Madhuram
#Madhuram | SonyLIV
ಪ್ರೀತಿಯೇ ಹಾಗೆ... ಅದರ ಮಾತುಗಳನ್ನು ಒಂದರ ನಂತರ ಒಂದೊಂದಾಗಿ ಪೋಣಿಸುತ್ತಾ ಹೋದರೆ ಆಗ ಅದು ಕಥೆ,ಆದರೆ ಮಾತುಗಳ ನಡುವೆಯೇ ಇದ್ದಕ್ಕಿದ್ದಂತೆ ಹೇಳದೆ ಕೇಳದೆ ಜನ್ಮ ತಾಳುವ ಮೌನವೊಂದು ಹಾಗೇ ಸುದೀರ್ಘವಾಗಿ ಬಿಟ್ಟರೆ,ಆಗ ಅಲ್ಲಿಂದಲೇ ಅದೊಂದು ಮುಗಿಯದ ಕಾದಂಬರಿ.
ಅವಳು ಬಿರಿಯಾಣಿಗಾಗಿ ಮೊಸರು ಬಜ್ಜಿ ತಿನ್ನುತ್ತಿದ್ದಳೋ ಅಥವಾ ಮೊಸರು ಬಜ್ಜಿಗಾಗಿಯೇ ಬಿರಿಯಾಣಿ ತಿನ್ನುತ್ತಿದ್ದಳೋ ಎಂದನಿಸುವಂತೆ ಮಾಡುವವಳು.ಅವಳಿಗೆ ಆ ಹೋಟೆಲಿನ ಬಿರಿಯಾಣಿಯೂ ಇಷ್ಟ,ಜೊತೆಗೆ ಅವನೂ ಇಷ್ಟ.ಅವನಿಗಂತು ಅವಳು ಮೊದಲೇ ತುಂಬಾ ತುಂಬಾ ಇಷ್ಟ.
ದೊಡ್ಡ ಕಣ್ಣುಗಳ ಅವಳ ಅಗಲದ ಮೂಗು ಬೊಟ್ಟು ಕೂಡ ಬಹಳಷ್ಟು ಚಂದ.ಎಷ್ಟೋ ಸಲ ಅವಳು ಬರೀ ಕಣ್ಣಲ್ಲಿಯೇ ಮಾತಾಡುತ್ತಿದ್ದಳು.ಅವಳಿಗಿಂತಲೂ ಅವಳ ಕಣ್ಣೇ ಹೆಚ್ಚು ಅಂದ. ಅಂದ ಹಾಗೆ ಅವಳು ಹಪ್ಪಳ ಮಾಡುತ್ತಿದ್ದಳು.ಹಪ್ಪಳ ಮಾಡಿ ಹೋಟೆಲಿಗೆ ಮಾರಾಟ ಮಾಡುತ್ತಿದ್ದಳು;ಜೊತೆಗೆ ವಿವಿಧ ಬಗೆಯ ಸ್ವೀಟುಗಳನ್ನು ಕೂಡ.ಅವನು ರಜಾ ದಿನಗಳಲ್ಲಿ ಆ ಹೋಟೆಲಿನಲ್ಲಿ ನೀರುಳ್ಳಿ ಹಚ್ಚುತ್ತಿದ್ದ,ಮಸಾಲೆ ಹಾಕಿ ಘಮ್ಮನೆಯ ಬಿರಿಯಾಣಿ ಸಿದ್ಧಪಡಿಸುತ್ತಿದ್ದ.