Meppadiyan

 #Meppadiyan | [       ] 




ಇದರ ಕಥೆ ಬಹಳ ಸರಳವಾದದ್ದು,ಇಂತಹ ಕಥೆಗಳು ನಮ್ಮ ಸುತ್ತಮುತ್ತಲಿನಲ್ಲಿಯೇ ದಿನ ನಿತ್ಯವೂ ಸದ್ದಿಲ್ಲದೇ ನಡೆದು ಹಾಗೇ ತೆರೆಮರೆಗೆ ಸರಿಯುವಂತಹದ್ದು.ಇಷ್ಟೆಲ್ಲಾ ಸರಳ ಸಾಮಾನ್ಯ ಕಥೆ ಆಗಿದ್ದರೂ ಕೂಡ ಈ ಮೂವಿ ಬಾರೀ ಚಂದ ಉಂಟು ಆಯ್ತಾ. 


ಈ ಕಥೆಯ ನಾಯಕ ಜಯಕೃಷ್ಣನ್.ಅವನು ಇಲ್ಲಿ ನೀವೇ ಆಗಿರಬಹುದು,ಇಲ್ಲವೇ ಪಕ್ಕದ ಮನೆಯ ನಿಮ್ಮ ಸ್ನೇಹಿತನೂ   ಆಗಿರಬಹುದು,ಇಲ್ಲದಿದ್ದರೆ ನಿಮ್ಮ ಊರಿನಲ್ಲಿಯೇ ಇರುವ ಯಾರೋ ಒಬ್ಬ ಅವಶ್ಯವಾಗಿ ಈ ಕಥೆಯ ಜಯಕೃಷ್ಣನ್ ನಂತೆಯೇ ಇರಬಹುದು.


ಬರೀ ಕಾಸಿದ ಹಾಲು ಮಾತ್ರ ಕುಡಿಯುವ ಜಯಕೃಷ್ಣನ್ ನ  ಮನಸ್ಸು ಕೂಡ ಇಲ್ಲಿ ಶುದ್ಧ ಹಾಲಿನಷ್ಟೇ ಬಹಳಷ್ಟು ಪರಿಶುದ್ಧವಾದದ್ದು ಹಾಗು ಅಷ್ಟೇ ಶುಭ್ರವಾದದ್ದು.ಮೂವಿ ಉದ್ದಕ್ಕೂ ಅವನು ಸೋಲದಿರಲಿ ಎಂದೇ ನಿಮ್ಮ ಮನಸ್ಸಿಗೂ ಅನ್ನಿಸಿಬಿಟ್ಟರೆ ಆ ಕ್ಷಣಕ್ಕೆನೇ ಅವನು ತುಂಬಾ ನಿಮ್ಮವನು.ಕೆಲವೊಮ್ಮೆ ಅವನು ಸತ್ಯ ಹರಿಶ್ಚಂದ್ರನ ಅಸಲಿ ತುಂಡಿನಂತೆಯೇ ಅಲ್ಲಲ್ಲಿ ಗೋಚರಿಸಿ ಮನಸ್ಸನ್ನು ಸಿಕ್ಕಾಪಟ್ಟೆ ಹಿಂಡಿ ಬಿಡುತ್ತಾನೆ.ಒಟ್ಟಿನಲ್ಲಿ ಈ ಸಮಾಜದಲ್ಲಿನ ಮುಗ್ಧರು,ಜನ ಸಾಮಾನ್ಯರು ಪಡಬಹುದಾದ ಕಷ್ಟಗಳೇ ಅವನದ್ದೊಂದು ಕಷ್ಟ ಇಲ್ಲಿ.ಹಾಗಂತ ಅವನ ಕಷ್ಟ,ಅವನು ಒಳ್ಳೆಯವನು ಅನ್ನುವುದಷ್ಟೇ ಈ ಮೂವಿಯ ಒಟ್ಟು ಕಥೆಯಲ್ಲ,ಅದು ಕಥೆಯ ಆಶಯವೂ ಅಲ್ಲ.ಮಾನವನ ಕೆಟ್ಟ ವಾಂಛೆಗಳು ಹಾಗೂ ಪರಿಸ್ಥಿತಿಯ ಲಾಭ ಪಡೆಯುವ ಅವನದ್ದೊಂದು ಮನುಷ್ಯ ಸಹಜ ಹವಣಿಕೆ ಹಾಗೂ ಎಲ್ಲದರ ಸ್ಪಷ್ಟ ಅರಿವಿದ್ದರೂ ಒಬ್ಬ ಮನುಷ್ಯ ತೋರಬಹುದಾದ ಹಾಗೂ ತೋರಿಸಲೇ ಬಾರದಂತಹ ನಡವಳಿಕೆಗಳನ್ನು ಇಲ್ಲಿ ನಮ್ಮೆದುರು ಹಲಸಿನ ಸೋಳೆಯನ್ನು ಬಿಡಿಸಿಟ್ಟಂತೆ ಬಿಡಿ ಬಿಡಿಯಾಗಿ ಬಿಡಿಸಿಟ್ಟಿದ್ದಾರೆ.


