ಕಣ್ಣ ಹೊಳಪಿನ ನನ್ನ ದೊರೆ
" ಪುಷ್ಯರಾಗ "
(ಕಣ್ಣ ಹೊಳಪಿನ ನನ್ನ ದೊರೆ..)
ನಾನು ಯಾವತ್ತೂ ಅವನಿಗೆ ನನ್ನೊಳಗಿನ ಏನನ್ನೂ ಮುಕ್ತವಾಗಿ ಹೇಳಿಕೊಂಡಿರಲಿಲ್ಲ.ಅವನಲ್ಲೂ ತುಂಬಾ ಒತ್ತಾಯ ಮಾಡಿ ನನಗೆ ಬೇಕಾಗಿದ್ದನ್ನು ಕೇಳಿರಲೂ ಇಲ್ಲ.ಹಾಗಾಗಿ ಅವನು ಸನಿಹವೇ ಇದ್ದರೂ ಅವನೊಳಗಿನ ಅವನು ನನಗೆ ಬಹಳಷ್ಟು ಅಸ್ಪಷ್ಟವಾಗಿಯೇ ಇದ್ದ.
ಮನಸ್ಸಿನ ಮಾತುಗಳನ್ನು ಹೇಳಿ ಬಿಡಬೇಕು,ಬಚ್ಚಿಟ್ಟುಕೊಂಡಷ್ಟು ಅದು ಹೃದಯಕ್ಕೆ ಕಷ್ಟ,ಮುಂದಕ್ಕೆ ಅದೇ ನಮ್ಮನ್ನೇ ಇಂಚಿಂಚು ಸುಡುತ್ತದೆ ಎಂದು ಎಲ್ಲರೂ ಹೇಳುತ್ತಾರೆ.ಆದರೆ ಎಲ್ಲವನ್ನೂ ಹೇಳಿ ಬಿಟ್ಟರೆ ನಾನವನ್ನೇ ಕಳೆದುಕೊಳುತ್ತೇನೆನೋ ಎಂದೇ ನನಗೆ ಪ್ರತೀ ಬಾರಿ ಅನಿಸುತ್ತಿತ್ತು.ಹಾಗಾಗಿ ನಾನು ಏನನ್ನೂ ಹೇಳಲಿಲ್ಲ.ಅವನೂ ಹಾಗೆಯೇ,ಅವನಾಗಿಯೇ ಏನನ್ನೂ ಹೇಳುವವ ಅವನಂತು ಮೊದಲೇ ಆಗಿರಲಿಲ್ಲ.ಹಾಗಾಗಿ ನಮ್ಮ ನಡುವೆ ಏನೋ ಒಂದು ಇದ್ದದ್ದು ಹಾಗೆಯೇ ಬಹಳಷ್ಟು ತೆರೆಮರೆಗೆ ಸರಿದಿತ್ತು.
ಶಾಲಾ ದಿನಗಳಲ್ಲಿ ನಾನು ಬಹಳ ಸೊಗಸಾಗಿ ಹಾಡುತ್ತಿದ್ದೆ.ಎಲ್ಲರೂ ನನ್ನ ಹಾಡನ್ನು ಕೇಳಿ ಮೆಚ್ಚುತ್ತಿದ್ದರು.ಜೋರಾಗಿಯೇ ಚಪ್ಪಾಳೆ ಕೂಡ ಹೊಡೆಯುತ್ತಿದ್ದರು.ಆದರೆ ಅವನು ಮಾತ್ರ ಏನೂ ಹೇಳುತ್ತಿರಲಿಲ್ಲ.ನನಗೆ ಯಾರೂ ಎಷ್ಟೇ ಮೆಚ್ಚಿಕೊಂಡರೂ ಅವನೊಬ್ಬ ಎಲ್ಲರಿಗಿಂತ ಹೆಚ್ಚು ಮೆಚ್ಚಿಕೊಳ್ಳಲಿ ಎಂದೇ ಅನ್ನಿಸುತಿತ್ತು.ಅವನು ನಾನಾಗಿಯೇ ಕೇಳದೆ ಏನನ್ನೂ ಹೇಳುವವನಲ್ಲ.ಹಾಗಾಗಿ ಪ್ರತೀ ಬಾರಿ ಹಾಡಿದಾಗಲೂ ಅವನ ಬಳಿಗೆ ನಾನೇ ಓಡಿ ಹೋಗುತ್ತಿದ್ದೆ.ಅವನಲ್ಲಿಯೇ ಕಣ್ಣಗಲಿಸಿ ಬಹಳ ಆಸೆಯಿಂದ ಕೇಳುತ್ತಿದ್ದೆ " ಪುಷ್ಯರಾಗ.. ಇವತ್ತು ನಾನು ಚೆನ್ನಾಗಿ ಹಾಡಿದೆನಲ್ಲವೇ..?" ಎಂದು.
