ಮದಿಮಾಲ್
" ಮದಿಮಾಲ್ "
ಆ ಹೊಳೆಯ ನಡುವಿಗೆ ದಡದಿಂದಲೇ ಬಲೆಯನ್ನು ಹೂವಾಗುವಂತೆ ಬೀಸಿ ಎಸೆದು,ಅರಳಿಕೊಂಡ ಬಲೆಯಲ್ಲಿ ಸಿಕ್ಕಿ ಬಿದ್ದ ಮೀನುಗಳನ್ನು ಮೇಲೆತ್ತುವುದಕ್ಕಾಗಿ ಮತ್ತೆ ಬಲೆಯನ್ನು ಮೊಗ್ಗಾಗಿಸುತ್ತಾ ದಡದತ್ತಲೇ ಬಲವಾಗಿ ಎಳೆಯುತ್ತಿದ್ದ ಆ ನನ್ನ ಅಮ್ಮನ ಬಳಿ ಚಿಕ್ಕಂದಿನಲ್ಲಿ ನಾನೊಂದು ಪ್ರಶ್ನೆ ಕೇಳಿದ್ದೆ;ಹ್ಞೂಂ..ಆ ಸಾವಿರ ಕಣ್ಣುಗಳ ಅಮ್ಮನದ್ದೊಂದು ಬಲೆಯನ್ನು ನನ್ನೆರಡು ಕಣ್ಣುಗಳಲ್ಲಿ ದಿಟ್ಟಿಸಿ ನೋಡುತ್ತಲೇ ಕೇಳಿದ್ದೆ...
- ಅಮ್ಮಾ..ಏತಕ್ಕಾಗಿ ಈ ಬಲೆಯ ಕಣ್ಣುಗಳು ಇಷ್ಟು ದೊಡ್ಡದಿವೆ? ಇದಕ್ಕೆ ಇನ್ನೂ ಪುಟ್ಟ ಪುಟ್ಟ ಕಣ್ಣುಗಳಿದ್ದರೆ,ಹೊಳೆಯ ಎಲ್ಲಾ ಮೀನುಗಳೂ ನಮ್ಮದೇ ಬಲೆಗೆ ಬೀಳುತ್ತಿದ್ದವು... ಅಲ್ಲವೇ ಅಮ್ಮಾ? ಎಂದು ನಾನು ಕೇಳಿದ್ದೆ.
ಅದಕ್ಕೆ ಅಮ್ಮ ಸೀರೆಯನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಿಕೊಂಡು ಬಲೆಯನ್ನು ಇನ್ನೂ ಜೋರಾಗಿ ಎಳೆಯುತ್ತಲೇ ಹೇಳಿದ್ದಳು - ಇಲ್ಲ ಅಮ್ಮಿ..ಬಲೆಗೆ ಇನ್ನೂ ಚಿಕ್ಕ ಕಣ್ಣುಗಳಿದ್ದರೆ ಈ ಸಣ್ಣ ಸಣ್ಣ ತರು ಮೀನುಗಳು ಸಹ ಬಲೆಗೆ ಬಂದು ಬೀಳುತ್ತವೆ.ಅಂತಹ ಮಿಡಿ ಮೀನುಗಳನ್ನು ನಾವು ಕೊಲ್ಲಬಾರದು,ಅವುಗಳಿಗೆ ಈ ಹೊಳೆಯಲ್ಲಿ ಇನ್ನೂ ಬದುಕುವ ಹಕ್ಕಿದೆ.. ಎಂದು ಹೇಳಿದ್ದ ಅಮ್ಮ ಮತ್ತೆ ಬಲೆ ಎಳೆಯುವುದನ್ನೇ ಮುಂದುವರಿಸಿದ್ದಳು.
ಹಾಗಾದರೆ ಅಮ್ಮ.. ಈ ದೊಡ್ಡ ಮೀನುಗಳಿಗೆ ಬದುಕುವ ಹಕ್ಕೇ ಇಲ್ಲವೇ? ಮತ್ತೆ ಕಣ್ಣರಳಿಸಿಕೊಂಡು ಅಮ್ಮನಲ್ಲಿಯೇ ಕೇಳಿದ್ದೆ ನಾನು.
- ಮೀನು ದೊಡ್ಡದಾಗುವುದೇ ಅದರ ಅತೀ ದೊಡ ಪಾಪ ಮಗಳೇ.. ಎಂದು ಹೇಳಿದ್ದ ಅಮ್ಮ,ದಡಕ್ಕೆ ಎಳೆದು ಹಾಕಿದ್ದ ಅವಳ ಬಲೆಯಿಂದ ಸಿಕ್ಕಿ ಬಿದ್ದು ಮೀನುಗಳನ್ನು,ಅವಳಷ್ಟಕ್ಕೆ ಒಂದೊಂದಾಗಿ ಬಿಡಿಸಲು ಶುರು ಮಾಡುತ್ತಿದ್ದಳು.ನಾನು ಬಲೆಯಿಂದ ಕೆಳಗೆ ಬಿದ್ದ ಆ ಎಲ್ಲಾ ಮೀನುಗಳನ್ನು ನನ್ನೆರಡು ಪುಟ್ಟ ಕೈಗಳಲ್ಲಿ ಹೆಕ್ಕಿಕೊಂಡು ಅಮ್ಮನ ಬುಟ್ಟಿಗೆ ಶ್ರದ್ಧೆಯಿಂದ ತುಂಬಿಸುತ್ತಿದ್ದೆ.
ಕಾಯುವುದರಲ್ಲಿ ಸುಖವಿದೆ.ಆದರೆ ಏತಕ್ಕಾಗಿ ಕಾಯಬೇಕು, ಯಾರಿಗಾಗಿ ಕಾಯಬೇಕು ಎಂಬ ಪ್ರಶ್ನೆಗೆ ನಮ್ಮ ಬಳಿಯೇ ಸಮರ್ಪಕವಾದ ಉತ್ತರ ಇರದಿದ್ದರೆ ಅಲ್ಲೊಂದು ಎಂದಿಗೂ ಮುಗಿಯದ ಯಾತನೆಯೇ ಅಧಿಕವಾಗಿರುತ್ತದೆ.
ಅವತ್ತು ಏತಕ್ಕಾಗಿ ನಾನು ಆ ಗುಡ್ಡದ ದಾರಿ ಬದಿಯಲ್ಲಿ ಬಂದು ನಿಂತಿದ್ದೆ ಎಂದು ನನಗೆಯೇ ಗೊತ್ತಿರಲಿಲ್ಲ.ಬಹುಶಃ ಮೀನು ಮಾರುವ ಅಂಬಕ್ಕ ಬಂದರೂ ಬರಬಹುದು ಎಂಬ ಸಣ್ಣ ನಿರೀಕ್ಷೆ ಒಂದು ಇತ್ತು ಅಷ್ಟೇ.ಆದರೆ ಮುಂದೆ ಏನು,ಎತ್ತ ಎನ್ನುವುದು ಯಾವುದೂ ಗೊತ್ತಾಗದೇ ನನ್ನಷ್ಟಕ್ಕೆ ಸುಮ್ಮನೆ ನಿಂತಿದ್ದ ಆ ಸಮಯದಲ್ಲಿಯೇ ಹೊಳೆಯಲ್ಲಿ ಸೀರೆಯನ್ನು ಕಚ್ಚೆಯಂತೆ ಗಟ್ಟಿಯಾಗಿ ಕಟ್ಟಿಕೊಂಡು ಮೀನು ಹಿಡಿಯುತ್ತಿದ್ದ ನನ್ನ ಅಮ್ಮ ಹಾಗೂ ಅವಳ ದೊಡ್ಡ ಕಣ್ಣುಗಳ ಬಲೆ ನನಗೆ ನೆನಪಾಗಿದ್ದು.
ಗಂಟೆಗಳುರುಳಿ ಸಮಯ ಬೆಳಗ್ಗಿನ ಹತ್ತಾಗಿತ್ತು.ಅಂಬಕ್ಕ ಮೀನಿನ ಬುಟ್ಟಿ ಹೊತ್ತುಕೊಂಡು ಬರುವ ಎಂದಿನ ಘಳಿಗೆ ಅದು.ಆದರೂ ಇನ್ನೂ ಅವರು ಬಂದಿರಲಿಲ್ಲ.ಒಬ್ಬಳೇ ದಾರಿ ಬದಿಯಲ್ಲಿ ನಿಂತಿದ್ದ ನನಗೆ ಮತ್ತೆ ನನ್ನ ಅಮ್ಮನೇ ಅತಿಯಾಗಿ ನೆನಪಾದಳು.
ಅಮ್ಮನ ಒಬ್ಬಳೇ ಮಗಳು ನಾನು.ಮನೆಯಲ್ಲಿ ಅವಳೇ ಕಟ್ಟಿಗೆ ಉರಿಸಿ ಅಡುಗೆ ಬೇಯಿಸುತ್ತಿದ್ದಳು,ಬದುಕಿಗಾಗಿ ಕೂಡ ಅವಳೇ ಬೆವರು ಸುರಿಸಿ ದುಡಿಯುತ್ತಿದ್ದಳು.ಊರಲ್ಲಿ ಅವರಿವರ ಅಡಿಕೆ ತೋಟಗಳಲ್ಲಿ ಸಿಗುತ್ತಿದ್ದ ಯಾವುದೇ ಸಣ್ಣ ಪುಟ್ಟ ಕೆಲಸವನ್ನು ಸಹ ಬದುಕಿನ ಅತೀ ದೊಡ್ಡ ಕೆಲಸವೆಂದೇ ತಿಳಿದು ಅಮ್ಮ ಮಾಡುತ್ತಿದ್ದಳು;ನಮಗಾಗಿ ಮಾಡುತ್ತಿದ್ದಳು.ಆಗಾಗ ಅವಳು ಹೊಳೆಯಲ್ಲಿ ಮೀನು ಸಹ ಹಿಡಿಯುತ್ತಿದ್ದಳು.ಆವಾಗಲೆಲ್ಲ ನಾನೂ ಕೂಡ ಸಣ್ಣ ಬುಟ್ಟಿ ಹಿಡಿದುಕೊಂಡು ಅವಳ ಹಿಂದೆ ಹಿಂದೆಯೇ ಹೋಗುತ್ತಿದ್ದೆ.
ಅವಳ ಬಲೆ ಅದೆಷ್ಟೋ ಹಳೆಯದ್ದು.ಎಷ್ಟೇ ಬಾರಿ ಅದು ಅಲ್ಲಲ್ಲಿ ಹರಿದು ಹೋದರೂ ಸಹ ನಡು ರಾತ್ರಿಯಲ್ಲೆಲ್ಲಾ ಸೀಮೆಎಣ್ಣೆಯ ದೀಪದ ಬುಡದಲ್ಲಿಯೇ ಕೂತುಕೊಂಡು,ಬಲೆ ಹರಿದಲ್ಲೆಲ್ಲಾ ಶ್ರದ್ಧೆಯಿಂದ ನೆಯ್ದು ಮತ್ತೆ ಸರಿ ಮಾಡಿಕೊಂಡು,ಪುನಃ ಆ ತೇಪೆ ಹಾಕಿದ ಬಲೆಯಲ್ಲಿಯೇ ಅಮ್ಮ ಹೊಳೆಯ ಮೀನುಗಳನ್ನು ಹಿಡಿಯುತ್ತಿದ್ದಳು.ಬಹುಶಃ ಹೀಗಾಗಿಯೇ ಅವಳ ಮೀನಿನ ಬಲೆಯ ಸಣ್ಣ ಸಣ್ಣ ಕಣ್ಣುಗಳು ನಿರಂತರವಾಗಿ ಹರಿದು ಹೋಗಿ ಅಷ್ಟೊಂದು ದೊಡ್ಡ ಕಣ್ಣುಗಳಾಗಿದ್ದು ಎಂದು ನನಗೆ ಈಗ ಅನಿಸುತ್ತದೆ.ಹಾಗಾದರೆ ಬಲೆಯ ಕಣ್ಣುಗಳಿಗೆ ಸಂಬಂಧಿಸಿದಂತೆ ಅಮ್ಮ ಹೇಳಿದ ಈ ದೊಡ್ಡ ಮೀನು,ಸಣ್ಣ ಮೀನುಗಳ ಪಾಪ ಪುಣ್ಯದ ವಿಚಾರಗಳು ನಿಜಕ್ಕೂ ಸುಳ್ಳೇ?!
ತುಂಬಾ ಮೀನು ಸಿಕ್ಕರೆ ಹೊಳೆಯ ಮೀನು ತಿನ್ನಲು ಇಷ್ಟ ಪಡುವ ಊರಿನ ದೊಡ್ಡ ಧಣಿಗಳಿಗೆ ಅದನ್ನು ಮಾರಿ ಅಮ್ಮ ಒಂದಿಷ್ಟು ಹಣವನ್ನು ಸಹ ಮಾಡಿಕೊಳ್ಳುತ್ತಿದ್ದಳು.ಆದರೆ ಪಾಪ ಅವಳ ಹರಿದ ಬಲೆಗೆ ಬೀಳುತ್ತಿದ್ದ ಮೀನುಗಳ ಸಂಖ್ಯೆ ಯಾವತ್ತೂ ತುಂಬಾ ಕಡಿಮೆಯೇ ಇರುತ್ತಿತ್ತು.ಆದರೂ ಪ್ರತೀ ಬಾರಿಯೂ ಸಾಕಷ್ಟು ಮೀನುಗಳು ತನ್ನ ಬಲೆಗೆ ಬಿದ್ದೇ ಬೀಳುತ್ತವೆ ಎಂಬ ಆತ್ಮವಿಶ್ವಾಸದಲ್ಲಿಯೇ ಅಮ್ಮ ಹೊಳೆಗೆ ಬಲೆ ಎಸೆಯುತ್ತಿದ್ದಳು.ಅಂತಹದ್ದೊಂದು ಆತ್ಮವಿಶ್ವಾಸದಿಂದಲೇ ಅವಳು ಹರಿದು ಹೋದ ತನ್ನ ಬಲೆಯನ್ನೂ, ನಮ್ಮದೊಂದು ಬದುಕನ್ನೂ ಒಟ್ಟೊಟ್ಟಿಗೆ ಕಟ್ಟಿಕೊಂಡಿದ್ದು.
ಅಮ್ಮ ಬಲೆಯೊಂದಿಗೆ ಹೊಳೆಗೆ ಹೋಗುವುದೆಂದರೆ ನನಗೆ ಅದೇ ಜೀವನದ ಅತೀ ದೊಡ್ಡ ಸಂಭ್ರಮ.ಏಕೆಂದರೆ ಉಳಿದ ವೇಳೆಯಲ್ಲಿ ಅಮ್ಮ ಕೆಲಸಕ್ಕೆಂದು ಬೇರೆಯವರ ತೋಟಕ್ಕೆ ಹೋದಾಗಲೆಲ್ಲಾ ನಾನು ಮನೆಯಲ್ಲಿ ಒಬ್ಬಳೇ ತೀರಾ ಒಂಟಿಯಾಗಿ ಇರುತ್ತಿದ್ದೆ.ಆಟವಾಡಲು ನನಗೆ ಅಕ್ಕ,ತಂಗಿ, ಅಣ್ಣ,ತಮ್ಮ,ಗೆಳೆಯ,ಗೆಳೆತಿಯರು ಯಾರೊಬ್ಬರೂ ಕೂಡ ಜೊತೆಯಲ್ಲಿ ಇರಲಿಲ್ಲ.
ಅಪ್ಪ ಎನ್ನುವವ ಹೆಸರಿಗೆ ಎಂದಿನಂತೆಯೇ ಇದ್ದ;ಎಲ್ಲಾ ಮಕ್ಕಳಿಗೆ ಹುಟ್ಟಿಸಿದ ಒಬ್ಬ ಅಪ್ಪ ಇರುವಂತೆಯೇ.ಆದರೆ ಮನೆಗಿಂತಲೂ ಹೆಚ್ಚು ಅವನು ಊರ ಗಡಂಗಿನ(ಶರಾಬು ಅಂಗಡಿ)ಬಾಗಿಲಿನಲ್ಲಿಯೇ ಠಿಕಾಣಿ ಹೂಡುತ್ತಿದ್ದ.ರಾತ್ರಿ ಎಷ್ಟೇ ಹೊತ್ತಾದರೂ ಅವನು ಮನೆಗೆ ಬರದೇ ಇದ್ದಾಗ,ನಾನು ಮತ್ತು ಅಮ್ಮ ಕುಡಿದ ನಶೆಯಲ್ಲಿ ತೂರಾಡುತ್ತಿದ್ದ ಅವನನ್ನು ಎತ್ತಿಕೊಂಡೋ,ಎಳೆದುಕೊಂಡೋ ಹೇಗೋ ಮನೆಗೆ ಮುಟ್ಟಿಸುತ್ತಿದ್ದೆವು.
ನಾನಾವಾಗ ತುಂಬಾ ಅಂದರೆ ತುಂಬಾ ಚಿಕ್ಕವಳು.ಹೆಚ್ಚು ಕಡಿಮೆ ಹತ್ತರೊಳಗಿನ ವಯಸ್ಸು ಅಷ್ಟೇ ನನಗೆ.ಅಪ್ಪ ಯಾಕೆ ಕುಡಿಯುತ್ತಾನೆ? ಏತಕ್ಕಾಗಿ ಅಷ್ಟೊಂದು ಕುಡಿಯುತ್ತಾನೆ ಎಂದೆಲ್ಲಾ ನನಗೆ ಗೊತ್ತಿರಲಿಲ್ಲ.ಆದರೆ ಪ್ರತೀ ರಾತ್ರಿ ಕತ್ತಲು ಕವಿದಂತೆ ಅಪ್ಪನನ್ನು ಕರೆದುಕೊಂಡು ಬರಲು ಊರಿನ ಗಡಂಗಿನ ಬಾಗಿಲಿಗೆ ನಾನು ಮತ್ತು ಅಮ್ಮ ಹೊರಡಬೇಕು,ಅದೊಂದೇ ನಮ್ಮ ಮನೆಯ ಪ್ರತೀ ದಿನದ ತಪ್ಪಬಾರದ ದಿನಚರಿ ಹಾಗೂ ನಮ್ಮದೊಂದು ಮೂಲಭೂತ ಕರ್ತವ್ಯ ಎಂದೇ ನಾನು ಆವಾಗ ತಿಳಿದುಕೊಂಡಿದ್ದೆ.
