ಡ್ರಾಮಾ ಕಂಪನಿ

 #ಡ್ರಾಮಾ_ಕಂಪನಿ   |  ರಾಜೇಶ್ ಶೆಟ್ಟಿ





ಬಹಳ ಸರಳವಾಗಿ ಹೇಳಿದರೂ ಮೊದಲ ಸಾಲಿನಿಂದಲೇ ಓದುಗನಲ್ಲಿ ಕುತೂಹಲವನ್ನು ಕೆರಳಿಸುತ್ತಾ,ಕಥೆಯ ವಿಷಯಗಳನ್ನು ಮೆಲ್ಲ ಮೆಲ್ಲಗೆ ಅರಳಿಸುತ್ತಾ ಹೋಗುವ ಕಥೆಗಾರ ನನಗೆ  ಇಷ್ಟ.


ರಾಜೇಶ್ ಶೆಟ್ರ ಕತೆಗಳು ಹಾಗೆಯೇ ಇರುವುದು.ಅವರು ಓಡಾಡಿದ,ಉಸಿರಾಡಿದ ಹೆಚ್ಚಿನ ಊರಿನ ಹವೆಯ ಪರಿಚಯ ನನಗೂ ಚೆನ್ನಾಗಿಯೇ ಇದೆ.ಹಾಗಾಗಿ ನಮ್ಮದೇ ಜಿಲ್ಲೆಯವರು ಎಂಬ ಪ್ರೀತಿಯ ಜೊತೆ ಜೊತೆಗೆ ಊರ ಕಥೆಗಳನ್ನು ಅವರು ಹೇಗೆ ಬರೆದಿರಬಹುದು ಎಂಬ ಸಹಜ ಕುತೂಹಲ ನನ್ನಲ್ಲಿ   ತೀವ್ರವಾಗಿಯೇ ಇತ್ತು.ನಿಜ ಹೇಳಬೇಕೆಂದರೆ ಬರೀ ಊರ ಕತೆಗಳನ್ನು ಮಾತ್ರವಲ್ಲ ಅವರು ಬೆಂದಕಾಳೂರಿನ ಕತೆಗಳನ್ನು ಕೂಡ ಅಷ್ಟೇ ಸೊಗಸಾಗಿ ಬರೆದು,ಸಿಹಿಯಾದ ರುಚಿಯಾದ ಕ್ಯಾರೆಟ್ ಹಲ್ವದ ಮೇಲೆ ಒಂದು ಸ್ಕೂಪ್ ತಣ್ಣನೆಯ ಐಸ್ಕ್ರೀಂ ಇಟ್ಟಂತೆ ಎರಡೂರಿನ ಕಥೆಗಳನ್ನು ಒಟ್ಟೊಟ್ಟಿಗೆ ನಮ್ಮ ಮುಂದಿಟ್ಟು,ಇದರಲ್ಲಿ ನಿಮಗ್ಯಾವುದು ಇಷ್ಟವೋ ಅದನ್ನೇ ಭರ್ಜರಿಯಾಗಿ ಸವಿಯಿರಿ ಎಂದು ಓದುಗನಿಗೆ ಉಣಬಡಿಸಿದ್ದಾರೆ.ನನಗೆ ಗಾಜರ್ ಕ ಹಲ್ವವೂ ಇಷ್ಟವಾಯಿತು,ಈ ವೆನಿಲ್ಲದ್ದು ಕೆ ಐಸ್‌ಕ್ರೀಂ ಕೂಡ ಅಷ್ಟೇ ಇಷ್ಟವಾಯಿತು.ಅಂದಹಾಗೆ ಈ ಪುಸ್ತಕದ ಕಥೆಗಳ ಬಗ್ಗೆ ನಾನು ತುಂಬಾ ಹೇಳಬೇಕು,ಆದರೆ ಎಲ್ಲಾ ಹೇಳಿ ಬಿಟ್ಟರೆ ನೀವು ಆಮೇಲೆ ಪುಸ್ತಕ ಓದುವುದಿಲ್ಲ.ಈ ಚಂದದ ಪುಸ್ತಕ ನೀವೂ ಓದಬೇಕು,ಹಾಗಾಗಿ ಎಲ್ಲಾ ಹನ್ನೆರಡು ಕತೆಗಳ ಬಗ್ಗೆಯೂ ಜಸ್ಟ್ ಇಷ್ಟಿಷ್ಟೇ ಹೇಳುತ್ತಾ ಹೋಗುತ್ತೇನೆ ಆಯ್ತಾ...


" ಒಂದು ಕೊಲೆ ಮತ್ತು ಅದಕ್ಕೂ ಮುಂಚಿನ ಘಟನೆಗಳು "


