ಫಲ್ಗುಣಿಯ ಗರ್ಭದೊಳ್

 #ಫಲ್ಗುಣಿಯ_ಗರ್ಭದೊಳ್... 




ಈ ದಿನ ಬಂತೆಂದರೆ ಸಾಕು,ಚಿಕ್ಕಂದಿನಲ್ಲಿ ಅಮ್ಮ ಬೆಳಿಗ್ಗೆಯೇ ಮನೆಯಿಂದ ನನ್ನನ್ನು ಹೊರಗೆ ಓಡಿಸಿ ಬಿಡುತ್ತಿದ್ದಳು.ಅವಳದ್ದೊಂದು ಹಿಂದಿನ ರಾತ್ರಿಯೇ ಶುರುವಾಗುವ ಆ ಪಿರಿಪಿರಿ,ಬೆಳ್ಳಂಬೆಳಗ್ಗಿನ ಞಂಕ್ಕ್ ಞೈ,ಉಗ್ರವೆನಿಸುವ ಆ ಕಠೋರವಾದ ಆದೇಶ,ನಾನು ಮಣಿಯದೇ ಇದ್ದಾಗ ಕೊನೆಯ ಅಸ್ತ್ರವಾದ ಪರಿಪರಿಯ ಮನವಿ,ಹೀಗೆ ಎಲ್ಲದರ ಹಿಂದಿನ ಉದ್ದೇಶ ಒಂದೇ ಆಗಿತ್ತು;ಅದೇ "ಎಳ್ಳಮವಾಸ್ಯೆಗೆ ಒಮ್ಮೆ ಫಲ್ಗುಣಿಗೆ ಹೋಗಿ,ದಾನ ಬಿಟ್ಟು ನೀರಲ್ಲಿ ಮುಳುಗಿ ಬಾ ಮಾರಾಯ.." ಎಂಬುವುದೇ ಆಗಿತ್ತು.


ಫಲ್ಗುಣಿ ನನಗೇನು ಹೊಸಬಳಲ್ಲ.ಅವಳ ಪರಿಚಯ ನನಗೆ ಬಹಳನೇ ಹಳೆಯದ್ದು.ಅವಳಿಗೂ ನನ್ನ ಬಹಳ ಸೊಗಸಾದ ಪರಿಚಯವಿದೆ.ಮನೆಯಲ್ಲಿ ಅಮ್ಮ ಒತ್ತಾಯದಿಂದ ಕಳುಹಿಸಿದರೂ,ಎಳ್ಳಮವಾಸ್ಯೆಗೆ ಬಹು ಸಂಭ್ರಮದಿಂದ ಹೂವು, ಹಣ್ಣು ಕಾಯಿಯೊಂದಿಗೆ ಫಲ್ಗುಣಿ ಕಡೆಗೆ ಧಾವಿಸಲು ಆಗ ನಮಗೆಲ್ಲಾ ಮಕ್ಕಳಿಗೆ ವಿಶೇಷವಾದ ಕಾರಣಗಳು ಕೂಡ ಒಂದಷ್ಟು ಇದ್ದವು. 