ರಾತ್ರಿ ಕತ್ತಲು ಹೆಚ್ಚಾದಂತೆ... ಅಮ್ಮಾ... ಬಾ,ಅಪ್ಪನನ್ನು ಕರೆದುಕೊಂಡು ಬರುವ, ಹೊತ್ತಾಗಿದೆ..ಹೋಗೋಣ ನಡಿ ..ಎಂದು ಅಮ್ಮನಿಗೆ ನಾನೇ ತಪ್ಪದೇ ನೆನಪು ಹುಟ್ಟಿಸುತ್ತಿದ್ದೆ.ಅಂತಹ ನಾನು ಎಂದಿಗೂ ಯಾವತ್ತಿಗೂ ಶಿಸ್ತಿನಿಂದ ಶಾಲೆಗೆ ಮಾತ್ರ ಹೋದವಳೇ ಅಲ್ಲ.ಈ ರೀತಿ ಅಪ್ಪನನ್ನು ಕರೆದುಕೊಂಡು ಬರಲು ದಿನಾ ರಾತ್ರಿ ಗಡಂಗಿನ ಬಾಗಿಲಿಗೆ ಅಮ್ಮನ ಕೈ ಹಿಡಿದುಕೊಂಡು ಹೋಗುವುದು ಹಾಗೂ ಹೊಳೆಯಲ್ಲಿ ಅಮ್ಮನೊಂದಿಗೆ ಮೀನು ಹಿಡಿಯಲು ಸಣ್ಣ ಬುಟ್ಟಿ ಹಿಡಿದುಕೊಂಡು ಹೋಗುವುದು ಬಿಟ್ಟರೆ ನಾನು ಬೇರೆ ಎಲ್ಲಿಗೂ ಹೋಗಿದ್ದೇ ಇಲ್ಲ.ಮನೆ ಬಿಟ್ಟರೆ ಅದೆರಡೇ ಜಾಗ ನನಗೆ ಚೆನ್ನಾಗಿ ಗೊತ್ತಿದ್ದದ್ದು.ಶಾಲೆ ಅನ್ನುವುದು ಒಂದಿದೆ ಎನ್ನುವುದನ್ನು ನಾನು ಅಕ್ಷರಶಃ ಮರೆತು ಬಿಟ್ಟಿದ್ದೆ.ನನ್ನ ಅಪ್ಪನಂತು ನನ್ನ ಅಂತಹ ಯಾವುದೇ ಜವಾಬ್ದಾರಿಯನ್ನು ಎಂದಿಗೂ ಹೊರಲಿಲ್ಲ.ನನ್ನ ಮಾತ್ರವಲ್ಲ ಮನೆಯ ಯಾವ ಜವಾಬ್ದಾರಿಯನ್ನು ಸಹ ಅವನು ಎಂದಿಗೂ ನಿಭಾಯಿಸಿದ್ದೇ ಇಲ್ಲ.ಅಪ್ಪ ಅಂದರೆ ನನಗೆ ಬರೀ ಗಡಂಗ್ ಹಾಗೂ ಗಡಂಗಿನ ದಾರಿ ಒಂದೇ ನೆನಪಾಗುತ್ತದೆ.
ಅಪ್ಪನ ನೆನಪು ನನಗೆ ಅಷ್ಟೇ.ಅವನು ಕುಡಿದು ಕುಡಿದೇ ಒಂದು ದಿನ ಸತ್ತು ಹೋದ.ಊರಲ್ಲಿ ಕೂಡ ಅಪ್ಪನ ಸಾವು ಅಂತಹ ಸುದ್ದಿ ಏನು ಆಗಲಿಲ್ಲ.ಅವನಿಗಾಗಿ ಊರವರು ಯಾರೂ ಅಳಲಿಲ್ಲ.ಅಮ್ಮನೂ ಅಳಲಿಲ್ಲ,ನಾನೂ ಅಳಲಿಲ್ಲ.ಆ ದಿನದಿಂದ ರಾತ್ರಿ ಗಡಂಗಿಗೆ ಹೋಗುವ ನಮ್ಮದೊಂದು ದಿನ ನಿತ್ಯದ ಕರ್ತವ್ಯವೊಂದು ಹಾಗೇ ನಿಂತು ಹೋಯಿತು,ಸತ್ತು ಹೋದ ಅಪ್ಪನಿಂದಾಗಿಯೇ ಅದು ನಿಂತು ಹೋಯಿತು.ಕೇವಲ ಹೊಳೆಯೊಂದೇ ನನ್ನ ಹೊರಗಿನ ಏಕೈಕ ಪ್ರಪಂಚವಾಗಿ ನನ್ನ ಜೊತೆಗೆ ಉಳಿದುಕೊಂಡು ಬಿಟ್ಟಿತು.
ಮೀನು ಹಿಡಿಯುತ್ತಾ ಬೆಳೆಯುತ್ತಾ ಹಾಗೇ ದೊಡ್ಡವಳಾಗುತ್ತಾ ನಾನೂ ಸಹ ಅದೆಷ್ಟೋ ವರುಷಗಳ ನಂತರ ಒಂದು ದಿನ ವಯಸ್ಸಿಗೆ ಬಂದು ಬಿಟ್ಟೆ.
ನೋಡಲು ಕೂಡ ಅಂದವಾಗಿಯೇ ಇದ್ದೆ ನಾನು.ಹಾಗಾಗಿಯೇ ಹಲವಾರು ಸಂಬಂಧಗಳು ನನ್ನನ್ನೇ ಹುಡುಕಿಕೊಂಡು ಬಂದವು.ಅಮ್ಮ ಅಂತು ಅದರಿಂದ ತುಂಬಾನೇ ಖುಷಿ ಪಟ್ಟು ಕೊಂಡಳು.ನಾನು ಸುಂದರವಾಗಿದ್ದುದೇ ನನ್ನ ಪುಣ್ಯ,ಅದಕ್ಕಾಗಿಯೇ ನನ್ನ ಭಾಗ್ಯದ ಬಾಗಿಲು ತೆರೆಯಿತು ಎಂದು ಅವಳು ನನ್ನನ್ನು ಇನ್ನಿಲ್ಲದಂತೆ ಕೊಂಡಾಡಿ ಬಿಟ್ಟಳು.
ಅಮ್ಮಿ.. ನೀನೀಗ ಬೆಳೆದು ದೊಡ್ಡವಳಾಗಿದ್ದಿ,ನನಗಂತು ನೀನೀಗ ಥೇಟು ಆ ಮದಿಮಾಲ್ ಮೀನಿನಂತೆಯೇ ಬಹಳ ಸುಂದರವಾಗಿ ಕಾಣುತ್ತಿದ್ದಿ.ಇನ್ನು ನಿನಗೆ ನಾನು ಮದುವೆ ಮಾಡುವುದೇ.. ಎಂದು ನಗುತ್ತಾ ಹೇಳಿದ್ದಳು ಅಮ್ಮ.
ನಾನು ಆ ಹೆಸರನ್ನು ಮೊದಲ ಬಾರಿಗೆ ಕೇಳಿದ್ದು,ಹಾಗಾಗಿ ಅಮ್ಮನಲ್ಲಿಯೇ ಕೇಳಿದೆ..
ಅಮ್ಮಾ.. ಈ ಮದಿಮಾಲ್ ಮೀನು ಎಂದರೆ ಏನು? ಅದನ್ನು ಏಕೆ ನೀನು ಒಮ್ಮೆಯೂ ಹಿಡಿದಿಲ್ಲ?
ಅಮ್ಮ ಹಾಗೇ ಒಮ್ಮೆ ಜೋರಾಗಿ ನಕ್ಕಳು.ನಗುತ್ತಲೇ ಹೇಳಿದಳು,
ಹಹ್ಹಾ.. ಹಹ್ಹಾ.. ಮಗಳೇ ಅದು ಕಡಲಿನ ಮೀನು,ಗುಲಾಬಿ ಬಣ್ಣದ ಆ ಸುಂದರಿ ಮೀನು ಕಡಲಿನ ಮೀನುಗಳಲ್ಲಿಯೇ ಅತ್ಯಂತ ಸುಂದರವಾದದ್ದು.ಕಡಲಿನ ನೀರಿನಲ್ಲಿ ಬಂಗಾರದಂತೆಯೇ ಬಳುಕುತ್ತಾ ಹೊಳೆಯುತ್ತಾ ಈಜುವ ಅದು ನಮ್ಮ ಈ ಹೊಳೆಗೆಲ್ಲಾ ಎಲ್ಲಿ ಬರುತ್ತದೆ.ಅದರ ಭಾಗ್ಯ,ಅದರ ಬಾಳು ಕೇವಲ ಆ ನೀಲಿ ಕಡಲಿನದ್ದು.ದೊಡ್ಡ ಕಡಲಿನಲ್ಲಿ ಅಷ್ಟೇ ಅದು ಮನಸ್ಸೋಯಿಚ್ಛೆ ಈಜುತ್ತದೆ,ಹಾಯಾಗಿ ಬದುಕುತ್ತದೆ ಮಗಳೇ,ಹಾನ್.. ಮತ್ತೆ ನಮ್ಮ ಈ ಪುಟ್ಟ ಹೊಳೆಯಲ್ಲಿ ಎಲ್ಲಾ ಅಲ್ಲ,ಗೊತ್ತಾಯಿತೇ..ಹಹ್ಹಾ.. ಹಹ್ಹಾ ಎಂದು ಮತ್ತಷ್ಟು ನಗುತ್ತಲೇ ಹೇಳಿ ಮುಗಿಸಿದ್ದಳು ಅಮ್ಮ.
ಅಮ್ಮನ ಪ್ರಕಾರ ನಾನು ಸುಂದರವಾಗಿರುವುದು ನನ್ನ ಪುಣ್ಯವೂ ಹೌದು ಒಂದು ರೀತಿಯಲ್ಲಿ ಅವಳ ಪುಣ್ಯವೂ ಹೌದು.ಆದರೆ ನಿಜವಾಗಿಯೂ ಸುಂದರವಾಗಿರುವುದು ಅಂತಹದ್ದೊಂದು ಪುಣ್ಯವೇ..? ಅದೂ ಸಹ ಪುಣ್ಯದ ಸಂಪದಾನೆಯೇ?. ಗೊತ್ತಿಲ್ಲ!
ಕೊನೆಗೂ ಅಮ್ಮ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ,ನನಗೆ ಬಂದ ಸಂಬಂಧಗಳಲ್ಲಿ ಬಹಳ ಅನುಕೂಲಸ್ಥರ ಮನೆಗೆನೇ ನನ್ನನ್ನು ಮದುವೆ ಮಾಡಿ ಕೊಟ್ಟಳು.ಹೊಲ,ಗದ್ದೆ,ತೋಟ ಎಲ್ಲವೂ ಅಲ್ಲಿತ್ತು.ಇಬ್ಬರೇ ಗಂಡು ಮಕ್ಕಳು.ನನ್ನ ಗಂಡನೇ ಮನೆಯಲ್ಲಿ ದೊಡ್ದ ಮಗ.ಗಂಡನ ತಮ್ಮ ಅಂದರೆ ನನ್ನ ಮೈದುನ ವಯಸ್ಸಿನಲ್ಲಿ ಸಣ್ಣವನಾಗಿದ್ದ.ಬೇಕಾದಷ್ಟು ಆಸ್ತಿ,ಸಂಪತ್ತು ತುಂಬಿ ತುಳುಕುತ್ತಿದ್ದ ಬಹಳ ಸಂಪ್ರದಾಯಸ್ಥರ,ಗೌರವದ ಮನೆಯದು.
ಬದುಕು ಸರಿ ಇತ್ತು.ಬಂಗಾರದಂತಹ ಗಂಡ ಹಾಗೂ ದೇವರಂತಹ ಅತ್ತೆ ಕೂಡ ನನಗೆ ಸಿಕ್ಕಿದ್ದರು.ಒಟ್ಟಿನಲ್ಲಿ ಜೀವನ ಮೊದಲ ಬಾರಿಗೆ ಸುಖವಾಗಿರುವಂತೆ ಅನಿಸಿತು ನನಗೆ.ಅಮ್ಮ ಕೂಡ ನನ್ನ ಖುಷಿಯನ್ನು ಕಂಡು ದೂರದಿಂದಲೇ ಹಿರಿ ಹಿರಿ ಹಿಗ್ಗಿದ್ದಳು.
ಮದುವೆ ಆಗಿ ಒಂದು ವಾರ ಆಗಿತ್ತು ಅಷ್ಟೇ.ಅದೊಂದು ದಿನ ಮೀನು ತರಲೆಂದು ಸ್ವತಃ ನಾನೇ ಮೊದಲ ಬಾರಿಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಗುಡ್ಡದ ದಾರಿ ಪಕ್ಕ ಬಂದು ನಿಂತಿದ್ದೆ.ಮನೆಯ ನಾಯಿ ಜಿಮ್ಮಿ ಹಾಗೂ ಮಂಗು ಬೆಕ್ಕು ಕೂಡ ನನ್ನೊಡನೆಯೇ ಓಡೋಡಿ ಅಲ್ಲಿಗೆ ಬಂದಿದ್ದವು.ಮದುವೆ ಆದ ಮೊದಲ ದಿನವೇ ಈ ನಾಯಿ ಮತ್ತು ಬೆಕ್ಕುಗಳೆರಡರ ಪರಿಚಯವಾಗಿ ಅವುಗಳು ನನಗೆ ಬಹಳ ಆಪ್ತವಾಗಿದ್ದವು.ಆ ದಿನ ಅಂಬಕ್ಕನೇ ಮೀನು ಬುಟ್ಟಿ ಹೊತ್ತುಕೊಂಡು ಬಂದಿದ್ದರು.ಅವತ್ತೇ ನಾನು ಅವರನ್ನು ಮೊದಲ ಬಾರಿಗೆ ನೋಡಿದ್ದು.ತಲೆಯಲ್ಲಿದ್ದ ಬುಟ್ಟಿಯನ್ನು ಕೆಳಗಿರಿಸಿ ನೆಲದ ಮೇಲೆ ಕುಳಿತುಕೊಂಡ ಅಂಬಕ್ಕನ ಆ ದೊಡ್ಡ ಮೀನಿನ ಬುಟ್ಟಿಯೊಳಗೆ ಬಂಗುಡೆ ಮೀನು,ಬೂತಾಯಿ ಮೀನು ಹಾಗೂ ಸ್ವಾಡಿ ಮೀನಿನ ಜೊತೆಗೆಯೇ ಅದೊಂದು ಮೀನು ಸಹ ಇತ್ತು.
ಮೊದಲ ಬಾರಿಗೆ ಆ ಗುಲಾಬಿ ಬಣ್ಣದ ಮೀನನ್ನು ನಾನು ನೋಡಿದ್ದು.ನೋಡಲು ಅದು ಬಹಳನೇ ಆಕರ್ಷಕವಾಗಿತ್ತು.
ಅಂಬಕ್ಕನಲ್ಲಿಯೇ ಆ ಮೀನಿನತ್ತ ಕೈ ತೋರಿಸಿ ಕೇಳಿದ್ದೆ ನಾನು... ಇದೇನು? ಯಾವ ಮೀನಿದು ?.. ಎಂದು.
ಮದುವೆಯಾಗಿ ಈ ಊರಿಗೆ ಬಂದಿದ್ದ ನನ್ನನ್ನು ಮೊದಲ ಬಾರಿಗೆ ನೋಡುತ್ತಿದ್ದ ಅಂಬಕ್ಕ.. ಇದು ಗೊತ್ತಿಲ್ಲವೇ ಮಗಳೇ, ಇದು ನಿನ್ನಂತೆಯೇ ಮದಿಮಾಲ್ ಮೀನು.. ಎಂದು ಹೇಳಿ ಪುಷ್ಕಳವಾಗಿ ನಕ್ಕಿದ್ದರು.
ಮದಿಮಾಲ್ ಎನ್ನುವುದರ ಮತ್ತೊಂದು ಅರ್ಥವೇ ಮದುಮಗಳು ಎಂದು.ಅದರ ಅರ್ಥ ನನಗೆ ಗೊತ್ತಿತ್ತು.ಆದರೆ ಅದರ ಹೆಸರಿನಲ್ಲಿ ಒಂದು ಮೀನು ಕೂಡ ಇರುವುದನ್ನು ನಾನು ಅಂದೇ ಕಣ್ಣಾರೆ ನೋಡಿದ್ದು.
ಅಂಬಕ್ಕ ನನ್ನನ್ನು ನೋಡಿಯೇ ನಮ್ಮೂರಿನ ಹೊಸ ಮದುಮಗಳು ಎಂದು ಸುಲಭವಾಗಿ ಗುರುತಿಸಿ ಬಿಟ್ಟಿದ್ದರು.ನನಗೆ ಯಾಕೋ ಬಹಳ ಪ್ರೀತಿಯಿಂದಲೇ ಮಾತಾಡಿಸಿ,ಎಲೆ ಅಡಿಕೆ ಹಾಕಿಕೊಂಡಿದ್ದರೂ ಬಾಯಿ ತುಂಬಾ ನಗುತ್ತಿದ್ದ ಈ ಅಂಬಕ್ಕ ತುಂಬಾನೇ ಹಿಡಿಸಿದರು.ಏಕೆಂದರೆ ಮದುವೆ ಆಗಿ ಬಂದ ಮನೆಯಲ್ಲಿ,ಆ ಊರಲ್ಲಿ ನನ್ನನ್ನು ಅಷ್ಟೊಂದು ಅಕ್ಕರೆಯಿಂದ ಮಾತಾಡಿಸಿದ ಮೊದಲ ಜೀವವೇ ಅಂಬಕ್ಕ.ಅತ್ತೆ,ಗಂಡ, ಮೈದುನ ತುಂಬಾ ಒಳ್ಳೆಯವರೇ ಆದರೂ ಅವರುಗಳ ಮಾತು ತುಂಬಾ ಅಂದರೆ ತುಂಬಾನೇ ಕಡಿಮೆ.ಅವರೆಲ್ಲರೂ ಅಳೆದು ತೂಗಿ ಬಹಳ ಸೌಮ್ಯವಾಗಿಯೇ ಮಾತಾಡುತ್ತಿದ್ದರು.
ಅಂಬಕ್ಕ ಆ ಮದಿಮಾಲ್ ಮೀನಿನ ಬಗ್ಗೆ ಹೇಳುವಾಗ, ಮದುವೆಗೂ ಮೊದಲು ನನ್ನ ಅಮ್ಮ ಹೇಳಿದ್ದ ಕಡಲಿನ ಸುಂದರಿ ಈ ಮದಿಮಾಲ್ ಮೀನು ಎನ್ನುವುದು ಹಾಗೇ ನೆನಪಾಗಿ ಬಿಟ್ಟಿತ್ತು.
ಆ ದಿನ ನಾನು ಅಂಬಕ್ಕನಿಂದ ಆ ಮದಿಮಾಲ್ ಮೀನನ್ನೇ ಬಹಳ ಆಸೆಯಿಂದ ತೆಗೆದುಕೊಂಡು ಮನೆಗೆ ಹೋದೆ.
ಆದರೆ ಆ ದಿನ ಮಾತ್ರ ಎಂದಿನಂತೆ ಇರಲಿಲ್ಲ! ಆಮೇಲೆ ಕೂಡ ಆ ಮನೆ ನನಗಂತು ಯಾವತ್ತಿಗೂ ಹಿಂದಿನಂತೆಯೇ ಇರಲೇ ಇಲ್ಲ!!
