ಕೊಹ್ಲಿಯ ಕ್ರಿಕೆಟ್ ಆಟ ಮತ್ತು ಕಾದಾಟ
ಅವನು ಒರಟನೇ..? ಎಂಬ ನೂರು ಅಂಕದ ಪ್ರಶ್ನೆ ಕೇಳಿದರೆ ತೊಂಬತ್ತರ ಮೇಲೆ ಎಷ್ಟು ಅಂಕ ಕೊಡಲಿ ಎಂದೇ ನಾನು ಯೋಚಿಸುತ್ತೇನೆ.ಅವನು ಶ್ರೇಷ್ಠನೇ ..? ಎಂಬ ಪ್ರಶ್ನೆಯನ್ನು ಸಹ ಆ ಮೊದಲ ಪ್ರಶ್ನೆಯ ಜೊತೆಗೆಯೇ ನನ್ನತ್ತ ಎಸೆದು ಬಿಟ್ಟರೆ ಆಗಲೂ ಸಹ ನನ್ನ ಅಂಕಗಳು ತೊಂಬತ್ತರ ಮೇಲೆ ಹಾಗೂ ನೂರಕ್ಕೆ ಬಹಳಷ್ಟು ಸನಿಹದಲ್ಲಿ ಬಂದು ನಿಲ್ಲುತ್ತವೆ.
ಏಕೆ...?
ಇಂತಹ ಅದ್ಭುತ ಆಟಗಾರನೊಬ್ಬ ಯಾಕಿಷ್ಟು ಜಿಗುಟಾಗಿ, ಬಹಳಷ್ಟು ಒರಟಾಗಿ,ಒಂದಿಷ್ಟು ಒಗಟಾಗಿ ನಮಗೆ ಕಾಡುತ್ತಾನೆ? ಬಹುಶಃ ವಿರಾಟ್ ಎಂಬ ಆಟಗಾರ ಆಡುವುದು,ಕಾದಾಡುವುದು,ಕಾಯದೇ ಜಗಳವಾಡುವುದು ಮಾಡಿದರಷ್ಟೇ ಆತ ವಿರಾಟ್ ಕೊಹ್ಲಿಯಾಗಿ ನಮ್ಮನ್ನು ಕಾಡುತ್ತಾನೆ ಎಂದೇ ನನಗೆ ಪ್ರತೀ ಸಲ ಅನಿಸುತ್ತದೆ.
ನಿಜ ಹೇಳಬೇಕೆಂದರೆ ವಿರಾಟ್ ಕೊಹ್ಲಿ ನನಗೆ ಕೆಲವೊಮ್ಮೆ ಆಟಗಾರನಿಗಿಂತಲೂ ಹೆಚ್ಚಾಗಿ ಶಾಪಗ್ರಸ್ತ ಗಂಧರ್ವನಂತೆಯೇ ಕಾಣುತ್ತಾನೆ.ಅವನು ನಾಯಕನಾಗಿ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು.ಆದರೆ ನಾಯಕನಾಗಿ ಅವನಿಗೆ ಯಾವುದನ್ನು ಪ್ರಮುಖವಾಗಿ ಮುಟ್ಟಲು ಸಾಧ್ಯ ಆಗಲಿಲ್ಲವೋ,ಆ ಅದೇ ಅವನ ಬಾಕಿ ಸಾಧನೆಯನ್ನು ಪ್ರಶ್ನಿಸಲು ಶುರು ಮಾಡಿತ್ತು.ಅವನನ್ನು ವಿರೋಧಿಸುವವರು ಕೂಡ ಅದೇ ಪ್ರಶ್ನೆಗಳನ್ನು ಎತ್ತಿ ಎತ್ತಿ ಕುಹುಕವಾಡಿ ಬಿಟ್ಟಿದ್ದರು.
