇಗೆ ಇಲ್ಲಿ ಪ್ರತೀ ಲೂಪ್ ಗೆ ಒಬ್ಬ ಹೊಸಬನು ಬರುತ್ತಾನೆಯೋ,ಅದೇ ಸಮಯದಲ್ಲಿ ಬಹಳಷ್ಟು ಹಿಂದೆಯೇ ಹಿಂದಿನ ಒಂದೆರಡು ಲೂಪ್ ಗಳಲ್ಲಿ ಕಾಣಿಸಿಕೊಂಡವನು ಒಬ್ಬ ಸದ್ಯಕ್ಕೆ ನಡೆಯುತ್ತಿರುವ ಲೂಪ್ ನಿಂದ ಹೊರಗೆ ಉಳಿದು ಬಿಡುತ್ತಾನೆ.ಆತ ನಿಜವಾಗಿಯೂ ಹೊರಗೆಯೇ ಉಳಿಯುತ್ತಾನಾ ಅಥವಾ ಕಥೆಯಲ್ಲಿ ಉಳಿದ ಪಾತ್ರಗಳಲ್ಲಿ ಒಂದಾಗುತ್ತಾನಾ ಅನ್ನುವುದುರಲ್ಲಿ ನನಗಂತು ಅಷ್ಟಾಗಿ ಸ್ಪಷ್ಟತೆಯಿಲ್ಲ.ಅಂತು ಒಬ್ಬ ಬರುವಾಗ ಖಂಡಿತವಾಗಿಯೂ ಮತ್ತೊಬ್ಬ ಆ ಲೂಪ್ ನಲ್ಲಿ ಇಲ್ಲ ಎಂದು ಸುಲಭವಾಗಿ ಕೆಲವೊಂದು ಲಾಜಿಕ್ ಗಳ ಮೂಲಕ ಊಹಿಸಬಹುದು.ಹೊಸದಾಗಿ ಬಂದವನು ಕೂಡ ಮುಂದಿನ ಕೆಲವು ಲೂಪ್ ಗಳಲ್ಲಿ ತನ್ನ ಪಾತ್ರವನ್ನು ಬದಲಾಯಿಸಿಕೊಳ್ಳುತ್ತಾ ಇರುತ್ತಾನೆ,ಕೊನೆಗೊಂದು ದಿನ ಅವನೂ ಕೂಡ ಮತ್ತೊಬ್ಬ ಹೊಸಬನಿಗಾಗಿ ಈ ಲೂಪ್ ನ ಕಥೆಯಿಂದ ಹೊರಗೆ ಉಳಿಯುತ್ತಾನೆ..!!
ಇದು ಮುಗಿಯುವುದಿಲ್ಲ.ಕಥೆಯ ಲೂಪ್ ನಿರಂತರವಾಗಿ ಮುಂದುವರಿಯುತ್ತದೆ.ಹೊಕ್ಕರೆ ಒಮ್ಮೆಗೆ ಹೊರ ಬರಲಾಗದ ಹಲವು ಸುತ್ತಿನ ಕಥೆಯಿದು.ಮೆಷೀನ್ ನಲ್ಲಿ ರೀಸೆಟ್ ಬಟನ್ ಅದುಮಿದಾಗ ಎಲ್ಲವೂ ಹೇಗೆ ಮೊದಲಿನಂತೆ ಆಗುತ್ತದೆಯೋ ಇಲ್ಲಿಯೂ ಕೂಡ ಲೂಪ್ ಸಂಪೂರ್ಣವಾದಾಗ ಎಲ್ಲವೂ ಮೊದಲಿನಂತೆಯೇ ಆಗುತ್ತದೆ,ಆದರೆ ಮುಖ್ಯ ಪಾತ್ರಗಳು ಮಾತ್ರ ತಮ್ಮ ಪಾತ್ರಗಳನ್ನು ಬದಲಾಯಿಕೊಂಡು ಬಿಡುತ್ತವೆ,ಮತ್ತೆ ಅದೇ ಹಳೆಯ ಕಥೆ ಮುಂದುವರಿಯುತ್ತದೆ.ಆದರೆ ಏತಕ್ಕಾಗಿ ಆ ರೀತಿ ಪಾತ್ರಗಳು ಬದಲಾಗುತ್ತದೆ,ಹೇಗೆ ಬದಲಾಗುತ್ತದೆ,ಇದನ್ನೆಲ್ಲಾ ನಿಯಂತ್ರಿಸುವುದು ಯಾರು ಎನ್ನುವುದನ್ನು ತಿಳಿಯಬೇಕಾದರೆ ನೀವು ಮೂವಿಯಲ್ಲಿ ನೋಡಿಯೇ ಬಹಳಷ್ಟು ಗೊಂದಲಕ್ಕೆ ಬೀಳಬೇಕು ಎನ್ನುವುದು ನನ್ನದೂ ಕೂಡ ಒಂದು ಭಯಂಕರ ಆಸೆ! ಅಂದ ಹಾಗೆ Churuli ಎನ್ನುವುದರ ಮತ್ತೊಂದು ಅರ್ಥವೇ ಸುರುಳಿ ಎಂದು!.. ಇದಂತು ಹೊರ ಬರಲಾಗದ ಸುರುಳಿ!! ವೃತ್ತವನ್ನೂ ಮೀರಿದ Spiral!