ನದಿಯ ತಣ್ಣನೆಯ ನೀರಿನಲ್ಲಿ ನಿಂತುಕೊಂಡು ನವಧಾನ್ಯ,ಮನೆಯ ಅಂಗಳದಿಂದಲೇ ಕೊಯ್ದು ತಂದ ತಾಜಾ ಹೂವುಗಳು,ಒಂದಿಷ್ಟು ನಾಣ್ಯ,ದೀಪ ಬೆಳಗಲು ಕರ್ಪೂರ ಇಲ್ಲವೇ ಎಣ್ಣೆಯಲ್ಲಿ ಅದ್ದಿದ ಬತ್ತಿ,ಹೀಗೆ ಎಲ್ಲವನ್ನೂ ತುದಿ ಬಾಳೆಲೆಯಲ್ಲಿಟ್ಟು,ಎಲೆಯ ಸಹಿತ ಅವೆಲ್ಲವನ್ನೂ ನಮಗೆ ನಾವೇ ತಲೆಗೆ ಮೂರು ಸುತ್ತು ನಿವಾಳಿಸಿ ತೆಗೆದು,ಆ ನಂತರ ಎಲೆಯ ಮೇಲೊಂದು ಕರ್ಪೂರವನ್ನು ಉರಿಸಿ ಕರ್ಪೂರದಾರತಿ ಇಲ್ಲವೇ ಎಣ್ಣೆ ಬತ್ತಿ ಬೆಳಗಿಸಿ ಫಲ್ಗುಣಿಗೊಂದು ದೀಪದಾರತಿ ಎತ್ತಿ,ಆ ನಂತರ ಆ ಎಲೆಯನ್ನು ಅವಳ ನೀರಲ್ಲಿ ದೂರಕ್ಕೆ ತೇಲಿ ಬಿಡುವುದರಲ್ಲಿ ಅದೇನೋ ತುಂಬು ಖುಷಿ ಇರುತ್ತಿತ್ತು ನಮಗೆಲ್ಲಾ.


ಈ ಕ್ರಮಕ್ಕೆ ದಾನ ಬಿಡುವುದು,ದಾನ ನೀಡುವುದು ಎಂದೆಲ್ಲಾ ಹೆಸರಿದೆ.ಅದೆಷ್ಟು ಚಂದದ ಕ್ರಮ.ದುಂಬಿ ಹಾರಿ ಬರದಿದ್ದರೂ ಇದ್ದನ್ನೆಲ್ಲ ನೋಡುವಾಗ ನಮ್ಮ ಮನಸ್ಸು ಮಾತ್ರ ನಮ್ಮಷ್ಟಕ್ಕೇ  ಅರಳುತ್ತಲೇ ಹೋಗುತ್ತಿತ್ತು.ಇದನ್ನು ಯಾಕೆ ಮಾಡುತ್ತಾರೆ,ಇದರಿಂದ ಏನು ಲಾಭವಿದೆ ಎನ್ನುವುದರ ಗೊಡವೆಗಳೇ ನಮಗಿರಲಿಲ್ಲ.ಮನೆಯ ಹೂ ಕೊಯ್ಯಬೇಕು,ಅದನ್ನು ಫಲ್ಗುಣಿಯಲ್ಲಿ ಬಿಡಬೇಕು,ನಾವೇ ಚಂದವಾಗಿ ಅವಳಿಗೊಂದು ಶ್ರದ್ಧೆಯ ಆರತಿ ಎತ್ತಬೇಕು,ನಮ್ಮ ದೀಪ ಸ್ನೇಹಿತ/ಸ್ನೇಹಿತೆಯ ದೀಪಕ್ಕಿಂತ ನದಿಯಲ್ಲಿ ತುಂಬಾ ದೂರದವರೆಗೆ ಮಗುಚದೇ ಹಾಗೇ ತೇಲುತ್ತಾ ಹೋಗಬೇಕು ಎನ್ನುವುದಷ್ಟೇ ನಮ್ಮ ಮನಸ್ಸಿನಲ್ಲಿ ಇದ್ದದ್ದು.ಇಂತಹ ಮನಸ್ಸು ಅರಳುವ ಸುಂದರ ದೃಶ್ಯಗಳನ್ನು ತದೇಕಚಿತ್ತದಿಂದ ನೋಡಿ ಕಣ್ಣು ತುಂಬಿಸಿಕೊಳ್ಳುವಾಗ ಸುಖಕ್ಕೆ ಅಡ್ಡಿಯಾಗುವ ಯಾವ ಲಾಜಿಕಲ್ ಪ್ರಶ್ನೆಗಳು ಕೂಡ ನನ್ನಲ್ಲಿ ಹಿಂದೆಯೂ ಹುಟ್ಟಿಲ್ಲ,ಈಗಲೂ  ಹುಟ್ಟುವುದಿಲ್ಲ,ಬಹುಶಃ ಮುಂದೆಯೂ ಹುಟ್ಟಲಾರದು.ಪ್ರಶ್ನೆಗಳು ಅಗತ್ಯವಾಗಿ ಬೇಕು.ಅವು ಮನಸ್ಸಿನ ಸುಖ ಹೆಚ್ಚು ಮಾಡಬೇಕೇ ಹೊರತು ಅನಗತ್ಯವಾದ ಧಗಧಗಿಸುವ ಕ್ಷೋಭೆಯೊಂದನ್ನು ಮನಸ್ಸಿಗೆ ಹಚ್ಚಿ ಓಡಿ ಹೋಗಬಾರದು ಎನ್ನುವುದು ನನ್ನ ಅಭಿಪ್ರಾಯ.ಬೇಕಿದ್ದರೆ ನೋಡಿ ಪ್ರತಿಯೊಂದನ್ನೂ ಪ್ರಶ್ನೆ ಮಾಡುತ್ತಲೇ ಹೋದರೆ ಒಂದಷ್ಟು ಉತ್ತರ ಅವಶ್ಯವಾಗಿ ಸಿಗಬಹುದೇ ಹೊರತು ಸುಖ ಸಿಗಲು ಮಾತ್ರ ಸಾಧ್ಯವೇ ಇಲ್ಲ,ಬೆರಗು ಅಂತು ಎಂದಿಗೂ  ಹುಟ್ಟುವುದೇ ಇಲ್ಲ.ಮನಸ್ಸು ಯಾವತ್ತೂ ಪ್ರಕೃತಿಯ ಬೆರಗಿಗೆನೇ ಅರಳುವುದು.ನಿಜ ಹೇಳಬೇಕೆಂದರೆ ಬೆರಗು ಹುಟ್ಟಿಸಿಕೊಳ್ಳದಿದ್ದರೆ ಪ್ರತಿಯೊಂದರಲ್ಲೂ ನಮಗೆ ಸುಖದ ಪ್ರಾಪ್ತಿ ಅಷ್ಟಕಷ್ಟೇ ಆಗುವುದು.ಅದು ಯಾವತ್ತೂ  ಪುಷ್ಕಳವಾದ ಸುಖ ಆಗಿರಲು ಸಾಧ್ಯವಿಲ್ಲ.ಎಲ್ಲವೂ ಕೇವಲ ಯಾಂತ್ರಿಕವಾಗಿರುತ್ತದೆ ಅಷ್ಟೇ.