ಜಗಳಗಂಟ,ಮುಂಗೋಪಿ ಎಂಬ ಕಾರಣಕ್ಕಾಗಿಯೇ ಟೀಮ್ ಇಂಡಿಯಾದ ಯಶಸ್ವಿ ನಾಯಕನೊಬ್ಬ ನಿಜಕ್ಕೂ ಹೆಸರು ಕೆಡಿಸಿಕೊಂಡಿದ್ದಂತು ಮಾತ್ರ ಸತ್ಯವೇ.ಕೊಹ್ಲಿಯ ವರ್ತನೆಗಳು ಹೇಗೆಯೇ ಇರಲಿ,ಆತ ಐಸಿಸಿಯ ದೊಡ್ಡ ದೊಡ್ಡ ಕಪ್ ಗಳನ್ನು ಕೂಡ ಗೆಲ್ಲದೆಯೇ ಇರಲಿ ಆದರೆ ಆತನ ನಾಯಕತ್ವದಡಿಯಲ್ಲಿ ಟೀಮ್ ಇಂಡಿಯಾ ಬಹಳಷ್ಟು ಸೋತಿಲ್ಲ,ಅದರ ಬದಲಿಗೆ ಅತೀ ಹೆಚ್ಚಿನ ಎತ್ತರಕ್ಕೆಯೇ ಸಾಗಿ ಗೆಲುವಿನ ಪತಾಕೆಗಳನ್ನೇ ನಿರಂತರವಾಗಿ ಹಾರಿಸಿತ್ತು ಎನ್ನುವುದು ಕೂಡ ನಿಜವೇ.ಕೆಲವು ಗೆಲ್ಲಲಾಗದ ಕಬ್ಬಿಣದ ಕಡಲೆಗಳು ಅವನಡಿಯಲ್ಲಿ ಹಗುರದ ಪಾಪ್ ಕಾರ್ನ್ ಅನ್ನಿಸಿಬಿಟ್ಟವು. ಬಿಸಿಸಿಐ ಅಂತು ತನ್ನ ಕಪಾಟಿನಲ್ಲಿ ಒಂದರ ನಂತರ ಒಂದು ಕಪ್ ಗಳನ್ನು ಪೇರಿಸಿಕೊಳುತ್ತಾ ಹೋಗಿ ಕಪಾಟು ಭರ್ತಿ ಆದಾಗ ಹೊಸ ಹೊಸ ಕಪಾಟುಗಳನ್ನು ವರ್ಷ ವರ್ಷವೂ ಮಾಡಬೇಕಾಗಿ ಬಂತು. ಟೀಮ್ ಗೊಂದು ಭಯರಹಿತ ಕ್ರಿಕೆಟ್ ಕಲಿಸಿ ಎದುರಾಳಿಗೆ ಭಯ ಹುಟ್ಟಿಸಿದ ನಾಯಕನೆಂದರೆ ಅದು ವಿರಾಟ್ ಕೊಹ್ಲಿಯೇ.
ಈ ರೀತಿಯಾಗಿ ಹೇಳಿ ಬಿಟ್ಟರೆ ಸಾಕು.. ಹಾಗಾದರೆ ಬಾಕಿ ನಾಯಕರು ಏನೂ ಮಾಡಿಯೇ ಇಲ್ಲವೇ? ಇವನೊಬ್ಬನೇ ಗುಡ್ಡ ಕಡಿದು ಮಣ್ಣು ಹೊತ್ತದ್ದೇ... ಎಂಬ ಪ್ರಶ್ನೆಯೊಂದು ಹಾಗೇ ಸಹಜವಾಗಿಯೇ ತೂರಿ ಬರುತ್ತದೆ.ನಮಲ್ಲಿ ಒಂದು ಸಮಸ್ಯೆ ಇದೆ.ಈ ಆಪ್ರಮಿತ್ರದ ಮಂತ್ರವಾದಿ ಅವಿನಾಶ್ ಹೇಳುವಂತೆಯೇ " ಇದೆ.. ಇಲ್ಲೆನೋ ಸಮಸ್ಯೆ ಇದೆ." ಎನ್ನುವುದು ದೇವರಾಣೆಗೂ ಸತ್ಯವೇ.ಅದೇನೆಂದರೆ ನಮಗೆ ಧೋನಿಯ ಅಭಿಮಾನವನ್ನು ತೋರಿಸಬೇಕಾದರೆ ಕೊಹ್ಲಿಗೆ ನಾವು ಬೈಯಲೇ ಬೇಕು ಎಂಬ ಒಂದು ಮನಸ್ಥಿತಿ,ಅದೇ ರೀತಿ ಕೊಹ್ಲಿಯನ್ನು ಹೊಗಳಲು ಧೋನಿಗೂ ಸಿಕ್ಕಾಪಟ್ಟೆ ಉಗುಳಲೇ ಬೇಕು ಎಂಬ ಇನ್ನೊಂದು ಮನಸ್ಥಿತಿ.ಇಂತಹದ್ದೇ ಮನಸ್ಥಿತಿ ರೋಹಿತ್ ಹಾಗೂ ಕೊಹ್ಲಿ ಅಭಿಮಾನಿಗಳ ನಡುವೆಯೂ ಇದೆ.ಎಲ್ಲವೂ ವೈಸಾ ವರ್ಸ, ನಿಂದನೆಯದ್ದೇ ಬರ್ಸ(ಮಳೆ).ಈಗ ಕೊಹ್ಲಿ ಮತ್ತು ದಾದ ಫ್ಯಾನು ವಾರು ಅದಕ್ಕೊಂದು ಹೊಸದಾದ ಸೇರ್ಪಡೆ.