ಅಂದ ಹಾಗೆ ನಾನು ಮೇಲೆ ಹೇಳಿದ ಈ ಹಿಂದಿನ ಲೂಪ್ ನಲ್ಲಿ ಆದ ಬದಲಾವಣೆಯ ಕಥೆಯನ್ನಾಗಲಿ ಅಥವಾ ಯಾವುದೇ ಲೂಪ್ ನಲ್ಲಿ ನಡೆದಂತಹ ಬದಲಾವಣೆಯ ಯಾವುದೇ ಕಥೆಯನ್ನಾಗಲಿ, ಒಟ್ಟಿನಲ್ಲಿ ಲೂಪ್ ಎಂಬ ಕಾನ್ಸೆಪ್ಟಿನ ಕಥೆಯನ್ನೇ ನಮಗಿಲ್ಲ ಹೇಳುವುದು ಕೂಡ ಇಲ್ಲ,ತೋರಿಸುವುದೂ ಕೂಡ ಇಲ್ಲ.ಆದರೆ ಇವೆಲ್ಲವೂ ನಮಗೆ ಸದ್ಯ ನಡೆಯುತ್ತಿರುವ ಕಥೆಯ ಕೆಲವೊಂದು ದೃಶ್ಯಗಳಿಗೆ ಸರಿ ಹೊಂದದ ಸಂಭಾಷಣೆಗಳಲ್ಲಿ ಹಾಗೂ ತೋರಿಸುವ ವಿಚಿತ್ರ ಘಟನೆಗಳಲ್ಲಿ ಅಡಗಿ ಕೂತಿದೆ.ಈ ಸಂಭಾಷಣೆ ಏಕೆ ಇಲ್ಲಿದೆ? ಈ ದೃಶ್ಯ ಏಕೆ ಇಲ್ಲಿ ಇರಬೇಕಿತ್ತು? ಅನವಶ್ಯಕವಾಗಿ ಏಕೆ ಇದನ್ನು ಇಲ್ಲಿಗೆ ತಂದು ತುರುಕಿಸಲಾಗಿದೆ?ಯಾಕೋ ಮೂವಿಯ ಕಥೆಗೆ ಬಹಳಷ್ಟು ನಾನ್ ಸಿಂಕ್ ಆಗುತ್ತಿದೆಯಲ್ಲಾ ಎಂದು ಪದೇ ಪದೇ ಅನಿಸುತ್ತದೆ ನೋಡಿ,ಆಗ ಅದರ ಅರ್ಥ ಇದೇ,ಇದನ್ನು ಬೇಕೆಂದೇ ಈ ಮೂವಿಯಲ್ಲಿ ಇಟ್ಟಿದ್ದಾರೆ ಹಾಗೂ ಇದು ಈ ಕಥೆಯಲ್ಲಿ ನಮಗೆ ಅರ್ಥವಾಗದ ಹಾಗೂ ಮೂವಿಯಲ್ಲಿ ತೋರಿಸದೇ ಇರುವ ಇನ್ನಷ್ಟು ಕಥೆಗೆ ಲಿಂಕ್ ಆಗಲ್ಪಟ್ಟಿದೆ ಎಂಬುದೇ ಇದರ ಒಟ್ಟಾರೆ ಅರ್ಥವಾಗಿರುತ್ತದೆ! ನೋಡುಗ ಕಥೆ ಅರ್ಥ ಆಗಬೇಕಾದರೆ ಬೆನ್ನು ಹತ್ತ ಬೇಕಾಗಿರುವುದು ಅದನ್ನೇ.ಏಕೆಂದರೆ ಈ ಮೂವಿಯಲ್ಲಿ ನಮಗೆ ತೋರಿಸುವುದು ಜಸ್ಟ್ ಒಂದು ಕಥೆ ಅಷ್ಟೇ.ಬೇರೆ ಯಾವುದೇ ಲೂಪ್ ಕಥೆ ಇಲ್ಲಿ ಇಲ್ಲ.ಆದರೆ ಅವುಗಳ ಲಿಂಕ್ ಬಹಳಷ್ಟು ಅಲ್ಲಲ್ಲಿ ಇದೆ!!