ಹೀಗೆ ತೀರ್ಥಸ್ನಾನಕ್ಕೆ ಬಂದ ಎಲ್ಲರ ದಾನದ ಎಲೆಗಳು ನದಿ ನೀರಲ್ಲಿ ಹಾಗೇ ತೇಲುತ್ತಾ ಸಾಗುವುದನ್ನು ನೋಡುವುದೇ  ನಿಜಕ್ಕೂ ಕಣ್ಣಿಗೆ ಒಂದು ಹಬ್ಬವಾಗಿ ಬಿಡುತ್ತಿತ್ತು.ಕೊನೆಯಲ್ಲಿ ಎಲೆಯಲ್ಲಿರುವ ಬಾಕಿ ಎಲ್ಲವೂ ನದಿಯ ತಳವನ್ನು ಸೇರಿ,ಎಲೆಯ ಮೇಲೆ ಬರೀ ಹಗುರವಾದ ಹೂವೊಂದೇ ತೆಪ್ಪ  ಸವಾರಿ ಮಾಡುವಂತೆ  ತೆಲುತ್ತಾ ತೇಲುತ್ತಾ,ಆ ನಂತರ ಎಲೆಯನ್ನು ಕೂಡ ತೊರೆದು ಹೂವು ಒಂಟಿಯಾಗಿ ಬಹು ದೂರ ಸಾಗುವುದರಲ್ಲಿ ಕೂಡ ಜೀವನದ ಅದ್ಯಾವುದೋ ಅದ್ಭುತ ಆಧ್ಯಾತ್ಮ ಅಡಗಿದೆಯಲ್ಲಾ ಎಂಬುದು ದೇವರಾಣೆಗೂ ಆಗ ನಮಗೆಲ್ಲಾ ಗೊತ್ತೇ ಇರಲಿಲ್ಲ.ನಿಜ ಹೇಳಬೇಕೆಂದರೆ ಈಗಲೂ ಅಷ್ಟೇ,ಪ್ರಕೃತಿ ಹೇಳುವ ಯಾವುದೇ ಆಧ್ಯಾತ್ಮ ನನಗಂತು ಸುಲಭವಾಗಿ ಅರ್ಥವಾಗುವುದಿಲ್ಲ.ಆದರೆ ರಹಸ್ಯವಾಗಿ ಅದೇನೋ ಹೇಳುತ್ತಲೇ ಇರುತ್ತದೆ ಅನ್ನುವುದು ಮಾತ್ರ ನನಗೆ ಬಹಳ ಸ್ಪಷ್ಟವಾಗಿಯೇ ಗೊತ್ತಿದೆ.ಪ್ರಕೃತಿಯ ಮುಗಿಯದ  ಮೌನ,ಸುಲಭಕ್ಕೆ ಅರ್ಥವಾದ ಮಾತುಗಳಿಗಿಂತ ದೊಡ್ಡ ಆಧ್ಯಾತ್ಮ ಈ ಪ್ರಪಂಚದಲ್ಲಿ ಬೇರೆ ಯಾವುದಿದೆ ಹೇಳಿ. 