ಮನೆಗೆ ತಗೊಂಡು ಹೋದ ಮೀನಿನ ತೊಟ್ಟೆಯನ್ನು ಅದರೊಳಗಿನ ಮೀನನ್ನು ದೂರದಿಂದಲೇ ನೋಡಿ ಗುರುತಿಸಿದ ನನ್ನತ್ತೆ ಆ ಕೂಡಲೇ ಮೈಮೇಲೆ ದೆವ್ವ ಬಂದಂತೆಯೇ ವರ್ತಿಸಿ ಬಿಟ್ಟಿದ್ದರು.ಅವರನ್ನು ಆ ರೂಪದಲ್ಲಿ ಆ ರೋಷದಲ್ಲಿ ನಾನೆಂದೂ ನೋಡಿದವಳೇ ಅಲ್ಲ! ಮೊದಲ ಬಾರಿಗೆ ಅವರು ಅಷ್ಟೊಂದು ಕ್ರೋಧಿಕ್ತರಾಗಿದ್ದು ಕಂಡು ನಾನು ಇನ್ನಿಲ್ಲದಂತೆ ಅದುರಿ ಹೋದೆ!!
ದೂರದಿಂದಲೇ ನನ್ನನ್ನು ನೋಡಿದ ಅವರು ಹಾಗೇ ಓಡಿ ಬಂದು ನನ್ನ ಕೈಯಲ್ಲಿದ್ದ ಮೀನಿನ ತೊಟ್ಟೆಯನ್ನು ಕಿತ್ತುಕೊಂಡು ಅದನ್ನು ಹಾಗೇ ಅಂಗಳಕ್ಕೆಸೆದು ಬಿಟ್ಟರು!
ಜೊತೆಗೆಯೇ ಅತೀ ಕ್ರೋಧದಿಂದಲೇ ನನ್ನತ್ತ ತಿರುಗಿದ ಅತ್ತೆ ಹೇಳಿದ್ದರು... ಎಂತಹ ದರಿದ್ರ ಮೀನನ್ನು ಈ ಮನೆಗೆ ತೆಗೆದುಕೊಂಡು ಬಂದೆ ನೀನು...ಹಾನ್?! ಯಾರಾದರೂ ಬುದ್ದಿ ಇರುವವರು ಈ ಮದಿಮಾಲ್ ಮೀನನ್ನು ಮನೆಗೆ ತಿನ್ನುತ್ತಾರೆಯೇ? ಈ... ಈ ನೀಚ ಮದಿಮಾಲ್ ಮೀನನ್ನು ಜನರು ತಿನ್ನುತ್ತಾರೆಯೇ? ಅದೂ.. ಈ ಮನೆಯಲ್ಲಿ,ನಮ್ಮ ಮನೆಯಲ್ಲಿ.. ನನ್ನ ಮ.. ನೆ.. ಯ.. ಲ್ಲಿ!!? ಕೇಳಿಸಿಕೋ.. ಸರಿಯಾಗಿಯೇ ಕೇಳಿಸಿಕೋ.. ಇದಕ್ಕೂ ಮೊದಲು ಒಂದು ಬಾರಿ ಈ ಮೀನು ನಮ್ಮ ಮನೆಗೂ ಅವಶ್ಯವಾಗಿಯೇ ಬಂದಿತ್ತು! ಆದರೆ...ಆದರೆ.. ಈ ಮೀನಿನಿಂದಾಗಿಯೇ ನನ್ನ ಮಗಳ ಮದುವೆಯೊಂದು ನಡೆಯದೇ ಹೋಯಿತೆಂದು ನಾನು ಹೇಳಿದರೆ ನೀನು ಅದನ್ನು ನಂಬುತ್ತೀಯಾ ?.ಹ್ಞೂಂ.. ನಂಬಬೇಕು.. ಎಲ್ಲರೂ ನಂಬಲೇ ಬೇಕು!.ವಯಸ್ಸಾದರೂ ಮದುವೆಯೇ ಆಗಲಿಲ್ಲ.. ಮದುವೆಯೇ ಆಗಲಿಲ್ಲ.. ಎಂಬ ಕುಟುಂಬದವರ ಸುತ್ತಮುತ್ತಲಿನವರ ನಿಂದನೆಯ ಮಾತನ್ನು ನಿರಂತರವಾಗಿ ಕೇಳಿ ಕೇಳಿ,ಅದರದ್ದೊಂದು ನೋವಲ್ಲೇ ಕೊರಗಿ ಕೊರಗಿ ಕೊನೆಗೊಂದು ದಿನ ನನ್ನ ಆ ಮಗಳು ಆತ್ಮಹತ್ಯೆಯನ್ನೇ ಮಾಡಿಕೊಂಡು ಬಿಟ್ಟಿದ್ದಳು! ಅಂತಹ ನನ್ನ ಪ್ರೀತಿಯ ಮಗಳನ್ನು.. ಅತೀ ಪ್ರೀತಿಯ ಮಗಳನ್ನು ಕೊಂದ ಮೀನಿದು.. ಹೌದು ಇದೇ ಮೀನು ಅವಳನ್ನು ಕೊಂದು ಬಿಟ್ಟಿತ್ತು ! ಹೇಳು... ಈ ಕೊಲೆಗಡುಕಿ ಮೀನನ್ನು ನಮ್ಮ ಮನೆಗೆ ತರಲು ಅದೆಷ್ಟು ಧೈರ್ಯ ನಿನಗೆ!?... ಅತ್ತೆ ಜೋರಾಗಿ ಗುಡುಗಿ ಗುಡುಗಿಯೇ ತಮ್ಮದೊಂದು ಉದ್ದದ ಮಾತು ಅಲ್ಲಿಗೆ ನಿಲ್ಲಿಸಿ ಬಿಟ್ಟಿದ್ದರು.
ಅತ್ತೆ ಬಿಸಾಡಿದ ಮದಿಮಾಲ್ ಮೀನಿನ ತೊಟ್ಟೆ ಅಂಗಳಕ್ಕೆ ಬಿದ್ದು ಅದರಲ್ಲಿದ್ದ ಗುಲಾಬಿ ರಂಗಿನ ಮೀನುಗಳು ಚೆಲ್ಲಾಪಿಲ್ಲಿಯಾಗಿ ಹೋದವು!
ಆ ಕೂಡಲೇ ಮನೆಯ ನಾಯಿ ಜಿಮ್ಮಿ ,ಮಂಗು ಬೆಕ್ಕು,ಹಾಗೂ ಮರದಲ್ಲಿದ್ದ ಕಾಗೆಗಳು ಅಂಗಳದಲ್ಲಿ ಬಿದ್ದಿದ್ದ ನಾನು ಅಷ್ಟೊಂದು ಆಸೆಯಿಂದ ತಂದಿದ್ದ ಎಲ್ಲಾ ಮದಿಮಾಲ್ ಮೀನನ್ನು ಕಚ್ಚಿಕೊಂಡು ಅಷ್ಟು ದೂರಕ್ಕೆ ಓಡಿ ಹೋದವು!
ಆ ಮನೆಯ ನಾಯಿ ಬೆಕ್ಕುಗಳು ತಮ್ಮ ಜೀವನದಲ್ಲಿಯೇ ಮೊದಲ ಬಾರಿಗೆ ಅಷ್ಟೊಂದು ಖುಷಿ ಪಟ್ಟಂತೆ ಕಂಡಿತು ಒಮ್ಮೆ ನನಗೆ!!
ಆದರೆ ನಾನೇನು ಪಾಪ ಮಾಡಿದ್ದೆ?.ಪಾಪ ಏನು ಮಾಡಿದ್ದೆ ಎಂದು ಆ ಕ್ಷಣಕ್ಕೆ ಗೊತ್ತಾಗಲಿಲ್ಲ,ಆದರೆ ಆ ದಿನವೇ ಹೆಚ್ಚು ಕಡಿಮೆ ಅದು ನನಗೆ ಗೊತ್ತಾಗಿ ಹೋಗಿತ್ತು!
ಆ ರಾತ್ರಿಯೇ ನನ್ನ ಗಂಡನ ತಂದೆ ಅಂದರೆ ನನ್ನ ಮಾವ ಹೃದಯಾಘಾತದಿಂದ ತೀರಿಕೊಂಡು ಬಿಟ್ಟರು!!
ಅವರದ್ದು ತುಂಬು ಜೀವನ.ವೃದ್ಧಾಪ್ಯದ ಹೊಸ್ತಿಲಲ್ಲಿ ಇದ್ದ ಅವರು ಸಹಜ ಸಾವನ್ನಪ್ಪಿದ್ದರು ಎಂದು ನಾನು ಅಂದುಕೊಂಡಿದ್ದೆ,ಆದರೆ ನಾನಂದುಕೊಂಡಂತೆ ನನ್ನ ಅತ್ತೆ ಅಂದುಕೊಳ್ಳಲಿಲ್ಲ!
ಆ ದಿನದಿಂದ ಪ್ರತೀ ದಿನವೂ ಈ ಮದುಮಗಳ ಕಾಲ್ಗುಣ ಸರಿ ಇಲ್ಲ ಎಂದು ಅತ್ತೆ ನನ್ನನ್ನು ತುಂಬಾನೇ ಹೀಯಾಳಿಸತೊಡಗಿದರು.ಅದರ ಜೊತೆಗೆಯೇ.. ಮನೆಯಲ್ಲಿ ನಿಷಿದ್ಧವಾಗಿದ್ದ ಮದಿಮಾಲ್ ಮೀನನ್ನು ಮತ್ತೆ ಮನೆಗೆ ತಂದದ್ದೇ ಇಂತಹದ್ದೊಂದು ಘೋರ ಅನರ್ಥಕ್ಕೆ ಕಾರಣವಾಯಿತೆಂದು,ನೀನೇ ನನ್ನ ಗಂಡನನ್ನು ನಿಜವಾಗಿಯೂ ಕೊಂದದ್ದೆಂದು..ಅತ್ತೆ ನಿಜವಾಗಿಯೂ ಕಣ್ಣೀರು ಸುರಿಸಿಯೇ ನನಗೆ ಇನ್ನಿಲ್ಲದಂತೆ ಶಾಪ ಹಾಕಿದ್ದರು.
ಅಷ್ಟು ಮಾತ್ರವಲ್ಲ ನಾನು ನೋಡಲು ಸುಂದರವಾಗಿರುವ ಕಾರಣ ಊರ ಗಂಡಸರೆಲ್ಲರ ಕೆಟ್ಟ ದೃಷ್ಟಿ ನನ್ನೆಡೆಗೆ ಬಿದ್ದಿದೆ , ನನ್ನಿಂದಾಗಿ ಮನೆಯ ಗೌರವ ಕೂಡ ಹಾಳಾಗುತ್ತಿದೆ ಎಂದೆಲ್ಲಾ ಹೇಳಿ ನನ್ನ ಅತ್ತೆ ನನ್ನನ್ನು ಮತ್ತಷ್ಟು ಅವಮಾನಿಸತೊಡಗಿದರು ಜೊತೆಗೆ ಸುಳ್ಳು ಸುಳ್ಳೇ ಅನುಮಾನಿಸಲು ಕೂಡ ಶುರು ಮಾಡಿದರು.ನಿಜ ಹೇಳಬೇಕೆಂದರೆ ನನ್ನ ಅತ್ತೆ ನೋಡಲು ತುಂಬಾನೇ ಕುರೂಪಿ ಆಗಿದ್ದರು.ಆ ಊರಲ್ಲಿಯೇ ಆ ಮನೆಯವರಷ್ಟು ಕುರೂಪಿಗಳು ಯಾರೂ ಇರಲಿಲ್ಲವೆಂದು ಕಾಣುತ್ತದೆ..! ಅತ್ತೆಯ ಇಬ್ಬರ ಮಕ್ಕಳು ಕೂಡ ಹೆಚ್ಚು ಕಡಿಮೆ ಅತ್ತೆಯಷ್ಟೇ ಕುರೂಪಿಗಳಾಗಿದ್ದರು.ನನ್ನ ಗಂಡ ದೈಹಿಕವಾಗಿಯೂ ದುರ್ಬಲನೇ ಆಗಿದ್ದ!.ಆದರೆ ಆ ಮನೆಯವರ ಬಳಿ ಎಲ್ಲವನ್ನೂ,ಎಲ್ಲರನ್ನೂ ಕೊಳ್ಳುವ ಸಂಪತ್ತು ಇತ್ತು.ಹೌದು ಅವರು ಸಿರಿವಂತರಾಗಿದ್ದರು ಆದರೆ ನಾನು ಸೌಂದರ್ಯದಲ್ಲಿ ಅಷ್ಟೇ ಶ್ರೀಮಂತೆಯಾಗಿದ್ದೆ.ಅದಕ್ಕಾಗಿಯೇ ನನ್ನದೊಂದು ಸೌಂದರ್ಯದ ಮೇಲೆ ಇಂತಹ ಹೊಟ್ಟೆ ಕಿಚ್ಚೆ? ಬೇಕೆಂದೇ ಇಲ್ಲ ಸಲ್ಲದ ಆಪಾದನೆಯೇ?.ಹೊಟ್ಟೆಯೊಳಗಿನ ಅವರ ಕಿಚ್ಚಿಗೆ,ಅಂತಹದ್ದೊಂದು ಅಸೂಯೆಗೆ ಈ ಮದಿಮಾಲ್ ಮೀನು ಕೇವಲ ಒಂದು ನೆಪವಾಗಿತ್ತೇ!? ಗೊತ್ತಿಲ್ಲ!
ನನ್ನನ್ನು ನನ್ನ ಗಂಡನೊಡನೆ ಸೇರಿ ಸರಿಯಾಗಿ ಸಂಸಾರವನ್ನು ಮಾಡಲು ಕೂಡ ಅತ್ತೆ ಬಿಡಲೇ ಇಲ್ಲ!
ಸುಂದರಿಯಾಗಿ ಹುಟ್ಟಿದ್ದು ನನ್ನ ತಪ್ಪೇ? ಮದಿಮಾಲ್ ಮೀನು ತಂದ ಕಾರಣದಿಂದಾಗಿಯೇ ನಿಜವಾಗಿಯೂ ನನ್ನ ಮಾವನವರ ಸಾವು ಸಂಭವಿಸಿತೇ? ಇದಕ್ಕೆಲ್ಲಾ ನನ್ನ ಬಳಿ ನಿಜವಾಗಿಯೂ ಉತ್ತರವಿರಲಿಲ್ಲ.ಅಸಹಾಯಕಳಾಗಿದ್ದೆ ನಾನು.ಏಕೆಂದರೆ ಜನಗಳ ಇಂತಹದ್ದೊಂದು ವರ್ತನೆ ನಾನು ಎಂದಿಗೂ ನೋಡಿದವಳೇ ಅಲ್ಲ.
ನನ್ನ ನೋವನ್ನು ಹಾಗೇ ನುಂಗಿಕೊಂಡೆ.ಕೆಲವೊಮ್ಮೆ ಅತ್ತೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು,ಕತ್ತೆಯಂತೆಯೇ ದಿನಪೂರ್ತಿ ದುಡಿಸಿಕೊಳ್ಳುತ್ತಿದ್ದರು. ನಾನು ಏನೂ ಹೇಳದೇ ಅವರು ಹೇಳಿದ ಎಲ್ಲವನ್ನೂ ಕೇಳಿಕೊಂಡು ಇರುತ್ತಿದ್ದೆ.ಮದುವೆಗೂ ಮುಂಚೆ ನನ್ನ ಅಮ್ಮನೇ ನನಗೆ ಹೇಳಿ ಕೊಟ್ಟಿದ್ದಳು.. ಅತ್ತೆ ಮನೆಯಲ್ಲಿ ಎಲ್ಲರಿಗೂ ತಲೆ ತಗ್ಗಿಸಿಕೊಂಡು,ಯಾರಿಗೂ ಎದುರಾಡದೇ ಇರಬೇಕು ಮಗಳೇ.. ಅದು ದೊಡ್ದವರ ಮನೆ,ನೀನು ಬಡವರ ಮನೆಯ ಹುಡುಗಿ,ಅಲ್ಲಿ ಏನೇ ಮನಸ್ಸಿಗೆ ನೋವಾದರೂ ಅದನ್ನು ನೀನು ಸಹಿಸಿಕೊಳ್ಳಲೇಬೇಕು ಎಂದು ಹೇಳಿದ್ದಳು ನನ್ನ ಅಮ್ಮ. ನನ್ನ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ನೋಡಿಯೂ ನನ್ನ ಗಂಡ ಆದವನು ಏನೂ ನೋಡದವನಂತೆ ಇದ್ದು ಬಿಡುತ್ತಿದ್ದ. ಆದರೆ ನನ್ನ ಅಮ್ಮ ಒಮ್ಮೆ ಮನೆಗೆ ಬಂದಿದ್ದಾಗ ಇದನ್ನೆಲ್ಲಾ ಕಣ್ಣಾರೆ ನೋಡಿ ಆ ದಿನ ತುಂಬಾನೇ ನೋವು ಪಟ್ಟುಕೊಂಡಳು.ಅಮ್ಮಿ.... ನಿನಗೆ ನಾನು ಮದುವೆಯೇ ಮಾಡಬಾರದಿತ್ತು ಕಣೇ.. ಎಂದು ಕಣ್ಣೊರೆಸಿಕೊಂಡು ಹೇಳಿಯೇ ಅಲ್ಲಿಂದ ಎದ್ದು ಹೋಗಿದ್ದಳು ಅಮ್ಮ.ಎಷ್ಟಾದರೂ ಅವಳು ನನ್ನ ಅಮ್ಮ.ನಾನೇ ಸುಖವಾಗಿರದಿದ್ದರೆ ಅವಳಿಗೆ ಎಲ್ಲಿಯ ಸುಖ ಇರಲು ಸಾಧ್ಯ.
ನಮ್ಮ ಮನೆಯಿಂದ ಹೋದವಳು ಒಂದು ಮದ್ಯಾಹ್ನ ಹೊಳೆಯಲ್ಲಿ ಮೀನು ಹಿಡಿಯುವಾಗ ಕಾಲು ಜಾರಿ ಹಾಗೇ ಹೊಳೆಗೆ ಬಿದ್ದು ಬಿಟ್ಟಳು,ಹೊಳೆಯಲ್ಲಿ ಬಿದ್ದವಳು ಆ ಹೊಳೆಯಲ್ಲಿ ಮುಳುಗಿಯೇ ಸತ್ತು ಹೋದಳು!