Lijo Jose Pellissery ನಿರ್ದೇಶನದ ಈ ಮೂವಿಯಲ್ಲಿ Vinay Forrt, Chemban Vinod Jose, Joju George, Soubin Shahir ಹಾಗೂ Jaffar Idukki ಅಭಿನಯಿಸಿದ್ದಾರೆ. ಅಂದ ಹಾಗೆ 'Kaligaminarile Kuttavalikal' ಎನ್ನುವ ಸಣ್ಣಕಥೆಯಿಂದ ಪ್ರೇರಿತವಾದ ಸಿನಿಮಾ ಇದಂತೆ.ಇಲ್ಲಿ ಎಲ್ಲರ ನಟನೆಯೂ ಬಹಳಷ್ಟು ಚೆನ್ನಾಗಿದೆ.ಅದರಲ್ಲೂ ಸಿನಿಮಾಟೋಗ್ರಫಿಯೇ ಈ ಸಿನಿಮಾದ ಆತ್ಮ ಎಂದೇ ಹೇಳಬಹುದು.ಕಾಡಿನಲ್ಲಿಯೇ ನಡೆಯುವ ಈ ಕಥೆಯ ರಾತ್ರಿಯ ದೃಶ್ಯಗಳು ಹಾಗೂ ಅದಕ್ಕೊಪ್ಪುವ ಬ್ಯಾಕ್ಗ್ರೌಂಡ್ ಸ್ಕೋರ್ ಕೂಡ ಅತ್ಯದ್ಭುತವೇ. Lijo ಎಂಬ ನಿರ್ದೇಶಕ Craftsman ನ ಸ್ಟೋರಿ ಟೆಲ್ಲಿಂಗ್ ಟೆಕ್ನಿಕ್ ಇಲ್ಲಿ ಅಂತು ಎಂದಿಗೂ ಮುಗಿಯದ ಸೋಜುಗವೇ.ಮೂವಿ ನೋಡಿ ಮುಗಿಸಿದರೂ ನೋಡುಗನ ತಲೆಗೆ ಆತ ಬಹಳಷ್ಟು ಕೆಲಸ ಕೊಟ್ಟು ಬಿಡುತ್ತಾನೆ.ಇದರ ಕಾಡಿನ ದೃಶ್ಯಗಳು,ಆ ಸೌಂಡ್ ಎಫೆಕ್ಟ್ಸ್,ಸೂಪರ್ ನ್ಯಾಚುರಲ್ ಘಟನೆಗಳಿಗಾಗಿ ಇದು OTT ಗಿಂತಲೂ ಹೆಚ್ಚು ಥಿಯೇಟರ್ ಗೆ ಹೇಳಿ ಮಾಡಿಸಿದ ಮೂವಿಯೇ ಹೌದು.
