ಎರಡು ಮುತ್ತಿನ ಕಥೆ..
"ಪುಷ್ಯರಾಗ"
(ಎರಡು ಮುತ್ತಿನ ಕಥೆ.. )
ಸಿನಿಮಾ ನನಗೂ ಇಷ್ಟವಿಲ್ಲ.ಅವಳಿಗೂ ಇಷ್ಟವಿಲ್ಲ.ಆದರೂ ಆ ದಿನ ನಾವಿಬ್ಬರೂ ಒಟ್ಟಿಗೆ ಕುಳಿತುಕೊಂಡು ಮೂವಿಯೊಂದನ್ನು ನೋಡಿದ್ದೆವು.ಮೂವಿ ನೆಪ ಆಗಿತ್ತು ಅಷ್ಟೇ.ಅವಳು ನನ್ನ ಹತ್ತಿರ,ನಾನು ಅವಳ ಹತ್ತಿರ,ಗ್ಯಾಪು ತುಂಬಾನೇ ಕಡಿಮೆ ಇತ್ತು.
ದೆವ್ವದ್ದೇ ಮೂವಿಯದು,ಹಾಗಾಗಿ ಅಲ್ಲಲ್ಲಿ ಅವುಗಳೂ ಭೀಕರವಾಗಿಯೇ ಇದ್ದವು.ನಡುವಲ್ಲಿ ಅವಳು ತುಂಬಾ ಹೆದರಿದಳು.ಜೋರಾಗಿ ಕಿರುಚಿದಳು.ಭಯದಿಂದ ಪಕ್ಕದಲ್ಲಿದ್ದ ನನ್ನನ್ನೇ ಗಟ್ಟಿಯಾಗಿ ಅಪ್ಪಿಕೊಂಡಳು.ನಾನು ನನ್ನಷ್ಟಕ್ಕೆ ಮರದ ಗಟ್ಟಿ ಕಾಂಡದಂತಿದ್ದೆ.ಅವಳಷ್ಟೇ ತಬ್ಬಿಕೊಂಡು ನನ್ನಲ್ಲಿ ಹಬ್ಬಿಕೊಂಡ ಬಳ್ಳಿಯಾಗಿ ಬಿಟ್ಟಿದ್ದಳು."ನಿನಗೆ ಮುದ್ದಾಡಲು ಬರುವುದಿಲ್ಲ,ಸರಿಯಾಗಿ ತಬ್ಬಿಕೊಳ್ಳಲು ಬರುವುದಿಲ್ಲ,ಚೆನ್ನಾಗಿ ನಗುವುದನ್ನು ಕಲಿತಿಲ್ಲ,ಮಾತಂತು ಮೊದಲೇ ಬರುವುದಿಲ್ಲ,ಕೊನೆಯ ಪಕ್ಷ ನಿನಗೆ ಮುತ್ತೆಂದರೆ ಗೊತ್ತೇ ?.. " ಎಂದು ನನ್ನ ಉಸಿರಿಗೆ ಅವಳ ಬಿಸಿ ಉಸಿರು ಸೋಕಿಸಿ,ಕಣ್ಣೊಳಗೆ ಕಣ್ಣಳಿಸಿ ಬಹಳಷ್ಟು ನಿಟ್ಟುಸಿರು ಬಿಡುತ್ತಲೇ ಕಿವಿಯಲ್ಲಿ ಉಸುರಿದ್ದಳು ಅವಳು.ಅವಳ ಉದ್ದದ ಎರಡೂ ತೋಳುಗಳು ನನ್ನಲ್ಲಿ ಮತ್ತಷ್ಟು ಹಾಗೇ ಹರಡಿಕೊಂಡವು.ಅವಳ ಬಿಚ್ಚಿದ ಕೂದಲು ಗಾಳಿಯಲ್ಲಿ ಅದರಷ್ಟಕ್ಕೆ ಹಾರಾಡುತ್ತಿದ್ದವು,ಅದೇನೋ ಹಾಡುತ್ತಿದ್ದವು.