ಇದರ ಈ ಮೊದಲ ಕಥೆಯೇ ಬಹಳ ಸೊಗಸಾಗಿದೆ.ಇಲ್ಲಿ ಯಾರೂ ಯಾರನ್ನು ಕತ್ತು ಹಿಸುಕಿ ಸಾಯಿಸುವುದಿಲ್ಲ.ಮಾರಾಕಯುಧ, ಹತ್ಯಾರುಗಳನ್ನು ಬಳಸಿ ಕಡಿದು ಕೂಡ ಹಾಕುವುದಿಲ್ಲ.ಆದರೂ ಒಂದು ಸಾವು ತಣ್ಣಗೆ ಜರುಗಿ ಹೋಗುತ್ತದೆ.ನಿಜ ಜೀವನದಲ್ಲಿ ಜಗತ್ತಿನ ತಪ್ಪುಗಳನ್ನು ಹುಡುಕಲು ಹೊರಡುವ ನಮಗೆ ನಮ್ಮ ತಪ್ಪುಗಳು ಅಷ್ಟು ಸುಲಭಕ್ಕೆ ಕಾಣುವುದೇ ಇಲ್ಲ.ಆದರೆ ಅರ್ಥ ಆಗುವಂತಹ ರೀತಿಯಲ್ಲಿ ಯಾರಾದರೂ ಅದೆಲ್ಲವನ್ನೂ ನಮಗೆ ಅರ್ಥ ಮಾಡಿಸಿದರೆ,ಅದು ನೇರವಾಗಿ ನಮ್ಮ ಎದೆಗೆ ಒದ್ದಂತೆ ನಾಟಿ  ಬಿಟ್ಟರೆ, ಆಗ ನಮ್ಮದೊಂದು ಅಸ್ತಿತ್ವವೇ ಇನ್ನಿಲ್ಲದಂತೆ ಅಲುಗಾಡಿ ಹೋಗುತ್ತದೆ.ಇದು ಅಂತಹದ್ದೇ ಕಥೆ.ಅರ್ಧಕ್ಕೆ ಬರೆದು ಕೈ ತಪ್ಪಿ ಹೋದ ಕವನಕ್ಕಿಂತಲೂ,ಇದು ಜೀವದಲ್ಲಿ ಜಾತ್ರೆ ಮುಗಿಸಿದವನ ಕಥೆಯೇ ಹೌದು! 


" ಡ್ರಾಮಾ ಕಂಪನಿ "


ಇದರಲ್ಲಿರುವ ಸಲಾಡ್ ಪ್ರೂಟ್ಸ್ ಸಲಾಡ್ ಎಂದು ಕತೆಗಾರ  ಎಲ್ಲಿಯೂ ಹೇಳಲಿಲ್ಲ.ಎಲ್ಲೋ ಒಂದು ಕಡೆ ಶತಮಾನದ ಕೋಸಂಬರಿ ಎಂದು ಬರೆದುದನ್ನು ನೋಡಿ ಖಂಡಿತವಾಗಿಯೂ ಇದು ಮೊಸರು ಬಜ್ಜಿಯೇ ಎನ್ನುವುದು ನನ್ನ ಊಹೆ ಅಷ್ಟೇ.ಆದರೆ ಯಾವುದಕ್ಕೆ ಈ  ಮೊಸರು ಬಜ್ಜಿ? ಬಿರಿಯಾಣಿ, ಪುಲಾವ್, ವಾಂಗಿ ಬಾತ್,ಘೀ ರೈಸ್?. ಕಥೆಯಲ್ಲಿ ಎಲ್ಲಿ  ಹುಡುಕಿದರೂ ಯಾವ ರೈಸೂ ಸಿಗುವುದಿಲ್ಲ.ಇಂತಹ ಕಥೆ ನನಗಂತು ಬಹಳ ಇಷವಾಗುತ್ತದೆ.ಪಕ್ಕದಲ್ಲಿ ಅವರದ್ದೊಂದು ಬಹಳ ಪ್ರಿಯವಾದ ಸಲಾಡ್ ಇಟ್ಟು ಬಿಟ್ಟು, ನಿಮಗೆ ಕಥೆಯಲ್ಲಿ ಇಷ್ಟವಾದ ರೈಸನ್ನೇ  ಬಡಿಸಿಕೊಳ್ಳಿ ಎಂದು ಹೇಳುತ್ತಾರೆ ಕತೆಗಾರ. ಆದರೆ ಇಲ್ಲಿ ರೈಸ್ ಜೊತೆಗೆ ಹುಡುಗಿಯ ಗೆಜ್ಜೆ, ಹಸಿರು ಗಾಜಿನ ಬಳೆಗಳು ಕೂಡ ನಿಮ್ಮ ತಟ್ಟೆಗೇ ಬಂದು ಕುಳಿತುಕೊಳ್ಳುತ್ತವೆ.ಎಲ್ಲವನ್ನೂ ಹೇಳದೇ ಬಹಳಷ್ಟು ಹೇಳುವ ಕತೆಗಾರ ಜೀವಕ್ಕೆ ಅದೆಷ್ಟೋ ಹಾಯೆನಿಸುತ್ತಾನೆ.ಶೆಟ್ರು ಇಲ್ಲಿ ಇಷ್ಟವಾದರು ನನಗೆ.


" ಪ್ರೀತಿಯ ಕೊನೆಯ ಚರಣ "