ನೀವು ಎಲ್ಲಾದರೂ ಸುಮ್ಮನೆ ನನಗೆ ಸೀತಾಫಲ ಹಣ್ಣು ತುಂಬಾ ಇಷ್ಟ ಎಂದು ಹೇಳಿ ಅದನ್ನೇ ಸಿಕ್ಕಾಪಟ್ಟೆ ಹೊಗಳಿ ಬಿಟ್ಟರೂ ಸಾಕು..ಅರೇ,ನಿಮ್ಮಲ್ಲಿ ಸೇಬು ಹಣ್ಣಿನ ಬಗ್ಗೆ ಇಷ್ಟೊಂದು ದ್ವೇಷ ಏಕಿದೆ?..ಎಂದೇ ತಿಳಿದುಕೊಂಡು ಪ್ರತಿಕ್ರಿಯಿಸುವ ಕಾಲವಿದು.ಇದೆಲ್ಲವೂ ಅಭಿಮಾನಿಗಳದ್ದೊಂದು ಪೂರ್ವಾಗ್ರಹ ಪೀಡಿತ ಕ್ರಿಕೆಟ್ ಕಾಳಗ.ಕಣ್ಣಿಗೆ ಕಾಣದ ಬಾಣಗಳನ್ನೇ ಪುಂಖಾನುಪುಂಖವಾಗಿ ವರ್ಚುವಲ್ ಬಿಲ್ಲಿನಿಂದ ಪ್ರಯೋಗಿಸಿ ವಾದ ಗೆಲ್ಲುವ ತವಕ.ಆಟಕ್ಕಿಂತಲೂ ಆಟಗಾರನೇ ದೊಡ್ಡವ ಎಂಬ ಸಣ್ಣತನ.
ನಿಜ ಹೇಳಬೇಕಾ ಈ ಐಪಿಎಲ್ ಒಂದು ಬರದಿದ್ದರೆನೇ ಚೆನ್ನಾಗಿರುತ್ತಿತ್ತು.ಆಗ ಕೊಹ್ಲಿಯನ್ನು ಇಷ್ಟೊಂದು ಯಾರೂ ಹೇಟ್ ಮಾಡುವವರೇ ಇರುತ್ತಿರಲಿಲ್ಲ ಎಂದೇ ನನಗನಿಸುವುದು.ಅದೇ ರೀತಿ ಧೋನಿಗೂ ಡೋಭಿ ಭಾಯ್ ಎಂದು,ರೋಹಿತ್ ಗೂ ವಡಾ ಪಾವ್ ಕ ರಾಜಾ ಎಂದು ಬಹುಶಃ ಹೆಚ್ಚಾಗಿ ಯಾರೂ ಮಕ್ಕರೇ ಮಾಡುತ್ತಿರಲಿಲ್ಲವೋ ಏನೋ. ಐಪಿಎಲ್ ಗೂ ಮೊದಲು ಕ್ರಿಕೆಟ್ ಚೆನ್ನಾಗಿತ್ತು,ಪಂದ್ಯ ನೋಡುವುದರಲ್ಲಿ ಅದೆನೋ ಸುಖವಿತ್ತು.ತಂಡದ ಎಲ್ಲಾ ಆಟಗಾರರ ಉತ್ತಮ ಪ್ರದರ್ಶನಕ್ಕೊಂದು ಮನಸ್ಸಿನಿಂದಲೇ ಮೆಚ್ಚುಗೆ ಇತ್ತು.ಅರಳಿಕೊಳ್ಳುವ ಅಭಿಮಾನದಲ್ಲಿ ಮತ್ತೊಬ್ಬ ಆಟಗಾರನ ಕಡೆಗೆ ಯಾವುದೇ ಮಾತ್ಸರ್ಯವೇ ಇರುತ್ತಿರಲಿಲ್ಲ.ಇವನು ಆಡಬೇಕು,ಇವನಷ್ಟೇ ಆಡಬೇಕು ಎಂಬ ಯಾವುದೇ ಕೆಟ್ಟ ವಾಂಛೆಗಳು ಆಗ ಹೆಚ್ಚಾಗಿ ಯಾರಲ್ಲೂ ಇರುತ್ತಿರಲಿಲ್ಲ.ನಮ್ಮ ಅಭಿಮಾನದ ಆಟಗಾರ ಆಡಿ ಗೆಲ್ಲಿಸಿದರೆ ಖುಷಿ,ಆಡದೇ ಇದ್ದರೂ ಕೊನೆ ಪಕ್ಷ ಯಾರಾದರೂ ಆಡಿ ನಮ್ಮ ತಂಡವನ್ನು ಗೆಲ್ಲಿಸಿದರೂ ಅಲ್ಲೊಂದು ಅದೇನೋ ವಿವರಿಸಲಾಗದ ನೆಮ್ಮದಿಯೇ ಇರುತ್ತಿತ್ತು.
ಕೊಹ್ಲಿ ಮತ್ತು ಈಗೀನ ಬಿಸಿಸಿಐ ಅಧ್ಯಕ್ಷ ದಾದ ನಡುವೆ ಆಗಿದ್ದಾದರೂ ಏನು ಎಂಬುದು ಸದ್ಯಕ್ಕೆ ಅವರಿಗಷ್ಟೇ ಗೊತ್ತು.ನಾವು ನೀವು ಊಹಿಸುವಂತೆ ಏನೂ ಇಲ್ಲದೆಯೂ ಇರಬಹುದು.ಯಾರಿಗೆ ಗೊತ್ತು.ಹಾಗೆ ನೋಡಲು ಹೋದರೆ ದಾದ ಹಾಗೂ ಕೊಹ್ಲಿ ಇಬ್ಬರೂ ಮಹಾನು ಜಗಳಗಂಟರೇ.ಕಾದಾಡುವುದರಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಮಹಾನ್ ನಿಸ್ಸೀಮರೇ ಬಿಡಿ.ಆ ವಿಷಯದಲ್ಲಿ ಇಬ್ಬರಿಗೂ ಸಮಾನ ಅಂಕಗಳು ಸಿಗಬೇಕು ಎಂದೇ ನನ್ನ ಅಭಿಪ್ರಾಯ ಹಾಗೂ ತೀವ್ರವಾದ ಒತ್ತಾಯ.