ನಾನು ಮಾತ್ರ ಆ ಹಾರಾಡುತ್ತಿದ್ದ ಕೂದಲನ್ನು ಸರಿಸಿ ಅವಳ ಕಿವಿಯಲ್ಲಿ ತೂಗುತ್ತಿದ್ದ ಜುಮುಕಿಯ ಮುತ್ತನ್ನು ಬೆರಳಲ್ಲಿಯೇ ಜೀಕುತ್ತಾ ಹಾಗೇ ಅದನ್ನೇ ಇನ್ನಷ್ಟು ತೂಗುತ್ತಾ ಉಳಿದು ಬಿಟ್ಟೆ.ನನ್ನನ್ನೇ ಮತ್ತಷ್ಟು ದಿಟ್ಟಿಸಿ ನೋಡಿದಳು.ಬಹುಶಃ ನಾನು ಏನೋ ಹೇಳಬೇಕಿತ್ತು.ನಾನು ಏನಾದರೂ ಹೇಳಲಿ ಎಂದೇ ಅವಳೂ ಕಾದಿದ್ದಳು."ಮುತ್ತಿನ ಜುಮುಕಿ ಚಂದ ಇದೆ..." ಅಂದೆ.ಅಷ್ಟೇ,ಅಪ್ಪುಗೆಯನ್ನು ಸಡಿಲಗೊಳಿಸಿ ಕೋಪದಿಂದ ಅಲ್ಲಿಂದ ದರದರ ನಡೆದೇ ಬಿಟ್ಟಳು.ಅವಳು ಮತ್ತೆ ನನ್ನಲ್ಲಿಗೆ ಬರುತ್ತಾಳೆ ಎಂದು ನನಗೂ ಗೊತ್ತಿತ್ತು.ಏಕೆಂದರೆ ಬಂದ ಉದಾಹರಣೆಗಳೇ ಹಲವಾರು ಇತ್ತು.
ಅವಳು ಹಾಗೆಯೇ.ಮಳೆಯಂತೆಯೇ ಅವಳು.ಹೆಸರು ಕೂಡ ಮಳೆ ನಕ್ಷತ್ರದ್ದೇ.ಪುನರ್ವಸು ಅವಳು.ನಾನು ಸದಾ ಮಾತು ಮರೆಯುತ್ತಿದ್ದೆ.ಅವಳು ಇನ್ನಿಲ್ಲದಂತೆ ಮಾತು ಬೆರೆಸುತ್ತಿದ್ದಳು, ಮೆರೆಸುತ್ತಿದ್ದಳು.ಅವಳಿಗೆ ಮೌನವೆಂದರೆನೆಂದು ಅಷ್ಟಾಗಿ ಗೊತ್ತಿರಲಿಲ್ಲ.ಮಾತಿಲ್ಲದಿದ್ದರೆನೇ ಅವಳಿಲ್ಲ.ಅದೆಷ್ಟು ಮಾತಾಡುತ್ತಿದ್ದಳು ಅವಳು.ನನಗೆ ಅವಳ ಮಾತು ಇಷ್ಟ.ಅದಕ್ಕಾಗಿಯೇ ಮೊದಲೇ ಮೌನಿಯಾಗಿದ್ದ ನಾನು ಅವಳೆದರು ಮತ್ತಷ್ಟು ಮೌನಿಯೇ ಆಗಿ ಬಿಡುತ್ತಿದ್ದೆ,ಬರೀ ಅವಳನ್ನಷ್ಟೇ ಕೇಳಿಸಿಕೊಳ್ಳುತ್ತಿದ್ದೆ. ಅವಳು ಏನಾದರೂ ಅವಳಷ್ಟಕ್ಕೆ ಮಾತಾಡುತ್ತಿರಲಿ ಎಂದಷ್ಟೇ ಯಾವಾಗಲೂ ಬಯಸುತ್ತಿದ್ದೆ.
ಒಮ್ಮೆ ನನ್ನ ಹುಟ್ಟಿದ ಹಬ್ಬದ ದಿನ,"ಪುಷ್ಯರಾಗ.. ನಿನಗೇನು ಬೇಕು ಹೇಳು,ಏನು ಕೇಳುವೆಯೋ ಅದನ್ನೇ ಕೊಡುವೆ ಅಂದಳು.." ಅವಳು.ನಾನು ಜಾಸ್ತಿ ಏನು ಯೋಚಿಸದೇ "ಮುತ್ತು ಬೇಕು..." ಅಂದೆ.