ಅಂಕದ ಕೋಳಿಯ ಪುಳಿಮುಂಚಿ ಬಲು ರುಚಿ.ತಿಂದವರಿಗಷ್ಟೇ ಅದು ಗೊತ್ತಿರಲು ಸಾಧ್ಯ.ಅಂಕದ ಕೋಳಿಯಂತೆ,ಕೋಳಿ ಅಂಕದ ಕತೆಗಳು,ಅಂಕದ ಕೋಳಿ ಮೇಲಿರುವ ಅಕ್ಕರೆಯ ಕತೆಗಳು ಕೂಡ ಬಲು ರೋಚಕ ಹಾಗೂ ಅಷ್ಟೇ ಸ್ವಾದಿಷ್ಟಕರ.ಇಲ್ಲೊಂದು ಅಂತಹ ಕೋಳಿ ಅಂಕದ್ದೇ ಕಥೆ ಇದೆ.ಕಥೆಯಲ್ಲಿ ಅಂಕದ ನಿಯಮ ಮುರಿದದ್ದು ಎದ್ದು ಕಾಣುತ್ತದೆ,ಆದರೆ ಕಥೆಯೇ ಕೊನೆಗೆ ಆ ನಿಯಮಕ್ಕೊಂದು ಸರಿಯಾದ ನ್ಯಾಯವನ್ನು ಇಲ್ಲಿ ಒದಗಿಸಿಕೊಡುತ್ತದೆ.ಕಥೆ ಓದುತ್ತಾ ಹೋದಂತೆ ಈ ಕಥೆಗೆ ಈ ಶೀರ್ಷಿಕೆ ಏಕೆ ಎಂದು ಅನಿಸಿದರೂ,ಕಥೆ ಮುಗಿದಾಗ ಈ ಶೀರ್ಷಿಕೆಯೇ ಈ ಕಥೆಗೆ ಬಹಳಷ್ಟು ಆಪ್ತವಾದದ್ದು ಎಂದೇ ಅನ್ನಿಸಿಬಿಡುತ್ತದೆ.ಕೋಳಿ ಅಂಕದ ಬಗ್ಗೆ ಪ್ರೀತಿ ಉಳ್ಳವರಿಗೆ ಇದು ಬಹಳ ಇಷ್ಟವಾಗುವ ಕಥೆಯಾದರೆ,ಕೋಳಿ ಅಂಕದ ಬಗ್ಗೆ ಸ್ವಲ್ಪವೂ ಗೊತ್ತಿಲ್ಲದವರಿಗೆ ಇದು ಆಹಾ.. ಎಂದೆನಿಸುವ ಕಥೆಯೇ ಹೌದು.


" ಬೆಂಕಿ ನುಂಗಿದ ಹುಡುಗಿ "


ಮುಕೇಶನ ಹಾಡುಗಳು ಕೈಯಲ್ಲೊಂದು ವಿಸ್ಕಿಯ ಅಗಲವಾದ  ಮಧುಪಾತ್ರೆ ಇರದಿದ್ದರೂ ಸಿಕ್ಕಾಪಟ್ಟೆ ನಶೆ ಏರಿಸಬಲ್ಲದು.ತೀರಾ ವಿರಹಿಯಾಗಿ ಬಿಟ್ಟರೆ ಮಾತ್ರ ಅವನು ಅಕ್ಷರಶಃ ಕೊಂದೇ ಬಿಡುತ್ತಾನೆ.ಅವನದ್ದೇ ಒಂದು ಹಾಡು ಇಲ್ಲಿದೆ. " Kal khel hum ho na ho,Gardish me tare rahenge sada". ಅದನ್ನು ಅವಳು ಹಾಡುತ್ತಾಳೆ.ಅವಳು ನನಗೇ ಹಾಡಿದ್ದೋ ಅಥವಾ ಕಣ್ಣು ಮಂಜಾಗುವಂತೆ ನೀರು ತುಂಬಿಸಿಕೊಂಡ ಆ ಮತ್ತೊಬ್ಬರಿಗಾಗಿಯೇ ಅವಳು ಹಾಡಿದ್ದೋ ಎಂದು ಅವನಿಗೆ ಗೊತ್ತಾಗಲಿಲ್ಲ,ಆದರೆ ಆ ಬೆಂಕಿ ಹುಡುಗಿ ನನಗೆ ಮಾತ್ರ ಸಿಗಲೇಬಾರದಿತ್ತು ಎಂದು ಅವನಿಗೆ ಬಲವಾಗಿ ಅನ್ನಿಸಿದ್ದು ಮಾತ್ರ ಸತ್ಯ ! ಏಕೆ?. ಕಥೆಯಲ್ಲಿ ಬರೋ ಮೇಷ್ಟ್ರೇ ಹೇಳುವ ಹಾಗೆ " ಲೈಫಿನ ಬಗ್ಗೆ ಜಾಸ್ತಿ ಮಾತಾಡಬಾರದು,ನಾವು  ಸುಮ್ಮನೆ ಬದುಕಬೇಕು ಅಷ್ಟೇ ". ಈ ಕಥೆಯೂ ಅಷ್ಟೇ. ಕೆಲವೊಮ್ಮೆ ಎಲ್ಲವನ್ನೂ ಹೇಳದೆಯೂ ನಾವು ಸುಖವಾಗಿ ಇರಬಲ್ಲೆವು,ಕೆಲವೊಮ್ಮೆ ಹೇಳಿದ ಕ್ಷಣದಿಂದಲೇ ಸುಖ ಎನ್ನುವುದು ನಮ್ಮಲ್ಲಿಲ್ಲ. 


