Pushpa : The Rise

 #Pushpa: The Rise  | [       ]




ಇದು ನೋಡಲೆಬಾರದು ಎನ್ನುವಂತಹ ಶಾಪಗ್ರಸ್ತ ಮೂವಿ ಏನಲ್ಲ.ನನಗೆ ಇದು ಭಯಂಕರ ಇಷ್ಟವೂ ಆಗಲಿಲ್ಲ,ಯೆಬೇ.. ಎನ್ನುವಷ್ಟು ಕಂಡಾಬಟ್ಟೆ ಕಷ್ಟವೂ ಆಗಲಿಲ್ಲ.ಖಂಡಿತವಾಗಿಯೂ ಒಂದು ಬಾರಿ ನೋಡುವಂತಿದೆ.ಹಾಗಾಗಿ ಎಲ್ಲವನ್ನೂ ಒಟ್ರಾಸಿ ಮಿಶ್ರ ಮಾಡಿ ಮಾಡಿದಂತಹ,ತುದಿ ಮೊದಲಿಲ್ಲದ ಸಜ್ಜಿಗೆ ಬಜಿಲ್ ಚಿತ್ರ ಇದು ಎಂದು ನಾನು ಸಾರಾಸಗಟಾಗಿ ಹೇಳಲಾರೆ. 


ಹೌದು,ಒಂದಷ್ಟು ಇಷ್ಟ ಆಗುವಂತಹದ್ದೂ ಇದೆ,ಅದೇ ರೀತಿ ಕಿರಿ ಕಿರಿ ಆಗುವಂತಹದ್ದೂ ಕೂಡ ಇಲ್ಲಿ ಅವಶ್ಯವಾಗಿಯೇ ಇದೆ. ಸುನೀಲ್ (ಶ್ರೀನು) "ಸ್ವಲ್ಪ ಹೊತ್ತು ಮೊದಲೇ ಪೋನ್ ಮಾಡಿದಿದ್ದರೆ.." ಎಂದು ರಾಜಕಾರಣಿಗೆ ಹೇಳುವ ಆ ಒಂದು ಸನ್ನಿವೇಶ ಇಷ್ಟ ಆಯಿತು,ಕಥೆಯಲ್ಲಿ ಮುಂದೆ ಆ ಸನ್ನಿವೇಶಕ್ಕೊಂದು ಪುಷ್ಪನ ಕೌಂಟರ್ ಕೂಡ ಅಷ್ಟೇ ಇಷ್ಟವಾಯಿತು.ಬ್ಯುಸಿನೆಸ್ ನಲ್ಲಿ ಜಾಸ್ತಿ ರೇಟು ಕೇಳಿದವನ ಕೊಲೆ ಕಣ್ಣೆದುರೇ ಆದರೂ,ಪುಷ್ಪ ಈಗ ಏನು ಮಾಡಬಲ್ಲ ಎನ್ನುವುದನ್ನು ಮೊದಲೇ ಯಾರಾದರೂ ಸಹ ಸರಿಯಾಗಿಯೇ ಊಹಿಸಬಹುದಾದರೂ,ಪುಷ್ಪ ಇಲ್ಲಿ ಅದನ್ನೇ ಮಾಡಿದಾಗ ಖುಷಿಯಾಗಿದ್ದು ನಿಜ.ಕೆಲವೊಮ್ಮೆ ಮೊದಲೇ ಗೊತ್ತಾಗಿ ಬಿಡುವಂತದ್ದು ಮೂವಿಯಲ್ಲಿ ನಡೆದರೆ ಆ ಸನ್ನಿವೇಶ ನಿಜವಾಗಿಯೂ ನೀರಸ ಆಗುವುದಿದೆ,ಆದರೆ ಇಲ್ಲಿ ಈ ದೃಶ್ಯದಲ್ಲಿ ಮಾತ್ರ ಆ ರೀತಿ ಆಗಲಿಲ್ಲ.ಕೆಲವೊಂದು ಕಡೆ ಸಂಭಾಷಣೆಗಳು ಹರಿತವಾಗಿದೆ,ಅದೇ ರೀತಿ ಚಪ್ಪೆ ಅನಿಸುವ ಸಂಭಾಷಣೆಗಳು ಕೂಡ ಬಹಳಷ್ಟು ಇದರಲ್ಲಿ ತುಂಬಿ ಹೋಗಿದೆ. 