ಮುಂಗುರುಳು ನೇವರಿಸುತ್ತಾ ಅಲ್ಲೇ ಎಲ್ಲೋ ನೋಡುತ್ತಿದ್ದ ಅವಳು ಆ ನನ್ನ ಮಾತು ಕೇಳಿ ಒಮ್ಮೇಲೆ ನನ್ನತ್ತ ತಿರುಗಿ ಬಿಟ್ಟಳು.ಅವಳ ಕಣ್ಣುಗಳಲ್ಲಿ ಮೊದಲ ಬಾರಿಗೆ ನಾನು ಎಂದೂ ಕಾಣದಷ್ಟು ಹೊಳಪಿತ್ತು.ಎರಡೂ ಕಣ್ಣುಗಳಲ್ಲಿ ಪ್ರಖರ ನೀಲಾಂಜನವನ್ನೇ ಧಗ್ಗೆಂದು ಉರಿಸಿಕೊಂಡಿದ್ದಳು ಪುನರ್ವಸು.ಆ ನಂತರ ಹಾಗೇ ನಿಧಾನಕ್ಕೆ ನನ್ನ ಹತ್ತಿರ,ಬಹಳಷ್ಟು ಹತ್ತಿರಕ್ಕೆ ಬಂದಳು.ಅದು ಅಧರಕ್ಕೆ ಅಧರಗಳು ಸೋಕುವಷ್ಟು ಹತ್ತಿರ.ಆದರೆ ನನ್ನ ಕೈ ಮಾತ್ರ ಅವಳ ಕಿವಿ ಮುಂದಿದ್ದ ಕೂದಲನ್ನು ಸರಿಸಿ ಅವಳ ಜುಮುಕಿಯಲ್ಲಿ ಆಡಲು ಶುರು ಮಾಡಿತ್ತು ಹಾಗೂ ನನ್ನ ಕಣ್ಣುಗಳು ಕೂಡ ಬರೀ ಅದನ್ನಷ್ಟೇ ತದೇಕಚಿತ್ತದಿಂದ ನೋಡುತ್ತಿತ್ತು.
ನನಗೇನು ಬೇಕಿತ್ತು,ನಾನೇನು ಕೇಳಿದೆ ಎನ್ನುವುದು ಅವಳಿಗೆ ಅದಾಗಲೇ ಸ್ಪಷ್ಟವಾಗಿ ಅರ್ಥವಾಗಿ ಬಿಟ್ಟಿತ್ತು.ಆಮೇಲೆ ಅವಳು ಜಾಸ್ತಿ ತಡ ಮಾಡಲಿಲ್ಲ,ಏನನ್ನೂ ಹೇಳಲಿಲ್ಲ,ಎಂದಿನಂತೆ ಪ್ರಶ್ನೆಯನ್ನು ಕೂಡ ಕೇಳಲಿಲ್ಲ.ಅವಳ ಕಿವಿಯಲ್ಲಿದ್ದ ಎರಡೂ ಮುತ್ತಿನ ಜುಮುಕಿಯನ್ನು ಬಿಚ್ಚಿ,ಅದನ್ನು ನನ್ನ ಕೈಗಿಟ್ಟು ಅಲ್ಲಿಂದ ಮೌನವಾಗಿಯೇ ಎದ್ದು ಹೊರಟು ಹೋಗಿದ್ದಳು.
ಈಗ ಅವಳಿಲ್ಲ!.ಅವಳ ಅಷ್ಟೂ ಆ ಹುಸಿ ಕೋಪದ ಮಾತುಗಳು ನನ್ನ ಬಳಿ ಇಲ್ಲ,ಆದರೆ ಅವಳ ಆ ಎರಡು ಜುಮುಕಿ ಈಗಲೂ ನನ್ನ ಬಳಿ ಭದ್ರವಾಗಿಯೇ ಇದೆ.ಅವಳು ಮತ್ತೆ ತಿರುಗಿ ಬರಬೇಕಿತ್ತು.ಖಂಡಿತಾ ಬರುತ್ತಾಳೆ ಎಂದು ನಾನು ಕೂಡ ಎಂದಿನಂತೆಯೇ ಅಂದುಕೊಂಡಿದ್ದೆ,ಆದರೆ.. ಅವಳೆಂದಿಗೂ ಬರಲೇ ಇಲ್ಲ!
.....................................................................................
#ಪುಷ್ಯರಾಗ
Ab Pacchu
Moodubidire
(photo-internet)
https://phalgunikadeyavanu.blogspot.com
Comments
Post a Comment