ಸೇಬುಗಲ್ಲದ ಹುಡುಗಿ

 


                                    " ನೀಲಮೇಘ " 

                            (  ಸೇಬುಗಲ್ಲದ ಹುಡುಗಿ..) 




ಅದು ಸಂಜೆಯ ಸಮಯ.ಬಹಳ ದೂರದಿಂದ ನೋಡುವಾಗ ಸೇತುವೆಯ ಮೇಲೆ ಯಾರೋ ಇರುವಂತೆ ಕಂಡಿತು ನನಗೆ.ಇನ್ನಷ್ಟು ಹತ್ತಿರಕ್ಕೆ ಹೋದಾಗ ನನ್ನ ಆ ಊಹೆ ನೂರಕ್ಕೆ ನೂರು ನಿಜವೇ ಆಗಿತ್ತು.


ಸೇತುವೆಯ ನಡುವಲ್ಲಿ ಅದರ ಒಂದು ಬದಿಯ ಎತ್ತರದ ಆ ಕಟ್ಟೆಯನ್ನು ಹತ್ತಿ ಅದರ ಮೇಲೆಯೇ ಕುಳಿತುಕೊಂಡು ಕೆಳಗೆ ರಭಸದಿಂದ ಹರಿಯುವ ನೀರನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದಳು ಒಬ್ಬಳು ಹುಡುಗಿ.


ಖಂಡಿತವಾಗಿಯೂ ಅವಳು ಮೀನು ಹಿಡಿಯಲು ಬಂದವಳಲ್ಲ ಎಂದು ನನಗೆ ಅನಿಸಿತು.ಏಕೆಂದರೆ ಅವಳ ಕೈಯಲ್ಲಿ ಯಾವುದೇ ಮೀನು ಹಿಡಿಯುವ ಗಾಳವಿರಲಿಲ್ಲ,ಮಾತ್ರವಲ್ಲ ಅವಳ ಪಕ್ಕದಲ್ಲಿ ಹಿಡಿದ ಮೀನುಗಳನ್ನು ಹಾಕುವುದಕ್ಕಾಗಿ ಯಾವುದೇ ತೊಟ್ಟೆಯೂ ಇರಲಿಲ್ಲ.


ಅವಳು ಗಾಳಿ ಸೇವನೆಗೆ ಏನಾದರೂ ..? ಇಲ್ಲ..ಇಲ್ಲ.. ಅದಕ್ಕೂ ಕೂಡ ಅವಳು ಬಂದವಳಲ್ಲ ಎಂದೇ ನನಗೆ ಅನಿಸಿತು.ಅದರ ಬದಲು ಯಾಕೆ ಅವಳು ಸಿಗರೇಟು ಸೇದಲೆಂದೇ ಅಲ್ಲಿ  ಕುಳಿತಿರಬಾರದು? ಅವಳು ಪಕ್ಕದಲ್ಲಿಯೇ ಯಾಕೆ ತಣ್ಣನೆಯ ಬಿಯರ್ ಬಾಟಲಿ ಕೂಡ ಇಟ್ಟುಕೊಂಡಿರಬಾರದು?..ಎಂದೇ ನನಗೆ ಬಲವಾಗಿ ಅನಿಸಿತು. 


ಯಾವುದಕ್ಕೂ ಈಗೀನ ಕಾಲದ ಹುಡುಗಿಯರನ್ನು ನಂಬಲು ಸಾಧ್ಯವಿಲ್ಲಪ್ಪ..ಖಂಡಿತವಾಗಿಯೂ ಇದು ಅಂತಹ ಗಿರಾಕಿಯೇ ಇರಬಹುದು ಎಂದು ನನಗೆ ನಾನೇ ಹೇಳಿಕೊಳ್ಳುತ್ತಾ,ಕೈಯಲ್ಲಿದ್ದ ಮಸಾಲೆ ಕಡಲೆಯ ಪ್ಯಾಕೇಟಿನಿಂದ ಒಂದೊಂದೇ ಕಡಲೆಗಳನ್ನು ಬಾಯಿಗೆ ಒಂದರ ನಂತರ ಒಂದೊಂದಾಗಿ ಎಸೆಯುತ್ತಾ ಅವಳತ್ತಲೇ ನಾನು ನಡೆಯತೊಡಗಿದೆ;ಏನು ಕಥೆ,ಯಾವ ಊರಿನ ಸಮಾಚಾರ,ಏನದು ಪ್ರಕ್ಷುಬ್ಧ ಹವಾಮಾನ,ಮೋಡ ಕವಿದ ವಾತಾವರಣವಾದರೂ ಎಂತಹದ್ದು.. ಎಂದೆಲ್ಲಾ ಒಮ್ಮೆ ವಿಚಾರಿಸಿ ನೋಡುವ ಎಂದು ನಾನು ಅವಳತ್ತಲೇ ನಡೆಯತೊಡಗಿದೆ.


ಒಂದು ವೇಳೆ ಅವಳು ನದಿಯಿಂದ ಕೆಳಗೆ ಹಾರಿ ಸಾಯಲೇಬೇಕು ಎಂದು ನಿರ್ಧರಿಸಿ ಅಲ್ಲಿ ಕುಳಿತಿದ್ದರೆ ಖಂಡಿತವಾಗಿಯೂ ಅವಳಿಗೆ ನನ್ನ ಸಂಪೂರ್ಣ ಸಹಕಾರವನ್ನು ನೀಡಿ ಅವಳ ಕೆಲಸದಲ್ಲಿ ಅವಳು ಯಶಸ್ವಿ ಆಗುವಂತೆ ನಾನು ನೋಡಿಕೊಳ್ಳಲೇಬೇಕು ಎಂದು ಮನಸ್ಸಿನಲ್ಲಿಯೇ ನಿರ್ಧರಿಸಿ ಬಿಟ್ಟೆ. 


ನಮ್ಮ ಪುಲ್ಕಿಯ ಆ ಸೇತುವೆಯಿಂದ ಯಾರೂ ಕೂಡ ನದಿಗೆ ಹಾರಿ ಸತ್ತಿದ್ದು ನಾನು ಇಲ್ಲಿಯವರೆಗೆ ನೋಡಿಯೇ ಇಲ್ಲ.ನೋಡುವ,ಇವಳಾದರೂ ಏನಾದರೂ ಮನಸ್ಸು ಮಾಡುತ್ತಾಳೋ ಎಂದು ಯೋಚಿಸುತ್ತಾ ನಾನು ಆ ಸೇತುವೆಯ ನಡುವಿಗೆ ಅವಳು ಕುಳಿತಿದ್ದಲ್ಲಿಗೆಯೇ ಬಂದು ತಲುಪಿದೆ.ನಾನು ಯೋಚಿಸಿದಂತೆ ಅವಳ ಸುತ್ತ ಯಾವ ಸಿಗರೇಟಿನ ಹೊಗೆಯೂ ಇರಲಿಲ್ಲ,ತಂಪು ಬಿಯರಿನ ನೊರೆಯೂ ಕೂಡ ಇರಲಿಲ್ಲ.ಅಂತಹ ಯಾವುದೇ ಕುರುಹುಗಳೇ ಅಲ್ಲಿರಲಿಲ್ಲ.


ಅಂದರೆ ಇವಳು ಒಳ್ಳೆಯ ಹುಡುಗಿಯೇ ಇರಬೇಕು.ಆದರೂ ಸುಲಭವಾಗಿ ಸಾಯಲು ಎಷ್ಟೆಷ್ಟು ಒಳ್ಳೆಯ ಉಪಾಯಗಳಿವೆ,ಏಕೆ ಇಲ್ಲಿಗೆಯೇ  ಬಂದು ಇವಳು ಸಾಯುತ್ತಿದ್ದಾಳೆ ಎಂದು ಮನಸ್ಸಿನಲ್ಲಿಯೇ ಪ್ರಶ್ನೆ ಹಾಕಿಕೊಳ್ಳುತ್ತಾ ನಾನು ಅವಳಿಗೆ ಕೇಳುವಂತೆಯೇ.... 


ಹಾಯ್... ಅಂದೆ ಮೆಲ್ಲಗೆ. 


ಅವಳು ಏನನ್ನೂ ಪ್ರತಿಕ್ರಿಯಿಸದೇ ಅದು ಯಾವುದೋ ಬೇರೆಯದ್ದೇ ಲೋಕದಲ್ಲಿ ಇರುವಂತೆ ಭಾಸವಾಯಿತು.


ಸೇತುವೆಯ ಆ ಎತ್ತರದ ಕಟ್ಟೆಯ ಮೇಲೆ ಒಂದಿಷ್ಟು ಪುಟಾಣಿ ಕಲ್ಲುಗಳನ್ನು ಇಟ್ಟುಕೊಂಡು,ಅವುಗಳನ್ನು ಒಂದೊಂದಾಗಿ ಕೆಳಗಿನ ನದಿಯ ನೀರಿಗೆ ಎಸೆದು,ನದಿಯ ಮೇಲೆ ನೀರಿನ ಬಳೆಗಳನ್ನು ಮೂಡಿಸುತ್ತಿದ್ದಳು ಅವಳು.ಒಂದು ಬಳೆ ಹುಟ್ಟಿ ಹಾಗೇ ತನ್ನ ಪರಿಧಿ ವಿಸ್ತರಿಸಿಕೊಂಡು ಅಲೆಯಲೆಯಾಗಿ ದೊಡ್ಡದಾಗುತ್ತಾ ಹೋಗಿ ನೀರಲ್ಲಿ ಮರೆಯಾದಾಗ ಇನ್ನೊಂದು ಕಲ್ಲು ಎಸೆದು ಮತ್ತೆ ಹೊಸ ಬಳೆ ಮೂಡಿಸುತ್ತಿದ್ದಳು ಹುಡುಗಿ.ಅಷ್ಟು ದೊಡ್ಡ ತರುಣಿ  ಮಕ್ಕಳಾಟವಾಡುತ್ತಿದ್ದುದನ್ನು ಕಂಡಾಗ ಇವಳೇನಾದರೂ ಹುಚ್ಚಿ ಇರಬಹುದೇ,ಮಾನಸಿಕವಾಗಿ ನೊಂದು ಬೆಂದು ಬಳಲಿ ಬೆಂಡಾಗಿ ಸಿಕ್ಕಾಪಟ್ಟೆ ಸ್ವಾಸ್ಥ್ಯ ಕೆಡಿಸಿಕೊಂಡಿರಬಹುದೇ ಎಂದೇ ನನಗನಿಸಿತು. 