ನನ್ನಲ್ಲಿ ಕೇಳಿದರೆ ನನಗೆ ಈ ಇಬ್ಬರೂ ಇಷ್ಟ.ನಿಜ ಹೇಳಬೇಕೆಂದರೆ ಇಬ್ಬರೂ ತುಂಬಾನೇ ಇಷ್ಟ.ಹಾಗಾಗಿಯೇ ದಾದನಿಗಾಗಿ ನಾನು ಕೊಹ್ಲಿಗೆ ಸಿಕ್ಕಾಪಟ್ಟೆ ಬೈಯಲಾರೆ,ಕೊಹ್ಲಿಗಾಗಿಯೇ ದಾದನ ಆ ರೆಟ್ರೋ ನೆನಪುಗಳನ್ನು ನಾನು ನನ್ನ ಮನಸ್ಸಿನಿಂದ ಕೆಡಿಸಿಕೊಳ್ಳಲಾರೆ.ಹಾಗೇ ನೋಡಿದರೆ ಒಬ್ಬನನ್ನು ಇಷ್ಟ ಪಡಲು ನಾವು ಮತ್ತೊಬ್ಬರನ್ನು ದ್ವೇಷಿಸಲೇಬೇಕು ಇಲ್ಲವೇ ನಿಂದಿಸಲೇಬೇಕು ಎಂದು ಎಲ್ಲಿಯೂ ಇಲ್ಲ.ಅದು ಯಾವುದೇ ಅಭಿಮಾನಕ್ಕೊಂದು ಸಕಾರಣವೂ ಅಲ್ಲ.ನಮಗೆ ಇಷ್ಟವಾದವರ ಬಗ್ಗೆ ಪುಷ್ಕಳವಾದ ಅಭಿಮಾನವನ್ನು,ಪ್ರಿತಿಯನ್ನು ಮುಕ್ತವಾಗಿ ತೋರಿಸುವುದರಲ್ಲಿ ತಪ್ಪೇ ಇಲ್ಲ,ಆದರೆ ನಾವು ಒಬ್ಬರ ಪರ ತೋರಿಸುವ ಅಭಿಮಾನದಲ್ಲಿ ಇನ್ನೊಬ್ಬರ ಬಗ್ಗೆ ನಮಗಿರುವ ದ್ವೇಷ ಭಾವನೆಯೇ ಅಧಿಕವಾಗಿದ್ದರೆ,ಅದೊಂದೇ ತೀವ್ರವಾಗಿ ಎಲ್ಲಾ ಕಡೆ ಕಂಡು ಬಂದರೆ ಆಗ ಆ ಇಡೀ ನಮ್ಮದೊಂದು ಅಭಿಪ್ರಾಯವೇ,ಒಂದು ಲೋಟ ದಪ್ಪನೆಯ ಹಾಲಿಗೆ ಒಂದಿಡೀ ಲಿಂಬೆ ಹಣ್ಣನ್ನು ಚೆನ್ನಾಗಿ ಹಿಂಡಿದಂತಹ ಅನುಭವವನ್ನೇ ಕೊಡುವುದು.
ಇದೆಲ್ಲವನ್ನೂ ನೋಡುವಾಗ ನಾವು ಏತಕ್ಕಾಗಿ ಕ್ರಿಕೆಟ್ ನೋಡುತ್ತಿದ್ದೇವೆ,ಯಾವ ಉದ್ದೇಶಕ್ಕಾಗಿ ನೋಡಬೇಕು ಅನ್ನುವುದೇ ಇಲ್ಲಿ ಮುಖ್ಯವಾಗಿ ಉದ್ಭವಿಸುವ ಪ್ರಶ್ನೆ.ನನ್ನ ಪ್ರಕಾರ ದ್ವೇಷ ಯಾವತ್ತೂ ಕ್ರೀಡೆಯ ಭಾಗವೇ ಅಲ್ಲ.ಅದು ಬೇಕಿದ್ದರೆ ನಮ್ಮ ನೆಲದಲ್ಲಿ ಹುಟ್ಟಿದ ಆಟವೇ ಆಗಿರಲಿ ಅಥವಾ ಹೊರಗಿನಿಂದ ಬಂದ ಕ್ರೀಡೆಯೇ ಆಗಿರಲಿ,ಕ್ರೀಡೆ ಯಾವತ್ತೂ ಎಲ್ಲರನ್ನೂ ಬೆಸೆಯುತ್ತಾ ಹೋಗುತ್ತದೆಯೇ ಹೊರತು ಅದು ಎಂದಿಗೂ ಯಾರನ್ನೂ ಡಿವೈಡ್ ಮಾಡುವ ಕೆಲಸ ಮಾಡುವುದೇ ಇಲ್ಲ.