ಅದೃಷ್ಟದ ನಾಣ್ಯ..!

 


                                        " ಪುಷ್ಯರಾಗ " 

                                   (ಅದೃಷ್ಟದ ನಾಣ್ಯ..!) 




ದೇವರ ತೇರು ಎಳೆಯಲು ಅದೆಷ್ಟೋ ಕೈಗಳು.ಆ ನೂರಾರು ಕೈಗಳನ್ನು ಸುತ್ತಲೂ ಉರಿಯುತ್ತಿದ್ದ ಸಾವಿರಾರು ದೀಪಗಳ ಬೆಳಕಲ್ಲಿ ಹಾಗೇ ನೋಡುತ್ತಾ,ನಾನೂ ನನ್ನೆರಡು ಪುಟ್ಟ ಕೈಗಳನ್ನು ಭಯ ಭಕ್ತಿಯಿಂದ ಜೋಡಿಸಿ ತೇರಿನ ಮೇಲಿದ್ದ ದೇವರಿಗೆ ನಿಂತಲ್ಲಿಂದಲೇ ನಮಿಸಿ ಬಿಟ್ಟಿದ್ದೆ. 


ಅರ್ಚಕರು ತೇರಿನ ಮೇಲಿನಿಂದಲೇ ಬಾಳೆಹಣ್ಣು,ಗೋಡಂಬಿ ಇನ್ನಿತರ ಸುವಸ್ತು,ಫಲವಸ್ತುಗಳನ್ನು ತೇರಿನ ಸುತ್ತ ನೆರೆದಿದ್ದ ಎಲ್ಲಾ ಭಕ್ತರತ್ತ,ಎಲ್ಲಾ ದಿಕ್ಕುಗಳತ್ತ ಹಾಗೇ ಎರಚುತ್ತಿದ್ದರು.ಸಾವಿರಾರು ಜನರ ಗುಂಪಿನಲ್ಲಿ ಯಾರ ಕೈಗೆ ಅವುಗಳು ಬಂದು ಬೀಳುತ್ತದೆಯೋ,ಅವರು ಅದನ್ನು ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ದೇವರ ಪ್ರಸಾದ ಎಂದೇ ತಿಳಿದು ತಮ್ಮ ಮನೆಗೆ ಒಯ್ಯುತ್ತಿದ್ದರು. 


ಈ ಹಣ್ಣು ಹಂಪಲುಗಳ ಜೊತೆಗೆ ನಾಣ್ಯಗಳನ್ನು ಕೂಡ ತೇರಿನಿಂದಲೇ ಎರಚುತ್ತಿದ್ದರು.ಅದು ಅಷ್ಟೊಂದು ಜನರ ನಡುವೆ ಯಾರ ಕೈಗೂ ಸುಲಭಕ್ಕೆ ಸಿಕ್ಕಿ ಬೀಳುತ್ತಿರಲಿಲ್ಲ.ಹೆಚ್ಚಾಗಿ ಜನರ ಕಾಲಡಿಗೆ ಬಿದ್ದು,ಅದನ್ನು ಹೆಕ್ಕುವುದಕ್ಕಾಗಿಯೇ ನೂಕು ನುಗ್ಗಲೊಂದು ಹಾಗೇ ಶುರುವಾಗಿ ಬಿಡುತ್ತಿತ್ತು.ಉಳಿದೆಲ್ಲಾ ವಸ್ತುಗಳಿಗಿಂತಲೂ ನಾಣ್ಯವೇ ಸಿಗಬೇಕು ಎಂದು ಜನರು ಹೆಚ್ಚಾಗಿ ಬಯಸುತ್ತಿದ್ದರು. 


ನನಗೂ ಒಂದು ಆಸೆ ಇತ್ತು.ಒಮ್ಮೆ ಆದರೂ ದೇವರ ತೇರಿನಿಂದ ಎಸೆಯುವ ಒಂದು ನಾಣ್ಯ ನನಗೂ ಸಿಗಬೇಕು ಎಂದು.ಆದರೆ ಯಾವತ್ತೂ ಆ ಆಸೆ ನೇರವೇರಿದ್ದೇ ಇಲ್ಲ.ಹಾಗೆ ಸಿಗುವ ನಾಣ್ಯ ತುಂಬಾ ಅದೃಷ್ಟದ ನಾಣ್ಯವಾಗಿರುತ್ತದೆ ಎಂದು ಜನರದ್ದೊಂದು ನಂಬಿಕೆ.ಅದನ್ನು ನಾನು ಕೂಡ ನಂಬಿದ್ದೆ.ನಿಜ ಹೇಳಬೇಕೆಂದರೆ ಅಮ್ಮ ಅದನ್ನು ನನಗೆ ನಂಬಿಸಿದ್ದಳು. 


ನಾನು ಅಮ್ಮನಲ್ಲಿ ಪ್ರತೀ ಸಲ ಕೇಳುತ್ತಿದ್ದೆ.. ಅಮ್ಮಾ ಎಲ್ಲರಿಗೂ ಏನಾದರೊಂದು ಸಿಕ್ಕೇ ಸಿಗುತ್ತದೆ,ಆದರೆ ನನಗೆ ಏಕೆ ದೇವರ ತೇರಿನಿಂದ ಯಾವತ್ತೂ ಏನೂ ಸಿಗುವುದಿಲ್ಲ? 


ಅದಕ್ಕೆ ಅಮ್ಮ ಹೇಳುತ್ತಿದ್ದಳು.. 


- ಮಗಳೇ ವಸು...ಸಿಗುತ್ತದೆ,ಒಂದಲ್ಲ ಒಂದು ದಿನ ನಿನಗೂ ಏನಾದರೊಂದು ಸಿಕ್ಕೇ ಸಿಗುತ್ತದೆ.ನೋಡುತ್ತಿರುವ ನಿನಗೆ ಆ  ನಾಣ್ಯವೇ ಸಿಗಬಹುದು.ಅದು ಸಿಕ್ಕರೆ ಅದನ್ನು ಹಾಗೇ  ಜೋಪಾನವಾಗಿಡು,ಅದರಿಂದ ನಿನಗೆ ತುಂಬಾ ಅದೃಷ್ಟ ಬರುತ್ತದೆ,ಯಾರಿಗೆ ಗೊತ್ತು ನಾವು ಕಲ್ಪಿಸಲು ಆಗದಷ್ಟು  ಸಿರಿವಂತಿಕೆಯು ಕೂಡ ನಿನ್ನನೇ ಹುಡುಕಿಕೊಂಡು ಬರಬಹುದು ವಸು.. ಎಂದು ಹೇಳಿದ್ದಳು ನನ್ನಮ್ಮ. 