ಅಮ್ಮನಿಗೆ ಈಜು ಬಹಳ ಚೆನ್ನಾಗಿಯೇ ಬರುತ್ತದೆ,ಆದರೆ ಚೆನ್ನಾಗಿ ಬದುಕಿ ಬಾಳಲು ಯಾವುದೇ ಸಕಾರಣಗಳು ಅವಳೆದುರು ಇಲ್ಲದೇ ಇದ್ದುದರಿಂದ,ಅವಳು ಬದುಕು ಸಾಕೆನಿಸಿ ಆ ಹೊಳೆಯಲ್ಲಿಯೇ ಜೀವ ಬಿಟ್ಟು ದೇವರ ಪಾದ ಸೇರಿದ್ದಳು ಎಂದೇ ನನಗೆ ಅನಿಸಿತ್ತು.ನಾನು ಸುಖವಾಗಿರಬೇಕು ಅದನ್ನು ಕಂಡು ಅವಳು ಸಂತೋಷದಿಂದಿರಬೇಕು ಎಂದು ಅಂದುಕೊಂಡಿದ್ದಳು ಅಮ್ಮ.ಆದರೆ ನಾನು ಮದುಮಗಳಾಗಿದ್ದೇ ಅವಳ ಪಾಲಿನ ಅತೀ ದೊಡ್ಡ ಪಾಪದಂತೆ ನನಗೆ ಕಂಡಿತು. ಹಾಗಾದರೆ ನಿಜವಾಗಿಯೂ ನನ್ನ ಅಮ್ಮನನ್ನು ಕೊಂದಿದ್ದು ನಾನಾ? ಅಥವಾ ಈ ಮದಿಮಾಲ್ ಮೀನಾ?
ಮನೆಯಲ್ಲಿ ಅತ್ತೆ ಕಾಟ ಮತ್ತಷ್ಟು ಹೆಚ್ಚಾಗಿತ್ತು.ಪ್ರತಿಯೊಂದಕ್ಕೂ ಅತ್ತೆ ನನ್ನನ್ನು ಬೈಯುತ್ತಿದ್ದರು.ಮಾತು ಮಾತಿಗೂ ನೀನು ಮದುಮಗಳಾಗಿ ಈ ಮನಗೆ ಬರಲಿಲ್ಲ,ನೀನು ಮಾಟಗಾತಿ,ಹೆಮ್ಮಾರಿ, ಬಂದ ಕೂಡಲೇ ನಮ್ಮೆಜಮಾನರನ್ನೇ ಬಲಿ ತೆಗೆದುಕೊಂಡೆ,ಇನ್ನೆಷ್ಟು ಜನರನ್ನು ಬಲಿ ತೆಗೆದುಕೊಳ್ಳುವೆಯೋ... ನೋಡು,ಇದೆಲ್ಲವೂ ಆದದ್ದು ಆ ಮದಿಮಾಲ್ ಮೀನಿನಿಂದಲೇ... ಅದು ಮೊದಲು ನನ್ನ ಮಗಳನ್ನೇ ಕೊಂದಿತು,ಈಗ ನನ್ನ ಗಂಡನನ್ನೇ ಕೊಂದು ಬಿಟ್ಟಿದೆ.. ಹೇಳು,ಏತಕ್ಕಾಗಿ...ಏತಕ್ಕಾಗಿ ಆದರೂ ಆ ಮದಿಮಾಲ್ ಮೀನನ್ನು ಈ ಮನೆಗೆ ತಗೊಂಡು ಬಂದೆ ನೀನು...ಹೇಳು.. ಎಂದು ಪದೇ ಪದೇ ಹೇಳಿದ್ದನೇ ಹೇಳಿ ನನ್ನನ್ನು ಅತ್ತೆ ನಿರಂತರವಾಗಿ ಮಾನಸಿಕವಾಗಿಯೂ ಹಿಂಸಿಸುತ್ತಿದ್ದರು. ಅವರ ಮಗಳು ಯಾವುದೋ ಸಮಸ್ಯೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಈ ಮದಿಮಾಲ್ ಮೀನು ಹೇಗೆ ಕಾರಣವಾಗುತ್ತದೆ?! ನನಗಂತು ಅದು ಉತ್ತರವಿಲ್ಲದ ಪ್ರಶ್ನೆಯಾಗಿ ಕಂಡಿತು.
ಆ ದಿನದಿಂದ ನಾನು ಯಾವತ್ತೂ ಮದಿಮಾಲ್ ಮೀನನ್ನು ನಮ್ಮ ಮನಗೆ ತಗೊಂಡು ಹೋಗಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಆ ಧೈರ್ಯವೇ ಬರಲಿಲ್ಲ.
ಪ್ರತಿ ಬಾರಿಯೂ ಅಂಬಕ್ಕನ ಬಳಿ ಬಂದಾಗ ಅವಳ ಬುಟ್ಟಿಯೊಳಗಿರುವ ಈ ಮದಿಮಾಲ್ ಮೀನ್ ಕಂಡಾಗ ಅದು ಅಷ್ಟೊಂದು ಸುಂದರಿಯಾಗಿದ್ದರೂ ಸಹ ನನ್ನಂತೆಯೇ ತೀರಾ ತಿರಸ್ಕ್ರತವಾದವಳು ಎಂದೇ ನನಗೆ ಅನ್ನಿಸುತ್ತಿತ್ತು.
ಒಂದು ದಿನ ನಾನು ಅಂಬಕ್ಕನಲ್ಲಿ ಕೇಳಿಯೇ ಬಿಟ್ಟೆ...ಅಂಬಕ್ಕ ಈ ಮದಿಮಾಲ್ ಮೀನು ಯಾಕೆ ತಿನ್ನಬಾರದು ?.. ಎಂದು.
ಅಂಬಕ್ಕ ನಗುತ್ತಾ.. ಹಹ್ಹಾ... ಹಹ್ಹಾ.. ಹಾಗೇನಿಲ್ಲ ಮಗಳೇ..ನಮ್ಮ ಜನರದ್ದು ಒಂದೊಂದು ಕಟ್ಟು ಕಥೆ..ಒಂದೊಂದು ನಂಬಿಕೆ,ಅಭಿಪ್ರಾಯಗಳು ಅಷ್ಟೇ..
ಏನದು ಕಥೆ?... ಅಂದೆ ನಾನು.
ಅಂಬಕ್ಕ ಮತ್ತಷ್ಟು ನಗುತ್ತಾ....ಹಹ್ಹಾ...ಹಹ್ಹಾ.. ಕಥೆಯೇ..ಮದಿಮಾಲ್ ಮೀನಿನ ಕಥೆಯೇ? ಹಹ್ಹಾ.. ಹಹ್ಹಾ.. ಒಂದಾ.. ಎರಡಾ..ಹತ್ತಾ...ಹಲವಾರು ಕಥೆಗಳಿವೆ ಮಗಳೇ...ಹೇಳು, ಯಾವುದನ್ನು ನಿನಗೆ ನಾನು ಹೇಳಲಿ..ಮತ್ತೆ ಎಂದಿನಂತೆ ನಗು ಚೆಲ್ಲುತ್ತಾ ಹೇಳಿ ಬಿಟ್ಟಿದ್ದರು ಅಂಬಕ್ಕ.
ಎಲ್ಲವನ್ನೂ ಹೇಳಿ.. ಅಂದೆ ನಾನು ಅವರನ್ನು ನೋಡುತ್ತಲೇ.
ಅಂಬಕ್ಕ ತನ್ನ ಜೊತೆಯಲ್ಲಿ ಸದಾ ಇಟ್ಟುಕೊಳ್ಳುತ್ತಿದ್ದ ಎಲೆ ಅಡಿಕೆಯಲ್ಲಿ ಒಂದಷ್ಟನ್ನು ಬಾಯಿಗೆ ಹಾಕಿಕೊಂಡು,ಅದನ್ನು ಜಗಿಯುತ್ತಾ ಬಾಯಿಯನ್ನು ನಿಧಾನಕ್ಕೆ ಕೆಂಪು ಮಾಡಿಕೊಂಡು ಕೆಳಗೆ ಕುಳಿತಲ್ಲಿಂದಲೇ ಹಾಗೇ ನಿಧಾನಕ್ಕೆ ಮಾತಾಡಲು ಶುರು ಮಾಡಿಕೊಂಡರು...
- ನೋಡು ಮಗಳೇ ಈ ಮದಿಮಾಲ್ ಮೀನಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು ಖಂಡಿತವಾಗಿಯೂ ಇದೆ.ಒಂದೊಂದು ಸೀಮೆಯಲ್ಲಿ ಒಂದೊಂದು ಕಥೆ.ಅದರಲ್ಲಿ ಕೆಲವು ಕಟ್ಟು ಕಥೆಗಳೂ ಇವೆ,ಕೆಲವರಿಗಷ್ಟೇ ಗೊತ್ತಿರುವ ಕಥೆಗಳೂ ಸಹ ಇವೆ.ಕೆಲವು ಸತ್ಯವೂ ಇರಬಹುದು.ಆದರೆ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ಈ ಕಾಲದಲ್ಲಿ ನಮಗೆ ಹೇಗೆ ಗೊತ್ತಾಗಲು ಸಾಧ್ಯ ಹೇಳು.ನನಗಂತು ಈ ಕಥೆಗಳ ಸತ್ಯಾ ಸತ್ಯತೆಯ ಬಗ್ಗೆಯೇ ಗೊತ್ತಿಲ್ಲ.ಆದರೆ ಮದಿಮಾಲ್ ಮೀನಿನಂತೆಯೇ ಬಣ್ಣ ಬಣ್ಣದ ಕಥೆಗಳು ಅದರ ಸುತ್ತಲೂ ಇರುವುದಂತು ನಿಜವೇ...ಅಂದರು ಅಂಬಕ್ಕ.
ಗೊತ್ತಿರುವಷ್ಟನ್ನೂ ಒಂದೊಂದಾಗಿ ಹೇಳಿ... ಅಂದೆ ನಾನು.
ಆಯಿತು.. ಹಾಗಾದರೆ ಕೇಳಿಸಿಕೊಳ್ಳು ಮಗಳೇ.ಒಂದು ಬಾರಿ ಮದುಮಗಳೊಬ್ಬಳು ದೋಣಿಯಲ್ಲಿ ಕುಳಿತುಕೊಂಡು ಕಡಲಿನಲ್ಲಿ ದಿಬ್ಬಣ ಹೋಗುತ್ತಿದ್ದಳಂತೆ,ಆವಾಗ ಕಡಲೇ ಅವಳನ್ನು ಮಾಯ ಮಾಡಿ ಬಿಟ್ಟಿತ್ತಂತೆ.ಕಡಲಿನಲ್ಲಿ ಹೋಗುತ್ತಿದ್ದ ಆ ಮದುಮಗಳನ್ನು ದೈವವೇ ಮಾಯ ಮಾಡಿದ್ದು ಎಂದು ಕೂಡ ಜನರು ಹೇಳುತ್ತಾರೆ,ಮುಂದೆ ಆ ಮದುಮಗಳೇ ಗುಲಾಬಿ ಬಣ್ಣದ ಮೀನಾಗಿ ಬಿಟ್ಟಳಂತೆ.ಜನರು ಮದಿಮಾಲ್ (ಮದುಮಗಳು) ಮೀನು ಎಂಬ ಹೆಸರಿನಿಂದಲೇ ಆ ಮೀನನ್ನು ಕರೆದರಂತೆ..
ಇನ್ನೊಂದು ಕಥೆಯ ಪ್ರಕಾರ ಒಬ್ಬಳು ಮದುಮಗಳು ಮದುವೆ ಮಂಟಪದಲ್ಲಿ ಕುಳಿತುಕೊಂಡಿದ್ದಾಗ,ಅವಳಿಗೆ ಆ ಮದುವೆ ಇಷ್ಟವಿರದೇ ಇದ್ದುದರಿಂದ ಅಲ್ಲಿಂದ ಪಾರಾಗಲು ಆ ಹುಡುಗಿ ಮನೆಯ ದೈವಕ್ಕೆ ಹರಕೆ ಹೊತ್ತಳಂತೆ,ಅದರ ಪರಿಣಾಮ ಅವಳು ಅಲ್ಲಿಂದ ಮಾಯವಾಗಿ ನೀರಿನಲ್ಲಿ ಮೀನಾಗಿ ಮತ್ತೆ ಹುಟ್ಟಿದಳಂತೆ,ಮದುಮಗಳೇ ಮೀನಾದ ಕಾರಣ ಮೀನಿಗೂ ಮದುಮಗಳು ಅಂದರೆ ಮದಿಮಾಲ್ ಎನ್ನುವ ಹೆಸರೇ ಬಂತಂತೆ.ಹೆಚ್ಚು ಕಡಿಮೆ ಇದೇ ರೀತಿಯ ಇನ್ನೂ ಒಂದು ಕಥೆಯೂ ಇದೆ.ಮದುವೆಯ ಸಂದರ್ಭ ದೈವಕ್ಕೆ ಹರಕೆ ಹೊತ್ತಿದ್ದ ಮದುಮಗಳೊಬ್ಬಳು, ಮುಂದೆ ಆ ಹರಕೆ ತೀರಿಸದೇ ಇದ್ದಾಗ ಅವಳನ್ನು ದೈವವೇ ಮಾಯ ಮಾಡಿ ಮೀನನ್ನಾಗಿ ಮಾಡಿತ್ತು ಎಂದು,ಆ ಮೀನಿಗೂ ಜನರು ಮದಿಮಾಲ್ ಎಂದೇ ಕರೆದರು ಎನ್ನುವ ಕಥೆಯೂ ಇದೆ...
ಹೀಗೆ ಮದಿಮಾಲ್ ಮೀನಿಗೆ ಸಂಬಂಧಿಸಿದಂತೆ ಹಲವಾರು ಕಥೆ, ನಂಬಿಕೆಗಳು ಇದೆ ಮಗಳೇ. ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ.ಮನೆಯಲ್ಲಿ ಮುಂದೆ ಮದುಮಗಳು ಎಂಬ ಗೌರವಕ್ಕೆ ಪಾತ್ರವಾಗುವ ಹೆಣ್ಣು ಮಗು ಇಲ್ಲವೇ ಬೆಳೆದು ನಿಂತ ಹೆಣ್ಣು ಮಗಳು ಇದ್ದರೆ,ಅದೇ ಹೆಸರಿನ ಮೀನನ್ನು (ಮದಿಮಾಲ್) ಮನೆಗೆ ತಂದು ಆ ಮದುಮಗಳು ಎಂಬ ವಿಶೇಷ ಗೌರವವನ್ನು ಮೊದಲೇ ಬೇರೆ ಯಾರಿಗೂ ಕೊಡಬಾರದು... ಜೊತೆಗೆ ಮದಿಮಾಲ್ ಮೀನನ್ನು ಪದಾರ್ಥ ಮಾಡಿಕೊಂಡು ಹೆಣ್ಣು ಹೆತ್ತಿರುವ ಮನೆಯವರು ತಿನ್ನಬಾರದೆಂಬ ನಂಬಿಕೆ ಕೂಡ ಒಂದಿದೆ.
ಮಗಳೇ..ಇನ್ನೊಂದು ತಮಾಷೆಯ ವಿಷಯ ಗೊತ್ತೇ ಈ ಮದಿಮಾಲ್ ಮೀನು ಮನೆಗೆ ತಂದರೆ ಮನೆಯ ಹೆಣ್ಣುಮಗು ಎಂದಿಗೂ ಮದುಮಗಳೇ ಆಗುವುದಿಲ್ಲ,ಅವಳಿಗೆ ಮುಂದೆ ಮದುವೆಯೇ ಆಗುವುದಿಲ್ಲ ಎಂಬ ನಂಬಿಕೆಯ ಜೊತೆ ಜೊತೆಗೆ ಒಂದು ಬಾರಿ ಈ ಮದಿಮಾಲ್ ಮೀನನ್ನು ಮನೆಗೆ ತೆಗೆದುಕೊಂಡು ಹೋದ ಹೊಸ ಮದುಮಗಳೊಬ್ಬಳು ಆ ಮನೆಯಿಂದಲೇ ಶಾಶ್ವತವಾಗಿ ಮಾಯಕವಾಗಿ ಹೋಗಿದ್ದಳಂತೆ ಅಷ್ಟು ಮಾತ್ರವಲ್ಲ ಒಂದು ಬಾರಿ ಈ ಮದಿಮಾಲ್ ಮೀನನ್ನು ಪದಾರ್ಥ ಮಾಡಿಕೊಂಡು ತಿಂದ ಹೆಣ್ಣುಮಗಳು ಸಹ ಹಾಗೇ ಮಾಯಕವಾಗಿ ಬಿಟ್ಟಳಂತೆ ಎಂಬ ಕಥೆಯೂ ಕೂಡ ಇದೆ ಗೊತ್ತೇ...ಹಹ್ಹಾ ಹಹ್ಹಾ... ಹೀಗೆ ಏನೇನೋ ಹತ್ತಾರು ನಂಬಿಕೆಗಳು,ಕಥೆಗಳು ಇವೆ ಮಗಳೇ...ಎನ್ನುತ್ತಾ ಜಗಿದ ಎಲೆ ಅಡಿಕೆಯನ್ನು ಪಕ್ಕಕ್ಕೆ ಉಗುಳುತ್ತಾ ಅಂಬಕ್ಕ ಮತ್ತಷ್ಟು ನಕ್ಕರು.
ಅಂಬಕ್ಕ ನೀವು ಇದನ್ನೆಲ್ಲಾ ನಂಬುತ್ತೀರಾ? ನಾನು ನೇರವಾಗಿ ಅವರಲ್ಲಿಯೇ ಕೇಳಿದ್ದೆ.
ಏನೋ ಒಂದು ಕಥೆಗಳು ಮಗಳೇ.. ಜನರು ಹಾಗೇ ಹೇಳುತ್ತಾರೆ..ಕೆಲವರು ಇವುಗಳನ್ನು ನಂಬುತ್ತಾರೆ,ಇನ್ನು ಕೆಲವರು ಇಲ್ಲ.ಒಟ್ಟಿನಲ್ಲಿ ಎಲ್ಲವೂ ಅವರವರ ನಂಬಿಕೆಗೆ ಬಿಟ್ಟದ್ದು ಅಷ್ಟೇ.ಕೆಲವೊಂದು ಕಡೆ ಇಡೀ ಕುಟುಂಬವೇ ಈ ಮದಿಮಾಲ್ ಮೀನು ತಿನ್ನುವುದಿಲ್ಲ,ಇನ್ನೊಂದು ಕಡೆಗಳಲ್ಲಿ ಇಡೀ ಸಮುದಾಯವೇ ಈ ಮೀನನ್ನು ತಿನ್ನುವುದಿಲ್ಲ.ನಿನಗೆ ಗೊತ್ತೇ, ಇನ್ನೂ ಒಂದು ಜಾತಿಯ ಮೀನಿದೆ.ಅದರ ಹೆಸರು ಮಾಲ ಎಂದು.ಕೆಲವರು ಅದು ಸರ್ಪ ಕುಲಕ್ಕೆ ಸೇರಿದ್ದು ಎಂದು ಹೇಳುತ್ತಾರೆ.ಹಾಗಾಗಿ ಅದನ್ನು ನಂಬುವವರು ಆ ಹಾವಿನಂತೆ ಕಾಣುವ ಮಾಲ ಮೀನನ್ನು ಎಂದಿಗೂ ತಿನ್ನುವುದಿಲ್ಲ.ಎಲ್ಲವೂ ಅವರವರ ನಂಬಿಕೆಗಳು ಮಗಳೇ.