ಅವನು ಹೆಚ್ಚೇನು ಹೇಳುತ್ತಿರಲಿಲ್ಲ.ತಲೆ ಅಲ್ಲಾಡಿಸಿ ಸಮ್ಮತಿ ಸೂಚಿಸಿ ಎದ್ದು ಹೋಗುತ್ತಿದ್ದ.ಆದರೆ ಅವನ ಕಣ್ಣ ಹೊಳಪಿನಲ್ಲಿ ಬಹಳಷ್ಟು ಮೆಚ್ಚುಗೆ ಇತ್ತು.ಅಂತಹ ಹೊಳಪು ಯಾವ ಕಣ್ಣಲ್ಲಿಯೂ ನಾನೆಂದಿಗೂ ಕಂಡವಳೇ ಅಲ್ಲ.ಆದರೆ ಅದರೊಳಗಿನ ಭಾವನೆಗಳು ನನಗೆ ಸುಲಭಕ್ಕೆ ಅರ್ಥವಾಗುತ್ತಿರಲಿಲ್ಲ.
ಕಾಲೇಜು ದಿನಗಳಲ್ಲೂ ಅಷ್ಟೇ.ಮನೆಯ ದಾರಿಯಲ್ಲಿ ಅವನು ನನಗೆ ಜೊತೆಯಾಗುತ್ತಿದ್ದ.ಹೆಜ್ಜೆ ಸಪ್ಪಳಗಳು ಬಿಟ್ಟರೆ ನಮ್ಮ ನಡುವೆ ಮಾತು ಹುಟ್ಟುತ್ತಿರಲಿಲ್ಲ.ನಾನು ಸುಮ್ಮನೆ ಹಾಡುತ್ತಾ ನಡೆಯುತ್ತಿದ್ದೆ. "ಪುನರ್ವಸು.. ಈ ಹಾಡು ನೀನು ಬಹಳ ಚೆನ್ನಾಗಿ ಹಾಡಿದ್ದೀಯಾ.. " ಎಂದು ಅವನು ಯಾವತ್ತೂ ಬಾಯಿ ಬಿಟ್ಟು ಹೇಳಿದವನಲ್ಲ.ಬರೀ ಅವನ ಕಣ್ಣ ಹೊಳಪಿನಲ್ಲಿಯೇ ನನಗೆ ಬೇಕಾಗಿದ್ದು ನಾನು ಓದಬೇಕಿತ್ತು.ಜೋರು ಮಳೆ ಬಂದರೆ ನನ್ನ ಜೊತೆಗೆ ಕೊಡೆಯಡಿಗೆ ಅವನು ಬಂದರೂ,ಅವನಷ್ಟೇ ಒದ್ದೆ ಆಗುತ್ತಿದ್ದ.ಮೈಗೆ ಮೈ ಸೋಕಿದರೆ ಭೂಕಂಪವೇ ಆದೀತು ಎನ್ನುವಷ್ಟು ಜಾಗ್ರತೆಯಿಂದ ಅವನು ನಡೆಯುತ್ತಿದ್ದ.