ನಾನು ಕೂಡ ಬಹಳ ಕಷ್ಟ ಪಟ್ಟು ಸೇತುವೆಯ ಕಟ್ಟೆ ಏರಿ ಅವಳ ಪಕ್ಕವೇ ಕುಳಿತೆ.ನಿಜಕ್ಕೂ ಸುಲಭವಾಗಿ ತುಂಬಾ ಆರಾಮವಾಗಿ  ಆ ಕಟ್ಟೆ ಏರಿ ಅದರ ಮೇಲೆ ಹತ್ತಿ ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ.ಯಾರು ಕೂಡ ಅದನ್ನು ಹತ್ತಿ ಕೆಳಗೆ ಬಿದ್ದು ಸಾಯಬಾರದೆಂದೇ ಅಲ್ಲವೇ ಆ ಕಟ್ಟೆಗಳನ್ನು ಅಷ್ಟೊಂದು ಎತ್ತರಕ್ಕೆ ಸೇತುವೆಯ ಇಕ್ಕೆಲಗಳಲ್ಲಿ ಕಟ್ಟಿದ್ದು.ಆದರೂ ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದರೂ ಸಹ ಅವಳು ಹೇಗೆ ಅಲ್ಲಿ ಹತ್ತಿ ಕುಳಿತಳು?. ಸಾಯುವ ಟೈಂ ಅಲ್ಲಿ ಈ ಸಾಹಸ ಎನ್ನುವುದೆಲ್ಲಾ  ಬ್ಲಡ್ ನಲ್ಲಿ ಕೆಂಪುರಕ್ತ ಕಣಗಳಿಗಿಂತಲೂ ಅಧಿಕವಾಗಿರುತ್ತದೆಯೋ ಏನೋ.ಇಲ್ಲದಿದ್ದರೆ ಇಂತಹ ಸಾಹಸ ಎಲ್ಲಾ ಯಾರೂ ಮಾಡುತ್ತಾರೆ.ಇಷ್ಟು ವರ್ಷ ಊರಲ್ಲಿಯೇ ಇದ್ದರೂ ನಾನೇ ಎಂದಿಗೂ ಈ ರೀತಿ ಸೇತುವೆಯ ಕಟ್ಟೆಯೇರಿ ಕುಳಿತುಕೊಳ್ಳುವ ಯೋಚನೆಯನ್ನು ಮಾಡಿರಲಿಲ್ಲ.ಹೌದೌದು ಖಂಡಿತಾ ಇದು ಪಕ್ಕಾ ಆತ್ಮಹತ್ಯೆ ಗಿರಾಕಿಯೇ ಎಂದು ನನಗೆ ನಾನೇ ಹೇಳಿಕೊಂಡೆ. 


ಸೇತುವೆಯ ಆ ಕಟ್ಟೆಯ ಮೇಲೆ ಅವಳ ಪಕ್ಕವೇ ಗ್ಯಾಪು ಕೊಟ್ಟು  ಕುಳಿತುಕೊಂಡು, ಕೈಯಲ್ಲಿದ್ದ ಪ್ಯಾಕೇಟಿನಿಂದ ಕಡಲೆಗಳನ್ನು  ಒಂದೊಂದಾಗಿ ಬಾಯಿಗೆಸೆದು ನದಿಯಲ್ಲಿ ಅವಳು ಮೂಡಿಸುತ್ತಿದ್ದ ಆ ನೀರ ಬಳೆಗಳನ್ನೇ ನೋಡುತ್ತಾ ಹೇಳಿದೆ ... 


-  ನೋಡಿ ಇವರೇ...ನೀವು ಈ ಕಲ್ಲಿನಲ್ಲಿ ಆಟವಾಡಿಕೊಂಡು ಆವಾಗದಿಂದ ತುಂಬಾ ಟೈಂ ವೇಸ್ಟ್ ಮಾಡ್ತಾ ಇದ್ದೀರಾ..ಆದಷ್ಟು ಬೇಗ ಜಂಪ್ ಮಾಡಿ ಬಿಡಿ.ಬದುಕಿನ ಆಟ ಮುಗಿಸುವ ಸಮಯದಲ್ಲಿ ಈ ರೀತಿ ಮಕ್ಕಳಾಟ ಆಡುವುದು ನನಗೇನೂ ಅಷ್ಟೇನು ಹಿಡಿಸುತ್ತಿಲ್ಲ.. ಅಂದೆ.


ಅವಳು ಕಲ್ಲು ಬಿಸಾಡುವುದನ್ನು ಒಮ್ಮೆಲೇ ನಿಲ್ಲಿಸಿ ನನ್ನತ್ತಲೇ ಹಾಗೇ ತಿರುಗಿ ನೋಡಿದಳು.ನಾನೂ ಅವಳತ್ತಲೇ ತಿರುಗಿ ನೋಡಿದೆ.ಅವಳ ಕಣ್ಣುಗಳು ಬಹಳಷ್ಟು ಅಗಲವಾಗಿದ್ದವು,ಗಲ್ಲ  ಸೇಬಿನಂತೆಯೇ ಇತ್ತು. 


- ಏಕೆ.. ಆಮೇಲೆ ನನ್ನನ್ನು ನದಿಯಿಂದ ರಕ್ಷಿಸಿ ದೊಡ್ಡ ಹೀರೋ ಆಗುವ ಆಸೆಯೇ ನಿಮಗೆ?ಎಂದು ಕಡಲೆ ತಿನ್ನುತ್ತಿದ್ದ ನನ್ನನ್ನೇ  ದುರುಗುಟ್ಟಿಕೊಂಡು ಕೇಳಿದಳು ಅವಳು. 


- ಇಲ್ಲ.. ಇಲ್ಲ... ಖಂಡಿತವಾಗಿಯೂ ಅಂತಹ ಯಾವುದೇ ದುರಾಲೋಚನೆ ನನ್ನಲ್ಲಿ ಇಲ್ಲ.ನೀವು ಬೇಕಿದ್ದರೆ ಹೇಳಿ,ನಿಮ್ಮನ್ನು ಹಿಂದಿನಿಂದ ನಾನೇ ಜೋರಾಗಿ ನೀರಿಗೆ ತಳ್ಳುತ್ತೇನೆ.. ಇಲ್ಲವೇ ನೀವು ನೀರಿನಲ್ಲಿ ಮುಳುಗಿ ಮುಳುಗಿ ಕೊನೆಯಲ್ಲಿ ಖಚಿತವಾಗಿ ಸತ್ತು ಹೋಗುವವರೆಗೂ ಯಾರೂ ಕೂಡ ನಿಮ್ಮ ಹತ್ತಿರವೇ ಬರದಂತೆ ಸ್ವತಃ ನಾನೇ ನೋಡಿಕೊಳ್ಳುತ್ತೇನೆ,ನನ್ನನ್ನು ನೀವು ಏನೂಂತ ತಿಳಿದುಕೊಂಡಿದ್ದೀರಿ,ದಯವಿಟ್ಟು ಹೆದರಬೇಡಿ.. ನೀವು ಬಹಳ ಆರಾಮವಾಗಿ ಸಾಯಲು ನಿಮಗೆ ನನ್ನದೊಂದು ಸಂಪೂರ್ಣ ಸಹಕಾರ ಎಂದಿಗೂ ಇದೆ.. ಅಂದೆ. 


ಯಾರು ಮಾರ್ರೆ ಇವನು..ಯಾವ ಗುಂಡಿಯಿಂದ ಎದ್ದು ಬಂದಿದ್ದಾನೆ ... ಎಂಬಂತೆ ಮುಖಭಾವವನ್ನು ತೋರಿಸುತ್ತಾ,ನನ್ನನ್ನೇ ಕುಳಿತಲ್ಲಿಂದ ಮೇಲಿಂದ ಕೆಳಗೆ ಹಾಗೇ ನೋಡತೊಡಗಿದಳು ಆ ಸೇಬುಗಲ್ಲದ ಹುಡುಗಿ. 


ಅವಳು ಕೇಳದಿದ್ದರು,ನನ್ನ ಬಗ್ಗೆ ಹೇಳಬೇಕು ಎಂದು ನನಗೆ  ಅನಿಸಿತು. ಅದಕ್ಕಾಗಿಯೇ ನಾನು ಹೇಳಿದೆ.. 


- ನಾನು ನೀಲಮೇಘ... ಆದರೆ ನೀಲು ಎಂದೇ  ಹೆಚ್ಚಾಗಿ ಎಲ್ಲರೂ ನನ್ನನ್ನು ಕರೆಯುತ್ತಾರೆ.. ನೀವು ಹಾಗೇ ಕರೆಯಬಹುದು..ನನಗಂತು ಏನೂ ತೊಂದರೆ ಇಲ್ಲ.. ಎಂದು ಹೇಳಿ ಕೈಯಲ್ಲಿದ್ದ ಕಡಲೆಯೊಂದನ್ನು ಮತ್ತೆ ಬಾಯಿಗೆ ಎಸೆದೆ. 


