The Girl with The dragon Tattoo

 #The_Girl_with_the_Dragon_Tattoo   |  [       ]





ಬೆನ್ನ ಮೇಲೊಂದು ಚಂದದ ಡ್ರ್ಯಾಗನ್ ಟ್ಯಾಟೂ ಹಾಕಿಸಿಕೊಂಡಿರುವ ಅವಳ ಬದುಕು ಮಾತ್ರ ಅವಳ ಆ ಟ್ಯಾಟೂವಿನಷ್ಟು ಚಂದ ಅಲ್ಲ;ಉಹೂಂ ಅಲ್ಲವೇ ಅಲ್ಲ. 


ಮೇಲ್ನೋಟಕ್ಕೆ ತಂಪು ಪಾನೀಯದಂತೆ ತಣ್ಣಗೆ ಕಾಣುವ ಅವಳ ಒಳಗೊಂದು ಬೆಂಕಿ ಉಗುಳುವ ಡ್ರ್ಯಾಗನ್ ನಂತೆಯೇ,ಉರಿಯುವ ಉಲ್ಕೆಯೊಂದು ಸಹ ಅವಶ್ಯವಾಗಿ ಇದೆ.ಸಮಯ ಬಂದಾಗಲೇ ಆ ಉಲ್ಕೆ ಈ ಕಥೆಯಲ್ಲಿ ಅಲ್ಲಲ್ಲಿ ಅಪ್ಪಳಿಸುತ್ತಲೇ ಹೋಗುತ್ತದೆ;ಹೌದು ಬಹಳಷ್ಟು ತೀವ್ರವಾಗಿ.ಈ ಕಥೆಯಲ್ಲಿ ಅವಳು ಇದ್ದಾಳೆ.ಆದರೆ ಇದರೊಳಗಿನ ಪ್ರಧಾನ ಕಥೆ ಮಾತ್ರ ಅವಳದಲ್ಲ.ಆ ಅವನದ್ದೂ ಕೂಡ ಅಲ್ಲ.


ಅದೊಂದು 40 ವರ್ಷಗಳಷ್ಟು ಹಳೆಯದಾದ ಮುರುಕಲು ಕೇಸು.16 ವರ್ಷದ ಹುಡುಗಿಯೊಬ್ಬಳು 40 ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಹೋಗಿರುವ ಮುಸುಕು ಮುಸುಕಾದ  ಕಥೆ.ಆ ಹುಡುಗಿ ಎಲ್ಲಿಗೆ ಹೋದಳು?ಏನಾದಳು? ಕೊಲೆ ಆದಳೇ?ಕೊಲೆ ಆಗಿದ್ದರೆ ಯಾರು ಮಾಡಿದ್ದು? ಪ್ರತೀ ವರ್ಷವೂ ತಪ್ಪದೇ ಹೂವನ್ನು ಒತ್ತಿ ಮಾಡಿದ ಆ ಒಂದು ಪೋಟೋ ಫ್ರೇಮು ಕಳುಹಿಸುವುದು ಯಾರು?.. ಎನ್ನುವ ರಹಸ್ಯವನ್ನು ಬೇಧಿಸಲು ಆ ಟ್ಯಾಟೂ ಹುಡುಗಿ ಹಾಗೂ ಆ ಪತ್ರಕರ್ತ ಹೊರಡುವುದೇ ಈ ಮೂವಿಯದ್ದೊಂದು ಒಟ್ಟಾರೆ ಕಥೆ.