ಕೆಲವೊಮ್ಮೆ ನನಗೆ ಅವನ ಕುತ್ತು ಹಿಸುಕಿ ಸಾಯಿಸಬೇಕು ಅನ್ನುವಷ್ಟು ಕೋಪ ಬರುತ್ತಿತ್ತು.ಬಾಯಿ ಬಂದರೂ ಅವನು ಮಾತಾಡದೇ ಇರುವುದನ್ನು ನೋಡಿ ಕೊನೆಯ ಪಕ್ಷ ನಾನಾದರೂ ಮೂಗಿಯಾಗಿ ಹುಟ್ಟಬಾರದಿತ್ತೇ ಎಂದು ನನಗೆ ಪ್ರತೀ ಸಲ ಅನಿಸುತ್ತಿತ್ತು.ಆದರೂ ಅವನ ಮೌನ ಅವನಾಡದ ಸಾವಿರ ಮಾತುಗಳನ್ನು ನನಗೆ ನಿರಂತರವಾಗಿ ತಿಳಿಸುತ್ತಿತ್ತು,ತಲುಪಿಸುತ್ತಿತ್ತು.ನನಗೆ ಅರ್ಥವಾಗುತ್ತಿರಲಿಲ್ಲ ಅಷ್ಟೇ.ಏಕೆಂದರೆ ಆಡದ ಮನಸ್ಸಿನ ಮಾತುಗಳನ್ನು ತಿಳಿದು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತಳು ನಾನಾಗಿರಲಿಲ್ಲ.ಸದಾ ನನ್ನ ನೆರಳಂತೆ ನಡೆಯುತ್ತಿದ್ದ ಅವನು ರಕ್ಷಾಬಂಧನ ಹಬ್ಬದ ದಿನ ಮಾತ್ರ ಕಾಲೇಜಿಗೆ ಬಂದಿದ್ದರೂ,ನನ್ನ ಬಳಿ ಸುಳಿಯಲೇ ಇಲ್ಲ.ಮನೆಯ ದಾರಿಯಲ್ಲೂ ಆ ದಿನ ನನಗವನು ಜೊತೆಯಾಗಿರಲಿಲ್ಲ.ನನಗೆ ಮಾತ್ರ ಒಳಗೊಳಗೆ ಏನೋ ಒಂದು ಖುಷಿಯಾಗಿತ್ತು.
ಕಾಲೇಜು ಮುಗಿದ ಮೇಲೆ ಅವನು ನನಗೆ ಸಿಗುವುದಿಲ್ಲ ಎಂದು ನಾನು ಅಂದುಕೊಂಡಿದ್ದೆ.ಅದೇ ರೀತಿ ಆಯಿತು.ಅವನು ಸೈನ್ಯಕ್ಕೆ ಆಯ್ಕೆಯಾಗಿ ಬಿಟ್ಟಿದ್ದ.ಒಳ್ಳೆಯ ಎತ್ತರ,ಕಟ್ಟು ಮಸ್ತಾದ ದೇಹ ಎಲ್ಲಕ್ಕಿಂತ ಹೆಚ್ಚಾಗಿ ಅವನು ಬಹಳಷ್ಟು ನಿರ್ಭಾವುಕ ಹಾಗೂ ನಿರ್ಲಿಪ್ತ.ಅವನಿಗಿಂತ ಒಳ್ಳೆಯ ಯೋಧ ಬೇರೆ ಯಾರಾಗಲು ಸಾಧ್ಯ.ಆದರೆ ಯೋಧನಿಗೂ ಕನಿಕರ ಇರುವುದಿಲ್ಲವೇ? ತನ್ನವರಿಗಾಗಿ ಅವನ ಹೃದಯ ಮಿಡಿಯುವುದಿಲ್ಲವೇ?. ಅದಕ್ಕಾಗಿ ನಾನೇ ಅವನ ಬಳಿಗೆ ಓಡೋಡಿ ಹೋದೆ;ಹೌದು ಕೊನೆಯ ಬಾರಿಗೆ ಎಂಬಂತೆ.ಅವನು ಆ ದಿನ ಮನೆಯಲ್ಲಿಯೇ ಇದ್ದ.
ಹೋಗಿ ಅವನೆದುರೇ ಕಣ್ಣಗಲಿಸಿ ನಿಂತೆ;ಬಹಳಷ್ಟು ಆಸೆಯಿಂದ. ಅವನ ಕಣ್ಣಲ್ಲಿ ಅವತ್ತೂ ಬಹಳಷ್ಟು ಹೊಳಪೇ ಇತ್ತು.ಬರೀ ನಾನಷ್ಟೇ ಕಂಗಲಾಗಿದ್ದೆ.
