ಬಣಲೆಯ ಸಜ್ಜಿಗೆ




ಬರೀ ಇಷ್ಟಕ್ಕೆ ಹೊಟ್ಟೆ ಏನು ತುಂಬುವುದಿಲ್ಲ.ಹೊಟ್ಟೆ ತುಂಬದಿದ್ದರೂ ಕಣ್ಣುಗಳೆರಡು ಹಾಗೇ ಭರ್ತಿಯಾಗುವುದಂತು ಮಾತ್ರ ಸತ್ಯ.ನನಗಂತು ಆಹಾರಗಳನ್ನು ನೋಡುತ್ತಿದ್ದಂತೆಯೇ ಮೊದಲು ಅವುಗಳು ನನ್ನ ಪಂಚೇಂದ್ರಿಯಗಳನ್ನು ಸಂತೈಸಲು ಇನ್ನಿಲ್ಲದಂತೆ ಪೈಪೋಟಿಗಿಳಿದು ಬಿಡಬೇಕು,ಆಮೇಲೆ ಉದರವನ್ನು ಮೆಲ್ಲ ಮೆಲ್ಲಗೆ ಸಂತೃಪ್ತಿಗೊಳಿಸುತ್ತಾ ಬರಬೇಕು, ಜೊತೆಗೆ ಮನಸ್ಸಿನ ಉಲ್ಲಾಸಕ್ಕೂ ಅಷ್ಟಿಷ್ಟು ಕಾರಣವಾಗಿ ಬಿಡಬೇಕು. 


ನಿಜ ಹೇಳಬೇಕೆಂದರೆ ನಾನು ಮೂಲತಃ ಉಪ್ಪಿಟ್ಟು ದ್ವೇಷಿ ಅಲ್ಲ,ಹಾಗಂತ ಹುಟ್ಟು ಉಪ್ಪಿಟ್ಟು ಪ್ರೇಮಿ ಕೂಡ ನಾನಲ್ಲ.'ಮನೆಯಲ್ಲಿ ಉಪ್ಪಿಟ್ಟು ಬೇಡ,ಇನ್ನು ಮುಂದೆ ಬೇಡವೇ ಬೇಡ,ಎಂತ ಅಮ್ಮ.. ಯಾವಾಗಲೂ ಮನೆಯಲ್ಲಿ ಸಜ್ಜಿಗೆಯೇ.. ' ಎಂಬ ಉಗ್ರ ಪ್ರತಿಭಟನೆಗೆ ಯಾವತ್ತೂ ಮುಂದಾದವನು ಕೂಡ ನಾನಲ್ಲ."ಈ ಪರೋಟಕ್ಕೆ ರಬ್ಬರ್ ಮ್ಯಾಟ್ ಎಂದು ಹೆಸರಿಡಬೇಕು,ಈ ಉಪ್ಪಿಟ್ಟಿಗೆ ಕಾಂಕ್ರೀಟ್ ಎಂದೇ ಶೀಘ್ರವಾಗಿ ನಾಮಕರಣ ಮಾಡಬೇಕು " ಎಂದು ಹಾಸ್ಟೆಲ್ ಗೆಳೆಯರು ಅಡುಗೆ ಭಟ್ಟರ ಕೆಟ್ಟ ಅಡುಗೆಯ ವಿರುದ್ಧ ಧ್ವನಿ ಎತ್ತಿದಾಗಲೂ ಕೂಡ ನನ್ನದೊಂದು ಬೆಂಬಲ ಹೃದಯದಿಂದ ಅವರಿಗೆ ಸಿಕ್ಕಿರಲಿಲ್ಲ.ಏಕೆಂದರೆ ನನ್ನ ಥಿಯರಿಯ ಪ್ರಕಾರ ಯಾವುದೇ ಅಡುಗೆಯನ್ನು ಮಾಡುವಂತೆ ಮಾಡಿದರೆ ತಿನ್ನದವರು ಕೂಡ ಇಷ್ಟೇ ಪಟ್ಟು ತಿನ್ನಬಹುದು ಎಂದೇ ಆಗಿತ್ತು,ಈಗಲೂ ಆ ಥಿಯರಿಯನ್ನೇ ನಾನು ನಂಬುತ್ತೇನೆ. 