ಇಲ್ಲಿ ಒಂದೇ ಹಾಡಿನಲ್ಲಿ ಬಂದು ಹೋಗುವ  ಸಮಂತಾ ತರಹೇವಾರಿ ಭಕ್ಷ್ಯ ಭೋಜ್ಯಗಳ ನಡುವೆ ಇರಿಸಿದ ಒಂಟಿ  ಗುಲಾಬ್ ಜಾಮೂನಿನಷ್ಟು ಇಷ್ಟವಾದಳು.ಅವಳದ್ದೊಂದು ಕುಣಿತ,ಆ ಹಾಡು ಎರಡೂ ಅಷ್ಟೇ ಇಷ್ಟವಾಗುತ್ತದೆ.ಅದು ಇಷ್ಟವಾದರೆ ನೀವು ಸಿನಿಮಾ ರಸಿಕರು ಮಾತ್ರವಲ್ಲ ನೀವು ನಿಜಕ್ಕೂ ಬ..ಹ..ಳ..ಷ್ಟು ರಸಿಕರೇ ಹೌದು ಬಿಡಿ.ಆ ಹಾಡಿನ ಸಾಲುಗಳು ಕೂಡ ಹಾಗೆಯೇ ಇದೆ.ಸಿನಿಮಾ ತುಂಬಾ  ಸಮಂತಾಳೇ ಇದ್ದು ಅವಳೇ ಇದರ  ನಾಯಕಿಯಾಗಿ ಇರಬೇಕಿತ್ತು ಎಂದು ನಿಮಗೂ ಅನಿಸಿದರೆ,ಅದು ನೀವು ರಶ್ಮಿಕಾಳನ್ನು ಸಿಕ್ಕಾಪಟ್ಟೆ ದ್ವೇಷಿಸುತ್ತೀರಿ ಎಂದು ಅರ್ಥವಲ್ಲ,ಸಮಂತಾ ಇಲ್ಲಿ ರಶ್ಮಿಕಾಳಿಗಿಂತಲೂ ಅಧಿಕ ಇಷ್ಟವಾಗುತ್ತಾಳೆ ಎಂದಷ್ಟೇ ಅರ್ಥ.


ಇನ್ನು ಸಾಮಿ ಸಾಮಿ ಹಾಡಿನ ಬಗ್ಗೆ ಸ್ವಲ್ಪ ಹೇಳಲೇಬೇಕು.ಆ ಸಾಮಿ ಹಾಡು ಹಾಗೂ ಆ ಹಾಡಿಗೆ ರಶ್ಮಿಕಾ ಮಾಡಿದ ಆ ಒಂದು ಬಾರ್ ಬೆಂಡಿಂಗ್ ನೃತ್ಯಕ್ಕಿಂತಲೂ ನನಗೆ ಇದನ್ನು ತಮಿಳಿನಲ್ಲಿ ಪ್ರತೀ ಸಾಲನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಲೇ ಸ್ಟುಡಿಯೊದಲ್ಲಿ ಕಣ್ಣರಳಿಸಿಕೊಂಡು ನಗು ಉಕ್ಕಿಸಿಕೊಂಡು ಹಾಡಿದ Rajalakshmi Senthiganesh ಮೊದಲು ನೆನಪಿಗೆ ಬಂದು ಬಿಟ್ಟರು.ರೀಲ್ಸ್ ನಲ್ಲಿ ಇದರ ರೆಕಾರ್ಡಿಂಗ್ ತುಣುಕೊಂದು ಬಹಳಷ್ಟು ವೈರಲ್ ಆಗಿತ್ತು.ನನಗೆ ಈ ಹಾಡುಗಾರ್ತಿ ಈ ಒಂದು  ಹಾಡನ್ನು ಅಷ್ಟೊಂದು ಎಂಜಾಯ್ ಮಾಡಿಕೊಂಡು ಹಾಡಿದ ದೃಶ್ಯವೇ ಈ ಹಾಡಿಗಿಂತಲೂ,ಇದರ ನೃತ್ಯಕ್ಕಿಂತಲೂ ಆಹಾ.. ಎನ್ನುವಷ್ಟು ಇಷ್ಟವಾಗಿ ಬಿಟ್ಟಿತ್ತು. 


