ಬ್ಲ್ಯಾಕ್ ಮಾಂಬ ಕಡಿಯ
ನನ್ನ ಕವನದ ಶೀರ್ಷಿಕೆ - ಬ್ಲ್ಯಾಕ್ ಮಾಂಬ ಕಡಿಯ..
ಅವಳ ಮನೆಯ ಡಬ್ಬದಲ್ಲಿ ಸಕ್ಕರೆ ಮುಗಿದಿರಬೇಕು
ನೆರೆಮನೆಯಲ್ಲಿ ಒಂದಲ್ಲ,ಎರಡು ಶುಗರ್ ಪೇಷೆಂಟಿರಬೇಕು
ನಮ್ಮನೆಯಲ್ಲೂ ಏನೋ ಒಂದು ಅವತ್ತೇ ಖಾಲಿಯಾಗಿರಬೇಕು
ನಾ ಈ ಬದಿಯಿಂದ ಅಂಗಡಿಗೆ ಓಡೋಡಿ ಹೋಗಬೇಕು
ಅವಳೂ ಆ ಕಡೆಯಿಂದ ಜಿಗಿದು ಕುಣಿದು ನಡೆದು ಬರಬೇಕು
ಓಣಿಯಲ್ಲಿ ಪರಸ್ಪರ ಎದುರಾಗಬೇಕು,ಕಣ್ಣು ಕಣ್ಣು ಕಲೆಯಬೇಕು
ನಾನು 'ಉಲ್ಲಾಸದ ಹೂ ಮಳೆ' ಹಾಡು ಹಾಡಬೇಕು,
ಅದಕ್ಕವಳು ನಾಚಬೇಕು,ನಾಚಿ ನುಲಿದು ಉಗುರು ಕಚ್ಚಬೇಕು
ನನ್ನ ಹೂಮಳೆ ಹಾಡಿಗೆ ಜೋರು ಬಿರುಗಾಳಿಯೇ ಬೀಸಬೇಕು,
ತರಗೆಲೆಗಳು ಎಲ್ಲೆಡೆ ಹಾರಬೇಕು,ಮರಗಳು ಅದುರಬೇಕು.
ಒಂದೆರಡು ಹಲಸಿಹಣ್ಣುಗಳು ತೊಟ್ಟು ಕಳಚಿ ನೆಲ ಸೇರಬೇಕು
ನಾವಿಬ್ಬರು ಹಣ್ಣು ಬಿಡಿಸಿ ಜೊತೆಯಾಗಿ ಸೋಳೆ ಸವಿಯಬೇಕು
ಈಗೆಲ್ಲಾ ಆಗಬೇಕು,ಇದೊಂದೇ ಆಗಬೇಕು ಎಂದರೆ ಅವಳಪ್ಪನೇ
ಪ್ರತೀ ಸಲ ಅಂಗಡಿಗೆ ಬರುವುದನ್ನು ಮೊದಲು ನಿಲ್ಲಿಸಬೇಕು
ab
Comments
Post a Comment