ಆದರೆ ಈ ಎಲ್ಲಾ ಕಥಗೆಳು ಹೇಳುವಂತೆ ಸ್ವತಃ ಕಡಲು ಕೂಡ ಜನರನ್ನು ಮಾಯಕ(ಮಾಯ) ಮಾಡುವುದಾದರೆ ನಾವು ಕಡಲನ್ನು ಪ್ರತೀ ಸಲವೂ ನಂಬುವುದಾದರೂ ಹೇಗೆ? ಮೀನು ಹಿಡಿಯಲು ಹೋಗುವುದಾದರೂ ಹೇಗೆ ಹೇಳು ಮಗಳೇ ? ಎಂದರು ಅಂಬಕ್ಕ.
ಹಾಗಿದ್ದರೂ ಮದಿಮಾಲ್ ಮೀನನ್ನು ಕೆಲವು ಜನರೇಕೇ ತಿನ್ನುವುದಿಲ್ಲ ಅಂಬಕ್ಕ? ಮತ್ತಷ್ಟು ಕುತೂಹಲದಿಂದ ಮೂಲ ಪ್ರಶ್ನೆಯನ್ನೇ ಮತ್ತೊಮ್ಮೆ ಕೆದಕಿ ಕೇಳಿದ್ದೆ ನಾನು.
ನೋಡು ಮಗಳೇ.. ಮದಿಮಾಲ್ ಮೀನು ನೋಡಲು ಮದುಮಗಳಂತೆಯೇ ಬಹಳ ಆಕರ್ಷಕ ಮೀನು,ಹಾಗಾಗಿ ಕೆಲವು ಜನರಿಗೆ ಮದಿಮಾಲ್ ಮೀನು ತಿನ್ನುವುದೆಂದರೆ ಮದುಮಗಳನ್ನೇ ಕೊಂದು ಅಡುಗೆ ಮಾಡಿ ತಿಂದಂತೆ ಎಂಬ ಭಾವನೆಯೂ ಕೂಡ ಇದ್ದಿರಬಹುದು.ಬೇಕಿದ್ದರೆ ಮದಿಮಾಲ್ ಮೀನನ್ನೇ ನೀನು ಸರಿಯಾಗಿ ನೋಡು ಅದರ ಮುಖದ ಮುಂದೆ ಸ್ವಲ್ಪವೇ ಸ್ವಲ್ಪ ಕೆಂಪಗಿದ್ದು ಕುಂಕುಮವನ್ನೇ ಮೆತ್ತಿಕೊಂಡಂತೆ,ಹೊಟ್ಟೆಯಡಿ ತಿಳಿ ಹಳದಿ ಇದ್ದು ಅರಶಿಣವನ್ನೇ ಬಳಿದುಕೊಂಡಂತೆ ಕಾಣುವ ಈ ಮೀನು,ನಿಜಕ್ಕೂ ಮದುಮಗಳಂತೆಯೇ ಬಹಳಷ್ಟು ಅಂದವಾಗಿ,ಆಕರ್ಷಕವಾಗಿಯೇ ಕಾಣುವುದು ಯಾವತ್ತೂ.ಹಾಗಾಗಿಯೇ ಕೆಲವರು ಅದನ್ನು ತಿನ್ನುವುದಿಲ್ಲ ಅಷ್ಟೇ.
ಬಹುಶಃ ಆ ರೀತಿ ಸುಂದರವಾಗಿ ಬಹಳ ಆಕರ್ಷಕವಾಗಿ ಇದ್ದುದರ ಕಾರಣ ಇದು ಈ ಹಿಂದೆ ತುಂಬಾ ದುಬಾರಿಯಾಗಿಯೂ ಇದ್ದಿರಬಹುದು,ಹಾಗಾಗಿ ಜನರು ಇದರತ್ತ ಮುಖ ಮಾಡದೆಯೂ ಇರಬಹುದು..ಯಾರಿಗೆ ಗೊತ್ತು ಆ ಎಲ್ಲಾ ಕಥೆಗಳು.ನಮ್ಮವರೇ ಈ ಹಿಂದೆ ಇದನ್ನೆಲ್ಲಾ ಜಾಸ್ತಿಯಾಗಿ ಮಾರದೇ ಇದ್ದುದರಿಂದಲೂ,ಈ ಮೀನು ಬಹಳನೇ ಅಪರೂಪವಾಗಿ ಜನರು ಇದನ್ನು ನಿರಂತರವಾಗಿ ತಿನ್ನದೇ ಇದರ ರುಚಿಯಿಂದ ದೂರನೇ ಉಳಿದುದ್ದರಿಂದಲೂ ಕೂಡ ಬಹುಶಃ ಇದು ಹಾಗೆಯೇ ತಿನ್ನದ ಮೀನಾಗಿಯೇ ಉಳಿದು ಹೋಗಿರಬಹುದು ಅಲ್ಲವೇ ಮಗಳೇ.ಇದೆಲ್ಲವೂ ನನ್ನದೇ ಒಂದು ಊಹೆ,ಕಲ್ಪನೆಗಳು ಅಷ್ಟೇ.ಆದರೆ ನಾನಂತು ಇದನ್ನು ತಿನ್ನುತ್ತೇವೆ ನೋಡು. ಬಹಳ ಇಷ್ಟ ಪಟ್ಟೇ ತಿನ್ನುತ್ತೇನೆ.ಈಗ ನೋಡಿದರೆ ಇದು ಬೂತಾಯಿ ಬಂಗುಡೆಯಷ್ಟೇ ನಮ್ಮಲ್ಲಿ ಸಾಮಾನ್ಯವಾದ ಮೀನು ಆಗಿದೆ.ನಿಜ ಹೇಳಬೇಕೆಂದರೆ ತುಂಬಾ ರುಚಿ ಕೂಡ ಉಂಟು.ಹೆಚ್ಚು ಕಡಿಮೆ ಕಲ್ಲೂರು ಮೀನಿನದ್ದೇ ಒಂದು ಸುಂದರವಾದ ಜಾತಿಗೆ ಸೇರಿದ ಈ ಮೀನನ್ನು ಸಾರು ಮಾಡುವುದಕ್ಕಿಂತಲೂ ಮಸಾಲೆ ಹಚ್ಚಿ ಹಾಗೇ ತೆಂಗಿನೆಣ್ಣೆಯಲ್ಲಿ ಕಾಯಿಸಿ ತಿಂದರೆ ಮಗಳೇ.. ನಿಜಕ್ಕೂ ಬಹಳ ಚೆನ್ನಾಗಿರುತ್ತದೆ ಗೊತ್ತೇ. ...ಎಂದರು ಮತ್ತೆ ನಗುತ್ತಾ ಎಲೆ ಅಡಿಕೆ ಜಗಿಯುತ್ತಾ ಅಂಬಕ್ಕ.
ಆದರೆ ನಿಜ ಹೇಳಿ ಅಂಬಕ್ಕ.ಈ ಮದಿಮಾಲ್ ಮೀನು ನಿಜವಾಗಿಯೂ ಒಂದು ಅಶುಭದ ಮೀನೇ ?.. ನಾನು ಅವರನ್ನೇ ದಿಟ್ಟಿಸಿ ನೋಡುತ್ತಾ ಮತ್ತೆ ಕೇಳಿದ್ದೆ.
ಒಂದೆರಡು ತಿಂಗಳಿನ ಪರಿಚಯವಾದರೂ ನನ್ನ ಕಥೆ,ನನ್ನ ಅತ್ತೆಯ ಮನೆಯ ಕಥೆ ಅವರಿಗೂ ಗೊತ್ತಿತ್ತು.ನಾನು ಏತಕ್ಕಾಗಿ ಈ ಪ್ರಶ್ನೆಯನ್ನೇ ಕೇಳಿದೆ ಎಂದು ಸಹ ಅವರಿಗೆ ಬಹಳ ಚೆನ್ನಾಗಿಯೇ ಗೊತ್ತಿತ್ತು!
- ಯಾರ ಭಾಗ್ಯದಲ್ಲಿ ಏನಿರುವುದೋ ಅದೇ ಆಗುವುದು ಮಗಳೇ... ಮದಿಮಾಲ್ ಮೀನುಗಳು ಈ ರೀತಿಯಾಗಿ ನಮ್ಮ ಬದುಕಿನ ದಿಕ್ಕೆ ಬದಲಾಯಿಸುವುದಾದರೆ ನಾವು ಅಂತಹ ದರಿದ್ರ ಮೀನನ್ನು ಏತಕ್ಕಾಗಿ ಹಿಡಿಯುತ್ತೇವೆ ಹೇಳು? ಏತಕ್ಕಾಗಿ ಆದರೂ ನಾವುಗಳು ಅದನ್ನು ಮಾರಿ ಜನರ ಜೀವನ ಹಾಳು ಮಾಡುತ್ತೇವೆ ಹೇಳು ಮಗಳೇ?.ಜನಗಳ ಶಾಪ ನಮಗೆ ಆದರೂ ಏತಕ್ಕೆ ಬೇಕು.ನಿನಗೆ ಗೊತ್ತೇ ಈ ಪಂಜಿ ಮೀನು ಇಲ್ಲವೇ ಇದೇ ಮದಿಮಾಲ್ ಮೀನು ನಮ್ಮ ಬಲೆಗೆ ಬಿದ್ದು ಬಿಟ್ಟರೆ ಆ ವರ್ಷ ಹೆಚ್ಚಿನ ಮೀನಿನ ಬೆಳೆ ಕೈಗೆ ಬರುವುದು ಎಂಬ ನಂಬಿಕೆಯೂ ಕೂಡ ನಮ್ಮಲ್ಲಿ ಇದೆ.ಆ ರೀತಿ ನೋಡಿದಾಗ ಈ ಮದಿಮಾಲ್ ಮೀನು ಅದು ಹೇಗೆ ಅಶುಭದ ಮೀನು ಆಗುತ್ತದೆ.ನಮಗಂತು ಸಂಪತ್ತು ತಂದುಕೊಡುವ ಅದು ಅದೃಷ್ಟದ ಮೀನೇ ಅಲ್ಲವೇ ಮಗಳೇ.. .
ನೀನು ಏನೂ ಯೋಚಿಸಬೇಡ.ಅಂತಹದ್ದು ಏನೂ ಆಗುವುದಿಲ್ಲ..ಎಲ್ಲವೂ ನಾವು ಪಡೆದುಕೊಂಡು ಬಂದದ್ದು ಅಷ್ಟೇ ಇಲ್ಲಿ ಮಗಳೇ.ನಮ್ಮ ನಮ್ಮ ಜೀವನದಲ್ಲಿ ಏನು ಆಗಬೇಕೋ ಅದೇ ಆಗುವುದು ಕೊನೆಗೆ,ಆಗುವ ಅನಿಷ್ಟಕ್ಕೆಲ್ಲಾ ಪಾಪದ ಮದಿಮಾಲ್ ಮೀನನ್ನು ಹೊಣೆ ಮಾಡುವುದು ಎಷ್ಟು ಸರಿ ನೀನೇ ಹೇಳು...ಹಾಗೇ ನೋಡಿದರೆ ಮೀನು ಎಂದರೆನೇ ನಮ್ಮ ನಾರಾಯಣ ದೇವರಲ್ಲವೇ ಮಗಳೇ? ಅವರದ್ದೊಂದು ಅವತಾರವೇ ಈ ಮೀನು ಎಂದು ನಾವೆಲ್ಲರೂ ನಂಬುತ್ತೇವೆ.ಹಾಗಿದ್ದರೆ ದೇವರನ್ನು ನಂಬುವವರು ಯಾರೂ ಕೂಡ ಯಾವುದೇ ಮೀನನ್ನು ಯಾವತ್ತಿಗೂ ತಿನ್ನಬಾರದು ಅಲ್ಲವೇ?..ಒಂದು ವೇಳೆ ತಿಂದರೆ ಆಗ ಅದು ದೇವರನ್ನೇ ತಿಂದಂತೆ ಆಗುವುದಿಲ್ಲವೇ..!? ಎಂದು ಹೇಳಿ ತನ್ನ ಮಾತನ್ನು ಹಾಗೂ ಬಾಯಿಗೆ ಹಾಕಿಕೊಂಡಿದ್ದ ಎಲೆ ಅಡಿಕೆಯನ್ನು ಸಂಪೂರ್ಣವಾಗಿ ಜಗಿದು ಮುಗಿಸಿ ಬಿಟ್ಟರು ಅಂಬಕ್ಕ.
ಅಂಬಕ್ಕ ಏನೇ ಹೇಳಿದರೂ,ಯಾವ ರೀತಿ ತರ್ಕ ಬದ್ಧವಾಗಿ ಬಿಡಿಸಿ ಹೇಳಿದರೂ ಸ್ವತಃ ಅವರೇ ಮದಿಮಾಲ್ ಮೀನಿನ ಕಥೆಗಳನ್ನು,ಅದರ ನಂಬಿಕೆಗಳನ್ನು ನಂಬದೇ ಇದ್ದರೂ ಮದುಮಗಳ ಹೆಸರಿನಿಂದ ಗುರುತಿಸಿಕೊಳ್ಳುವ ಈ ಮದಿಮಾಲ್ ಮೀನು ನಿಜಕ್ಕೂ ಒಂದು ಸಿಕ್ಕಾಪಟ್ಟೆ ಶಾಪಗ್ರಸ್ತ ಮೀನು ಎಂದು ನನಗೆ ಬಲವಾಗಿ ಅನ್ನಿಸಿದ್ದಂತು ಸತ್ಯ.ಅಂಬಕ್ಕ ಹೇಳಿದಂತೆ ಅದು ಸುಂದರವಾಗಿರುವುದರಿಂದ ನೋಡಲು ಮದುಮಗಳಂತೆಯೇ ಕಾಣುತ್ತದೆ ಎಂಬ ಕಾರಣಕ್ಕಾಗಿ ಜನರು ಅದನ್ನು ಹೆಚ್ಚಾಗಿ ತಿನ್ನದೇ ಇರುವುದಕ್ಕಿಂತಲೂ,ಈ ಚಂದವಿಲ್ಲದ ಜನರಿಗೇಕೆ ಸುಮ್ಮನೆ ಅದರ ಮೇಲೊಂದು ಇಲ್ಲ ಸಲ್ಲದ ಅಸೂಯೆ,ಹೊಟ್ಟೆ ಕಿಚ್ಚುಗಳು ಹಾಗೇ ಹುಟ್ಟಿರಬಾರದು? ಬೇಕೆಂದೇ ಇಲ್ಲ ಸಲ್ಲದ ಅಪವಾದ ಮಾಡಿ,ಅದನ್ನವರು ಈ ಒಂದು ಸೌಂದರ್ಯದ ಕಾರಣಕ್ಕಾಗಿಯೇ ತಿರಸ್ಕರಿಸಿಬಾರದು? ಅದೇ ನನ್ನ ಕುರೂಪಿ ಅತ್ತೆಯಂತೆ!. ಸತ್ತರೂ ಮೀನು ತಿನ್ನುವ ಜನರೇ ಅದನ್ನು ತಿನ್ನಲು ಕೂಡ ಇಷ್ಟ ಪಡುವುದಿಲ್ಲ ಎಂದರೆ ಅದೆಂತಹ ನತದೃಷ್ಟ ಮೀನು ಅದಿರಬೇಕು ಎಂದು ನನ್ನಲ್ಲಿಯೇ ನಾನು ಅಂದುಕೊಂಡಿದ್ದೆ.
ಚಿಕ್ಕಂದಿನಲ್ಲಿ ಅಮ್ಮ ಹೇಳುತ್ತಿದ್ದಳು "ಮೀನು ದೊಡ್ಡದಾಗುವುದೇ ಅದರ ಅತೀ ದೊಡ ಪಾಪ ಮಗಳೇ.." ಎಂದು.ನನಗನಿಸುತ್ತದೆ ಮೀನಾಗಲಿ,ಹೆಣ್ಣಾಗಲಿ ಸುಂದರವಾಗಿರುವುದೇ ಈ ಜಗತ್ತಿನಲ್ಲಿ ಅವರಿಬ್ಬರ ಅತೀ ದೊಡ್ಡ ಪಾಪವೆಂದು.ಈ ಮಾತು ನನಗೂ ಅನ್ವಯವಾಗುತ್ತೆ,ಮದಿಮಾಲ್ ಮೀನಿಗೂ ಬಹಳ ಚೆನ್ನಾಗಿಯೇ ಅನ್ವಯವಾಗುತ್ತದೆ ಎಂದೇ ನಾನು ಅಂದಿನಿಂದ ನಂಬುತ್ತಾ ಹೋದೆ.
ಮನೆಯಲ್ಲಿ ನನ್ನ ಕಾಲ್ಗುಣ ಸರಿ ಇಲ್ಲ ಎಂದು ಅತ್ತೆ ಹೇಳಿದ್ದು ಕೂಡ ಸರಿಯಾಗಿಯೇ ಇತ್ತು..!
ಮದುವೆ ಆದ ಮೂರೇ ತಿಂಗಳಲ್ಲಿ ನನ್ನ ಗಂಡ ಅದು ಯಾವುದೋ ಚಳಿ ಜ್ವರ ಎಂದು ಮಲಗಿದ್ದವನು ಆಮೇಲೆ ಮೇಲೆ ಏದ್ದೇಳಲೇ ಇಲ್ಲ.ಅವನು ಸಹ ಸತ್ತು ದೇವರ ಪಾದ ಸೇರಿಕೊಂಡು ಬಿಟ್ಟಿದ್ದ..!!
ಈ ಬಾರಿ ನನ್ನತ್ತೆ ನನ್ನನ್ನು ಜಾಸ್ತಿ ಹೀಯಾಳಿಸಲಿಲ್ಲ,ಮದಿಮಾಲ್ ಮೀನಿಗೂ ಕೂಡ ಬೈಯಲಿಲ್ಲ,ಬದಲಿಗೆ ಮನೆಯ ಮದುಮಗಳಾದ ನನ್ನನ್ನು ಮನೆಯಿಂದಲೇ ಹೊರಗೆ ಹಾಕಿ ಬಿಟ್ಟಿದ್ದರು!!