- ರೀ..ನಾನು ಯಾವಾಗ ನಿಮ್ಮ ಬಳಿ ನಿಮ್ಮ ಹೆಸರು ಕೇಳಿದೆ,ನನಗೆ ಏತಕ್ಕಾಗಿ ಬೇಕು ನಿಮ್ಮದೊಂದು ಪರಿಚಯ.. ಅದನ್ನೆಲ್ಲ ಕಟ್ಟಿಕೊಂಡು ನಾನು ಏನು ಮಾಡ್ಲಿ.. ಎಂದು ಕೋಪದಿಂದ ಹೇಳಿದವಳೇ ಮತ್ತೆ ಕಟ್ಟೆಯ ಮೇಲೆ ಅವಳು ಪೇರಿಸಿಟ್ಟಿದ್ದ ಕಲ್ಲುಗಳನ್ನು ನದಿಗೆ ಎಸೆದು ನದಿಯಲ್ಲಿ ನೀರ ಬಳೆಗಳನ್ನು ಮೂಡಿಸತೊಡಗಿದಳು.ನಾನು ನನ್ನಷ್ಟಕ್ಕೆ ಕಡಲೆ ತಿನ್ನುವುದನ್ನು ಮುಂದುವರಿಸಿದೆ. 


ಅವಳು ಮತ್ತೆ ಮಾತಿಗೆ ಇಳಿಯುವುದು ಕಾಣಲಿಲ್ಲ.ಯಾರೊಂದಿಗಾದರೂ ಮಾತಿಗೆ ಇಳಿಯದಿದ್ದರೆ ನನಗೆ ತಿಂದ ಅನ್ನ ಕರಗುವುದಿಲ್ಲ,ಈಗಂತು ತಿನ್ನುತ್ತಿರುವ ಈ ಕಡಲೆಗಳು ಕೂಡ ಕರಗಲಾರದೆನೋ ಎಂದೆ ನನಗೆ ಬಲವಾಗಿ ಅನ್ನಿಸಿಬಿಟ್ಟಿತು. 


ಹಾಗಾಗಿ ಕಡಲೆ  ತಿನ್ನುತ್ತಲೇ ಒಂದಿಷ್ಟು ಕಡಲೆಗಳನ್ನು ಅವಳತ್ತಲೂ ಚಾಚಿದೆ.. 


- ತಗೊಳ್ಳಿ ಕಡಲೆ.. ಚೆನ್ನಾಗಿರುತ್ತೆ ತಿನ್ಲಿಕ್ಕೆ..ಅಂದೆ. 


- ಮೊದಲು ನೀವು ನನ್ನ ತಲೆ ತಿನ್ನುವುದನ್ನು ಒಮ್ಮೆ ನಿಲ್ಲಿಸಿ..ದಮ್ಮಯ್ಯ.. ಅಂದಳು ಸಿಡುಕುತ್ತಾ. 


ಒಂದೈದು ನಿಮಿಷದ ದೀರ್ಘ ಮೌನವೊಂದು ನಮ್ಮಿಬ್ಬರ ಮಧ್ಯೆ ಆ ಸೇತುವೆ ಕಟ್ಟೆ ಮೇಲೆಯೇ ಭದ್ರವಾಗಿ ಆಸೀನವಾಗಿತ್ತು.ಅವಳು ನೀರನ್ನೇ ನೋಡುತ್ತಾ ಶ್ರದ್ಧೆಯಿಂದ ಕಲ್ಲೆಸೆದು ನೀರ ಮೇಲೆ ಒಂದರ ನಂತರ ಒಂದೊಂದಾಗಿ ಬಳೆಗಳನ್ನು  ಮೂಡಿಸುತ್ತಿದ್ದಳು,ನಾನು ಮೂಡುವ ಆ ಬಳೆಗಳು ಮರೆಯಾಗುವುದನ್ನೇ ನೋಡುತ್ತಾ ಕೈಯಲ್ಲಿದ್ದ ಕಡಲೆಗಳನ್ನು ಒಂದೊಂದಾಗಿಯೇ ತಿಂದು ಖಾಲಿ ಮಾಡುತ್ತಿದ್ದೆ.


ಅವಳು ಮಾತಿಗೆ ಬರುವ ಹಾಗೆ ಕಾಣಲಿಲ್ಲ..ಎದ್ದು ಹೋಗಲು ನನಗೂ ಮನಸ್ಸಾಗಲಿಲ್ಲ.. ಏಕೆಂದರೆ ಮಾಡಲು ನನಗೆ ಬೇರೆ ಕೆಲಸವೇ ಇರಲಿಲ್ಲ.ಹಾಗಾಗಿ ಮತ್ತೊಮ್ಮೆ ಅವಳನ್ನು ಮಾತಿಗೆಳೆಯಲು ಮನಸ್ಸು ಮಾಡಿದೆ. 


-ನಿಮಗೆ ಒಂದು ವಿಷಯ ಹೇಳಬೇಕಿತ್ತು.. ಅಂದೆ.


- ಯಾಕೆ ಒಂದೇ ವಿಷಯ? ಎರಡು ವಿಷಯ ಹೇಳಿ ಅಲ್ವಾ... ಈ ಬಾರಿ ಅವಳು ಯಾಕೋ ಮಾತು ಬೆರೆಸುವ,ಅದನ್ನೇ ಒಂಚೂರು ಉದ್ದಕ್ಕೆ ಬೆಳೆಸುವ ಮನಸ್ಸು ಮಾಡಿದಂತಿತ್ತು. 


- ಆಯಿತು ಎರಡು ವಿಷಯವನ್ನೇ ಹೇಳುತ್ತೇನೆ.ನೋಡಿ ಮೊದಲ ವಿಷಯ ಏನೆಂದರೆ,ಈಗ ನೀವು ಕುಳಿತಿದ್ದೀರಿ ಅಲ್ಲವೇ ಅಲ್ಲಿಂದ ದಯವಿಟ್ಟು ಕೆಳಗೆ ಹಾರಿ ಸಾಯಬೇಡಿ.. 


ಅವಳಿಗೆ ಅರ್ಥ ಆಗಲಿಲ್ಲ..


- ಮತ್ತೆ ನೀವು ಸಾಯಲು ಸಿಕ್ಕಾಪಟ್ಟೆ ಸಹಾಯ ಮಾಡುತ್ತೇನೆ,ಬೇಕಿದ್ದರೆ ನಾನೇ ನಿಮ್ಮನ್ನು ಕೆಳಗೆ  ದೂಡುತ್ತೇನೆ,ನಿಮ್ಮ ಪ್ರಾಣ ಹೋಗುವವರೆಗೂ ಉಳಿದವರು ಬಂದು ಕಾಪಾಡದಂತೆ ನೋಡಿಕೊಳ್ಳುತ್ತೇನೆ ಎಂದೆಲ್ಲಾ ಆವಾಗ ಹೇಳಿದಿರಿ.. ಅಂದಳು ಆ  ಸೇಬುಗಲ್ಲದ ಹುಡುಗಿ. 


- ಅದು ಹೌದು.. ಈಗಲೂ ಅದಕ್ಕೆ ನಾನು ಬದ್ಧನಾಗಿಯೇ ಇದ್ದೇನೆ,ನಾನು ಇಟ್ಟ ಗುರಿ ತಪ್ಪಾಗಬಹುದು,ಆದರೆ ಕೊಟ್ಟ ಮಾತು ತಪ್ಪುವವನು ನಾನಲ್ಲ.ಆದರೆ ವಿಷಯ ಎಂತ ಗೊತ್ತುಂಟಾ...


- ಇಲ್ಲ... ಗೊತ್ತಿಲ್ಲ,ದಯವಿಟ್ಟು ಹೇಳಿ... ಹೇಳಿದರೆ ಗೊತ್ತಾಗುತ್ತದೆ.


- ವಿಷಯ ಏನೆಂದರೆ ಇಲ್ಲೇ ಈ ಸೇತುವೆಯ ನೇರಾ ಕೆಳಗಡೆಯೇ  ದೊಡ್ಡ ಹಲ್ಲಿನ ಮೊಸಳೆಗಳು ಸಿಕ್ಕಾಪಟ್ಟೆ ಇವೆಯಂತೆ.. ಹಾಗಂತ ನಮ್ಮೂರಿನ  ಜನರೇ ಹೇಳುತ್ತಾರೆ....


ಅವಳು ಕುಳಿತಲ್ಲಿಂದಲೇ ಮತ್ತೊಮ್ಮೆ ನನ್ನನ್ನು ಮೇಲೆ ಕೆಳಗೆ ನೋಡಿದಳು.


- ಹಾಗಾದರೆ ಬೇರೆ ಊರುಗಳಲ್ಲಿ ಎಲ್ಲಾ ಈ ಹಲ್ಲು ಇರದ ಮೊಸಳೆಗಳೇ ಇರುತ್ತದೆಯೇ? ನಿಮ್ಮ ಊರಿನಲ್ಲಿ ಅಷ್ಟೇ ಈ ಹಲ್ಲು ಇರುವ ವಿಶೇಷ ಮೊಸಳೆಗಳು ಇರುವುದೇ...? ಅವಳು ನನ್ನನ್ನೇ ನೋಡುತ್ತಾ ಕೇಳಿದಳು. 