ಈ ನಮ್ಮ ಫಲ್ಗುಣಿ ನದಿ  "ಪದ್ರಡ್ ಕವಲ್ " ಎಂಬಲ್ಲಿ ನದಿಯ ನಡುವೆ ಇರುವ ಶಿವನಿಗೆ(ಪಂಚಲಿಂಗೇಶ್ವರ)ಭಕ್ತಿಯಿಂದ ಸುತ್ತು ಹೊಡೆದು,ಮುಂದೆ ಹನ್ನೆರಡು ಕವಲುಗಳಲ್ಲಿ ಬಳುಕುತ್ತಾ ನಲಿಯುತ್ತಾ ಜಿಗಿ ಜಿಗಿದು ಹರಿಯುತ್ತಾಳೆ.ಈ ಪದ್ರಡ್ ಕವಲ್ ಎನ್ನುವ ಜಾಗ ನಮ್ಮ ಮೂಡುಬಿದಿರೆಯಲ್ಲೇ ಇರುವುದು.ಪದ್ರಡ್ ಕವಲ್ ಅಂದರೆ ತುಳುವಿನಲ್ಲಿ ಕೂಡ ಹನ್ನೆರಡು ಕವಲು ಎಂದೇ ಅರ್ಥ.ಇಲ್ಲಿ ಕಲ್ಲಿನ ಕೊರಕಲಿನಲ್ಲಿ ಹರಿಯುವ ಫಲ್ಗುಣಿಗೆ ಮೈ ತುಂಬಾ ಸದಾ ನೊರೆ,ಅದೇ ಅವಳ ಅಂದದ ಚಂದದ ಆಭರಣ ಕೂಡ.ಅವಳ ಸನಿಹ ಹೋದಷ್ಟು ಅವಳದ್ದೊಂದು ಯಾವತ್ತಿಗೂ ಮುಗಿಯದ ಮಾತು,ಅವಳಿಗೆ ಮಾತು ನಿಲ್ಲಿಸಿ ಗೊತ್ತೇ ಇಲ್ಲ.ಆ ಜುಳು ಜುಳುವಿನಲ್ಲಿ ಅದೇನನ್ನೋ ಹೇಳುತ್ತಾ ಅವಳು ಅವಳಷ್ಟಕ್ಕೆ ಗುನುಗುತ್ತಾ ಸದಾ ಹರಿಯುತ್ತಲೇ ಇರುತ್ತಾಳೆ.ನಾವು ಕೇಳಿಸಿಕೊಂಡರೂ,ಕೇಳಿಸಿಕೊಳ್ಳದೇ ಇದ್ದರೂ ಅವಳಿಗಿಲ್ಲ ಯಾವುದೇ ಚಿಂತೆ.


