ನಕ್ಷತ್ರದ ನಗು ನಕ್ಕವಳು..


                                   " ಪುಷ್ಯರಾಗ" 
                          (ನಕ್ಷತ್ರದ ನಗು ನಕ್ಕವಳು.. )


ಆ ರಾತ್ರಿಯೇ ಬೇರೆಯಾಗಿತ್ತು,ಆ ಮಾತುಗಳೂ ಬೇರೆಯದ್ದೇ  ಆಗಿತ್ತು.ಕೆಲವೊಮ್ಮೆ ಅನಿಸುತ್ತದೆ ಜೀವನದ ಪ್ರತೀ ರಾತ್ರಿಯೂ ಆ ರಾತ್ರಿಯಂತೆಯೇ ಇರಬೇಕಿತ್ತು ಹಾಗೂ ಆಡುವ ಮಾತುಗಳು ಸಹ ಆ ರಾತ್ರಿಯದ್ದೇ ಆಗಿರಬೇಕಿತ್ತು ಎಂದು. 


ಹೌದು,ಅದೊಂದು ರಾತ್ರಿಯೇ ಅವಳು ನನಗೆ ಮೊದಲ ಬಾರಿಗೆ ಸಿಕ್ಕಿದ್ದು;ಮತ್ತು ನಾನವಳಿಗೆ. 


ಆ ರಾತ್ರಿ ಅವಳು ಆ ಒಂದು ಬಸ್ ಸ್ಟಾಪ್ ನಲ್ಲಿ ಒಬ್ಬಳೇ ನಿಂತಿದ್ದಳು.ಜೋರಾಗಿ ಮಳೆ ಬೇರೆ ಸುರಿಯುತ್ತಿತ್ತು.ಹಾಗಾಗಿ ಓಡಿಸುತ್ತಿದ್ದ  ಬೈಕ್ ಅನ್ನು ನಿಲ್ಲಿಸಿ ನಾನು ಕೂಡ ಅದೇ ಬಸ್ ಸ್ಟಾಪ್ ನ ಅಡಿಗೆ ನಡೆದಿದ್ದೆ.ಬರುತ್ತಿದ್ದ ಜೋರು ಮಳೆಗೆ ಮೊದಲು ನಾನು ಹಿಡಿ ಶಾಪ ಹಾಕಿದ್ದೆನಾದರೂ ಅವತ್ತು ಮಳೆ ಬಂದಿದ್ದು ಒಳ್ಳೆಯದೇ ಆಯಿತೆಂದು ಆಮೇಲೆ ನನಗೆ ಬಹಳ ಸಲ ಅನಿಸಿತ್ತು,ಏಕೆಂದರೆ ಅವತ್ತು ಅವಳು ಸಿಕ್ಕಿದ್ದಳು. 


ಆ ಬಸ್ ಸ್ಟಾಪ್ ನ ಒಂದು ತುದಿಯಲ್ಲಿ ಅವಳು ನಿಂತಿದ್ದಳು ಮತ್ತೊಂದು ತುದಿಯಲ್ಲಿ ನಾನು ನಿಂತಿದ್ದೆ.ಮೌನ ನಮ್ಮಿಬ್ಬರ ಹೆಗಲ ಮೇಲೆ ಕೈ ಹಾಕಿ ಅದರಷ್ಟಕ್ಕೆ ನಿಂತಿತ್ತು. 


ಅವಳನ್ನೇ ನೋಡಿದೆ.ಅವಳು ಮಳೆಗೆ ನೆನೆದ ಗುಬ್ಬಿಯಂತೆ  ಕಂಡಳು.ಮಾತಾಡಿಸುವ ಧೈರ್ಯ ನನಗಿರಲಿಲ್ಲ.ಅಗತ್ಯವೂ ಇರಲಿಲ್ಲ.ಹಾಗಾಗಿ ಮೌನವೊಂದೇ ಮತ್ತಷ್ಟು ವಿಜೃಂಭಿಸಿತ್ತು. 


ಆ ಮಳೆಗೆ,ಆ ಚಳಿಗೆ ಬಿಸಿ ಬಿಸಿಯಾದ ಟೀ ಒಂದು ಬೇಕಿತ್ತು ಎಂದು ಒಳಗೊಳಗೆ ಬಹಳಷ್ಟು ಅನಿಸಿತ್ತು,ಆದರೆ ಅದು ಅಲ್ಲೆಲ್ಲೂ ಸಿಗುವುದಿಲ್ಲ ಎಂದು ಕೂಡ ನನಗೆ ಗೊತ್ತಿತ್ತು.ಹಾಗಾಗಿ ಸಿಗರೇಟನ್ನೇ  ಸುಡಲು ನಿರ್ಧರಿಸಿದೆ. 


ನಾನು ಸುಟ್ಟ ಸಿಗರೇಟು ಸುರುಳಿ ಸುರುಳಿಯಾಗಿ ಹೊಗೆ ಉಗುಳಿತು,ಮತ್ತದು ಹಾಗೇ ಅಲೆ ಅಲೆಯಾಗಿ ಸಾಗಿ ನಾನು ಸುಟ್ಟಿದ್ದನ್ನು ಅವಳಿಗೆ ಸ್ಪಷ್ಟವಾಗಿ ತಿಳಿಸಿ ಬಿಟ್ಟಿತು. 


ಅವಳು ಒಮ್ಮೆಲೇ ನನ್ನೆಡೆಗೆ ತಿರುಗಿದಳು.ನಾನೂ ಅವಳೆಡೆಗೆ ತಿರುಗಿದೆ.


ಅವಳು ಏನೂ ಹೇಳಲಿಲ್ಲ,ನನ್ನ ಕೈಯ ಸಿಗರೇಟನ್ನೇ ನೋಡುತ್ತಾ ಉಳಿದಳು.ನನಗದು ಅರ್ಥವಾಗಲಿಲ್ಲ.


ಅದಕ್ಕಾಗಿಯೇ ಕೇಳಿದೆ... ಏನು? ಎಂದು. 


ಸಿಗರೇಟು ಒಳ್ಳೆಯದಲ್ಲ,ಕ್ಯಾನ್ಸರ್ ಬರಬಹುದು,ನಿಮಗೂ ನಿಮ್ಮವರಿಗೂ.. ಅಂದಳು ಅವಳು ಬಹಳಷ್ಟು ಮಧುರವಾಗಿ. 


ಆಹಾ.. ಅದೆಷ್ಟು ಸವಿಯಾದ ಧ್ವನಿ ಅವಳದ್ದು.ಜೇನಿನಲ್ಲಿ ಅದ್ದಿ ತೆಗೆದಂತಿತ್ತು.ಎಲ್ಲಕ್ಕಿಂತ ಹೆಚ್ಚಾಗಿ ಅವಳ ಕಾಳಜಿ ನನ್ನನ್ನು ಒಮ್ಮೆಲೇ ಕರಗಿಸಿತು.ಅಲ್ಲಿಯವರೆಗೆ ನನ್ನ ಅನುದಿನದ ಸಂಗಾತಿಯಂತಿದ್ದ ಸಿಗರೇಟೇ ಬೇಡ ಎಂದು ನನಗೆ ಮೊದಲ ಬಾರಿಗೆ ಬಲವಾಗಿ ಅನ್ನಿಸಿ ಬಿಟ್ಟಿತು.ಯಾಕೋ ಗೊತ್ತಿಲ್ಲ,ಯಾರು ಎಷ್ಟೇ ಸಲ ಸಿಗರೇಟು ಸೇದಬೇಡ ಎಂದು ಹೇಳಿದ್ದರೂ,ಯಾವ ರೀತಿ ಹೇಳಿದ್ದರೂ ಕೂಡ ನನಗೆ ಯಾವತ್ತೂ ಸಿಗರೇಟು ಬಿಡಬೇಕು ಎಂದು ಅನ್ನಿಸಿಯೇ ಇರಲಿಲ್ಲ.ಆದರೆ ಆವತ್ತು ಅನ್ನಿಸಿತ್ತು. 