"ಪುರು.. ಯೋಧನಾಗಿದ್ದಿ ಅಂತೆ,ಊರಿಡೀ ಮಾತಾಡುತ್ತಿದೆ.ಆದರೆ ನನಗೆ ಮಾತ್ರ ನೀನು ಹೇಳಲಿಲ್ಲ ನೋಡು..ಇರಲಿ,ನಿನಗೆ ಒಳ್ಳೆಯದಾಗಲಿ ಪುರು.. ನಮ್ಮ ಊರಿಗೆ,ನಮ್ಮ ದೇಶಕ್ಕೆ ಕೀರ್ತಿ ತಾ.. ಎಲ್ಲರೂ ನಿನ್ನ ಬಗ್ಗೆ ಇನ್ನಷ್ಟು ಹೆಮ್ಮೆ ಪಡುವಂತಾಗಲಿ " ಎಂದು ಕಣ್ಣೀರು ತುಂಬಿಕೊಂಡೇ ನಾನವನಿಗೆ ಶುಭ ಕೋರಿದ್ದೆ.
ನನ್ನ ಕಣ್ಣೀರ ಮಾತಿಗೆ ಅವನ ಕಣ್ಣಲ್ಲಿದ್ದ ಹೊಳಪು ಒಮ್ಮೆಲೇ ಮಾಯವಾಯಿತು.ಅವನು ಎಂದಿನಂತೆ ಏನೂ ಹೇಳಲಿಲ್ಲ. ಅವನು ಏನಾದರೊಂದು ಹೇಳುತ್ತಾನೆ ಎಂದು ನನಗೂ ಅನಿಸಲಿಲ್ಲ.ಆದರೆ ನಾನು ಅಲ್ಲಿಂದ ಹೊರಡುವ ವೇಳೆ ಅವನು ಆ ದಿನ ಒಂದು ಮಾತು ಹೇಳಿದ್ದ.
" ವಸು.. ನನ್ನನ್ನು ಮದುವೆಯಾಗುತ್ತೀಯಾ..? "
ಸಿಡಿಲು ಬಡಿಯುತ್ತದೆ ಎನ್ನುವುದನ್ನು ನಾನು ಕೂಡ ಕೇಳಿದ್ದೆ.ಆದರೆ ಈ ರೀತಿಯಾಗಿ ಅನಿರೀಕ್ಷಿತವಾಗಿ ಮಳೆಗಾಲವೇ ಅಲ್ಲದ ಸಮಯದಲ್ಲಿ ಗುಡುಗು ಸಿಡಿಲೇ ಇಲ್ಲದೇ ಸೀದಾ ಬಂದು ಬಡಿದು ಬಿಟ್ಟರೆ,ಅದೂ ನನಗೇ ಬಡಿದು ಬಿಟ್ಟರೆ ಹೇಗಾಗಬೇಡ ನನ್ನ ಸ್ಥಿತಿ. ಎಷ್ಟಾದರೂ ಹುಡುಗಿ ನಾನು.ಅವನ ಮೇಲೆ ಬರೀ ಆಸೆ ಅಲ್ಲ,ಜೀವವನ್ನೇ ಇಟ್ಟುಕೊಂಡಿದ್ದವಳು.ಇಂತಹ ಮಾತು ಅವನ ಬಾಯಿಯಿಂದಲೇ ಅದೂ ನಾನು ಕೊನೆಯ ಭೇಟಿ ಎಂದುಕೊಂಡಿದ್ದ ಸಂಧರ್ಭದಲ್ಲಿಯೇ ಬಂದು ಬಿಟ್ಟರೆ ನನ್ನ ಜೀವ ಹೇಗೆ ತಾನೇ ತಡೆದುಕೊಳ್ಳುತ್ತದೆ?.ಜೀವನ ಪೂರ್ತಿ ನನಗೆ ಅಸ್ಪಷ್ಟವಾಗಿಯೇ ಉಳಿದವನು ಅವತ್ತೇ ಅದೊಂದು ಮಾತನ್ನು ಮಾತ್ರ ಬಹಳ ಸ್ಪಷ್ಟವಾಗಿ ಹೇಳಿ ಮುಗಿಸಿದ್ದ.