- ಅಲ್ಲ.. ಅಲ್ಲ... ಹಾಗಲ್ಲ,ಮೊಸಳೆ ಬಾಯಿಗೆ ಸಿಕ್ಕಿಕೊಂಡ ಮೇಲೆ  ನಿಮಗೆ ಸುಖವಾಗಿ ಸಾಯಲು ಕಷ್ಟ ಆಗಬಹುದೆಂದು ಹಾಗೆ ಹೇಳಿದೆ.ಮೊಸಳೆ ನೋಡಿದ ಕೂಡಲೇ ಮತ್ತೆ ಬದುಕುವ ಆಸೆ ಏನಾದರೂ ನಿಮ್ಮಲ್ಲಿ ಹುಟ್ಟಿಕೊಂಡರೆ ಆಗ ನಿಮ್ಮದೊಂದು ಪೂರ್ವ ನಿಯೋಜಿತ ಸಾಯುವ ಈ ಯೋಜನೆಯೇ ವಿಫಲವಾದಂತೆ ಅಲ್ಲವೇ.. ಅದಕ್ಕಾಗಿ ನನ್ನದೊಂದು ಸಮಯ  ಸಂದರ್ಭೋಚಿತವಾದ ಸಲಹೆ ಅಷ್ಟೇ. 


ಅವಳು ಮತ್ತೊಮ್ಮೆ ನನ್ನನ್ನೇ ತೀಕ್ಷ್ಣವಾಗಿ ನೋಡಿದಳು.


- ಹೂಂ.. ಮತ್ತೆ ಆ ಎರಡನೆಯ ವಿಷಯ ಯಾವುದು?.. ಅವಳೇ  ಕೇಳಿದಳು. 


- ಈಗ ನೀವು ಕುಳಿತಿದ್ದೀರಿ ಅಲ್ಲವೇ.. ಅಲ್ಲಿ ಬಿಟ್ಟು ಅಂದರೆ ಈ ಸೇತುವೆಯ ನಡುವಿನಲ್ಲಿ ಬಿಟ್ಟು ಈ ನದಿಯಲ್ಲಿ ಎಲ್ಲೇ ಜಿಗಿದರೂ ನೀವು ಸಾಯುವುದೇ ಇಲ್ಲ... ಅಂದೆ.


ಅವಳಿಗೆ ಗೊತ್ತಾಗಲಿಲ್ಲ. 


- ಏಕೆ..? ಕುತೂಹಲದಿಂದಲೇ ಕೇಳಿದಳು. 


- ಏಕೆಂದರೆ ಬೇರೆ ಕಡೆ ಮುಳುಗಿ ಸಾಯುವಷ್ಟು ಈ ನದಿಯಲ್ಲಿ ನೀರೇ ಇಲ್ಲ..ಅಷ್ಟು ಆಳವೂ ಇಲ್ಲ... ಹಾರಿದರೂ ಕೇವಲ ನಿಮ್ಮ ಸೊಂಟ ಅಷ್ಟೇ ಮುರಿಯಬಹುದು ನೋಡಿ... ಅಂದೆ ನಾನು. 


ಹಹ್ಹಾ... ಹಹ್ಹಾ.... ಅವಳೊಮ್ಮೆ ಹಾಗೇ ಜೋರಾಗಿ ನಕ್ಕಳು.


ಸ್ವಲ್ಪ ಸಮಯದವರೆಗೂ ನಗುತ್ತಲೇ ಇದ್ದಳು.


ಸ್ವಲ್ಪ ಹೊತ್ತಾದ ನಂತರ ಹಾಗೇ ಮುಖವನ್ನೊಮ್ಮೆ ಕೈಯಿಂದ ಒರೆಸಿಕೊಂಡು,ನನತ್ತ ತಿರುಗಿದಳು.ಈ ಬಾರಿ ಸೇಬುಗಲ್ಲದ ಮುಖದಲ್ಲೊಂದು ಹೂ ನಗೆಯನ್ನು ಸಹ ಅವಶ್ಯವಾಗಿ ಸಿಕ್ಕಿಸಿಕೊಂಡಿದ್ದಳು.


ಕಡಲೆ ಕೊಡಿ... ನನ್ನತ್ತ ಕೈ ಚಾಚುತ್ತಲೇ ಅಂದಳು. 


ಪ್ಯಾಕೇಟಿನಲ್ಲಿದ್ದ ಒಂದಿಷ್ಟು ಕಡಲೆಗಳನ್ನು ಅವಳ ಕೈಗೂ ಸುರಿದೆ. 


-ಇದನ್ನು ತಿನ್ನಬಹುದು.. ಕಲ್ಲಿನಂತೆ ನೀರಿಗೆ ಎಸೆದು ಇದರಿಂದಲೂ ಬಳೆ ಮೂಡಿಸುವ ಪ್ರಯತ್ನಕ್ಕೆ ಮಾತ್ರ ಕೈ ಹಾಕಬೇಡಿ ಇನ್ನು.. ಅಂದೆ ನಾನು. 


ಅವಳು ಮತ್ತೆ ನಕ್ಕಳು.ಕಲ್ಲು ಬಿಸಾಡುವುದನ್ನು ನಿಲ್ಲಿಸಿ ಕಡಲೆ  ತಿನ್ನಲು ಶುರು ಮಾಡಿದಳು. ನಾನು ಕಡಲೆ ತಿನ್ನುವುದನ್ನು ನಿಲ್ಲಿಸಿ ನನ್ನ ಕೈಯಲ್ಲಿದ್ದ ಕಡಲೆ ಪ್ಯಾಕೇಟ್ ಅನ್ನು ಅವಳ ಕೈಗಿತ್ತು,ಅವಳು ಸೇತುವೆಯ ಕಟ್ಟೆಯಲ್ಲಿ ಪೇರಿಸಿಟ್ಟಿದ್ದ ಕಲ್ಲುಗಳನ್ನು ನದಿ ನೀರಿಗೆ ಎಸೆದು ನೀರ ಬಳೆಗಳನ್ನು ಮೂಡಿಸುವುದರಲ್ಲಿ ನಾನು ತಲ್ಲೀನನಾದೆ.ನಿಜಕ್ಕೂ ಸಮಯ ಕಳೆಯಲಿಕ್ಕೆ ಹೇಳಿ ಮಾಡಿಸಿದ ಆಟ ಅದು,ಆದರೆ ಈ ಸಾಯುವ ಸಮಯದಲ್ಲಿ ಎಲ್ಲಾ ಅಲ್ಲ. 


- ಅದು ಹೌದು.. ನಾನು ಸಾಯಲೇ ಇಲ್ಲಿ ಬಂದು ಕುಳಿತಿದ್ದೇನೆ ಎಂದು ನಿಮಗೆ ಹೇಗೆ ಗೊತ್ತು?.. ಮೆಲ್ಲಗೆ ಅವಳೇ ಕೇಳಿದಳು. 


-ನಮ್ಮೂರಲ್ಲಿ ಈ ರೀತಿಯಾಗಿ ಈ ಸೇತುವೆಯ  ಕಟ್ಟೆ ಹತ್ತಿ ಕುಳಿತುಕೊಂಡಿದ್ದನ್ನು ನಾನಂತು ಇಲ್ಲಿಯವರೆಗೂ ನೋಡಿಯೇ ಇಲ್ಲ.ಬಹುಶಃ ನಿಮಗೆ ಜೀವನದಲ್ಲಿ ಸಾಯಲು ಬಲವಾದ ಕಾರಣವೇ ಇರಬೇಕು ಬಿಡಿ.. ಇಲ್ಲದಿದ್ದರೆ ಇಂತಹದ್ದೊಂದು ಕಠಿಣ ನಿರ್ಧಾರಕ್ಕೆ ನೀವು ಬರಲಾರಿರಿ.ಆದರೆ ನಾನು ಅದು ಏನೆಂದು  ನಿಮ್ಮಲ್ಲಿ ಕೇಳುವುದಿಲ್ಲ.. ನೀವಾಗಿ ಹೇಳಿದರೆ ಮಾತ್ರ ಖಂಡಿತವಾಗಿಯೂ ಕೇಳಿಸಿಕೊಳ್ಳುತ್ತೇನೆ...ಎಂದು ಹೇಳಿದೆ ನದಿ ನೀರಿಗೆ ಕಲ್ಲು ಬಿಸಾಡಿ ನೀರ ಬಳೆ ಮೂಡಿಸತೊಡಗಿದೆ. 


- ಬೇಡಾ..ಬೇಡಾ..ನಾನು ಹೇಳುವುದಕ್ಕಿಂತಲೂ ಅದನ್ನೂ ಸಹ ನೀವೇ ಏನಾದರೊಂದು ಯೋಚಿಸಿ ಹೇಳಿ ಬಿಡಿ,ಏನಿರಬಹುದು ಅಂತಹದ್ದೊಂದು ಬಲವಾದ ಕಾರಣ ಎಂದು...ನನಗೂ ನಿಮ್ಮ ಈ ಯೋಚನೆ ಆಲೋಚನೆಗಳನ್ನು ತಿಳಿಯಲು ತುಂಬಾ ಕುತೂಹಲವಾಗುತ್ತಿದ್ದೆ.... ಕೈಯಲ್ಲಿದ್ದ ಕಡಲೆ ತಿನ್ನುತ್ತಲೇ ನನಗೊಂದು ಹೊಸ ಟಾಸ್ಕ್ ಕೊಟ್ಟು ಬಿಟ್ಟಳು ಆ ಹುಡುಗಿ. 


- ಶತ್ರು ಪೀಡೆ,ಸಾಲ ಭಾಧೆ,ಮಾಟ ಮಂತ್ರ ದೋಷ,ಸ್ತ್ರೀ ಪುರುಷ ವಶೀಕರಣದ ಸಮಸ್ಯೆ ಆ ತರಹದ್ದು ಏನೂ ಇರಲಿಕ್ಕಿಲ್ಲ..ಇದ್ದಿದ್ದರೆ ಅದಕ್ಕೆ ಮಂತ್ರವಾದಿಗಳ ಬಳಿ ಹೋದರೆ ಎಲ್ಲವೂ ರಪಕ್ಕನೇ ಪರಿಹಾರ ಸಿಕ್ಕಿ ಬಿಡುತ್ತದೆ..ಅಂದೆ.