" ಮಹಿಷಾಸುರ "


ಮಹಿಷಾಸುರ ರಂಗಸ್ಥಳದಲ್ಲಿ ಅಬ್ಬರಿಸಬೇಕು.ಅವನ ಕೈಯ ಸೂಟೆ ಸದಾ ಧಗಧಗ ಎಂದು ಉರಿಯಬೇಕು,ರಾಳ ಉರಿಯುವ ಬೆಂಕಿಗೆ ಮತ್ತಷ್ಟು ಕಿಡಿ ಹಚ್ಚಬೇಕು,ಓಡುತ್ತಾ ಅಬ್ಬರಿಸುತ್ತಾ ಬೊಬ್ಬಿರಿಯುತ್ತಾ ಪದೇ ಪದೇ ಹೂಂಕರಿಸುತ್ತಾ ಬಂದರೆನೇ ಅವನು ಮಹಿಷಾಸುರ.ಹಾಗಿದ್ದರೆನೇ ಅವನು ಚಂದ.ಆದರೆ ಕಥೆಯ ಆ ಮಹಿಷಾಸುರ ನಿಜ ಜೀವನದಲ್ಲಿಯೂ ಮಹಿಷಾಸುರನಂತೆಯೇ ವರ್ತಿಸಿ ಬಿಟ್ಟರೆ ಬದುಕಿನ ಬಣ್ಣ ಚೌಕಿಯ ಬಣ್ಣದಂತಲ್ಲ,ಅದು ಬಲು ಬೇಗ ಹಾಗೇ ಮಸುಕಾಗಿ ಬಿಡುತ್ತದೆ! " ಹುಟ್ಟಿದಾಗ ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ,ಕೆಟ್ಟದ್ದೆಲ್ಲವೂ ಹೊರಗಿನಿಂದಲೇ ಬರುತ್ತದೆ ಅನ್ನೋ ಮಾತೊಂದಿದೆ" ಎಂದು ಹೇಳುವ  ವಾಸುಧೇವ ಭಟ್ಟರ ಮಾತಿನಲ್ಲಿ ಅದೆಷ್ಟೋ ಸತ್ಯವಿದೆ.ಈ ಕಥೆ ಚೆನ್ನಾಗಿದೆ.


" ಕೆಡುಕು "


ನಗರಗಳಿಗೆ ನಮ್ಮ ಸ್ವಭಾವಗಳನ್ನು,ಆಲೋಚನೆಗಳನ್ನು ಮಾತ್ರವಲ್ಲ ನಮ್ಮ ಬದುಕಿನ ದಿಕ್ಕೆ ಬದಲಾಯಿಸುವ ಶಕ್ತಿಯೂ  ಇದೆ.ಮೊದ ಮೊದಲು ಯಾವುದೇ ನಗರ ನಮ್ಮನ್ನು ಸಿಕ್ಕಾಪಟ್ಟೆ ಹೆದರಿಸುತ್ತದೆ,ಆ ನಂತರ ಅದರ ಪರಿಚಯವಾಗುತ್ತಾ ಹೋದಂತೆ ಅದರ ಜೊತೆಗೆ ಹಾಗೇ ಸಲಿಗೆ ಬೆಳೆದಂತೆ ನಗರವೇ ನಮ್ಮ ಬದುಕಾಗಿ ಬಿಡುತ್ತದೆ.ಆದರೆ ನಮ್ಮ ಆತ್ಮ,ನಮ್ಮ ಉಸಿರು ನಮ್ಮ ಊರಲ್ಲೇ ನಮ್ಮ ಹಳ್ಳಿಯಲ್ಲೇ ಸದಾ ಇರುತ್ತದೆ!ನಗರಕ್ಕೆ ಹೋದರೆ ಹೊರ ಬರುವುದು ಕಷ್ಟ,ಬದಲಾಗಲಾರೆ ಎನ್ನುವವರು ಕೂಡ ಸಿಕ್ಕಾಪಟ್ಟೆ ಬದಲಾಗುತ್ತಾರೆ ಇಲ್ಲವೇ ಸಿಕ್ಕಾಪಟ್ಟೆ ನಿರ್ಲಿಪ್ತತೆಗೆ ಜಾರುತ್ತಾರೆ.ಬಂಗಾರ ಬಣ್ಣದ್ದೇ ಬಿಯರ್ ಕುಡಿಯುವ ಹುಡುಗಿ ಇಲ್ಲಿ ಬಹಳಷ್ಟು ಕಾಡುತ್ತಾಳೆ,ಅವಳ ಬಾಡಿದ ಮಲ್ಲಿಗೆ ಕೂಡ ಒಂದಿಷ್ಟು ಕಥೆ ಹೇಳುತ್ತಾ ಇಲ್ಲಿ ನರಳುತ್ತದೆ.


" ಬೀಡಿ "


ಇದು ಬೀಡಿ ಸೇದುವ ಇಬ್ಬರ ಕಥೆ. ಶೆಣೈ ಬೀಡಿ, ಮೆಟ್ರೊ ಬೀಡಿಗಳು ಕೂಡ ಇಲ್ಲಿ ಕಥೆಯ ಪಾತ್ರಗಳೇ.ತಮ್ಮ ನೆಚ್ಚಿನ ಕಂಪೆನಿಯ ಬೀಡಿಯನ್ನು ಸ್ವರ್ಗ ಸುಖವೆಂಬಂತೆ  ಸೇದುತ್ತಲೇ,ಒಬ್ಬರು ಇನ್ನೊಬ್ಬರ ಬೀಡಿಯನ್ನು ನಿರಂತರವಾಗಿ ಲೇವಡಿ ಮಾಡಿದರೂ ಸಹ,ಕಥೆಯ ಕೊನೆ ಮಾತ್ರ ನಮ್ಮ ಹೃದಯವನ್ನು ಬಹಳ ಆರ್ದ್ರವಾಗಿಸುತ್ತದೆ.ಕೆಲವೊಮ್ಮೆ ನಾವು ದ್ವೇಷಿಸುತ್ತಲೇ ಕೆಲವರನ್ನು ಸಿಕ್ಕಾಪಟ್ಟೆ ಹಚ್ಚಿಕೊಂಡು ಬಿಡುತ್ತೇವೆ.ಆದರೆ ಅದು ನಮಗೆ ಗೊತ್ತೇ ಆಗುವುದಿಲ್ಲ.ಈ ರೀತಿ ಖಾಲಿಯಾಗುವ  ಜಾಗಗಳೇ ನಮ್ಮ ಬದುಕಿನಲ್ಲಿ ಯಾರೂ ಯಾವತ್ತೂ ತುಂಬಲಾಗದ ಜಾಗಗಳಾಗಿ ಬಿಡುತ್ತವೆ.ಈ ಕಥೆಯ ಮೇಲೊಂದು ಮೊಹಬ್ಬತ್ ಬೇಡವೆಂದರೂ ಹಾಗೇ  ಹುಟ್ಟುತ್ತದೆ.