ಪದ್ರಡ್ ಕವಲಿನಲ್ಲಿ ಹರಿಯುವ ಈ ಫಲ್ಗುಣಿಗೆ ಕೈ ಕಾಲು ಮಾತ್ರವಲ್ಲ ಅಲ್ಲಿ ಅವಳಿಗೊಂದು ಹೊಟ್ಟೆಯೂ ಇದೆ.ಹೌದು ನಿಜವಾಗಿಯೂ ಇದೆ.ಅದನ್ನು ನಮ್ಮವರು "ಅಪ್ಪೆ ಬಂಜಿ" ಎಂದೇ ಕರೆಯುತ್ತಾರೆ.ಅಂದರೆ ತಾಯಿಯ ಹೊಟ್ಟೆ. ಫಲ್ಗುಣಿ ನಮಗೆ ತಾಯಿಯೂ ಹೌದು.ನದಿಗಳೆಲ್ಲವೂ ಒಂದರ್ಥದಲ್ಲಿ ನಮಗೆಲ್ಲಾ ಮಾತೆಯ ಸಮಾನರೇ ಅಲ್ಲವೇ;ಹಾಗಾಗಿ ಅವಳದ್ದೊಂದು ಕಲ್ಲಿನ ಹೊಟ್ಟೆಗೆ ತಾಯಿಯ ಹೊಟ್ಟೆ ಎಂದೇ ಇಲ್ಲಿ ಕರೆಯುತ್ತಾರೆ.


ಬೇರೆ ದಿನಗಳಲ್ಲಿ ಪದ್ರಡ್ ಕವಲಿಗೆ ಸ್ನಾನಕ್ಕೆಂದು ಹೋಗದಿದ್ದರೂ ಎಳ್ಳಮವಾಸ್ಯೆಗೆ ಅಲ್ಲಿಗೆ,ಅವಳ ಬಳಿಗೆ ಹೋಗಲು ಇರುವ ಮತ್ತೊಂದು ಕಾರಣವೇ ಅವಳ ಈ ತಾಯಿ ಹೊಟ್ಟೆ.ತಾಯಿ ಹೊಟ್ಟೆ ಎನ್ನುವುದಕ್ಕಿಂತಲೂ ತಾಯಿಯ ಗರ್ಭ ಎಂದರೆ ಇನ್ನೂ ಹೆಚ್ಚು ಅರ್ಥಪೂರ್ಣ  ಆದೀತು ಎಂದೇ ನನ್ನ ಅಭಿಪ್ರಾಯ. 


ಪಂಚಲಿಂಗೇಶ್ವರ ದೇವರ ಬಲ ಬದಿಯಲ್ಲಿಯೇ ಈ ಅಪ್ಪೆ ಬಂಜಿ ಇರುವುದು.ನದಿಯ ಬಂಡೆಯೊಂದರ ಎರಡೂ ಕಡೆ ಸಣ್ಣದಾದ ರಂಧ್ರವಿದೆ.ಆ ಬಂಡೆಯ ಮೇಲಿನ ರಂಧ್ರದಿಂದ ಕೈಗಳೆರಡನ್ನೂ ಮೇಲೆ ಮಾಡಿಕೊಂಡು ಇಳಿದು,ಕೆಳಗಿನ ರಂಧ್ರದೆಡೆಗೆ ನುಸುಳುತ್ತಾ,ತೆವಳುತ್ತಾ, ಜಾರುತ್ತಾ ನಾವು ಹೊರಗೆ ಬರಬೇಕು.ಖಂಡಿತವಾಗಿಯೂ ಆ ರಂಧ್ರದೊಳಗಿಳಿದು ಹೊರಕ್ಕೆ ಬರುವಾಗ,ಒಮ್ಮೆ ತಾಯಿ ಗರ್ಭದೊಳಗೆ ಹೊಕ್ಕಿ ಹೊರ ಬಂದ ಅನುಭವವೇ ಆಗುವುದು.ಕೆಲವರಿಗೆ ಭಯ ಅವಶ್ಯವಾಗಿ ಆಗುತ್ತದೆ,ಒಳಗೆಯೇ ಸಿಕ್ಕಿ ಹಾಕಿಕೊಂಡರೆ ಏನು ಮಾಡುವುದು  ಎಂದು.ಆದರೆ ಫಲ್ಗುಣಿಯ ಈ ಹೊಟ್ಟೆ ಯಾರನ್ನೂ ತನ್ನೊಳಗೆ ಇಲ್ಲಿಯವರೆಗೆ ಉಸಿರುಗಟ್ಟಿಸಿಯೇ ಇಲ್ಲ.ಎಲ್ಲರನ್ನೂ ತನ್ನೊಳಗೆ ಇಳಿಸಿ ಒಂದಷ್ಟು ಹೊತ್ತು ತಾಯಿಯ ಆ ದಿವ್ಯ ಗರ್ಭದ ಅನುಭವವನ್ನು ಅವಳಿಲ್ಲಿ ಎಲ್ಲರಿಗೂ ಸಮಾನವಾಗಿ ದಯಪಾಲಿಸುತ್ತಾಳೆ.


