Bhimante Vazhi

 #Bheemante_Vazhi  | Prime




ಇದು ಅಂತಹ ಭಯಂಕರ ಪಿಚ್ಚರ್ ಏನೂ ಅಲ್ಲ.ಆದರೂ ಇದು  ಸಿಕ್ಕಾಪಟ್ಟೆ ಮಜವಾಗಿದೆ.ಹಾಗೇ ನಕ್ಕು ಒಂದಿಷ್ಟು ಹಗುರವಾಗಲು ಹೇಳಿ ಮಾಡಿಸಿದ ಮೂವಿ ಇದು.ಹೆಸರೇ ಹೇಳುವಂತೆ ಇದು " ಭೀಮನ ರಸ್ತೆ ".ರೈಲ್ವೆ ಹಳಿ ಪಕ್ಕದ ಆ ಊರಿನ ಕೇರಿಯವರಿಗೊಂದು ಸರಿಯಾದ ರೋಡು ಇಲ್ಲ.ರೋಡು ಇಲ್ಲವೆಂದಲ್ಲ,ಒಂದು ಅಂಕುಡೊಂಕಾದ ರೋಡು ಅವಶ್ಯವಾಗಿ ಅಲ್ಲಿದೆ.ಆದರೆ ಅದರಲ್ಲಿ ಸ್ಕೂಟರ್,ಬೈಕ್ ನಂತಹ ದ್ವಿಚಕ್ರ ವಾಹನ ಅಷ್ಟೇ ಹೋಗಬಹುದೇ ಹೊರತು,ಕಾರು ಹೋಗುವಷ್ಟು ಅದು ಅಗಲವಾಗಿಲ್ಲ.ಭೀಮ ಎಂಬ ಉತ್ಸಾಹಿ ಮನುಷ್ಯ ಕೇರಿಯ ಎಲ್ಲರನ್ನೂ ಸೇರಿಸಿಕೊಂಡು ಈ ಬಾರಿ ರೋಡ್ ಮಾಡಲೇ ಬೇಕೆಂದು,ರೋಡಿಗಾಗಿ ಎಲ್ಲರೂ ತಮ್ಮ ತಮ್ಮ ಜಾಗಗಳಲ್ಲಿ ಒಂದಿಷ್ಟನ್ನು ಬಿಟ್ಟು ಕೊಡುವಂತೆ ಎಲ್ಲರ ಮನ ಒಲಿಸುತ್ತಾ,ಅದಕ್ಕೆ ಒಪ್ಪದವರ ಜೊತೆಗೊಂದು ನಿರಂತರವಾಗಿ ಪೆಟ್ಟ್ ಲಡಾಯಿ ಮಾಡುತ್ತಾ ಹೋಗುವ ಕುಶಾಲಿನ ಕಥೆಯೇ ಈ ಮೂವಿಯ ಕಥೆ.


Ashraf Hamza ಇದನ್ನು ನಿರ್ದೇಶಿಸಿದ್ದು,Kunchacko Boban,Chemban Vinod Jose, Megha Thomas, Suraj Venjaramoodu ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ.