ನಿನ್ನಂತಹ ಮಾಟಗಾತಿ ಮದುಮಗಳು ಯಾವುದೇ ಮನೆ ಹೊಕ್ಕರೂ ಆ ಮನೆ ಸ್ಮಶಾನವಾದಂತೆಯೇ ಸರಿ... ಈಗಲೇ ಮನೆಯಿಂದ ಹೊರಗೆ ನಡೆ... ಎಂದು ಹೇಳಿ ಆ ಒಂದು ಬೆಳಿಗ್ಗೆ ನನ್ನನ್ನು ಮನೆಯಿಂದಲೇ ಹೊರದಬ್ಬಿ ಬಿಟ್ಟಿದ್ದರು ನನ್ನತ್ತೆ!
ನನಗೂ ಅಲ್ಲಿ ಬದುಕುವುದಕ್ಕೆ ಅಂತಹ ಏನು ಇಷ್ಟವಿರಲಿಲ್ಲ. ಗಂಡನಿರಲಿಲ್ಲ,ಮಕ್ಕಳಿರಲಿಲ್ಲ,ಮುಂದೆ ಮಕ್ಕಳು ಆಗುವುದು ಕೂಡ ಸಾಧ್ಯವಿರಲಿಲ್ಲ,ಕೇವಲ ಅಲ್ಲಿ ಕತ್ತೆಯಂತೆ ದುಡಿಯುತ್ತಿದ್ದೆ ನಾನು ಅಷ್ಟೇ. ಹಾಗಾಗಿ ಅತ್ತೆ ಮನೆಯಿಂದ ನನ್ನನ್ನು ಹೊರಗೆ ಹಾಕಿದಾಗ,ಹಾಗೇ ತಲೆ ತಗ್ಗಿಸಿಕೊಂಡು ನಡೆಯುತ್ತಾ ನಡೆಯುತ್ತಾ ಬಂದು ಗುಡ್ಡದ ಆ ದಾರಿ ಬದಿಯಲ್ಲಿ ನಿಂತುಕೊಂಡಿದ್ದೆ ನಾನು.ಆಗಲೂ ನನ್ನ ತಲೆಯಲ್ಲಿ ಬರುತ್ತಿದ್ದ ಪ್ರಶ್ನೆಗಳು ಎರಡೇ.. ನನ್ನ ಗಂಡನನ್ನು ಸಹ ನಾನೇ ಕೊಂದಿದ್ದೇ? ಅಥವಾ ಆವತ್ತು ನಾನು ಮನಗೆ ತಂದಿದ್ದ ಆ ಮದಿಮಾಲ್ ಮೀನೇ ಕೊಂದಿದ್ದೇ?!. ನನಗೆ ಈ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ,ಆದರೆ ಅಂಬಕ್ಕ ಹೇಳಿದ ಮದಿಮಾಲ್ ಮೀನಿನ ಹಲವಾರು ಕಥೆಗಳಲ್ಲಿ ಇರುವಂತೆ ನಾನು ಸಹ ಶಾಶ್ವತವಾಗಿಯೇ ನನ್ನ ಅತ್ತೆ ಮನೆಯಿಂದ ಮಾಯಕವಾಗಿ ಬಿಟ್ಟಿದ್ದೇನೆ ಎಂದೇ ನನಗನಿಸಿತ್ತು!
ಈ ರೀತಿಯಾಗಿ ಗಂಡನ ಮನೆಯಿಂದ ಹೊರ ಹಾಕಲ್ಪಟ್ಟ ನಾನು, ದಾರಿಯಲ್ಲಿ ನನ್ನಷ್ಟಕ್ಕೆ ನಿಂತುಕೊಂಡು ಒಮ್ಮೆ ನನ್ನ ಬಾಲ್ಯವನ್ನು, ಬಾಲ್ಯದ ನನ್ನ ಆ ಅಮ್ಮನನ್ನು,ಅಮ್ಮನ ದೊಡ್ಡ ಕಣ್ಣಿನ ಮೀನಿನ ಬಲೆಯನ್ನು,ಕುಡಿದು ಕುಡಿದೇ ಸತ್ತು ಹೋದ ನನ್ನ ಅಸ್ಪಷ್ಟ ಅಪ್ಪನನ್ನು,ಮದುವೆಯಾದ ನಂತರ ಸೇರಿಕೊಂಡ ಗಂಡಿನ ಮನೆಯನ್ನು,ಮದಿಮಾಲ್ ಮೀನು ತಂದಿದ್ದಕ್ಕಾಗಿಯೇ ಶಾಂತವಾಗಿದ್ದ ಅತ್ತೆ ಒಮ್ಮಿಂದೊಮ್ಮೆಲೇ ಕ್ಷುದ್ರವಾಗಿದ್ದನ್ನು, ಮುಂದೆ ಆದ ಅನಾಹುತಗಳನ್ನು,ಘಟಿಸಿದ ಸಾವುಗಳನ್ನು,ಅದರ ಪರಿಣಾಮವಾಗಿ ಆ ಮನೆಯಿಂದ ನಾನು ಹೊರದಬ್ಬಲ್ಟಟ್ಟ ಸಂಗತಿಯನ್ನು... ಹೀಗೆ ಎಲ್ಲವನ್ನೂ ಮೊದಲಿನಿಂದಲೇ ನೆನಪಿಸಿಕೊಳ್ಳುತ್ತಾ,ಏನೇನೋ ಯೋಚಿಸುತ್ತಾ ಬಹಳ ಹೊತ್ತಿನವರೆಗೆ ಅಲ್ಲಿಯೇ ದಾರಿ ಪಕ್ಕವೇ ನಿಂತುಕೊಂಡಿದ್ದೆ ನಾನು.
ಏತಕ್ಕಾಗಿ ಕಾಯುತ್ತಿದ್ದೇನೆ,ಮುಂದೆ ಏನು ಎತ್ತ ಒಂದೂ ಗೊತ್ತಿರಲಿಲ್ಲ.ನಿಧಾನಕ್ಕೆ ಗಂಟೆಗಳುರುಳಿ ಹತ್ತೂವರೆ ಆಗಿತ್ತು.ಆಗಲೇ ಅಂಬಕ್ಕ ಮೀನಿನ ಬುಟ್ಟಿ ಹೊತ್ತುಕೊಂಡು ಅಲ್ಲಿಗೆ ಬಂದಿದ್ದು.
ನಾನು ಹೇಳದೆಯೂ ಅವರಿಗೆ ಏನೋ ಆಗಿದೆ ಎಂದು ಬಹಳ ಸ್ಪಷ್ಟವಾಗಿ ಗೊತ್ತಾಗಿತ್ತು.ಆದರೂ ಕೇಳಿದರು..ನಾನು ಮನೆಯಲ್ಲಿ ನಡೆದ ಎಲ್ಲವನ್ನೂ ಹೇಳಿದೆ.. ನನ್ನನ್ನು ಮನೆಯಿಂದ ಹೊರ ಹಾಕಿಬಿಟ್ಟರು ಅಂಬಕ್ಕ.. ನನ್ನ ಅತ್ತೆ ಕೊನೆಗೂ ನನ್ನನ್ನು ಮನೆಯಿಂದ ಹೊರ ಹಾಕಿಯೇ ಬಿಟ್ಟರು...ಎಂದು ಹೇಳಿ ಹೇಳಿಯೇ ಬಹಳಷ್ಟು ಅತ್ತೆ ನಾನು!
ಅಂಬಕ್ಕ ಒಂದು ಕ್ಷಣವೂ ಯೋಚಿಸದೇ ಅವರ ಮೀನಿನ ಬುಟ್ಟಿಯ ಸಹಿತ ನನ್ನ ಕೈ ಹಿಡಿದುಕೊಂಡೇ ನೇರವಾಗಿ ನನ್ನ ಮನೆಗೆಯೇ ಬಂದರು.
ಅಂಗಳದಲ್ಲಿ ಮೀನಿನ ಬುಟ್ಟಿ ಇರಿಸಿ,ಅತ್ತೆಯನ್ನು ಕರೆದು ಅವರ ಬಳಿ ಪರಿಪರಿಯಾಗಿ ವಿನಂತಿ ಮಾಡಿಕೊಂಡರು ಅಂಬಕ್ಕ..
-ಪಾಪ.. ವಯಸ್ಸಿನ ಹುಡುಗಿ ಬೇರೆ,ನೀವು ಈ ರೀತಿ ಮದುವೆ ಆಗಿ ನಿಮ್ಮ ಮನೆಗೆ ಬಂದ ಮದುಮಗಳನ್ನು ಮನೆಯಿಂದ ಹೊರಗಟ್ಟಿದ್ದರೆ ಅವಳಾದರೂ ಎಲ್ಲಿಗೆ ಹೋಗಬೇಕು,ಹಿರಿಯರಾದ ಇದು ನಿಮಗೆ ಶೋಭೆಯೇ ಹೇಳಿ..ಎಂದು ಕೇಳಿಕೊಂಡಿದ್ದರು ಅಂಬಕ್ಕ.
-ಸಾಧ್ಯ ಆದರೆ ನೀವೇ ಅವಳನ್ನು ಕರೆದುಕೊಂಡು ಹೋಗಿ..! ಅಂತಹ ಅದ್ಭುತ ಕಾಲ್ಗುಣ ಇವಳದ್ದು...!!ನನಗೂ ನನ್ನ ಕಿರಿಯ ಮಗನಿಗೂ ಇನ್ನೂ ಬದುಕಬೇಕೆಂಬ ಆಸೆ ಇದೆ.ಹಾನ್...ಮನೆಯಲ್ಲಿ ಇನ್ನೂ ಒಂದು ಶುಭ ಕಾರ್ಯ ಆಗುವುದಿದೆ.ಇವಳು ..ಈ ಇವಳು ಎಲ್ಲಿರುತ್ತಾಳೋ ಅಲ್ಲಿ ಅಶುಭ ಕಾರ್ಯ ಆಗುವುದು ಬಿಟ್ಟರೆ ಬೇರೆ ಏನಾದರೂ ಆಗಲು ಸಾಧ್ಯವೇ.,ಒಂದು ರೀತಿಯಲ್ಲಿ ಆ ದರಿದ್ರ ಮದಿಮಾಲ್ ಮೀನಿನಂತೆ ಇವಳು ಕೂಡ!, ಇಲ್ಲಿ ಕೇಳಿ... ಇವಳ ಪರ ವಹಿಸಿಕೊಂಡು ನನಗೆ ಉಪದೇಶ ಮಾಡಲು ನೀವು ಬರಬೇಡಿ..ಅಷ್ಟೊಂದು ದೊಡ್ಡ ಮನಸ್ಸಿದ್ದರೇ ಇವಳನ್ನು ನೀವೇ ಕರೆದುಕೊಂಡು ಹೋಗಿ ಸಾಕಿಕೊಳ್ಳಿ... ಎಂದು ಹೇಳಿದ ಅತ್ತೆ,ಮನೆಯ ಬಾಗಿಲನ್ನು ಸದ್ದಾಗುವಂತೆ ಜೋರಾಗಿ ಎಳೆದು ಬಾಗಿಲು ಮುಚ್ಚಿ ಬಿಟ್ಟರು !.. ನನಗಂತು ಶಾಶ್ವತವಾಗಿ!!
ಅಂಬಕ್ಕ ಏನೂ ಹೇಳಲಿಲ್ಲ.ಅವರಿಗೆ ನಾನು ಬಾಯಿ ಬಿಟ್ಟು ಹೇಳದಿದ್ದರೂ ಚೆನ್ನಾಗಿಯೇ ಗೊತ್ತಿತ್ತು ನನಗೂ ಆ ಮನೆಯಲ್ಲಿ ಇರಲು ಮನಸ್ಸಿಲ್ಲ ಎಂದು. ಅಂಗಳದಲ್ಲಿಯೇ ನಿಂತಿದ್ದ ನನ್ನ ಕೈಯನ್ನು ಮತ್ತೆ ಗಟ್ಟಿಯಾಗಿ ಹಿಡಿದುಕೊಂಡು,ತಲೆಗೆ ಮೀನಿನ ಬುಟ್ಟಿ ಏರಿಸಿಕೊಂಡು ನೇರವಾಗಿ ಅವರ ಗುಡಿಸಿಲಿನಂತಹ ಮನೆಗೆಯೇ ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟಿದ್ದರು.
ಆ ಕ್ಷಣ ಅಂಬಕ್ಕ ನನಗೆ ನನ್ನ ತಾಯಿಯಂತೆ ಅಲ್ಲ,ಸ್ವತಃ ದೇವರಂತೆಯೇ ಕಂಡರು.
ಆದರೂ ಮನಸ್ಸು ಕೇಳಲಿಲ್ಲ. ಅವರ ಮನೆಯ ಒಳಗೆ ಹೋಗದೆ ಅಂಗಳದಲ್ಲಿಯೇ ನಿಂತುಕೊಂಡು..ನನ್ನ ಅತ್ತೆ ಹೇಳಿದಂತೆ ನಿಜವಾಗಿಯೂ ನನ್ನ ಕಾಲ್ಗುಣ ಸರಿ ಇಲ್ಲ ಅಂಬಕ್ಕ.. ನನಗೆ ಭಯವಿದೆ ..ನನ್ನಿಂದಾಗಿ ನಿಮ್ಮ ಬಾಳು ಕೂಡ ನಿಜಕ್ಕೂ ದುಸ್ತರವಾಗಿ ಬಿಟ್ಟರೆ.. ?ನನಗೆ ಆ ರೀತಿ ಆಗುವುದು ಇಷ್ಟವಿಲ್ಲ..! ಎಂದು ಹೇಳಿ ಬಿಟ್ಟೆ.
- ಅಯ್ಯೋ ಮಗಳೇ..ನನಗೆ ಅಂತ ಯಾರು ಇದ್ದಾರೆ ಹೇಳು.ನನಗೆ ಮದುವೆ ಆಗಿಲ್ಲ,ಮಕ್ಕಳು ಮರಿ ಏನೂ ಇಲ್ಲ.ನಾನಿಲ್ಲಿ ಒಬ್ಬಳೇ ಇರುವುದು.ಯಾವತ್ತಾದರೂ ಒಂದು ದಿನ ಎಲ್ಲರೂ ಸತ್ತೇ ಹೋಗಬೇಕಲ್ಲವೇ.. ಕಾಲ್ಗುಣ ಸರಿ ಇಲ್ಲ,ಕಾಲ್ಗುಣ ಸರಿ ಇದೆ ಅದೆಲ್ಲವೂ ಈ ಮನುಷ್ಯರ ಮೂಡನಂಬಿಕೆಗಳು ಅಷ್ಟೇ.ನೀನು ನನ್ನ ಈ ಗುಡಿಸಿಲಿಗೆ ಮಗಳೂ ಹೌದು,ಅದೇ ರೀತಿ ಮದಿಮಾಲ್ ಕೂಡ ಹೌದು. ಹೆಚ್ಚಿನವರು ನಿರಾಕರಿಸುವ ಈ ಮದಿಮಾಲ್ ಮೀನನ್ನೇ ನಾನು ಎಂದಿಗೂ ತಿರಸ್ಕರಿಸಿದವಳಲ್ಲ.ಹಾಗಾಗಿ ಈ ಜಾಗ ನಿನಗಂತು ನಿಜವಾಗಿಯೂ ಒಂದರ್ಥದಲ್ಲಿ ಬಹಳಷ್ಟು ಸರಿ ಹೊಂದುತ್ತದೆ. ಹೆದರಬೇಡ,.. ಏನೂ ಆಗಲ್ಲ,ನಿನ್ನೊಂದಿಗೆ ನಾನಿದ್ದೇನೆ.. ಇದ್ದಷ್ಟು ದಿನ ಒಟ್ಟಿಗೆಯೇ ಇದ್ದು ಬಿಡೋಣ..
ನಾನು ಏನೂ ಹೇಳದೇ,ಅವರ ಅಂಗಳದಲ್ಲಿ ತಲೆ ತಗ್ಗಿಸಿಕೊಂಡೇ ನಿಂತಿದ್ದೆ.ಅಂಬಕ್ಕ ಬಳಿ ಬಂದು ಹಾಗೇ ನನ್ನ ತಲೆ ಸವರಿ ಮತ್ತೆ ಮಾತಾಡಲು ಶುರು ಮಾಡಿ ಬಿಟ್ಟರು..
ನೋಡು ಮಗಳೇ... ಈ ಕಾಲ್ಗುಣ ಸರಿ ಇಲ್ಲ,ಮದಿಮಾಲ್ ಮೀನು ಬರೀ ಕೇಡನ್ನೇ ತರುತ್ತದೆ ಇದೆಲ್ಲವೂ ಬರೀ ನಂಬಿಕೆಗಳು ಅಷ್ಟೇ.ನಂಬಿಕೆಗಳು ಬೇಡವೇ ಬೇಡ ಎಂದು ನಾನು ಕೂಡ ಹೇಳಲಾರೆ.ನನ್ನನ್ನು ಕೇಳಿದರೆ,ಮನುಷ್ಯ ಒಳ್ಳೆಯವನಾಗಿ ಬದುಕಬೇಕು,ಶರಾಬು ಕುಡಿಯಬಾರದು,ಬೀಡಿ ಸೇದಬಾರದು,ಯಾರಿಗೂ ಕೇಡು ಬಯಸಬಾರದು,ಎಲ್ಲರನ್ನೂ ಪ್ರೀತಿಸಬೇಕು,ಎಲ್ಲರನ್ನೂ ಗೌರವದಿಂದ ಕಾಣಬೇಕು,ಸತ್ಯ ಹಾಗೂ ಧರ್ಮ ಮಾರ್ಗದಲ್ಲಿಯೇ ಸದಾ ನಡೆಯಬೇಕು..ಇವುಗಳೇ ಅಲ್ಲವೇ ಎಲ್ಲಾ ಕಾಲವೂ ಒಪ್ಪಬಹುದಾದ ಸತ್ಯಗಳು.ಇವುಗಳು ಆ ಕಾಲಕ್ಕೂ,ಈ ಕಾಲಕ್ಕೂ ಒಟ್ಟಿನಲ್ಲಿ ಎಲ್ಲಾ ಕಾಲಕ್ಕೂ ಎಲ್ಲರಿಂದಲೂ ಒಪ್ಪಿಗೆಯಾಗುವ ಸತ್ಯಗಳು ಮಗಳೇ,ಇವುಗಳನ್ನೇ ನಾವು ನಂಬಬೇಕು,ಒಪ್ಪಬೇಕು..ಎಂದು ನಗುತ್ತಲೇ ಬದುಕಿನ ಗುಟ್ಟನ್ನು,ನಂಬಿಕೆಗಳ ಸತ್ವವನ್ನು ಮತ್ತೊಮ್ಮೆ ಬಿಡಿಸಿ ಬಿಡಿಸಿ ಹೇಳಿ ಅವರ ಮಗಳಂತೆಯೇ,ಆ ಮನೆಗೆ ಹೊಸದಾಗಿ ಬಂದ ಮದುಮಗಳಂತೆಯೇ ನನ್ನನ್ನು ಆ ಗುಡಿಸಿಲಿಗೆ ತುಂಬಿಸಿಕೊಂಡಿದ್ದರು ಅಂಬಕ್ಕ.