ಅವಳೆದುರೇ ಉರಿಯುತ್ತಿದ್ದ ಸಿಗರೇಟನ್ನು ಹಾಗೇ ಪಕ್ಕಕ್ಕೆ ಎಸೆದೆ.ಮಾತ್ರವಲ್ಲ ಜೇಬಿನಲ್ಲಿದ್ದ ಹೆಚ್ಚು ಕಡಿಮೆ ಭರ್ತಿಯಾಗಿಯೇ ಇದ್ದ ಇಡೀ ಸಿಗರೇಟು ಪ್ಯಾಕ್ ಅನ್ನು ಸಹ ಅಲ್ಲಿಯೇ ಇದ್ದ ಡಸ್ಟ್ ಬಿನ್ ಗೆ ಹಾಕಿ ಬಿಟ್ಟೆ.ಅದನ್ನು ಕಂಡು ಅವಳು ಮುಂಗುರುಳನ್ನು ಹಿಂದಕ್ಕೆ ಸರಿಸಿ ಹಾಗೇ ಹದವಾಗಿ ನಕ್ಕು ಬಿಟ್ಟಳು.ಅವಳು ನಕ್ಕಾಗ ಮೇಲಿಂದ ಉದುರಿ ಮಿರಿ ಮಿರಿ  ಮಿನುಗಿದಂತಹ ನಕ್ಷತ್ರದಂತೆ ಕಂಡಳು. 


ನಾನು ಅವಳಿಗೆ ಅದನ್ನೇ ಹೇಳಿದೆ,ಜೊತೆಗೆ ಇದೊಂದನ್ನು ಕೂಡ  ಸೇರಿಸಿ ಹೇಳಿದೆ..


ನೀವು ನಕ್ಕಾಗ ಬಹಳ ಚೆನ್ನಾಗಿ ಕಾಣುತ್ತೀರಾ... ಅಂದೆ ನಾನು.


ಅದನ್ನು ಕೇಳಿ ಅವಳು ಜೋರಾಗಿ ನಕ್ಕಳು.. ಹಾಗಾದರೆ ನಗದಿದ್ದರೆ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲವೇ..? ಅಂದಳು  ನಗುತ್ತಲೇ. 


ನಾನು ಆ ರೀತಿಯಾಗಿ ಅವಳಿಗೆ ಹೇಳಬಾರದಿತ್ತು ಎಂದು ಆ ಕ್ಷಣವೇ ಅನಿಸಿತು.


ಅದು ಹಾಗಲ್ಲ... ಅಂದೆ. 


ಹಾಗಾದರೆ ಮತ್ತೆ ಹೇಗೆ.. ಅವಳೇ ಕೇಳಿದಳು. 


ಅವಳ ಆ ಮಾತಿಗೆ ನಾನು ಮತ್ತೂ ಸಂಕಷ್ಟಕ್ಕೆ ಬಿದ್ದು ಬಿಟ್ಟೆ.ವಿಷಯ ಸರಿಯಾಗಿ ಬಿಡಿಸಿ ಹೇಳಬೇಕಾದ ಅನಿವಾರ್ಯತೆ ಈಗ ನನ್ನೆದುರಿಗಿತ್ತು. 


ಕ್ಷಮಿಸಿ ನಾನು ಆ ಅರ್ಥದಲ್ಲಿ ಹೇಳಿದ್ದಲ್ಲ..ನಿಮ್ಮ ನಗು ಹಿಡಿಸಿತು,ಅದಕ್ಕೆ ಮೆಚ್ಚುಗೆ ಸೂಚಿಸಿದೆ ಅಷ್ಟೇ ..ಅಂದು ಬಿಟ್ಟೆ ನಾನು. 


ಅವಳಿಗೂ ನನ್ನ ಪಜೀತಿ ಅರ್ಥವಾಗಿತ್ತು.ಹಾಗಾಗಿ ಅದನ್ನು  ಮತ್ತಷ್ಟು ಉದ್ದಕ್ಕೆ ಅವಳೂ ಬೆಳೆಸಲಿಲ್ಲ.ನನಗದು ಮತ್ತೂ ಇಷ್ಟವಾಯಿತು. 


ಈ ಮಳೆ ಬಂದಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು..ನಾನು ಮಾತು ಮುಂದುವರಿಸುವುದಕ್ಕಾಗಿ ಹೇಳಿದೆ. 


ಏಕೆ... ? ಅವಳು ಮತ್ತೆ ಕೇಳಿದಳು. 


ಇಲ್ಲದಿದ್ದರೆ ನೀವು ಹೇಗೆ ಸಿಗುತ್ತಿದ್ದಿರಿ.ನೀವು ಸಿಗದೇ ಇದ್ದಿದ್ದರೆ  ಕೆಟ್ಟದು ಎಂದು ಗೊತ್ತಿದ್ದರೂ ಕೂಡ ಸದಾ ನನ್ನ ಜೊತೆಯೇ ಇದ್ದು ನನ್ನನ್ನು ಸುಡುತ್ತಿದ್ದ ಸಿಗರೇಟು ನನಗೇಕೆ ಇವತ್ತು ಬೇಡವೇ ಬೇಡ ಎಂದು ಅನಿಸುತ್ತಿತ್ತು... ಅಂದೆ ನಾನು. 


ಅದಕ್ಕೆ ಅವಳೇನೂ ಹೇಳಲಿಲ್ಲ. 


ನನಗೂ ಮುಂದೇನು ಹೇಳಬೇಕು ಎಂದು ತೋಚಲಿಲ್ಲ. 


ನಾನು ಸ್ವಲ್ಪ ಜಾಸ್ತಿಯೇ ಮಾತಾಡಿದೆನೋ ಎಂದು ನನಗೇ ಅನ್ನಿಸಿಬಿಟ್ಟಿತು. 


ಮೌನ ಮತ್ತೊಮ್ಮೆ ನಮ್ಮಿಬ್ಬರ ನಡುವೆ ಲಗ್ಗೆ ಹಾಕುವ ಎಲ್ಲಾ ಸೂಚನೆಗಳು ನಿಚ್ಚಳವಾಗಿಯೇ ಇತ್ತು.


ನಿಮಗೆ ಸಿಗರೇಟು ಕೆಟ್ಟದು ಎಂದು ಅನಿಸುತ್ತದೆಯೇ ಅಥವಾ ಈ ಜಗತ್ತು ಕೆಟ್ಟದು ಎಂದು ಅನಿಸುತ್ತದೆಯೇ...? ಅವಳೇ ಮೌನ ಮುರಿದು ಕೇಳಿ ಬಿಟ್ಟಳು. 


ಒಂದು ಸಾಲಿನಲ್ಲಿ ಉತ್ತರಿಸಬಹುದಾದ ಪ್ರಶ್ನೆ ಅದು.ಆದರೆ ಸರಿಯಾಗಿ ಉತ್ತರಿಸಲು ಒಂದಿಡೀ ಜೀವಮಾನವೇ ಬೇಕಾಗುತ್ತದೆ.ಸಿಗರೇಟು ಬಗ್ಗೆ ಹೇಳಲು ಅಲ್ಲ;ಜಗತ್ತಿನ ಬಗ್ಗೆ ಹೇಳಲು.


ಬಹುಶಃ ಜಗತ್ತು ಇರಬೇಕು... ತಡವರಿಸುತ್ತಾ ಅಂದೆ ನಾನು. 


ಅದು ಹೇಗೆ...? ಅವಳೇ ಕೇಳಿದಳು. 


ಸಿಗರೇಟಿಗಿಂತಲೂ ಕೆಟ್ಟವರು ಈ ಜಗತ್ತಿನಲ್ಲಿ ಇರುತ್ತಾರೆ,ಗೊತ್ತಾಗದಂತೆಯೇ ಮೆಲ್ಲ ಮೆಲ್ಲಗೆ ಅವರು ನಮ್ಮನ್ನು ಸುಡುತ್ತಾರೆ..ಅಂದೆ ನಾನು. 


ಹಾಗಾದರೆ ಒಳ್ಳೆಯವರು ಇರುವುದಿಲ್ಲವೇ?... ಅವಳು ಮತ್ತೆ ಕೇಳಿದಳು. 


ಇರುತ್ತಾರೆ,ಆದರೆ ಒಳ್ಳೆಯವರು ಎಲ್ಲಾ ಕಡೆ ಬಹಳಷ್ಟು ಕಡಿಮೆ ಇರುತ್ತಾರೆ.. ಅಂದೆ ನಾನು. 