ದಟ್ಟ ಕಾಡಿನ ನಡುವೆ ಇರುವ ಕೆಲವೇ ಕೆಲವು ಮನೆಗಳು,ಅಲ್ಲಿಗೆ ಎಲ್ಲಿಂದಲೋ ಬರುವ ಒಂದಷ್ಟು ಜನಗಳು,ಕಾಡಿನ ಹೃದಯ ಎನಿಸುವ ಆ ಸೇಂದಿ ಅಂಗಡಿ,ಎರಡು ವಿಭಿನ್ನ ಕಾಡುಗಳ ನಡುವೆ ಇರುವ ಆ ಒಂದು ಮರದ ಸೇತುವೆ,ಆ ಸೇತುವೆ ದಾಟಿ ಇನ್ನೊಂದು ಕಾಡಿಗೆ ಪ್ರವೇಶ ಆದ ಕೂಡಲೇ ಇದ್ದಕ್ಕಿದ್ದಂತೆ ಬದಲಾಗುವ ಜನರ ವರ್ತನೆ,ಅತೀ ಕೆಟ್ಟದಾದ ಬೈಗುಳಗಳು,ಕಾಡಿನಲ್ಲಿ ಎರಡೇ ಬಾರಿ ಕಾಣಿಸಿಕೊಂಡು ಕಥೆಯನ್ನು ಇನ್ನಿಲ್ಲದಂತೆ ಕ್ಲಿಷ್ಟ ಮಾಡುವ ಏಲಿಯನ್ಸ್ ,ಚಲಿಸುವ ಬೆಳಕಿನ ಪುಂಜ, ಕಾಡಿನಲ್ಲಿನಲ್ಲೊಂದು ಮುಗಿಯದ ಬೇಟೆ,ಒಮ್ಮೆ ಮಾತ್ರ ಕಣ್ಣಿಗೆ ಬೀಳುವ ಮರ ತಬ್ಬಿ ಹಿಡಿದ ಹಿರಿಯ ವಯಸ್ಸಿನ ವೃದ್ಧ,ಮಸಾಜು ಮಾಡಿ ಕಥೆಯ ಅರ್ಧ ರಹಸ್ಯ ಸೂಕ್ಷ್ಮವಾಗಿ ಹೇಳುವ ಹೆಂಗಸು,ಕೊನೆಯಲ್ಲಿ ಅಷ್ಟೇ ಬರುವ ಕಥೆಯ ದಿಕ್ಕನ್ನೇ ಬದಲಾಯಿಸುವ ಎರಡು ಪಾತ್ರಗಳು,ಕೆನ್ನೆಗೆ ಹೊಡೆದುಕೊಳ್ಳುವ ಆಟ,ಚುರುಲಿ ಎಂಬ ಹೆಸರಿನದ್ದೇ ಕಾಡಿನ ಆ ಜಾಗ,ಗಡಿ ಭಾಗದಲ್ಲಿ ನಡು ನಡುವೆ ಕೇಳಿ ಬರುವ ಕನ್ನಡದ ಮಾತುಗಳು,ಬದಲಾಗುವ ಊರಿನ ಜನರ ಹೆಸರುಗಳು,ಕಥೆಯಲ್ಲಿ ಅರ್ಧ ಕಾಡಿನ ಬೆಳಿಗ್ಗಿನ ಕಥೆ, ಉಳಿದರ್ಧ ರಾತ್ರಿಯ ಕಾಡಿನ ಕಥೆ,ಇದರ ನಡುವೆ ಸಾಮಾನ್ಯ ಜನರು ಕೆಲವೊಮ್ಮೆ ಬಹಳಷ್ಟು ಸಹಜವಾಗಿ ಮತ್ತೊಮ್ಮೆ ಅರ್ಥವೇ ಆಗದಷ್ಟು ವಿಚಿತ್ರವಾಗಿ ವರ್ತಿಸುವುದು,ಆ ಜನರ ಗ್ರೇ ಶೇಡಿನದ್ದೊಂದು ಲೈಫು,ಬಹಳಷ್ಟು ಭ್ರಮೆ.. ಹೀಗೆ ಎಲ್ಲವೂ ಇಲ್ಲಿ ನಮಗೆ ಹಲವಾರು ಕಥೆ ಹೇಳಲು ಮುಂದಾಗುತ್ತದೆ.ಮೂವಿಯ ಕೊನೆಯವರೆಗೂ ಇದರ ಅಸಲಿ ಕಥೆ ಬಿಡಿ ಇದು ನಿಜವಾಗಿಯೂ ಯಾವ Genre ಗೆ ಸೇರಿದ ಮೂವಿ ಎಂದೇ ಗೊತ್ತಾಗದಂತೆ ಮಾಡಿ ಹುಚ್ಚು ಹಿಡಿಸಿ ಬಿಡುವ ಈ ವಿಚಿತ್ರ ಮೂವಿಯೇ ಅಂತ್ಯವಿಲ್ಲದ ಸುರುಳಿಗಳ "Churuli".