ಅವಳೇನೋ ಹೇಳುತ್ತಿದ್ದಳು.ಆದರೆ ನಾಣ್ಯಕ್ಕೆ ನಾನು ಸಿಗಲು ಮನಸ್ಸಾಗಬೇಕಲ್ಲ.ಹಾಗಾಗಿ ಪ್ರತೀ ಬಾರಿಯೂ ನಾನು ಜಾತ್ರೆಯಿಂದ ಏನೂ ಸಿಗದೇ ಬರಿಗೈಯಿಂದಲೇ ಮನೆಗೆ ಮರಳುತ್ತಿದ್ದೆ.ಆದರೂ ಪ್ರತೀ ವರ್ಷದ ಜಾತ್ರೆಯಂದು ದೇವರ ತೇರು ಎಳೆಯುವಾಗ ಮತ್ತೆ ಅದೇ ಆಸೆಯಿಂದ ಅಷ್ಟೇ ಉಲ್ಲಾಸ ಉತ್ಸಾಹದಿಂದ ನಾನು ತೇರು ಎಳೆಯುವಲ್ಲಿಗೆ ಮನೆಯಿಂದ ಓಡಿ  ಹೋಗುತ್ತಿದ್ದೆ.ಸತ್ಯ ಹೇಳಬೇಕೆಂದರೆ ದೇವರಿಗಿಂತಲೂ ನನಗೆ ತೇರು ಹಾಗೂ ತೇರಿನಿಂದ ಬಂದು ಬೀಳುವ ನಾಣ್ಯದ ಕಡೆಗೆಯೇ ಹೆಚ್ಚಿನ ಆಸಕ್ತಿ ಇದ್ದದ್ದು. 


ಆದರೆ ನಾನು ಹುಡುಗಿ.ಹೇಗೆ ಅಷ್ಟೊಂದು ಜನರ ನಡುವೆ ನುಗ್ಗಿ ಈ  ನಾಣ್ಯಗಳಿಗಾಗಿ ತಡಕಾಡಲಿ.ಆದರೆ ಒಂದಲ್ಲ ಒಂದು ದಿನ ತೇರಿನಿಂದ ಎಸೆದ ನಾಣ್ಯ ನೇರವಾಗಿ ನನ್ನ ಬಳಿಯೇ ಬಂದು ಬೀಳುತ್ತದೆ ಎಂದು ನಾನು ಬಲವಾಗಿ ನಂಬಿದ್ದೆ.


ನನ್ನ ಆ ನಿರೀಕ್ಷೆ ಸುಳ್ಳಾಗಲಿಲ್ಲ.ಕೊನೆಗೂ ಅಂತಹ ಒಂದು ಘಟನೆ ನಡೆದೇ ಬಿಟ್ಟಿತು.ಹೌದು,ಆ ರಾತ್ರಿ ತೇರಿನ ಮುಂದೆ ಸ್ವಲ್ಪ ದೂರದಲ್ಲಿ ಕೈ ಮುಗಿದುಕೊಂಡು ನಾನು ನಿಂತಿದ್ದಾಗಲೇ ಅದು ಸಂಭವಿಸಿದ್ದು. 


ತೇರಿನಿಂದ ಎಸೆದ ನಾಣ್ಯ ಎಲ್ಲೆಲ್ಲೂ ಬಿದ್ದು ಹಾಗೇ ಉರುಳಾಡಿಕೊಂಡು ಕೊನೆಗೆ ನೇರವಾಗಿ ನನ್ನ ಮುಂದೆಯೇ ಬಂದು ಬಿದ್ದಿತ್ತು.


ನನ್ನ ಕಣ್ಣ ತುಂಬಾ ಹಾಗೇ ನೂರಾರು ನಕ್ಷತ್ರಗಳು ಒಮ್ಮೆಲೇ ಮಿನುಗಿ ಬಿಟ್ಟವು.ಬೇರೆ ಯಾರಾದರೂ ಬಂದು ಅದನ್ನು ಹೆಕ್ಕುವುದಕ್ಕಿಂತ ಮೊದಲು ನಾನೇ ಬೇಗ ಅದನ್ನು ಹೆಕ್ಕಿ ನನ್ನದಾಗಿಸಿಕೊಳ್ಳಬೇಕು ಎಂಬ ಆಸೆಯಿಂದ ಅದರತ್ತ ಕೈ ಚಾಚಿ ರಪ್ಪನೇ ಬಗ್ಗಿದೆ. 


ಆದರೆ ಅದಾಗಲೇ ಇನ್ನೊಂದು ಕೈ ನಾಣ್ಯಕ್ಕೆ ನನಗಿಂತಲೂ ಮೊದಲೇ ಬಹಳಷ್ಟು ಹತ್ತಿರವಾಗಿ ಬಿಟ್ಟಿತ್ತು. 


ಹೆಚ್ಚು ಕಡಿಮೆ ನನ್ನಷ್ಟೇ ವಯಸ್ಸಿನ ಹುಡುಗನೊಬ್ಬನ ಕೈ ಅದು. 


ನನಗೆ ನಿರಾಸೆಯಾಯಿತು.ನನಗೆ ಕಿತ್ತುಕೊಳ್ಳುವುದರಲ್ಲಿ ಆಸಕ್ತಿ ಇರಲಿಲ್ಲ.ನಿಜ ಹೇಳಬೇಕೆಂದರೆ ನನಗಿಂತ ಸ್ವಲ್ಪ ಮೊದಲೇ ಆ ಕೈ ನಾಣ್ಯಕ್ಕೆ ತುಂಬಾನೇ ಹತ್ತಿರವಾಗಿತ್ತು.ಹಾಗಾಗಿ ನೆಲದತ್ತ ಚಾಚಿದ್ದ ನನ್ನ ಕೈಯನ್ನು ಮೆಲ್ಲಗೆ ಹಿಂದಕ್ಕೆ ಎಳೆದುಕೊಳ್ಳಲು ಆರಂಭಿಸಿ ಬಿಟ್ಟೆ ನಾನು. 


ನಾನು ಕೈಯನ್ನು ಹಿಂದಕ್ಕೆ ಎಳೆದುಕೊಳ್ಳುತ್ತಿರುವುದನ್ನು ನೋಡಿ ನಾಣ್ಯದತ್ತ ಕೈ ಚಾಚಿದ ಆ ಹುಡುಗ ಮೆಲ್ಲಗೆ ಒಮ್ಮೆ ತಲೆ ಎತ್ತಿ ನನ್ನನ್ನೇ ನೋಡಿ ಬಿಟ್ಟ. 


ಅವನಿಗೆ ಏನು ಅನಿಸಿತೋ ನನಗೆ ಗೊತ್ತಿಲ್ಲ,ಆದರೆ ಅವನು ಕೂಡ ಆ ನಾಣ್ಯ ಹೆಕ್ಕಲಿಲ್ಲ. 


- ಇದು ನಿನಗೇ ಸೇರಿದ್ದು.. ಅಂದವನೇ ಅಲ್ಲಿಂದ ಹಾಗೇ ಹೊರಟು ಹೋಗಿ ಬಿಟ್ಟ. 


ಆ ನಾಣ್ಯವನ್ನು ನಾನು ಬಹಳ ಖುಷಿಯಿಂದಲೇ ಹೆಕ್ಕಿ ಇಟ್ಟುಕೊಂಡೆ.ಆದರೆ ಯಾಕೋ ಆ ಹುಡುಗ ನನ್ನ ಮನಸ್ಸನ್ನು ಮಾತ್ರ ಆ ದಿನ ಬಹಳಷ್ಟು ವಿಚಲಿತಗೊಳಿಸಿ ಬಿಟ್ಟಿದ್ದ.