ಆದರೂ ಏನೇ ಹೇಳಿದರೂ ಈ ಉಪ್ಪಿಟ್ಟಿನ ಕಡೆಗೆ ಮಮಕಾರ ಕಡಿಮೆ ಇದ್ದು ಅಲ್ಪ ಸ್ವಲ್ಪ ತಿರಸ್ಕಾರವೇ ಅದರೆಡೆಗೆ ನನ್ನಲ್ಲಿ ಹೆಚ್ಚಿದ್ದದ್ದು ಕೂಡ ಅಷ್ಟೇ ಸತ್ಯವೇ.ಅಮ್ಮ ಮನೆಯ ದೊಡ್ಡ ಬಣಲೆಯಲ್ಲಿ ಚೆನ್ನಾಗಿ ಒಗ್ಗರಣೆ ಹಾಕಿ ಎಷ್ಟೇ ಸರ್ವಾಲಂಕಾರ ಭೂಷಿತ ಸಜ್ಜಿಗೆ ಮಾಡಿಟ್ಟರೂ,ಅದು ಗಂಟಲೊಳಗೆ ಇಳಿಯುವುದು ತುಂಬಾ ಅಂದರೆ ತುಂಬಾ ಕಷ್ಟ.ಬೆಳ್ಳಿಗೆ ಮಾಡಿದ ಸಜ್ಜಿಗೆ ಸಂಜೆಯವರೆಗೆ ಕೂಡ ಮನೆಯವರ ಯಾವುದೇ ಹೆಚ್ಚಿನ ಬೇಡಿಕೆ ಇಲ್ಲದೆ ಹಾಗೇ ಒಣಗಿ ಸೊರಗಿದ್ದೇ ಹೆಚ್ಚು.ತಿನ್ನಲು ಏನೂ ಇಲ್ಲದೇ ಇದ್ದಾಗ ಅದೇ ಸಜ್ಜಿಗೆಯನ್ನು ಮೃಷ್ಟಾನ್ನದಂತೆ ತಿನ್ನುವ ಅದರಲ್ಲೂ ಬಣಲೆಗೆ ಅಂಟಿಕೊಂಡಿರುವ ಒಂದಿಷ್ಟು ಕರಟಿ ಹೋಗಿರುವ ಸಜ್ಜಿಗೆಯನ್ನು ಸೌಟಿನಿಂದ ಕೆರೆಸಿ ಕೆರೆಸಿ ತೆಗೆದು ತಿನ್ನುವ ಆ ಒಂದು ಕಥೆಗೆ ಮಾತ್ರ ರುಚಿ ಬಹಳಷ್ಟು ಹೆಚ್ಚು ಎನ್ನುವುದನ್ನು ನಾನಿಲ್ಲಿ ಮನ:ಪೂರ್ವಕವಾಗಿ ಹೇಳಿಕೊಳ್ಳುತ್ತೇನೆ ಹಾಗೂ  ಒಪ್ಪಿಕೊಳ್ಳುತ್ತೇನೆ.