ಹಹ್ಹಾ... ಹಹ್ಹಾ..ಹ್ಞೂಂ ಆಮೇಲೆ ಮತ್ತೆ... ಜೋರಾಗಿ ನಗುತ್ತಲೇ ಕೇಳಿದಳು. 


- ಈ ಪ್ರೇಮ ವೈಫಲ್ಯದ ಸಮಸ್ಯೆ ಇರುವುದು ಮೇಲ್ನೋಟಕ್ಕೆಎಲ್ಲೂ ಎದ್ದು ಕಾಣುತ್ತಿಲ್ಲವಲ್ಲ.. ಅಂದೆ. 


ಹೌದೇ? ಏಕೆ ಕಾಣುತ್ತಿಲ್ಲ... ಅವಳು  ಬಹಳ ಕುತೂಹಲದಿಂದಲೇ ಈ ಬಾರಿ ಕೇಳಿದ್ದಳು. 


-ನಿಮ್ಮನ್ನು ನೋಡುವಾಗ ಈ ಪ್ರೀತಿ ಗೀತಿ ಎಲ್ಲಾ ಮಾಡುವವರಂತೆ ಕಾಣುತ್ತಿಲ್ಲ.. ಅಂದೆ ನಾನು. 


- ಅದು ಹೇಗೆ ನೋಡಿದ ಕೂಡಲೇ ನಿಮಗೆ ಇದೆಲ್ಲಾ ಗೊತ್ತಾಗಿ ಬಿಡುತ್ತದೆ.. ಅವಳು ಕೇಳಿದಳು. 


-ಅದೆಲ್ಲಾ ಹಾಗೆಯೇ..ಈ ವಿಶೇಷ ಶಕ್ತಿ,ದಿವ್ಯ ದೃಷ್ಟಿ ಆ ತರಹ ಎಲ್ಲಾ ಏನೂ ಅಲ್ಲ,ನೋಡಿದ ಕೂಡಲೇ ಒಂದು ಅಂದಾಜಿನಲ್ಲಿ ಇವೆಲ್ಲಾ ಹೇಳಿ ಬಿಡಬಹುದು...ಅಂದೆ. 


-ನಿಮಗೂ ಕೂಡ ಅಂತಹ ಸಮಸ್ಯೆ ಇರಲಿಕ್ಕಿಲ್ಲ,ಪ್ರೀತಿ ಪ್ರೇಮ  ಕೂಡ ಇರಲಿಕ್ಕಿಲ್ಲ ಬಿಡಿ.. ಅಂದಳು ಅವಳು ಬಹಳ ಆತ್ಮ ವಿಶ್ವಾಸದಿಂದಲೇ. 


ಅದು ಹೇಗೆ..? ನಾನೂ ಕೇಳಿದೆ. 


-ಈ ರೀತಿ ತಲೆ ತಿನ್ನುತ್ತಿದ್ದರೆ ಯಾವ ಹುಡುಗಿ ತಾನೇ ನಿಮ್ಮನ್ನು ಪ್ರೀತಿ ಮಾಡಲು ಸಾಧ್ಯ ಹೇಳಿ...ಅಂದಳು ನಗು  ನಗುತ್ತಲೇ. 


ಹಹ್ಹಾ... ಹಹ್ಹಾ... ಅವಳ ಆ ಮಾತಿಗೆ ನನಗೂ ಜೋರಾಗಿ ನಗು ಬಂತು.. ಏಕೆಂದರೆ ಮಾತಿನಲ್ಲಿ ಸತ್ಯವಿತ್ತು,ಅದಕ್ಕಾಗಿ ಆ ಮಾತಿಗೆ ನನ್ನದೊಂದು ತುಂಬು ಹೃದಯದ ಮೆಚ್ಚುಗೆ ಹಾಗೂ ಬಹಳಷ್ಟು ಸಹಮತವಿತ್ತು. 


ನಾನು ನಕ್ಕಿದ್ದು ನೋಡಿ ಅವಳು ಮತ್ತಷ್ಟು ಪುಷ್ಕಳವಾಗಿ ನಕ್ಕಳು. 


- ಅಂದ ಹಾಗೆ ನಾನು ಸಾಯಲು ಬಂದವಳು ಅಲ್ಲ... ಅಂದಳು. 


-ಹೌದಾ.. ಶೇ,ಹಾಗಾದರೆ ನೀವು ಸಾಯಲು ಬಂದವರು ಅಲ್ವಾ.? ಮತ್ತೇಕೆ ಇಲ್ಲಿ ಹತ್ತಿ ಕುಳಿತುಕೊಂಡಿದ್ದು...ಕೇಳಿದೆ.


ಹೀಗೆ ಸುಮ್ಮನೆ... ಅಂದಳು. 


ನೀವು ಈಗ ಕೆಳಗೆ ಹಾರಿ ಸಾಯುತ್ತೀರಿ ಎಂದು ನಾನು ಏನೇನೋ ಕನಸು ಕಂಡಿದ್ದೆ .. ಅಂದೆ. 


ನಿರಾಶೆ ಆಯಿತೇ... ಅವಳು ಮತ್ತೆ ನಗುತ್ತಾ ಕೇಳಿದಳು.


ಹಾಗೇನಿಲ್ಲ.. ನಿಮಗೆ ಸಾಯಲು ಸಹಾಯ ಮಾಡುವ ಅವಕಾಶವೊಂದು ಕೈ ತಪ್ಪಿ ಹೋಯಿತಲ್ಲ ಎಂದಷ್ಟೇ ಬೇಜಾರು.. ಅಂದೆ ನಾನು. 


- ಯಾಕೆ,ನಿಮಗೆ ಈ ಸಹಾಯ ಮಾಡುವುದೆಂದರೆ ಅಷ್ಟೊಂದು ಆಸಕ್ತಿ..ಕೇಳಿದಳು. 


-ದಿನ ನಿತ್ಯ ಮಾಡುವುದೇ ಅದನ್ನೇ ಅಲ್ವೇ.. ಅಂದೆ. 


-ಅಂದರೆ..ಸಾಯುವವರಿಗೆ ಸಿಕ್ಕಾಪಟ್ಟೆ ಪ್ರೋತ್ಸಾಹ ಕೊಡುವುದು ಹಾಗೂ ಸಾಯಲು ಇನ್ನಿಲ್ಲದಂತೆ ಸಹಾಯ ಮಾಡುವುದೇ?.. ಅವಳು ಕೇಳಿದಳು. 


- ಅಲ್ಲ..ಅಲ್ಲ...ಅದಲ್ಲ,ಸಹಾಯ ಅಂದರೆ ಸೇವೆ..ನಾನಾ ರೀತಿಯ ಸಮಾಜ ಸೇವೆಗಳು.. ಅಂದೆ ನಾನು. 


-ಸಮಾಜ ಸೇವೆಯೇ? ಯಾವ ರೀತಿಯ ಸಮಾಜ ಸೇವೆ ನೀವು ಮಾಡುತ್ತೀರಿ.. ಕಡಲೆ ತಿನುತ್ತಲೇ ನನ್ನ ಕೈಗೂ ಒಂದಿಷ್ಟು ಕಡಲೆ ಸುರಿದು ಬಹಳ ಕುತೂಹಲದಿಂದ ಕೇಳಿದಳು ಅವಳು. 


- ಸಮಾಜ ಸೇವೆ ಅಂದರೆ ಅದೇ ಈ ನಮ್ಮ ಪುಲ್ಕಿಯ ಜನರನ್ನು ಒಟ್ಟು ಸೇರಿಸಿಕೊಂಡು ಊರಿನಲ್ಲಿ ನಿರಂತರವಾದ ಪ್ರತಿಭಟನೆ,ಹರತಾಳ,ರಸ್ತೆ ರೋಕೋ,ರೋಡಿನ ಗುಂಡಿಯಲ್ಲಿ ಬಾಳೆಗಿಡ ನೀಡುವುದು, "ನೀರಿಗಾಗಿ ಪ್ರಾಣ ಕೊಟ್ಟೆವು " ಚಳುವಳಿ ಮಾಡುವುದು,ಪುಲ್ಕಿ ಗ್ರಾಮ ಪಂಚಾಯಿತಿ ಎದುರು ಧರಣಿ ಕೂರುವುದು,ಸಮಸ್ಯೆ ಪರಿಹಾರಕ್ಕಾಗಿ ಆಮರಣಾಂತ ಉಪವಾಸ ಮಾಡುವುದು ಹೀಗೆ ಜನರಿಗೋಸ್ಕರ ಜನರನ್ನು ಒಟ್ಟುಗೂಡಿಸಿ ನಮ್ಮದೊಂದು ಒಂದಲ್ಲಾ ಒಂದು ರೀತಿಯ ಸಮಾಜ ಸೇವೆ... ಅಂದೆ ಅವಳು ಕೈಗೆ ಸುರಿದ ಕಡಲೆಗಳನ್ನು ತಿನ್ನುತ್ತಲೇ.


- ಇದಕ್ಕೆಲ್ಲಾ ಹಣ ಖರ್ಚಾಗಲ್ವಾ..? ಅವಳೇ ಕೇಳಿದಳು. 


- ಆಗುತ್ತೆ..


-ಎಲ್ಲಾ ನಿಮ್ಮದೇ ಖರ್ಚಾ? 