ಅವನಿಗಾಗಿಯೇ ಆ ಜಾತ್ರೆಯ ತುಂಬೆಲ್ಲಾ ಕಣ್ಣರಳಿಸಿ ಹುಡುಕಾಡಿದೆ.ಉಹೂಂ.ಅವನು ನನಗೆ ಎಲ್ಲೂ ಸಿಗಲಿಲ್ಲ.


ಅವನು ಸಿಗುವುದಿಲ್ಲ ಎಂದೇ ಅಂದುಕೊಂಡಿದ್ದೆ ನಾನು,ಆದರೆ ಒಂದು ದಿನ ಅವನೇ ಸಿಕ್ಕು ಬಿಟ್ಟ. 


ನಮ್ಮದೇ ಕಾಲೇಜಿನ ಕಾರಿಡಾರಿನಲ್ಲಿ ಅವನಷ್ಟಕ್ಕೆ ಎಲ್ಲೋ ನೋಡಿಕೊಂಡು ಅವನು ನಡೆದು ಹೋಗುತ್ತಿದ್ದ.


ಅದು ಕಾಲೇಜಿನ ಮೊದಲ ದಿನ.ಹಾಗಾಗಿ ಅವನು ಕೂಡ ನಮ್ಮದೇ ಕ್ಲಾಸ್ ಆಗಿರಬಾರದೇ ದೇವರೇ.. ಎಂದು ನಾನು ಮನಸ್ಸಿನಲ್ಲಿಯೇ ದೇವರನ್ನು ತುಂಬಾ ಬೇಡಿಕೊಂಡಿದ್ದೆ. 


ಹಾಗೇ ಆಯಿತು.ಕೆಲವೇ ಕ್ಷಣಗಳಲ್ಲಿ ಅವನನ್ನು ಕ್ಲಾಸಿನ ಒಳಗೂ ನಾನು ನೋಡಿ ಬಿಟ್ಟೆ.ಕೊನೆಯ ಬೆಂಚಿನಲ್ಲಿ ಅವನು ಮೆಲ್ಲಗೆ ಬಂದು ಕುಳಿತುಕೊಂಡಾಗ ನನ್ನ ಕಣ್ಣಲ್ಲಿ ಒಮ್ಮೆಗೆ ಉರಿದುಕೊಂಡ,ಅರಳಿಕೊಂಡ ಅಷ್ಟೂ ಬೆಳಕಿಗೆ  ದೀಪಾವಳಿಯದ್ದೇ ಸಂಭ್ರಮ. 


ಲೆಕ್ಚರರ್ ಹಾಜರಿ ಹಾಕಲು ಅವನ  ಹೆಸರು ಕೂಗಿದಾಗ ಅವನು ಹೆಸರು ಕೂಡ ತಿಳಿಯಿತು.ಅವನು ಪುಷ್ಯರಾಗ.ಆಹಾ,ಅದೆಷ್ಟು ಚಂದದ ಹೆಸರು ಅವನದ್ದು.


ಆದರೆ ಅವನು ಮಾತ್ರ ಎಲ್ಲರಿಂದಲೂ ತುಂಬಾ ದೂರನೇ  ಇರುತ್ತಿದ್ದ.ಮಾತು ಬಹಳನೇ ಕಡಿಮೆ.ಆದರೆ ನನಗೆ ಅವನೊಂದಿಗೆ ತುಂಬಾ ಅಂದರೆ ತುಂಬಾನೇ ಮಾತಾಡಬೇಕಿತ್ತು.ಜಾತ್ರೆಯಲ್ಲಿ ನನಗೆ ನಾಣ್ಯ ಸಿಗುವಂತೆ ಮಾಡಿದ್ದಕ್ಕಾಗಿ ಅವನಿಗೊಂದು ತುಂಬು ಹೃದಯದ ಧನ್ಯವಾದ ಕೂಡ  ಹೇಳಬೇಕಿತ್ತು. 


ಆದರೆ ನಾನು ಅವನ ಹತ್ತಿರ ಹೋದಾಗಲೆಲ್ಲಾ ಅವನು ನನ್ನಿಂದ ತುಂಬಾ ದೂರಕ್ಕೆ ಹೋಗಿ ಬಿಡುತ್ತಿದ್ದ. 


ಒಂದು ಬಾರಿ ಕಾಲೇಜಿನಲ್ಲಿ ಫೀಸು ಕಟ್ಟಲು ಸರತಿ ಸಾಲಿನಲ್ಲಿ ಅವನು ನಿಂತಿದ್ದ.ಅವನನ್ನು ನೋಡಿದ ನಾನು ನೇರಾ ಅವನ ಹಿಂದೆಯೇ ಹೋಗಿ ನಿಂತಿದ್ದೆ. 


ಅವನಿಗೆ ಅವನ ಹಿಂದೆ ನಾನು ನಿಂತಿರುವುದು ಗೊತ್ತಿರಲಿಲ್ಲ. 


ನಾನು ಮೆಲ್ಲಗೆ ಪುರು ಎಂದು ಅವನನ್ನೇ ಕೂಗಿದೆ.. 


ಅವನು ತಿರುಗಿ ನನ್ನನ್ನು ನೋಡಿದ.ಆ ಕ್ಷಣವೇ ನನಗೆ ಅವನ  ಜಾಗ ಬಿಟ್ಟು ಕೊಟ್ಟು..ನೀನು.. ನೀನು ಮುಂದೆ ಹೋಗು ಪುನರ್ವಸು..ನನಗೆ ಪರವಾಗಿಲ್ಲ..ಏನೂ ಅವಸರವಿಲ್ಲ.. ಎಂದು ಹೇಳಿದವನೇ ಎಲ್ಲೋ ನೋಡುತ್ತಾ ತಲೆ ಕರೆದುಕೊಂಡು ಆ ಸರತಿ ಸಾಲಿನಿಂದಲೇ ಹೊರಗೆ ಎಲ್ಲಿಗೋ ಹೋಗಿ ಬಿಟ್ಟಿದ್ದ. 


ಕಾಲೇಜು ಕ್ಯಾಂಟಿನಲ್ಲಿಯೂ ಅವನು ನನ್ನ ಕೈಗೆ ಸಿಗುತ್ತಿರಲಿಲ್ಲ. 


ಬಸ್ಸಿನಲ್ಲಿ ಅವನ ಪಕ್ಕ ಸೀಟು ಖಾಲಿ ಇದ್ದರೆ ನಾನು ಹೋಗಿ ತುಂಬಾ ಆಸೆಯಿಂದ ಕುಳಿತುಕೊಂಡರೆ,ಅವನು ಅಲ್ಲಿಂದ ಎದ್ದು ಹಿಂದೆ ಹೋಗಿ ನಿಲ್ಲುತ್ತಿದ್ದ.


ಒಂದು ವೇಳೆ ಬಸ್ಸಿನ ಸೀಟು ಫುಲ್ ಆಗಿ ಅವನು ಮಾತ್ರ ಸೀಟಿನಲ್ಲಿ  ಕುಳಿತುಕೊಂಡಿದ್ದರೆ,ಅವನ ಪಕ್ಕ ನಾನು ಹೋದ ಕೂಡಲೇ...ನೀನು ಕುಳಿತುಕೋ ಪುನರ್ವಸು... ಎಂದು ಅವನ ಸೀಟಿನಿಂದ ಎದ್ದು,ನನಗೆ ಸೀಟು ಬಿಟ್ಟು ಕೊಟ್ಟು ಮತ್ತೆ ಹಿಂದೆ ಹೋಗಿ ನಿಲ್ಲುತ್ತಿದ್ದ,ಇಲ್ಲವೇ ಬಸ್ಸಿನ ಬಾಗಿಲಿನಲ್ಲಿ ನೇತಾಡುತ್ತಿದ್ದ.