ಆದರೆ ನಾನು ನಿಜಕ್ಕೂ ಶಾಪಗ್ರಸ್ತ ಮದುಮಗಳೇ ಆಗಿದ್ದೆ.ಒಂದೇ ತಿಂಗಳಿನಲ್ಲಿ ಅಂಬಕ್ಕ ಅದು ಯಾವುದೋ ವಿಷ ಪೂರಿತ ಹಾವು ಕಡಿದು ಆ ಗುಡಿಸಿನಲ್ಲಿ ನನ್ನೆದುರೇ ಸತ್ತೇ ಹೋಗಿ ಬಿಟ್ಟರು!!
ನಾನು ಈಗ ಯಾರನ್ನು ಶಪಿಸಲಿ?
ಅಂಬಕ್ಕ ನನ್ನ ಬಾಳಿನಲ್ಲಿ ಅಮ್ಮನಂತೆಯೇ ಬಂದಿದ್ದರು. ಯಾವ ಜನ್ಮದ ಒಂದಿಷ್ಟು ಋಣ ನಾನು ಉಳಿಸಿದ್ದೆನೋ ಅಥವಾ ಅವರು ಉಳಿಸಿದ್ದರೋ ಎಂದು ನನಗೆ ಗೊತ್ತಿರಲಿಲ್ಲ. ಅವರು ಹಾಗೇ ಬಂದರು,ಒಂದಷ್ಟು ಬುದ್ಧಿ ಹೇಳಿದರು,ಆ ನಂತರ ಬಂದಷ್ಟೇ ವೇಗವಾಗಿ ನನ್ನ ಬಾಳಿಂದಲೇ ಹೊರಟು ಹೋದರು. ನಾನು ಅವರ ಬಾಳಿನಲ್ಲಿ ಬರದಿದ್ದರೆ ಅವರು ಇನ್ನಷ್ಟು ದಿನ ಸುಖವಾಗಿ ಬದುಕುತ್ತಿದ್ದರೋ ಏನೋ.. ಬಹುಶಃ ನನ್ನ ಜೊತೆ ಸೇರಿದ್ದೇ ಅವರು ಮಾಡಿದ್ದ ಅತೀ ದೊಡ್ಡ ಪಾಪ ಎಂದು ಕಾಣುತ್ತದೆ!
ಅಂಬಕ್ಕನನ್ನು ನಿಜವಾಗಿಯೂ ಕೊಂದದ್ದು ಯಾರು? ನಾನೋ... ಅಥವಾ ಮದಿಮಾಲ್ ಮೀನೋ?! ಅಂಬಕ್ಕನನ್ನು ಹಾವೇ ಕೊಂದಿದ್ದು ಎಂದು ಜಗತ್ತು ಹೇಳುವ ಸತ್ಯವನ್ನು ನಾನಂತು ನಂಬಲಾರೆ ಎನ್ನುವ ಸ್ಥಿತಿಗೆನೇ ನಾನು ಬಂದು ನಿಂತಿದ್ದೆ.!!
ಅಂಬಕ್ಕ ಒಂದು ಬಾರಿ ನಗು ನಗುತ್ತಲೇ ಹೇಳಿದ್ದರು " ಈ ಮದಿಮಾಲ್ ಮೀನು ಮನೆಗೆ ತಂದರೆ ಮನೆಯ ಹೆಣ್ಣುಮಗು ಮದುಮಗಳೇ ಆಗುವುದಿಲ್ಲ,ಅವಳಿಗೆ ಮುಂದೆ ಮದುವೆಯೇ ಆಗುವುದಿಲ್ಲ, ಎಂದೆಲ್ಲಾ ನಂಬಿಕೆಗಳೂ ಕೂಡ ಇವೆ.. ಹಹ್ಹಾ.. ಹಹ್ಹಾ...".ಇದೆಲ್ಲಾ ಸುಳ್ಳು,ಇವೆಲ್ಲಾ ಒಬ್ಬೊಬ್ಬರ ನಂಬಿಕೆಗಳು,ಕೆಲವು ಜನರ ಮೂಡನಂಬಿಕೆಗಳು ಎಂದೆಲ್ಲಾ ಹೇಳಿದ್ದ ಈ ಮದಿಮಾಲ್ ಮೀನು ತಿನ್ನುವ ಸ್ವತಃ ಅಂಬಕ್ಕನಿಗೂ ನಿಜವಾಗಿಯೂ ಮದುವೆಯೇ ಆಗಿರಲಿಲ್ಲ... ಎನ್ನುವುದು ಸಹ ನನಗೆ ಅವರು ತೀರಿ ಹೋದ ನಂತರವೇ ಹೆಚ್ಚು ಸ್ಪಷ್ಟವಾಗಿ ಅರಿವಿಗೆ ಬಂದದ್ದು..! ಹಾಗೂ ಅದೂ ಸಹ ನನ್ನನ್ನು ಬಹಳ ತೀವ್ರವಾಗಿ ಕಾಡಿತ್ತು! ಹಾಗಾದರೆ ಮದಿಮಾಲ್ ಮೀನು ತಿಂದದ್ದಕ್ಕಾಗಿಯೇ ಅಂಬಕ್ಕನಿಗೆ ಮದುವೆ ಆಗಲಿಲ್ಲವೇ?!
ಕೊನೆಗೆ ಅಂಬಕ್ಕನ ಮೀನು ಬುಟ್ಟಿಯೇ ನನ್ನ ಕೈ ಹಿಡಿಯಿತು,ನನ್ನ ಬದುಕಿನ ಕೈಯನ್ನೂ ಅದು ಹಿಡಿಯಿತು.ಅವರ ಗುಡಿಸಲೇ ನನ್ನದೊಂದು ಖಾಯಂ ಮನೆಯಾಗಿ ಬಿಟ್ಟಿತು.ಅಂದಿನಿಂದ ನಾನೂ ಕೂಡ ಬುಟ್ಟಿ ಹೊತ್ತುಕೊಂಡು ಮನೆ ಮನೆಗೆ ಹೋಗಿ ಮೀನು ಮಾರಲು ಶುರು ಮಾಡಿ ಬಿಟ್ಟೆ.
ನನ್ನ ಬುಟ್ಟಿಯಲ್ಲೂ ಅಂಬಕ್ಕನ ಬುಟ್ಟಿಯಂತೆಯೇ ದಿನಾಲೂ ನಾಲ್ಕೈದು ಜಾತಿಯ ಮೀನುಗಳು ಇರುತ್ತಿದ್ದವು.ಎಂದಿನಂತೆ ಒಂದು ಬದಿಯಲ್ಲಿ ಈ ಮದಿಮಾಲ್ ಮೀನು ಕೂಡ ಇರುತ್ತಿತ್ತು.ಅದನ್ನು ಕೆಲವರು ಕೊಳ್ಳುತ್ತಿದ್ದರು,ಕೆಲವರು ಇಲ್ಲ. ಮೀನು ತಿನ್ನುವವರಲ್ಲಿ ಕೂಡ ಮಡಿ ಮೈಲಿಗೆ ಇದೆ ಎನ್ನುವುದು ನನಗೆ ಮೀನು ಮಾರಲು ಹೊರಟಾಗಲೇ ಗೊತ್ತಾಗಿದ್ದು.ನಿಜಕ್ಕೂ ಅದೆಷ್ಟು ತಿರಸ್ಕ್ರತಳು ಈ ಮದಿಮಾಲ್ ಮೀನು ಎನ್ನುವುದು ಬಹಳಷ್ಟು ಹೆಚ್ಚೇ ಗೊತ್ತಾಗಿ ಬಿಟ್ಟಿತ್ತು ಆವಾಗ ನನಗೆ.
ನನಗೆ ಯಾಕೋ ಪ್ರತೀ ಬಾರಿ ಈ ಮದಿಮಾಲ್ ಮೀನು ನೋಡುವಾಗಲೆಲ್ಲಾ ನಾನು ಗಂಡನ ಮನೆಗೆ ಮದುಮಗಳಾಗಿ ಹೋಗಿದ್ದು, ಆಮೇಲೆ ಅಂಬಕ್ಕ ನನ್ನನ್ನು ಪ್ರೀತಿಯಿಂದ ಅವರ ಮನೆಗೆ ಮದುಮಗಳಂತೆಯೇ ಕರೆದುಕೊಂಡು ಹೋಗಿ ಸಾಕಿದ್ದು ಎಲ್ಲವೂ ನೆನಪಾಗುತ್ತಿತ್ತು.
ಮೀನು ಮಾರಿ ಸಂಜೆ ಮನೆಗೆ ಮರಳುವಾಗ ನನ್ನ ಬುಟ್ಟಿಯಲ್ಲಿ ಮದಿಮಾಲ್ ಮೀನು ಉಳಿದರೂ ಅದನ್ನು ಯಾರಿಗಾದರೂ ಹೀಗೆಯೇ ಕೊಟ್ಟು ಬರುತ್ತಿದ್ದೆನೇ ಹೊರತು ನಾನು ಯಾವತ್ತೂ ಮನೆಗೆ ತಂದು ಅದನ್ನು ಸಾರು ಮಾಡಲೇ ಇಲ್ಲ.ಮದಿಮಾಲ್ ನೆನಪಾದರೆ ಯಾಕೋ ನನ್ನ ಕಾಲ್ಗುಣದಿಂದಾಗಿ ಸಾಲು ಸಾಲಾಗಿ ಸತ್ತು ಮಲಗಿದವರೇ ನೆನಪಾಗುತ್ತಿದ್ದರು. ಮೊದಲ ಬಾರಿಗೆ ಆಸೆಯಿಂದ ಗಂಡನ ಮನೆಗೆ ಮದಿಮಾಲ್ ಮೀನು ತೆಗೆದುಕೊಂಡು ಹೋದಾಗ ಅತ್ತೆ ಅದನ್ನು ತೊಟ್ಟೆ ಸಹಿತ ಅಂಗಳಕ್ಕೆ ಬಿಸಾಡಿದ್ದು, ಜಿಮ್ಮಿ ನಾಯಿ, ಮಂಗು ಬೆಕ್ಕು ಆ ಮದಿಮಾಲ್ ಮೀನನ್ನು ಕಚ್ಚಿಕೊಂಡು ಓಡಿ ಹೋದದ್ದು,ಈ ದೃಶ್ಯಗಳೆಲ್ಲವೂ ಕಣ್ಣಿಗೆ ಕಟ್ಟಿದಂತೆಯೇ ಆ ನಂತರವೂ ನನ್ನ ಜೊತೆ ಶಾಶ್ವತವಾಗಿಯೇ ಉಳಿದು ಹೋದವು.
ಹೀಗೆ ನನ್ನದೊಂದು ಮೀನು ವ್ಯಾಪಾರ ಹಾಗೂ ಬದುಕು ಅತ್ತ ಬಹಳಷ್ಟು ಮೇಲಕ್ಕೂ ಹೋಗದೆ ಇತ್ತ ತುಂಬಾ ಕೆಳಕ್ಕೂ ಇಳಿಯದೇ ಹಾಗೋ ಹೀಗೋ ಹೇಗೋ ಒಂದು ರೀತಿಯಲ್ಲಿ ಸಾಗುತ್ತಿತ್ತು.ಸಾಯಬಾರದು ಎನ್ನುವುದಕ್ಕಾಗಿ ಅಷ್ಟೇ ನಾನು ಬದುಕುತ್ತಿದ್ದೆ ಎಂದು ಅನ್ನಿಸುತ್ತಿತ್ತು.ಮುಂದೆಯೂ ನನ್ನ ಬುಟ್ಟಿಯೊಳಗೆ ಎಂದಿನಂತೆ ಈ ಮದಿಮಾಲ್ ಮೀನು ಇರುತ್ತಿತ್ತು.ನಾನು ಮಾತ್ರ ಬದುಕಿನಲ್ಲಿ ಇನ್ನೊಮ್ಮೆ ಮದಿಮಾಲ್(ಮದು ಮಗಳು) ಆಗುವ ಯಾವುದೇ ಉತ್ಸಾಹವನ್ನು ಎಂದಿಗೂ ತೋರಲಿಲ್ಲ,ಅದು ಯಾವತ್ತೋ ನನ್ನಿಂದ ಬಹಳಷ್ಟು ದೂರಕ್ಕೆ ಹೊರಟು ಹೋಗಿತ್ತು.ಹಾಗಾಗಿ ವಯಸ್ಸು ತುಂಬಾ ಚಿಕ್ಕದೇ ಆಗಿದ್ದರೂ ಸಹ ಮತ್ತೆ ಮದುವೆ ಆಗದೇ ನಾನೂ ಸಹ ಅಂಬಕ್ಕನಂತೆಯೇ ಒಂಟಿಯಾಗಿಯೇ ಉಳಿದು ಬಿಟ್ಟೆ!!
"ಮದಿಮಾಲ್ ಮೀನು ಮನೆಗೆ ತಂದರೆ ಮನೆಯ ಹೆಣ್ಣುಮಗು ಮದುಮಗಳೇ ಆಗುವುದಿಲ್ಲ, ಮುಂದೆ ಅವಳಿಗೆ ಮದುವೆಯೇ ಆಗುವುದಿಲ್ಲ ಎಂಬೆಲ್ಲಾ ನಂಬಿಕಗಳು ಕೂಡ ನಮ್ಮ ಜನರಲ್ಲಿ ಇದೆ.. ಹಹ್ಹಾ ಹಹ್ಹಾ.." ಎಂದು ನಗುತ್ತಲೇ ಹೇಳುತ್ತಿದ್ದ ಅಂಬಕ್ಕನ ಆ ಮಾತುಗಳು ನಾನು ತೀರಾ ಒಂಟಿಯಾಗಿದ್ದೇನೆ ಎಂದು ಅನ್ನಿಸಿದಾಗಲೆಲ್ಲ ನನ್ನನ್ನು ತಿವಿದು ನೇರವಾಗಿ ನನಗೆಯೇ ಹೇಳಿದಂತೆ ಆಗುತ್ತಿತ್ತು!! ಹೌದು ನಾನೇಕೆ ಮತ್ತೆ ಮದುಮಗಳು ಆಗಲಿಲ್ಲ?!!
ಹೀಗೆ ಸ್ವಲ್ಪ ವರುಷಗಳು ಹಾಗೇ ಉರುಳಿ ಹೋದವು.ಅವತ್ತು ಒಂದು ದಿನ ಅದು ಯಾವುದೋ ಹೆಣ್ಣು ಮಗಳು ಅದೇ ಬಹಳ ಪರಿಚಯದ ಆ ಗುಡ್ಡದ ದಾರಿಯಲ್ಲಿ ಮೀನಿಗಾಗಿ,ಮೀನು ಮಾರಿಕೊಂಡು ಹೋಗುವ ನನಗಾಗಿಯೇ ಕಾದು ನಿಂತಿದ್ದಳು. ನಿಜಕ್ಕೂ ತುಂಬಾನೇ ಸುಂದರಿಯಾಗಿದ್ದಳು ಅವಳು;ಮದಿಮಾಲ್ ಮೀನಿನಷ್ಟೇ ಸುಂದರಿಯಾಗಿದ್ದಳು.
ಅದಕ್ಕೂ ಮುಂಚೆ ಅವಳನ್ನು ನಾನು ಅಲ್ಲಿ ಯಾವತ್ತೂ ನೋಡಿರಲಿಲ್ಲ.ಯಾವ ತಾಯಿ ಹೆತ್ತ ಮಗಳೋ ಏನೋ..ಮನಸ್ಸಿನಲ್ಲಿಯೇ ಅಂದುಕೊಂಡೆ.
ಹತ್ತಿರ ಬಂದಾಗಲೇ ತಿಳಿದದ್ದು.ಇತ್ತೀಚಿಗೆ ಅಷ್ಟೇ ಮದುವೆಯಾಗಿ ಆ ಊರಿಗೆ ಬಂದ ಮದುಮಗಳು ಅವಳೆಂದು.
ಆದರೂ ಅದನ್ನು ಖಚಿತಪಡಿಸಲು ಅವಳಲ್ಲಿಯೇ ಕೇಳಬೇಕು ಎಂದುಕೊಂಡೆ.
ತಲೆಯಲಿದ್ದ ಬುಟ್ಟಿ ಕೆಳಗಿಟ್ಟು,ಬುಟ್ಟಿ ಬಿಡಿಸಿ ಅವಳಿಗೆ ಮೀನು ತೋರಿಸುತ್ತಾ.. ಹೊಸದಾಗಿ ಮದುವೆಯಾಗಿ ಈ ಊರಿಗೆ ಬಂದಿದ್ದೀಯಾ ತಾಯಿ ? ಎಂದು ಅವಳಲ್ಲಿಯೇ ಮೆಲ್ಲಗೆ ಕೇಳಿದೆ.
ಅವಳು ಮೆಲ್ಲಗೆ ನಗುತ್ತಾ ಹೌದು ಎಂದಳು.
ಆ ಕ್ಷಣವೇ ಅವಳು ಯಾವ ಮೀನು ಕೇಳಿದರೂ ಬುಟ್ಟಿಯಲ್ಲಿರುವ ಅದೊಂದು ಮೀನು ಮಾತ್ರ ಆ ಮದುಮಗಳಿಗೆ ಕೊಟ್ಟು ಕಳುಹಿಸಲೇಸಬಾರದು ಎಂದು ಮನಸ್ಸಿನಲ್ಲಿಯೇ ನಾನಂದುಕೊಂಡೆ!!
ಕೇವಲ ಅವಳು ಎಂದಲ್ಲ,ಯಾವ ಹುಡುಗಿಯೂ ಅದರಲ್ಲೂ ಮದುವೆಯಾಗಿರುವ ಮದುಮಗಳು ನನ್ನಲ್ಲಿ ಮೀನು ಕೊಳ್ಳಲು ಬಂದರೆ ನಾನು ಹೆಚ್ಚಾಗಿ ಅವರಿಗೆ ಈ ಮದಿಮಾಲ್ ಮೀನು ಕೊಡುವುದೇ ಇಲ್ಲ,ಏಕೆಂದರೆ ನನಗೆ ಭಯವಾಗುತ್ತದೆ.ಯಾವುದೇ ಮದುವೆಯಾದ ಹುಡುಗಿ ನನ್ನಲ್ಲಿ ಮದಿಮಾಲ್ ಮೀನು ಕೇಳಿದರೆ ನನಗೆ ನನ್ನ ಕಥೆಯೇ ಮೊದಲು ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ನಾನು ಅವಳನ್ನೇ ಹಾಗೇ ನೇರವಾಗಿ ತೀಕ್ಷ್ಣವಾಗಿ ನೋಡತೊಡಗಿದೆ.ನನ್ನೆದುರು ಕುಳಿತ ಆ ಮದುಮಗಳು ಹುಡುಗಿ ನನ್ನ ಬುಟ್ಟಿಯೊಳಗಿನ ಎಲ್ಲಾ ಮೀನುಗಳನ್ನು ತಡಕಾಡಿ, ಕೊನೆಯಲ್ಲಿ ನಾನು ಯಾವ ಮೀನು ಅವಳಿಗೆ ಕೊಡಬಾರದು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆನೋ ಅದೇ ಗುಲಾಬಿ ಬಣ್ಣದ ಮೀನನ್ನು ಕೈಗೆತ್ತಿಕೊಂಡು ಮೊದಲ ಬಾರಿಗೆ ಅದನ್ನು ನೋಡುವಂತೆ ಹಾಗೇ ಕಣ್ಣರಳಿಸಿಕೊಂಡು.. ಇದು ಯಾವ ಮೀನು? ಎಂದು ನನ್ನಲ್ಲಿಯೇ ಕೇಳಿದಳು.