ಇದೊಂದು ಕಾಮಿಡಿ ಮೂವಿ.ಮಲಯಾಳಂ ಕಾಮಿಡಿ ಇಷ್ಟ ಪಡುವವರಿಗೆ ಇದು ಕೂಡ ಎಂದಿನಂತೆ ಇಷ್ಟವಾಗಬಹುದು.ಒಂದೆರಡು ದೃಶ್ಯಗಳಲ್ಲಿ ಅಷ್ಟೇ ಬರುವ Suraj Venjaramoodu ಇಲ್ಲಿ ತುಂಬಾನೇ ನಗಿಸುತ್ತಾನೆ.ಕಾಮಿಡಿ ಬಿಟ್ಟರೆ ಇದರ ಉಳಿದೆಲ್ಲಾ ಡೀಟೈಲ್ ಗಳು ಸಹ ಅಷ್ಟೇ ಚೆನ್ನಾಗಿದೆ.ದಡ ಸೇರದ ಪ್ರೀತಿಯಿದೆ,ಅದರ ಜೊತೆಗೆ ಚೆನ್ನಾಗಿ ಮಾಗಿದ ಪ್ರೇಮವೂ ಇದೆ.ಹೊಳೆಗೊಂದು ಉದ್ದಕ್ಕೆ ಅಡ್ಡಲಾಗಿ ಮರದ ಸೇತುವೆ ಇದೆ,ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ಆಗುವ ಅವನೊಬ್ಬ ಪೋರ ಇದ್ದಾನೆ,ಆ ಸೈಕಲ್ ಮ್ಯಾನ್ ನ ಭುಜದಲ್ಲಿ ಸದಾ ಆಸೀನವಾಗಿರುವ ಕಾಗೆಯಂತಹ ಒಂದು ಕೋಳಿ ಇದೆ,ಊರಿನ ಗದ್ದಲದ ನಡುವೆ ತನ್ನ ಮಾಮೂಲಿ ಲಹರಿಯಲ್ಲಿ ನೆಮ್ಮದಿಯಿಂದಲೇ  ಓಡುವ ರೈಲು ಇದೆ,ಊರಿಗೊಬ್ಬನೇ ಜಂಟಲ್ ಮ್ಯಾನ್ ಖ್ಯಾತಿಯ ಅವನೊಬ್ಬ ಇದ್ದಾನೆ ,ಎಲೆಮರೆಯ ಕಾಯಿಯಂತಹ ಒಬ್ಬ ಮುಗ್ಧ ಜನ ಕೂಡ  ಇಲ್ಲಿ ಇದ್ದಾನೆ,ಸಿಕ್ಕಾಪಟ್ಟೆ ಚೊರೆಪಟ್ ಹಾಗೂ ಅಷ್ಟೇ ಒಟ್ರಾಸಿ ಪೆಟ್ಟಿಸ್ಟ್  ಒಬ್ಬ ಇದ್ದಾನೆ,ಒಬ್ಬನಂತು ತುಂಬಾನೇ ಕುಡುಕ,ಮತ್ತೊಬ್ಬ ಸಮಾಜ ಸೇವಕ ಜೊತೆಗೆ ಬಹಳಷ್ಟು ರೋಮ್ಯಾಂಟಿಕ್, ಬೆಕ್ಕಿನ ಕಣ್ಣು ರಾಜೇಂದ್ರನನ್ನು ನೆನಪಿಸುವ ಅವನೊಬ್ಬ ಡೈಲಾಗ್ ಕಿಂಗ್ ಇದ್ದಾನೆ,ನಡುವೆ  ಬಂದು ಹೋಗುವ ಬೀದರಿನ ಹುಡುಗಿ ಇದ್ದಾಳೆ,ಅವಳಿಗಾಗಿ ಮೆಲ್ಲಗೆ ಕೇಳಿ ಬರುವ " ಚಿಕ್ಕಮಗಳೂರ ಚಿಕ್ಕ ಮಲ್ಲಿಗೆ, ಸಕ್ಕರೆಯ ಮಾತು ಒಂದು ಹೇಳು ಮೆಲ್ಲಗೆ" ಹಾಡು ಸಹ ಇದೆ,ಅದರ ಜೊತೆಗೆ ಕರ್ನಾಟಕದ ಮುದ್ದೆ ಹಾಗೂ ಮಟನ್ ಕರ್ರಿಯೂ ಇದೆ.ರೋಡ್ ಮಾಡಿಯೇ ತೀರಬೇಕು ಎಂದು ಭೀಮ ಆಂಡ್ ಗ್ಯಾಂಗ್ ಮಾಡುವ ಬಹಳಷ್ಟು ತಂತ್ರ ಕುತಂತ್ರಗಳು,ಇವೆಲ್ಲದರ ನಡುವೆ  ಹುಲುಸಾಗಿ ನಕ್ಕು ನಗಿಸುವ ಬಹಳಷ್ಟು ಪುಷ್ಕಳವಾದ ಹಾಸ್ಯ ಈ ಮೂವಿಯಲ್ಲಿದೆ.ನನಗೆ ಹಾಸ್ಯದ Genre ತುಂಬಾನೇ ಇಷ್ಟ.ಹಾಗಾಗಿ ಇದು ಇಷ್ಟವಾಯಿತು.ನೋಡಿ ನಿಮಗೆ ಇಷ್ಟ ಆದರೂ ಆಗಬಹುದು ಭೀಮನದ್ದೊಂದು ಈ ರಸ್ತೆ.. 


#Bheemante_Vazhi | Prime

Malayalam Movie

Comedy Drama

Release - December 2021


Movies

Ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