ಅವನ ಮಾತಿಗೆ ನಾನು ಏನೂ ಹೇಳಲಿಲ್ಲ.ಓಡಿ ಹೋಗಿ ಅವನನ್ನೇ ಹಾಗೇ ಗಟ್ಟಿಯಾಗಿ ಅಪ್ಪಿಕೊಂಡು ಬಿಟ್ಟಿದ್ದೆ. ಅತ್ತೆ..ಬಹಳಷ್ಟು ಅತ್ತು ಬಿಟ್ಟಿದ್ದೆ ನಾನು.ನೋವಿನ ಕಣ್ಣೀರಿಗಿಂತಲೂ ಆನಂದಬಾಷ್ಪ ಅದೆಷ್ಟು ಮಧುರವಾದದ್ದು ಎಂದು ನನಗೆ ಗೊತ್ತಾಗಿದ್ದೇ ಅವತ್ತು.
ಮನೆಯಲ್ಲಿ ಏನು ಅಂತಹ ತೊಂದರೆ ಆಗಲಿಲ್ಲ.ಒಳ್ಳೆಯ ಹುಡುಗ ಬೇರೆ,ಹಾಗಾಗಿ ಸಂತೋಷದಿಂದಲೇ ಮದುವೆ ಕೂಡ ಮಾಡಿ ಕೊಟ್ಟರು.
ಎಲ್ಲವೂ ಗೊತ್ತಿದ್ದೇ ನಾನು ಮದುವೆ ಆಗಿದ್ದೆ.ಸೈನಿಕನ ಹೆಂಡತಿ ಬಹಳಷ್ಟು ಒಂಟಿ ಎನ್ನುವುದು ನನಗೂ ಗೊತ್ತಿತ್ತು.ಹಾಗೇ ಆಯಿತು ಕೂಡ.ಮದುವೆ ಆದ ಒಂದೆರಡು ದಿನಗಳಲ್ಲಿಯೇ ಅವನು ಸೈನ್ಯಕ್ಕೆ ಸೇರಿಕೊಂಡ.
ಅವನಿಂದ ಪತ್ರವಾಗಲಿ,ದೂರವಾಣಿಯಾಗಲಿ ಯಾವುದೂ ಬರುತ್ತಿರಲಿಲ್ಲ.ಪತ್ರ ಬರೆದರೂ ಅವನು ಏನು ಬರೆಯುತ್ತಿದ್ದ? ದೂರವಾಣಿಗೆ ಸಿಕ್ಕರೂ ಮೌನ ಬಿಟ್ಟರೆ ಅದೇನು ಮಾತು ಅವನಿಂದ ಹೊರಡುತ್ತಿತ್ತು?.ಸುತ್ತ ಮುತ್ತ ಎಲ್ಲರೂ ಇದ್ದರು ಅವನಿಲ್ಲದೆ ನಾನು ತೀರಾ ಒಂಟಿಯಾಗಿ ಬಿಟ್ಟಿದ್ದೆ.ನನಗೆ ಅವನ ಮಾತು ಬೇಕಿರಲಿಲ್ಲ.ಅವನ ಸಾನಿಧ್ಯ,ಅವನ ಸಾಮಿಪ್ಯ ಅದರೊಳಗಿನ ಅವನ ಗಾಢವಾದ ಮೌನ,ಅವನ ದೊಡ್ಡ ಕಣ್ಣುಗಳ ಹೊಳಪು ಅದಷ್ಟೇ ನನ್ನಿಡೀ ಜೀವಮಾನಕ್ಕೆ ಆಗುವಷ್ಟು ಸಾಕಾಗುತ್ತಿತ್ತು,ಅದೊಂದೇ ನನಗೆ ಸದಾ ಬೇಕಿತ್ತು.ಆದರೆ ನನ್ನ ದೊರೆ ದೇಶ ಕಾಯಲು ಹೋಗಿದ್ದ..ನನ್ನಂತಹ ಸೈನಿಕನ ಹೆಂಡತಿಗೆ ಅಂತಹ ಆಸೆ ಎಲ್ಲಾ ಹುಟ್ಟಬಾರದು,ಎಂದಿಗೂ ಹುಟ್ಟಲೇಬಾರದು. ನನ್ನ ಏಕಾಂತವೇ ನನ್ನದೊಂದು ದೇಶ ಸೇವೆ ಎಂದು ನಾನು ತಿಳಿದುಕೊಂಡು ಬಿಟ್ಟೆ.