ಅವನು ಏಕೆ ಹಾಗೇ?!


ಅವನು ಮಾತಾಡಿದ್ದರೂ ನನಗಂತು ತುಂಬಾ ಇಷ್ಟವಾಗುತ್ತಿದ್ದ.ಎಲ್ಲರಿಗಿಂತಲೂ ಅವನೇ ನನ್ನನ್ನು ಜಾಸ್ತಿ ಆಕರ್ಷಿಸುತ್ತಿದ್ದ. 


ಕಾಲೇಜಿನಲ್ಲಿ ಎಲ್ಲಾ ಗೆಳೆಯ ಗೆಳತಿಯರು ನನ್ನನ್ನು ವಸು ಎಂದು ಕರೆದರೂ ಅವನೊಬ್ಬ ಮಾತ್ರ ನನ್ನನ್ನು ಮಾತನಾಡಿಸಿದಾಗಲೆಲ್ಲ ನನ್ನ ಪೂರ್ತಿ ಹೆಸರು ಹಿಡಿದೇ ಕರೆಯುತ್ತಿದ್ದ. 


ಅವನೇಕೆ ನನಗೆ ಅಷ್ಟೊಂದು ಗೌರವ ಕೊಡುತ್ತಿದ್ದ..?! 


ನಾನು ಅವನಿಗೆ ಯಾವಾಗಲೂ ಹತ್ತಿರವಾಗಲು ಬಯಸುತ್ತಿದ್ದೆ.


ಆದರೆ ಅವನು ಮಾತ್ರ ಸದಾ ನನ್ನಿಂದ ದೂರ ದೂರ ಓಡುತ್ತಲೇ ಇದ್ದ.ಕೊನೆಗೊಮ್ಮೆ ಕಾಲೇಜಿನಿಂದಲೇ ಹಾಗೇ ದೂರವಾಗಿ ಬಿಟ್ಟ. 


ಮೊದಲ ವರ್ಷದಲ್ಲಿ ಅನುತ್ತೀರ್ಣನಾದ ಮೇಲೆ ಪುರು ಆ ನಂತರ  ಕಾಲೇಜಿನಲ್ಲಿ ಕಾಣಿಸಿಕೊಳ್ಳಲಿಲ್ಲ. 


ಆದರೂ ಅವನು ನಮ್ಮ ಊರಿನಲ್ಲಿಯೇ ಇರುತ್ತಿದ್ದ.ಅದು ಹೇಗೋ ಬಹಳ ಬೇಗನೆ ಡ್ರೈವಿಂಗ್ ಕಲಿತುಕೊಂಡು ಬಿಟ್ಟ.ಕೆಲವೊಮ್ಮೆ ಕಲ್ಲಿನ ಕೋರೆಯ ಲಾರಿ ಬಿಡುತ್ತಿದ್ದ.ಇನ್ನು ಕೆಲವೊಮ್ಮೆ ಬಾಡಿಗೆಯ ರಿಕ್ಷಾ ಸಹ ಬಿಡುತ್ತಿದ್ದ.ದಾರಿಯಲ್ಲಿ ಕಂಡರೂ ನನ್ನತ್ತ ಅವನು ತಿರುಗಿಯೂ ನೋಡುತ್ತಿರಲಿಲ್ಲ.ನಾನು ಮಾತ್ರ ಹೋಗುವ ಪ್ರತೀ ದಾರಿಯಲ್ಲೂ ಅವನೊಮ್ಮೆ ಕಣ್ಣಿಗೆ ಬೀಳಬಾರದೇ ಎಂದು ಕಣ್ಣಗಲಿಸಿಕೊಂಡು ಹೋಗುತ್ತಿದ್ದೆ.ಯಾವ ಡ್ರೈವರ್ ಕಣ್ಣಿಗೆ ಬಿದ್ದರೂ ಅದು ಪುರು ಎಂದೇ ಅನ್ನಿಸುತ್ತಿತ್ತು. 


ಕೊನೆಗೊಮ್ಮೆ ನನ್ನ ಕಾಲೇಜ್ ಕೂಡ ಮುಗಿಯಿತು.ಹಾಗೇ ನನ್ನ ಮದುವೆ ಕೂಡ ಆಯಿತು. 


ಪುರು ಮದುವೆಗೆ ಕೂಡ ಬಂದಿದ್ದ.ನಿಜ ಹೇಳಬೇಕೆಂದರೆ ಎಲ್ಲರಿಗಿಂತ ಮೊದಲು ಅವನೇ ಬಂದಿದ್ದ.ಹೌದು,ಆ ದಿನ ಅವನು ನನ್ನ ದಿಬ್ಬಣದ ಕಾರಿನ ಡ್ರೈವರ್ ಆಗಿ ಬಂದಿದ್ದ.ನಮ್ಮ ಆ ಕಾರ್  ಡ್ರೈವ್ ಮಾಡುತ್ತಿದ್ದ ಅವನನ್ನು ಕಂಡಾಗ ಜಾತ್ರೆಯಲ್ಲಿ ಮೊದಲ ಬಾರಿಗೆ ನನಗೆ ಸಿಕ್ಕಿದ್ದ,ನನಗೆ ನಾಣ್ಯ ಸಿಗುವಂತೆ ಮಾಡಿದ್ದ  ಪುರುವೇ ಅತಿಯಾಗಿ ನೆನಪಾಗಿ ಬಿಟ್ಟಿದ್ದ.ನಾನು ಅವನೊಬ್ಬನ ಮೇಲೆ ಏನೇನೋ ಕನಸು ಕಂಡಿದ್ದೆ.ನಾನು ಹುಚ್ಚು ಹುಡುಗಿ.ಮಾತು ಬಾರದ,ಮನಸ್ಸು ಅರಿಯದ ಹುಡುಗನ ಕನಸನ್ನೇ ಕಂಡಿದ್ದೆ ಎಂದು ಆಮೇಲೆ ನನಗೆ ತಿಳಿಯಿತು.


ನನ್ನನ್ನು ನಮ್ಮದೇ ಊರಿನ ಸಿರಿವಂತನಿಗೆಯೇ ನನ್ನ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟಿದ್ದರು.ಅಮ್ಮನ ಭವಿಷ್ಯ,ತೇರಿನಿಂದ ಸಿಕ್ಕ ನಾಣ್ಯದ ಅದೃಷ್ಟ ಎರಡೂ ನಿಜವೇ ಆಗಿ ಹೋಗಿತ್ತು. ಅಮ್ಮ ಅಂತು ತುಂಬಾ ಖುಷಿ ಪಟ್ಟಳು..ನೋಡು,ನಾನು ಹೇಳಿದ್ದು ನಿಜವಾಗಲಿಲ್ಲವೇ ಅಂದಳು. 