ಒಟ್ಟಿನಲ್ಲಿ ಪುಂಡಿ,ಮೂಡೆ,ಗಟ್ಟಿ,ಕೊರ್ರೊಟ್ಟಿ,ಕಪರೊಟ್ಟಿ,ತೆಳ್ಳವ್ ಗಳನ್ನು ಖಾರ ಖಾರವಾದ ಕೊಡಕ್ಕೆನೆಯಾದ ಗಸಿಗಳೊಂದಿಗೆ ಚೆನ್ನಾಗಿ ಮೆದ್ದು ಮೆಲ್ಲುವ ಸುಖ ಅನುಭವಿಸಿದವರಿಗೆ ಈ ಸಜ್ಜಿಗೆ ಎಂಬ ಉಪ್ಪಿಟ್ಟು ಬಹಳಷ್ಟು ಇಷ್ಟವಾಗುವುದು ಯಾವತ್ತಿಗೂ ಸ್ವಲ್ಪ ಕಷ್ಟವೇ ಬಿಡಿ.ಕೊನೆಯ ಪಕ್ಷ ಅದು ಬಜಿಲ್(ಅವಲಕ್ಕಿ),ಶೀರಾದೊಂದಿಗೆ ಜೋಡಿಯಾಗಿ ಸಜ್ಜಿಗೆ-ಬಜಿಲ್,ಉಪ್ಪಿಟ್ಟು-ಶೀರಾ ಎಂಬ ಅವತಾರಗಳಲ್ಲಿ ದರ್ಶನ ಭಾಗ್ಯ ಕರುಣಿಸಿದಾಗ ಆ ಉಳಿದವುಗಳ ಜೊತೆಯಲ್ಲಿ ಈ ಉಪ್ಪಿಟ್ಟನ್ನು ಹಾಗೋ ಹೀಗೋ ತಿನ್ನುವ ಮನಸ್ಸನ್ನು ಹೇಗೋ ಮಾಡಿ ಬಿಡಬಹುದು.ಆದರೆ ಈ ಚಿತ್ರದಲ್ಲಿ ಶೀರಾ ಜೊತೆಗೆ ಒಂದು ಸ್ಕೂಪು ಉಪ್ಪಿಟ್ಟು ಇದೆ ನೋಡಿ,ಈ ಉಪ್ಪಿಟ್ಟು ಮಾತ್ರ ನೋಡಲಷ್ಟೇ  ಚಂದವಲ್ಲ,ತಿನ್ನಲು ಕೂಡ ಅಷ್ಟೇ ರುಚಿಯಾದ್ದದ್ದು.ನಿಜ ಹೇಳಬೇಕೆಂದರೆ ಇದರ ಬಗ್ಗೆಯೇ ನಾನಿವತ್ತು ಸ್ವಲ್ಪ ಜಾಸ್ತಿಯೇ ಹೇಳಬೇಕಾಗಿರುವುದು. 


ಯಾರಾದರೂ ಉಪ್ಪಿಟ್ಟನ್ನು ನಖಶಿಖಾಂತ ದ್ವೇಷಿಸುವವರಿದ್ದರೆ, "ಬೇಕದಾರೆ ಪ್ರಾಣ ಬಿಟ್ಟೇನು.. ಆದರೆ.. ಆದರೆ ಸಾಯುವವರೆಗೆ ಈ ಉಪ್ಪಿಟ್ಟೊಂದನ್ನು ಮಾತ್ರ ಎಂದಿಗೂ ಮುಟ್ಟಲಾರೆ ಅಮ್ಮಾ.." ಎಂದು ಘೋರವಾದ ಶಪಥವೊಂದನ್ನು ಮನೆಯ ಸಜ್ಜಿಗೆ ಬಣಲೆಯ ಮುಂದೆ ಮಾಡಿದವರಿದ್ದರೆ,ಬಹುಶಃ ಈ ಒಂದು ಉಪ್ಪಿಟ್ಟು ತಿಂದ ಮೇಲೆ ಅವರಿಗೆ ಉಪ್ಪಿಟ್ಟಿನ ಮೇಲಿರುವ ಬೆಟ್ಟದಷ್ಟು ದ್ವೇಷದಲ್ಲಿ ಒಂದಿಷ್ಟು ದ್ವೇಷ ಹಾಗೇ ಕರಗಿ ಹೋಗಬಹುದು ಎಂದೇ ನನ್ನ ಮನಸ್ಸಿನ ಭಾವನೆ.ಇಷ್ಟೆಲ್ಲಾ ಹೇಳಿ ಇದು ಎಲ್ಲಿ ಸಿಗುತ್ತದೆ ಎಂದು ಹೇಳದಿದ್ದರೆ ಎಷ್ಟೊಂದು ದೊಡ್ಡ ತಪ್ಪು ಅಲ್ಲವೇ.ಖಂಡಿತಾ ಹೇಳುತ್ತೇನೆ.