ಈ ಮೂವಿಯನ್ನು ಒಮ್ಮೆ ನೋಡಿದರೆ ಅರ್ಥ ಆಗುವುದಿಲ್ಲ.ಆದರೆ ಒಂದೊಳ್ಳೆಯ ಹಾಗೂ ವಿಭಿನ್ನವಾದ ಮೂವಿ ಎಕ್ಸ್ಪೀರಿಯನ್ಸ್ ಗಾಗಿ ನೀವು ಇದನ್ನು ನೋಡಲೇ ಬೇಕು ಎಂದು ನಾನು ಹೇಳುತ್ತೇನೆ. ಕಾರಣ ಇಷ್ಟೇ ಸುಲಭವಾಗಿ ಅರ್ಥ ಆಗುವ ಮೂವಿಗಳನ್ನು ಎಲ್ಲರೂ ನೋಡುತ್ತಾರೆ ಆದರೆ ಯಾವುದು ಸುಲಭಕ್ಕೆ ಒಮ್ಮೆಗೆ ಅರ್ಥವಾಗುವುದಿಲ್ಲವೋ ಅದರಲ್ಲಿಯೇ ಮೂವಿಯ ಹೆಚ್ಚಿನ ಮಜಾ ಇರುವುದು.ಒಳ್ಳೆಯ ಬರಹಗಾರರ ಬರಹವನ್ನು,ಕಲಾವಿದನೊಬ್ಬನ ಪೈಂಟಿಂಗ್ ಗೆರೆಗಳನ್ನು ಡಿಕೋಡ್ ಮಾಡಿ ಅಭ್ಯಾಸಿಸುವುದು ಹಾಗೂ ಅರ್ಥವಾಗದ ಮೂವಿಯನ್ನು ಸಾಧ್ಯವಾದಷ್ಟು ಅರ್ಥ ಮಾಡಿಕೊಳ್ಳಲೇ ಬೇಕೆಂಬ ಉತ್ಸುಕತೆಯಿಂದ ದಾಳಿಂಬೆ ಕಾಳು ಬಿಡಿಸುವಂತೆ ಬಹಳ ಶ್ರದ್ಧೆಯಿಂದ ಪ್ರತಿಯೊಂದನ್ನು ಬಿಡಿಸುತ್ತಾ ಬಿಡಿಸುತ್ತಾ ಅನಾಲಿಸಿಸ್ ಮಾಡಲಿಳಿಯುವುದರಲ್ಲಿಯೇ ನಿಜಕ್ಕೂ ಅತೀ ಹೆಚ್ಚಿನ ಸುಖವಿರುವುದು.ಕೆಲವೊಮ್ಮೆ ನಮ್ಮ ಊಹೆ,ಆಲೋಚನೆ ಹಾಗೂ ಒಂದಿಷ್ಟು ಅದರ ಬಗೆಗಿನ ಅಧ್ಯಯನಗಳು ತಪ್ಪಾಗಿ ಬಿಡಬಹುದು.ಆದರೆ ಪರವಾಗಿಲ್ಲ,ಆ ಒಂದು ಅನುಭವ ಎಂದಿಗೂ ವಿಶಿಷ್ಟವಾದದ್ದೇ.ಮತ್ತು ಈ ಅಧ್ಯಯನ ಮನೋಭಾವವನ್ನು ನಾವು ನಿರಂತರವಾಗಿ ಇಟ್ಟುಕೊಳ್ಳುವುದರಿಂದ ಮುಂದಕ್ಕೆ ನಿಜಕ್ಕೂ ಅವು ಬಹಳಷ್ಟು ನಮಗೆಯೇ ಪ್ರಯೋಜನವಾಗುವುದು.ಅನುಭವಗಳಿಂದಲೇ ನಾವು ಮಾಗುವುದು ಅಲ್ಲವೇ,ಅದು ಬೇಕಿದ್ದರೆ ಜಸ್ಟ್ ಮೂವಿಯೇ ಆಗಿರಲಿ ಅಥವಾ ಬಹಳಷ್ಟು ನಿಜ ಜೀವನವೇ ಆಗಿರಲಿ..