ಅವಳಿಗೆಂದೇ ವಿಶೇಷವಾಗಿ ಹಾಗೂ ಬಹು ಪ್ರೀತಿಯಿಂದಲೇ ರುಚಿ ರುಚಿಯಾದ ಬಿರಿಯಾಣಿ ಅವನು ಮಾಡುತ್ತಿದ್ದ.ಇದೆಲ್ಲಾ ಹೇಗೆ ಎಂದು ಅವಳು ತಟ್ಟೆಯ ಬಿರಿಯಾಣಿಯನ್ನು ಬೆರಳುಗಳಲ್ಲಿ ಬಿಡಿಸುತ್ತಾ ಇಷ್ಟಗಲ ಕಣ್ಣಗಲಿಸಿ ಅವನಲ್ಲಿ ಕೇಳಿದರೆ 'ಅದೆಲ್ಲಾ ಮ್ಯಾಜಿಕ್' ಎಂದು ನಾಚುತ್ತಲೇ ಹೇಳಿ ಅವನು ಒಳಗೂ ಹೊರಗೂ ಬಹಳಷ್ಟು ನಕ್ಕು ಬಿಡುತ್ತಿದ್ದ.ಅವನು ರಜೆಯಲ್ಲಿ ಅಷ್ಟೇ ಆ ಹೋಟೆಲಿನಲ್ಲಿ ದುಡಿಯುತ್ತಿದ್ದ.ರಜೆ ಮುಗಿದ ಕೂಡಲೇ ಶಿಪ್ ಒಂದರಲ್ಲಿ ತನ್ನ ಎಂದಿನ ಕೆಲಸಕ್ಕಾಗಿ ಹೊರಟು ಬಿಡುತ್ತಿದ್ದ.ಅದೆಷ್ಟೋ ತಿಂಗಳು ಅವನು ಕಡಲಿನಲ್ಲಿಯೇ ಇರುತ್ತಿದ್ದ.ತೆಲುವ ಹಡಗಿನಲ್ಲಿಯೂ ಅವನು ಅಡುಗೆಯ ಕೆಲಸವನ್ನೇ ಮಾಡುತ್ತಿದ್ದ.
ಈ ಇಬ್ಬರ ನಡುವೆಯೇ ಮಧುರವಾದ ಪ್ರೀತಿ ಹುಟ್ಟಿ ಕೊಂಡಿತು.ಹುಟ್ಟಲೇ ಬೇಕಿತ್ತು.ಒಂದು ದಿನ ಬೇಸರದಿಂದಲೇ ಅವಳು ಹೇಳಿದಳು 'ನೀನು ಕೆಲಸಕ್ಕೆಂದು ಅಷ್ಟು ದೂರ ಹೋದಾಗ ನನಗೆ ಏನಾದರೂ ಆದರೆ ಇಲ್ಲಿ ಯಾರು ಇದ್ದಾರೆ ? '.
ಅಂದಿನಿಂದ ಅವನು ಹೋಗಲಿಲ್ಲ..!
ಅವಳನ್ನು ಬಿಟ್ಟು ಎಂದೆಂದಿಗೂ ಅವನು ಎಲ್ಲಿಗೂ ಹೋಗಲೇ ಇಲ್ಲ!!
ಮಾತಿದ್ದರೂ ಮಾತು ಇರದೇ ಇದ್ದರೂ.. ಅವನು ಸದಾ ಅವಳ ಬಳಿಯೇ ಇದ್ದ!
ಏಕೆ?!