ಬೇಕಿದ್ದರೆ ನೋಡಿ ಸ್ವತಃ ನಾವು ಇನ್ನಿಲ್ಲದಂತೆ ಬೆಂಬಲಿಸುವ ನಮ್ಮ ಇಷ್ಟದ ಆಟಗಾರನೇ ಅಂತಿಮವಾಗಿ ತನ್ನ ತಂಡದ ಸಹ ಆಟಗಾರರೊಂದಿಗೆ ಹಾಗೂ ಎದುರಾಳಿ ತಂಡದ ಆಟಗಾರರೊಂದಿಗೆ ಪ್ರೇಮ ಭಾವವನ್ನು,ಸ್ನೇಹ ಸಂಬಂಧವನ್ನು ಹೊಂದಿರುತ್ತಾನೆಯೇ ಹೊರತು,ನಾವು ಅಲ್ಲಿ ಇಲ್ಲಿ ಕಾರಿಕೊಳ್ಳುವ ಕಾರ್ಕೋಟಕ ದ್ವೇಷವನಲ್ಲ.ಹಾಗಿದ್ದರೆ ನಾವು ಅಭಿಮಾನಿಗಳು ಏತಕ್ಕಾಗಿ ಈ ಅಭಿಮಾನದ ಹೆಸರಲ್ಲಿ ಒಬ್ಬರು ಇನ್ನೊಬ್ಬರನ್ನು ದ್ವೇಷಿಸುತ್ತಾ ನಮ್ಮ ಅಮೂಲ್ಯ ಸಮಯ ಹಾಗೂ ಯಾವತ್ತೂ ಚೆನ್ನಾಗಿರಬೇಕಾದ ಮೂಡು ಹಾಳು ಮಾಡಿಕೊಳ್ಳಬೇಕು?.
ನಾವು ಅತೀ ಇಷ್ಟ ಪಟ್ಟುಕೊಂಡು ನೋಡುವ ಕ್ರೀಡೆಯೊಂದು ನಿರಂತರವಾಗಿ ನಮ್ಮಲ್ಲಿ ಕೇವಲ ದ್ವೇಷವನ್ನೇ ಬಿತ್ತುವುದಾದರೆ,ಅದೊಂದನ್ನೇ ನಮ್ಮಲ್ಲಿ ಬೆಳೆಸುವುದಾದರೆ ಅಂತಹ ಕ್ರೀಡೆಯನ್ನು ನಾವು ನಿಜಕ್ಕೂ ಏತಕ್ಕಾಗಿ ನೋಡಬೇಕು?! ಜಗತ್ತಿನಲ್ಲಿ ಸ್ಪೂರ್ತಿಗೆ ಕೊಡಬಹುದಾದ ಹಲವು ಉದಾಹರಣೆಗಳಲ್ಲಿ ಒಂದು ಸುಂದರವಾದ ಉದಾಹರಣೆಯೇ ಈ ಕ್ರಿಡಾ ಸ್ಪೂರ್ತಿ ಎನ್ನುವಂತಹದ್ದು.ಅದು ಆಟ ಆಡುವವರ ಜೊತೆಗೆಯೇ ನೋಡುವವರಲ್ಲಿಯೂ ಬಂದು ಬಿಟ್ಟರೆ ಕ್ರೀಡೆ ಎಷ್ಟೊಂದು ಗಟ್ಟಿಯಾಗಿ ನಮ್ಮೆಲ್ಲರನ್ನೂ ಬೆಸೆಯಬಹುದು ಅಲ್ಲವೇ..
ಆಟಗಾರರು ಒಬ್ಬೊಬ್ಬರಿಗೆ ಒಂದೊಂದು ಕಾರಣಗಳಿಗಾಗಿ ಇಷ್ಟವಾಗುತ್ತಾ ಹೋಗುತ್ತಾರೆ.ನನ್ನ ಪ್ರಕಾರ ಈ ಇಷ್ಟಗಳು ಹೀಗಿದ್ದರೆ ಚಂದ,ಅವನು ಇಷ್ಟವಾದರೆ ಅವನು ಇಷ್ಟ.ಇವನು ಇಷ್ಟವಾದರೆ ಇವನು ಇಷ್ಟ,ಇಬ್ಬರೂ ಇಷ್ಟ ಆದರೆ ಇಬ್ಬರೂ ಇಷ್ಟ,ಅಷ್ಟೇ.ಹೀಗಿದ್ದರೆ ನಿಮಗೆ ಕೇವಲ ಕೊಹ್ಲಿಯ ಕವರ್ ಡ್ರೈವ್, ಮಾಹಿಯ ಹೆಲಿಕಾಪ್ಟರ್ ಶಾಟ್, ರೋಹಿತನ ಫುಲ್ ಶಾಟ್ ಗಳು ಮಾತ್ರವಲ್ಲ... ರಹಾನೆಯದ್ದೊಂದು ಸ್ಟ್ರೈಟ್ ಡ್ರೈವ್,ಶುಭ್ಮನ್ ಗಿಲ್ ನ ಬ್ಯಾಕ್ ಪುಟ್ ಪಂಚ್,ರಾಹುಲ್ ನ ಪಿಕ್ ಅಫ್ ಶಾಟ್,ರಿಷಭನ ರಿವರ್ಸ್ ಸ್ಕೂಪ್,ಪೂಜಾರನ ಸ್ಟ್ರಾಂಗ್ ಡಿಫೆನ್ಸ್,ಸೂರ್ಯನ ನಟರಾಜ ಶಾಟ್ ಗಳು ಕೂಡ ಬಹಳಷ್ಟು ಆಕರ್ಷಕವಾಗಿಯೇ ಕಾಣುತ್ತದೆ.