- ಇಲ್ಲ..ಇಲ್ಲ..ಖರ್ಚು ಎಲ್ಲಾ ನಮ್ಮ ಊರಿನ ಬಡವರ ಬಂಧು, ಕೊಡುಗೈ ದಾನಿ,ರೈತ ಮಿತ್ರ ನಮ್ಮ ದಾಮಣ್ಣನದ್ದು.ಒಳ್ಳೆಯ ರೀತಿಯಲ್ಲಿ ಹೋರಾಟಗಳನ್ನು ಆಯೋಜನೆ ಮಾಡುವುದಷ್ಟೇ ನನ್ನ ಕೆಲಸ.


- ಒಳ್ಳೆಯ ರೀತಿಯಲ್ಲಿ ಆಯೋಜನೆ  ಅಂದರೆ?.. ಅರ್ಥವಾಗದೇ ತಲೆ ಕೆರೆದುಕೊಂಡು ಕಡಲೆ ತಿನುತ್ತಲೇ ಅವಳು ಕೇಳಿದಳು. 


- ಒಳ್ಳೆಯ ರೀತಿಯಲ್ಲಿ ಅಂದರೆ.... ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಉಪ್ಪಿಟ್ಟು, ಶೀರಾ, ಟೀ, ಕಾಫಿ ಇತ್ಯಾದಿಗಳ ಫಳಾರ ಸೇವನೆ ಆಗಿಯೇ ಉಗ್ರ ಹೋರಾಟ ಆರಂಭವಾಗುವಂತೆ  ನೋಡಿಕೊಳ್ಳುವುದು.ಮಧ್ಯಾಹ್ನ ಆದ ಕೂಡಲೇ ಒಂದೊಳ್ಳೆಯ ಬಿಸಿ ಬಿಸಿ ಊಟದ ವ್ಯವಸ್ಥೆ.ಆ ನಂತರ ಒಂದು ಗಂಟೆ ಹೋರಾಟಕ್ಕೆ ಕಡ್ಡಾಯ ರೆಸ್ಟ್. ನಿದ್ದೆ ಮಾಡುವವರಿಗೆಂದೇ ಚಾಪೆ ಹಾಕಿ ನಿದ್ದೆ ಮಾಡಲು ಅವಕಾಶ ಕಲ್ಪಿಸುವುದು.ನಂತರ ಪುನಃ ಉಗ್ರ ಹೋರಾಟದ ಮುಂದುವರಿಕೆ.ಸಂಜೆ ನಾಲ್ಕು ಗಂಟೆಗೆ ಚಹಾ ಜೊತೆಗೆ ತಿನ್ನಲು ಬನ್ಸ್, ಪೋಡಿ,ಗೋಳಿಬಜೆ ಇತ್ಯಾದಿ ಬಿಸಿಬಿಸಿಯಾಗಿ ಗರಿಗರಿಯಾಗಿರುವಂತೆ ನೋಡಿಕೊಳ್ಳುವುದು..ಆಮೇಲೆ ಪುನಃ ಉಗ್ರ ಹೋರಾಟ. ಹೆಚ್ಚೆಂದರೆ 4.30 ಕ್ಕೆ ಹೋರಾಟ ಗಳನ್ನು ನಾವೇ ಅಂತ್ಯ ಮಾಡಿ ಸಾರ್ವಜನಿಕರಿಗೆ ಇನ್ನಿಲ್ಲದಂತೆ ಸಹಕರಿಸುತ್ತೇವೆ.ಏನೇ ಮಾಡಿದರೂ ನಾವು ಸಮಾಜದ ಹಿತಕ್ಕಾಗಿಯೇ ಮಾಡುತ್ತೇವೆ. 


- ಓಹ್.. ಹಾಗಾದರೆ ಊರ ಜನರೆಲ್ಲಾ ನಿಮ್ಮ ಹೋರಾಟದಲ್ಲಿಯೇ ತುಂಬಿ ತುಳುಕುತ್ತಾರೆ ಎಂದೇ ನನಗನಿಸುತ್ತದೆ.... ಫಳಾರ, ಭೋಜನ, ಸಂಜೆಗೊಂದು ಚಹಾ.. ಬಹಳ ಚೆನ್ನಾಗಿದೆ.. ಬಹಳ ಚೆನ್ನಾಗಿದೆ. ಒಂದೊಳ್ಳೆಯ ಜಾತ್ರೆಯ ಆಯೋಜನೆಯಂತೆಯೇ ಇದೆ ನಿಮ್ಮ ಈ ಹೋರಾಟಗಳು..ಹೋಟೆಲಿನವನಿಗಂತು ಬಹಳ ಒಳ್ಳೆಯ ವ್ಯಾಪಾರ..ಅಂದಳು ಮುಸಿ ಮುಸಿ ನಗುತ್ತಾ.


- ನಮ್ಮದು ಯಾವತ್ತು ಮಾಬಲಣ್ಣನ ಖಾಯಂ ಹೋಟೆಲ್.. ಅಂದೆ ನಾನು ಅವಳ ಬಳಿಯಿಂದ ಮತ್ತಷ್ಟು ಕಡಲೆ ತೆಗೆದುಕೊಳ್ಳುತ್ತಾ. 


-ಹಹ್ಹಾ.. ಹಹ್ಹಾ.. ಅದೇ ಅವರದ್ದೊಂದು ಚಾನ್ಸ್,ಅದೂ ನಿಮ್ಮ ದೆಸೆಯಿಂದ..ಬಹುಶಃ ನಿಮ್ಮ ಹೋರಾಟಗಳಿಗೆ ಎಲ್ಲರಿಗಿಂತ ಹೆಚ್ಚಿನ ಬೆಂಬಲ ಅವರೇ ಮನಸ್ಸಿನಿಂದ ಹೃದಯದಿಂದ ಸೈಲೆಂಟ್ ಆಗಿ ನಿರಂತರವಾಗಿ ಕೊಡುತ್ತೀರುತ್ತಾರೆ ಎಂದೇ ಈಗ ನನಗನಿಸುತ್ತಿದೆ.. ಅಂದಳು ಮತ್ತಷ್ಟು ನಗುತ್ತಾ. 


-ನೀವೂ ಕೂಡ ನಮ್ಮ ಹೋರಾಟಗಳಿಗೆ ಸಾಥ್ ಕೊಟ್ಟರೆ, ನಮ್ಮೊಂದಿಗೆ ಭಾಗಿಯಾದರೆ ನಮಗೆ ಆಗ ಆನೆ ಬಲವೇ  ಬಂದಂತಾಗುವುದು.. ಅಂದೆ ನಾನು.


-ಆಯಿತು ಬರುವ.. ಬರುವ.. ಖಂಡಿತಾ ಬರುವ. ಅಂದ ಹಾಗೆ ಇನ್ನು ನಾನು ಕೂಡ ನಿಮ್ಮ ಪುಲ್ಕಿಯವಳೇ ಗೊತ್ತುಂಟಾ.. ಅಂದಳು ಹುಡುಗಿ. 


ಅಂದರೆ..? ಅರ್ಥವಾಗದೇ ಕೇಳಿದೆ. 


ನನಗೆ ಇಲ್ಲೇ ಕೆಲಸ ಆಗಿದೆ.. ಅಂದಳು. 


ಎಲ್ಲಿ..? ಕೇಳಿದೆ. 


ಬ್ಯಾಂಕ್ ನಲ್ಲಿ.. ಅಂದಳು. 


ಹೌದೇ.. ಒಳ್ಳೆಯ ವಿಷಯ.ಪುಲ್ಕಿ ಗ್ರಾಮದ ಹತ್ತು ಸಮಸ್ತ ಪರವಾಗಿ ನಮ್ಮೂರಿಗೆ ನಿಮಗಿದೋ ಹಾರ್ದಿಕವಾದ ಸ್ವಾಗತ..ಅಂದೆ ನಾನು ನಗುತ್ತಾ


- ತುಂಬಾ ಥ್ಯಾಂಕ್ಸ್..ಅಂದಳು. 


- ಥ್ಯಾಂಕ್ಸ್ ಎಲ್ಲಾ ಎಂತಕ್ಕೆ.. ನಮ್ಮ ಊರಲ್ಲಿ ನಿಮಗೆ ಏನೇ ಸಮಸ್ಯೆ ಆದರೂ ನನ್ನಲ್ಲಿ ಹೇಳಿ,ಕೂಡಲೇ ಪರಿಹರಿಸಿ ಕೊಡುವ,ಅಂದ ಹಾಗೆ ಪುಲ್ಕಿಯಲ್ಲಿ ನನ್ನ ಮಾತು ನಡೆಯುತ್ತದೆ ಗೊತ್ತಾ..ಜಸ್ಟ್ ಈ ನೀಲು ಹೆಸರು ಹೇಳಿ ನೋಡಿ ಅಷ್ಟೇ ಸಾಕು. 


- ಅಂದ ಹಾಗೆ ನೀವು ಕೆಲಸ ಎಲ್ಲಾ ಏನೂ ಮಾಡಲ್ವಾ?...ಅವಳೇ  ಕೇಳಿದಳು. 


- ಸದ್ಯಕ್ಕಂತು ಇಲ್ಲ..ಕೆಲಸ ಸಿಗುವವರೆಗೆ ಇದೇ ನನ್ನ ಕೆಲಸ.


- ಮತ್ತೆ ಹೊಟ್ಟೆಗೆ ಏನು ಮಾಡ್ತೀರಾ..? 