ನೀವು ಒಳ್ಳೆಯವರೋ ಅಥವಾ ಕೆಟ್ಟವರೋ? ಅವಳು ಈ ಬಾರಿ ಹುಬ್ಬೇರಿಸಿ ನನ್ನಲ್ಲಿ ಕೇಳಿದ್ದಳು. 


ನನಗೆ ಈ ಬಾರಿ ಅವಳನ್ನು ಕೂಡ ಒಂದು ಬಾರಿ ಹಾಗೇ ಸಂಕಷ್ಟಕ್ಕೆ ದೂಡಬೇಕು ಎಂದು ಅನಿಸಿತು,ಅದಕ್ಕಾಗಿಯೇ ... ನಿಮಗೆ ಹೇಗೆ ಅನ್ನಿಸುತ್ತದೆ? ಎಂದು ಅವಳಲ್ಲಿಯೇ ಕೇಳಿ ಬಿಟ್ಟೆ. 


ನೀವು ನೋಡಲು ಒಳ್ಳೆಯವರಂತೆಯೇ ಕಾಣುತ್ತೀರಾ.. ಆದರೆ ನೋಡಲು ಒಳ್ಳೆಯವರಂತೆ ಕಾಣುವವರೆಲ್ಲರೂ ನಿಜವಾಗಿಯೂ ಒಳ್ಳೆಯವರೇ ಆಗಿರುತ್ತಾರಾ...? ಅವಳೇ ಮರು ಪ್ರಶ್ನೆಯೊಂದನ್ನು  ನನ್ನತ್ತ ಎಸೆದಳು.


ಬರೀ ನೋಡುವ ನೋಟದ ಮೂಲಕವೇ ಒಳ್ಳೆಯವರು ಕೆಟ್ಟವರು ಎಂದು ಹೇಳಲು ಸಾಧ್ಯವಿಲ್ಲ.ನೋಡಲು ಒರಟಾಗಿ ಕಂಡರೂ ಕೂಡ ಬಹಳಷ್ಟು ಒಳ್ಳೆಯವರಾಗಿರಲು ಸಾಧ್ಯವಿದೆ.. ಅಂದೆ ನಾನು. 


ಅವಳು ನನ್ನನ್ನೇ ನೋಡಿದಳು.ಬಹುಶಃ ನಾನು ಹೇಳಿದ್ದು ಅವಳಿಗೆ ಹಿಡಿಸಿತು ಎಂದು ಕಾಣುತ್ತದೆ. 


ಹಾಗಾದರೆ ನಾನು ಒಳ್ಳೆಯವಳೇ..? ನನ್ನನ್ನೇ ದಿಟ್ಟಿಸಿ ನೋಡುತ್ತಾ  ಕೇಳಿದ್ದಳು ಅವಳು. 


ಅವಳು ನೋಡಲು ಸ್ವಲ್ಪವಲ್ಲ,ಬಹಳಷ್ಟು ಒಳ್ಳೆಯವಳಂತೆಯೇ ನನ್ನ ಕಣ್ಣಿಗೆ ಕಾಣುತ್ತಿದ್ದಳು ಮತ್ತು ನನ್ನ ಮನಸ್ಸು ಕೂಡ ಅದನ್ನೇ ಬಾರಿ ಬಾರಿ ಒತ್ತಿ ಒತ್ತಿಯೇ ನನಗೆ ಹೇಳುತ್ತಿತ್ತು.ಆದರೆ ಅದನ್ನು ನಾನು ಅವಳಿಗೆ ಹೇಳಲಿಲ್ಲ. 


ನೀವು ಕೆಟ್ಟವರು... ಅಂದೆ. 


ಹೌದೇ.. ಏಕೆ?  ಅವಳು ಮತ್ತೆ ಹುಬ್ಬೇರಿಸಿ ಕೇಳಿದಳು. 


ನೀವು ಎಷ್ಟಾದರೂ ನನ್ನಿಷ್ಟದ ಸಿಗರೇಟು ನನ್ನಿಂದ ದೂರವಾಗುವಂತೆ ಮಾಡಿದವರಲ್ಲವೇ.ಹಾಗಾಗಿಯೇ ಆ ಕ್ಷಣಕ್ಕಷ್ಟೇ ನೀವು ಕೆಟ್ಟವರು.. ಅಂದೆ ನಾನು ನಗುತ್ತಲೇ. 


ಅದನ್ನು ಕೇಳಿ ಅವಳೂ ಜೋರಾಗಿಯೇ ನಕ್ಕು ಬಿಟ್ಟಳು. 


ನಿಮ್ಮ ನಗು ನಕ್ಷತ್ರ ನಕ್ಕಂತೆಯೇ ಇದೆ..ಅಂದೆ ನಾನು ಮೆಲ್ಲಗೆ. 


ನಾನು ನಿಜವಾಗಿಯೂ ನಕ್ಷತ್ರವೇ ಹೌದು.. ಅವಳು ಅಂದಳು. 


ಗೊತ್ತಾಗಲಿಲ್ಲ... ಅಂದೆ ನಾನು. 


ನನ್ನ ಹೆಸರು ನಕ್ಷತ್ರದ್ದೇ ಎಂದು ಹೇಳಿದೆ.. ಮತ್ತೆ ಅಂದಳು. 


ಹಾಗಾದರೆ ನಿಮ್ಮ ಹೆಸರು ಸ್ವಾತಿ ಯಾ....? ನಾನು ಕೇಳಿದೆ. 


ಜೋರಾಗಿ ನಕ್ಕು ಅಲ್ಲ ಅಂದಳು. 


ಹಾಗಾದರೆ ರೋಹಿಣಿ..? ಮತ್ತೆ ನಾನು ಕೇಳಿದೆ. 


ತಲೆ ಅಡ್ಡಡ್ಡ ಅಲ್ಲಾಡಿಸಿ,ಅಲ್ಲ..ಅದೂ ಅಲ್ಲ ಒಟ್ಟು 27 ನಕ್ಷತ್ರಗಳಿವೆ ನೋಡಿ,ಅದರಲ್ಲಿ ಒಂದು ನಾನು.. ಅಂದಳು ಮತ್ತೆ  ನಗುತ್ತಲೇ. 


ಚೈತ್ರ.. ಅನುರಾಧ... ವಿಶಾಖ..? ನಾನು ಹೇಳುತ್ತಲೇ ಹೋದೆ. 


ಅವಳು ಮತ್ತೆ ಜೋರಾಗಿ ನಕ್ಕಳು.ನಗು ಮುಗಿಸಿ ಕೊನೆಗೆ ಹೇಳಿದಳು,ನಾನು ವಸು.. ಪುನರ್ವಸು.ಮಳೆಯದ್ದೇ ನಕ್ಷತ್ರ.. ಅಂದಳು ಮತ್ತಷ್ಟು ನಗು ಚೆಲ್ಲುತ್ತಲೇ. 


ಆಹಾ.. ಅದೆಷ್ಟು ಚಂದದ ಹೆಸರು.. ನಾನು ಅಂದೆ. 


ಅವಳಿಗೆ ನನ್ನ ಮೆಚ್ಚುಗೆ ಹಿಡಿಸಿತು,ಮತ್ತೆ ಹಾಗೇ ಹದವಾಗಿ ನಕ್ಕಳು. 


ನನ್ನ ಹೆಸರು ತಿಳಿಯುವ ಕುತೂಹಲ ಇಲ್ಲವೇ...? ನಾನು ಈ ಬಾರಿ ಕೇಳಿದೆ. 


ಕ್ಷಮಿಸಿ ನಾನು ಕೇಳಲೇ ಇಲ್ಲ.. ಹೇಳಿ ನಿಮ್ಮ ಹೆಸರೇನು?.. ಅವಳು ಅಂದಳು. 


ನವರತ್ನಗಳಲ್ಲಿ ಒಂದು... ಅಂದೆ. 


ಮಾಣಿಕ್ಯ?...ಅವಳು ಕೇಳಿದಳು. 


ಅಲ್ಲ...ಅದಲ್ಲ... ಅಂದೆ. 