ರಶ್ಮಿಕಾ ಇನ್ನಷ್ಟು ಅಭಿನಯ ಕಲಿಯಬೇಕು ಎಂದು ನಾನು ಹೇಳುವುದಿಲ್ಲ,ಆದರೆ ಓವರ್ ಆಕ್ಟಿಂಗ್ ಒಂದೇ ಅಭಿನಯವೂ ಅಲ್ಲ ಎಂದಷ್ಟೇ ಹೇಳಲು ಇಚ್ಛೆ ಪಡುತ್ತೇನೆ.ಇನ್ನು ಅಲ್ಲು ಅರ್ಜುನ್ ಒಂದು ಭುಜ ಕೆಳಗಿಳಿಸಿ ಒಂದು ಕಾಲು ತುದಿಗಾಲು ಆಗುವಂತೆ ನಡೆಯುತ್ತಾ ಹೋಗುವುದು ಬಹಳಷ್ಟು ಕಡೆಗಳಲ್ಲಿ ಅದು ಸಹಜವಾಗಿ ಕಾಣುವುದೇ ಇಲ್ಲ.ನಿಜ ಹೇಳಬೇಕೆಂದರೆ "ಪುಷ್ಪರಾಜು.." ಎಂದು ಮೆತ್ತಗೆ ಹೇಳುವ ಗುಂಗುರು ಕೂದಲಿನ ಆ ಬಾಲ ಪುಷ್ಪನೇ ನನಗೆ ಹೆಚ್ಚು ಇಷ್ಟವಾದ.ಆದರೆ ಅಲ್ಲು ಅರ್ಜುನ್ ವಿಭಿನ್ನವಾಗಿ ಅಭಿನಯಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾನೆ ಎನ್ನುವುದು ಕೂಡ ಸತ್ಯವೇ.ಆ ಶ್ರೀವಲ್ಲಿ ಹಾಡು  ಚೆನ್ನಾಗಿದೆ. 


ಕಥೆ ಬಗ್ಗೆ ಜಾಸ್ತಿ ಹೇಳುವುದಿಲ್ಲ,ಆದರೆ ಇಲ್ಲಿ ರಕ್ತ ಚಂದನವೇ ಬಂಗಾರ ಹಾಗೂ ಬ್ಯುಸಿನೆಸ್ ಎಂದಷ್ಟೇ ಹೇಳುತ್ತೇನೆ.ಗ್ರಾಫಿಕ್ಸ್ ನಿಜವಾಗಿಯೂ ಇನ್ನಷು ಚೆನ್ನಾಗಿ ಮಾಡಬಹುದಿತ್ತು ಎಂದು ಮೂವಿ ನೋಡುವಾಗ ಅನ್ನಿಸಿತ್ತು.ಹೆಚ್ಚು ಕಡಿಮೆ ಎರಡು ಮುಕ್ಕಾಲು ಗಂಟೆಯ ಈ ಮೂವಿ ಹಲವರಿಗೆ ನಿಜಕ್ಕೂ ಸಿಕ್ಕಾಪಟ್ಟೆ ಉದ್ದವಾದಂತೆ ಕಂಡಿರಬಹುದು,ಆದರೆ 50,60  ಗಂಟೆಯ ಸೀರಿಸ್ ನೋಡುವವರಿಗೆ ಅದರಲ್ಲೂ ಮೊದಲ 10 ಗಂಟೆ ಕಿಕ್ಕೇ ಕೊಡದ ಆಮೇಲೆ ಸಿಕ್ಕಾಪಟ್ಟೆ ರುಚಿ ಹತ್ತಿಸುವಂತಹ ಸಿರೀಸ್ ನೋಡುವವರಿಗೆ ಇದು ಖಂಡಿತಾ ಅಂತಹ ಸಮಸ್ಯೆ ಆಗದು ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ.ಹೌದು ಈ ಮೂವಿಗೂ ಕಿಕ್ಕು ಕೊಡಲು ಅವನೊಬ್ಬ ಬರುತ್ತಾನೆ.ಅವನೇ FaFa.


Fahadh Faasil ಯಾವುದೇ ಸಿನಿಮಾದಲ್ಲಿ ಹುಚ್ಚು ಹಿಡಿದಂತೆ ನಟಿಸಿದರೆ ನೋಡುಗನಿಗೆ ಸಹ ಬಹಳಷ್ಟು ಹುಚ್ಚು ಹಿಡಿದೇ ಬಿಡುತ್ತದೆ,ಕೆಲವರಿಗೆ ಹಿಡಿದ ಹುಚ್ಚು ಕೂಡ ಬಿಟ್ಟು ಹೋಗುವುದಿದೆ,ಖಂಡಿತವಾಗಿಯೂ ಅಂತಹ ನಟನೇ ಅವನು.ಅವನು ಜಸ್ಟ್ ಸೈಕೋ ಆಗಬೇಕು ಅಷ್ಟೇ.ಹಾಗಾಗಿ ಭಾಗ - 2 ರಲ್ಲಿ ಈ ಮೊದಲ ಭಾಗಕ್ಕಿಂತಲೂ ಹೆಚ್ಚಿನ ರಸದೌತಣ ಇರಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಇದೆ.ಭಾಗ 1 ರಲ್ಲಿ ನೀವು FaFa ಬರುವುದಕ್ಕೆ ಎರಡು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಗುತ್ತದೆ.ಅಂದರೆ ಈ ಮೂವಿಯ ಕೊನೆಯಲ್ಲಿ ಅಷ್ಟೇ ಅವನು ಬರುತ್ತಾನೆ. ಅಂದ ಹಾಗೆ ಇಲ್ಲಿ ಖಳನಾಗಿ ನಟಿಸಿದ ಸುನಿಲ್ ಕೂಡ ಅಷ್ಟೇ ಇಷ್ಟವಾದ ನನಗೆ.ಧನಂಜಯ್ ಗೆ ಇನ್ನಷ್ಟು ಖಡಕ್ ರೋಲ್ ಕೊಡಬಹುದಿತ್ತು ಎಂದು ಅನ್ನಿಸಿತು.