- ಹೊಟ್ಟೆಗೆ ?.. ಹೊಟ್ಟೆಗೆ ಎಂತ.. ಈ ರಪಕ್ಕ ಆಗುವ ಮ್ಯಾಗಿ ತಿಂತೇನೆ,ಸಮಯಕ್ಕೆ ಸರಿಯಾಗಿ ಊಟ ಮಾಡ್ತೇನೆ,ತಿಂಡಿ ತಿಂತೇನೆ. ಹೀಗೆ ಮನುಷ್ಯರು ತಿನ್ನುವ ಎಲ್ಲಾ ನಾನು ಸಹ ತಿಂತೇನೆ. 


ಅವಳನ್ನು ನನ್ನನ್ನೇ ನೋಡಿ ಹಾಗೇ ನಕ್ಕಳು. 


- ಅಂದ ಹಾಗೆ, ಒಂದು ಸಮಸ್ಯೆ ಇದೆ ನೀಲು ಅವರೇ.. 


- ನೀವು ಅವರೆಕಾಯಿ ಪ್ರೇಮಿಯಾ?.. ಕೇಳಿದೆ. 


- ಇಲ್ಲ... ಯಾಕೆ?.. ಕೇಳಿದಳು. 


- ಮತ್ತೆ ಈ ಅವರೆ ಗಿವರೆ ಎಲ್ಲಾ ಯಾಕೆ... ಏಕವಚನದಲ್ಲಿಯೇ ನೀಲು ಅಂತ ಪ್ರೆಂಡ್ಲಿಯಾಗಿ ಕರೆಯಬಹುದು ಅಲ್ವಾ.. ನೋಡಿ,ನನ್ನನ್ನು ಊರಿನಲ್ಲಿ ಎಲ್ಲರೂ ನೀಲು ಎಂದೇ ಕರೆಯುವುದು.. ನೀವೂ ಹಾಗೇ ಕರೆಯಬಹುದು ಏನೂ ತೊಂದರೆ ಇಲ್ಲ.. ಅಂದೆ. 


- ಓಹ್.. ಹಾಗೆಯಾ.. ಹಹ್ಹಾ ಹಹ್ಹಾ.. ಮತ್ತೆ ನೀನು ಮಾತ್ರ ಆವಾಗದಿಂದ ನನ್ನನ್ನು ಬಹುವಚನ ದಲ್ಲಿಯೇ ಮಾತಾಡಿಸುತ್ತಿದ್ದಿ ಅಲ್ವೇ.. ಅಂದಳು ಮೆಲ್ಲಗೆ ನಗುತ್ತಾ. 


- ಹಹ್ಹಾ.. ಹಹ್ಹಾ.. ಹೌದಲ್ಲಾ.. ಆಯಿತು ಹೇಳು,ಏನು ನಿನ್ನ ಸಮಸ್ಯೆ? ನನ್ನಲ್ಲಿಯೇ ಹೇಳು.. ಈ ನೀಲು ಇರುವುದೇ ಸಮಾಜದ ಎಲ್ಲಾ ರೀತಿಯ ಸೇವೆಗಾಗಿ.. ಅಂದೆ ನಾನು. 


ನಾನು ಏಕವಚನದಲ್ಲಿ ಬಹಳ ಸಹಜವಾಗಿಯೇ ಪರಿಚಯದ  ಸ್ನೇಹಿತನಂತೆ ಮಾತಾಡಿಸಿದ್ದು ನೋಡಿ ಅವಳು ಹಾಗೇ ನಕ್ಕಳು...ಬಹುಶಃ ಅದು ಅವಳಿಗೂ ಇಷ್ಟವಾಯಿತೆಂದು  ಕಾಣುತ್ತದೆ.


- ಅಂತಹ ದೊಡ್ಡ ಸಮಸ್ಯೆ ಏನಿಲ್ಲ ನೀಲು..ಈ ಊರಲ್ಲಿ ನನಗೆ ಪರಿಚಯದವರು ಅಂತಹ ಯಾರೂ ಇಲ್ಲ,ಬಾಡಿಗೆಯ ಮನೆ ಕೂಡ ಸಿಕ್ಕಾಪಟ್ಟೆ ಬೋರು ಅನಿಸುತ್ತದೆ.ಸುತ್ತ ಮುತ್ತ ಕೂಡ ಯಾರೂ ಇಲ್ಲ.ಬರೀ ಗುಡ್ಡ  ಅಷ್ಟೇ ಇರುವುದು.ಬಿಡುವಿನ ವೇಳೆಯಲ್ಲಿ ಸಮಯ ಕಳೆಯುವುದೇ ತುಂಬಾ ಕಷ್ಟ.ಊರು ಸುತ್ತೋಣ ಎಂದರೆ ಯಾವುದೂ ಜಾಸ್ತಿ ಗೊತ್ತಿಲ್ಲ.ಅದಕ್ಕಾಗಿಯೇ ನೋಡು ಮಕ್ಕಳಂತೆ ಕಲ್ಲು ಒಟ್ಟು ಮಾಡಿಕೊಂಡು ಈ ಸೇತುವೆಯ ಕಟ್ಟೆ ಹತ್ತಿ ನದಿ ನೀರಿಗೆ ಕಲ್ಲೆಸೆದುಕೊಂಡು ಕುಳಿತಿದ್ದೇನೆ.. 


- ಅಯ್ಯೋ.. ಅಷ್ಟೇಯಾ.. ಅದಕ್ಕೆ ಯಾಕೆ ಇಷ್ಟೊಂದು ಚಿಂತೆ. ನಮ್ಮ ಮನೆಯ ಬಳಿ ನನ್ನದೊಂದು ದೊಡ್ಡ ಬಳಗವೇ ಇದೆ.ಮನೆಯಲ್ಲಿ ನನ್ನ ಅಪ್ಪ ನೀಲಣ್ಣ ಇದ್ದಾರೆ,ನನಗೆ ದಿನನಿತ್ಯ ಎಷ್ಟೇ ಸಿಕ್ಕಾಪಟ್ಟೆ  ಬೈದರೂ ಅವರನ್ನು ದೇವರಂತಹ ಮನುಷ್ಯ ಎಂದು ಸಮಾಜವೇ ಹೇಳುತ್ತದೆ.ಮನೆಯ ಮೇಲಿನ ಮಹಡಿಯಲ್ಲಿ ಬಾಲ್ಯದ ಗೆಳತಿ ಅನುರಾಧ ಅವಳ ಪುಟ್ಟ ಮಗಳೊಂದಿಗೆ ಬಾಡಿಗೆಗೆ ಇದ್ದಾಳೆ.ಅವಳೊಂದಿಗೆ ಮಾತು ಯಾವತ್ತೂ ಬೋರ್ ಹಿಡಿಸುವುದಿಲ್ಲ.ಅಕ್ಕರೆಯ ಗಣಿ ಅವಳು.ನಮ್ಮನೆಯ ಒಂದು ಸೈಡಿನಲ್ಲಿ ದೊಡ್ಡಪ್ಪನ ಮನೆ ಇದೆ, ಅಲ್ಲಿ ಸದಾ ನಗು ನಗುತ್ತಲೇ ಇರುವ ದರ್ಶನ್ ದೊಡ್ಡಪ್ಪ,ರಕ್ಷಿತಾ ದೊಡ್ಡಮ್ಮ ಇದ್ದಾರೆ,ಮುರ್ಲಿ ಅಣ್ಣ ಹಾಗೂ ತಂಗಿ ಇಂಪನ ಕೂಡ  ಇದ್ದಾಳೆ.ದೊಡ್ಡಮ್ಮನ ಚಹಾ ಸೂಪರ್.ನಮ್ಮನೆಯ ಮತ್ತೊಂದು ಸೈಡಿನಲ್ಲಿ ಮಿಲಿಟ್ರಿ ಅಂಕಲ್ ಮೋನಪ್ಪ ಇದ್ದಾರೆ,ಅವರು ಭಯಂಕರ ಶಿಸ್ತಿನ ಜನ ಆದರೂ ಅಷ್ಟೇ ಜ್ವಾಲಿ ಕೂಡ ಇದ್ದಾರೆ, ಅವರಿಗೆ ಬುಲೆಟ್ ಭಾಮ ಅಂತ ಮಗಳು ಕೂಡ ಇದ್ದಾಳೆ,ಅವಳು ಮಾತು ಕಡಿಮೆ ಆದರೂ ಬುಲೆಟ್ ಮಾತ್ರ ಬಹಳ ಚೆನ್ನಾಗಿಯೇ ಬಿಡುತ್ತಾಳೆ.ಕೆಳಗಿನ ಬೈಲು ಮನೆಯಲ್ಲಿ ಅಂಬಕ್ಕ ಮತ್ತು ಕಾಂತಪ್ಪಣ್ಣನ ಮನೆ, ತೋಟ ಹಾಗೂ ಬೈಲುಗದ್ದೆ ಇದೆ.ಅಲ್ಲಿ ರುಕ್ಕು ಇದ್ದಾಳೆ,ಅವಳ ತಮ್ಮ ಹಾಗೂ ನನ್ನ ಬಲಗೈ ಬಂಟ ಪೊಲ್ಲ ಇದ್ದಾನೆ.ಹೀಗೆ ನಮ್ಮದೆಲ್ಲಾ ದೊಡ್ಡ ಗ್ಯಾಂಗೇ  ಉಂಟು ಅಲ್ಲಿ ...ನಿನಗೆ ಬರಬೇಕು ಎಂದು ಅನಿಸುವಾಗಲೆಲ್ಲಾ, ಬಿಡುವು ಇರುವಾಗಲೆಲ್ಲಾ  ನಮ್ಮ ವಠಾರದತ್ತ ಬಾ,ಹೊಟ್ಟೆ ತುಂಬುವಂತೆ ಊಟ ಮಾಡಬಹುದು,ಹೊಟ್ಟೆ ಹುಣ್ಣಾಗುವಂತೆ ನಗಬಹುದು..ತಲೆಹರಟೆಯನ್ನು ಕೂಡ ಸಿಕ್ಕಾಪಟ್ಟೆ ಅಲ್ಲಿ  ಮಾಡಬಹುದು.. ಹಹ್ಹಾ.. ಹಹ್ಹಾ


- ಮತ್ತೆ ಪ್ರತಿಭಟನೆ? ನಗುತ್ತಲೇ ಕೇಳಿದಳು. 