" ನಿಜಗುಣನಿಗೆ ದಾರಿ ತೋರಿಸಿ"


ಇಲ್ಲಿ ಚಿಟ್ಟೆ ಹುಡುಗಿ ಇದ್ದಾಳೆ, ಎರ್ ಎಕ್ಸ್ 100 ಬೈಕ್ ಇದೆ,ಚೆನ್ನಾಗಿ ಕುಡಿಯುವ ಅವನಿದ್ದಾನೆ,ನೊರೆಯೇಳಿಸುವ ಎಂದಿನ ಬಿಯರಿದೆ,ಜೊತೆಗೆ ಮುಖ ನೋಡಿಕೊಳ್ಳಲು ರೋಡ್ ಮೇಲೆ ನೀರು ಚೆಲ್ಲಿ ಆದಂತಹ ಬಹಳಷ್ಟು ನೀರ ಕನ್ನಡಿಗಳಿವೆ. ಅವನಿಗೆ ಈ ನೀರ ಕನ್ನಡಿಗಳು ಈ ಜಗತ್ತು ಇದ್ದಂತೆ,ಯಾವುದನ್ನೂ ಅವುಗಳು ಅವನಿಗೆ ಸ್ಪಷ್ಟವಾಗಿ ತೋರಿಸುವುದಿಲ್ಲ.ನೀರು ಬಿದ್ದಲೆಲ್ಲಾ ತನ್ನ ಮುಖ ನೋಡಿಕೊಳ್ಳುವ ಅವನಿಗೆ ಹೆಚ್ಚಾಗಿ ನಿರಾಸೆ ಆದದ್ದೇ ಹೆಚ್ಚು.ಆದರೂ ಅವನನ್ನು ಸ್ಪಷ್ಟವಾಗಿ ತೋರಿಸುವ ಕನ್ನಡಿ ಒಂದು ಅವನ ಕೂಗಳೆತೆಯ ದೂರದಲ್ಲಿಯೇ ಇದೆ. ಏನದು?. ಇದೂ ಒಂಥರಾ ಚೆನ್ನಾಗಿದೆ.


" ಚಂದ್ರಹಾಸ "


ಕ್ರಿಕೆಟ್ ಆಡುವಾಗ ಅದರಲ್ಲೂ ಫೀಲ್ಡಿಂಗ್ ಮಾಡುವಾಗ ಮೊಬೈಲ್ ಬಳಸಬಾರದು ಎನ್ನುವ ನಿಯಮ ಹಳ್ಳಿಯಲ್ಲಿ ಅಂತು ಈಗಲೂ ಎಲ್ಲಾ ಕಡೆ ಇದೆ.ಮೊಬೈಲ್ ಆಟದ ಓಘಕ್ಕೆ ತಡೆಯಾಗುತ್ತದೆ ಎನ್ನುವುದು ಒಂದು ವಾದ.ಈ ರೀತಿಯ ಮೊಬೈಲ್ ಬಳಕೆಯನ್ನು ವಿರೋಧಿಸುವ ಚಂದ್ರಹಾಸ ಕೊನೆಗೂ ಒಂದು ಮೊಬೈಲ್ ತೆಗೆದುಕೊಳ್ಳುತ್ತಾನೆ.ಅವನದ್ದೊಂದು ನಂಬರ್ ಗೆ ಬರುವ ಬಹಳಷ್ಟು ಅಪರಿಚಿತ ಕರೆಗಳು ಅವನನ್ನು ಅಕ್ಷರಶಃ ಶಾಪಗ್ರಸ್ತ ಗಂಧರ್ವನನ್ನಾಗಿ ಮಾಡಿದರೆ,ಒಂದು ಬಹಳನೇ ಸುಪ್ರಸಿದ್ಧ ಕರೆ ಅವನನ್ನು ನೇರಾ ಸ್ವರ್ಗದ ಬಾಗಿಲಿನಲ್ಲಿ ತಂದು  ನಿಲ್ಲಿಸುತ್ತದೆ.ಈ ರೀತಿಯ ಮೊಬೈಲ್ ಪಜೀತಿಗಳು ಬಹಳಷ್ಟು ಆಗುತ್ತವೆ.ಅಂತಹದ್ದೇ ಒಂದು ಪಜೀತಿ ಇಲ್ಲಿ ಕಥೆಯಾಗಿ ಬಿಟ್ಟಿದೆ. 