ಎಷ್ಟೋ ವರ್ಷಗಳಿಂದ ಫಲ್ಗುಣಿ ಹಾಗೇ ಇದ್ದಾಳೆ,ಕೆಲವೊಮ್ಮೆ ಮೆಲ್ಲಗೆ,ಕೆಲವೊಮ್ಮೆ ಭೋರ್ಗರೆದು ಅವಳು ಹರಿಯುತ್ತಾಳೆ. ನಮಗೆಲ್ಲಾ ನಮ್ಮ ವಯಸ್ಸಿನಷ್ಟೇ ಅವಳದ್ದೊಂದು ನೆನಪು.ಆದರೆ ಅವಳ ನೆನಪಿನ ಪರಿಧಿ ತುಂಬಾ ಅಂದರೆ ತುಂಬಾನೇ ದೊಡ್ಡದು.ಸಾವಿರಾರು ವರ್ಷಗಳಿಂದಲೂ ನಿತ್ಯವೂ ಹರಿಯುವ ಅವಳ ಮಡಿಲಿನಲ್ಲಿರುವ ಅವಳ ಈ ತಾಯಿ ಹೊಟ್ಟೆಯಲ್ಲಿ ಅದೆಷ್ಟು ಮಕ್ಕಳು ಇಲ್ಲಿಯವರೆಗೆ ಇಳಿದು ಹೊರಗೆ ಬಂದಿದ್ದರೋ ನನಗಂತು ಗೊತ್ತಿಲ್ಲ.ಅವಳಿಗೆ ಹಾಗೂ ಆ ಬಂಡೆಗೆ ಅದರ ಲೆಕ್ಕ ಇರಬಹುದೋ ಏನೋ,ಮಕ್ಕಳ ಲೆಕ್ಕವಂತು ತಾಯಿಗೆ ಇದ್ದೇ ಇರುತ್ತದೆ ಬಿಡಿ.ಆದರೆ ಅವಳ ಬಳಿಗೆ ಸಡಗರಿಂದ ಹೋಗುವಾಗ ಇಂತಹ ಲೆಕ್ಕಾಚಾರದ ಮಾತುಗಳು ನನಗೆಲ್ಲಿ ಹೊಳೆಯಬೇಕು;ಎಂದಿಗೂ ಅವೆಲ್ಲವೂ ನನಗೇ ಹೊಳೆಯುವುದೇ ಇಲ್ಲ.