ಈ ಉಪ್ಪಿಟ್ಟು ನಮ್ಮ ಬೆದ್ರ ದಲ್ಲಿ(ಮೂಡುಬಿದಿರೆ) ಇರುವ ಒಂದು ಬಹಳ ಪುಟ್ಟದಾದ ಹೋಟೆಲ್ ನಲ್ಲಿ ಸಿಗುತ್ತದೆ.ಮೂಡುಬಿದಿರೆಯ ಪ್ರಸಿದ್ಧವಾದ ಹನುಮಾನ್ ಟೆಂಪಲ್ ನಿಂದ ಅಮರಶ್ರೀ ಥಿಯೇಟರ್ ಕಡೆಗೆ ಹೋಗುವ ರಸ್ತೆಯ ಆರಂಭದಲ್ಲಿಯೇ ಎಡ ಬದಿಯಲ್ಲಿ ಈ ಹೋಟೆಲ್ ಉಂಟು.ಈ ಹೋಟೆಲ್ ಮುಂದೆ ದಪ್ಪ ಅಕ್ಷರಗಳಲ್ಲಿ ಬರೆದ ಯಾವುದೇ ದೊಡ್ಡ ಬೋರ್ಡ್ ಗಳಿಲ್ಲ.ಹಿಂದೆ 'ಶ್ರೀ ಮುಖ್ಯಪ್ರಾಣ' ಎಂಬ ಹೆಸರಿನ ನಾಮ ಫಲಕ ಇತ್ತಂತೆ.ಅಂಗಡಿ ಮುಂದೆ ಕಡ್ಪ ಕಲ್ಲಿನ ಒಂದು ಟೇಬಲ್ ಹಾಗೂ ಕುಳಿತುಕೊಳ್ಳಲು ಉದ್ದಕ್ಕೆ ಸಿಮೆಂಟ್ ದಂಡೆಯಷ್ಟೇ ಇಲ್ಲಿರುವುದು.ನಾಲ್ಕೈದು ಜನ ಆ ದಂಡೆಯಲ್ಲಿ ಆಸೀನರಾಗಿ ಬಿಟ್ಟರೆ ಉಳಿದವರು ನಿಂತುಕೊಂಡೇ ತಿಂಡಿ ತಿನ್ನಬೇಕಾಗುತ್ತದೆ.ಆದರೂ ಈ ಹೋಟೆಲ್ ಗೆ ಜನ ಹುಡುಕಿಕೊಂಡು ಬರುತ್ತಾರೆ.ಖಾಯಂ ಜನಗಳು ಇಲ್ಲಿಗೆ ಎಂದಿನಂತೆ ಬಂದು ಕುಳಿತುಕೊಂಡು,ನಿಂತುಕೊಂಡು ತಿಂಡಿ ತಿಂದು ಹೋಗುತ್ತಾರೆ.ಒಂದೇ ಕೋಣೆಯ ಈ ಹೋಟೆಲ್ ಆರಂಭವಾಗಿ ಹೆಚ್ಚು ಕಡಿಮೆ 19,20 ವರ್ಷಗಳು ಆಗಿರಬಹುದು.