ಗೋಮೇಧಿಕ...ನೀಲ..ವೈಢೂರ್ಯ? ...ಅವಳು ಕೂಡ ಹಾಗೇ ಮುಂದುವರಿಸಿದಳು. 


ಹಹ್ಹಾ.. ಹಹ್ಹಾ..ಅಲ್ಲ ಅದಲ್ಲ..ಅಂದೆ ನಾನು.


ಮತ್ತೆ ನೀವು ಯಾವುದು? ಅವಳೇ ಕೇಳಿದಳು. 


ನಾನು ಪುಷ್ಯರಾಗ...ಅಂದೆ. 


ನಿಜಕ್ಕೂ ಚೆನ್ನಾಗಿದೆ ನಿಮ್ಮ ಹೆಸರು..ಆ ಹರಳಿನಂತೆಯೇ.. ಅವಳು ಅಂದಳು.ಅವಳ ಕಣ್ಣಲ್ಲೂ ಬಹಳಷ್ಟು ಮೆಚ್ಚುಗೆ ತುಂಬಿತ್ತು. 


ಅವಳಿಗೆ ನನ್ನ ಹೆಸರು ಹಿಡಿಸಿದ್ದು ನನಗೂ ಬಹಳಷ್ಟು ಹಿಡಿಸಿತು. 


ಅಲ್ಲಿಯವರೆಗೆ ಸುರಿಯುತ್ತಿದ್ದ ಮಳೆ ಆವಾಗ ನಿಂತು ಬಿಟ್ಟಿತು. 


ನಾನು ಈಗ ಅಲ್ಲಿಂದ ಹೋಗಬೇಕಿತ್ತು.ಆದರೆ ಯಾಕೋ ಹೋಗಲು ನನಗೆ ಮನಸ್ಸು ಮಾತ್ರ ಬರುತ್ತಿರಲಿಲ್ಲ.


ಮಳೆ ನಿಂತಿದೆ.ಇನ್ನು ನಾವು ಹೋಗಬಹುದು.ಬಸ್ಸು ಕೂಡ ಯಾವುದೂ ಬರುವಂತೆ ಕಾಣುತ್ತಿಲ್ಲ... ನೀವು ಎಲ್ಲಿಗೆ ಹೋಗಬೇಕು ಎಂದು ಹೇಳಿದರೆ ನಾನೇ ನಿಮಗೆ ಡ್ರಾಪ್ ಕೊಡುತ್ತೇನೆ..ಅಂದೆ ನಾನು. 


ಅವಳು ಏನೂ ಹೇಳಲಿಲ್ಲ..! 


ಮತ್ತೆ ಮೌನವೇ ನಮ್ಮಿಬ್ಬರ ನಡುವೆ ರಾಜ್ಯವಾಳಿತು. 


ಮತ್ತೊಮ್ಮೆ ಅವಳಲ್ಲಿ ಕೇಳಲು,ಇನ್ನಷ್ಟು ಒತ್ತಾಯಿಸಲು ನನಗೆ ಯಾಕೋ ತುಂಬಾ ಅಂಜಿಕೆಯಾಯಿತು. 


ಆದರೆ ಅವಳೇ ಮೌನ ಮುರಿದು ಹೇಳಿದಳು... 


ಎಲ್ಲಿಗೆ ಹೋಗಬೇಕು,ಏತಕ್ಕಾಗಿ ಹೋಗಬೇಕು ಎಂದು ನನಗೂ   ಗೊತ್ತಿಲ್ಲ...!! ಅಂದಳು. 


ನನಗೆ ಅವಳು ಏತಕ್ಕಾಗಿ ಆ ರೀತಿ ಹೇಳಿದಳು ಎಂದು ಗೊತ್ತಾಗಲಿಲ್ಲ..! 


ಎಲ್ಲಿಗೆ ಅಂದರೆ...ನಿಮ್ಮ ಮನೆಗೆಯೇ ನೀವು  ಹೋಗಬೇಕಲ್ಲವೇ..? ಅಂದೆ ನಾನು ಬಹಳಷ್ಟು ವಿಚಲಿತನಾಗಿ. 


ನಾನು ಮನೆ ಬಿಟ್ಟು ಓಡಿ ಬಂದಿದ್ದೇನೆ ..! ಅಂದಳು ಅವಳು ತೀಕ್ಷ್ಣವಾಗಿ!! 


ಏಕೆ...? ಕುತೂಹಲ ತಡೆಯಲಾಗದೇ ಅವಳಲ್ಲಿಯೇ ಕೇಳಿ ಬಿಟ್ಟೆ. 


ನನ್ನವನೊಂದಿಗೆ ಓಡಿ ಹೋಗುವುದಕ್ಕಾಗಿ..ಅಂದಳು ಅವಳು ಎಲ್ಲೋ ನೋಡುತ್ತಾ!. 


ನನ್ನವ ಅಂದರೆ ಯಾರು?... ನಾನು ಮತ್ತೆ ತೀವ್ರವಾದ ಕುತೂಹಲದಿಂದಲೇ ಕೇಳಿದೆ. 


ನನ್ನವ ಅಂದರೆ ನಾನು ಪ್ರೀತಿಸಿದವನು... ಅಂದಳು ಅವಳು ಬಹಳಷ್ಟು ಮೆತ್ತಗೆ!! 


ಯಾಕೋ ನನ್ನ ಮನಸ್ಸಿಗೆ ಆ ಕ್ಷಣ ಬಹಳಷ್ಟು ಹುಳಿ ಹಿಂಡಿದಂತಾಯಿತು!! ಹೆಚ್ಚು ಕಡಿಮೆ ನನ್ನ ಹೃದಯವೇ ಒಡೆದು ಹೋದಂತೆ ಭಾಸವಾಯಿತು! ಏತಕ್ಕಾಗಿ ನನಗೆ ಆ ರೀತಿ ಆಯಿತೆಂದು ನನಗೂ ಗೊತ್ತಿಲ್ಲ,ಆದರೆ ಅದೇ ರೀತಿ ಆಗಿತ್ತು! 


ಆಮೇಲೆ ನಾನು ಅವಳಲ್ಲಿ ಏನನ್ನೂ ಕೇಳಲಿಲ್ಲ.!


ಅವಳೂ ನನ್ನಲ್ಲಿ ಏನನ್ನೂ ಹೇಳಲೂ ಇಲ್ಲ. 


ಸ್ವಲ್ಪ ಸಮಯದ ನಂತರ ತಡೆದು ಕೊಳ್ಳಲು ಆಗದೆ ನಾನೇ  ಮೌನ ಮುರಿದು ಅವಳಲ್ಲಿಯೇ ಕೇಳಿದೆ.... 


ಹಾಗಾದರೆ... ಹಾಗಾದರೆ ಅವನೇಕೆ ನಿಮ್ಮನ್ನು ಕರೆದುಕೊಂಡು ಹೋಗಲು ಇಲ್ಲಿಗೆ ಇನ್ನೂ ಬರಲಿಲ್ಲ?! 


ಅದೇ ಗೊತ್ತಾಗುತ್ತಿಲ್ಲ..ಆದರೆ ಅವನು ಮೋಸ ಮಾಡುವವನಲ್ಲ..ಖಂಡಿತಾ ಬಂದೇ ಬರುತ್ತಾನೆ.. ಏನೋ ಸಣ್ಣ ಪುಟ್ಟ ಸಮಸ್ಯೆ ಆಗಿರಬೇಕು ಅಷ್ಟೇ.. ಸ್ವಲ್ಪ ಹೊತ್ತಲ್ಲಿಯೇ ಇಲ್ಲಿಗೆ ಬರುತ್ತಾನೆ ಅವನು..ಅಂದಳು ಬಹಳಷ್ಟು ಸಮಾಧಾನದಿಂದಲೇ.


ನನ್ನ ಮನಸ್ಸಿನ ಸಮಾಧಾನ ಮಾತ್ರ ಅದು ಯಾಕೋ ಅಂದು ಬಹಳಷ್ಟು ಹಾಳಾಗಿ ಹೋಗಿತ್ತು!


ಇನ್ನೂ ಎಷ್ಟು ಹೊತ್ತು ನೀವು ಇಲ್ಲೇ ನಿಂತಿರುತ್ತೀರಿ? ನಾನು ಮತ್ತೆ  ಕೇಳಿದೆ. 