ಅಷ್ಟು ಮಾತ್ರವಲ್ಲ ಹಾಗಾದಾಗ ನಾವು ನಮ್ಮೆಲ್ಲಾ ಆಟಗಾರರ ಕ್ರಿಕೆಟ್ ಅನ್ನು ಸವಿಯುವುದರ ಜೊತೆಗೆಯೇ ಸ್ವತಃ ಕ್ರಿಕೆಟ್ ಎಂಬ ಆಟವನ್ನೇ ಇನ್ನಿಲ್ಲದಂತೆ ಎಂಜಾಯ್ ಮಾಡಲು ನಿಜಕ್ಕೂ ಸಾಧ್ಯವಾಗುತ್ತದೆ. ನೀವು ನಿಜವಾದ ಕ್ರಿಕೆಟ್ ಅಭಿಮಾನಿ ಆಗಿದ್ದರೆ ನೀವು ನಿಮಗೆ ಕ್ರಿಕೆಟೇ ಇಷ್ಟ,ಆ ಒಂದು ಆಟವೇ ಹೆಚ್ಚು ಇಷ್ಟ ಎಂದಷ್ಟೇ ಹೇಳುವುದರಲ್ಲಿಯೇ ಹೆಚ್ಚು ಸುಖವಿರುವುದು.ವ್ಯಕ್ತಿನಿಷ್ಠರಾಗುವ ಬದಲು ವಸ್ತುನಿಷ್ಠರಾಗುವ ಇಲ್ಲವೇ ವಿಷಯನಿಷ್ಠರಾಗುವ ಆ ಆನಂದವೇ ಬೇರೆ, ಮತ್ತು ಆ ಆನಂದ ನಮ್ಮ ನಿಷ್ಠೆಯ ವ್ಯಕ್ತಿ ಮರೆಯಾದರೂ ನಿರಂತರವಾಗಿರುತ್ತದೆ,ಎಂದಿಗೂ ಅನಂತವಾಗಿಯೇ ಇರುತ್ತದೆ.
ಆಟಗಾರರು ಬರುತ್ತಾರೆ,ಹೋಗುತ್ತಾರೆ ಆದರೆ ಆಟ ಹಾಗೆಯೇ ಇರುತ್ತದೆ.ನನಗಂತು ಬೆಳ್ತಿಗೆ ಅನ್ನವಿದ್ದರೆ ಬಿಸಿ ತೊವ್ವೆಯೊಂದಿಗೆ ಉಪ್ಪಿನಕಾಯಿ,ಮೊಸರು ಕಲಸಿಕೊಂಡು ತಿನ್ನಲು ಇಷ್ಟ,ಕುಚಲಕ್ಕಿ ಅನ್ನವಿದ್ದರೆ ಬಂಗುಡೆಯ ಖಾರದ ಗಸಿಯೊಂದಿಗೆ ಊಟ ಮುಗಿಸಿ ಎದ್ದೇಳಲು ಇಷ್ಟ.ಬಟ್ಟಲಿನ ಮೇಲಿರುವ ಈ ಸಾಂಬಾರು,ತೊವ್ವೆ,ಕೊದ್ದೆಲುಗಳು ಬದಲಾಗಬಹುದು,ಆದರೆ ಮನೆಯ ಬಟ್ಟಲು ಹಾಗೇ ಮನೆಯಲ್ಲಿಯೇ ಇರುತ್ತದೆ.ಈ ಆಟ ಹಾಗೂ ಆಟದ ಮೈದಾನ ಹೆಚ್ಚು ಕಡಿಮೆ ಈ ಊಟದ ಬಟ್ಟಲು ಇದ್ದಂತೆಯೇ.ಆಟಗಾರರೇ ಅದರ ಮೇಲಿನ ರುಚಿ ರುಚಿಯಾದ ಭೋಜನ.ಸುಗ್ರಾಸ ಭೋಜನವೊಂದು ನಮ್ಮ ಎದುರಿದ್ದಾಗ ರಾಗ ದ್ವೇಷ ಮರೆತು ನಾವು ನೆಮ್ಮದಿಯಿಂದ ಎಲ್ಲವನ್ನೂ ಸವಿಯಬೇಕು.ಊಟವನ್ನು ಹಾಗೇ ಅನುಭವಿಸಿ ಬಿಡಬೇಕು,ಹಾನ್... ಊಟದ ಬಟ್ಟಲಿಗೊಂದು ಗೌರವ ನಾವು ಅವಶ್ಯವಾಗಿ ಕೊಡಲೇಬೇಕು.