ನಿಜ ಹೇಳಬೇಕೆಂದರೆ ನನಗೂ ಇದು ಒಮ್ಮೆಗೆ ಬಹಳಷ್ಟು ಅರ್ಥ ಆಗಲಿಲ್ಲ.ಎರಡೆರಡು ಬಾರಿ ಕಣ್ಣು ಬಾಯಿ ಬಿಟ್ಟು ಕೊಂಡು ಇಡೀ ಮೂವಿ ನೋಡಿದೆ,ಡೀಪಾಗಿ ಮೂವಿಯ ಪ್ಲಾಟ್ ನ್ನು ಕೂಡ ಓದಿದೆ,ನನಗೆ ಕಥೆ ಒಂದಿಷ್ಟು ಅರ್ಥವಾದ ನಂತರ ಹಲವಾರು ಲೇಖಕರ,ಯ್ಯೂಟೂಬರ್ ಗಳ ಭಿನ್ನ ವಿಭಿನ್ನ ವಿಮರ್ಶೆಗಳನ್ನು ಕೂಡ ನೋಡಿ ಒಂದಕ್ಕೊಂದು ಪರೀಕ್ಷೀಸಿ ತಾಳೆ ಹಾಕಿದ ಮೇಲೆ(ನಿಜ ಹೇಳಬೇಕೆಂದರೆ ಎಲ್ಲರ ವಿಮರ್ಶೆಯೂ ಒಂದಕ್ಕಿಂತ ಒಂದು ಡಿಫರೆಂಟು,ಯಾವುದರಲ್ಲಿಯೂ ನಿಖರವಾದ ಹೊಂದಾಣಿಕೆಯೇ ಇಲ್ಲ! )ಒಂದು ರೇಂಜಿಗೆ ಇದರ ಕಥೆ ನನಗೆ ಅರ್ಥವಾಯಿತು ಎಂದು ಹೇಳಬಹುದಾದರೂ,ನನಗೆ ಸ್ಪಷ್ಟವಾಗಿಯೇ ಗೊತ್ತು,ನನಗೆ ಅರ್ಥವಾಗಿದ್ದಷ್ಟೇ ಇದರ ಕಥೆ ಅಲ್ಲವೆಂದು! ಇದರಲ್ಲಿ ಇನ್ನೂ ಏನೋ ಇದೆ.ವಿಮರ್ಶೆ,ವಿಶ್ಲೇಷಣೆಗೆ ಸುಲಭಕ್ಕೆ ಸಿಗದಂತವುಗಳು ಕೂಡ ಒಂದಿಷ್ಟು ಇಲ್ಲಿ ಇದೆ.ಏಕೆಂದರೆ ಈ ಮೂವಿ ಇರುವುದೇ ಹಾಗೆ.ಈ ಕಥೆ ಇಷ್ಟೇ ಎನ್ನುವ ಅತೀ ಸರಳ ಸುಲಭ ಸ್ಪೂನ್ ಪೀಡಿಂಗ್ ಅನ್ನು ನಿರ್ದೇಶಕ ಇಲ್ಲಿ ನೋಡುಗನಿಗೆ ಮಾಡುವುದಿಲ್ಲ.ಜಗತ್ತಿನ ಸಣ್ಣ ಕಥೆ “For Sale: Baby shoes, never worn ” ಇದ್ದಂತೆ ಇದು.ಹೌದು ಒಬ್ಬೊಬ್ಬರಿಗೆ ದಕ್ಕಿದಂತೆ ಇದರ ಕಥೆ ಇರುವುದು.*ಲಾಜಿಕ್ ಸರಿ ಇದ್ದರೆ ಇಲ್ಲಿ ಎಲ್ಲರ ದೃಷ್ಟಿಕೋನವೂ ಸರಿಯೇ,ಎಲ್ಲರ ಅನುಭವಗಳವೂ ಸರಿಯೇ..