ಅವನು ಬರುವವರೆಗೂ... ಅಂದಳು ಅವಳು. 


ನನಗೆ ಅವಳನ್ನು ಆ ರಾತ್ರಿ ಒಬ್ಬಳನ್ನೇ ಅಲ್ಲಿ ಬಿಟ್ಟು ಬರಲು ಮನಸ್ಸಾಗಲಿಲ್ಲ.ಹಾಗಾಗಿ ಅಲ್ಲಿಂದ ಹೊರಡಲು ಅನುವಾದವನು  ಪುನಃ ಅಲ್ಲಿಯೇ ನಿಂತುಕೊಂಡೆ.


ನೀವು ಹೋಗಿ,ಬಹುಶಃ ನಿಮಗೆ ಹೊತ್ತಾಗುತ್ತಿರಬಹುದು..ಅವನು ಹೇಗೋ ಬಂದೇ ಬರುತ್ತಾನೆ ಅಲ್ಲವೇ.ನನ್ನ ಚಿಂತೆ ಮಾಡಬೇಡಿ ... ಅಂದಳು ಅವಳು ಬಹಳಷ್ಟು ನಯವಾಗಿ. 


ಇಲ್ಲ..ಪರವಾಗಿಲ್ಲ.ನೀವು ಒಬ್ಬರೇ ಇದ್ದೀರಾ..ಇಂತಹ ರಾತ್ರಿ,ಇಲ್ಲಿ ನಿಮ್ಮೊಬ್ಬರನ್ನೇ ಬಿಟ್ಟು ಹೋಗಲು ನನಗೆ ಏಕೋ ಸರಿ ಬರುತ್ತಿಲ್ಲ,ಮನಸ್ಸು ಕೂಡ ಒಪ್ಪುತ್ತಿಲ್ಲ, ನಿಮ್ಮವನು ಬರುವವರೆಗೂ ನಾನು ಇಲ್ಲೇ ಇರುತ್ತಾನೆ,ಆಮೇಲೆ ಎದ್ದು  ಹೋಗುತ್ತೇನೆ.. ಅಂದೆ ನಾನು. 


ಅವಳು ಅದಕ್ಕೆ ಏನೂ ಪ್ರತಿಕ್ರಿಯಿಸಲಿಲ್ಲ..! 


ನಮ್ಮಿಬ್ಬರ ನಡುವೆ ಮೌನ ಮತ್ತೆ ಬಹಳಷ್ಟು ಗಾಢವಾಯಿತು. 


ನೀವು ಎಂದಾದರೂ ಯಾರನ್ನಾದರೂ ಪ್ರೀತಿಸಿದ್ದೀರಾ..? ಅವಳೇ ಮೌನ ಮುರಿದು ಕೇಳಿದಳು.. 


ನನ್ನಲ್ಲಿ ಉತ್ತರ ಸ್ಪಷ್ಟವಿತ್ತು.ಹಾಗಾಗಿ,ಇಲ್ಲ...ಅಂದೆ ನಾನು. 


ಹಾಗಾದರೆ ನೀವೇ ಸುಖಿ.. ಅಂದಳು. 


ಅದು ಹೇಗೆ? ಕೇಳಿದೆ. 


ಪ್ರೀತಿ ಹೇಗೆ ಸುಖ ನೀಡುತ್ತದೋ,ಅದೇ ಪ್ರೀತಿ ಕೆಲವೊಮ್ಮೆ ಅಷ್ಟೇ ದುಃಖ ಕೂಡ ನೀಡುತ್ತದೆ.ಪ್ರೀತಿಯಲ್ಲಿ ಎಲ್ಲವೂ ಸಿಕ್ಕರೆ ಆಗ ಅದುವೇ ಜಗತ್ತಿನ ಪರಮ ಸುಖ ಎಂದೆನಿಸಿಬಿಡುತ್ತದೆ,ಆದರೆ ಅದರಲ್ಲಿ ನಮಗೆ ಬೇಕಾಗಿದ್ದೇ ಸಿಗದೇ ಹೋದರೆ ಆಗ ಆ ಪ್ರೀತಿ ನೀಡುವ ದುಃಖಕ್ಕಿಂತ ಈ ಜಗತ್ತಿನಲ್ಲಿ ಬೇರೆ ಯಾವುದೇ ದುಃಖ ಇರಲು ಸಾಧ್ಯವೇ ಇಲ್ಲವೆನೋ ಎಂದು ಕೂಡ ಅನ್ನಿಸಿಬಿಡುತ್ತದೆ.ಆವಾಗಲೇ  ಪ್ರೀತಿಸದೇ ಉಳಿಯುವುದೇ ಹೆಚ್ಚು ಸುಖ ಎಂದು ಅನ್ನಿಸುವುದು.ಅದಕ್ಕಾಗಿಯೇ ಹೇಳಿದ್ದು ನಾನು ನಿಮ್ಮಂತೆ ಅಷ್ಟೊಂದು ಸುಖಿಯಲ್ಲ ಎಂದು...ಅಂದು ಬಿಟ್ಟಳು ಅವಳು. 


ಅವಳು ಹೇಳಿದ್ದು ನನಗೂ ಸರಿ ಅನಿಸಿತು.ಭಗ್ನ ಪ್ರೇಮಿಗಳನ್ನು ನಾನು ಕೂಡ ಬಹಳಷ್ಟು ನೋಡಿದ್ದೆ.ಅವರುಗಳ ಉತ್ಕಟವಾದ ನೋವನ್ನು ಬಹಳ ಹತ್ತಿರದಿಂದಲೇ ಗಮನಿಸಿದ್ದೇನೆ ಕೂಡ.ಆದರೆ ಪುನರ್ವಸುವಿನ ಪ್ರೇಮದಲ್ಲಿ ಅವಳಿಗೇನು ಸಿಗಲಿಲ್ಲ ಎಂದು ಮಾತ್ರ ನನಗೆ ನಿಜವಾಗಿಯೂ ಗೊತ್ತಾಗಲಿಲ್ಲ..!


ನಿಮ್ಮ ಪ್ರೇಮದಲ್ಲಿ ನಿಮಗೆ ಬೇಕಾಗಿದ್ದು ಏನು ಸಿಗಲಿಲ್ಲ? ನಾನು ಮತ್ತೊಮ್ಮೆ ಬಹಳಷ್ಟು ಕುತೂಹಲದಿಂದಲೇ ಅವಳಲ್ಲಿ ಕೇಳಿದೆ. 


ಅವನೇ ಸಿಗಲಿಲ್ಲ..!! ಅಂದಳು ಅವಳು ಮಾರ್ಮಿಕವಾಗಿ!! 


ನನಗೆ ಅವಳು ಈ ಬಾರಿ ಹೇಳಿದ್ದು ಕೂಡ ಸ್ವಲ್ಪವೂ ಅರ್ಥವಾಗಲಿಲ್ಲ.ಬದಲಿಗೆ ಅವಳು ಆ ಕ್ಷಣದಿಂದ ಮತ್ತಷ್ಟು ಜಟಿಲವಾಗಿ ಕಂಡಳು!! 


ನಾನು ಅವಳಲ್ಲಿಯೇ ಅದನ್ನು ಕೇಳಿದೆ... ನನಗೆ ನೀವು ಹೇಳಿದ್ದು ಏನೂ ಅರ್ಥವಾಗಲಿಲ್ಲ.!? 