ಪ್ರತೀ ಬಾರಿಯೂ ಎಳ್ಳಮವಾಸ್ಯೆಗೆ ಹೋದಾಗ ನನಗೆ ಆ ತಾಯಿ ಹೊಟ್ಟೆ ಕಂಡಾಗ,ನನಗೆ ನನ್ನ ಬಾಲ್ಯದ 'ಪೋಕ್ರಿ ನಾನು'  ಸಿಕ್ಕಾಪಟ್ಟೆ ನೆನಪಾಗುತ್ತೇನೆ.ಮೊದ ಮೊದಲು ಅದೆಷ್ಟು ಭಯ ಪಟ್ಟುಕೊಂಡು ಅವಳಲ್ಲಿ ಇಳಿದಿದ್ದೆ ನಾನು.ಯಾವಾಗ ಸರಾಗವಾಗಿ ಅವಳ ಒಳಗಿನಿಂದ ತೂರಿಕೊಂಡು ಹಾಗೇ ಹೊರಗೆ ಬಂದೆನೋ ಆಮೇಲೆ ಭಯ ಎನ್ನುವುದು ಹಾಗೇ ಮಾಯವಾಗಿ ಅದೊಂದು ಇಷ್ಟದ ಆಟವಾಗಿಯೇ ಬಿಟ್ಟಿತು.ಪದೇ ಪದೇ ಬಂಡೆ ಹತ್ತಿ ಅವಳ ಹೊಟ್ಟೆಯೊಳಗೆ ಇಳಿದು ಅಲ್ಲಿಂದ ಹಾಗೇ ಜಾರಿ ಬರುತ್ತಿದ್ದೆ;ನಾನು ಹಾಗೂ ನನ್ನಂತಹ ಹಲವಾರು ಪುಟ್ಟ ಮಕ್ಕಳು.ಅವಳ ಹೊಟ್ಟೆಯೊಳಗೆ ತುಂಬಾ ದೊಡ್ಡವರು ಕೂಡ ಅಲ್ಲಿ ಸಣ್ಣ ಮಕ್ಕಳಾಗಿಯೇ ಬಿಡುತ್ತಾರೆ.ನಿಜ ಹೇಳಬೇಕೆಂದರೆ ಅಲ್ಲಿಂದ ಮನೆಗೆ ಮರಳಲು ಮನಸ್ಸೇ ಆಗುತ್ತಿರಲಿಲ್ಲ.ಫಲ್ಗುಣಿ ಕೂಡ ಮನೆಗೆ ಹೋಗಿ ಮಕ್ಕಳೇ ಎಂದು ನಮಗೆ ಹೇಳುತ್ತಲೂ ಇರಲಿಲ್ಲ.ಅವಳಿಗೂ ಅದೇನೋ ಖುಷಿ.ಮನೆಗೆ ಮಕ್ಕಳು ಬಂದರೆ ತಾಯಿಗೆ ಖುಷಿ ಆಗದೇ ಇರುತ್ತದೆಯೇ.ನಿಜವಾಗಿಯೂ ಅದೆಷ್ಟು ತಾಯಿ ಅವಳು.ಅವಳ ಆ ಕಲ್ಲಿನ ಹೊಟ್ಟೆಯಲ್ಲಿ ಅವಳ ನೀರಿನಲ್ಲಿ ತಂಪಿನ ಜೊತೆಗೆ ಅದೇನೋ ಸುಖ ಇತ್ತು,ಜೊತೆಗೆ ವಿವರಿಸಲಾಗದಷ್ಟು ಮಮತೆ.ತಾಯಿ ಇಲ್ಲದವರಿಗೂ ಕೂಡ ಫಲ್ಗುಣಿ ಎಂದೆಂದಿಗೂ ಬಹಳಷ್ಟು ತಾಯಿಯೇ;ಆಗಲೂ,ಈಗಲೂ,ಮುಂದೆಯೂ ಕೂಡ. 


