ಅನಾರ್ಕಲಿಯ ಸೇಫ್ಟಿಪಿನ್ l ಜಯಂತ ಕಾಯ್ಕಿಣಿ " ಪ್ರಪಂಚದಲ್ಲಿ ಯಾವುದೇ ಜಾಗಕ್ಕಿಂತ, ಮಕ್ಕಳನ್ನು ಹೆತ್ತು ಅವರ ಬಾಲ್ಯವನ್ನು ಪೊರೆದ ಜಾಗಗಳು ಎಂಥ ಕಾರ್ಪಣ್ಯಗಳ ನಡುವೆಯೂ ಜೀವದ ಭಾಗವೇ ಆಗಿರುತ್ತದೆ. ಮಕ್ಕಳ ಕಂಪನ್ನು ಮರೆಸುವ ಶಕ್ತಿ ಯಾವ ಬಿರುಗಾಳಿಗೂ ಇಲ್ಲ..." ಇದೊಂದೇ ಅಲ್ಲ, ಇಂತಹ ಹಲವಾರು ಸಾಲುಗಳು ಇಲ್ಲಿರುವ ಎಲ್ಲಾ ಕಥೆಗಳ ಪ್ರತೀ ಪುಟ ಪುಟದಲ್ಲಿಯೂ ಗೊಂಚಲು ಗೊಂಚಲಾಗಿ ಕಣ್ಣಿಗೆ ಬೀಳುತ್ತವೆ. ಮಳೆಗೊಂದಿಷ್ಟು ಪದ ಬೆರೆಸಿ ಭಾವ ಸುರಿಸಿದ ಮಳೆಕವಿ ಜಯಂತ ಕಾಯ್ಕಿಣಿಯವರ ಗದ್ಯವೂ ಕೂಡ ಅವರ ಪದ್ಯಗಳಷ್ಟೇ ಚಂದ. ಕಥೆಯ ಪ್ರತೀ ಸಾಲನ್ನು(ಬಹುತೇಕ)ಎಷ್ಟೊಂದು ಕಾವ್ಯಾತ್ಮಕವಾಗಿ ಪೋಣಿಸಿ ಇಲ್ಲಿಯ ಕಥೆಗಳನ್ನು ಕಟ್ಟಿದ್ದಾರೆ ಎಂದರೆ ಹೆಚ್ಚಿನ ಸಾಲುಗಳನ್ನು ಎರಡೆರಡು ಬಾರಿ ಓದಿಯೇ ಇನ್ನಷ್ಟು ಚಪ್ಪರಿಸಬೇಕೆಂದು ಅನಿಸುತ್ತದೆ. ಇಲ್ಲಿ ಒಟ್ಟು 9 ಕಥೆಗಳಿವೆ. ಎಲ್ಲಾ ಕಥೆಗಳು ಹೀಗೇ ಇರಬೇಕು, ಹಾಗೇ ಅಂತ್ಯ ಕಾಣಬೇಕು ಎಂಬ ಧಾವಂತದಿಂದ ಲೇಖಕರು ಯಾವ ಕಥೆಯನ್ನೂ ಇಲ್ಲಿ ಬರೆದಿಲ್ಲ. ಛಾಯಚಿತ್ರಗಾರನೊಬ್ಬ ಬೀದಿಯಲ್ಲಿ ನಿಂತುಕೊಂಡು ತೆಗೆದ ಸ್ಟ್ರೀಟ್ ಪೋಟೋಗಳು ಹೇಳುವ ಕಥೆಗಳಂತೆ ಇದೆ ಈ ಸಂಕಲನದ ಎಲ್ಲಾ ಕಥೆಗಳು. ತಾಜಾ ಸೀಬೆ ಹಣ್ಣುಗಳನ್ನು ಕತ್ತರಿಸಿ ಅದಕ್ಕೆ ಉಪ್ಪು, ಮೆಣಸಿನ ಹುಡಿಯನ್ನು ಇಷ್ಟಿಷ್ಟೇ ಉದುರಿಸಿ ಕೊಡುವ ಹಣ್ಣು ಹಣ್ಣು ಮುದುಕಿಯ ಪೋಟೋದಂತೆ, ಜೋರಾಗಿ ಅಳುತ್ತಿರುವ ಮಗುವನ್ನು ಕಂಕುಳದಲ್ಲಿ ಇಟ್ಟುಕೊಂಡು ಕೆಂಡದಲ್ಲಿ ಸುಡ...
Comments
Post a Comment