" ಫೇರಿಟೇಲ್ "


ಬಸ್ಸಿನಲ್ಲಿ ಅವನ ಪಕ್ಕ ಬಂದು ಕುಳಿತುಕೊಂಡ ಆ ಅಂದದ ಹುಡುಗಿ ನಡುರಾತ್ರಿ ಅವನಿಗೊಂದು ಚಂದದ ಕಥೆ ಹೇಳಿ ಹಾಗೇ ಹೊರಟು ಹೋಗುತ್ತಾಳೆ.ಅವಳು ಆ ಕಥೆ ಹೇಳಬಾರದಿತ್ತು.ಇವನು ಅದನ್ನು  ಕೇಳಿಸಿಕೊಳ್ಳಬಾರದಿತ್ತು.ಅವಳಿಗೆ ಅವಳ ಕಥೆಯ ಆ ನಿದ್ರೆಗಣ್ಣಿನ ಹುಡುಗನನ್ನು ಎಲ್ಲಾದರೂ ಶಾಶ್ವತವಾಗಿ ಅವಳಿಂದ ಕಳೆದು ಕೊಳ್ಳಬೇಕಾಗಿತ್ತು ಅದಕ್ಕೆ ಅವಳು ಕಥೆ ಹೇಳಿದಳು,ಆದರೆ ಕಥೆ ಕೇಳಿದ ಇವನಿಗೆ ಆ ನಡುರಾತ್ರಿ ಎಲ್ಲೋ ಮರೆತಿದ್ದ ಕಥೆಯೊಂದು ರಪಕ್ಕನೇ ನೆನಪಾಗಿ ಬಿಡುತ್ತದೆ.ಕೊನೆಯಲ್ಲಿ ಏನಿಲ್ಲ ಎಂದು ಅವನು ಅವನಷ್ಟಕ್ಕೆ ನಕ್ಕರೂ,ಅವನು ಮಾತ್ರ ಆ ದಿನದಿಂದ ಹಿಂದಿನಂತೆ ಇರುವುದು ಸ್ವಲ್ಪ ಕಷ್ಟವೇ.ಗೊತ್ತಿರುವುದನ್ನೇ ಮರೆಯಲು ಕಷ್ಟವಿದೆ,ಇನ್ನು ಹೀಗೊಂದು ಕೂಡ ಇತ್ತು ಎನ್ನುವುದು ಅರಿವಾದರೆ ಅದನ್ನು ಮರೆಯುವುದಂತು ಇನ್ನೂ ತುಂಬಾ ತುಂಬಾ ಕಷ್ಟ. ಬಸ್ಸಿನ ಹುಡುಗಿ ಮೇನಕೆಯಂತೆಯೇ ಬಂದು ವಿಶ್ವಾಮಿತ್ರನಂತವನ ಮನಸ್ಸು ಕೆಡಿಸಿ ಹೋದಳು.ಅವಳು ಇಷ್ಟವಾದಳು.


" ವಂಚನೆ "


ಪ್ರೀತಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ಬೇಡ ಎಂದು ಅನ್ನಿಸುವುದು ಇದೆ.ಹಾಗೇ ಬೇಡ ಎಂದು ಹೋದವರಿಗೆ ಯಾವುದೋ ಒಂದು ದಿನ ಅದೇ ಪ್ರೀತಿ ಮತ್ತೆ ಬೇಕು ಎಂದು ಅನ್ನಿಸುವುದು ಸಹ ಇದೆ. ಒಬ್ಬೊಬ್ಬರಿಗೆ ಒಂದೊಂದು ತರಹ ಈ ಅನ್ನಿಸುವುದು.ಕೆಲವರು ಪ್ರೀತಿ ಗೀತಿ ಎಲ್ಲಾ ಮರೆತು ಸುಖವಾಗಿ ಬದುಕು ಕಟ್ಟಿಕೊಳ್ಳುತ್ತಾರೆ.ಇನ್ನು ಕೆಲವರಿಗೆ ಈ ಪ್ರೀತಿಯ ನೋವೊಂದೇ ಬರೀಯ ಬದುಕಾಗಿ ಬಿಡುತ್ತದೆ. ಇಂತಹ ಇಬ್ಬರು ಅದೆಷ್ಟೋ ಸಮಯದ ನಂತರ ಈ ಒಂದು ಕಥೆಯಲ್ಲಿ ಪರಸ್ಪರ ಮುಖಾಮುಖಿ ಆಗುತ್ತಾರೆ.ಜೀವನದಲ್ಲಿ ಆಕಸ್ಮಿಕವಾಗಿ ಆದರೂ ಇಂತಹ ಮುಖಾಮುಖಿಗಳು ಆಗಲೇಬಾರದು.ಬದುಕು ತುಂಬಾ ಕಷ್ಟವಾಗಿ ಬಿಡುತ್ತದೆ.ಮುಂದಿನ ಬಹಳ ದಿನದ ಬದುಕು ಕೂಡ ಅಲ್ಲಿಗೆ ಸಾಕು ಎಂದು ಅನ್ನಿಸುವುದು ಆಗಲೇ. ಇದು ಅಂತಹದ್ದೇ ಕಥೆ! 