ಬಹಳ ಸರಳವಾದ ಇಲ್ಲಿಯ ಉಪ್ಪಿಟ್ಟಂತು ನನಗೆ ಬಹಳನೇ ಪ್ರಿಯವಾದದ್ದು.ಬಾಲ್ಯದಲ್ಲಿ ಉಪ್ಪಿಟ್ಟು ಎಂದರೆ ಅಷ್ಟೇನು ಇಷ್ಟವಿಲ್ಲದ ನಾನು ಸಹ ಇಲ್ಲಿಯ ಉಪ್ಪಿಟ್ಟಿಗೆ ದಾಸಾನು ದಾಸನೇ ಆಗಿದ್ದೇನೆ.ಎಲ್ಲಿಯೂ ಉಪ್ಪಿಟ್ಟು ತಿನ್ನದಿದ್ದರೂ ಇಲ್ಲಿಗೆ ಬಂದಾಗ ಉಪ್ಪಿಟ್ಟು-ಶೀರಾ ಇಲ್ಲವೇ ಉಪ್ಪಿಟ್ಟು ಅವಲಕ್ಕಿಯೊಂದಿಗೆ ಉಪ್ಪಿಟ್ಟೊಂದನ್ನೇ ಹೆಚ್ಚಿನ ಸ್ಟ್ರೈಕ್ ರೇಟಿನಲ್ಲಿ ಬಾರಿಸಲು ನಾನಿಲ್ಲಿ ಮರೆಯುವುದೇ ಇಲ್ಲ.ಕೆಲವೊಮ್ಮ ಕೇವಲ ಉಪ್ಪಿಟ್ಟು ಒಂದನ್ನೇ ಎರಡೆರಡು ಪ್ಲೇಟ್ ತಿಂದು ಎದ್ದದ್ದು ಇದೆ.ಈ ಹೋಟೆಲ್ ನಲ್ಲಿ ಬರೀ ಉಪ್ಪಿಟ್ಟು ಮಾತ್ರವಲ್ಲ ಇಡ್ಲಿ ತೊವ್ವೆಯ ಪಕ್ಕಾ ಅಭಿಮಾನಿ ನೀವು ಆಗಿದ್ದರೆ ಅದೂ ಕೂಡ ಇಲ್ಲಿ ಸಿಗುವುದು ಉಂಟು,ಅದೂ ಸಹ ನಿಮಗೆ ಇಷ್ಟ ಆಗಲೂ ಬಹುದು.ಸೋಯಾ ಹಾಕಿ ಬಹಳ ಸಿಂಪಲ್ ಆಗಿ ಮಾಡಿದಂತಹ ಒಂದು ಪುಲಾವ್  ಮಂಗಳವಾರ ಹಾಗೂ ಶನಿವಾರ ಅಷ್ಟೇ ಸಿಗುತ್ತದೆ,ಅದೂ ಕೂಡ ಒಂಥರಾ ಚೆನ್ನಾಗಿಯೇ ಇದೆ.ಕಡ್ಲೆ ಬಜಿಲ್,ಸಜ್ಜಿಗೆ ಬಜಿಲ್,ಪದೆಂಗಿ ಬಜಿಲ್,ಬನ್ಸ್,ಅಂಬಡೆ,ವಡೆ,ಚಟ್ಟಂಬಡೆ ಹೀಗೆ ತುಳುನಾಡಿನ ಹೆಚ್ಚಿನ ಎಲ್ಲಾ ತಿಂಡಿಗಳು ಇಲ್ಲಿ ಉಂಟು.ಸಂಜೆಯ ವೇಳೆಗೆ ಬಾಳೆಕಾಯಿ,ಗೆಣಸು,ಜೀಗುಜ್ಜೆ,ಕಂಚಲ,ಕಾಟ್ ಪೀರೆ,ಸಬ್ಬಸಿಗೆ,ಬಸಳೆ ಸೊಪ್ಪು,ಗುಳ್ಳ ಹೀಗೆ ತರಹೇವಾರಿ ತರಕಾರಿಗಳ ಪೋಡಿಗಳನ್ನು ಮತ್ತು ಸುವರ್ಣ ಗಡ್ಡೆಯ ತವಾ ಫ್ರೈ,ಪತ್ರೋಡೆಯ ರವಾ ಫ್ರೈ (ಸೀಸನ್ ನಲ್ಲಿ)ಗಳನ್ನು ಕೂಡ ಇಲ್ಲಿ ಬಿಸಿ ಬಿಸಿಯಾಗಿ ಗರಿಗರಿಯಾಗಿ ಮಾಡಿ ಕೊಡುತ್ತಾರೆ.ರೇಟು ಕೂಡ ಬಹಳಷ್ಟು ಕಡಿಮೆ.ಹೆಚ್ಚೆಂದರೆ ಒಂದು ಪ್ಲೇಟು ತಿಂಡಿಗೆ ಹದಿನೈದರಿಂದ ಇಪ್ಪತ್ತು ರೂಪಾಯಿ ಒಳಗೆ ಅಷ್ಟೇ ಇರುವುದು.ಅಂದ ಹಾಗೆ ಇದು ಗೌಡ ಸಾರಸ್ವತ ಬ್ರಾಹ್ಮಣರ ಶುದ್ಧ ಸಸ್ಯಾಹಾರಿ ಹೋಟೆಲ್.ಇಲ್ಲಿ ಊಟವಿಲ್ಲ,ಉಪಹಾರ ಅಷ್ಟೇ ಸಿಗುತ್ತದೆ.ಕುಡಿಯಲು ತಂಪಾದ ಎಳ್ಳು,ರಾಗಿ,ಮಜ್ಜಿಗೆ, ಪುನರ್ಪುಳಿ ಸದಾ ಇರುತ್ತದೆ.ಮೂಡುಬಿದಿರೆಯವರೇ ಆಗಿದ್ದರೆ ಹೆಚ್ಚಿನವರಿಗೆ ಇದರ ಪರಿಚಯವೊಂದು ಇದ್ದೇ ಇರುತ್ತದೆ.ಒಂದು ವೇಳೆ ಇಲ್ಲಿಯವರೆಗೆ ಹೋಗದೆ ಇದ್ದಿದ್ದರೆ ನೀವೊಮ್ಮೆ ಟ್ರೈ ಮಾಡಿ ನೋಡಬಹುದು.ಅದರಲ್ಲೂ ಸಾದಾ ಸೀದಾ ಬಹಳಷ್ಟು ಸರಳವಾದ ಈ ಉದ್ದೀನ ಬೇಳೆ ಒಗ್ಗರಣೆಯ ಉಪ್ಪಿಟ್ಟು ನಿಮ್ಮ ಮನಸ್ಸು ಗೆದ್ದೇ ಗೆಲ್ಲುತ್ತದೆ ಎನ್ನುವುದು ನನ್ನೊಂದು ಸ್ಟ್ರಾಂಗ್ ಫೀಲಿಂಗ್.ಉಪ್ಪಿಟ್ಟು ಬಿಸಿ ಇದ್ದಾಗಲೇ ತಿನ್ನಬೇಕು ಎಂದು ನಿಮಗೂ ಇದ್ದರೆ ಬೆಳಿಗ್ಗೆ ಬಹಳ ಬೇಗನೇ ಇಲ್ಲಿಗೆ ನೀವು ಲಗ್ಗೆ ಹಾಕಬೇಕಾಗುತ್ತದೆ.