ಅವನು ಸತ್ತು ಹೋಗಿದ್ದಾನೆ ಎಂದು ಎಲ್ಲರೂ ಹೇಳುತ್ತಾರೆ,ಆದರೆ ಅದನ್ನು ನಾನು ಎಂದಿಗೂ ಒಪ್ಪಲಾರೆ,ಎಲ್ಲರೂ ಬೇಕೆಂದೇ ನಮ್ಮಿಬ್ಬರನ್ನು ದೂರ ಮಾಡಬೇಕೆಂದೇ ನನಗೆ ಆ ರೀತಿಯ ಸುಳ್ಳು ಕಥೆಗಳನ್ನು ಹೇಳುತ್ತಿದ್ದಾರೆ.ನಿಜ ಹೇಳಬೇಕೆಂದರೆ ನಿಮ್ಮ ಸಿಗರೇಟಿಗಿಂತಲೂ ಈ ಜಗತ್ತೇ ತುಂಬಾ ಕೆಟ್ಟದು.ಇದೊಂದು ಹುಚ್ಚರದ್ದೇ ಸಂತೆ. ಇಲ್ಲಿರುವ ಎಲ್ಲರೂ ಒಂದು ರೀತಿಯಲ್ಲಿ ಹುಚ್ಚರೇ.ಸಿಗರೇಟು ಆದರೂ ಕ್ಷಣ ಮಾತ್ರ ಸುಡುತ್ತದೆ ಅಷ್ಟೇ,ಆದರೆ ಇವರೆಲ್ಲರೂ ತಮ್ಮ ಸುಳ್ಳಿನ ಮೂಲಕ ನನ್ನನ್ನು ಪ್ರತೀ ಕ್ಷಣವೂ ನಿರಂತರವಾಗಿ ಸುಡುತ್ತಲೇ ಇದ್ದಾರೆ..ಅವನಿಲ್ಲ...ಅವನಿಲ್ಲ..ಎಂದು !!.. ಎಂದು ಹೇಳಿ ಮುಗಿಸಿದಳು ಪುನರ್ವಸು..! 


ನನಗೆ ಬಹಳಷ್ಟು ಕಸಿವಿಸಿಯಾಯಿತು.ಏಕೆಂದರೆ ಅವಳ ಯಾವುದೇ ಮಾತುಗಳು ಅವಳ ವರ್ತನೆಯೊಂದಿಗೆ ಎಲ್ಲಿಯೂ  ಹೊಂದಾಣಿಕೆಯಾದಂತೆ ನನಗೆ ಕಂಡು ಬರಲಿಲ್ಲ!! 


ಅವನು ಇಲ್ಲ,ಸತ್ತಿದ್ದಾನೆ ಎಂದು ನೀವೇ ಹೇಳುತ್ತೀರಿ..ಆದರೂ ಈ ರಾತ್ರಿ ಈ ಬಸ್ ಸ್ಟಾಪ್ ನಲ್ಲಿ ನೀವೇಕೆ ಎಂದಿಗೂ ಬರದ ಅವನಿಗಾಗಿ ಕಾಯುತ್ತಿದ್ದೀರಿ?... ಎಂದು ನಾನು ಮತ್ತೆ ಪ್ರಶ್ನೆ ಕೇಳಿದೆ. 


ನಾನೆಲ್ಲಿ ಅವನು ಸತ್ತಿದ್ದಾನೆ ಎಂದು ಹೇಳಿದೆ.ಊರವರು, ಮನೆಯವರು,ಗೆಳತಿಯರು,ನನ್ನ ವೈದ್ಯರು,ಎಲ್ಲರೂ ಹಾಗೇ ಹೇಳುತ್ತಾರೆ ಅಷ್ಟೇ.ಆದರೆ ನಾನು ಅದನ್ನು ಎಂದಿಗೂ ಒಪ್ಪಲಾರೆ.ಕೊನೆಯ ಬಾರಿ ಅವನು ನನಗೆ ಸಿಕ್ಕಾಗ ಹೇಳಿದ್ದ " ಪುನರ್ವಸು... ನಾಳೆ ರಾತ್ರಿಯೇ ನಾವು ಇವರೆಲ್ಲರಿಂದ ಬಹಳ ದೂರ ಹೋಗೋಣ,ನೀನು ಬಸ್ ಸ್ಟಾಪ್ ನಲ್ಲಿ ಬಂದು ನಿಂತಿರು,ನಾನು ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ,ನನಗೆ ಮೋಸ ಮಾಡಬೇಡ ಪುನರ್ವಸು,ಬರದೇ ಇರಬೇಡ..." ಎಂದು ಅವನು ಕೊನೆಯದಾಗಿ ನನ್ನಲ್ಲಿ ಪರಿಪರಿಯಾಗಿ ಹೇಳಿದ್ದ.ಅವನಿಗೆ ನಾನು ಮೋಸ ಮಾಡಲಾರೆ.ಏಕೆಂದರೆ ಅವನಿಗೆ ನಾನು ಬರುತ್ತೇನೆ ಎಂದು ಮಾತು ನೀಡಿದ್ದೇನೆ.ಅವನು ಬಂದೇ ಬರುತ್ತಾನೆ ಎಂಬ ನಂಬಿಕೆ ಕೂಡ ನನಗಿದೆ.ಅದಕ್ಕಾಗಿಯೇ ಅವನಿಗೆಂದೇ ನಾನಿಲ್ಲಿ ಕಾಯುತ್ತಿದ್ದೇನೆ.. !! ಅಂದಳು ಪುನರ್ವಸು. 


ನಾನು ಮತ್ತಷ್ಟು ಗೊಂದಲದ ಆಳಕ್ಕೆನೇ ಬಿದ್ದು ಬಿಟ್ಟೆ! 


ಕೊನೆಯ ಬಾರಿ ಅಂದರೆ ಯಾವಾಗ?.. ನಾನು ಕುತೂಹಲ ಕೆರಳಿಸಿಕೊಂಡೇ ಕೇಳಿದೆ. 


ಸುಮಾರು ಒಂದು ವರ್ಷದ  ಹಿಂದೆ..!! ಅಂದಳು ಅವಳು!


ನಾನು ಅದುರಿ ಹೋದೆ! ಆ ನಂತರ ಅವಳನ್ನೇ ಮೇಲಿಂದ ಕೆಳಗೆ ಹಾಗೇ ನೋಡಿದೆ!! 


ಅಂದರೆ ನೀವು.. ನೀವು..ಆ ದಿನದಿಂದ ಈ ದಿನದವರೆಗೂ ಹೀಗೆಯೇ ದಿನಾಲೂ ಬಂದು ಅವನಿಗಾಗಿಯೇ ಪ್ರತೀ ದಿನ ಬಸ್ ಸ್ಟಾಪ್ ನಲ್ಲಿ ಕಾಯುತ್ತಿದ್ದೀರಾ?.. ನಾನು ತಡವರಿಸುತ್ತಲೇ ಕೇಳಿದೆ.


ಹೌದು..!! ಅಂದಳು. 


ನನಗೆ ಮುಂದೆ ಏನು ಹೇಳಬೇಕು, ಏನು ಕೇಳಬೇಕೆಂದು  ತೋಚಲಿಲ್ಲ. 


ನಾನು ನನಗರಿವಿಲ್ಲದೆ ಹಾಗೇ ದೀರ್ಘ ಮೌನಕ್ಕೆ ಜಾರಿ ಹೋದೆ!.ಆದರೂ ಯಾಕೋ ನನಗೆ  ಅಲ್ಲಿಂದ ಹೊರಡಬೇಕು ಎಂದು ಮಾತ್ರ ಆವಾಗಲೂ ಅನ್ನಿಸಲಿಲ್ಲ..!


ಸ್ವಲ್ಪ ಸಮಯದ ಮೌನ ಕರಗಿದ ಮೇಲೆ ನಮ್ಮ ಮಾತು ಮತ್ತೆ ಮೊದಲಿನಂತೆಯೇ ಶುರುವಾಗಿ ಬಿಟ್ಟಿತು.ಜೊತೆಗೆ ಮಳೆಯೂ ಕೂಡ ಬಿಟ್ಟು ಬಿಡದೆ ಜೋರಾಗಿ ಸುರಿಯಿತು. 