" ಈ ದಾರಿ ಮುಗಿಯುವುದಿಲ್ಲ"


ಕಥೆ ಎಲ್ಲರಲ್ಲೂ ಇರುತ್ತದೆ.ಕೆಲವರು ಹೇಳುತ್ತಾರೆ,ಕೆಲವರು ಹೇಳುವುದಿಲ್ಲ ಅಷ್ಟೇ. ಚೆನ್ನಾಗಿ ಕುಡಿದ ಅವನಿಗೆ ಅವಳು ಕೂಡ ಅದನ್ನೇ ಹೇಳುತ್ತಾಳೆ  "ನೀನು ಹೆದರಬೇಡ,ಕತೆಯನ್ನು ಹೇಳು. ಸುತ್ತಲೂ ಇರುವವರಲ್ಲಿ ಕೇಳಿಸಿಕೊಳ್ಳುವವರು ಕೇಳಿಸಿಕೊಳ್ಳುತ್ತಾರೆ,ಕೇಳಿಸಿಕೊಳ್ಳದವರದ್ದು ಅವರದ್ದೇ ಕತೆ ಸಾಕಷ್ಟು ಇರುತ್ತವೆ! ".ನಿಜ ಹೇಳಬೇಕೆಂದರೆ ಅವನು ಅವನನ್ನು ಕಂಡುಕೊಳ್ಳಲು ಆ ಊರಿಗೆ ಬಂದವ.ಆದರೆ ಅವನು ಅವನನ್ನು ಕಳೆದುಕೊಳ್ಳುತ್ತಾನೆ ಎಂದು ಅವನು ಅಂದುಕೊಂಡಿರಲಿಲ್ಲ. ಅವನನ್ನು ಕಳೆದುಕೊಂಡರೂ ಅವನ ಮುಂದೆ ಕತೆಗಳ ರಾಶಿಯೇ ಇತ್ತು.ಒಂದಷ್ಟನ್ನು ಹೇಳಿ ಮುಗಿಸಿದ ಅವನಿಗೆ ಇನ್ನಷ್ಟು ಕತೆ  ಹೇಳಲೇಬೇಕು ಎನ್ನುವುದು ದಾಹ ಹೆಚ್ಚಾದರೆ ಆಹಾ..ಈ  ಕಳೆದುಕೊಳ್ಳುವುದರಲ್ಲಿಯೇ ಅದೆಂತಹ ಸುಖವಿದೆ!


ಒಟ್ಟಾರೆಯಾಗಿ ಹೇಳುವುದಾದರೆ ಈ ಕಥಾಸಂಕಲನ ನನಗಂತು ತುಂಬಾನೇ ಹಿಡಿಸಿತು.ಪುಟ ಭರ್ತಿ ಮಾಡುವುದಕ್ಕಾಗಿ ಕಥೆಯ ಗಾತ್ರ ಹೆಚ್ಚಿಸುವುದಕ್ಕಾಗಿ ಶೆಟ್ರು ಯಾವುದೇ ಅನಗತ್ಯ ಸಾಲು ಇಲ್ಲಿ ಬರೆದೇ ಇಲ್ಲ.ಬರೆದ ಪ್ರತೀ ಸಾಲನ್ನು ಸಹ ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡು ಅಷ್ಟೇ ಅಕ್ಕರೆಯಿಂದಲೇ ಒಂದರ ನಂತರ ಒಂದರಂತೆ ಎಲ್ಲವನ್ನೂ ಪೊಣಿಸುತ್ತಾ ಹೋಗಿದ್ದಾರೆ.ಹಾಗಾಗಿ ಓದು ಎನ್ನುವುದು ಇಲ್ಲಿ ಸರಾಗ.


ಆದರೂ ರಾಜೇಶ್ ಶೆಟ್ರ ಮೇಲೆ ನನಗೆ ತುಸು ಕೋಪವಿದೆ ಜೊತೆಗೆ ಒಂದು ಮುಷ್ಟಿಯಷ್ಟು ಆಕ್ರೋಶ.ಅವರ ಈ ಕಥೆಯಲ್ಲಿ ಬಹಳಷ್ಟು ಹುಡುಗಿಯರು ಬರುತ್ತಾರೆ.ಎಲ್ಲಾ ಹುಡುಗಿಯರು ಚಂದ ಇದ್ದಾರೆ ಹಾಗೂ ಕತೆಯ ಅಂದವನ್ನು ಇನ್ನಿಲ್ಲದಂತೆ ಹೆಚ್ಚಿಸಿದ್ದಾರೆ.ಹೆಚ್ಚಾಗಿ ಎಲ್ಲರೂ ಬೆಂಗಳೂರಿನ ಹುಡುಗಿಯರೇ.ಇದರಲ್ಲಿ ಎಲ್ಲಾದರೂ ಊರಿನ ಹಳ್ಳಿ ಹುಡುಗಿ ಇದ್ದಾಳೆಯೇ ಎಂದು ಅವರ ಕಥೆಯ ಪೂರ್ತಿ ಹುಡುಕಾಡಿದೆ,ತಡಕಾಡಿದೆ.ಒಬ್ಬಳು ವಾಸಂತಿ ಸಿಕ್ಕಳು.ಆದರೆ ಅವಳು ಮಾತು ತುಂಬಾ ಕಮ್ಮಿ.ಬಹಳಷ್ಟು ಮಾತಾಡುವ ನಮ್ಮೂರಿನ ಹಳ್ಳಿ ಹುಡುಗಿ ಒಬ್ಬಳು ಈ ಸಂಕಲನದ ಎಲ್ಲಾದರೂ ಇರಬೇಕಿತ್ತು ಎಂದು ನಗರದ ಅಷ್ಟೂ ಹುಡುಗಿಯರನ್ನು ಕಂಡಾಗ ನನಗೆ ಅನಿಸಿದ್ದು ಮಾತ್ರ ನಿಜವೇ ಆದರೂ,ಇದು ಯಾವುದೂ ಈ  ಕಥಾಸಂಕಲನದ ರುಚಿಯನ್ನು ಒಂಚೂರು ಕೆಡಿಸುವುದಿಲ್ಲ ಅನ್ನುವುದು ಸಹ ಅಷ್ಟೇ ಸತ್ಯ.