ಈಗೆಲ್ಲಾ ಅಮ್ಮ ಹೇಳಬೇಕಾಗಿಲ್ಲ.ನಾನೇ ಈ ದಿನ ಬಂದಾಗ ಅಂಗಳದಲ್ಲಿ ಅರಳಿದ ಹೂ ಕೊಯ್ದು,ಹಣ್ಣು ಕಾಯಿ,ಬಾಳೆ ಎಲೆ, ನವಧಾನ್ಯ, ಕರ್ಪೂರ,ದೀಪದೊಂದಿಗೆ ಫಲ್ಗುಣಿ ಕಡೆಗೆ ಒಬ್ಬನೇ ಹೊರಟು ಬಿಡುತ್ತೇನೆ.ಇವತ್ತು ಮತ್ತೆ ಅವಳೆದುರು ನಿಂತುಕೊಂಡಾಗ ಅವಳ ತಾಯಿ ಹೊಟ್ಟೆ ಕಣ್ಣಿಗೆ ಬಿದ್ದಾಗ ಬಾಲ್ಯದ ನೆನಪುಗಳು ಹಾಗೇ ಮತ್ತೆ ಪದರ ಪದರವಾಗಿ ಬಿಚ್ಚಿಕೊಂಡವು.ನನಗೆ ನನ್ನ ನೆನಪುಗಳನ್ನು ಪದೇ ಪದೇ ತಾಜಾಗೊಳಿಸಲು ಈ ಫಲ್ಗುಣಿ ತಾಯಿ ಒಬ್ಬಳೇ ಸಾಕು.ಇವತ್ತು ಕೂಡ ಆ ತಾಯಿ ಹೊಟ್ಟೆಯನ್ನೇ ತುಂಬಾ ಹೊತ್ತು ಹಾಗೇ ನೋಡುತ್ತಾ ನಿಂತು ಬಿಟ್ಟೆ.ದೊಡ್ಡವರು,ಹಿರಿಯರು,ಸಣ್ಣವರು ಒಬ್ಬರಾದ ನಂತರ ಒಬ್ಬರು ಅವಳ ಹೊಟ್ಟೆಯೊಳಗಿಳಿದು ಪುಟ್ಟ ಮಕ್ಕಳಂತೆ ಹಾಗೇ ಹೊರಕ್ಕೆ ಜಾರುತ್ತಿದ್ದರು.ಆಮೇಲೆ ನಾನು ಕೂಡ ಹೆಚ್ಚು ತಡ ಮಾಡಲಿಲ್ಲ.ಅವಳ ಗರ್ಭದೊಳಗೆ ಹಾಗೇ ಜಾರಿ ಹೋದೆ.ಒಂದೆರಡು ಬಾರಿ ಅಲ್ಲ.ಪದೇ ಪದೇ  ಜಾರುತ್ತಲೇ ಇದ್ದೆ.ಮತ್ತೊಮ್ಮೆ ಮಕ್ಕಳಾಗಲು,ಬಾಲ್ಯದ ನೆನಪಿಗೆ ಜಾರಲು ದಿವ್ಯ ಅವಕಾಶ ಇರುವಾಗ ಒಲ್ಲೆ ಎಂದರೆ ಅದೆಂತಹ ಮೂರ್ಖತನದ ಕೆಲಸವಾದೀತು ಅಲ್ಲವೇ.


ನಾನಂತು ಬಹಳಷ್ಟು ಫಲ್ಗುಣಿ ಕಡೆಯವನೇ.ಮನೆ ಪಕ್ಕವೇ ತಣ್ಣಗೆ ಹರಿಯುವ ಅವಳ ಬಳಿಗೆ ಪುರುಸೊತ್ತು ಇದಾಗಲೆಲ್ಲ ನನ್ನದೊಂದು ಭೇಟಿ ಯಾವಾಗಲೂ ಇದ್ದದ್ದೇ,ಎಳ್ಳಮವಾಸ್ಯೆಗೆ ಮಾತ್ರ "ಪದ್ರಡ್ ಕವಲ್" ಹಾಗೂ ಅವಳದ್ದೊಂದು ತಾಯಿ ಮಮತೆಯ ಹೊಟ್ಟೆಯೇ "ಒಮ್ಮೆ ಇಲ್ಲಿಗೂ ಬಂದು ಹೋಗಬಾರದೇ.. "ಎಂದು ಪ್ರೀತಿಯ ಆಹ್ವಾನ ಕಳುಹಿಸಿಯೇ ಬಿಡುತ್ತದೆ.ತಾಯಿಯ ಆಹ್ವಾನ ಎಂದಾದರೂ ಮಕ್ಕಳಿಗೆ ತಿರಸ್ಕರಿಸಲು ಸಾಧ್ಯವೇ.. 


#ಫಲ್ಗುಣಿ_ಕಡೆಯವನು

https://phalgunikadeyavanu.blogspot.com

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