ಈ ನಾಯಕತ್ವ ಎನ್ನುವುದೇ ಯಾವಾಗಲೂ ಬಿಸಿ ಎಣ್ಣೆಯಲ್ಲಿ ಅರಳಿದ ಹಪ್ಪಳದಂತೆ.ಊಟದ ಬಟ್ಟಲಿಗೆ ಬಂದ ಹಪ್ಪಳ ಹುಡಿಯಾಗಲೇಬೇಕು.ಅದು ಬೇಕಿದ್ದರೆ ಊಟದ ಆರಂಭದಲ್ಲಿಯೇ ಹುಡಿಯಾಗಬಹುದು ಇಲ್ಲವೇ ಊಟದ ನಡುವಲ್ಲಿ ನಾವೇ ಹುಡಿ ಮಾಡಿಕೊಂಡು ಬಿಡಬಹುದು,ಊಟದ ಕೊನೆಯಲ್ಲಿ ಅಂತು ಅದು ಅನಿವಾರ್ಯವಾಗಿ ಹುಡಿಯಾಗಲೇಬೇಕಾಗುತ್ತದೆ.ಹುಡಿಯಾಗುವುದೇ ಹಪ್ಪಳದ ಭಾಗ್ಯ.ಹಿಂದೆ ಇದ್ದ ಗಂಗೂಲಿ ಪಪ್ಪಡ ಅದು ಯಾವತ್ತೋ ಪುಡಿಯಾಗಿತ್ತು,ಈಗೀನ ಕೊಹ್ಲಿ ಹಪ್ಪಳವನ್ನು ಅವನೇ ತನ್ನ ಕೈಯಾರೆ ಊಟದ ನಡುವಲ್ಲಿಯೇ ತನಗೆ ಸಾಕೆಂದು ಪುಡಿ ಮಾಡಿಕೊಂಡು ಊಟ ಮುಂದುವರಿಸಿದ್ದಾನೆ,ಮುಂದೆ ರೋಹಿತ್,ರಾಹುಲ್ ಹಾಗೂ ರಿಷಬ್ ಪಾಪಡ್ ಗಳು ಕೂಡ ಹೆಚ್ಚು ಕಡಿಮೆ ಹಾಗೆಯೇ ಆಗುವುದು.ಒಟ್ಟಿನಲ್ಲಿ ಹಪ್ಪಳ ಇರುವುದೇ ಹುಡಿಯಾಗಲು.ಅದಕ್ಕಾಗಿ ಮನೆಯ ಊಟದ ಬಟ್ಟಲನ್ನು ದ್ವೇಷ ಮಾಡಲು ಎಂದಾದರೂ ಸಾಧ್ಯವೇ? ಇದೂ ಹಾಗೆಯೇ..
ಆದರೂ ನಮಗೆ ಯಾರೆಲ್ಲಾ ಇಷ್ಟ ಆಗುತ್ತಾರೋ ಅವರನ್ನೆಲ್ಲಾ ಇಷ್ಟ ಪಡುತ್ತಾ ಹೋಗುವುದರಿಂದ ಖಂಡಿತವಾಗಿಯೂ ನಮ್ಮ ಬದುಕಿಗೆ ಅಂತಹ ಯಾವುದೇ ಬಿ.ಪಿ ಶುಗರುಗಳೆಂಬ ಕಾಯಿಲೆ ಅಂಟಲು ಸಾಧ್ಯವಿಲ್ಲ.ಆದರೆ ಅಭಿಮಾನಿಗಳ ವಾಕ್ಸಮರದಲ್ಲಿ ರಕ್ತದೊತ್ತಡ ಕೆಲವೊಮ್ಮೆ ಏರುಪೇರು ಆದರೂ ಆಗಬಹುದು,
ಅವಶ್ಯವಾಗಿ ನಮ್ಮ ಮನಸ್ಸಿನ ನೆಮ್ಮದಿಯ ಸೂರು ಬಹಳಷ್ಟು ದೂರಕ್ಕೆ ಹಾರಿ ಹೋಗಲೂಬಹುದು.ಯಾರಿಗೆ ನಷ್ಟ?