ಅಂದ ಹಾಗೆ ಮುಷ್ಟಿ ಆಕ್ರೋಶಕ್ಕೆ ಮತ್ತೊಂದು ಕಾರಣ ಏನೆಂದರೆ ಇದರಲ್ಲಿ ಇನ್ನೂ ನಾಲ್ಕೈದು ಕತೆ ಬರೆಯಲು ನಿಮಗೇನು ಸನ್ನಿ..? ಎನ್ನುವುದಕ್ಕಾಗಿ.ಏಕೆಂದರೆ ಎಲ್ಲಾ ಕತೆಗಳು ಅಷ್ಟು ಚೆನ್ನಾಗಿದ್ದು ಕೊನೆಯಲ್ಲಿ ಮುಗಿದಾಗ ಮತ್ತೊಂದಿಷ್ಟು ಗಾಜರ್ ಕ ಹಲ್ವದ ಊಪರ್ ವೆನಿಲ್ಲಾದ ಐಸ್‌ಕ್ರೀಂ ಬಹಳಷ್ಟು ಬೇಕಿತ್ತು ಎಂದು ಅನಿಸಿದರೆ ಅದರಲ್ಲಿ ನಮ್ಮದೆನ್ನುವ ತಪ್ಪು ಏನಿದೆ ನೀವೇ ಹೇಳಿ ಶೆಟ್ರೇ.ಇದು ರಾಜೇಶ್ ಶೆಟ್ರ ಮೊದಲ ಪ್ರಯತ್ನ.ಆದರೆ ಓದುವಾಗ ಹಾಗೆ ಎಲ್ಲೂ  ಅನಿಸುವುದಿಲ್ಲ.ನಿರಂತರವಾಗಿ ಬರೆದು ಬರೆದು ಈಗ ಪುಸ್ತಕದ ಸಾಹಸಕ್ಕೆ,ಅದರದ್ದೊಂದು ದಿವ್ಯವಾದ ಸಹವಾಸಕ್ಕೆ ಅವರು ಇಳಿದಿದ್ದಾರೆ.ಪ್ರತಿಯೊಬ್ಬನಿಗೂ ಮೊದಲನೆಯದ್ದು ಯಾವಾಗಲೂ ವಿಶೇಷವೇ.ಅದಕ್ಕಾಗಿಯೇ ನಿಮಗೆ ವಿಶೇಷ ಅಭಿನಂದನೆಗಳು ಶೆಟ್ರೇ.ಮುಖಪುಟದಲ್ಲಿ ಎರಡೂ ಕೈಯಲ್ಲಿ ಭದ್ರವಾಗಿ ದೀಪ ಹಿಡಿದ ಆ ನಗುವಿನ ಹುಡುಗಿ ಮತ್ತು "ನಗುವಿಗಿಂತ ಬೇರೆ ಚಂದವಿಲ್ಲ,ಕಣ್ಣಿಗಿಂತ ದೊಡ್ಡ ದೀಪವಿಲ್ಲ" ಸಾಲು ತುಂಬಾ ಇಷ್ಟವಾಯಿತು.ಪ್ರದೀಪ್ ಬತ್ತೇರಿ ಅವರು ಮಾಡಿದ ಇನ್ಸ್ಟಗ್ರಾಮ್ ಮಾದರಿಯ ಮುಖಪುಟ ವಿನ್ಯಾಸ ಕೂಡ ಬಹಳಷ್ಟು ಹಿಡಿಸಿತು. 


ನೀವು ಇನ್ನೂ ಹುಲುಸಾಗಿ ಬೆಳೆದು ಓದುಗರಿಗೆ ಇನ್ನಷ್ಟು ಪುಷ್ಕಳವಾಗಿ ದೊಡ್ಡ ದೊಡ್ಡ ಸೌಟಿನಲ್ಲಿಯೇ  ಬಡಿಸಬೇಕು,ಹಾಗೂ ಬಡಿಸುವಂತಾಗಲಿ.ಕೈ ಕುದ್ಯ ಮಾಡಬೇಡಿ.ಅದೇ ನನ್ನ ಕೋರಿಕೆ,ಬೇಡಿಕೆ,ಸವಿನಯದ ಮನವಿ ಎಲ್ಲವೂ ಆಗಿದೆ.ಓದಿ  ಸವಿಯಲು ಎಂದಿನಂತೆ ನಾವು ಇದ್ದೇ ಇದ್ದೇವೆ ಅಲ್ವೇ.ಪೊರ್ಲಾತ್ಂಡ್,ಅಂಚನೆ ಮಸ್ತ್ ಶೋಕಾತ್ಂಡ್, ಎಂಕ್ ಅಂತು ಲೈಕ್ ಆಂಡ್.. 


#ಡ್ರಾಮಾ_ಕಂಪನಿ  |  ಕಥಾ ಸಂಕಲನ 

ಲೇಖಕರು - ರಾಜೇಶ್ ಶೆಟ್ಟಿ 

ಪ್ರಕಾಶಕರು - ಸ್ವಪ್ನ ಬುಕ್ ಹೌಸ್ 

ಪ್ರಥಮ ಮುದ್ರಣ - ನವೆಂಬರ್ 2021


ಪುಸ್ತಕಗಳು 

Ab Pacchu


(https://phalgunikadeyavanu.blogspot.com)

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