ಮಾತಿನ ನಡುವಲ್ಲಿ ಅವಳು ಮತ್ತೊಮ್ಮೆ ನಕ್ಷತ್ರದಂತೆಯೇ  ನಕ್ಕಳು,ಆ ಕತ್ತಲಲ್ಲಿ ಹೊಳೆವ ನಕ್ಷತ್ರದಂತೆಯೇ ಅವಳು ನನ್ನ ಕಣ್ಣುಗಳಲ್ಲಿ ಮಿನುಗಿ ಬಿಟ್ಟಳು.ನಾನೂ ಅವಳಿಗಾಗಿಯೇ ನಕ್ಕೆ.ಅವಳೊಂದಿಗೂ ನಕ್ಕೆ.ಅವಳು ಬಾನು ಯಾವ ಮೂಲೆಯಲ್ಲಿ ಉದುರಿಸಿದ ತಾರೆಯೋ ಏನೋ..ಅದು ನನಗೆ ಅಷ್ಟಾಗಿ ಗೊತ್ತಾಗಲಿಲ್ಲ.ನನಗದು ಆ ಕ್ಷಣಕ್ಕೆ ಗೊತ್ತಾಗಬೇಕಾಗಿಯೂ ಇರಲಿಲ್ಲ.ಏಕೆಂದರೆ ನನಗೆ ಅವಳ ಸನಿಹ,ಅವಳದ್ದೊಂದು ದಿವ್ಯ ಸಾನಿಧ್ಯ ಅಷ್ಟೇ ಬೇಕಾಗಿತ್ತು ಮತ್ತದು ಅದು ನನಗೆ ಬಹಳಷ್ಟು ಹಿತವೆನಿಸತೊಡಗಿತು.


ಹೀಗೆ ನಗುತ್ತಾ,ಮಾತಾಡುತ್ತಾ ರಾತ್ರಿ ಕಳೆದು ಮರುದಿನದ ಬೆಳಗಾಯಿತು!


ಅವನು ಇವತ್ತೂ ಬರಲಿಲ್ಲ...ಅಂದೆ ನಾನು. 


ಬಹುಶಃ ನಾಳೆ ಬರಬಹುದು.. ಅಂದಳು,ಜೊತೆಗೆ ಬಂದೇ ಬರುತ್ತಾನೆ ಎಂಬ ಆತ್ಮವಿಶ್ವಾಸದಿಂದಲೇ ಆ ಮಾತನ್ನು ಅವಳು ಹೇಳಿದ್ದಳು.


ಆ ದಿನದಿಂದ ನಾನು ಪ್ರತೀ ರಾತ್ರಿ ಆ ಬಸ್ ಸ್ಟಾಪ್ ಬಳಿಗೆ ಬೈಕ್ ಹಿಡಿದುಕೊಂಡು ಹೋಗುತ್ತಿದ್ದೆ. 


ಕೆಲವೊಮ್ಮೆ ಅವಳು ಅಲ್ಲಿ ಇರುತ್ತಿದ್ದಳು.ಕೆಲವೊಮ್ಮೆ ಇಲ್ಲ.


ಕೆಲವೊಮ್ಮೆ ಅವಳು ಬೇರೆ ಯಾವುದೋ ಬಸ್ ಸ್ಟಾಪ್ ನಲ್ಲಿ ಒಬ್ಬಳೇ ನಿಂತಿರುತ್ತಿದ್ದಳು.ಅವಳು ಎಲ್ಲಿರುತ್ತಾಳೋ ನನಗೂ ಗೊತ್ತಿಲ್ಲ.ಹಾಗಾಗಿ ರಾತ್ರಿ ಪೂರ್ತಿ ಅವಳಿಗೆಂದೇ ನಾನು ಬೇರೆ ಬೇರೆ ಬಸ್ ಸ್ಟಾಪ್ ಗಳಲ್ಲಿ ಅಲೆಯುತ್ತಾ ಅವಳನ್ನು ಹುಡುಕಾಡುತ್ತಿದ್ದೆ,ಅವಳಿಗಾಗಿ ಬಹಳಷ್ಟು ತಡಕಾಡುತ್ತಿದ್ದೆ.ಕೆಲವೊಮ್ಮೆ ಅವಳು ಬಹಳ ಬೇಗನೇ ಸಿಗುತ್ತಿದ್ದಳು,ಕೆಲವೊಮ್ಮೆ ಬಹಳಷ್ಟು ಹುಡುಕಾಟದ ನಂತರವೇ  ಸಿಗುತ್ತಿದ್ದಳು.ಇನ್ನು ಕೆಲವೊಮ್ಮೆ ಅವಳು ಸಿಗುತ್ತಲೇ ಇರಲಿಲ್ಲ. 


ಅವಳು ಇಲ್ಲೇ ಇರಲಿ ಎಂದುಕೊಂಡೇ ನಾನು ಪ್ರತೀ ಬಸ್ ಸ್ಟಾಪ್ ಕಡೆಗೆ ಹೋಗುತ್ತಿದ್ದೆ.ಅವಳು ಇದ್ದರೆ ರಾತ್ರಿ ಕಳೆದು ಬೆಳಗಾಗುವವರೆಗೂ ನಾವಿಬ್ಬರು ಏನೇನೋ ಕಷ್ಟ ಸುಖ ಮಾತಾಡುತ್ತಿದ್ದೆವು.ನಡು ನಡುವೆ ಜೋರಾಗಿ ನಗುತ್ತಿದ್ದೆವು.ನೋವುಗಳನ್ನು ಸುಡುತ್ತಿದ್ದೆವು,ಸಂತೋಷವನ್ನಷ್ಟೇ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದೆವು.ಆಕಾಶ ಶುಭ್ರವಾಗಿದ್ದರೆ ಬೆಳದಿಂಗಳಲ್ಲಿ ತಾರೆಗಳನ್ನು ನಾವಿಬ್ಬರೂ ಸೇರಿಯೇ ಎಣಿಸುತ್ತಿದ್ದೆವು.ಅವಳು ಬಾನಿಗೆ ಕೈ ತೋರಿಸಿ "ನೋಡಿ ಪುರು... ಅಲ್ಲಿ ಚಿಕ್ಕದಾಗಿ ನಕ್ಷತ್ರವೊಂದು ಮಿನುಗುತ್ತಿದೆ ನೋಡಿ,ಅದು ನಾನೇ,ವಸು.. ಪುನರ್ವಸು" ಎಂದು ಹೇಳಿ ನಕ್ಷತ್ರದ ನಗುವನ್ನೇ ಅವಳು ನನ್ನೆಡೆಗೆ ತಂಪಾಗಿ ಚೆಲ್ಲುತ್ತಿದ್ದಳು. 


ಕೆಲವೊಮ್ಮೆ ಅವಳ ಮನೆಯವರು ಯಾರೋ ಅವಳನ್ನೇ ಹುಡುಕಿಕೊಂಡು ಬರುತ್ತಿದ್ದರು,ಅವಳನ್ನು ದರದರ ಎಂದು ಎಳೆದುಕೊಂಡು ಹೋಗುತ್ತಿದ್ದರು! 


ಹೀಗೆ ನಾಲ್ಕೈದು ವರ್ಷಗಳು ಕಳೆದವು.ನನಗೆ ರಾತ್ರಿಗಳು ಹಿತವಾಗತೊಡಗಿದವು.ದಿನಗಳು ಇನ್ನಿಲ್ಲದಂತೆ ಹಿಂಸೆಯಾಗತೊಡಗಿದವು.ರಾತ್ರಿ ಆಗುವುದನ್ನೇ ಉಸಿರು ಹಿಡಿದುಕೊಂಡು ಕಾಯುತ್ತಿದ್ದೆ. ರಾತ್ರಿ ಆದ ಕೂಡಲೇ ಬಸ್ ಸ್ಟಾಪ್ ಗಳ ಕಡೆಗೆ ನಾನು ಬೈಕ್ ಹಿಡಿದುಕೊಂಡು ಓಡುತ್ತಿದ್ದೆ.ಅವಳು ಸಿಕ್ಕರೆ ಮಾತಿನಲ್ಲೇ ರಾತ್ರಿ ಕಳೆಯುತ್ತಿದ್ದೆ.ರಾತ್ರಿ ಮುಗಿದು ಬೆಳಗಾಗುತ್ತಿದ್ದಂತೆ ರಾತ್ರಿ ಇನ್ನಷ್ಟು ದೀರ್ಘವಾಗಿರಬಾರದಿತ್ತೇ ಎಂದು ಸಿಕ್ಕಾಪಟ್ಟೆ ಮರುಗುತ್ತಿದ್ದೆ. 