ಆಳು,ಕಾರು,ಬಂಗಲೆಯಂತಹ ಮನೆ,ಬೇಕಾದಷ್ಟು ಜಮೀನು ಎಲ್ಲವೂ ಅಲ್ಲಿ ಇತ್ತು.ಆದರೂ ನಾನೇಕೋ ತುಂಬಾ ಸುಖಿ ಎಂದು ನನಗೆ ಅಲ್ಲಿ ಅನಿಸಲಿಲ್ಲ.ಏಕೆಂದರೆ ನಾನು ಮತ್ತು ನನ್ನ ಗಂಡ ಬಿಟ್ಟರೆ ಆ ಮನೆಯಲ್ಲಿ ಬೇರೆ ಹಿರಿಯರು,ಕಿರಿಯರು,ಸಂಬಂಧಿಕರು ಯಾರೂ ಇರಲಿಲ್ಲ. 


ಗಂಡ ತುಂಬಾ ಕುಡಿಯುತ್ತಿದ್ದ.ಅವನಿಗೆ ಅವನದ್ದೊಂದು ಎಕ್ರೆ ಗಟ್ಟಲೆ ಅಡಿಕೆ ತೋಟ,ಕ್ಯಾಶ್ಯು ಫ್ಯಾಕ್ಟರಿ,ರೈಸ್ ಮಿಲ್ಲ್ ಹೀಗೆ ಒಟ್ಟಾರೆಯಾಗಿ ಅವನಿಗೆ ಅವನ ಬ್ಯುಸಿನೆಸ್ ಬಿಟ್ಟರೆ ಬೇರೆ ಯಾವುದರಲ್ಲಿಯೂ ಆಸಕ್ತಿ ಇರಲಿಲ್ಲ.ವಯಸ್ಸಿನಲ್ಲಿ ಕೂಡ ನನಗಿಂತಲೂ ತುಂಬಾ ದೊಡ್ಡವನಾಗಿದ್ದ ಅವನಿಗೆ ನನ್ನ ಮೇಲೆ ಕೂಡ ಅಂತಹ ಯಾವುದೇ ಆಸಕ್ತಿ ಇರಲಿಲ್ಲ.ಸಂಸಾರ ನೀರಸವಾಗಿತ್ತು.ಹೊತ್ತು  ಹೊತ್ತಿಗೆ ಅಡುಗೆ ಮಾಡಿ ಬಡಿಸಲಷ್ಟೇ ನನ್ನನ್ನು ಅವನು ಮದುವೆಯಾಗಿದ್ದ ಎಂದು ನನಗೆ ಎಷ್ಟೋ ಸಲ ಅನ್ನಿಸುತ್ತಿತ್ತು.ಅವನು ನನ್ನಲ್ಲಿ ಮಾತು ಕೂಡ ಎಷ್ಟು ಬೇಕೋ ಅಷ್ಟೇ ಆಡುತ್ತಿದ್ದ.ಆವಾಗಲೆಲ್ಲ ನನಗೆ ಬಾಯಿ ಇದ್ದೂ ಮಾತು ಮರೆತು ಹೋದ ಪುರುವಿನ ನೆನಪೇ ಬಹಳಷ್ಟು ಆಗುತ್ತಿತ್ತು. 


ಪುರು ಆಗಲೂ ಊರಲ್ಲಿ ಎಲ್ಲೋ ಇದ್ದ.ಹೆಚ್ಚಾಗಿ ಅವನು ಕಣ್ಣಿಗೆ ಬೀಳುತ್ತಿರಲಿಲ್ಲ.ಒಂದು ದಿನ ಬಿದ್ದ.ಈ ಬಾರಿ ಅವನು ನನ್ನ ಗಂಡನ ಕಾರಿಗೆನೇ ಡ್ರೈವರ್ ಆಗಿ ಬಿಟ್ಟಿದ್ದ.


ಆ ನಂತರ ಪುರುವೇ ನಮ್ಮನೆಯ ಕಾರಿಗೆ ಫರ್ಮನೆಂಟ್ ಡ್ರೈವರ್ ಆಗಿ ಹೋದ.


ಊಟಕ್ಕೆಂದು,ತಿಂಡಿಗೆಂದು ಅವನು ನಮ್ಮ ಮನೆಗೆ ಬಂದಾಗಲೂ,ಮುಖ ಎತ್ತಿ ಅವನು ನನ್ನನ್ನು ನೋಡುತ್ತಿರಲಿಲ್ಲ.ನಾನು ಎಷ್ಟೇ ಕರೆದರೂ ಮನೆಯೊಳಗೆ ಬಂದು ಎಂದೂ ಅವನು ತಿಂಡಿಯೂ ತಿನ್ನುತ್ತಿರಲಿಲ್ಲ.ಮನೆಯ ಹಿಂದಿನ ಜಗಲಿಯಲ್ಲಿ ತಿಂಡಿಗೆಂದು ಬಂದು ಸುಮ್ಮನೆ ಅವನಷ್ಟಕ್ಕೆ ಕುಳಿತುಕೊಳ್ಳುತ್ತಿದ್ದ,ನನ್ನನ್ನು ಕರೆಯುತ್ತಲೂ ಇರಲಿಲ್ಲ.ನಾನು ಬಡಿಸುವಾಗಲೂ ತಲೆ ತಗ್ಗಿಸಿಯೇ ಇರುತ್ತಿದ್ದ,ತಿನ್ನುವಾಗಲೂ ತಲೆತಗ್ಗಿಸಿಕೊಂಡೇ ತಿನ್ನುತ್ತಿದ್ದ.ಆಮೇಲೆ ಅಲ್ಲಿಂದ ಎದ್ದು ಹೋಗುತ್ತಿದ್ದ. 


ನಿಜ ಹೇಳಬೇಕೆಂದರೆ ಅವನು ನನ್ನದೊಂದು ಪರಿಚಯವೇ ಇಲ್ಲದಂತೆ ನಮ್ಮ ನಡುವೆ ಜೀವಿಸುತ್ತಿದ್ದ ಹಾಗೇ ನನ್ನ ಗಂಡನ ಕಾರು ಕೂಡ ಓಡಿಸುತ್ತಿದ್ದ. 


ನಾನು ಹಾಗೂ ನನ್ನ ಗಂಡ ಕಾರಿನಲ್ಲಿ ಒಟ್ಟಿಗೆ ಹೋಗುವಾಗ ಕಾರು ಬಿಡುತ್ತಿದ್ದ ಪುರುವಿನ ಮೌನ ನನ್ನನ್ನು ವಿಪರೀತವಾಗಿ ತಿವಿಯುತ್ತಿತ್ತು.ನನಗೆ ಅವನೊಬ್ಬ ಶಾಪಗ್ರಸ್ತ ಗಂಧರ್ವನಂತೆ ಕಾಣುತ್ತಿದ್ದ."ಭೂಮಿಗೆ ಹೋಗಿ ಮಾತು ಬರದಂತೆ,ಇತರರ ಮನಸ್ಸು ಅರಿಯದಂತೆ ಬದುಕಿಕೋ.." ಎಂದು ಅವನಿಗೆ ಶಾಪ ಕೊಟ್ಟ ಅದು ಯಾವುದೋ ಗೊತ್ತಿಲ್ಲದ ದೇವತೆಗೆ ನಾನಂತು ದಿನಾಲೂ ಮನಸಾರೆ ಶಪಿಸುತ್ತಿದ್ದೆ. 