- ಹಹ್ಹಾ.. ಅದೂ ಕೂಡ ನಿರಂತರವಾಗಿ ಇದ್ದೇ ಇದೆ.ನಿನಗೆ ಗೊತ್ತಾ ಈ ಪೊಲ್ಲ,ರುಕ್ಕು,ಭಾಮ, ಮುರ್ಲಿ ಅಣ್ಣ ಎಲ್ಲಾ ನಮ್ಮ ಹೋರಾಟಗಳಲ್ಲಿ ಬಹಳ ಸಕ್ರಿಯವಾಗಿಯೇ  ಭಾಗವಹಿಸುತ್ತಾರೆ ...


- ಹಾಗಾದರೆ ನಾನು ಕೂಡ ಅಷ್ಟೇ ಉಲ್ಲಾಸ ಉತ್ಸಾಹದಿಂದ ನಿಮ್ಮ ಗ್ಯಾಂಗ್ ನೊಂದಿಗೆ ಸೇರಿ ಪ್ರತಿಭಟನೆಯಲ್ಲಿ ಕೂಡ ಭಾಗವಹಿಸಬೇಕು ಎಂದೇ ನೀನು ಹೇಳುತ್ತಿದ್ದಿ ಅಲ್ವೇ.. ಅಂದಳು ನಗುತ್ತಲೇ.


- ಅಷ್ಟು ಮಾತ್ರವಲ್ಲ... ಘೋಷಣೆಗಳನ್ನು ಕೂಡ ಕಂಠಪಾಠ ಮಾಡಿಕೊಂಡಿರಬೇಕು ನೀನು.. ಮುಂದೆ ಕೂಗಲು ಬೇಕಾಗುತ್ತದೆ. 


- ಘೋಷಣೆಯೇ? ಏನದು ಘೋಷಣೆ.


- ಘೋಷಣೆ ಗೊತ್ತಿಲ್ವಾ.... ಅದೇ,


 "ಏತಕ್ಕಾಗಿ ಹೋರಾಟ...ನ್ಯಾಯಕ್ಕಾಗಿ ಹೋರಾಟ" ,


"ಏನೇ ಬರಲಿ...ಒಗ್ಗಟ್ಟಿರಲಿ...",


"ಪ್ರತಿಭಟನೆ...ಚಿರಾಯುವಾಗಲಿ..."  ಎಂದು ಹೇಳಿ ಮುಗಿಸಿದೆ. 


ಅವಳು ಹಾಗೇ ನಕ್ಕಳು.


ನಾನು ಅವಳಿಗೆ ಈಗಲೇ ಅಭ್ಯಾಸ ಆಗಿ ಬಿಡಲಿ ಎಂದು ಅವಳೆದುರು ಮತ್ತೊಮ್ಮೆ ಜೋರಾಗಿಯೇ ಹೇಳಿದೆ...


- " ಏತಕ್ಕಾಗಿ ಹೋರಾಟ.." 


ನನ್ನತ್ತ ತಿರುಗಿ ಆ ಸೇತುವೆಯ ನಡುವಿನಿಂದಲೇ ಕಟ್ಟೆಯ ಮೇಲೆ ಕುಳಿತಲ್ಲಿಂದಲೇ ಅವಳು ಕೂಡ ಬಹಳಷ್ಟು ಜೋರಾಗಿಯೇ ಹೇಳಿದ್ದಳು..." ನ್ಯಾಯಕ್ಕಾಗಿ ಹೋರಾಟ.." 


ಇಬ್ಬರೂ ಒಟ್ಟಿಗೆ ಮನಸ್ಸು ಹಗುರವಾಗಂತೆ ನಕ್ಕು ಬಿಟ್ಟೆವು. 


ಅವಳ ಕೈಯಲ್ಲಿದ್ದ ಕಡಲೆ ಇಬ್ಬರು ತಿಂದು ತಿಂದು ಖಾಲಿಯಾಗಿತ್ತು. ಸೇತುವೆಯ ಕಟ್ಟೆಯಲ್ಲಿದ್ದ ಕಲ್ಲು ನೀರಿಗೆ ಎಸೆದು ಎಸೆದು ನದಿಯ ತಳ ಸೇರಿತ್ತು.


ಹವಳಗೆಂಪಿನ ಸಂಜೆ ಹಾಗೇ ಕಡುಗತ್ತಲಿನತ್ತ ತಿರುಗುವಾಗ ಇಬ್ಬರೂ ಅಲ್ಲಿಂದ ಎದ್ದೇಳಲು ನಿರ್ಧರಿಸಿದೆವು.


ಮೊದಲು ನಾನು ಇಳಿದೆ.


ನಂತರ ಅವಳು ಕೆಳಗಿಳಿಯಲು ಸಹಾಯ ಆಗುವಂತೆ ಅವಳತ್ತ ನಾನು ಕೈ ಚಾಚಿದೆ.


ಅವಳೂ ಕೆಳಗಿಳಿದವು.


ನಮ್ಮ ಊರಿನಲ್ಲಿಯೇ ಇದ್ದ ಆ ಸೇಬುಗಲ್ಲದ  ಹುಡುಗಿಯ ಬಾಡಿಗೆ ರೂಮಿಗೆ ಅವಳನ್ನು ಬಿಟ್ಟು ಬರುವುದಕ್ಕಾಗಿ, ನಾನು ಸಹ ಅವಳೊಂದಿಗೆಯೇ ಆ ಕತ್ತಲಿನಲ್ಲಿ ಹಾಗೇ ಹೆಜ್ಜೆ ಹಾಕತೊಡಗಿದೆ. 


- ಅದು ಹೌದು... ನೀನು ನಿನ್ನ ಹೆಸರೇ ಹೇಳಲೇ ಇಲ್ಲ.


- ನನ್ನದಾ..? ನೀನು ಕೇಳಲಿಲ್ಲ, ಅದಕ್ಕಾಗಿ ನಾನು ಹೇಳಲಿಲ್ಲ.


- ಓಹ್ ಹೌದಲ್ಲ.. ಆಯಿತು ಹಾಗಾದರೆ,ಈಗ ಹೇಳು ಏನು ನಿನ್ನ  ಹೆಸರು ? 


- ನನ್ನ ಹೆಸರು "ಪೌರ್ಣಮಿ".


- ಒಂಥರಾ ಚೆನ್ನಾಗಿದೆ ಅಲ್ವಾ.


- ನನ್ನ ಹೆಸರಿಗಿಂತಲೂ ನಿನ್ನ ಹೆಸರೇ ಇನ್ನೂ ಚೆನ್ನಾಗಿದೆ.. "ನೀಲಮೇಘ" , ಆಹಾ ಎಷ್ಟು ಚಂದದ ಹೆಸರು.ಆದರೆ ನೀನು ಮಾತ್ರ ಪದೇ ಪದೇ "ನಾನು ನೀಲು..ನಾನು ನೀಲು " ಎಂದು ಹೇಳಿಕೊಳ್ಳುವಾಗ ಒಳ್ಳೆ ಕಾಮಿಡಿ ತರಹ ಕಾಣ್ತದೆ ನೋಡು..ಆದರೂ ನಿನಗೆ ನಿನ್ನ ಈ ವರ್ತನೆಗಳಿಗೆ ಈ ನೀಲು ಹೆಸರೇ ಹೆಚ್ಚು ಸರಿ ಹೊಂದುತ್ತದೆ ಅನ್ನುವುದು ಕೂಡ ಅಷ್ಟೇ ಸತ್ಯ.. ಹಹ್ಹಾ.... ಹಹ್ಹಾ..


- ಹಹ್ಹಾ.. ಹಹ್ಹಾ


- ಅಂದ ಹಾಗೆ ನಿಮ್ಮ ಮುಂದಿನ ಈ  ಸಮಾಜ ಸೇವೆ ಎಂಬ ಹೆಸರಿನ  ಪ್ರತಿಭಟನೆ ಎಲ್ಲಿ ಜರುಗಲಿದೆ..? 


- ಮುಂದಿನ ಪ್ರತಿಭಟನೆ... ಅದೇ ನಿಮ್ಮ ಬ್ಯಾಂಕ್ ಮುಂದೆಯೇ..


- ರಾಮ..ರಾಮ.. ಈ ನಿಮ್ಮದೊಂದು ಪ್ರತಿಭಟನೆಗಳ ಉಸಾಬರಿಯಲ್ಲಿ ನಾನೊಬ್ಬಳು ಹಣ್ಣುಗಾಯಿ ನೀರುಗಾಯಿ ಆಗದಿದ್ದರೆ ಅಷ್ಟೇ ಸಾಕು... ಹಹ್ಹಾ ಹಹ್ಹಾ..


- ಹಹ್ಹಾ...ಹಹ್ಹಾ... "ಏನೇ ಬರಲಿ..." 


- ಹ್ಞೂಂ..ಅದೇ ಅದೇ.."ಒಗ್ಗಟ್ಟು ಇರಲಿ...", ಹಹ್ಹಾ ಹಹ್ಹಾ..


- ಜೈ... 


.....................................................................................


#ನೀಲಮೇಘ


Ab Pacchu 

Moodubidire

(Photo-internet)


https://phalgunikadeyavanu.blogspot.com

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..