ಕೊಹ್ಲಿಯ ವೈಯಕ್ತಿಕ ಸಮಸ್ಯೆ ಹಾಗೂ ಬಿಸಿಸಿಐನೊಂದಿಗಿನ ಆತನ ಸಮಸ್ಯೆಯ ಬಗ್ಗೆ ನನಗೆ ಗೊತ್ತಿಲ್ಲ.ನನಗೆ ಕೊಹ್ಲಿಯ ಆಟ ಇಷ್ಟವಾದರೂ ನಾನೇನು ಕೊಹ್ಲಿಯ ಅಪ್ಟಟ ಅಭಿಮಾನಿ ಅಲ್ಲ,ಹಾಗಂತ ಅವನನ್ನು ಆಟದ ವಿಷಯಗಳಲ್ಲಿ ದ್ವೇಷಿಸಲು ನನ್ನಲ್ಲಿ ಹೆಚ್ಚಿನ ಕಾರಣಗಳು ಕೂಡ ಇಲ್ಲ.ನಾನು ಅವನ ಆಟವನ್ನು ಜಸ್ಟ್ ಎಂಜಾಯ್ ಮಾಡುತ್ತೇನೆ,ಅವನದ್ದೊಂದು ಟ್ರೇಡ್ ಮಾರ್ಕ್ ಎಕ್ಸ್ಟ್ರಾ ಕವರ್ ಡ್ರೈವ್ ಗೆ ಪ್ರತೀ ಬಾರಿ ಮನಸ್ಸಿನಿಂದಲೇ ಆಹಾ.. ಎಂದು ಖುಷಿಯಿಂದಲೇ ಉದ್ಗಾರ ತೆಗೆಯುತ್ತೇನೆ,ಅವನ ನಾಯಕತ್ವದ ಕಿಡಿಯಲ್ಲಿ ಗೆದ್ದಿರುವ ಎಲ್ಲಾ ಪಂದ್ಯಗಳನ್ನು ಬಹಳಷ್ಟು ಚೆನ್ನಾಗಿ ನೆನಪಿನಲ್ಲಿಟ್ಟಿದ್ದೇನೆ,.. ಬಹುಶಃ ಹಾಗಾಗಿಯೇ ಆತ ನಾಯಕತ್ವದಿಂದ ಕೆಳಗಿಳಿಯುತ್ತಿರುವುದು ಅದರಲ್ಲೂ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುತ್ತಿರುವುದು ನಿಜಕ್ಕೂ ನನಗಂತು ಬಹಳಷ್ಟು ಬೇಜಾರಿನ ಸಂಗತಿಯೇ ಹೌದು.ಅದು ಅವನಿಗಿಂತ ಒಳ್ಳೆಯ ನಾಯಕರು ಮುಂದೆ ಬರಲಾರರು ಎಂಬ ಕಾರಣಕ್ಕಾಗಿ ಖಂಡಿತವಾಗಿಯೂ ಅಲ್ಲವೇ ಅಲ್ಲ.ಕೊಹ್ಲಿ ಟೆಸ್ಟ್ ನಲ್ಲಿ ನಾಯಕನಾಗಿ ಇನ್ನಷ್ಟು ಗೆದ್ದಿದ್ದರೆ ಅದೆಂತಹ ವಿಶ್ವದಾಖಲೆಯನ್ನೇ ಆತ ಮಾಡಬಹುದಿತ್ತು ಅಲ್ವೇ..ಎಂಬ ಆ ಒಂದು ಕಾರಣಕ್ಕಾಗಿ ಅಷ್ಟೇ. ಇದು ಪದೇ ಪದೇ ನೆನೆಪಾದಾಗಲೆಲ್ಲಾ ಕೊಹ್ಲಿಯ ಶರಟಿನ ಪಟ್ಟಿ ಹಿಡಿದು.. ಹೀಗೇಕೆ ಮಾಡಿದೆ ನೀನು ಕೊಹ್ಲಿ?ಯಾರೂ ಮಾಡದ ಸಾಧನೆಯನ್ನು ಮಾಡುವ ಅವಕಾಶ ನಿನಗಿತ್ತು ಅಲ್ಲವೇ..? ಎಂದು ಕೇಳುವ ಅಂತಲೇ ಅನಿಸುತ್ತದೆ.ಆದರೆ ಅವನ ಹಟ ಅವನದ್ದು.ಅದು ಸುಲಭವಾಗಿ ಬೆಂಡ್ ಆಗುವ ಕಬ್ಬಿಣವಲ್ಲ.ಆದರೆ ಕಬ್ಬಿಣಕ್ಕೆ ತನಗೆ ತುಕ್ಕು ಅವಶ್ಯವಾಗಿ ಹಿಡಿಯಬಲ್ಲದು ಎನ್ನುವುದು ಸಹ ಗೊತ್ತಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಅಲ್ವೇ.
ಕೊಹ್ಲಿಯ ಕೊಡುಗೆ ಟೀಮ್ ಇಂಡಿಯಾಕ್ಕೆ ಬಹಳಷ್ಟು ದೊಡ್ಡದಿದೆ. ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದು ಆಟವಾಡಿದವ ಕೊಹ್ಲಿ.ಕೆಲವೊಮ್ಮೆ ಸಭ್ಯತೆಯ ಗೆರೆ ಮೀರಿದಾಗ ಮನಸ್ಸು ಕಸಿವಿಸಿ ಆಗಿದ್ದಂತು ನಿಜ,ನಮ್ಮ ನಾಯಕನಲ್ಲವೇ ಹಾಗಾಗಿ ಏನೂ ಅರಿಯದಂತೆ ಕೊಂಡಾಡಿದ್ದು ಕೂಡ ನಿಜವೇ.ಎಲ್ಲರೂ ಎಲ್ಲರ ಹಾಗೆ ಇರುವುದಿಲ್ಲ,ಅದರಲ್ಲೂ ಕೊಹ್ಲಿಯ ಹಾಗೇ, ಉಹೂಂ.. ಯಾರೂ ಇರುವುದಿಲ್ಲ.
#Cricket
Ab Pacchu
Moodubidire
Comments
Post a Comment