ಅದೊಂದು ದಿನ ನನಗೆ ಕನಸು ಬಿತ್ತು.ಅದರಲ್ಲಿ ಪುರು ಯುದ್ಧಕ್ಕೆ ಹೋಗಿದ್ದ.ಆದರೆ ಬಹಳಷ್ಟು ಹೋರಾಡಿ ಕೊನೆಯಲ್ಲಿ ಮಾತ್ರ ಅವನು ಹಾಗೇ ಸತ್ತು ಮಲಗಿ ಬಿಟ್ಟ.ನನ್ನ ನಿದ್ದೆ ಆ ಕ್ಷಣವೇ ಹಾರಿ ಹೋಗಿತ್ತು.
ಅವತ್ತಿನಿಂದ ನನಗೆ ಯಾವತ್ತೂ ನಿದ್ದೆ ಸರಿಯಾಗಿ ಬರಲೇ ಇಲ್ಲ.ಬಹಳಷ್ಟು ವರ್ಷ ಅವನು ಕೂಡ ಮನೆಗೆ ಬರಲೇ ಇಲ್ಲ.
ಒಂದು ದಿನ ಅವನು ಹೊತ್ತಲ್ಲದ ಹೊತ್ತಲ್ಲಿ ಮನೆಯ ಬಾಗಿಲಿಗೆ ಅವಶ್ಯವಾಗಿಯೇ ಬಂದಿದ್ದ.ಆದರೆ ಬಂದ ಅವನ ದೇಹದಲ್ಲಿ ಯಾವ ಚೈತನ್ಯವೂ ಇರಲಿಲ್ಲ.ಉಸಿರು ಚೆಲ್ಲಿ ಮನೆಯಂಗಳದಲ್ಲಿ ತಣ್ಣಗೆ ಮಲಗಿದ್ದ ಪುರು!.
ಊರವರ ಪಾಲಿಗೆ,ದೇಶದ ಪಾಲಿಗೆ ಅವನು ಅಮರನಾಗಿದ್ದ.ಯಾರೂ ಕೂಡ ಅವನಿಗಾಗಿ ಮನೆಯ ಮುಂದೆ ಜೋರಾಗಿ ಅಳಲಿಲ್ಲ.ದೇಶದ ಮಗನಿಗಾಗಿ ಎಲ್ಲರೂ ಹೆಮ್ಮೆ ಪಟ್ಟುಕೊಂಡಿದ್ದರು,ಬಹಳಷ್ಟು ಗರ್ವ ಪಟ್ಟುಕೊಂಡಿದ್ದರು.ದೇಶದ ಬಾವುಟವೇ ಮನೆಯಂಗಳದಲ್ಲಿ ರಾರಾಜಿಸಿತ್ತು.
ನಾನು ಅವನನ್ನು ಆ ಸ್ಥಿತಿಯಲ್ಲಿ ನೋಡಬಾರದು ಎಂದೇ ಅಂದುಕೊಂಡಿದ್ದೆ.ಆದರೆ ನಾನಾದರೂ ಹೇಗೆ ತಡೆದುಕೊಳ್ಳಲಿ. ಅವನು ದೇಶವನ್ನು ಪ್ರೀತಿಸಿದ್ದ ನಿಜ,ಆದರೆ ನಾನು... ನಾನು ಅವನೊಬ್ಬನನ್ನೇ ಎಲ್ಲದಕ್ಕಿಂತಲೂ ಹೆಚ್ಚಾಗಿ,ನನ್ನ ಸರ್ವಸ್ವಕ್ಕಿಂತಲೂ ಹೆಚ್ಚಾಗಿ ಪ್ರಿತಿಸಿದ್ದೆ.ಅವನನ್ನು ಈಗ ಇಡೀ ದೇಶವೇ ಬಹಳಷ್ಟು ಪ್ರೀತಿಸಬಹುದು..ಆದರೆ ನನ್ನಷ್ಟು,ಈ ಪುನರ್ವಸುವಿನಷ್ಟು ಯಾರಾದರೂ ಅವನನ್ನು ಪ್ರೀತಿಸಲು ಎಂದಾದರೂ ಸಾಧ್ಯವೇ?! ನಾನು ಅವನನ್ನು ಬರೀ ಪ್ರೀತಿಸಲಿಲ್ಲ ಅವನನ್ನು ಪೂಜಿಸಿದ್ದೆ..ಅವನನ್ನೇ ಆರಾಧಿಸಿ ಬಿಟ್ಟಿದ್ದೆ.