ಅದೊಂದು ದಿನ ನಾನು ನನ್ನ ಗಂಡ ಕಾರಿನಲ್ಲಿ ಹೋಗುತ್ತಿದ್ದೆವು.ಪುರು ಎಂದಿನಂತೆ ಅವನಷ್ಟಕ್ಕೆ ಕಾರು ಚಲಾಯಿಸುತ್ತಿದ್ದ.ನೋಡು ನೋಡುತ್ತಿದ್ದಂತೆಯೇ ನಮ್ಮ ಕಾರು ಲಾರಿಯೊಂದಕ್ಕೆ ಬಡಿದು ಭೀಕರ ಅಪಘಾತವೇ ಆಗಿ ಹೋಯಿತು. 


ಮೂವರನ್ನೂ ತತ್ ಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. 


ನನಗೆ ಏನು ಜಾಸ್ತಿ ಏಟಾಗಿರಿಲಿಲ್ಲ.ಪುರುವಿಗೂ ಸಣ್ಣ ಪುಟ್ಟ ಗಾಯಗಳು ಆಗಿದ್ದು ಬಿಟ್ಟರೆ ಅಂತಹ ದೊಡ್ಡ ಮಾರಣಾಂತಿಕ ಗಾಯಗಳು ಯಾವುದೂ ಆಗಿರಲಿಲ್ಲ.ಆದರೆ ನನ್ನ ಗಂಡ ಮಾತ್ರ  ಚಿಕಿತ್ಸೆ ಫಲಕಾರಿಯಾಗದೇ ಆ ಅಪಘಾತದಲ್ಲಿ ತೀರಿಕೊಂಡು ಬಿಟ್ಟಿದ್ದ


ಆ ದಿನದಿಂದ ನಾನು ತೀರಾ ಒಂಟಿಯಾದೆ.


ಮನೆ, ಜಾಗ ಹಾಗೂ ಗಂಡನ ಎಲ್ಲಾ ಬ್ಯುಸಿನೆಸ್ ನಾನೇ ನೋಡಿಕೊಳ್ಳಬೇಕಾಗಿತ್ತು.ದೊಡ್ಡ ಜವಾಬ್ದಾರಿಯೇ ನನ್ನ ಹೆಗಲ ಮೇಲೆ ಬಿದ್ದಿತ್ತು.ಒಟ್ಟಿನಲ್ಲಿ ನಾನೇ ಎಲ್ಲದರ ಯಜಮಾನಿ ಆಗಿ ಹೋಗಿದ್ದೆ. 


ಹಲವು ದಿನಗಳ ವಿಶ್ರಾಂತಿಯ ನಂತರ ಪುರು ಮತ್ತೆ ಕಾರ್ ಡ್ರೈವರ್ ಕೆಲಸಕ್ಕೆ ಬಂದಿದ್ದ. 


ಹಲವಾರು ಸಣ್ಣಪುಟ್ಟ ಜವಾಬ್ದಾರಿಗಳನ್ನು ನನಗೆ ವಹಿಸಿಕೊಳ್ಳಲು ಕಷ್ಟವಾಗುತ್ತಿತ್ತು.ಅವೆಲ್ಲವನ್ನೂ ಬಹಳ ಬೇಗನೇ ಅರ್ಥ ಮಾಡಿಕೊಂಡ ಪುರು ತಾನೂ ಸ್ವಲ್ಪ ಜವಾಬ್ದಾರಿಯನ್ನು ಹೊರುವ ಮೂಲಕ ನನ್ನ ಹೊರೆಯನ್ನು ಬಹಳಷ್ಟು ಕಡಿಮೆ ಮಾಡಿ ಬಿಟ್ಟಿದ್ದ. 


ಮನೆಯ ಕಾರ್ ಡ್ರೈವ್ ಕೂಡ ಅವನೇ ಮಾಡುತ್ತಿದ್ದ ಅದರ ಜೊತೆಗೆ ಎಲ್ಲಾ ಕಡೆ ಹೋಗಿ,ತೋಟದ ಕಡೆಗೂ ಕೂಡ ಹೋಗಿ ಕೆಲಸಗಾರರು ಮಾಡುತ್ತಿದ್ದ ಎಲ್ಲಾ ಕೆಲಸಗಳನ್ನು ಬಹಳ ಮುತುವರ್ಜಿಯಿಂದಲೇ ನೋಡಿಕೊಳ್ಳುತ್ತಿದ್ದ.ಕ್ಯಾಶ್ಯು ಫ್ಯಾಕ್ಟರಿ ಹಾಗೂ ರೈಸ್ ಮಿಲ್ಲಿಗೆ ಸಂಬಂಧ ಪಟ್ಟ ಮ್ಯಾನೇಜರ್ ಗಳು ಇದ್ದರೂ ನಾನಂತು ಪುರುನನ್ನೇ ನನ್ನೆಲ್ಲಾ ಕೆಲಸಗಳಿಗೆ ಅಕ್ಷರಶಃ ಮ್ಯಾನೇಜರ್ ಎಂದು ತೀರ್ಮಾನಿಸಿ ಬಿಟ್ಟಿದ್ದೆ ಮತ್ತು  ನಾನವನನ್ನು ಹಾಗೆಯೇ ಗೌರವಿಸುತ್ತಿದ್ದೆ. 


ಕಾರಿನಲ್ಲಿ ಎಲ್ಲಿಗಾದರೂ ನನಗೆ ಹೋಗಬೇಕಿದ್ದರೆ ಪುರು ಡ್ರೈವ್ ಮಾಡುತ್ತಿದ್ದ.ನಾನು ಸುಮ್ಮನೆ ಹಿಂದೆ ಕುಳಿತಿರುತ್ತಿದ್ದೆ.ನಮ್ಮಿಬ್ಬರ ನಡುವೆ ಬೆಳೆದು ನಿಂತಿದ್ದ ಒಂದು ಮೌನ ಇತ್ತಲ್ಲ,ಅದು ಎಷ್ಟೊಂದು ಗಾಢವಾಗಿತ್ತು ಎಂದರೆ ಕೊನೆ ಕೊನೆಗೆ ನನಗೆ ಮನೆಯ ವ್ಯವಹಾರದ ಮಾತುಗಳನ್ನು ಬಿಟ್ಟರೆ ಅವನೊಂದಿಗೆ  ಬೇರೆ ಯಾವುದೇ ಮಾತು ಆಡಲು ಧೈರ್ಯವೇ ಬರುತ್ತಿರಲಿಲ್ಲ. 


ಕೆಲವೊಮ್ಮೆ ನನಗೆ ಹಾಗೇ ಸತ್ತು ಹೋಗುವ ಎಂದು ಅನಿಸುತ್ತಿತ್ತು.ಮಕ್ಕಳು ಮರಿ ಅಂತ ಯಾವುದೂ ನನಗೆ ಹುಟ್ಟಲಿಲ್ಲ,ಅತ್ತ ಖುಷಿಯೂ ಇಲ್ಲ,ಮನೆಯಲ್ಲಿ ನಗುವೂ ಇಲ್ಲ, ಮನಸ್ಸಿಗೂ ಯಾವುದೇ ಹಿತವಿಲ್ಲ..ಏತಕ್ಕಾಗಿ ನಾನು ಬದುಕುತ್ತಿದ್ದೇನೆ ಎಂದೇ ನನಗೆ ಗೊತ್ತಾಗುತ್ತಿರಲಿಲ್ಲ. 