David Fincher ಈ ಮೂವಿಯನ್ನು ನಿರ್ದೇಶನ ಮಾಡಿದ್ದಾನೆ. ಸ್ವೀಡಿಶ್ ಕಾದಂಬರಿಕಾರ Stieg Larsson ನ ಕಾದಂಬರಿ ಆಧಾರಿಸಿ ಈ ಮೂವಿ ಮಾಡಲಾಗಿದೆ. Daniel Craig, Rooney Mara ಮುಂತಾದವರ ಅಭಿನಯವಿದೆ.Rooney Mara ಳ ಈ ಒಂದು ಡ್ರ್ಯಾಗನ್ ಟ್ಯಾಟೂ ಹುಡುಗಿಯ ಪಾತ್ರ ಮಾತ್ರ ತುಂಬಾ ನೆನಪಿನಲ್ಲಿ ಉಳಿಯುವಂತಹದ್ದು.ಅಂದ ಹಾಗೆ ಡೇವಿಡ್ ಪಿಂಚರ್ ನ ಈ ಮೂವಿ ಸಹ ಅಷ್ಟೇ ಪ್ರಸಿದ್ಧವಾದದ್ದು.ಒಂದು ಕಾಲದಲ್ಲಿ ನಡೆದ ಸರಣಿ ಕೊಲೆ ಹಾಗೂ ಸ್ತ್ರೀಯರ ಮೇಲೆ ಆದ ದೌರ್ಜನ್ಯ ಈ ಕಥೆಯೊಳಗೆ ಇದೆ.ಅಂದ ಹಾಗೆ ಈ ಮೂವಿ ಸದ್ಯಕ್ಕೆ ಯಾವುದೇ ಓ.ಟಿ.ಟಿ ಯಲ್ಲಿ ಇಲ್ಲ ಎಂದು ಅನಿಸುತ್ತದೆ,ಹಾಗಾಗಿ ನೋಡಬೇಕಾದರೆ ಡೌನ್ ಲೋಡ್ ಮಾಡಿಕೊಂಡೇ ನೋಡಬೇಕಾಗುತ್ತದೆ. 



ಕಥೆಯೊಳಗಿನ ನಿಗೂಡತೆಗಿಂತಲೂ,ಟ್ಯಾಟೂ ಹುಡುಗಿಯ ನಿರ್ಲಿಪ್ತತೆಯೇ ನನಗೆ ಹೆಚ್ಚು ಕಾಡಿತು.ಅವಳು ಸಿಕ್ಕಾಪಟ್ಟೆ ಬೋರಿಂಗ್ ಎಂದು ಅನಿಸಿದಾಗಲೆಲ್ಲ ಒಮ್ಮೆಲೇ ಮಿಂಚಿನಂತೆ  ಓಡಾಡಿ ಇನ್ನಿಲ್ಲದ ಆಸಕ್ತಿಯನ್ನು ಹಾಗೇ ಹುಟ್ಟಿಸಿ ಹಾಕುತ್ತಾಳೆ. ಅವಳ ಆ ಬೆಂಡಾದ ಕಪ್ಪು ಕಿವಿಯೋಲೆಗಳು,ಮೂರು ಬೆರಳನ್ನೂ ಆವರಿಸಿಕೊಳ್ಳುವ ಆ ಒಂದು ಬೆರಳ ಉಂಗುರ,ಹುಬ್ಬಿನ ನಡುವಲ್ಲಿ,ತುಟಿಯ ಅಂಚಲ್ಲಿ,ಮೂಗಿನ ತುದಿಯಲ್ಲಿ ಚುಚ್ಚಿಸಿಕೊಂಡಿರುವ ಆ ಅಷ್ಟೂ ಸಣ್ಣ ಸಣ್ಣ ರಿಂಗುಗಳು,ಅವಳದ್ದೊಂದು ಎಂದಿಗೂ ಬೆಂಕಿ ಉಗುಳದ ಡ್ರ್ಯಾಗನ್ನಿನದ್ದೇ ಟ್ಯಾಟೂ,ಸದಾ ಮಿಂಚಿನಂತೆ ವೇಗವಾಗಿ ಓಡುವ ಅವಳ ಆ ಕರಿ ಬೈಕು,ಶಾಶ್ವತವಾಗಿ ನಗು ಅರಳಿಸಲು ಮರೆತು ಹೋದ ಆ ಮುಖ... ಮೂವಿ ಮುಗಿದರೂ ಮತ್ತೆ ಮತ್ತೆ ನೆನಪಿಗೆ ಬರುವಂತಹದ್ದು.ನೋಡಿ ನಿಮಗೂ ಇಷ್ಟವಾಗಬಹುದು ಡೇವಿಡ್ ಪಿಂಚರ್ ನ ಈ ಟ್ಯಾಟೂ ಹುಡುಗಿ... 


#The_Girl_with_the_Dragon_Tattoo   |  [       ] 

English Movie 

Neo-noir/Psychological Thriller 

Release - 2011


Movies 

Ab Pacchu 

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