ಯಾಕೋ ಗೊತ್ತಿಲ್ಲ ಹೃದಯ ಬೇಡ ಬೇಡವೆಂದರೂ ಆ ಕ್ಷಣ ಮಾತ್ರ ಬಹಳ ಜೋರಾಗಿ ಬಡಿದುಕೊಳ್ಳಲು ಆರಂಭಿಸಿ ಬಿಟ್ಟಿತ್ತು.
ಅವಳು ಕೈಗಿತ್ತಿಕೊಂಡಿದ್ದ ಮೀನು ಬುಟ್ಟಿಯ ಬೇರೆ ಯಾವ ಮೀನೂ ಆಗಿರದೆ ಮದಿಮಾಲ್ ಮೀನೇ ಆಗಿತ್ತು!
ಮದಿಮಾಲ್ ಮೀನು.. ಅಂದೆ ನಾನು ಮೆಲ್ಲಗೆ ಅಷ್ಟೇನೋ ಹೆಚ್ಚಿನ ಗಮನ ಕೊಡದವಳಂತೆ.
ಹಾಗಾದರೆ ಇದೇ ಕೊಡಿ.. ಅಂದಳು ಆ ಹುಡುಗಿ.
ಬೇಡ ತಾಯಿ.. ಇದನ್ನು ಹೆಚ್ಚಾಗಿ ಯಾರೂ ತಿನ್ನಲ್ಲ,ನೀನು ಮದುಮಗಳು ಬೇರೆ.. ನಿಮ್ಮ ಮನೆಯಲ್ಲಿಯೂ ಇದನ್ನೆಲ್ಲಾ ತಿನ್ನುವುದು ನನಗಂತು ಸಂದೇಹವೇ ಬಿಡು.. ಎಂದು ಬಹಳ ಉದಾಸೀನತೆಯಿಂದಲೇ ಹೇಳಿದೆ. ಅವಳು ಅದನ್ನು ಕೊಳ್ಳದೇ ಇರಲಿ ಅನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು.
ನಿಮಗೆ ಹೇಗೆ ಗೊತ್ತು? ಜನರು ತಿನ್ನದಿದ್ದರೆ ನೀವು ಏತಕ್ಕಾಗಿ ಇದನ್ನು ಮಾರುತ್ತಿರೀ ಹೇಳಿ? ಇಲ್ಲ.. ಇಲ್ಲ ಹಾಗಾಗಲು ಸಾಧ್ಯವೇ ಇಲ್ಲ.. ಇಷ್ಟು ಅಂದದ ಮೀನನ್ನು ಯಾರಾದರೂ ದ್ವೇಷಿಸಲು ಸಾಧ್ಯವೇ? ಖಂಡಿತವಾಗಿಯೂ ಇದು ರುಚಿಯಾಗಿರುವ ಮೀನೇ ಆಗಿರುತ್ತದೆ.ಯಾರಾದರೂ ಮಾರಲೆಂದು ತಂದಿರುವ ಮೀನು ತಿಂದು ಸಾಯಲು ಸಾಧ್ಯವೇ... ಜನರು ಸಾಯುವ ಮೀನುಗಳನ್ನು ನೀವು ಈ ರೀತಿ ಬುಟ್ಟಿಯಲ್ಲಿಟ್ಟು ಎಂದಾದರೂ ಮಾರಲು ಸಾಧ್ಯವೇ.. ಹಹ್ಹಾ.. ಹಹ್ಹಾ..ಕೊಡಿ..ಕೊಡಿ.. ನನಗಿದೇ ಮೀನು ಕೊಡಿ ನೀವು.. ಅಂದಳು ಆ ಹುಡುಗಿ ಹಾಗೆಯೇ ನಗುತ್ತಾ.
ಕೆಲವೊಮ್ಮೆ ರೂಪವೇ ಶಾಪವಾಗಿ,ಇನ್ನು ಕೆಲವೊಮ್ಮೆ ಅದೇ ಪಾಪವಾಗಿಯೂ ಕಾಡುವುದಿದೆ.ಅಂದದ ಮೀನು ತಿಂದವರು ಸಾಯದಿದ್ದರೂ ಮೀನು ತೆಗೆದುಕೊಂಡು ಹೋದ ಮನೆಯಲ್ಲಿ ಸತ್ತವರಿದ್ದಾರೆ... ಆ ರೀತಿ ಮೀನು ತೆಗೆದುಕೊಂಡು ಹೋದ ಸುಂದರಿ ಮದುಮಗಳೇ ಶಾಶ್ವತವಾಗಿ ಮನೆಯಿಂದ ಮಾಯಕ ಆಗಿದ್ದೂ ಇದೆ.. ಉದಾಹರಣೆಗಳೇ ಉಂಟು.. ಸ್ವತಃ ನಾನೇ ಇದ್ದೇನೆ..!! ಅಂದೆ ಬಹಳ ಮೆಲ್ಲಗೆ ನಾನು.
ಆದರೆ ಅದು ಅವಳಿಗೆ ಕೇಳಿಸಲಿಲ್ಲ...!
ಯಾಕೋ ಆ ಘಳಿಗೆಗೆ ಈ ಎಲ್ಲಾ ನಂಬಿಕೆಗಳನ್ನು ನಂಬದ ಆ ನನ್ನ ಅಂಬಕ್ಕ ನಾನು ಆಗಲೇ ಇಲ್ಲ !! ಯಾಕೆ ಅಂಬಕ್ಕನ ನಂಬಿಕೆಗಳು ನನ್ನಲ್ಲಿ ಎಂದಿಗೂ ಹುಟ್ಟಲಿಲ್ಲ?
ಕಾಕತಾಳೀಯವೋ ಎಂಬಂತೆ ನನ್ನ ಬದುಕಿನಲ್ಲಿ ಘಟಿಸಿದ ಕೆಲವೊಂದು ಘಟನೆಗಳು ಹಾಗೂ ಅದರಿಂದ ಆದಂತಹ ಕಹಿ ಅನುಭವಗಳೇ ನನ್ನನ್ನು ನನ್ನ ಜೀವನದ ಉದ್ದಕ್ಕೂ ಈ ರೀತಿಯಾಗಿ ಇನ್ನಿಲ್ಲದಂತೆ ಹೆದರಿಸಿತ್ತು,ಬೆದರಿಸಿತ್ತು.ಹಾಗಾಗಿ ಕೆಲವು ನಂಬಿಕೆಗಳನ್ನು ಅಂಬಕ್ಕ ನಂಬದಿದ್ದರೂ ನನ್ನ ಪಾಲಿಗಂತು ಅವುಗಳು ಅಕ್ಷರಶಃ ನಿಜವೇ ಆಗಿತ್ತು.. ಹಾಗಾಗಿ ನಂಬಲು ಮನಸ್ಸಿಲ್ಲದಿದ್ದರೂ ಒಳಗೊಳಗೆ ಅದ್ದೆಲ್ಲವನ್ನೂ ನಾನು ಬಹಳಷ್ಟು ತೀವ್ರವಾಗಿಯೇ ನಂಬುತ್ತಿದ್ದೆ!
ಆದರೆ ಎದುರಿಗೆ ಕುಳಿತಿದ್ದ ಹುಡುಗಿ ಮಾತ್ರ ನನಗೆ ಈ ಹಿಂದಿನ ನನ್ನಂತೆಯೇ ಕಂಡಳು ..ಈ ಹಿಂದೆ ಮದಿಮಾಲ್ ಮೀನು ಕೊಳ್ಳುವ ಹೊಸತರಲ್ಲಿ ಮದುಮಗಳಾಗಿಯೇ ಅಂಬಕ್ಕನಲ್ಲಿ ಬಂದಿದ್ದ ಆ ನನ್ನಂತೆಯೇ ಕಂಡಳು !
ಅಂಬಕ್ಕ ಆದರೂ ಏನೂ ಹೇಳದೆ ನಗು ನಗುತ್ತಾ ಆ ದಿನ ಮದಿಮಾಲ್ ಮೀನನ್ನೇ ತೊಟ್ಟೆಗೆ ಹಾಕಿ ನನಗೆ ಕೊಟ್ಟಿದ್ದರು.
ಆದರೆ ಆವತ್ತು ಮದಿಮಾಲ್ ಮೀನು ಕೊಂಡು ಹೋದ ನಂತರ ಆ ನನ್ನ ಮನೆಯಲ್ಲಿ ಏನಾಗಿತ್ತು,ಮುಂದಿನ ಬದುಕು ಹೇಗಿತ್ತು ಎನ್ನುವುದು ನನಗಷ್ಟೇ ಗೊತ್ತಿದ್ದದ್ದು.
ಈಗ ಈ ಹುಡುಗಿ ಕೂಡ ಅದೇ ಮದಿಮಾಲ್ ಮೀನನ್ನು ಅವಳ ಮನೆಗೆ ತೆಗೆದುಕೊಂಡು ಹೋಗಲು ತುದಿಗಾಲಿನಲ್ಲಿ ನಿಂತಿದ್ದಳು.
ಮತ್ತೊಮ್ಮೆ ಅಂಬಕ್ಕ ನೆನಪಾದರು...
" ಯಾರ ಭಾಗ್ಯದಲ್ಲಿ ಏನಿರುವುದೋ ಅದೇ ಆಗುವುದು... ಮದಿಮಾಲ್ ಮೀನುಗಳು ಈ ರೀತಿಯಾಗಿ ನಮ್ಮ ಬದುಕಿನ ದಿಕ್ಕೆ ಬದಲಾಯಿಸುವುದಾದರೆ ನಾವು ಅದನ್ನು ಏತಕ್ಕಾಗಿ ಹಿಡಿಯುತ್ತೇವೆ? ಏತಕ್ಕಾಗಿ ಅದನ್ನು ನಾವುಗಳು ಮಾರುತ್ತೇವೆ ಹೇಳು ಮಗಳೇ? ..ನಮ್ಮ ನಮ್ಮ ಜೀವನದಲ್ಲಿ ಏನು ಆಗಬೇಕೋ ಅದೇ ಆಗುವುದು ಕೊನೆಗೆ,ಆಗುವ ಅನಿಷ್ಟಕ್ಕೆಲ್ಲಾ ಪಾಪದ ಮದಿಮಾಲ್ ಮೀನನ್ನು ಹೊಣೆ ಮಾಡುವುದು ಎಷ್ಟು ಸರಿ ಹೇಳು..ಹೆದರಬೇಡ, ಏನೂ ಆಗುವುದಿಲ್ಲ.. " ಅಂದಿದ್ದರು ಅಮ್ಮನಂತಹ ನನ್ನ ಅಂಬಕ್ಕ.
ಮತ್ತೆ ನಾನು ಏನೂ ಯೋಚಿಸಲಿಲ್ಲ.
ತೊಟ್ಟೆಗೆ ಮದಿಮಾಲ್ ಮೀನು ಹಾಕಿ ಅದನ್ನು ಅವಳ ಕೈಗಿತ್ತೆ.
ಹುಡುಗಿ ಮೀನಿನ ಹಣ ನನ್ನ ಕೈಗಿತ್ತು,ಮೀನಿನ ಆ ತೊಟ್ಟೆ ಹಿಡಿದುಕೊಂಡು ಅವಳ ಮನೆಯ ದಾರಿಯ ಕಡೆಗೆ ತಿರುಗಿ ಹಾಗೇ ಮೆಲ್ಲಗೆ ನಡೆಯತೊಡಗಿದಳು.
ಆಗಲೇ ಅವಳು ಬಂದ ದಾರಿಯನ್ನು ಮೂಸುತ್ತಾ ಮೂಸುತ್ತಾ ಅವಳ ಮನೆಯ ನಾಯಿ ಹಾಗೂ ಬೆಕ್ಕುಗಳೆರಡೂ ಅಲ್ಲಿಗೆ ಓಡಿ ಬಂದದ್ದು.
ನಾನು ಆ ನಾಯಿ ಮತ್ತು ಬೆಕ್ಕನ್ನೇ ಹಾಗೇ ಸುದೀರ್ಘವಾಗಿ ದಿಟ್ಟಿಸಿ ನೋಡತೊಡಗಿದೆ.
ದಾರಿ ಮೂಸಿಕೊಂಡು ಅಲ್ಲಿಯವರೆಗೆ ಬಂದಿದ್ದ ನಾಯಿ ಹಾಗೂ ಆ ಬೆಕ್ಕುಗಳೆರಡೂ ಅವಳ ಜೊತೆಗೆಯೇ ಮತ್ತೆ ಮನೆಗೆ ಹೋಗಲು ಹೊರಟು ನಿಂತವು.
ಆದರೆ ವಾಪಸು ಹೋಗುವುದಕ್ಕಿಂತಲೂ ಮೊದಲು ಒಂಚೂರು ಹೊತ್ತು ಅಲ್ಲೇ ನಿಂತುಕೊಂಡು,ಒಮ್ಮೆಲೇ ನನ್ನತ್ತ ತಿರುಗಿ ನನ್ನನ್ನೇ ಅವುಗಳು ಹಾಗೇ ದಿಟ್ಟಿಸಿ ನೋಡತೊಡಗಿದವು!!
ನನ್ನದೊಂದು ಬಹಳ ಹಳೆಯ ಪರಿಚಯ ಅವುಗಳಿಗೆ!!
ಹೌದು,ನಾನು ಮದುವೆಯಾದ ಆ ದಿನದಿಂದಲೇ ಆದ ಪರಿಚಯವದು!!
ಆ ನಂತರ ಮನೆಯ ಹೊಸ ಮದುಮಗಳು ಆ ದಿನ ಮನೆಗೆ ಬಹಳಷ್ಟು ವರ್ಷಗಳ ನಂತರ ಮದಿಮಾಲ್ ಮೀನನ್ನೇ ಖರೀದಿಸಿ ತೆಗೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ,ಹಿಂದಿನದ್ದೆಲ್ಲವನ್ನೂ ಬಹಳಷ್ಟು ನೆನಪು ಮಾಡಿಕೊಂಡು,ಅದರ ಜೊತೆಗೆಯೇ ಯಾವುದರದ್ದೋ ಸ್ಪಷ್ಟ ಸೂಚನೆಯೊಂದು ಆ ಕೂಡಲೇ ಸಿಕ್ಕಿದಂತಾಗಿ,ಖುಷಿಯಿಂದಲೇ ಮತ್ತೆ ಆ ಹುಡುಗಿಯ ಹಿಂದೆಯೇ ಮನೆಯ ಕಡೆಗೆ ವೇಗವಾಗಿ ಓಟಕ್ಕಿತ್ತವು ನಾಯಿ ಜಿಮ್ಮಿ ಹಾಗೂ ಮಂಗು ಬೆಕ್ಕು..!!
ಆ ನಾಯಿ ಬೆಕ್ಕುಗಳು ತಮ್ಮ ಜೀವನದಲ್ಲಿಯೇ ಎರಡನೇ ಬಾರಿಗೆ ಅಷ್ಟೊಂದು ಖುಷಿ ಪಡುತ್ತಿರುವುದನ್ನು ಕಣ್ಣಾರೆ ನೋಡಿದ ನನ್ನ ಹೃದಯವೇ ಒಡೆದು ಹೋದಂತೆ ಆಯಿತು !!
ಮತ್ತೊಮ್ಮೆ ಅಂಬಕ್ಕನದ್ದೇ ಮಾತುಗಳು ಕಿವಿಯಲ್ಲಿ ಮೊಳಗಿದವು ".. ಮಗಳೇ,ಒಂದು ಬಾರಿ ಈ ಮದಿಮಾಲ್ ಮೀನನ್ನು ಮನೆಗೆ ತೆಗೆದುಕೊಂಡು ಹೋದ ಹೊಸ ಮದುಮಗಳೊಬ್ಬಳು ಆ ಮನೆಯಿಂದಲೇ ಶಾಶ್ವತವಾಗಿ ಮಾಯಕವಾಗಿ ಹೋಗಿದ್ದಳಂತೆ.. ಹಹ್ಹಾ ..ಹಹ್ಹಾ...ಹಹ್ಹಾ ಹಹ್ಹಾ.."
ನೆಲದಲ್ಲಿದ್ದ ಮೀನಿನ ಬುಟ್ಟಿಯನ್ನು ಮತ್ತೆ ತಲೆಯ ಮೇಲಿಟ್ಟುಕೊಂಡು,ಆ ಸುಂದರಿ ಮದುಮಗಳು ಹೋದ ದಿಕ್ಕನೇ ಹಾಗೇ ದಿಟ್ಟಿಸುತ್ತಾ ನಿಂತುಕೊಂಡೆ.
ಮದುಮಗಳು ಮದಿಮಾಲ್ ಮೀನಿನೊಂದಿಗೆ ಆ ಗುಡ್ಡದ ದಾರಿಯಲ್ಲಿ ದೂರ ದೂರಕ್ಕೆ ನಡೆಯುತ್ತಾ ಹೋದಂತೆ ನನ್ನ ಕಣ್ಣಿಂದ ಹಾಗೇ ಮೆಲ್ಲಗೆ ಕಣ್ಮರೆಯಾಗುತ್ತಾ ಹೋದಳು..ಕೊನೆ ಕೊನೆಗೆ ನನ್ನ ಕಣ್ಣಿನಿಂದಲೇ ಆ ಮದಿಮಾಲ್ ಮಾಯಕವಾದಳು..!
.....................................................................................
#ಮದಿಮಾಲ್
ಒಂದೊಂದು ಕಥೆ..
Ab Pacchu
Moodubidire
(photo-internet)
https://phalgunikadeyavanu.blogspot.com
Wow... ಮದಿಮಾಲ್ ಮೀನಿನ ಹಿಂದೆ ಇಷ್ಟೆಲ್ಲ ಕಥೆ ಇದೆ ಅಂತ ಇವತ್ತೇ ಗೊತ್ತಾಗಿದ್ದು... ತುಂಬಾ ಚೆನ್ನಾಗಿತ್ತು ಕಥೆ 👌🏻
ReplyDelete