ಒಂದು ದಿನ ಪುರು ನನ್ನ ಬಳಿ ಬಂದವನೇ,ಕಾಗದಗಳ ಕಂತೆಯಿಂದ ಒಂದು ಕಾಗದ ಕೊಡುತ್ತಾ...ನನ್ನ ಮದುವೆ ನಿಶ್ಚಯವಾಗಿದೆ,ನೀವು ಬರಲೇ ಬೇಕು ವಸು ಅವರೇ.. ಅಂದ. 


ಬಹುಶಃ ಅವನ ಪ್ರಕಾರ ನಾನೀಗ ಅವನ ಕೆಲಸದ ಯಜಮಾನಿ,ಹಾಗಾಗಿ ಪುನರ್ವಸು ಹೋಗಿ ಆ ಜಾಗಕ್ಕೆ" ವಸು ಅವರೇ.." ಎನ್ನುವುದು ಅವನ ಮಾತುಗಳಲ್ಲಿ ಸಹಜವಾಗಿಯೇ ಸೇರಿಕೊಂಡಿತ್ತು.


ಮನೆಯೊಳಗೆ ಹೋಗಿ ಕೈ ತುಂಬಾ ದುಡ್ಡು ತಂದು ಅವನ ಕೈಗಿಟ್ಟೆ... ಮದುವೆಯಾಗಿ ಸುಖವಾಗಿರು ಪುರು ಅಂದೆ... ನನ್ನ ಕಣ್ಣಲ್ಲಿ ಬಹಳಷ್ಟು ನೀರಿತ್ತು. 


ಆದರೆ ನನ್ನೆದುರು ಸದಾ ತಲೆ ತಗ್ಗಿಸಿಯೇ ಮಾತಾಡುವ ಅವನು ಅದನ್ನು  ಗಮನಿಸಲಿಲ್ಲ.


ಇಷ್ಟು ಸಾಕು ವಸು ಅವರೇ.. ಎಂದು ಹೇಳಿ,ನಾನು ಅವನ ಕೈಯಲ್ಲಿಟ್ಟಿದ್ದ ಹಣದಿಂದ ಅರ್ಧದಷ್ಟು ಹಣವನ್ನು ನನಗೆ ವಾಪಸ್ ಹಿಂತಿರುಗಿಸಿ,ಅಲ್ಲಿಂದ ಹಾಗೇ ತಲೆ ತಗ್ಗಿಸಿಕೊಂಡು  ಹೊರಟು ಹೋಗಿದ್ದ ಅವನು. 


ಪುರು ಮದುವೆ ಆದ ಹುಡುಗಿ ಕೂಡ ಚೆನ್ನಾಗಿಯೇ ಇದ್ದಳು.ನಾನು ಮದುವೆಗೂ ಹೋಗಿ ನೂರ್ಕಾಲ ಸುಖವಾಗಿ ಬಾಳಿ ಬದುಕಿ ಎಂದು ಇಬ್ಬರಿಗೂ ಮನಸಾರೆ ಹರಸಿ ಬಂದಿದ್ದೆ. 


ಹೀಗೆ ಬದುಕು ಸಾಗಿತ್ತು. 


ನಾನು ಮತ್ತಷ್ಟು ಒಂಟಿಯಾಗುತ್ತಲೇ ಹೋದೆ. 


ಪುರು ಮತ್ತು ನಾನು ಕಾರಿನಲ್ಲಿ ಇಬ್ಬರೇ ಇದ್ದಾಗ ಅದೆಂತಹ ನಿಶ್ಶಬ್ಧ ಇರುತ್ತಿತ್ತು ಎಂದರೆ ನನಗೆ ಸಹಿಸಿಕೊಳ್ಳಲು ಅಸಾಧ್ಯವಾಗಿ ಬಿಡುತ್ತಿತ್ತು.


ಅದೊಂದು ದಿನ ಪುರು ನೇರವಾಗಿ ನನ್ನನ್ನೇ ಹುಡುಕಿಕೊಂಡು ನಮ್ಮ ಮನೆಗೆ ಬಂದಿದ್ದ.ಅವನಲ್ಲಿ ಆ ದಿನ ಅತಿಯಾದ ಆತಂಕ ಮನೆ ಮಾಡಿತ್ತು. 


ನಾನಾಗಿ ಕರೆಸದಿದ್ದರೆ ಅವನು ಹೆಚ್ಚಾಗಿ ನಮ್ಮ ಮನೆಗೆ ಬರುವುದೇ ಇಲ್ಲ.


ಬಂದವನೇ ತಲೆ ತಗ್ಗಿಸಿಕೊಂಡು ಹೇಳಿದ್ದ.. ನನ್ನ ಹೆಂಡತಿಗೆ ಹೃದಯದ ಖಾಯಿಲೆ ಇದೆ.ಸೂಕ್ತ ಚಿಕಿತ್ಸೆ ಸಿಗದಿದ್ದರೆ ಪ್ರಾಣಕ್ಕನೇ  ಅಪಾಯವಿದೆ.ನನಗೀಗ ಹಣದ ಅವಶ್ಯಕತೆ ತುಂಬಾ ಇದೆ.. ಸಾಲ ಅಂತ ಕೊಡಿ,ದುಡಿದು ಎಲ್ಲವನ್ನೂ ತೀರಿಸುತ್ತೇನೆ ವಸು ಅವರೇ.. ಅಂದು ಬಿಟ್ಟ ಪುರು. 


ಅವನು ವಸು ಅವರೇ.. ವಸು ಅವರೇ..ಎಂದು ಪ್ರತೀ ಬಾರಿ  ಹೇಳುವಾಗಲೆಲ್ಲಾ ನನ್ನ ಹೃದಯಕ್ಕೆನೇ ನೇರವಾಗಿ ತಿವಿದಂತೆಯೇ ಆಗುತ್ತಿತ್ತು.


ಅವನ ಹೆಂಡತಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ರೀತಿಯಾಗಿ ಆಗಿದ್ದು ಕೇಳಿ ನನಗೆ ಮನಸ್ಸಿಗೆ ತುಂಬಾ ಬೇಜಾರಾಯಿತು.


ಅವನು ಕೇಳಿದ್ದಕ್ಕಿಂತ ಜಾಸ್ತಿಯೇ ಹಣ ಅವನಿಗೆ ಕೊಟ್ಟೆ.ಎಂದಿನಂತೆ ಅವನಿಗೆಷ್ಟು ಬೇಕೋ ಅಷ್ಟೇ ಹಣವನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಹೋದ. 



ಅವನ ಹೆಂಡತಿಯ ಅಪರೇಷನ್ ದಿನ ನಾನೂ ಕೂಡ ಆಸ್ಪತ್ರೆಗೆ ಅವನೊಂದಿಗೆ ಹೋಗಿದ್ದೆ.ಆ ದಿನ ನಾನು ದೇವರಲ್ಲಿ ಕೂಡ ಬೇಡಿಕೊಂಡಿದ್ದೆ.. ಎಲ್ಲವೂ ಒಳ್ಳೆಯ ರೀತಿ ಆಗಿ,ಪುರುವಿನ ಹೆಂಡತಿ ಆರೋಗ್ಯವಾಗಿ ಸುಖವಾಗಿ ಹಿಂದಿರುಗಿದರೆ ಹೂವಿನ ಪೂಜೆ ಮಾಡಿಸುತ್ತೇನೆ ಎಂದು ಮನಸ್ಸಿನಲ್ಲಿಯೇ ಹರಕೆ  ಹೇಳಿಕೊಂಡಿದ್ದೆ ನಾನು. 