ಇದನ್ನು ವಿಷ್ಣು ಮೋಹನ್ ನಿರ್ದೇಶಿಸಿದ್ದು,ಉನ್ನಿ ಮುಕುಂದನ್,ಅಂಜು ಕುರಿಯನ್,ಅಜು ವರ್ಗೀಸ್,ಇಂದ್ರನ್ ಮೊದಲಾದವರು ಅಭಿನಯಿಸಿದ್ದಾರೆ.ಎಂದಿನಂತೆ ಮಲಯಾಳಂ ಮೂವಿಗಳ ಘಮ ಇದರಲ್ಲಿಯೂ ಇದೆ.ಎರಡು ಹಾಡುಗಳು ಸಹ್ಯವೆನಿಸುತ್ತದೆ.ಎಲ್ಲಕ್ಕಿಂತ ಹೆಚ್ಚಾಗಿ ಕಥೆ ಗೆಲ್ಲುತ್ತದೆ,ಕಥಾ ನಾಯಕ ಇಷ್ಟ ಆಗುವುದರ ಜೊತೆಗೆಯೇ ಅವನು ತೀರಾ ನಮ್ಮವನು ಅನ್ನಿಸಿ ಬಿಡುತ್ತಾನೆ. 


ಹಾಗಂತ ಈ ಮೂವಿ ಎಲ್ಲರಿಗೂ ಇಷ್ಟವಾಗಬೇಕಿಲ್ಲ.ಸ್ವಲ್ಪ ವೇಗದ  ಹಾಗೂ ಮಸಾಲೆ ಸಿನಿಮಾ ನೋಡುವವರಿಗೆ ಈ ಮೂವಿ ಖಂಡಿತವಾಗಿಯೂ ನಿರಾಸೆ ತರಬಹುದು.ನಿಜ ಹೇಳಬೇಕೆಂದರೆ ಇದರ ಕಥೆ ಕೂಡ ರೆಟ್ರೋ ಕಾಲದ ಕಥೆಯಂತೆಯೇ ಇದೆ.ಮೌಲ್ಯಗಳಿಗಾಗಿಯೇ ಬದುಕುವ,ಅದರ ಹಿಂದೆ ಬಿದ್ದು ಬಹಳಷ್ಟು ಬೆಲೆ ತೆರುವ ಕಥಾ ನಾಯಕ ಜಯಕೃಷ್ಣನ್ ನ ಕಥೆ ಇಲ್ಲಿ ಸ್ಲೋ ಪೇಸ್ ನಲ್ಲಿಯೇ ಸಾಗುತ್ತದೆ.ಆದರೂ ಇದು ಎಲ್ಲರೂ ನೋಡಬಹುದಾದ ಚಿತ್ರ.ಏಕೆಂದರೆ ಇದನ್ನು ನೋಡುತ್ತಿದ್ದಂತೆ ಇದು ಹಾಗೇ ನಮ್ಮ ನಿಮ್ಮೆಲ್ಲರ ಚಿತ್ರವಾಗಿ ಬಿಡುತ್ತದೆ. 


ಮನುಷ್ಯ ಹಲವಾರು ಸಂದರ್ಭಗಳಲ್ಲಿ ಸಮಯದ ಕೈಗೊಂಬೆ,ಅವನಿಗರಿವಿಲ್ಲದೆಯೇ ಅವನು ಕೈ ಮೀರಿದ ಪರಿಸ್ಥಿತಿಗಳ ಬಲಿಪಶುವೂ ಹೌದು.ಕೆಲವೊಮ್ಮೆ ಎಂದಿಗೂ ಯಾರಿಗೂ ಯಾವುದನ್ನು ಮಾಡಲು ಅವನು ಇಷ್ಟ ಪಡುವುದಿಲ್ಲವೋ ಅದನ್ನೇ ಅನಿವಾರ್ಯವಾಗಿ ಮಾಡಲೇಬೇಕಾದ ಸಂಧಿಗ್ಧತೆ ಕೂಡ ಬರುವುದುಂಟು.ಒಟ್ಟಿನಲ್ಲಿ ನಮ್ಮ ನಿಮ್ಮ ಒಳಗೆ ಇರುವುದನ್ನು ಇದ್ದಂತೆಯೇ ತೋರಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ.ಈ ಮೂವಿ ಅಮೆಜಾನ್ ಪ್ರೈಮ್ ನಲ್ಲಿ ಉಂಟು.ಸದಭಿರುಚಿಯ ಚಿತ್ರಗಳನ್ನು ನೋಡುವವರು ನೀವಾಗಿದ್ದರೆ,ಬದುಕಿಗೆ ಬಹಳಷ್ಟು ಹತ್ತಿರವಾಗಿರುವ ಮೂವಿಗಳನ್ನು ನೋಡಬೇಕು ಎಂಬ ಆಸಕ್ತಿ,ಹಂಬಲ ನಿಮ್ಮದೂ ಆಗಿದ್ದರೆ ಖಂಡಿತವಾಗಿಯೂ ಈ ಮೂವಿಯನ್ನು ನೀವು ಮಿಸ್ ಮಾಡಿ ಕೊಳ್ಳಬೇಡಿ.


#Meppadiyan | [       ] 

Malayalam Movie

Political Drama

Release - Jan 2022


Movies

Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..