ಕೊನೆಯದಾಗಿ ಹೇಳಬೇಕೆಂದರೆ ಯಾವುದೇ ಮೂವಿಯನ್ನು ನೋಡದೆ,ಯಾವುದೇ ಪುಸ್ತಕವನ್ನು ಓದದೇ ಚೆನ್ನಾಗಿಲ್ಲ ಎಂದು ಹೇಳಬಾರದು.ನೋಡಿದ ಮೇಲೆ ಚೆನ್ನಾಗಿಲ್ಲ ಎಂದು ಹೇಳಿದರೆ ಆ ಅಭಿಪ್ರಾಯಕ್ಕೊಂದು ನಿಜಕ್ಕೂ ತೂಕ ಇರುತ್ತದೆ,ಅದೇ ರೀತಿ ಚೆನ್ನಾಗಿದೆ ಎಂದು ಹೇಳುವುದಕ್ಕೂ ಒಂದು ಗೌರವವಿದೆ.ನಾನು ನೋಡಿದೆ.ನನ್ನ ನೆಮ್ಮದಿ ಹಾಗೂ ಮನಃಶಾಂತಿ ಹಾಳಾಗಿ ಹೋಗಿ ರಾತ್ರಿಯೆಲ್ಲಾ ನಿದ್ದೆಯೇ ಬರದಿರುವಷ್ಟು ಕೆಟ್ಟದಾಗಿ ಇದು ಖಂಡಿತವಾಗಿಯೂ ಇಲ್ಲ.ನೋಡಿ,ಇಷ್ಟ ಆದರೂ ಆಗಬಹುದು, ಕಷ್ಟ ಆದರೂ ಆಗಬಹುದು ಈ ಪುಷ್ಪರಾಜು.


ಬೇರೆಯವರಿಗೆಲ್ಲಾ ಇಷ್ಟ ಆಗಿ ನಿಮಗೆ ಕಷ್ಟ ಆದರೆ ಅದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ.ಅದೇ ರೀತಿ ಯಾರಿಗೂ ಇಷ್ಟ ಆಗದಿದ್ದರೂ ನಿಮಗೊಬ್ಬರಿಗೆನೇ ಇಷ್ಟ ಆಗಿ ಬಿಟ್ಟರೂ ಅಲ್ಲಿಯೂ ನಿಮ್ಮ ತಪ್ಪು ಏನೂ ಇಲ್ಲ.ಮೂವಿ,ಪುಸ್ತಕ,ಈ ಬದುಕಿನ ಇಷ್ಟ,ಕಷ್ಟಗಳು ತೀರಾ ವೈಯಕ್ತಿಕವಾದದ್ದು.ಅಭಿಪ್ರಾಯಗಳು ಹೇರಿಕೆ ಆಗಬಾರದು,ಹೇರಲೂ ಬಾರದು.ನಾವೂ ಕೂಡ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಉಳಿದ ಅಭಿಪ್ರಾಯಗಳನ್ನು ಸುಮ್ಮನೆ ಹಿಂಬಾಲಿಸಲೂ ಬಾರದು.ಎಲ್ಲಾ ಅಭಿಪ್ರಾಯಗಳು ಜಸ್ಟ್ ನಮ್ಮೊಳಗಿನಿಂದಲೇ ಮೊಳಗಬೇಕು.ಅದೇ ನಮ್ಮ ಸುಖ,ಅದೇ ನಮ್ಮದೊಂದು ಅಭಿಪ್ರಾಯಗಳ ಒಟ್ಟು ಕಥೆ.ಬದುಕಿನ ಎಲ್ಲವೂ ಒಂದು ರೀತಿಯಲ್ಲಿ ಹಾಗೆಯೇ ಇರುತ್ತದೆ;ಇರಬೇಕು ಕೂಡ.ಅದೇ,ಇಷ್ಟ ಆದರೆ ಇಷ್ಟ,ಕಷ್ಟ ಆದರೆ ಕಷ್ಟ,ಅಷ್ಟೇ.... 




#Pushpa: The Rise  | [       ]

Telugu Movie

Action Drama

Release - December 2021


Movies

Ab Pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