ನಾನು ನಂಬಿದ ದೇವರ ಆಶೀರ್ವಾದವೋ ಅಥವಾ ಪುರುವಿನ ಒಳ್ಳೆಯತನಕ್ಕೋ ಅಪರೇಷನ್ ಎಲ್ಲವೂ ಸುಸೂತ್ರವಾಗಿ ನಡೆದು,ಪುರುವಿನ ಹೆಂಡತಿ  ಆರೋಗ್ಯವಾಗಿಯೇ ಮನೆ ಸೇರಿ ಬಿಟ್ಟಳು.


ಪುರು ಆ ದಿನ ಬಹಳಷ್ಟು ಖಷಿ ಪಟ್ಟ.ಅವನು ಅಷ್ಟು ಖುಷಿ ಪಟ್ಟದ್ದು ನಾನು ಯಾವತ್ತೂ ನೋಡಿಯೇ ಇಲ್ಲ.


ಆ ವಾರವೇ ನಾನು ಊರಿನ ದೇವಸ್ಥಾನಕ್ಕೆ ಹರಕೆ ತೀರಿಸಲು ಹೋದೆ.ಊರಿನಲ್ಲಿ ಎಂದಿನಂತೆ ಜಾತ್ರೆಯ ಸಂಭ್ರಮ.ತೇರನ್ನು ಕೂಡ ಎಲ್ಲರೂ ಸೇರಿ ಎಳೆಯುತ್ತಿದ್ದರು.ತೇರಿನ ದೇವರಿಗೆ ನಿಂತಲ್ಲಿಯೇ ಎರಡೂ ಕೈ ಜೋಡಿಸಿ ನಮಿಸಿ ಬಿಟ್ಟೆ.


ಆ ನಂತರ ದೇವಸ್ಥಾನದ ಒಳಗೆ ಹೋಗಿ ಹರಕೆ ತೀರಿಸಿದೆ. ಅಲ್ಲಿಂದ ಹಿಂದಿರುಗಿ ಬರುವಾಗ,ವೃದ್ಧ ಭಿಕ್ಷುಕನೊಬ್ಬ.. ಅಮ್ಮಾ ತಾಯಿ... ಎಂದು ನನ್ನೆದುರು ಕೈ ಚಾಚಿ ಬಿಟ್ಟ.ನಾನು ಹಾಗೇ ಪರ್ಸಿಗೆ ಕೈ ಹಾಕಿದ್ದೆ. 


ಚಿಕ್ಕವಳಾಗಿದ್ದಾಗ ಜಾತ್ರೆಯ ದಿನ ಪುರುವಿನಿಂದಾಗಿಯೇ ಸಿಕ್ಕ ನಾಣ್ಯ ಇನ್ನೂ ಭದ್ರವಾಗಿ ಅಲ್ಲಿಯೇ ಇತ್ತು!


ಎಲ್ಲರೂ ಅದನ್ನು ಅದೃಷ್ಟದ ನಾಣ್ಯ ಎಂದು ಹೇಳುತ್ತಾರೆ.ಆದರೆ ನಾನು ಯಾವ ರೀತಿಯಿಂದ ಅದೃಷ್ಟವಂತೆ ಎಂದು ನನಗೆ ನಿಜಕ್ಕೂ ಗೊತ್ತಾಗಲಿಲ್ಲ..ಅಮ್ಮ ಹೇಳುತ್ತಿದ್ದಳು,ನೀನು ಸಿರಿವಂತೆ ಆದರೂ ಆಗಬಹುದು ವಸು..,ಎಂದು.ಆದರೆ ನನಗೆ ಯಾಕೋ ನಾನೊಬ್ಬಳು ಸಿಕ್ಕಾಪಟ್ಟೆ ಶಾಪಗ್ರಸ್ತ ನಕ್ಷತ್ರ ಎಂದೇ ಆ ಕ್ಷಣ ಅನ್ನಿಸಿ ಬಿಟ್ಟಿತ್ತು.ಆಕಾಶದಿಂದ ಉದುರಿ ಎಲ್ಲಿಗೆ ಬಿದ್ದಿದ್ದೆ,ಏತಕ್ಕಾಗಿ ಬಿದ್ದಿದ್ದೆ ಎಂದೇ ನನಗೇ ಗೊತ್ತಿರಲಿಲ್ಲ.ಹೌದು,ಹೊರಗೆ ನೋಡುವವರ ಎಲ್ಲರ ಕಣ್ಣಿಗೂ ನಾನು ನಿಜಕ್ಕೂ ತುಂಬಾನೇ ಹೊಳೆದಿದ್ದೆ,ಆದರೆ ನನ್ನೊಳಗೆ ಹೊಳೆಯಬಲ್ಲ ಒಂದೇ ಒಂದು ಕಥೆಯೂ ನಿಜವಾಗಿಯೂ ಇರಲಿಲ್ಲ! 


ಕೈಗೆ ಸಿಕ್ಕ ಆ ಅದೃಷ್ಟ ನಾಣ್ಯವನ್ನೇ ಆ ಭಿಕ್ಷುಕನ ತಟ್ಟೆಗೆ ಹಾಕಿ,ಮೆಲ್ಲಗೆ ಕಣ್ಣೋರೆಸಿಕೊಂಡು ಭಾರವಾದ ಹೃದಯದೊಂದಿಗೆ ಹಾಗೇ ಹೊರಗೆ ನಡೆದು ಬಿಟ್ಟೆ ನಾನು!


ಪುರು ಕಾರನ್ನು ಮನೆಯತ್ತ ಎಂದಿನಂತೆಯೇ ಓಡಿಸುತ್ತಿದ್ದ.


ಕಾರು ಮುಂದೆ ಮುಂದೆ ಹೋದಂತೆ,ಆ ಗಾಢವಾದ ನಮ್ಮಿಬ್ಬರ ನಡುವಿನ ಮೌನದಲ್ಲಿ ನನ್ನ ಮನಸ್ಸು ಸಾರಿ ಸಾರಿ ಇದೊಂದನ್ನೇ ಹೇಳುತ್ತಿತ್ತು..ಕೆಲವೊಮ್ಮೆ ನಾವು ಕೆಲವರಿಗೆ ಸಿಗಬಾರದು,ಅದೇ ರೀತಿ...ಕೆಲವರು ನಮಗೂ ಕೂಡ ಎಂದೆಂದಿಗೂ ಸಿಗಲೇಬಾರದು!!..ಬದುಕು ತುಂಬಾ ಕಷ್ಟವಾಗುವುದು ಆವಾಗಲೇ!!



.....................................................................................


#ಪುಷ್ಯರಾಗ


Ab Pacchu 

Moodubidire 

Photo-internet


https://phalgunikadeyavanu.blogspot.com

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..