ಏನೇ ಹೇಳಿ ಬಹಳ ಸಿಂಪಲ್ ಆಗಿ ಮಾಡಬಹುದಾದಂತಹ ಉಪ್ಪಿಟ್ಟನ್ನು ಕೆಟ್ಟ ರೀತಿಯಲ್ಲಿಯೇ ನಿರಂತರವಾಗಿ ತಿಂದು ತಿಂದು  ಅಭ್ಯಾಸವಾಗಿ ಹೋಗಿದ್ದಾಗ,ಎಲ್ಲಾದರೂ ಈ ರೀತಿ ಬಹಳ  ರುಚಿಯಾಗಿ ಉಪ್ಪಿಟ್ಟು ಮಾಡಿದ್ದನ್ನು ತಿಂದರೆ,ಈ ಉಪ್ಪಿಟ್ಟು ಮಾಡುವುದು ನಿಜಕ್ಕೂ ಕೂಡ ದೊಡ್ಡ ಕಲೆಯೇ ಹೌದು ಎಂದು  ಅನ್ನಿಸದೇ ಇರುವುದಿಲ್ಲ.ಹೌದೋ ಅಲ್ಲವೋ ಎಂದು ನೀವೇ ಹೇಳಬೇಕು. ಏಕೆಂದರೆ ನಮ್ಮಲ್ಲಿ ಇಂದಿಗೂ ಸರಿಯಾಗಿ ರುಚಿಯಾಗಿ ಉಪ್ಪಿಟ್ಟು ಮಾಡಲು ಬರದ  ಮನೆಗಳು ಹಲವಾರು ಇದೆ.ಬಹುಶಃ ಹಾಗಾಗಿಯೇ ಮನೆ ಮಂದಿಯ ಹೆಚ್ಚಿನ ಬೈಗುಳಗಳೆಲ್ಲವೂ ಈ ರುಚಿ ರುಚಿ ಆಗಬಹುದಾದಂತಹ ಆದರೆ ಆ ರೀತಿ ಆಗದೇ ಉಳಿದಂತಹ ಈ ಪಾಪದ ಉಪ್ಪಿಟ್ಟೊಂದರ   ಮೇಲೆಯೇ ಬಿದ್ದು,ಅದರ ಮೇಲೆ ನಿರಂತರವಾಗಿ ಈ ರೀತಿಯ ದಬ್ಬಾಳಿಕೆಗಳು ಹೆಚ್ಚಾಗುತ್ತಾ ಹೋಗಿದ್ದು ಎಂದೇ  ನನಗನಿಸುತ್ತದೆ.ಇದಕ್ಕೆ ಉತ್ತರ ಉಪ್ಪಿಟ್ಟು ಮಾಡಿದ ಮನೆಯ  ಗೃಹಿಣಿಯರು ಹಾಗೂ ಅದರ ರುಚಿ ನೋಡಿದ ನಮ್ಮ ಗಂಡು ಮಕ್ಕಳೇ ನೀಡಬೇಕು. 