ಮೂವಿ ನೋಡಿ.ಅರ್ಥ ಆಗದಿದ್ದರೆ ಚಿಂತೆ ಬೇಡ.ಶುರುವಿನ ಆ ಒಬ್ಬ ಸಾಧು ಹಾಗೂ ಚಿಪ್ಪು ಹಂದಿಯ ಸಣ್ಣ ಕಥೆಯನ್ನು ಸರಿಯಾಗಿ ನೆನಪಿನಲ್ಲಿ ಇಟ್ಟುಕೊಂಡು ಮುಂದಿನ ಈ ವಿಚಿತ್ರ ಕಥೆಯನ್ನು ನೋಡುತ್ತಾ ಹೋಗಿ.ಪ್ರತೀ ಸಂಭಾಷಣೆ ಹಾಗೂ ಘಟನೆಗಳನ್ನು ಕೂಡ ಎಚ್ಚರಿಕೆಯಿಂದ ಗಮನಿಸಿ.ಅದು ಕೊಡುವ ಹಿಂದಿನ ಲೂಪ್ ಗಳ ಕ್ಲೂ ಗಳನ್ನು ಕೂಡ ಸೂಕ್ಷ್ಮವಾಗಿ ಗಮನಿಸಿ. ಆದರೂ ಇಲ್ಲಿ ಕೊನೆಯವರೆಗೂ ಏನೂ ಅರ್ಥವಾಗುವುದಿಲ್ಲ.ಆಗಲೂ ಚಿಂತೆ ಬೇಡ.ಆದರೆ ಕೊನೆಯಲ್ಲಿ ಒಂದು ದೃಶ್ಯವಿದೆ.ನಡು ರಾತ್ರಿಯಲ್ಲಿ ದಟ್ಟ ಕಾಡಿನ ನಡುವೆ ಕಾಡಿನಿಂದ ಹೊರ ಹೋಗುತ್ತಿರುವ ಕಳ್ಳ ಹಾಗೂ ಪೋಲಿಸರ ಜೀಪ್ ಒಂದು,ಹಾಗೇ ನೆಲ ಬಿಟ್ಟು ಆಕಾಶದ ಚಂದಿರನತ್ತ ಹಾರುತ್ತದೆ! ಈ ಒಂದು ನಿರ್ದಿಷ್ಟ ಕ್ಷಣದಲ್ಲಿಯೇ ನೀವು ಇಡೀ ಮೂವಿಯ ನಿಗೂಢ ಬಿಂದುಗಳನ್ನು ಸೇರಿಸಿಕೊಂಡು ಇಡೀ ಮೂವಿಯ ಕಥೆ ಹೀಗಿರಬಹುದು ಎಂದು ಊಹಿಸಬೇಕಾಗಿರುವುದು.ಅರ್ಥ ಆದರೆ ಆ ಕ್ಷಣವೇ ಈ ಮೂವಿ ಬಹಳಷ್ಟು ಮುದ್ದಾಡುವಷ್ಟು ನಿಮ್ಮದಾಗಿ ಬಿಡುತ್ತದೆ.ಜೊತೆಗೊಂದಿಷ್ಟು ಮನಸ್ಸಿನಲ್ಲಿಯೇ ವಾವ್ವ್ ಮೂವೆಂಟ್.ಸ್ವಲ್ಪವೂ ಅರ್ಥವೇ ಆಗದಿದ್ದರೆ "This is not your cup of tea.." ಅಷ್ಟೇ!
#Churuli | SonyLIV
Malayalam Movie
Mystery /Sci-fi
Release - November 2021
Movies
Ab
Comments
Post a Comment