ಹೀಗೆ ಮತ್ತಷ್ಟು ವರುಷಗಳು ಉರುಳಿದವು.ನಾವಿಬ್ಬರು  ಬಹಳಷ್ಟು ರಾತ್ರಿಗಳನ್ನು ನಮ್ಮ ಮಾತುಗಳಲ್ಲಿಯೇ ಸುಟ್ಟೆವು. ಆದರೆ ಅದೊಂದು ವಾರ ನನಗೆ ಅವಳು ಯಾವ ಬಸ್ ಸ್ಟಾಪ್ ನಲ್ಲಿಯೂ ಎಲ್ಲಿಯೂ ಕಾಣ ಸಿಗಲಿಲ್ಲ.ವಾರ ಮಾತ್ರವಲ್ಲ ಆ ತಿಂಗಳು ಪೂರ್ತಿ ಅವಳ  ಪತ್ತೆಯೇ ಇರಲಿಲ್ಲ!


ಹೌದು...ಆ ನಂತರ ಪುನರ್ವಸು ನನಗೆ ಎಂದೆಂದಿಗೂ ಅಲ್ಲಿ ಎಲ್ಲಿಯೂ ಸಿಗಲೇ ಇಲ್ಲ!! ಅವಳು ಶಾಶ್ವತವಾಗಿಯೇ ಮರೆಯಾಗಿ ಹೋಗಿದ್ದಳು!! ಅವಳು ಕೊನೆಗೂ ನನ್ನ ಪಾಲಿಗೆ ನಿಲುಕದ ನಕ್ಷತ್ರವೇ ಆಗಿ ಬಿಟ್ಟಳು. 


ಆದರೆ ನಾನು ಮಾತ್ರ ಆವತ್ತಿನಿಂದ ಹಿಡಿದು ಇವತ್ತಿನವರೆಗೂ ರಾತ್ರಿ ವೇಳೆ ಬಸ್ ಸ್ಟಾಪ್ ಬಳಿ ಅವಳಿಗಾಗಿ ಸುಳಿದಾಡುವುದನ್ನು ನಿಲ್ಲಿಸಿಲ್ಲ..!!! 


ಹೌದು.ಈಗಲೂ ಕೆಲವೊಮ್ಮೆ ತುಂಬಾ ಹೊತ್ತು ಅಲ್ಲೇ  ಯಾವುದಾದರೊಂದು ಬಸ್ ಸ್ಟಾಪ್ ನಲ್ಲಿ ನಾವಿಬ್ಬರೂ ಒಟ್ಟಾಗಿ ರಾತ್ರಿ ಸುಟ್ಟ ಬಸ್ ಸ್ಟಾಪ್ ನಲ್ಲಿಯೇ ಒಬ್ಬನೇ ಹೋಗಿ ನಾನು  ಕುಳಿತುಕೊಳ್ಳುತ್ತೇನೆ.ಅವಳನ್ನೇ ಅತಿಯಾಗಿ ನೆನಪಿಸಿಕೊಳ್ಳುತ್ತೇನೆ.ಪ್ರತೀ ಬಾರಿಯೂ ಅವಳ ಸಿಕ್ಕ ಮೊದಲ ರಾತ್ರಿಯೇ ನನಗೆ ಅತೀ ಹೆಚ್ಚು ನೆನಪಾಗುತ್ತಿತ್ತು.ಹೌದು ಅವಳು ಸಿಕ್ಕ ಮೊದಲ ಆ ರಾತ್ರಿಯೇ ಬೇರೆಯದ್ದಾಗಿತ್ತು, ಆ ಮಾತುಗಳೇ  ಬೇರೆಯೇ ಆಗಿತ್ತು,ಆದರೆ ಅದೇ ಬಹಳಷ್ಟು ವಿಶೇಷವೂ ಆಗಿತ್ತು. 


ಯಾರಾದರೂ ನಾನು ದಿನ ನಿತ್ಯ ಅಲ್ಲೇ ಎಲ್ಲಾದರೂ ಇರುವುದನ್ನು ನಿರಂತರವಾಗಿ ನೋಡಿ ನೋಡಿ ಕೊನೆಗೆ ನನ್ನ ಬಳಿ ಬಂದು "ಯಾರಿಗಾಗಿ ನೀವು ಕಾಯುತ್ತಿದ್ದೀರಿ..?" ಎಂದು ನನ್ನಲ್ಲಿಯೇ ಕೇಳಿದರೆ, "ಒಬ್ಬರು ಬಹಳ ಬೇಕಾಗಿರುವವರಿಗಾಗಿಯೇ ನಾನಿಲ್ಲಿ ಕಾಯುತ್ತಿದ್ದೇನೆ.." ಎಂದಷ್ಟೇ ನಾನು ಹೇಳಿ ಬಿಡುತ್ತಿದ್ದೆ. 


"ಎಷ್ಟು ಹೊತ್ತಿನಿಂದ ಕಾಯುತ್ತಿದ್ದಿರಿ?" ಎಂದು ಕೇಳಿದರೆ, "ಹತ್ತು..! ಹತ್ತು ವರ್ಷದಿಂದ ಕಾಯುತ್ತಿದ್ದೇನೆ..ಹಹ್ಹಾ ಹಹ್ಹಾ..ಬರೋಬ್ಬರಿ ಹತ್ತು ವರ್ಷದಿಂದ ಕಾಯುತ್ತಲೇ ಇದ್ದೇನೆ ನಾನು.ಬರುತ್ತಾಳೆ,ಅವಳು ಖಂಡಿತಾ ಬಂದೇ ಬರುತ್ತಾಳೆ... ಹಹ್ಹಾ.. ಹಹ್ಹಾ " ಎಂದು ಜೋರಾಗಿ ನಾನು ನಗುತ್ತಿದ್ದೆ.


ಹಾಗೇ ನಕ್ಕು ಒಮ್ಮೆಲೇ ಆಕಾಶದತ್ತ ನೋಡುತ್ತಿದ್ದೆ.ಯಾವುದೋ ಒಂದು ನಕ್ಷತ್ರ ಆ ಅವಳಂತೆಯೇ ಮೇಲಿಂದಲೇ ನಕ್ಕು ಬಿಟ್ಟರೆ,ಬಾನಿನತ್ತ ಕೈ ತೋರಿಸಿ "ನೋಡಿ,ನೋಡಿ.. ಅದು ಅವಳೇ..ಹಾನ್ ಅವಳೇ ಅದು,ವಸು... ಪುನರ್ವಸು.. ಹಹ್ಹಾ.. ಹಹ್ಹಾ " ಎಂದು ಮತ್ತಷ್ಟು ನಗುವುದನ್ನು ನನ್ನಷ್ಟಕ್ಕೆ ಮುಂದುವರಿಸುತ್ತಿದ್ದೆ..!! 


ಈ ಸುತ್ತಲಿನ ಸಮಾಜ ಸರಿ ಇಲ್ಲ.ಈಗೀಗ ಅದು ನನ್ನನ್ನು ಏನೇನೂ ಹೆಸರಿನಿಂದ ಕರೆಯುತ್ತದೆ,ಜೊತೆಗೆ ಪುನರ್ವಸು ಇಲ್ಲ ಎಂದು ಪದೇ ಪದೇ ಸುಳ್ಳನೇ ಹೇಳುತ್ತಿದೆ.ಹೌದು ಎಲ್ಲರೂ ಹಾಗೆಯೇ,ಬರೀ ಸುಳ್ಳನ್ನೇ ನನ್ನಲ್ಲಿ ಹೇಳುತ್ತಾರೆ.ಸುಳ್ಳಿನಿಂದಲೇ ನನ್ನನ್ನು ಪ್ರತೀ ದಿನ,ಪ್ರತೀ ಕ್ಷಣ ಇಂಚಿಚೂ ಹಾಗೇ ಸುಡುತ್ತಿದ್ದಾರೆ.ಸತ್ಯ ಹೇಳಬೇಕೆಂದರೆ ಇಲ್ಲಿ ಯಾರೂ ಸರಿ ಇಲ್ಲ,ಸರಿ ಇದ್ದದ್ದು ಕೇವಲ ನಾನು ಮತ್ತು ನನ್ನ ಪುನರ್ವಸು ಮಾತ್ರ!!! 


.....................................................................................


#ಪುಷ್ಯರಾಗ 


Ab Pacchu 

Moodubidire 

(Photo-internet)


https://phalgunikadeyavanu.blogspot.com

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..