ಕೊನೆಗೂ ಗಟ್ಟಿ ಮನಸ್ಸು ಮಾಡಿಕೊಂಡು ಮನೆಯ ಹೊರಗೆ ಬಂದು ಅಂಗಳದಲ್ಲಿ ಮಲಗಿಸಿದ್ದ ಅವನನ್ನೇ ನೋಡಿದೆ..
ಪುರು ಅದೆಷ್ಟು ಶಾಂತವಾಗಿ ಮಲಗಿದ್ದ.ಅವನು ಎಂದಿಗೂ ಇದ್ದದ್ದು ಹಾಗೆಯೇ.ಅದೆಷ್ಟು ನಿರ್ಲಿಪ್ತ,ಅದೆಷ್ಟು ನಿರ್ಭಾವುಕ ಅವನು.ಈ ಬಾರಿ ಅವನ ಮೇಲೆ ಪವಿತ್ರ ತ್ರಿವರ್ಣಧ್ವಜವನ್ನೇ ಹಾಸಿದ್ದರು."ವೀರ್ ಜವಾನ್ ಅಮರ್ ರಹೇ..ಪುಷ್ಯರಾಗ್ ಅಮರ್ ರಹೇ.. " ಎಂದು ಸೇರಿದ್ದ ಜನರು ಜೋರಾಗಿ ಜೈಕಾರ ಕೂಡ ಕೂಗುತ್ತಿದ್ದರು.ಅದೆಷ್ಟು ಸಂಪಾದಿಸಿ ಬಿಟ್ಟಿದ್ದ ಈ ನನ್ನ ಪುರು ಎಂದು ಒಮ್ಮೆಗೆ ಅನ್ನಿಸಿ ಬಿಟ್ಟಿತು.
ನನಗೆ ಒಮ್ಮೆ ಮುಚ್ಚಿದ್ದ ಅವನ ಕಣ್ಣಗಲಿಸಿ,ನನಗೆಂದೇ ಅವನ ಕಣ್ಣಲ್ಲಿದ್ದ ಕೊನೆಯ ಹೊಳಪು ನೋಡಬೇಕು ಎಂದು ಬಲವಾಗಿ ಅನಿಸಿತು.ನನಗೆಂದೇ ಅವನು ತೋರುತ್ತಿದ್ದದ್ದು ಅದೊಂದನ್ನೇ ಅಲ್ಲವೇ?.ಆದರೆ ಮನಸ್ಸು ಮಾತ್ರ ಬೇಡ ಎಂದು ನನ್ನನ್ನು ಇನ್ನಿಲ್ಲದಂತೆ ತಡೆ ಹಿಡಿಯಿತು.
ಸುತ್ತಲೂ ಸೇರಿದ್ದ ಅಷ್ಟೂ ಜನರನ್ನು ಒಮ್ಮೆ ನಾನು ಹಾಗೇ ದಿಟ್ಟಿಸಿ ನೋಡಿದೆ.ಅವರ ಕಣ್ಣಲ್ಲಿ ಪುರುವಿನ ಬಗ್ಗೆ ಬಹಳಷ್ಟು ಹೆಮ್ಮೆಯ ಹೊಳಪಿತ್ತು,ಅದು ನನಗಾಗಿ ಪುರುವಿನಲ್ಲಿ ಕಣ್ಣಲ್ಲಿದ್ದ ಹೊಳಪಿಗಿಂತಲೂ ಅಧಿಕವಾಗಿಯೇ ಇತ್ತು.ಬೇಡ ಬೇಡವೆಂದರೂ ಒಂದು ಹನಿ ನನ್ನ ಕಣ್ಣಿಂದ ಕೆನ್ನೆ ಮೇಲೆ ಹಾಗೇ ಉದುರಿ ಬಿಟ್ಟಿತ್ತು!!
ನಾನೂ ಜೋರಾಗಿಯೇ ನನಗರಿವಿಲ್ಲದೇ ಕೂಗಿದೆ..
"ವೀರ್ ಜವಾನ್ ಅಮರ್ ರಹೇ... "
.....................................................................................
#ಪುಷ್ಯರಾಗ
Ab Pacchu
Moodubidire
(Photo-internet)
https://phalgunikadeyavanu.blogspot.com
Comments
Post a Comment