ಶುಚಿಯಾಗಿ ರುಚಿಯಾಗಿ ಸಿಗುವಂತಿದ್ದರೆ ಏನಾದರೊಂದು ಹರಟೆ ಹೊಡೆಯುತ್ತಾ,ಅಧಿಕ ಪ್ರಸಂಗವನ್ನೇ ಮಾತಾಡುತ್ತಾ ತಿಂಡಿ ತಿನ್ನಲು ಇಂತಹ ಸಣ್ಣ ಪುಟ್ಟ ಹೋಟೆಲ್ ಗಳೇ ನನಗೆ ಹೆಚ್ಚು ಅಚ್ಚುಮೆಚ್ಚು.ನಾನು ಎಲ್ಲಿ ಹೋದರೂ ಸಣ್ಣ ಹೋಟೆಲ್ ಗಳನ್ನೇ ಹೆಚ್ಚಾಗಿ ಮೊದಲು ಹುಡುಕುತ್ತೇನೆ ಹಾಗೂ ಗುರುತು ಮಾಡಿಟ್ಟುಕೊಳ್ಳುತ್ತೇನೆ.ಉದರಕ್ಕೂ ಮನಸ್ಸಿಗೂ ಬಹಳಷ್ಟು ಹಿಡಿಸಿ ಬಿಟ್ಟರೆ ಆ ಮೇಲೆ ಅಲ್ಲಿಗೆ ನಾನು ಖಾಯಂ ಗಿರಾಕಿಯೇ  ಆಗಿ ಬಿಡುತ್ತೇನೆ.ಏನೇ ಹೇಳಿ ಅಡುಗೆ ಭಟ್ಟರಿಗೆ ನೇರವಾಗಿ ಸುಲಭವಾಗಿ ಮೆಚ್ಚುಗೆ ಸೂಚಿಸಲು ಸಾಧ್ಯ ಆಗುವುದೇ ಇಂತಹ ಸಣ್ಣ ಹೋಟೆಲ್ ಗಳಲ್ಲಿ ಮಾತ್ರ ಅಲ್ಲವೇ. 


ಚೆನ್ನಾಗಿ ಅಡುಗೆ ಮಾಡಿದ್ದರೆ ಅದು ಹೋಟೆಲ್ ನ ಅಡುಗೆಯವರೇ ಇರಲಿ ಅಥವಾ ಮನೆಯ ನಮ್ಮ ಅಮ್ಮನೇ ಇರಲಿ ಮನಸ್ಸಿಂದ ಮೆಚ್ಚುಗೆ ತಿಳಿಸಲು,ಮುಕ್ತವಾಗಿ ನಮ್ಮದೊಂದು ಖುಷಿಯ ಅಭಿಪ್ರಾಯ ಹೇಳಲು ನಾವು ಯಾವತ್ತೂ ಹಿಂದೇಟು ಹಾಕಲೇಬಾರದು.ಇಂತಹ ಮೆಚ್ಚುಗೆಗಳೇ ಸೌಟು ಹಿಡಿಯುವ ಕೈಗಳಿಗೆ ಬಹಳಷ್ಟು ಉಲ್ಲಾಸ ಉತ್ಸಾಹವನ್ನು ಸದಾ ತುಂಬುವುದು.


ಸಣ್ಣ ಹೋಟೆಲ್ ನ ಕಾಯಿ ಚಟ್ನಿಗೆ ಯಾವತ್ತೂ ರುಚಿ ಹೆಚ್ಚು,ಆ ಒಗ್ಗರಣೆಗಳ ಘಮದಲ್ಲಿ ಅದೇನೋ ಮೈಮನ ಅರಳಿಸುವ ಪುಳಕವಿರುವುದು,ಚೆನ್ನಾಗಿ ಕುದಿಸಿ ಬಸಿದು ಲೋಟಕ್ಕೆ ಮೇಲಿಂದ ಕೆಳಗೆ ನೊರೆಯೇಳಿಸುವಂತೆ ಹೊಡೆದು ಕೊಡುವ ಆ ಸಿಂಪಲ್ ಟೀ ಯಲ್ಲೂ ಕೂಡ ಅದೇನೋ ಆಹ್ಲಾದತೆ  ಸಿಕ್ಕಾಪಟ್ಟೆ ಇದೆಯೆಂದು ನಾನು ಇಂದಿಗೂ ಗಾಢವಾಗಿಯೇ ನಂಬಿದ್ದೇನೆ.. 


ab pacchu

https://phalgunikadeyavanu.blogspot.com

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..