Ahammed Khabeer ನಿರ್ದೇಶನದ ಈ ಮೂವಿಯಲ್ಲಿ Joju George,Shruti Ramachandran,Arjun Asokan,Indrans,Lal ಮತ್ತು Nikhila Vimal ಇದರಲ್ಲಿ ಅಭಿನಯಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗುವ ರೋಗಿಗಳದ್ದು ಒಂದು ಕಥೆಯಾದರೆ,ಆ ರೋಗಿಗಳ ಆಪ್ತರದ್ದು ಇನ್ನೊಂದು ಕಥೆ.ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಂಬಂಧ ಪಟ್ಟವರು ವಾರಗಟ್ಟಲೆ,ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿಯೇ ತಾವು ಕೂಡ ಉಳಿಯಬೇಕಾದ ಸಂದರ್ಭ ಬಂದಾಗ, ಅವರೆಲ್ಲರ ನಡುವೆಯೇ ಹಾಗೇ ಒಂದು ಪರಿಚಯ ಏರ್ಪಡುತ್ತದೆ.ಆ ನಂತರ ಆ ಪರಿಚಯ ಮೆಲ್ಲಗೆ ಸ್ನೇಹ ಸಂಬಂಧವಾಗಿ ಬದಲಾಗಿ ಬಿಡುತ್ತದೆ.ಇದು ಅಂತಹದ್ದೇ ಕಥೆ.ಇಲ್ಲಿಯ ಒಬ್ಬೊಬ್ಬರ ಕಥೆಯೂ ಇನ್ನೊಬ್ಬರಿಗಿಂತ ವಿಭಿನ್ನ.ಎಲ್ಲರೂ ಸಮಾನ ದುಃಖಿಗಳೇ.ಆದರೆ ಒಬ್ಬರ ನೋವೇ ಮತ್ತೊಬ್ಬರನ್ನು ಸರಿ ದಾರಿಗೆ ತರುತ್ತದೆ,ಬದುಕು ಬೆತ್ತ ಹಿಡಿಯದೆಯೇ ಬಿಸಿ ತಾಗುವಂತ ಪಾಠವನ್ನೇ ಹೇಳುತ್ತಾ ಹೋಗುತ್ತದೆ!
ನಿಜಕ್ಕೂ ಬಹಳ ಸೊಗಸಾದ ಮೂವಿ.ನೀವು ನೋಡಲು ಜಸ್ಟ್ ಶುರು ಮಾಡಿ,ಆ ನಂತರ ಇದುವೇ ನಿಮ್ಮ ಕೈ ಹಿಡಿದು ಹಾಗೇ ಎರಡು ಗಂಟೆ ಸ್ನೇಹ,ಪ್ರೀತಿಗಳ ಲೋಕದಲ್ಲಿ ಸುತ್ತಾಡಿಸಿ ಬಿಡುತ್ತದೆ.ಒಂಥರಾ ಹೃದಯಕ್ಕೆ ಸುಖ ಕೊಡುವ ಮೂವಿ ಇದು.ಎಷ್ಟು ಸುಖ,ಎಂತಹ ಸುಖ ಎಂದು ಕೇಳಿದರೆ ಹೇಳುವುದು ಸ್ವಲ್ಪ ಕಷ್ಟ.ಫೀಲ್ ಗುಡ್ ಮೂವಿ ಅಂದರೂ ತಪ್ಪಿಲ್ಲ.ಹಾಡುಗಳು ಮಧುರವಾಗಿದೆ.ಎಲ್ಲರ ಅಭಿನಯ ಕೂಡ ಅಷ್ಟೇ ಸೊಗಸಾಗಿದೆ.ಇದು ಬಹಳಷ್ಟು ನಗಿಸುತ್ತದೆ,ಒಂದಿಷ್ಟು ಅಳಿಸುತ್ತದೆ,ಹೃದಯವನ್ನು ಕೂಡ ಅಲ್ಲಲ್ಲಿ ಬೆಚ್ಚಗಾಗಿಸುತ್ತದೆ,ಮನಸ್ಸು ಮಾತ್ರ ಕೊನೆ ಕೊನೆಗೆ ಬೇಡವೆಂದರೂ ಸಿಕ್ಕಾಪಟ್ಟೆ ಭಾರ,ಆವಾಗ ಕಥೆಗೂ ಕೂಡ ಮಾತು ಸಾಕು ಎಂದೆನಿಸುತ್ತದೆ.ಶುರು ಅಲ್ಲಿಂದಲೇ ಮೌನವೊಂದರ ಅಂತ್ಯವಿರದ ಕಾದಂಬರಿ.ಇಷ್ಟವಾಯಿತು,ನೋಡಿ ನಿಮಗೂ ಇಷ್ಟವಾಗಬಹುದು "ಮಧುರಂ". ಹೆಸರಿನಂತೆಯೇ ಇದು ಬಹಳಷ್ಟು ಮಧುರವಾಗಿದೆ.
#Madhuram | SonyLIV
Malayalam Movie
Family Drama
Release - 24 Dec 2021
Movies
Ab
Comments
Post a Comment